Jul 15, 2018

ಪಕ್ಷಿ ಪ್ರಪಂಚ: ನೀಲಿ ಮಿಂಚುಳ್ಳಿ.

ಚಿತ್ರ ೧: ಹಾರಲು ಸಿದ್ಧವಾದ ನೀಲಿ ