May 24, 2020

ಒಂದು ಬೊಗಸೆ ಪ್ರೀತಿ - 65

ರಾಜೀವ ಅವತ್ತು ರಾತ್ರಿಯಾದರೂ ಬರಲಿಲ್ಲ. ಫೋನೂ ಮಾಡಲಿಲ್ಲ. ಮನೆಯಲ್ಲಿ ಅಮ್ಮ ಎಲ್ಲಿ ಅವರು ಎಲ್ಲಿ ಅವರು? ಎಂದು ಕೇಳಿದ್ದೇ ಕೇಳಿದ್ದು. ʻಅವರ ನಂಬರ್‌ ನಿಮ್ಮತ್ರವೇ ಇದ್ಯಲ್ಲ. ನೀವೇ ಫೋನ್‌ ಮಾಡಿ ವಿಚಾರಿಸಿಕೊಳ್ಳಿʼ ಎಂದು ರೇಗಿದ ಮೇಲೆಯೇ ಅಮ್ಮ ಸುಮ್ಮನಾಗಿದ್ದು. ಸುಮ್ಮನಾಗುವ ಮುಂಚೆ "ಗಂಡ ಹೆಂಡತಿ ಗಲಾಟೆ ಏನಾದ್ರೂ ಇರಲಿ. ಮಗಳು ಹುಷಾರಿಲ್ಲಾಂತನಾದ್ರೂ ಬರಬಾರದಾ?" ಎಂದು ಗೊಣಗಿಕೊಂಡರು. 

ಬೆಳಿಗ್ಗೆ ಎದ್ದವಳೇ ಮೊಬೈಲ್‌ ಕೈಗೆತ್ತಿಕೊಂಡು ʻಮಗಳನ್ನು ನೋಡೋಕಂತೂ ಬರಲಿಲ್ಲ. ಕೊನೇ ಪಕ್ಷ ಬಂದು ಕೈಗೊಂದಷ್ಟು ದುಡ್ಡಾದರೂ ಕೊಟ್ಟು ಹೋಗಿ. ರಾಮ್‌ಪ್ರಸಾದ್‌ಗೆ ಹಣ ವಾಪಸ್ಸು ಮಾಡಬೇಕು. ಅಪ್ಪನಿಗೂ ದುಡ್ಡು ಕೊಡೋದಿದೆʼ ಎಂದು ಮೆಸೇಜು ಮಾಡಿದೆ. ಪ್ರತಿಕ್ರಿಯೆ ಬರಲಿಲ್ಲ. ಬರುವ ನಿರೀಕ್ಷೆಯೂ ಇರಲಿಲ್ಲ. ಹಣ ತೆಗೆದುಕೊಂಡೂ ಇವರು ಬರದೇ ಹೋದಲ್ಲಿ ಶಶಿ ಹತ್ರ ದುಡ್ಡು ತೆಗೆದುಕೊಂಡು ರಾಮ್‌ಪ್ರಸಾದ್‌ಗೆ ಕೊಟ್ಟುಬಿಡಬೇಕು ಎಂದುಕೊಂಡೆ. ಮಗಳು ಲವಲವಿಕೆಯಿಂದಿದ್ದಳು. ʻಡ್ಯೂಟಿಗೆ ಹೋಗ್ಲಾ ಪುಟ್ಟʼ ಎಂದಿದ್ದಕ್ಕೆ ಹು ಎಂಬಂತೆ ತಲೆಯಾಡಿಸಿದ್ದಳು. "ಇವತ್ತೊಂದಿನ ರಜಾ ಹಾಕಂಡಿದ್ರಾಗ್ತಿರಲಿಲ್ಲವಾ" ಎಂಬ ಅಮ್ಮನ ಸಲಹೆಗೆ ಅಪ್ಪ "ಅವಳಿಗೆಂಗಿದ್ರೂ ಮಗು ನೋಡ್ಕೊಳ್ಳೋಕ್‌ ಬರಲ್ವಲ್ಲೇ. ಅವಳಿದ್ದು ಏನಾಗಬೇಕಿದೆ. ನೀನಿದೀಯಲ್ಲ ಎಕ್ಸ್ಪರ್ಟು" ಎಂದು ನಗಾಡಿದ್ದರು. "ನಾನು ಅಂದ್ರೆ ನಿಮ್ಮಲ್ರಿಗೂ ಸಸಾರ" ಅಮ್ಮ ನಕ್ಕು ನುಡಿದಿದ್ದಳು. ತಿಂಡಿ ತಿನ್ನುವ ಹೊತ್ತಿಗೆ ರಾಜೀವ ಮನೆಗೆ ಬಂದು ಮಗಳ ಬಳಿ ಹೋಗಿ ಹೆಸರಿಗೊಮ್ಮೆ ಮಾತನಾಡಿಸಿ ಅಲ್ಲೇ ಟೀಪಾಯಿಯ ಮೇಲೆ ದುಡ್ಡಿಟ್ಟು ಹೊರಟುಹೋದರು. ನನ್ನ ಜೊತೆ ಒಂದು ಮಾತಿಲ್ಲದೆ, ತಿಂಡಿ ತಿನ್ನಿ ಅಂದ ಅಮ್ಮನ ಮಾತಿಗೂ ಉತ್ತರ ನೀಡದೆ ಹೊರಟು ಹೋದರು. ಕೋಪದಲ್ಲಿ ನನ್ನ ಡೆಬಿಟ್‌ ಕಾರ್ಡನ್ನೂ ಇಟ್ಟುಬಿಟ್ಟಿದ್ದಾರೋ ಏನೋ ಎಂದುಕೊಂಡು ಟೀಪಾಯಿಯ ಕಡೆಗೆ ಕಣ್ಣಾಡಿಸಿದೆ. ಇರಲಿಲ್ಲ. ಹಣ ಮಾತ್ರವಿತ್ತು. 

