Aug 14, 2011

ಕಡ್ಡಿಗೀರಿ ......................ಹಚ್ಚಿದನು

-->
ಹಳ್ಳಿಹೈದ. S. ಅBಹನಕೆರೆ
          ಟೀ ಸ್ಟಾಲ್ ಬಳಿ ಕುಳಿತಿದ್ದವನ ಕೆಣಕಿದವನು ಮೋಗ್ಲಿಯೇ. ಅಲ್ಲಿಂದ ಉರ್ಕೊಂಡು ಹೋಗುವಂತೆ ಮಾಡಿದವನೂ ಮೋಗ್ಲಿಯೇ. ಬೈಕ್ ನಿಲ್ಲಿಸಿ ಒಳಬಂದವನೆ “ಅಣ್ಣಾ ಎರಡ್ ಕಿಂಗ್ ಎರಡ್ ಟೀ” ಅಂದ. ತಕ್ಷಣ ಸುತ್ತಮುತ್ತ ನೋಡಿದೆ, ಯಾರೂ ಇರಲಿಲ್ಲ, mostly ನನಗೇ ಆರ್ಡರ್ ಮಾಡಿರಬೇಕೆಂದುಕೊಂಡು “ನನಗೆ ಬೇಡ” ಅಂದೆ.
“ಯಾಕಪ್ಪಾ! ದಿನಕ್ಕೆ ಒಂದೇ ಒಂದೋ” ಅಂದ. ಮೋಗ್ಲಿಗೆ ಮನದಲ್ಲಿಯೇ “ಥೂ ನನ್ನ ಮಗ ನನ್ನಿಷ್ಟಕ್ಕೆ ನನ್ನ ಬಿಡದೆ ಕಾಡ್ತಾನಲ್ಲ” ಬೈಯುತ್ತಾ “ಇಲ್ಲಾ ಕಣೋ, ಇನ್ಮೇಲೆ ಮುಟ್ಟೊಲ್ಲ ಸಿಗರೇಟ್ ನ” ಎಂದೆ. ಗಾಬರಿ ಮತ್ತು ಕೆಡಕಾದವನಂತೆ “ನಮಗೆಲ್ಲಾ ಕಲಿಸಿ ಈಗ ನೀನ್ ಬಿಟ್ ಬಿಟ್ರೆ ಹೇಗೆ. ನಾವೆಲ್ಲಾ ಹೊಗೆ ಬಿಟ್ಟು – ಬಿಟ್ಟು ಹೊಗೆ ಹಾಕ್ಸ್ಕೋತಿವಿ. ನೀನು ಬಂದು ಡ್ಯಾನ್ಸ್ ಮಾಡೋಕೆ ಸ್ಕೆಚ್ ಹಾಕಿದೀಯ?! ನಮ್ಮನೆಲ್ಲಾ ಹಾಳ್ ಮಾಡ್ ಬಿಟ್ಯಲ್ಲ” ಅನ್ನುತ್ತಾ ಕಡ್ಡಿ ಗೀರಿ ಸಿಗರೇಟ್ ಜೊತೆಗೆ ನನಗೂ ಬೆಂಕಿ ಇಟ್ಟ. ಉರಿದೋಯ್ತು ನನಗೆ, ಅಲ್ಲಿಂದ ಬರಬರನೆ ಗಾಡಿ ಚಾಲೂ ಮಾಡಿ ಹೊರಟವನು ಆನಂದನ ಅಂಗಡಿಯ ಬಳಿ ಬರುವಷ್ಟರಲ್ಲಿ, ಬೇಕಾದಷ್ಟು ಆಲೋಚನೆಗಳು....”ಈ ನನ್ನ ಮಕ್ಕಳಿಗೆ ಬರೀ ಕೆಟ್ಟದ್ದನ್ನೇ ಕಲಿಸಿಬಿಟ್ನಾ ನಾನು. ತುಂಬಾ ಒಳ್ಳೇದ್ನು ಕಲಿಸಿದೀನಿ. ತುಂಬಾ ಒಳ್ಳೇದ್ನು ಮಾಡಿದ್ದೀನಿ. ಅದನ್ನ ಎತ್ತಿ ಆಡೋಕೆ ಹಿಂದೆ ಮುಂದೆ ನೋಡೋ ಮುಂಡೇವು ಈ ಕೆಟ್ಟ ಕಸುಬಿಗೆ ಮಾತ್ರ ನನ್ನ ಹೆಸರನ್ನೇ ಎತ್ತಿ ಎತ್ತಿ ಆಡ್ತವೆ” “ಥೂ ತೂ” ಎಂದುಕೊಂಡು ಬೈಕ್ ನಿಲ್ಲಿಸಿ ಅಂಗಡಿ ಕಡೆ ನೋಡಿದ್ರೆ ತಲೆ ಬಗ್ಗಿಸಿಕೊಂಡು ತನ್ನ ಎಂದಿನ ಭಂಗಿಯಲ್ಲೇ ಆನಂದ ಗಲ್ಲದ ಮೇಲೆ ಕುಳಿತಿದ್ದಾನೆ. “ಯಾವಾಗ್ಲೂ ನಿದ್ದೆ ಹೊಡಿಯೋದೆ ನಿನಗೆ ವ್ಯಾಪಾರಾನಾ” ಅನ್ನುತ್ತಿದ್ದಂತೆ ಆ ಕಡೆಯಿಂದ “ಯಾವ ನಿದ್ದೆ?! ಹಗಲಿರಲಿ, ರಾತ್ರಿ ಹೊತ್ತೂ ನಿದ್ದೆ ಕಡಿಮೆಯಾಗಿದೆ” ; ಉಢಾಫೆಯಿಂದ ನಾನು “ಯಾರೋ ಸಾಲ ಬರ್ಸಿ ಸಾಮಾನ್ ತಕೊಂಡ್ ಹೋದವರೆಲ್ಲಾ escape ಆದ್ರಾ”
ಆನಂದ ನಗುತ್ತಾ “ಏನ್ರೀ ಸಾಹೇಬರೇ ಯಾವಾಗ್ಲೂ ವ್ಯಾಪಾರ ದುಡ್ಡು ದುಡ್ಡು ಅಂತೀರಲ್ಲ. ಇಲ್ಲಿ ನೋಡ್ರೀ” ಅನ್ನುತ್ತಾ ತನ್ನ ಕೈಯಲ್ಲಿದ್ದ ಮಂದ್ರ ಕಾದಂಬರಿ ತೋರಿಸಿದ.
ನನಗೆ ಗಾಬರಿ ಸಂತೋಷ ಆಶ್ಚರ್ಯ ಎಲ್ಲವೂ ಒಟ್ಟೊಟ್ಟಿಗೆ. “ಅಲ್ಲಾ ಈ ನನ್ನ ಮಗ ನನ್ನ ಡೈಲಾಗ್ ನನಗೇ ಹೊಡೆದುಬಿಟ್ನಲ್ಲಾ” ಅಂತ ಗುನುಗುತ್ತ “ಏನಪ್ಪಾ ಯಾವಾಗಿಂದ ಓದುವ ಹವ್ಯಾಸ, ಓಳ್ಳೇ habit” ಅಂದಿದ್ದಕ್ಕೆ “ ಆಗಲೇ ಹದಿನೈದು ದಿನದಿಂದ ಇದು ಎರಡನೆ ಪುಸ್ತಕ, ಒಳ್ಳೇ ಟೈಮ್ ಪಾಸ್ ಜೊತೆಗೆ ಹೊಸ ಹೊಸ ವಿಚಾರ ನನಗೆ” ಅಂದು “ಬಾಬು ನನಗೆ ಪುಸ್ತಕ ಕೊಟ್ಟು ಓದು ಓದು ಅಂತ ಹಿಂಸೆ ಕೊಟ್ಟ, ಶುರು ಮಾಡ್ದೆ, ನೀನು ಬರೀ ಬಾಯಲ್ಲಿ ಓದು ಅಂದೆ. ಒಂದಿನಾನು ಬುಕ್ ಕೊಡಲಿಲ್ಲ” ಅಂದುಬಿಟ್ಟ, ನನಗೆ ಇನ್ನೂ ಉರಿದುಹೋಯ್ತು.
ಇದೆಲ್ಲಾ ಆಗಿ ಆರು ತಿಂಗಳಾಯ್ತು. ಯಾವಾಗಲೂ ವ್ಯಾಪಾರ, ದುಡ್ಡು, ದುಡ್ಡೇ ದೊಡ್ಡದು ಅನ್ನುತ್ತಿದ್ದ ಆನಂದನ ಮಾತಿನಲ್ಲಿ, ಅವನ ಮಾತಿನಲ್ಲಿನ ವಿಚಾರಗಳಲ್ಲಿ ಬಹು ಸತ್ವಗಳು ಕಾಣುತ್ತವೆ. ಸಂತೋಷದ ವಿಷಯವೆ. ಆದರೆ ಇಂಥ ಒಳ್ಳೇ ಕೆಲಸಕ್ಕೆ ನನ್ನ ಹೆಸರನ್ನು ಎತ್ತಿ ಎತ್ತಿ ಆಡಿದ್ರೆ ಎಷ್ಟು ಚೆಂದ ಅನ್ನಿಸಿತು. ಹಾಗೆ ಮನದಲ್ಲಿ ಅಂದುಕೊಂಡೆ. ಇವತ್ತು ಮತ್ತೆ ಅವನ ಅಂಗಡಿ ಮುಂದೆ ಕೂತಿರುವಾಗಲೇ “ಬಾಬುವಿನಿಂದ ಓದೋ ಬುದ್ಧಿ ಕಲಿತೆ..................’ಗುರು ಲೈಬ್ರರಿಯಿಂದ ಬರುವಾಗ ತ.ರಾಸು ಅವರದು ಬುಕ್ ತಕೋ ಬಾ’” ಎಂದು ಫೋನ್ ಕಟ್ ಮಾಡಿದ ಅವನ ಎಲ್ಲಾ ಮಾತುಗಳು ನನ್ನ ಕಿವಿಯಲ್ಲಿ ಉಳಿಯದೇ ಹೋದರೂ ಆನಂದನ “ಬಾಬು ಓದೋ ಬುದ್ಧಿ ಕಲಿಸಿದ” ಮತ್ತು ಮೋಗ್ಲಿಯ “ನಮಗೆಲ್ಲಾ ಕೆಟ್ಟದನ್ನು ಕಲಿಸಿ ನಮ್ಮನ್ನು ಹಾಳ್ ಮಾಡ್ ಬಿಟ್ನಲ್ಲಾ” ಅನ್ನೋದು ಮಾತ್ರ ಜೋರಾಗಿ ನನ್ನ ಕಿವಿಯಲ್ಲಿ ಮೊಳಗುತ್ತಲೇ ಇತ್ತು.........  

-->
ಕಲಿಯುವ ಕ್ಷಣ ನೀನ್
          ಶಿಷ್ಯನಾಗು
ಕಲಿಸುವ ಕ್ಷಣ ನೀನ್
          ಗುರುವಾಗು
ಕಲಿಯುವುದು ಕಲೆಯೆ
ಕಲಿಸುವುದು ಕಲೆಯೆ
ಕಲಿಯದೆ – ಕಲಿಸದೆ ಇದ್ದರೆ
ಅದು ನಿನ್ನ ವ್ಯಕ್ತಿತ್ವದ ಕೊಲೆಯೆ....
 

No comments:

Post a Comment