Oct 11, 2011

ಅನ್ನದ ಉತ್ಪಾದಕರಿಗೆ ಮೂರು ಫೇಸು ಮೂರೇ ತಾಸು

-      ಡಾ.ಅಶೋಕ್. ಕೆ. ಆರ್
ಅನಧಿಕೃತವಾಗಿ ಹೋಗುತ್ತಿದ್ದ ವಿದ್ಯುತ್ತಿಗೆ ಈಗ ಅಧಿಕೃತೆಯ ಮುದ್ರೆ ಬಿದ್ದಿದೆ; ಅಷ್ಟೇ ವ್ಯತ್ಯಾಸ! ಆಳುವ ವರ್ಗದ ಹಿತಾಸಕ್ತಿಗಳೇನು ಎಂಬುದನ್ನು ಅರಿಯಲು ಸರಕಾರದ ಈ ಅಧಿಕೃತ ಲೋಡ್ ಶೆಡ್ಡಿಂಗ್ ವಿವರವನ್ನು ಪರಿಶೀಲಿಸಬೇಕು. ಬೆಂಗಳೂರು ನಗರದಲ್ಲಿ ಲೋಡ್ ಶೆಡ್ಡಿಂಗಿಲ್ಲ, ಇತರೆ ನಗರಗಳಲ್ಲಿ ಒಂದು ತಾಸಿನ ಶೆಡ್ಡಿಂಗ್. ಹಳ್ಳಿಗಳಿಗೆ ಮೂರು ತಾಸು ಮಾತ್ರ ಮೂರು ಫೇಸಿನ ವಿದ್ಯುತ್. ಸಂಜೆ ಆರರಿಂದ ಮಾರನೇ ಬೆಳಿಗ್ಗೆ ಆರರವರೆಗೆ ಬಲ್ಬುಗಳು ಹತ್ತುವುದಕ್ಕೇ ಏದುಸಿರುಬಿಡುವ ಒಂದು ಫೇಸಿನ ವಿದ್ಯುತ್. ಆರು ತಾಸು ಕೊಡಲಾಗುತ್ತಿದ್ದ ಮೂರು ಫೇಸಿನ ವಿದ್ಯುತ್ತನ್ನು ಈಗ ಮೂರು ತಾಸಿಗೆ ಇಳಿಸಲಾಗಿದೆ. ಕಾರಣ?- ಬೆಂಗಳೂರು ಮತ್ತಿತರ ನಗರಗಳಿಗೆ ಅಭಾದಿತ ವಿದ್ಯುತ್ ಪೂರೈಕೆ ಮಾಡಬೇಕಿರುವುದು.
          ಅಲ್ಲಿಗೆ ಸರಕಾರದ ಮೊದಲ ಆದ್ಯತೆ ನಗರಗಳೇ ಹೊರತು ಹಳ್ಳಿಗಳಲ್ಲ. ಹಳ್ಳಿಗಳು ಎರಡನೇ ದರ್ಜೆಯ ಪ್ರಜೆಗಳಿರುವ ಭಾರತವಾ? ನಗರ ಪ್ರದೇಶಗಳು ಹಸಿವ ನೀಗಿಸುವ ಅನ್ನ ಉತ್ಪಾದಿಸುವ ಹಳ್ಳಿಗಳಿಗಿಂತ ಮೇಲಿನ ಸ್ಥಾನ ಪಡೆದಿರುವುದಾದರೂ ಹೇಗೆ? ದೇಶವನ್ನು ನಗರೀಕರಣಗೊಳಿಸುವ ನಿಟ್ಟಿನಲ್ಲಿ, ಭೂಮಿ ನೆಚ್ಚಿದ ರೈತರನ್ನೂ ಹಳ್ಳಿಗಳಿಂದ ದೂರ ಮಾಡುವ ಉದ್ದಿಶ್ಯದ ಇಂಥ ಆಲೋಚನೆಗಳು ಮುಂದೊಂದು ದಿನ ತುತ್ತು ಅನ್ನಕ್ಕೂ ಹಾಹಾಕಾರ ಎಬ್ಬಿಸದೆ ಇರಲಾರದು.
          ಮೊನ್ನೆ ಮೈಸೂರಿಗೆ ಹೋಗುವಾಗ ಗಮನಿಸಿದೆ. ಹುಣಸೂರು ರಸ್ತೆಯಲ್ಲಿರುವ ಮೈಸ್ಟೋರ್ಸ್ ಅಂಗಡಿಯಿಂದ ಮೆಟ್ರೋಪೋಲ್ ವೃತ್ತದವರೆಗೆ ರಸ್ತೆ ವಿಭಜಕದಲ್ಲಿ ಅಜಮಾಸು 60-65 ಜಾಹೀರಾತು ಫಲಕಗಳಿದ್ದವು. ಶಿವರಾಜ್ ಕುಮಾರ್ ನಗುತ್ತಿರುವ ಕಲ್ಯಾಣ್ ಜ್ಯುವೆಲರ್ಸ್ ನ ಜಾಹೀರಾತದು. ಒಂದೊಂದು ಫಲಕದೊಳಗೂ ಎರಡು ಟ್ಯೂಬ್ ಲೈಟ್. ಅಲ್ಲಿಗೆ ಅಂದಾಜು ನೂರಿಪ್ಪತೈದು ಟ್ಯೂಬ್ ಲೈಟ್ಗಳು ಕೇವಲ ಒಂದು ಕಿ.ಮಿ.ಯೊಳಗೆ! ಇಂಥ ಜಾಹೀರಾತು ಫಲಕಗಳಿಗೆ ವಿದ್ಯುತ್ ಕೊಡುವುದಕ್ಕಾಗಿ ನಮ್ಮ ಹಳ್ಳಿ ಪ್ರದೇಶಗಳು ಕತ್ತಲಲ್ಲಿರಬೇಕಾ? ನಗರಪ್ರದೇಶಗಳು ರಾತ್ರಿ ಹೊತ್ತು ಜಾಹೀರಾತು ಫಲಕ, ವಿನಾಕಾರಣದ ಇತರೆ ಆಡಂಬರಗಳಿಗೆ ಉಪಯೋಗಿಸುವ ವಿದ್ಯುತ್ ನಿಂದಲೇ ನಮ್ಮ ಎಷ್ಟೋ ಹಳ್ಳಿಗಳು ಬೆಳಗಬಹುದಲ್ಲವೇ?
          ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ಒಂದಷ್ಟು ಪರಿಹಾರ, ನಾಲಕ್ಕು ಹನಿ ಕಣ್ಣೀರಾಕುವ ‘ಜನ’ನಾಯಕರು, ಚುನಾವಣೆಗಳತ್ತಿರವಾಗುತ್ತಿದ್ದಂತೆ ಸಾಲ ಮನ್ನಾ ಮಾಡಿ ಆ ಕ್ಷಣದ ಜನಪ್ರಿಯತೆಯಿಂದಾಗಿ ಮತ್ತೆ ಗೆದ್ದು ಬರುವ ಚಾಣಾಕ್ಷ ರಾಜಕಾರಣಿಗಳು ದೂರಗಾಮಿ ಯೋಜನೆಗಳ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುವುದಿಲ್ಲ? ಅವಶ್ಯಕತೆಯಿರುವಷ್ಟು ವಿದ್ಯುತ್ ಪೂರೈಕೆ, ನೀರಿನ ಸಮರ್ಪಕ ನಿರ್ವಹಣೆ, ಮಧ್ಯವರ್ತಿಗಳ ಹಿಡಿತದಿಂದ ಮಾರುಕಟ್ಟೆಯ ಮುಕ್ತಿಗೊಳಿಸುವಿಕೆ. ಇಂಥ ಕಾರ್ಯಕ್ರಮಗಳಿಂದ ತತ್ ಕ್ಷಣದಲ್ಲಿ ಯಾವುದೇ ಫಲಿತಾಂಶ ಕಾಣದಿರಬಹುದು. ಆದರೆ ಇವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದೇ ಆದಲ್ಲಿ ಒಂದಷ್ಟು ವರುಷಗಳ ನಂತರ ಹಳ್ಳಿಗರ ಬದುಕು ಸುಧಾರಿಸುವುದೇ ಅಲ್ಲದೆ ಏರುಗತಿಯಲ್ಲೇ ಸಾಗುತ್ತಿರುವ ಆಹಾರ ಉತ್ಪನ್ನಗಳ ದರವೂ ಇಳಿಮುಖವಾಗಬಲ್ಲದು.
ಹಿಂಗ್ಯಾಕೆ?! – ‘ಜೈ ಅಣ್ಣಾ’ ಎಂದು ಫೇಸ್ಬುಕ್, ಟ್ವಿಟರ್, ಬ್ಲಾಗುಗಳಲ್ಲಿ ಬರೆಯಲು ನಮಗೆ ಕರೆಂಟು ಬೇಕು. ‘ಹಳ್ಳಿಗರು ಈ ಹೋರಾಟದಲ್ಲಿ ಭಾಗವಹಿಸುತ್ತಲೇ ಇಲ್ಲ. ಥುತ್ ಸೋಮಾರಿಗಳು ಕಣ್ರೀ ಅವ್ರು’ ಎಂದು ಮೇಸೇಜಿಸಲು ಕರೆಂಟು ಬೇಕೇ ಬೇಕು. ‘middle class internet’ ಕ್ರಾಂತಿಯ ಕಿಡಿಯನ್ನು ನೋಡಲು ಕಂಪ್ಯೂಟರ್ ಆನ್ ಮಾಡೋಣವೆಂದರೆ ಹಳ್ಳಿಗಳಿಗೆ ಕರೆಂಟೇ ಕೊಡುವುದಿಲ್ಲ ನಮ್ಮ ಘನ ಸರಕಾರ. ಹಿಂಗ್ಯಾಕೋ?!

No comments:

Post a Comment