ಆಸ್ಪತ್ರೆಯಲ್ಲಿ ಡಿಪಾರ್ಟ್‌ಮೆಂಟಿನವರೆಲ್ಲರ ಪ್ರಶ್ನೆಗಳಿಗೆ - ರಾಧಳ ಆರೋಗ್ಯದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲೇ ಹತ್ತು ಘಂಟೆಯಾಯಿತು. ಸೀನಿಯರ್‌ ಡಾಕ್ಟರ್‌ ಜೊತೆಗೆ ರೌಂಡ್ಸ್‌ ಮುಗಿಸುವಷ್ಟರಲ್ಲಿ ಸಮಯ ಹನ್ನೊಂದೂವರೆ. ಮೂರು ನಾಲ್ಕು ದಿನದಿಂದಿರಲಿಲ್ಲವಲ್ಲ. ಹೊಸ ಹೊಸ ರೋಗಿಗಳು ಯಾರು ಸೇರಿದ್ದಾರೆ ಎನ್ನುವುದನ್ನು ಮತ್ತೊಂದು ಸುತ್ತು ನೋಡಿಕೊಂಡು ಅವರ ಕೇಸ್‌ ಶೀಟೆಲ್ಲ ಅಭ್ಯಸಿಸುವಷ್ಟೊತ್ತಿಗೆ ಊಟದ ಸಮಯವಾಗಿತ್ತು. ರಾಮ್‌ಪ್ರಸಾದ್‌ ಸಿಕ್ತಾರಾ ನೋಡಿಕೊಂಡು ಬರುವ ಎಂದು ಹೆಚ್.ಆರ್‌ ಡಿಪಾರ್ಟ್‌ಮೆಂಟಿನ ಕಡೆಗೆ ಹೋದೆ. ರಾಮ್‌ಪ್ರಸಾದ್‌ ಜೊತೆ ಅವತ್ತು ನಮ್ಮ ಮನೆಗೆ ಬಂದಿದ್ದ ವ್ಯಕ್ತಿ ಬಾಗಿಲಲ್ಲಿ ಎದುರಾದ. ಆತನ ಹೆಸರು ಸಂದೀಪ್‌ ಎಂದೇನೋ ಇತ್ತು. ʻರಾಮ್‌ಪ್ರಸಾದ್‌ ಇದಾರಾʼ ಎಂದು ಕೇಳಿದ್ದಕ್ಕೆ ತಲೆಯಾಡಿಸಿದ. ಅದೇನು ಇದಾರೆ ಅಂತ ತಲೆಯಾಡಿಸಿದ್ದೋ, ಇಲ್ಲ ಎಂದು ತಲೆಯಾಡಿಸಿದ್ದೋ ತಿಳಿಯಲಿಲ್ಲ. ಮತ್ತೊಮ್ಮೆ ಆ ವ್ಯಕ್ತಿಯನ್ನೇ ಪ್ರಶ್ನಿಸುವ ಮನಸ್ಸಾಗದೆ ಬಾಗಿಲು ದೂಡಿಕೊಂಡು ಒಳಹೋದೆ. ರಾಮ್‌ಪ್ರಸಾದ್‌ ಅಲ್ಲೇ ಇದ್ದರು. ಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದವರು ನನ್ನನ್ನು ಕಂಡು ಮುಗುಳ್ನಕ್ಕು ಕೂರಿ ಎಂಬಂತೆ ಸನ್ನೆ ಮಾಡಿದರು. ಕುಳಿತೆ. "ಸರಿ. ಯಾರೋ ಬಂದಿದ್ದಾರೆ. ಆಮೇಲೆ ಮಾಡ್ತೀನಿ ನಿಮಗೆ" ಎಂದ್ಹೇಳಿ ಫೋನ್‌ ಇಟ್ಟರು. 

