Feb 14, 2019

ಚೀನಾದ ಏರ್‌ ಫಿಲ್ಟರ್ರೂ ಇಂಡಿಯಾದ ಪ್ರತಿಮೆಗಳೂ…….


ಚೀನಾದ ಏರ್‌ ಫಿಲ್ಟರ್;‌ ಚಿತ್ರಮೂಲ: ಸೌತ್‌ ಚೀನಾ ಪೋಸ್ಟ್.
ಡಾ. ಅಶೋಕ್.‌ ಕೆ. ಆರ್ 
ಮೊನ್ನೆ ಟೀ ಅಂಗಡಿಯ ಬಳಿ ಒಂದಷ್ಟು ಇಂಜಿನಿಯರ್‌ ಹುಡುಗರು ಹರಟುತ್ತಿದ್ದರು.
'ಅಲ್ಲಾ ಗುರು… ಆ ಚೀನಾದ್‌ ನನ್‌ ಮಕ್ಳು ದೊಡ್ ದೊಡ್‌ ಏರ್‌ ಫಿಲ್ಟರ್ರುಗಳನ್ನು ಕಟ್ತಾ ಇದ್ರೆ ಈ ನನ್‌ ಮಕ್ಳು ಅಷ್ಟುದ್ದದ್‌ ಸ್ಟಾಚ್ಯೂ ಕಟ್ಕಂಡ್‌ ಕುಂತವ್ರಲ್ಲ….ʼ
'ಕಾಗೆ ಹಿಕ್ಕೆ ಹಾಕೋಕೆʼ
ನಗು…
'ಹಂಗೂ ಕಟ್ಲೇ ಬೇಕೂಂತಿದ್ರೆ ಕರ್ನಾಟಕದಲ್ಲೇ ಕಟ್ಬೋದಿತ್ತಪ್ಪ….. ಗುಜರಾತ್ಗೇ ಮಾಡ್ಬೇಕಿತ್ತಾ….. ಇಲ್ಲೀನೋರೇನು ವೋಟ್‌ ಹಾಕಿರ್ನಿಲ್ವ…..ʼ
'ಎಲ್ಲಾದ್ರೂ ಸರೀನೇ…ಯಾಕ್‌ ಕಟ್ಬೇಕು….ʼ
ಸ್ಟ್ಯಾಚು ಆಫ್‌ ಯೂನಿಟಿ; 
ಚಿತ್ರಮೂಲ: ಫೈನ್ಯಾನ್ಶಿಯಲ್‌  
ಹೌದಲ್ಲ ನಮ್ಮಲ್ಲೇನು ಮಾಲಿನ್ಯಕ್ಕೆ ಕೊರತೆಯಿದೆಯೇ? ಇಲ್ಲವಲ್ಲ. ದೆಹಲಿ, ಬೆಂಗಳೂರು, ಕೊಲ್ಕೊತ್ತಾ, ಚೆನ್ನೈ, ಮುಂಬೈಯಂತಹ ಪ್ರದೇಶಗಳಲ್ಲಿ ನಮ್ಮೆಲ್ಲರ ಕೊಡುಗೆಯಾಗಿ ಅಪಾರ ಪ್ರಮಾಣದ ಗಾಳಿ ಮಲಿನಗೊಂಡಿದೆ. ಈಗಾಗಲೇ ಅನೇಕರು ಮನೆಗಳಲ್ಲಿ ಏರ್‌ ಫಿಲ್ಟರ್ರುಗಳನ್ನು ಬಳಸಲಾರಂಭಿಸುತ್ತಿದ್ದಾರೆ. ಮನೆಯಿಂದ ಹೊರಬಂದಾಗ, ರಸ್ತೆಯಲ್ಲಡ್ಡಾಡುವಾಗ ಕೂಡ ಏರ್‌ ಫಿಲ್ಟರ್ರುಗಳ ಅವಶ್ಯಕತೆ ಇದ್ದೇ ಇದೆಯಲ್ಲ. ಸಾರ್ವಜನಿಕ ಏರ್‌ ಫಿಲ್ಟರ್ರುಗಳನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸುವುದು ಅನಿವಾರ್ಯವಾಗುತ್ತಿರುವ ದಿನಗಳಲ್ಲೂ ನಮ್ಮಲ್ಲೇಕೆ ಇನ್ನೂ ವಿಶ್ವದ ದೊಡ್ಡ ಪ್ರತಿಮೆ, ರಾಮನ ದೊಡ್ಡ ಪ್ರತಿಮೆ, ಕಾವೇರಿ ಮಾತೆಯ ದೊಡ್ಡ ಪ್ರತಿಮೆಯ ಬಗ್ಗೆಯೇ ತಲೆಕೆಡಿಸಿಕೊಳ್ಳಲಾಗುತ್ತಿದೆ? ಸಾರ್ವಜನಿಕ ಏರ್‌ ಫಿಲ್ಟರ್ರುಗಳ ಪ್ರಾಯೋಗಿಕ ಬಳಕೆ ನಮ್ಮದೇ ಬೆಂಗಳೂರಿನ ಕಬ್ಬನ್‌ ಪಾರ್ಕಿನಲ್ಲಿ ನಡೆಯುತ್ತಿದೆ, ಅದರ ಗಾತ್ರ ಚೀನಾದ ನೂರು ಮೀಟರ್‌ ಎತ್ತರದ ಏರ್‌ ಫಿಲ್ಟರ್ಗೆ ಹೋಲಿಸಿದರೆ ತುಂಬಾ ತುಂಬಾ ಸಣ್ಣದು. ಪೂರ್ತಿ ಗಾಳಿ ಗಬ್ಬೆದ್ದು ಹೋಗಲಿ ಎಂದು ಕಾಯುತ್ತಿದ್ದೇವಾ? ಅಥವಾ ನಮಗೆ ಪ್ರತಿಮೆಗಳೇ ಮುಖ್ಯವಾ?
ಕಬ್ಬನ್‌ ಪಾರ್ಕಿನಲ್ಲಿರುವ ಏರ್‌ ಫಿಲ್ಟರ್;‌
ಚಿತ್ರಮೂಲ: ವಿಜಯಕರ್ನಾಟಕ.

ಪ್ರತಿಮೆಗಳೇ ನಮಗೆ ಪ್ರಮುಖವಾದ ಸಂಗತಿಯಾ ಎಂಬ ಪ್ರಶ್ನೆಗೆ ಹೌದು ಎನ್ನುವುದೇ ನಿಖರವಾದ ಉತ್ತರ! ಇದಕ್ಕೆ ರಾಜಕಾರಣಿಗಳನ್ನೋ, ಅಧಿಕಾರಸ್ಥರನ್ನೋ ದೂರಿ ಪ್ರಯೋಜನವಿಲ್ಲ. ಸುಮ್ಮನೆ ನಮ್ಮ ನಮ್ಮ ಊರುಗಳ ಹತ್ತಿರವಿರುವ ಹಳ್ಳಿಗಳಿಗೆ ಭೇಟಿ ಕೊಟ್ಟರೂ ನಮ್ಮ ಸಮಾಜ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ ಎನ್ನುವುದರ ಅರಿವಾಗುತ್ತದೆ. ಊರಿಗೊಂದು ಸುಮಾರಾಗಾದರೂ ಸಮತಟ್ಟಾದ ರಸ್ತೆಯಿಲ್ಲದಿದ್ದರೂ, ಊರಿನಲ್ಲಿರುವ ಶಾಲೆ ಆಸ್ಪತ್ರೆ ನೆಟ್ಟಗಿಲ್ಲದೇ ಹೋದರೂ ಕುಡಿಯುವ ನೀರಿಗೆ ಅಪಾರ ಸಮಸ್ಯೆಯಿದ್ದರೂ ದೇವಸ್ಥಾನದ ಪುನರೋತ್ಥಾನ ಕ್ರಿಯೆ ಚಾಲ್ತಿಯಲ್ಲಿರುತ್ತದೆ, ಹೊಸ ದೇವಸ್ಥಾನವಿದ್ದರೆ ಅದರ ಸುತ್ತ ಅಂಗಳ ಕಟ್ಟುವ ಕೆಲಸ, ಊರ ಬಾಗಿಲಲ್ಲೊಂದು ಊರಿನೆಸರಿನ ಬೋರ್ಡು ಇಲ್ಲದೇ ಹೋದರೂ ದೇವಸ್ಥಾನವೊಂದಿಲ್ಲಿದೆ ಎನ್ನುವುದನ್ನು ಸೂಚಿಸುವ ಸಲುವಾಗಿ ಒಂದು ಬೃಹತ್‌ ಕಮಾನು ಕಟ್ಟುವ ಕೆಲಸ ಚಾಲ್ತಿಯಲ್ಲಿರುತ್ತದೆ. ಇನ್ನು ಸಾಬ್ರು ಹೆಚ್ಚಿರುವ ಊರುಗಳಲ್ಲಿ ಮಸೀದಿಯ ಕೆಲಸ ನಡೆಯುತ್ತಿರುತ್ತದೆ. ದೇವಾಲಯಗಳ ಹೆಸರಿನಲ್ಲಿ ದುಡ್ಡೆತ್ತುವುದು ಸುಲಭದ ಕೆಲಸ ಎನ್ನುವುದು ಊರುಗಳಲ್ಲಿರುವ ಮುಖಂಡರಿಗೆ ಗೊತ್ತೇ ಇರುವ ಸಂಗತಿ. ಯಾವ ಕೆಲಸವನ್ನೂ ಮಾಡಿಸದ ಸ್ಥಳೀಯ ಎಮ್ಮೆಲ್ಲೆಗಳೂ ವಿರೋಧ ಪಕ್ಷದ ನಾಯಕರೂ ಸಹಿತ ಈ ಪುನರೋತ್ಥಾನ ಕೆಲಸಕ್ಕೆ ಅಪಾರ ಹಣವನ್ನು ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಚಿಕ್ಕ ಚಿಕ್ಕ ಹಳ್ಳಿಗಳ ದೇವಸ್ಥಾನಗಳ ಪುನರೋತ್ಥಾನ ಕೆಲಸವೂ ಕೋಟಿ ಕೋಟಿ ಲೆಕ್ಕದ ವ್ಯವಹಾರ. ಬೀಳುವಂತಹ ದೇವಾಲಯಗಳನ್ನು ರಿಪೇರಿ ಮಾಡಿಸುವ ಕೆಲಸವಾದರೆ ಸೈ, ಹಳೆಯ ದೇವಸ್ಥಾನದ ಸಂಸ್ಕೃತಿಯನ್ನೇ ನಾಶ ಪಡಿಸುವಂತೆ ಹೊಸ ದೇವಾಲಯಗಳನ್ನು ಕಟ್ಟುವುದ್ಯಾಕೋ?

ಜನರ ಈ ಪ್ರತಿಮಾ ವ್ಯಾಮೋಹವೇ ರಾಜಕಾರಣಿಗಳಲ್ಲಿ ಪ್ರತಿಫಲಿತವಾಗುವುದರಲ್ಲಿ ಅಚ್ಚರಿಯೇನಿದೆ? ಆ ರಾಜಕಾರಣಿಗಳೂ ಈ ಸಮಾಜದ್ದೇ ಭಾಗವಲ್ಲವೇ? ಗಾಂಧಿ ಅಂಬೇಡ್ಕರ್ರು ವಿಶ್ವೇಶ್ವರಯ್ಯ ಬಸವಣ್ಣ ವಿವೇಕಾನಂದ ರಾಜ್‌ ಕುಮಾರ್…….‌ ಪ್ರತಿಮೆಗಳ ನಿರ್ಮಾಣಕ್ಕೆ ಬೇಕಿರುವ ಉತ್ತಮಾತಿ ಉತ್ತಮರಿಗೆ ನಮ್ಮಲ್ಲೇನೂ ಕೊರತೆಯಿಲ್ಲವಲ್ಲ. ಬಹುಶಃ ಆ ವ್ಯಕ್ತಿಗಳೇ ಅವರ ಇಷ್ಟೊಂದು ಪ್ರತಿಮೆಗಳ ನಿರ್ಮಾಣಕ್ಕೆ ಅಸಮ್ಮತಿ ಸೂಚಿಸುತ್ತಿದ್ದರೋ ಏನೋ. ಇವೆಲ್ಲಕ್ಕೂ ಹಿರಿದೆಂಬಂತೆ ತೋರಿಸಿಕೊಳ್ಳುವಂತೆ ಸ್ಟ್ಯಾಚು ಆಫ್‌ ಯೂನಿಟಿ ಹೆಸರಿನಲ್ಲಿ ಪ್ರಪಂಚದ ಅತಿ ದೊಡ್ಡ ಪ್ರತಿಮೆಯೆಂಬ ಖ್ಯಾತಿ ಪಡೆದುಕೊಂಡ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಪ್ರತಿಮೆ ನಿರ್ಮಾಣಗೊಂಡಿದೆ. ಮೂರು ಸಾವಿರ ಕೋಟಿಯಷ್ಟು ಹಣವನ್ನು ವ್ಯಯಿಸಿ ಇಂತಹ ಪ್ರತಿಮೆಯನ್ನು ಕಟ್ಟುವ ಅವಶ್ಯಕತೆ ಎಷ್ಟಿತ್ತು ಎನ್ನುವ ಪ್ರಶ್ನೆಗೆ ದೇಶಪ್ರೇಮ, ವಲ್ಲಭ ಭಾಯಿ ಪಟೇಲರ ಸಾಧನೆಗಳ ಪಟ್ಟಿಯನ್ನು ನೀಡಿದ ನಂತರ….. ಖರ್ಚಾಗಿರೋ ದುಡ್ಡು ಟಿಕೇಟಿನ ರೂಪದಲ್ಲಿ ಪ್ರವಾಸಿಗರಿಂದ ವಸೂಲಾಗಿಬಿಡುತ್ತದೆ ಎನ್ನುವ ಸಮಾಧಾನಕರ ಉತ್ತರ ನೀಡಲಾಗುತ್ತದೆ. ಇತ್ತೀಚಿನ ವರದಿಗಳ ಪ್ರಕಾರ ನವೆಂಬರ್‌ ೨೦೧೮ರಿಂದ ಜನವರಿ ೨೦೧೯ರವರೆಗೆ ಸ್ಟ್ಯಾಚು ಆಫ್‌ ಯೂನಿಟಿಗೆ ಭೇಟಿ ನೀಡಿದ ಪ್ರವಾಸಿಗರಿಂದ ಸಂಗ್ರಹವಾದ ಮೊತ್ತ ೧೯.೪೭ ಕೋಟಿ. ಖಂಡಿತ ಇದು ಸಣ್ಣ ಮೊತ್ತವೇನಲ್ಲ. ಮೂರು ತಿಂಗಳಿಗೆ ೨೦ ಕೋಟಿಯೆಂದರೆ ವರ್ಷಕ್ಕೆ ೧೨೦ ಕೋಟಿ. ಇದು ಸಂಗ್ರಹವಾದ ಮೊತ್ತವೇ ಹೊರತು ಲಾಭದ ಮೊತ್ತವಲ್ಲ. ಸಂಗ್ರಹವಾದ ಮೊತ್ತವನ್ನೇ ಲೆಕ್ಕಕ್ಕೆ ತೆಗೆದುಕೊಂಡರೂ ಮೂರು ಸಾವಿರ ಕೋಟಿ ಸಂಗ್ರಹಗೊಳ್ಳುವುದಕ್ಕೆ ಕನಿಷ್ಠ ಇಪ್ಪತ್ತು ವರುಷಗಳಾದರೂ ಬೇಕಿದೆಯಲ್ಲವೇ?

ಕಬ್ಬನ್‌ ಪಾರ್ಕಿನಲ್ಲಿರುವ ಏರ್‌ ಫಿಲ್ಟರ್;‌ 
ಚಿತ್ರಮೂಲ: ವಿಜಯ ಕರ್ನಾಟಕ

ಇತ್ತೀಚೆಗೆ ಕೋರ್ಟು ತೀರ್ಪೊಂದು ತನ್ನ ಆಡಳಿತಾವಧಿಯಲ್ಲಿ ಕಟ್ಟಿಸಿದ ತನ್ನದೇ ಪ್ರತಿಮೆಗಳು ಮತ್ತು ಆನೆಗಳ ಪ್ರತಿಮೆಗಳ ಖರ್ಚನ್ನು ವೈಯಕ್ತಿಕವಾಗಿ ತುಂಬಿಕೊಡಬೇಕೆಂದು ಮಾಯಾವತಿಯವರಿಗೆ ಆದೇಶಿಸಲಾಗಿದೆ. ರಾಜಕೀಯ ಕಾರಣಗಳಿಗಾಗಿಯೇ ಸ್ಟ್ಯಾಚು ಆಫ್‌ ಯೂನಿಟಿಯನ್ನು ಕಟ್ಟಿಸಿದ ಗುಜರಾತ್‌ ಮತ್ತು ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಗಳಿಗೂ ಈ ಆದೇಶ ಅನ್ವಯಿಸುವಂತಾಗಬೇಕಲ್ಲವೇ? ಊರಿಗೊಂದೊಂದು ಪ್ರತಿಮೆ ಕಟ್ಟಿಸುವವರಿಗೂ ಈ ಆದೇಶ ಅನ್ವಯಿಸುವುದು ನ್ಯಾಯವೇ ಅಲ್ಲವೇ? 


No comments:

Post a Comment