Aug 22, 2011

ಪ್ರಭುತ್ವ ಮಣಿಸುವ ಅತ್ಯಾತುರದಲ್ಲಿ...          ಕಳೆದ ನಲವತ್ತೆರಡು ವರ್ಷಗಳಿಂದ ಭಾರತವನ್ನು ‘ಆಳಿದ’ ಯಾವೊಂದು ಪಕ್ಷವೂ ಒಂದು ಪ್ರಬಲ ಲೋಕಪಾಲ ಮಸೂದೆಯನ್ನು ಮಂಡಿಸಲು ಬೇಕಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಲಿಲ್ಲ. ಬಹುಶಃ ಶಾಂತರಾಮ್ ಕಾದಂಬರಿಯಲ್ಲಿ ಬರುವ the problem with corruption is it works very fine!  ಎಂಬ ವಾಕ್ಯದಂತೆ ನಾವೆಲ್ಲರೂ ಭೃಷ್ಟಾಚಾರಕ್ಕೆ ಒಗ್ಗಿ ಹೋಗಿದ್ದೇವೆ. ನಮ್ಮದು ಸಂಪ್ರದಾಯಬದ್ಧ ದೇಶ ಎಂದು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುವ ಪರಿಣಾಮ ನಮಗೆ ಆರಾಧಿಸಲು ಒಬ್ಬ ದೇವರು ಬೇಕು. ಸದ್ಯ ಅಣ್ಣಾ ಹಜಾರೆಗೆ ಆ ದೇವರ ಸ್ಥಾನ ಕೊಟ್ಟು ಬೀದಿಗಿಳಿದಿದ್ದೇವೆ. ಬೆಚ್ಚಗೆ ಮನೆಯಲ್ಲಿ ಕುಳಿತು ಯಾವೊಂದು ಚಳಿವಳಿಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸದೇ ಇದ್ದ ಜನರನ್ನು ಬೀದಿಗಿಳಿದು ದನಿತೆಗೆಯುವಂತೆ ಮಾಡಿದ್ದು ಅಣ್ಣಾರ ನಿಜವಾದ ಸಾಧನೆಯೇ ಹೊರತು ಅವರ ಹೋರಾಟದಿಂದ ಜಾರಿಯಾಗುವ ಅಥವಾ ಜಾರಿಯಾಗದೆ ಇರುವ ಜನಲೋಕಪಾಲ ಮಸೂದೆಯಲ್ಲ. 

          ಆದರೆ ಈ ಹೋರಾಟ ದಿಕ್ಕು ತಪ್ಪುತ್ತಿರುವ ಸೂಚನೆಗಳು ಹೇರಳವಾಗಿ ದೊರಕುತ್ತಿವೆ. ಯಾವುದೇ ಒಂದು ಚಳುವಳಿಗೆ ಅದರ ಮೂಲ ಆಶಯ ಆದರ್ಶಗಳು ಮುಖಂಡನಾಗಿರಬೇಕೆ ಹೊರತು ಒಬ್ಬ ವ್ಯಕ್ತಿಯಷ್ಟೇ ಆರಾಧನೆಯ ವಸ್ತುವಾಗಬಾರದು. ಅಣ್ಣಾ ಹಜಾರೆಯನ್ನು ಬಂಧಿಸುವವರೆಗೆ ಎಲ್ಲವೂ ಸರಿಯಿತ್ತೇನೋ ಆದರೆ ಅವರ ಬಂಧನದ ನಂತರ ಚಳುವಳಿಯ ಬೆಂಬಲ ಹಜಾರೆಯವರ ಮುಖಸ್ತುತಿಯಲ್ಲಿ ಕಳೆದುಹೋಗುತ್ತಿದೆ. ಜನಲೋಕಪಾಲದ ತಪ್ಪು ಒಪ್ಪುಗಳೇನೇ ಇರಲಿ ಅದು ಜಾರಿಯಾಗಿದ್ದೇ ಆದಲ್ಲಿ ಅದು ಪ್ರಜಾಪ್ರಭುತ್ವದ ಗೆಲುವಾಗಬೇಕೆ ಹೊರತು ಒಬ್ಬ ವ್ಯಕ್ತಿಯದಲ್ಲ. ಅಣ್ಣಾ ಎಂದರೆ ಭಾರತ, ಭಾರತವೆಂದರೆ ಅಣ್ಣಾ” ಎಂದು ಅಪ್ಪಣೆ ಜಾರಿ ಮಾಡಿದ ಕಿರಣ್ ಬೇಡಿಯವರ ಹೇಳಿಕೆ ಅಣ್ಣಾ ಬೆಂಬಲಕ್ಕಿರುವ ಜನರ ಮನಸ್ಥಿತಿಯನ್ನು ವರ್ಣಿಸುತ್ತದೆ. 

It is the mass who decide the path of revolution’ ಎಂದು ಹೇಳಿದ ಮಾವೋನ ಮಾತನ್ನು ಕಮ್ಯುನಿಸ್ಟರಲ್ಲದವರೂ ಒಪ್ಪಬೇಕಿದೆ. ಬೀದಿಗಿಳಿದ ಜನರು ಇಡೀ ಭಾರತದ ಪ್ರತಿನಿಧಿಗಳಾ? ಭ್ರಷ್ಟಾಚಾರವನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂಬುದನ್ನು ದೇಶದ ಶ್ರೀಸಾಮಾನ್ಯ ಖಚಿತವಾಗಿಯೇ ಮನಗಂಡಿದ್ದು ಅದಕ್ಕಾಗಿಯೇ ದೊಡ್ಡ ದನಿಯಲ್ಲಿ ಅಣ್ಣಾ ಹಜಾರೆಯವರ ಬೆಂಬಲಕ್ಕೆ ನಿಂತಿದ್ದಾನೆ ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಹೇಳಿಕೆ ನೀಡಿದ್ದಾರೆ. ಆದರೆ ನಿಜಕ್ಕೂ ಶ್ರೀಸಾಮಾನ್ಯ ಮನಗಂಡಿದ್ದಾನಾ? ನಗರದ ಬೀದಿಗಳಲ್ಲಿ ಕ್ಯಾಂಡಲ್ ಹಿಡಿದು ಹೋಗುವವರಷ್ಟೇ ಶ್ರೀಸಾಮಾನ್ಯರಾ? ಭಾರತದ ಆತ್ಮಹತ್ಯಾ ರಾಜಧಾನಿ ವಿದರ್ಭ, ಸರಕಾರ ಮತ್ತು ಮಾವೋವಾದಿಗಳ ಕದನದಲ್ಲಿ ಹೈರಾಣಾಗಿ ಹೋಗುತ್ತಿರುವ ಆದಿವಾಸಿಗಳು, ಕರ್ನಾಟಕದ ಹಳ್ಳಿಗುಡಿಯ ಪೋಸ್ಕೋ ಪೀಡಿತ ರೈತ – ಇವರೂ ಮನಗಂಡಿದ್ದಾರಾ? ಅಥವಾ ಅವರೆಲ್ಲ ಶ್ರೀಸಾಮಾನ್ಯರಲ್ಲೇ ಅತ್ಯಂತ ಕೆಳಸ್ತರದಲ್ಲಿರುವ ನಿರ್ಲ್ಯಕ್ಷಿತರಾ? ದೇಶದ ಬೇರುಮಟ್ಟದ ಜನರನ್ನು ಆಚೆಗಿಟ್ಟು ನಡೆಸುವ ಯಾವುದೇ ಚಳುವಳಿ ತನ್ನ ಮೂಲ ಆಶಯದಂತೆ ಗೆಲುವು ಸಾಧಿಸಲು ಸಾಧ್ಯವಿಲ್ಲ. ಪ್ರಭುತ್ವ ಮಣಿಸುವ ಅತ್ಯಾತುರದಲ್ಲಿ ಮತ್ತೊಂದು ಪ್ರಭುತ್ವಕ್ಕೆ ಶರಣಾಗುವ ಪ್ರವೃತ್ತಿ ಅಪ್ರಯೋಜಕವಷ್ಟೇ ಅಲ್ಲ ಅದು ಅಪಾಯಕಾರಿ ಕೂಡ ಎಂಬುದನ್ನು ನೆನಪಿಟ್ಟುಕೊಳ್ಳಬೇಕಿದೆ.

ಹಿಂಗ್ಯಾಕೆ?! – ಕರ್ನಾಟಕದಲ್ಲಿ ಗಣಿಗೆ ಸಂಬಂಧಪಟ್ಟ ಲೋಕಾಯುಕ್ತ ವರದಿ ಬಿಡುಗಡೆಯಾಗುವ ದಿನ ಎಬಿವಿಪಿ ಮತ್ತು ಇತರ ಬಲಪಂಥೀಯ ಸಂಘಟನೆಗಳು ಕೇಂದ್ರ ಸರಕಾರದ ಭ್ರಷ್ಟಾಚಾರದ ವಿರುದ್ಧ ಚಿಕ್ಕ ಪುಟ್ಟ ಊರಿನಲ್ಲೂ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈಗ ಕರ್ನಾಟಕದಲ್ಲಿ ಅಣ್ಣಾ ಹಜಾರೆಗೆ ಬೆಂಬಲ ಸೂಚಿಸುವುದರಲ್ಲೂ ಅವರದೇ ಎತ್ತಿದ ಕೈ! ಆದರೆ ಯಡ್ಡಿಯ ಬಗ್ಗೆ ನಮ್ಮದೇ ರಾಜ್ಯದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರದ ಬಗ್ಗೆ ಕೊನೆ ಪಕ್ಷ ಒಂದು ಪತ್ರಿಕಾ ಹೇಳಿಕೆಯನ್ನೂ ನೀಡಲಿಲ್ಲವಲ್ಲಾ?! ಹಿಂಗ್ಯಾಕೋ?!
-      ಅಶೋಕ್. ಕೆ. ಆರ್

2 comments:

  1. Sir, thinking in your terms, there never cums a time when a CHANGE is possible in the country. Why all of a sudden statements like "poor man of India is not aware of the protests, Lokpal doesnot matter him" are making their way. I view it purely as a thought let out by politicians for dilution of the movement. The poor man of this country is not benefitted anyway, whether Lokpal is passed or not, So let him be. If Lokpal is passed atleast the slightest hope we have for ourselves and for our future generations will be kept alive.
    Adeno heltaralla sir, " Madve aagovargu huchchu bidolla, huchchu bidovargu madve agalla" anta; hangagbardu nodi. " Sri samanyanige jagruti barovargu horatakke artha illa, Horata madovargu srisamanya ralli jagruthi moodalla" anno hage aag baardu. We have to start somewhere......

    ReplyDelete
  2. we have to start somewhere i agree. but reading some of demands in the jan lokpal i just feel that it s more of autocratic. anyhow will hope for the best

    ReplyDelete