ʻಯಾರೋ ಆಗೋದ್ನ ನಾನು?!ʼ ನಗುತ್ತಾ ಕೇಳಿದೆ. 

"ಹೆ ಹೆ. ಅತ್ಲಾ ಕಡೆಗೆ ಇರೋರಿಗೆ ಯಾರು ಅಂತೆಲ್ಲ ವಿವರಣೆ ನೀಡ್ತಾ ಕೂರೋಕಾಗ್ತದಾ? ಅದಿಕ್ಕೆ ಹಂಗೇಳಿದೆ ಅಷ್ಟೇ. ಹೇಗಿದ್ದಾಳೆ ಧರಣಿ ಮಗಳು?" 

ʻಹುಷಾರಾದ್ಲಪ್ಪ. ಅರ್ಧ ದಿನ ಹುಚ್ಚೇ ಹಿಡಿದಂಗಾಗಿತ್ತುʼ 

"ಹು. ಮಕ್ಳು ಹುಷಾರು ತಪ್ಪಿದ್ರೆ ಹಂಗೇ ಅಲ್ವ" 

ʻಹೌದು. ಅದೂ ನಾವೂ ಇಲ್ಲಿ ದಿನಾ ಮಕ್ಕಳನ್ನೇ ನೋಡ್ತಿರ್ತೀವಲ್ಲ. ಹತ್ತು ಹಲವು ಕಾಂಪ್ಲಿಕೇಷನ್ಸ್‌ ಎಲ್ಲಾ ನೆನಪಾಗಿ ತಲೆ ಇನ್ನೂ ಕೆಟ್ಟೋಗ್ತದೆ. ನೀವ್‌ ಬಂದಿದ್ದರಿಂದ ತುಂಬಾ ಸಹಾಯವಾಯಿತು ಅವತ್ತುʼ 

"ಅಯ್ಯೋ ಅದ್ರಲ್ಲೇನಿದೆ ಬಿಡಿ. ಫ್ರೆಂಡ್ಸಿನ ಕಷ್ಟಕ್ಕಾಗೋದನ್ನೆಲ್ಲ ಸಹಾಯ ಅಂತ ಅಂದ್ಕೋಬಾರದು" 

ʻಹಂಗಲ್ಲ. ಅವತ್ತು ಇವರೂ ಇರಲಿಲ್ಲ, ಬರಲೇ ಇಲ್ಲ. ನಮ್ಮ ಅಪ್ಪ ಅಮ್ಮ ಕೂಡ ಊರಲ್ಲಿರಲಿಲ್ಲ. ನನ್ನ ಬಳಿ ಹಣವೂ ಇರಲಿಲ್ಲ. ನಾನೂ ಡಾಕ್ಟರ್ರೇ ಆಗಿರೋದ್ರಿಂದ ಹಣ ಬೆಳಿಗ್ಗೆ ಕಟ್ತೀನಿ ಅಂದಿದ್ರೆ ನಡೀತಿತ್ತು ಅನ್ನಿ. ಸ್ಟಿಲ್‌ ಅಂತ ಸಮಯದಲ್ಲಿ ಯಾರಾದ್ರೂ ಒಬ್ರು ಜೊತೇಲಿದ್ರೆ ಮಾರಲ್‌ ಸಪೋರ್ಟ್‌ ಸಿಕ್ತದಲ್ಲ. ಆ ನಿಟ್ಟಿನಲ್ಲಿ ನೀವ್‌ ಬಂದಿದ್‌ ಸಹಾಯವಾಯಿತು ಅಂದೆʼ 

"ಓಕೆ ಓಕೆ. ಜಾಸ್ತಿಯೆಲ್ಲ ಹೊಗಳಬೇಡಿ ಬಿಡಿ! ಅಂತ ದೊಡ್‌ ಕೆಲಸ ಏನ್‌ ಮಾಡಿಲ್ಲ ಬಿಡಿ. ನೀವ್‌ ಬೇಸರ ಮಾಡ್ಕೊಳ್ದೇ ಹೋದ್ರೆ ಒಂದ್‌ ಮಾತ್‌ ಹೇಳಲಾ" 

ʻಹೇಳಿʼ 

"ಇನ್ನೇನಿಲ್ಲ. ಬೆಳಿಗ್ಗೆ ತಿಂಡಿ ತಿಂದಿಲ್ಲ. ಮಧ್ಯೆ ಹನ್ನೊಂದಕ್ಕೆ ಒಂದ್‌ ಕಾಫಿ ಕುಡಿದಿದ್ದಷ್ಟೇ. ವಿಪರೀತ ಹೊಟ್ಟೆ ಹಸೀತಿದೆ. ಕ್ಯಾಂಟೀನಲ್ಲಿ ಊಟ ಮಾಡ್ಕಂಡೇ ನೀವ್‌ ನಂಗ್‌ ಥ್ಯಾಂಕ್ಸ್‌ ಹೇಳಬಹುದಲ್ವ" 

ʻಅಯ್ಯೋ ಸಾರಿ! ಊಟದ ಸಮಯ ಅನ್ನೋದೇ ಮರೆತುಬಿಟ್ಟಿದ್ದೆ. ನೀವ್‌ ಹೊರಡಿ. ನಾ ಊಟ ತಂದಿದ್ದೀನಿ. ನೀವು ದುಡ್ಡು ಕೊಟ್ಟಿದ್ರಲ್ಲ, ಅದನ್ನ ಕೊಟ್‌ ಹೋಗೋಣ ಅಂತ ಬಂದೆʼ ಎಂದ್ಹೇಳಿ ಹಣವನ್ನು ನೀಡಿದೆ. 

"ಇಷ್ಟ್‌ ಅರ್ಜೆಂಟ್‌ ಏನಿತ್ತು. ರಾಜೀವ್‌ ಸಿಕ್ಕಾಗ ಇಸ್ಕೋತೀದ್ದೆ" 

ʻಕುಡಿಯೋಕ್‌ ಸಿಕ್ಕಾಗ್ಲʼ ನನ್ನ ಮಾತಿಗೆ ಪೆಚ್ಚು ನಗೆ ಬೀರಿ "ಚೆನ್ನಾಗ್‌ ರೇಗಿಸ್ತೀರ ನೀವು. ನಡೀರಿ ಊಟಕ್‌ ಹೋಗುವ" ಎನ್ನುತ್ತಾ ಮೇಲೆದ್ದರು. 

ʻಇಲ್ಲಾ ರಾಮ್.‌ ಹೋಗಿರಿ. ನಾ ಊಟ ತಂದಿಟ್ಟಿದ್ದೀನಿ. ಡಿಪಾರ್ಟ್‌ಮೆಂಟಲ್ಲಿದೆʼ 

"ಆ ಊಟ ಕ್ಯಾಂಟೀನಿನವರೆಗೆ ಬರಲ್ಲ ಅನ್ನುತ್ತಾ? ಹಂಗೇನಿಲ್ಲವಲ್ಲ. ತಗಂಡ್‌ ಬನ್ನಿ. ನನಗೂ ಕ್ಯಾಂಟೀನಿನ ಊಟ ತಿಂದು ತಿಂದು ಬೋರಾಗಿದೆ. ನಿಮ್ಮನೆ ಅಡುಗೆ ನಾ ತಿಂತೀನಿ. ನೀವು ಕ್ಯಾಂಟೀನ್‌ ಊಟ ಮಾಡೋರಂತೆ ಇವತ್ತಿನ ಮಟ್ಟಿಗೆ" ಎಂದರು. ಬೇರೆ ದಿನವಾಗಿದ್ದರೆ, ನಾನ್ಯಾಕ್‌ ನಿಮ್‌ ಜೊತೆ ಬರ್ಬೇಕು ಅಂದುಬಿಡ್ತಿದ್ನೋ ಏನೋ. ಈಗ ಅವರು ಮಾಡಿದ ಸಹಾಯದ ಋಣ ಬೇರೆ ಇದೆ. ತೀರ ಹೋಗದೇ ಹೋದರೆ ಸರಿ ಹೋಗೋದಿಲ್ಲ ಎಂದುಕೊಳ್ಳುತ್ತ ಅವರೊಟ್ಟಿಗೆ ಕ್ಯಾಂಟೀನಿಗೆ ಹೊರಟೆ. ಡಿಪಾರ್ಟ್‌ಮೆಂಟಿಗೆ ಡಬ್ಬಿ ತೆಗೆದುಕೊಳ್ಳಲು ಹೋದಾಗ ಸುಮ ಸಿಕ್ಕಿ "ಊಟ" ಎಂದಳು. 

ʼಇಲ್ಲ. ಕ್ಯಾಂಟೀನಿಗೆ ಹೊರಟಿದ್ದೆʼ 

"ಯಾಕೆ? ತಂದಿಲ್ವಾ?" 

ʻತಂದಿದ್ದೀನಿʼ 

"ಮತ್ತೆ" 

ʻರಾಮ್‌ಪ್ರಸಾದ್‌ ಸಿಕ್ಕಿದ್ರು. ಬನ್ನಿ ಕ್ಯಾಂಟೀನಿಗೆ ಹೋಗುವ ಊಟಕ್ಕೆ ಅಂದ್ರು. ಅಲ್ಲಿಗೇ ಹೊರಟಿದ್ದೆʼ 

ಅವಳ ಮುಖದ ತುಂಬಾ ಪ್ರಶ್ನೆಗಳು. ನನಗೆ ರಾಮ್‌ಪ್ರಸಾದ್‌ ಕಂಡರೆ ಅಷ್ಟಕಷ್ಟೇ ಅಂದುಕೊಂಡಿದ್ದಳವಳು. ಕಾರಣ, ಅವರು ನಮ್ಮ ಮನೆಯಲ್ಲಿ ರಾಜೀವನ ಜೊತೆ ಸೇರಿ ಕುಡಿಯುತ್ತಿದ್ದ ವಿಷಯ. ಅದನ್ನವಳ ಬಳಿ ಹೇಳಿಕೊಂಡು ರಾಮ್‌ಪ್ರಸಾದ್‌ರನ್ನು ಬಯ್ದುಕೊಂಡಿದ್ದೆ. 

ʻಅಮ್ಮಾ ತಾಯಿ. ಅದ್ಯಾಕ್‌ ಹಂಗ್‌ ಗರ ಬಡಿದವಳ ತರ ನೋಡ್ತಿದ್ದಿ. ಬಂದ್‌ ಹೇಳ್ತೀನಿ ಸುಮ್ನಿರು ಏನಾಯ್ತು ಅಂತʼ 

"ಓಹೋ! ಹೇಳೋಕ್‌ ವಿಷಯಗಳಿವೆ ಅಂತಾಯ್ತು" ಕಣ್ಣೊಡೆದಳು. 

ʻಥೂ ಥೂ... ಈ ಹೊಸದಾಗ್‌ ಮದುವೆಯಾದವರ ಹಣೆಬರಹಾನೇ ಇಷ್ಟು. ಮೂರೊತ್ತು ಅದೇ ಯೋಚಿಸೋದು.... ಬಂದ್‌ ಹೇಳ್ತೀನಿ ಇರವ್ವ. ಅವರು ಹೊರಗೆ ಕಾಯ್ತಿದ್ದಾರೆʼ ಎಂದ್ಹೇಳಿ ಹೊರಬಂದೆ, ನಗುತ್ತ. 

ಇಬ್ಬರದೂ ಪರಿಚಯದ ಮುಖವಾದರೂ ಒಬ್ಬರಿಗೊಬ್ಬರ ಪರಿಚಯವಿರಲಿಲ್ಲ. ಊಟದ ನೆಪದಲ್ಲಿ ಪರಿಚಯ ಮಾಡಿಕೊಂಡಂತಾಯಿತು. ರಾಮ್‌ಪ್ರಸಾದ್‌ ತಂದೆ ತಾಯಿ ಬೆಂಗಳೂರಿನಲ್ಲಿದ್ದಾರೆ. ಗಿರಿನಗರದಲ್ಲಿ ಪುಟ್ಟ ಬಟ್ಟೆ ಅಂಗಡಿಯನ್ನಿಟ್ಟುಕೊಂಡಿದ್ದಾರಂತೆ. ಇವರಿಬ್ಬರು ಮಕ್ಕಳು. ಅಕ್ಕ - ತಮ್ಮ. ಅಕ್ಕ ಭಾವ ಮೈಸೂರಿನಲ್ಲೇ ಇದ್ದಾರೆ, ಹಿಂದೊಮ್ಮೆ ನಮ್ಮಲ್ಲಿ ಅಡ್ಮಿಟ್‌ ಆಗಿದ್ದ ರಿತಿಕಾ ಅವರಿಬ್ಬರಿಗೆ ಒಬ್ಬಳೇ ಮಗಳು. ರಾಮ್‌ಪ್ರಸಾದ್‌ ಓದಿದ್ದೆಲ್ಲ ಬೆಂಗಳೂರಿನಲ್ಲೇ. ಬಿಎಸ್‌ಸಿ ಮುಗಿದ ನಂತರ ಮಾಡಿದ್ದು ಹೋಟೆಲ್‌ ಮ್ಯಾನೇಜ್‌ಮೆಂಟ್.‌ ಗುರಿ ಇದ್ದದ್ದು ದೇಶ ದೇಶಗಳ ನಡುವೆ ಸುತ್ತುವ ಕ್ರ್ಯೂಝಿನಲ್ಲಿ ಕೆಲಸ ಮಾಡಬೇಕೆಂದು. ಒಂದೆರಡು ಹೋಟೆಲ್ಲುಗಳಲ್ಲಿ ಕೆಲಸಕ್ಕೆ ಸೇರಿ ಆರು ತಿಂಗಳು ಕಳೆಯುವಷ್ಟರಲ್ಲಿ ಆ ಕೆಲಸ ಬೋರಾಯಿತು. ಕ್ರೂಝಿನಲ್ಲಿ ಕೆಲಸ ದಕ್ಕುವ ನಿರೀಕ್ಷೆಯಲ್ಲಿ ಒಂದಷ್ಟು ದಿನ ಸುಮ್ಮನೆ ಅಲೆದುಕೊಂಡಿದ್ದಾಯಿತು. ಅದೇ ಸಮಯದಲ್ಲಿ ನಮ್ಮಾಸ್ಪತ್ರೆಯಲ್ಲಿದ್ದ ಅವರ ಪರಿಚಿತರೊಬ್ಬರು ಹಿಂಗಿಂಗೆ ಹೆಚ್.ಆರ್‌ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಖಾಲಿ ಇದೆ. ನೀನೋದಿದ್ದಕ್ಕೆ ಸಂಬಂಧಿಸಿದ ಕೆಲಸವಲ್ಲ, ಆದರೂ ಮ್ಯಾನೇಜ್‌ಮೆಂಟ್‌ ಕೆಲಸವೇ ಅಲ್ಲವೇ. ಒಂದ್ಸಲ ಸೇರಿ ನೋಡು ಎಂದರು. ಸರಿ ಹೊಸ ಊರಿಗೆ ಹೋಗುವ ಎಂದುಕೊಂಡು ಮೈಸೂರಿಗೆ ಬಂದು ಒಂದಷ್ಟು ದಿನ ಅಕ್ಕನ ಮನೆಯಲ್ಲಿದ್ದವರು ನಂತರ ರೂಮು ಮಾಡಿಕೊಂಡು ಹೊರಬಂದರು. ʻಅದ್ಯಾಕೆ ಅಕ್ಕನ ಮನೆಯಲ್ಲೇ ಆರಾಮಾಗಿ ಇರಬಹುದಿತ್ತಲ್ವʼ ಎಂದು ಕೇಳಿದೆ. 

"ಸುಮ್ನೆ ಇಂಡಿಪೆಂಡೆಂಟ್‌ ಆಗಿ ಇರುವ ಅಂತ". 

ʻಅಲ್ಲಿದ್ರೆ ಕುಡ್ಕಂಡು ಸಿಗರೇಟು ಸೇದ್ಕಂಡು ಇರೋಕಾಗಲ್ಲ ಅಂತೇಳಿʼ 

"ರೀ. ಏನ್ರೀ ನೀವು. ನಾ ಅಷ್ಟೆಲ್ಲ ದೊಡ್ಡ ಕುಡುಕ ಅಲ್ರೀ. ಒಂದೂ ಎರಡು ಪೆಗ್ಗು ಕುಡಿದ್ರೆ ಹೆಚ್ಚು. ಅದೂ ವಾರಕ್ಕೋ ಎರಡು ವಾರಕ್ಕೋ ಒಮ್ಮೆ ಅಷ್ಟೆ. ನಾ ಸಿಗರೇಟ್‌ ಸೇದೋದ್‌ ಯಾವಾಗ್‌ ನೋಡಿದ್ರಿ!" 

ʻವಾಸನೇಲೇ ಗೊತ್ತಾಗ್ತದಲ್ಲʼ 

"ಈಗ್ಲೂ ವಾಸ್ನೆ ಬರ್ತಿದ್ಯಾ?" 

ʻಈಗಲ್ಲ. ಆಗ ನಿಮ್ಮ ರೂಮಿಗೆ ಬಂದಾಗʼ 

"ಓ! ನಿಜ ಹೇಳ್ಬೇಕಂದ್ರೆ ಅಕ್ಕನ ಮನೆಯಲ್ಲಿ ಆರಾಮಾಗೇ ಇದ್ದೆ. ಅಕ್ಕ ಭಾವ ಇಬ್ರೇ ಇದ್ದಿದ್ರೆ ಅಲ್ಲೇ ಇದ್ದುಬಿಡ್ತಿದ್ನೇನೋ. ನಮ್ಮ ಭಾವನ ಅಮ್ಮ ಕೂಡ ಅಲ್ಲೇ ಇರೋದು. ಅವರೂ ಪಾಪ ಒಳ್ಳೆಯವರೇ. ಅಂದ್ರೂ ನನಗೇ ಮುಜುಗರವಾಗ್ತಿತ್ತು ಒಂದೊಂದ್ಸಲ. ಹೆಂಗೋ ಅವರ ಮನೆ ಇದ್ದಿದ್ದು ಸಿದ್ಧಾರ್ಥ ಲೇಔಟ್‌ನಲ್ಲಿ. ಅಷ್ಟು ದೂರದಿಂದ ಓಡಾಡೋದು ಕಷ್ಟ. ಇದ್ದಕ್ಕಿದ್ದಂತೆ ಕರೆದುಬಿಡ್ತಾರೆ ಆಸ್ಪತ್ರೆಯವರು ಅಂತ ನಾನೇ ಇಲ್ಲಿ ಒಂದ್ ರೂಮ್‌ ಮಾಡಿಕೊಂಡುಬಿಟ್ಟೆ" 

