Dec 16, 2018

ಹನಿ....

ಪಮ್ಮೀ ಫೀನಿಕ್ಸ್
ಮುಂಗಾರು ಮೆಲ್ಲ ಮೆಲ್ಲನೇ ಆವರಿಸುತ್ತಾ ಇಳೆಯನೆಲ್ಲಾ ಆವರಿಸತೊಡಗಿದಾಗ ಮಸ್ತಿಷ್ಕದಲಿ ಘನೀಭವಿಸಿದ ನೆನಪುಗಳು ನಿಧಾನವಾಗಿ ಕರಗುತ್ತಾ ಹನಿಹನಿ ಧಾರೆಯಾಗಿ ಮೈಮನದ ತುಂಬಾ ಆವರಿಸಿಕೊಳ್ಳುತ್ತದೆ.....

ನಿನ್ನಂತೆಯೇ ಈ ಮಳೆಯೂ ಸುರಿದರೆ ಇಡಿಯಾಗಿ ಕವಿದುಕೊಳ್ಳುವುದು. ಹೆಪ್ಪುಗಟ್ಟಿದ ವಿಶಾದದ ತೆರೆ ಹರಿದು ಕಚಗುಳಿಯಿಡುತ್ತಾ ನೀ ಎದೆಯಂಗಳಕ್ಕೆ ಹೆಜ್ಜೆಯಿಡುವಾಗ ನಿನಗೆ ಸ್ವಾಗತಿಸಲೆಂದೇ ಉದುರುವ ಜಾಜಿಮೊಲ್ಲೆ ತನ್ನ ಘಮದೊಂದಿಗೆ ನಿನ್ನಾಗಮನದ ಸೂಚನೆ ತಲುಪಿಸುವುದು

ಭೂರಮೆಯ ಸ್ಪರ್ಶಿಸುವ ಮುನ್ನ ಕರಿಮುಗಿಲು ತಂಗಾಳಿಯ ರಾಯಭಾರಿಯಾಗಿ ಕಳಿಸುವಂತೆ......

ಈ ಮಳೆಗೂ ನಿನ್ನೊಲವಿಗೂ ಬಿಡದ ನಂಟು ವರ್ಷವಿಡೀ ಯಾವುಯಾವುದೋ ಧಾವಂತಗಳಲಿ ಮೂಲೆ ಸೇರುವ ನಿನ್ನ ಸಾಂಗತ್ಯದ ನೆನಪುಗಳು, ವರ್ಷದ ಮುಸಲಧಾರೆಯಲಿ ಧೋ ಎಂದು ಸುರಿಯತೊಡಗುವುದು, ಪ್ರಣಯದ ಲಹರಿ ಅನಾವರಣಗೊಳ್ಳುವವು ಆದಕ್ಕೆಂದೆನೇನೋ ನಂಗೆ ಈ ಮಳೆಯಲಿ ಬೇಕೆಂದೇ ನೆನೆಯುವ ನೆನೆದು ಬೆಚ್ಚಗಾಗುವ ಹುಚ್ಚು ಸೆಳೆತ... 

ಗೀರು ಗಾಯಗಳು ಅನುರಾಗದ ಪಳೆಯುಳಿಕೆಗಳು ಜಡ್ಡುಗಟ್ಟಿದ ಮನಸ್ಸಿಗೆ ಹೊಸ ಚೈತನ್ಯ ನೀಡಿ ಮತ್ತೊಂದು ಪರ್ವಕಾಲಕ್ಕೆ ನನ್ನ ಹದಗೊಳಿಸುವುದು.,,

ಲೋಕದೆದುರು ಶುದ್ಧ ಗಾಂಭೀರ್ಯದ ಮುಸುಕು ಹೊದ್ದ ನಿನ್ನ ಕಂಗಳಲ್ಲಿ ನಾಚಿಸುವ ಮೀಸೆಯಡಿಯಲಿನ ನಗುವಲಿ ರೋಮಾಂಚನಗೊಳಿಸುವ ತುಂಟತನ ಇರುವ ಇನಿತೂ ಸುಳಿವೂ ನನಗಲ್ಲದೇ ಇನ್ನಾರಿಗಿದೆ ದೊರೆ ???

ನಿನ್ನೊಲವಿನ ಅಲೆಗಳಲ್ಲಿ ತೇಲುವ ಬಯಕೆಯಿಂದ ಲಜ್ಜೆಯ ಗೆಜ್ಜೆಯನ್ನೆಂದೋ ತೆಗೆದಿಟ್ಟುಬಿಟ್ಟಿರುವೆ, ಸಂಕೋಚದ ಅವಕುಂಠನ ಸರಿಸಿ ನಿಂದಿರುವೆ.. ಮೋಹದ ಮಧುಬಟ್ಟಲ ಬೊಗಸೆಯಲ್ಲಿಡಿದು ಕಾದಿರುವೆ..,

ಹುಣ್ಣಿಮೆಯ ರಾತ್ರಿ ಕರಾವಳಿಯ ಕಡಲ ತೀರದಲಿ ಬಂದು ಸಂಧಿಸುತ್ತೇನೆಂದು ನೀನಿತ್ತ ಭಾಷೆಯ ತಪ್ಪದೇ ನೆರವೇರಿಸುವೆಯಂಬ ತುಂಬು ಹಂಬಲದಲಿ ಮೈಮರೆತು ಭೋರ್ಗರೆವ ಅಲೆಗಳಲ್ಲಿ ತೇಲಿ ಕಾಣದ ತೀರಕ್ಕೆ ಮರಳಿ ಬಾರದಂತೆ ಪಯಣಿಸುವ ಮುನ್ನ ಒಮ್ಮೆ ಬಂದುಬಿಡು,

ನಿನ್ನೆದೆಯ ಹರಹಿನಲಿ ಮೊಗವಿರಿಸಿ ಪಿಸುಮಾತಲಿ ಎಲ್ಲಾ ವಿರಹಗಳ ಅಳಿಸೆಂಬ ಆರ್ದತೆ ಚಡಪಡಿಕೆಗೆ ನಿನ್ನ ಜೇನುದನಿಯ ಸಾಂತ್ವನದ ಕನವರಿಕೆ ಮರುಕಳಿಸುತಿದೆ... ಬಾನಂಗಳದಲ್ಲಿ ಆಸೆಯ ಲಕ್ಷ ನಕ್ಷತ್ರ ದೀಪ ಬೆಳಗಿದ್ದೇನೆ

ಚಂದ್ರ ಬಯಕೆಯ ಲಾಟೀನಾಗಿದ್ದಾನೆ, ನಿನ್ನ ಮಡಿಲಿಗೊರಗುವ ಗಳಿಗೆಗಳಿಗಾಗಿ ಯುಗಯುಗಗಳಾದರೂ ಏಳೇಳು ಜನ್ಮಗಳವರೆಗೂ ಹೀಗೇ ಕಾಯುತ್ತಿರುತ್ತೇನೆ......

No comments:

Post a Comment