Sep 5, 2011

ಕಿಚ್ಚು ಹಚ್ಚಿದ ರಹಮತ್ ರಿಗೊಂದು ಥ್ಯಾಂಕ್ಸ್ ಹೇಳುತ್ತಾ. . .


ನಾನು ಅಧಿಕೃತವಾಗಿ ಸಾಹಿತ್ಯದ ವಿದ್ಯಾರ್ಥಿಯಲ್ಲ. ವೈದ್ಯಕೀಯ, ಇಂಜಿನಿಯರಿಂಗ್ ವಿಭಾಗಗಳಲ್ಲಿ ಓದಿ ಕೆಲಸಕ್ಕೆ ಸೇರಿರುವ ನನ್ನ ಬಹಳಷ್ಟು ಗೆಳೆಯರೂ ಸಾಹಿತ್ಯದ ವಿದ್ಯಾರ್ಥಿಗಳಲ್ಲ. ಮೊದಮೊದಲು ಸಮಯ ಕಳೆಯಲು, ನಂತರ ಸ್ವಲ್ಪ ಮನೋರಂಜನೆಗೆ ಸ್ವಲ್ಪ ಙ್ಞಾನಕ್ಕೆ ಪಠ್ಯೇತರ ಪುಸ್ತಕಗಳನ್ನು ಓದಲಾರಂಭಿಸಿದವರು ನಾವು. ಗೃಂಥಾಲಯಗಳಲ್ಲಿ ಸಿಕ್ಕುವ ಪುಸ್ತಕಗಳನ್ನೆಲ್ಲ ಓದುತ್ತಿದ್ದೆವು. ಹೆಚ್ಚು ಹಣವಿದ್ದರೆ ಒಂದಷ್ಟು ಖರೀದಿ ಮಾಡುತ್ತಿದ್ದೆವು. ನಮ್ಮ ಅರಿವಿಗೆ ಬಂದಷ್ಟನ್ನು ಹಂಚಿಕೊಳ್ಳುತ್ತಿದ್ದೆವು. ಕಥೆ ಕಾದಂಬರಿ ಪ್ರಕಾರಗಳಿಂದ ನಾಟಕ, ಆತ್ಮಕಥೆ, ರಾಜಕೀಯ, ಆರ್ಥಿಕ ವಿಷಯಗಳ ಕಡೆ ಹೊರಳಲಾರಂಭಿಸಿದೆವು.
          ಒಂದು ಪುಸ್ತಕದ ಓದು ಮತ್ತದರ ಗ್ರಹಿಸುವಿಕೆ ಕೂಡ ವ್ಯವಸ್ಥಿತವಾಗಿರಬೇಕು ಎಂಬ ಭಾವನೆ ಆಗೀಗ ಮೂಡುತ್ತಿತ್ತಾದರೂ ಆ ಗ್ರಹಿಸುವಿಕೆಯ ರೀತಿಯ ಬಗೆಗಿನ ಚರ್ಚೆಗೆ ಅನುವಾಗುವಷ್ಟು ಅನುಭವವಿರುವವರ್ಯಾರೂ ನಮ್ಮ ಬಳಗದಲ್ಲಿ ಇರಲಿಲ್ಲ. ವಿಶ್ವವಿದ್ಯಾಲಯಗಳ ಸಾಹಿತ್ಯ ವಲಯದ ಹೊರಗಿನವರು ನಾವು. ಆ ಕ್ಷೇತ್ರದವರ ಪರಿಚಯ ಕೂಡ ಇರದವರು. ನಮ್ಮ ಗ್ರಹಿಕೆಗೆ ಬಂದಷ್ಟನ್ನು ಅರಿಯುತ್ತಲೇ ಹತ್ತು ವರುಷಗಳಿಂದ ಪುಸ್ತಕಗಳಲ್ಲಿ ಮುಳುಗಿಹೋಗಿರುವವರು.
          ಅಜಮಾಸು ಮುನ್ನೂರೈವತ್ತು ಪುಸ್ತಕಗಳನ್ನು ಓದಿ ಮುಗಿಸಿದ ನಂತರ ರಹಮತ್ ತರೀಕೆರೆಯವರು ಬರೆದಿರುವ ‘ಮನದೊಳಗಣ ಕಿಚ್ಚು’ ಪುಸ್ತಕ ಓದಲು ದೊರೆಯಿತು, ಸುಳ್ಯದ ನಗರ ಕೇಂದ್ರ ಗೃಂಥಾಲಯದಲ್ಲಿ. ಸಾಮಾನ್ಯರಿಗೂ ಸರಳವಾಗಿ ತಿಳಿಯುವಂತೆ ಸಾಹಿತ್ಯಿಕ ಪರಿಭಾಷೆಯನ್ನು ಒಗ್ಗಿಸಿರುವ ರಹಮತ್ರ ರೀತಿಯೇ ಅನನ್ಯ. ಸಂಸ್ಕೃತಿ, ಜೀವನ ರೀತಿ, ಧರ್ಮ – ಜಾತಿ, ದೇವರು ಇತ್ಯಾದಿಗಳ ಬಗ್ಗೆ ಮತ್ತೊಂದು ದೃಷ್ಟಿಕೋನದಲ್ಲಿ ಅವರ ಲೇಖನಿಯಲ್ಲಿ ಮೂಡಿರುವ ಪುಸ್ತಕ ನಮ್ಮ ಙ್ಙಾನವನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತಾ ಸಮಾಜದ ವಿವಿಧ ಘಟನಾವಳಿಗಲನ್ನು ವ್ಯಾಖ್ಯಾನಿಸಲು ಹೊಸ ದೃಷ್ಟಿ ನೀಡುತ್ತದೆ.
          ಈ ವಿಚಾರಗಳ ಮಂಡನೆಗೆ ಪೂರಕವಾಗಿ ಕನ್ನಡದ ಪುಸ್ತಕಗಳಾದ ಕರ್ವಾಲೋ, ಒಡಲಾಳ, ಕಾನೂರು ಹೆಗ್ಗಡತಿ, ಭವ, ಭಾರತೀಪುರ ಇನ್ನೂ ಅನೇಕ ಪುಸ್ತಕ ಮತ್ತು ಇತರ ಲೇಖನಗಳನ್ನು ಉದಹರಿಸುತ್ತಾ ವ್ಯಾಖ್ಯಾನಿಸುತ್ತ ಹೊಸ ದಾರಿ ತೋರುತ್ತಾರೆ. ಪುಸ್ತಕಗಳಲ್ಲಿ ಬಹಳಷ್ಟನ್ನು ಈಗಾಗಲೇ ಓದಿ ಮುಗಿಸಿದ್ದಾಗ್ಯೂ ರಹಮತ್ರವರು ಅಲ್ಲಿನ ಕೆಲವು ಘಟನೆಗಳನ್ನು, ವಿಚಾರಗಳನ್ನು ಸಂಸ್ಕೃತಿ – ಪ್ರತಿ ಸಂಸ್ಕೃತಿಯ ಕೋನದಿಂದ ಪರಾಮರ್ಶಿಸುವುದನ್ನು ಓದಿದಾಗ “ಅರೆರೇ ಈ ಘಟನೆಗೆ, ಈ ವಾಕ್ಯಕ್ಕೆ ಇಷ್ಟೆಲ್ಲ ಅರ್ಥ ಮಹತ್ವ ಇರಲು ಸಾಧ್ಯವಾ?” ಎಂದು ಅಚ್ಚರಿಯಾಗುತ್ತೆ. ಆ ಪುಸ್ತಕಗಳನ್ನು ಮತ್ತೊಮ್ಮೆ ಓದಬೇಕೆಂದು ಪ್ರೇರೇಪಿಸುತ್ತದೆ.
          ‘ಮರದೊಳಗಣ ಕಿಚ್ಚು’ ಓದಿ ಮುಗಿಸಿದ ನಂತರ ಒಂದಷ್ಟು ಬೇಸರವೂ ಆಗುತ್ತೆ. ಇಂಥ ಒಂದು ಪುಸ್ತಕವನ್ನು ಪಠ್ಯೇತರ ಓದನ್ನು ಆರಂಭಿಸಿದ ಘಳಿಗೆಯಲ್ಲೇ ಓದಿದ್ದರೆ ಎಷ್ಟೊಂದು ಅನುಕೂಲವಾಗುತ್ತಿತ್ತಲ್ಲ ಎಂದು. ಅಧಿಕೃತವಾಗಿ ಸಾಹಿತ್ಯದ ವಿದ್ಯಾರ್ಥಗಳಲ್ಲದ ನಮಗೆ ಇಂಥ ಪುಸ್ತಕವನ್ನು ಮೊದಲು ಓದು ಎಂದು ಸಲಹೆ ಕೊಡುವರಾರೂ ಇರಲಿಲ್ಲ. ಇಂಥ ಮಾರ್ಗದರ್ಶಿ ಲೇಖಕರ ಸಾಹಿತ್ಯವಲಯದಲ್ಲಿರುವ ಅವಕಾಶವೂ ನಮಗಿರಲಿಲ್ಲ. ನಮ್ಮವರೆಗೆ ತಲುಪಲಾಗದ್ದು ಲೇಖಕರ ವೈಫಲ್ಯವೋ ಅಥವಾ ನಮ್ಮ ದುರದೃಷ್ಟವೋ ನಿರ್ಧರಿಸುವುದು ಕಷ್ಟ. ಇಷ್ಟು ದಿನಗಳ ನಂತರ ಆಕಸ್ಮಿಕವಾಗಿ ಸಿಕ್ಕು ಓದಿದ ಪುಸ್ತಕದಿಂದ ಮುಂದೆ ನಡೆಸುವ ಓದಿಗೆ ಬಹಳಷ್ಟು ಉಪಯೋಗವಾಗುತ್ತೆ. ಇಂಥದೊಂದು ಪುಸ್ತಕ ಬರೆದ ರಹಮತ್ ತರೀಕೆರೆಯವರಿಗೆ ನಮ್ಮ ಈ ಪುಟ್ಟ ಬ್ಲಾಗ್ ನ ಪರವಾಗಿ ಥ್ಯಾಂಕ್ಸ್.
ಹಿಂಗ್ಯಾಕೆ?! – ಸಾಹಿತ್ಯಿಕವಾಗಿ ಭೈರಪ್ಪನವರ ಕಾದಂಬರಿ ಎಂದು ಹೇಳಲೇ ಕಷ್ಟವಾದ ‘ಆವರಣದ’ ಬಗ್ಗೆ ರೀಮುಗಟ್ಟಲೆ ಚರ್ಚೆಗಳು ನಡೆದವು. ಅದರ ಪೋಸ್ಟ ಮಾರ್ಟಮ್ ಮಾಡುವ ಪುಸ್ತಕಗಳೂ ಬಂದವು. ಅದೇ ವೇಳೆಗೆ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲೊಂದೆಂದು ಪರಿಗಣಿಸಬಹುದಾದ ಚಂದ್ರಶೇಖರ್ ಕಂಬಾರರ ‘ಶಿಖರಸೂರ್ಯ’ವೂ ಬಂದಿತಾದರೂ ಅದರ ಬಗ್ಗೆ ಅಲ್ಲೊಂದಿಲ್ಲೊಂದು ವಿಮರ್ಶೆ ಬಂದಿತ್ತಷ್ಟೇ. ಭೈರಪ್ಪನರೆಷ್ಟೇ ಖ್ಯಾತಿಯುಳ್ಳವರಾದರೂ ಕೊನೇಪಕ್ಷ ಪತ್ರಿಕೆಗಳಾದರೂ ಕೃತಿಗೆ ಬೆಲೆಕೊಡಬೇಕಿತ್ತೇ ಹೊರತು ವ್ಯಕ್ತಿಗಲ್ಲ. ಉತ್ತಮ ಕೃತಿಗಳನ್ನು ಎಲ್ಲ ವೃತ್ತಿಯ ಜನರಿಗೆ ಪರಿಚಯಿಸಬೇಕಾದ ಪತ್ರಿಕೆಗಳೂ ಕೂಡ ಪ್ರಖ್ಯಾತಿ ಕುಖ್ಯಾತಿಗಳೆಡೆಗಷ್ಟೇ ವ್ಯಾಮೋಹ ಬೆಳೆಸಿಕೊಳ್ಳುತ್ತವೆಯಲ್ಲಾ? ಹಿಂಗ್ಯಾಕೋ?!!
ಅಶೋಕ್. ಕೆ. ಆರ್

No comments:

Post a Comment