ʻಮ್.‌ ಸಿಂಗಲ್‌ ರೂಮಾ?ʼ 

"ಇಲ್ಲ. ನಂಗೂ ಅಡುಗೆ ಬರ್ತದಲ್ಲ..." 

ʻಓ. ಅಡುಗೇ ಬೇರೆ ಕಲ್ತಿದ್ದೀರ!ʼ 

"ಅಂದ್ರೆ! ಹೋಟೆಲ್‌ ಮ್ಯಾನೇಜ್‌ಮೆಂಟಲ್ಲಿ ಕಲೀಲೇ ಬೇಕು" 

ʻಹ ಹ ಹಂಗೆʼ 

"ಹು. ಅದ್ಕೆ ಒಂದ್‌ ಪುಟ್ಟ ಕಿಚನ್ ಅಟ್ಯಾಚ್‌ ಆಗಿರೋ ರೂಮನ್ನೇ ಮಾಡಿಕೊಂಡೆ. ಅಡ್ಗೆ ಮಾಡೋಣ ಅಂತ ಸಾಮಾನುಗಳನ್ನೆಲ್ಲ ತಂದು ಗುಡ್ಡೆ ಹಾಕಿಕೊಂಡಿದ್ದೀನಿ. ಇನ್ನೂ ಮಾಡ್ಕಂಡಿಲ್ಲ. ಒಬ್ಬನಿಗೇ ಮಾಡಿಕೊಳ್ಳೋಕೆ ಬೇಸರ" 

ʻಹು. ಅದೇನೋ ನಿಜ. ಸರಿ ರಾಮ್‌ಪ್ರಸಾದ್‌ ರೌಂಡ್ಸಿಗೆ ಹೊರಡಬೇಕು. ಇಟ್‌ ವಾಸ್‌ ನೈಸ್‌ ಮೀಟಿಂಗ್‌ ಯು. ಬಿಡುವು ಮಾಡಿಕೊಂಡು ಮನೆ ಕಡೆ ಒಂದ್ಸಲ ಬನ್ನಿ. ರಾಜೀವ್‌ ಫ್ರೆಂಡ್‌ ಆಗಿ ಕುಡಿಯೋಕಲ್ಲ, ನನ್ನ ಫ್ರೆಂಡಾಗಿ ಬನ್ನಿ ಒಂದ್ಸಲʼ 

"ಎಷ್ಟು ರೇಗಿಸ್ತೀರ ಸುಮ್ನಿರೀಪ! ಮಗಳೆಲ್ಲಿದ್ದಾಳೆ" 

ʻಅಮ್ಮನ ಮನೆಯಲ್ಲಿʼ 

"ಅಲ್ಲಿಗೆ ಬರಬಹುದಾ ಅವಳನ್ನು ನೋಡೋಕೆ" 

ʻಅಯ್ಯ! ಇದೇನ್‌ ಹಿಂಗ್‌ ಕೇಳ್ತಿದ್ದೀರ! ಬನ್ನಿ ಅದರಲ್ಲೇನಿದೆʼ 

"ಇವತ್‌ ಸ್ವಲ್ಪ ಕೆಲಸವಿದೆ. ನಾಳೆ ಬರ್ತೀನಿ ಬಿಡಿ. ಅವಳೂ ಸ್ವಲ್ಪ ರೆಸ್ಟ್‌ ತಗೊಳ್ಳಲಿ"

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment