Jan 19, 2012

ಪಬ್ಲಿಕ್ ಟಿ.ವಿ ಪಬ್ಲಿಕ್ಕಿಗಾಗಿಯೇ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತಾ . . .

ಡಾ. ಅಶೋಕ್. ಕೆ. ಆರ್.
  ಹತ್ತರ ನಂತರ ಹನ್ನೊಂದಾಗುವುದಿಲ್ಲ ಎಂಬ ಭರವಸೆಯೊಂದಿಗೆ ಇದೇ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕನ್ನಡಕ್ಕೆ ಮತ್ತೊಂದು ಸುದ್ದಿವಾಹಿನಿಯ ರಂಗಪ್ರವೇಶವಾಗುತ್ತಿದೆ. ಪಬ್ಲಿಕ್ ಟಿ.ವಿ ಎಂಬ ಹೆಸರಿನಲ್ಲಿ. ಕನ್ನಡಪ್ರಭದಲ್ಲಿ ಕೆಲಸದಲ್ಲಿದ್ದ ನಂತರ ಕೆಲಕಾಲ ಸುವರ್ಣವಾಹಿನಿಯನ್ನು ಮುನ್ನಡೆಸಿದ ರಂಗನಾಥ್ ಪಬ್ಲಿಕ್ ಟಿ.ವಿಯ ಕ್ಯಾಪ್ಟನ್. ಸುವರ್ಣಸುದ್ದಿವಾಹಿನಿಗೆ ಹೋಗುವಾಗ ತಮ್ಮೊಡನೆ ಕನ್ನಡಪ್ರಭದ ವಿಶ್ವಾಸಾರ್ಹ ಪ್ರತಿಭಾವಂತ ಪತ್ರಕರ್ತರನ್ನು ಕರೆದೊಯ್ದ ರಂಗನಾಥ್ ಅದೇ ಪತ್ರಕರ್ತರನ್ನು ಹೊಸ ವಾಹಿನಿಯ ಬೆನ್ನೆಲುಬಾಗಿ ನಿಲ್ಲಿಸಿಕೊಂಡಿದ್ದಾರೆ. ಯಶ ಪಡೆಯುತ್ತಾರಾ? ನಿರ್ಧರಿಸಲು ಹೆಚ್ಚು ಸಮಯ ಕಾಯಬೇಕಿಲ್ಲ.

ಹಣ ಯಾರದು?
ರಿಲಯನ್ಸ್ ಸಂಸ್ಥೆ ನೆಟ್ ವರ್ಕ್ 18ರ ಮುಖಾಂತರ ದೇಶದ ಪ್ರಮುಖ ವಾಹಿನಿಗಳು, ಕೆಲವು ಪ್ರಾದೇಶಿಕ ಭಾಷಾ ವಾಹಿನಿಗಳ ಮೇಲೆ ಪ್ರಭುತ್ವ ಸ್ಥಾಪಿಸಲು ಹೊರಟಿದೆ. ಇನ್ನು ಕನ್ನಡದ ಸುದ್ದಿವಾಹಿನಿಗಳ ಕಡೆ ನೋಡಿದರೆ ಬಹುತೇಕ ಸಂಸ್ಥೆಗಳು ರಾಜಕಾರಣಿಗಳ ಜಾಗೀರಾಗಿದೆ! ಜಾರಕಿಹೊರಳಿ ಕುಟುಂಬದ ಸಮಯ ಈಗ ನಿರಾಣಿಯವರದು, ಕಸ್ತೂರಿ ನ್ಯೂಸ್ ದೇವೇಗೌಡ ಕುಟುಂಬದ ಆಸ್ತಿ, ವಿಶ್ವೇಶ್ವರ ಭಟ್ಟರ ನೇತೃತ್ವದ ಸುವರ್ಣ ಬಿಜೆಪಿಯ ರಾಜೀವ್ ಚಂದ್ರಶೇಖರ್ ರದು, ಜನಶ್ರೀ ಹೆಸರೇ ಸೂಚಿಸುವಂತೆ ಬಿ.ಎಸ್.ಆರ್ ಪಕ್ಷದ್ದು. ಉದಯ ವಾರ್ತೆ ಡಿ.ಎಂ.ಕೆ ಕುಟುಂಬದ್ದು, ಟಿವಿ 9 ಕನ್ನಡ ಯಾವ ರಾಜಕೀಯ ಪಕ್ಷದವರದೂ ಅಲ್ಲವಾದರೂ ಅದು ಧನಪಕ್ಷದ ವಾಹಿನಿ ಎಂಬುದು ಸತ್ಯವೋ ಜೋಕೋ ತಿಳಿಯುವುದು ಕಷ್ಟ ಕಷ್ಟ.
ಪಬ್ಲಿಕ್ ಟಿ.ವಿ.ಗೆ ಹಣ ಹೂಡಿರುವವರಾರು? ಒಂದು ಮೂಲದ ಪ್ರಕಾರ ಲಹರಿ ವೇಲು ಹಣ ಹೂಡಿದ್ದಾರೆ. ಸಮಾನಮನಸ್ಕರು, ನಿಜವಾದ ಪತ್ರಿಕೋದ್ಯಮದಲ್ಲಿ ಆಸಕ್ತಿಯಿರುವವರು ಹಣ ಹೂಡಿದ್ದಾರೆ ಎಂಬುದು ಪಬ್ಲಿಕ್ ಟಿ.ವಿ ಪತ್ರಕರ್ತರ ಆಂಬೋಣ. ಉಳಿದ ವಾಹಿನಿಗಳಿಗಿಂತ ಭಿನ್ನವಾಗಿಸುವ ಪ್ರಯತ್ನಕ್ಕೆ ಪೂರಕವೆಂಬಂತೆ ಮೊದಲ ದಿನದ ಕಾರ್ಯಕ್ರಮಗಳಿರುತ್ತವಂತೆ. ವಾಹಿನಿಯಲ್ಲಿ ಕೆಲಸ ಮಾಡುವ ಎಲ್ಲ ವರದಿಗಾರರ ಆಸ್ತಿ ವಿವರಗಳನ್ನು ಮೊದಲ ದಿನ ಪ್ರಕಟಿಸುತ್ತಾರೆಂಬ ಮಾಹಿತಿಯಿದೆ. ಭ್ರಷ್ಟರ ರೀತಿ ರಾಮನ ಲೆಕ್ಕ ಕೃಷ್ಣನ ಲೆಕ್ಕ ಕೊಡದಿದ್ದರೆ ಸಾರ್ಥಕ! ಇದರೊಟ್ಟಿಗೆ ಹಣ ಹೂಡಿದವರ ವಿವರಗಳನ್ನೂ ಮೊದಲ ದಿನ ಪ್ರಸ್ತುತಪಡಿಸಿದರೆ ಮತ್ತಷ್ಟು ವಿಶ್ವಾಸಾರ್ಹವಾದೀತು.
ನಿಜಕ್ಕೂ ಹೊಸತನ್ನು ಕೊಡಬಲ್ಲರೇ?
ಪ್ರಾದೇಶಿಕ ಸುದ್ದಿವಾಹಿನಿಗಳಿರಲಿ ಅಥವಾ ರಾಷ್ಟ್ರೀಯ (?) ಮಟ್ಟದ ವಾಹಿನಿಗಳಿರಲಿ ಎಲ್ಲವೂ ಒಂದು ಮತ್ತೊಂದರ ತದ್ರೂಪಿನಂತೆಯೇ ಕಾಣುತ್ತಿರುವಾಗ ‘ಹೊಸತನ್ನು ಖಂಡಿತ ನೀಡಲಿದ್ದೇವೆ’ ಎಂಬುದನ್ನು ನಂಬುವುದೇ ಕಷ್ಟವಾಗಿದೆ. ಕನ್ನಡದ ಮಟ್ಟಿಗೆ ಉದಯ ವಾರ್ತೆಗಳು ಮೊದಲ ಸುದ್ದಿವಾಹಿನಿಯಾದರೂ ತನ್ನ ನಿಧಾನಗತಿಯಿಂದ, ಹಳೆಯ ಸುದ್ದಿಗಳ ಪುನರಾವರ್ತನೆಯಿಂದ ಅದು ಹೆಚ್ಚು ಸದ್ದು ಮಾಡಲಿಲ್ಲ. ಟಿ.ವಿ9 ಕನ್ನಡ ವಾಹಿನಿಯೇ ಕನ್ನಡದ ಮೊದಲ ಸಂಪೂರ್ಣ ಸುದ್ದಿವಾಹಿನಿ ಎಂದರೆ ಸರಿಹೋದೀತು. ಮೊದಮೊದಲು ವಸ್ತುನಿಷ್ಠ ವರದಿಗಳಿಂದ, ನಡೆಸಿದ ಕುಟುಕು ಕಾರ್ಯಾಚರಣೆಗಳಿಂದ ಜನರನ್ನಾಕರ್ಷಿಸಿದ ಟಿ.ವಿ9 ನಂತರ ರೋಚಕ (?) ಸಂಗತಿಗಳಿಗೆ ಮಹತ್ವ ನೀಡಲಾರಂಭಿಸಿತು. ನಂತರ ಬಂದ ಸುವರ್ಣ, ಸಮಯ, ಜನಶ್ರೀ, ಕಸ್ತೂರಿ ಎಲ್ಲವೂ ಟಿ.ವಿ9 ವಾಹಿನಿಯ ತದ್ರೂಪಿನಂತಯೇ ಕಾರ್ಯಕ್ರಮಗಳನ್ನು ಆರಂಭಿಸಿತು. ಅದೇ ಕ್ರಿಕೆಟ್ಟೂ, ಸಿನಿಮಾ, ತಾರೆಯರ ಜೀವನದ, ಪ್ರಚಾರಪ್ರಿಯ ರಾಜಕಾರಣಿಗಳ ವೈಭವೀಕರಣ, ರಾತ್ರಿ ಮಲಗೋಕೆ ಮುಂಚೆ ಒಂದಷ್ಟು ಕ್ರೈಮು, ವಾರಕ್ಕೊಮ್ಮೆ ಹೀಗೂ ಉಂಟೆ?! ಎಲ್ಲಾ ವಾಹಿನಿಗಳಲ್ಲೂ ಒಂದೇ ರೀತಿಯ ಕಾರ್ಯಕ್ರಮಗಳು. ಹೆಸರು ಬೇರೆಬೇರೆಯಷ್ಟೇ. ಈಗ ಹೊಸದಾಗಿ ಎಲ್ಲಾ ವಾಹಿನಿಗಳಲ್ಲೂ ರೆಕಾರ್ಡೆಡ್ ಹಾಸ್ಯ ಕಾರ್ಯಕ್ರಮಗಳ ಕಾರುಬಾರು.
‘ಜನರಿಗೆ ಏನು ಬೇಕೋ ಅದನ್ನೇ ನೀಡುತ್ತಿದ್ದೇವೆ’ ಎಂಬ ಸಮರ್ಥನೆಯೊಂದಿಗೆ ನೈಜ ನೈತಿಕ ಪತ್ರಿಕೋದ್ಯಮಕ್ಕೆ ತಿಲಾಂಜಲಿಯಿಟ್ಟು ಕಾರ್ಯನಿರ್ವಹಿಸುತ್ತಿರುವ ವಾಹಿನಿಗಳು ರಾಜಕಾರಣಿಗಳ, ರಾಜಕೀಯ ಪಕ್ಷಗಳ ಮುಖವಾಣಿಯಂತೆ ಕೆಲಸಮಾಡುತ್ತಿರುವುದು ಸುಳ್ಳಲ್ಲ. ಇವರ ನಡುವೆ ಸುದ್ದಿ ಮಾಧ್ಯಮಕ್ಕೆ ಹೊಸ ಆಯಾಮ ನೀಡುತ್ತೇವೆಂಬ ಆಶ್ವಾಸನೆಯೊಂದಿಗೆ ಬರುತ್ತಿರುವ ಪಬ್ಲಿಕ್ ಟಿ.ವಿಯ ಬಗ್ಗೆ ಎಷ್ಟರ ಮಟ್ಟಿಗೆ ಭರವಸೆ ಇಡಬಹುದು? ಟಿ.ಆರ್.ಪಿ ಯುದ್ಧದಲ್ಲಿ ಪಬ್ಲಿಕ್ ಟಿ.ವಿ ಕೂಡ ಮತ್ತೊಂದು ಮಗದೊಂದು ವಾಹಿನಿಯಷ್ಟೇ ಆಗಿಬಿಡಬಹುದೇ? ಜಾಹೀರಾತುಗಳ ಮೇಲಿನ ಅವಲಂಬನೆಯನ್ನು ಯಾವುದೇ ಸುದ್ದಿ ವಾಹಿನಿ ತೊರೆಯುವುದು ಅಸಾಧ್ಯ. ಜಾಹೀರಾತು ನೀಡುವ ಉದ್ದಿಮೆಗಳು, ಆ ಉದ್ಯಮಗಳ ಹಿಂದಿನ ರಾಜಕಾರಣಿಗಳು ಇವರೆಲ್ಲರ ವಿಷವರ್ತುಲದಲ್ಲಿ ನಿಜಕ್ಕೂ ಪತ್ರಿಕೋದ್ಯಮಕ್ಕೆ ನ್ಯಾಯ ಸಲ್ಲಿಸುತ್ತಾರಾ? ನ್ಯಾಯ ಸಲ್ಲಿಸಲಿ ಎಂಬುದು ನಮ್ಮ ಆಸೆ, ಹಾರೈಕೆ.
ಉಳಿದಿದ್ದೇನೆ ಇರಲಿ, ಸದ್ಯದ ಮಟ್ಟಿಗಂತೂ ಪತ್ರಕರ್ತರ ವಲಯದಲ್ಲಿ ಪಬ್ಲಿಕ್ ಟಿ.ವಿ ಸಂಚಲನವನ್ನುಂಟುಮಾಡಿದೆ. ವಾಹಿನಿ ಹುಟ್ಟುವ ಮೊದಲೇ ಅದನ್ನು ಮುಗಿಸಲು ಹೊಂಚುಹಾಕುವ ಪತ್ರಕರ್ತರ ಸಂಖ್ಯೆ ಹೆಚ್ಚಿದೆ. ಅಷ್ಟರಮಟ್ಟಿಗೆ ರಂಗನಾಥ್ ಮತ್ತವರ ತಂಡ ಗೆದ್ದಿದೆ. ಈ ಗೆಲುವು ನಿರಂತರವಾಗಿ ಮುಂದುವರೆಯಲಿ......

1 comment:

  1. ಸಧ್ಯ ಪ್ರಚಲಿತ ವಿರುವ ವಾಸ್ತು ಸ್ಥಿತಿಯನ್ನು (ಚನೆಲ್ ಗಳು ಕುರಿತು)ತುಂಬಾ ಚನ್ನಾಗಿ ವರ್ಣಿಸಿದ್ದೀರಿ. ನಿಮ್ಮೊಂದಿಗೆ ನಾವು ಕೂಡಾ ಪಬ್ಲಿಕ್ ಟಿವ್ಹಿ ಯ ಬರುವಿಗಾಗಿ ಕಾಯುತ್ತಿದ್ದೇವೆ. ಅದು ಈ ಸ್ಪರ್ಧೆಯಲ್ಲಿ ಗೆಲ್ಲಲ್ಲಿ ಎಂಬ ಹಾರೈಕೆ ನಮ್ಮದು.

    ReplyDelete