Oct 4, 2019

ಗಾಂಧಿ ಜಯಂತಿಯ ದಿನ ಪ್ರಧಾನಿ ಹೇಳಿದ ಸುಳ್ಳು.

ಡಾ. ಅಶೋಕ್. ಕೆ. ಆರ್. 
ಗಾಂಧಿ ಜಯಂತಿಯ ದಿನ ಸಾಬರಮತಿ ಆಶ್ರಮದಲ್ಲಿ ನಡೆದ 'ಸ್ವಚ್ಛ ಭಾರತ ದಿನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಈಗ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ. ೬೦ ತಿಂಗಳುಗಳಲ್ಲಿ ಹನ್ನೊಂದು ಕೋಟಿ ಶೌಚಾಲಯಗಳು ನಿರ್ಮಾಣವಾಗಿರುವುದನ್ನು ನೆಪವಾಗಿಟ್ಟುಕೊಂಡು ಪ್ರಧಾನಿಯವರು ಬಯಲು ಶೌಚ ಮುಕ್ತ ರಾಷ್ಟ್ರದ ಘೋಷಣೆ ಮಾಡಿದ್ದಾರೆ. ನಿಜಕ್ಕೂ ವಾಸ್ತವದಲ್ಲಿ, ಭಾರತ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆಯಾ? 

ನಮ್ಮ ರಾಜಕಾರಣಿಗಳು - ಅದು ಮುಖ್ಯಮಂತ್ರಿಯಾದರೂ ಸರಿ, ಪ್ರಧಾನಮಂತ್ರಿಯಾದರೂ ಸರಿ - ಚುನಾವಣೆಯ ಸಂದರ್ಭದಲ್ಲಿ ಸುಳ್ಳುಗಳನ್ನೇಳುವುದು ಅಥವಾ ಇರುವ ಸತ್ಯವನ್ನೇ ಊಹಿಸಲಾರದಷ್ಟು ದೊಡ್ಡ ಮಟ್ಟದಲ್ಲಿ ವೈಭವೀಕರಿಸಿ ಹೇಳುವುದು ಸಹಜ ಸಂಗತಿಯಂತೇ ಆಗಿ ಹೋಗಿದೆ. My experiments with truth ಅನ್ನೋ ಹೆಸರಿನ ಆತ್ಮಚರಿತ್ರೆ ಬರೆದ, ಸತ್ಯಕ್ಕಾಗಿ ಆಗ್ರಹಿಸುವ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ ಗಾಂಧೀಜಿಯ ಜನ್ಮದಿನವೇ ಅನಾವಶ್ಯಕ ಸುಳ್ಳೇಳುವ ಅನಿವಾರ್ಯತೆಯಾದರೂ ಪ್ರಧಾನಿಗೇನಿತ್ತು? ಅಥವಾ ನಿಜಕ್ಕೂ ಯಾರೋ ಒಬ್ಬ ಅಧಿಕಾರಿಯೋ ಮತ್ತೊಬ್ಬರೋ ವೈಭವೀಕರಿಸಿ ಕೊಟ್ಟ ವರದಿಯನ್ನೇ ನಂಬಿಬಿಡುವಷ್ಟು ನಮ್ಮ ಪ್ರಧಾನಿ ಮುಗ್ದರೇ? 

ಈ ಮುಂಚೆ ಇದ್ದ ನಿರ್ಮಲ ಭಾರತ ಯೋಜನೆಯಡಿ, ತದನಂತರ ಬಂದ ಸ್ವಚ್ಛ ಭಾರತ ಯೋಜನೆಯಡಿ ಬಹಳಷ್ಟು ಗ್ರಾಮಗಳಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣಗೊಂಡಿರುವುದು ಎದ್ದು ಕಾಣಿಸುತ್ತದೆ (ಕೊನೇ ಪಕ್ಷ ಕರ್ನಾಟಕದ ಹಳ್ಳಿಗಳಲ್ಲಿ), ಅದರಲ್ಲೇನೂ ಅನುಮಾನವಿಲ್ಲ. ಅಷ್ಟಿದ್ದರೂ ಹಳ್ಳಿಯಂಚಿನ ಕೆರೆ ಬದಿಗಳಲ್ಲಿ, ಗದ್ದೆ ಹೊಲದ ಬದುವಿನಲ್ಲಿ, ಕಾಲುವೆಯಂಚಿನಲ್ಲಿ, ಹಳ್ಳಗಳತ್ತಿರ ಬಯಲು ಶೌಚ ಯಥಾಸ್ಥಿತಿಯಲ್ಲೇ ಮುಂದುವರೆದಿರುವುದಂತೂ ಹೌದು. ಶೌಚಾಲಯಗಳ ನಿರ್ಮಾಣ ನಡೆಯುತ್ತಿದ್ದರೂ ಬಯಲು ಶೌಚ ಯಾಕೆ ಮುಂದುವರೆಯುತ್ತಿದೆ?
ಹಿಂದೆಲ್ಲ ಮನೆಯೊಳಗಾಗಲೀ ಮನೆಗೆ ಅಂಟಿಕೊಂಡಂತಾಗಲೀ ಶೌಚಾಲಯವನ್ನೊಂದುವುದೇ ಮಹಾಪಾಪ ಎಂಬಭಿಪ್ರಾಯವಿರುತ್ತಿತ್ತು. ಇತ್ತೀಚೆಗೆ ಅಂತಹ ಅಭಿಪ್ರಾಯ ಇಲ್ಲವಾದರೂ ಸರಕಾರದ ನೆರವಿನಿಂದ ಕಟ್ಟಲ್ಪಟ್ಟಿರುವ ಶೌಚಾಲಯಗಳಿದ್ದರೂ ಬಯಲುಶೌಚವ್ಯಾಕೆ ಸಂಪೂರ್ಣವಾಗಿ ನಿಂತಿಲ್ಲ? ನಾನೇ ಕಣ್ಣಾರೆ ಹಲವು ಕಡೆ ಕಂಡಂತೆ ಶೌಚಾಲಯದೊಳಗೆ ಕಕ್ಕಸು ಗುಂಡಿಯ ಮೇಲೊಂದು ಮರದ ಹಲಗೆಯನ್ನೋ ಕಲ್ಲು ಚಪ್ಪಡಿಯನ್ನೋ ಇಟ್ಟು ಇಡೀ ಶೌಚಾಲಯವನ್ನೇ ಸ್ಟೋರ್ ರೂಮಾಗಿ ಪರಿವರ್ತಿಸಿಕೊಂಡುಬಿಟ್ಟಿದ್ದಾರೆ! ಅಲ್ಲ, ಸರಕಾರ ಕಟ್ಟಿಸಿಕೊಟ್ಟಿರೋ ಶೌಚಾಲಯವನ್ನು ಈ ರೀತಿ ಮಾಡಬಹುದಾ ಅಂತ ಕೇಳಿದರೆ ಶೌಚಾಲಯವೇನೋ ಇದೆ, ನೀರು? ಎಂಬ ಬಹುಮುಖ್ಯ ಪ್ರಶ್ನೆ ತಟ್ಟಂತ ಅವರ ಬಾಯಿಂದ ಚಿಮ್ಮಿ ಬರುತ್ತದೆ! ಬಯಲು ಶೌಚಕ್ಕೆ ಹೋಲಿಸಿದರೆ ಶೌಚಾಲಯಕ್ಕೆ ಅತ್ಯಧಿಕ ನೀರಿನ ಅವಶ್ಯಕತೆಯಿದೆ. ಕುಡಿಯುವ ನೀರೇ ಇನ್ನೂ ಮನೆಯವರೆಗೆ ಬರದ ಊರುಗಳಲ್ಲಿ, ಮಳೆಗಾಲದಲ್ಲೇ ವಾರಕ್ಕೊಮ್ಮೆ ನೀರು ಬರುವ ಊರುಗಳಲ್ಲಿ, ಬಾವಿಗಳೆಲ್ಲ ಬತ್ತಿ ಹೋಗುತ್ತಿರುವ ಊರುಗಳಲ್ಲಿ, ಕಿಲೋಮೀಟರುಗಟ್ಟಲೆ ದೂರದಿಂದ ನೀರು ಹೊತ್ತು ತರುವ ಜನರಿರುವ ಊರುಗಳಲ್ಲಿ ಬಯಲು ಶೌಚವನ್ನು ಸಂಪೂರ್ಣ ಇಲ್ಲವಾಗಿಸಲು ಶೌಚಾಲಯ ನಿರ್ಮಾಣವೊಂದೇ ಪರಿಹಾರವಾಗಲಾರದು. ಎರಡು ಮೂರು ಕಿಲೋಮೀಟರುಗಳ ದೂರದಿಂದ ಕುಡಿಯಲು, ಅಡುಗೆಗೆಂದು ಎರಡು ಬಿಂದಿಗೆ ನೀರು ಹೊತ್ತು ತರುವ ಜನರಿಗೆ ಶೌಚಾಲಯಕ್ಕೆಂದು ಹತ್ತು ಬಿಂದಿಗೆ ದಿನಾ ಹೊತ್ತು ತನ್ನಿ ಎಂದು ಹೇಳಲಾದೀತೇ? ದೂರದ ಹಳ್ಳಿಗಳ್ಯಾಕೆ, ಇಲ್ಲೇ ಬೆಂಗಳೂರಿನ ಹೊರವಲಯದಲ್ಲೇ ಸಾರ್ವಜನಿಕ ಶೌಚಾಲಯಗಳ ಕೊರತೆಯ ಕಾರಣದಿಂದ ಬಯಲು ಶೌಚ ಮುಂದುವರಿಯುತ್ತಲೇ ಇದೆ. 

ಬಯಲು ಶೌಚದಿಂದ ಪರಿಸರದ ಮೇಲಾಗುವ ಹಾನಿ, ರೋಗಾಣುಗಳು ಹರಡುವ ರೀತಿಯ ಬಗ್ಗೆ ಜನರಿಗೆ ಮುಂಚಿಗಿಂತ ಹೆಚ್ಚು ತಿಳುವಳಿಕೆ ಈಗಿದೆ ಎನ್ನುವುದು ಹೌದಾದರೂ ಶೌಚಾಲಯವನ್ನು ಬಳಸದಿರಲು ಪ್ರಮುಖ ಅಡ್ಡಿಯಾಗಿರುವುದು ನೀರಿನ ಕೊರತೆ. ಸರಕಾರದ ನೆರವಿನಿಂದ ಕಟ್ಟಲ್ಪಟ್ಟ ಶೌಚಾಲಯಗಳಿರುವ ಬಹಳಷ್ಟು ಮನೆಗಳಲ್ಲಿ ನೀರಿನ ಟ್ಯಾಂಕುಗಳಿರುವುದಿಲ್ಲ, ಟ್ಯಾಂಕುಗಳಿದ್ದರೂ ನೀರು ಬರುವುದಿಲ್ಲ, ಖಾಸಗಿಯಾಗಿ ನೀರು ತರಿಸುವಷ್ಟು ಆರ್ಥಿಕ ಚೈತನ್ಯವಿರುವುದಿಲ್ಲ. ಜನರ ಆರ್ಥಿಕ ಸ್ಥಿತಿ ಉತ್ತಮಗೊಂಡರೆ ಸಹಜವಾಗೇ ಬಯಲು ಶೌಚ - ಸರಕಾರ ಶೌಚಾಲಯ ನಿರ್ಮಾಣಕ್ಕೆ ನೆರವು ನೀಡದಿದ್ದರೂ - ತನ್ನಿಂತಾನೇ ಕಡಿಮೆಯಾಗುತ್ತದೆ, ನೀರಿನ ಲಭ್ಯತೆ ಇದ್ದ ಪಕ್ಷದಲ್ಲಿ. ಇಂತಹ ವಿಷಯದ ಬಗ್ಗೆಯೂ ನಮ್ಮ ಪ್ರಧಾನ ಮಂತ್ರಿಯವರು ಸುಳ್ಳಾಡಿದ್ದಾದರೂ ಯಾಕೆ?

image source: http://hindi.catchnews.com

ಡಾ. ಅಶೋಕ್. ಕೆ. ಆರ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment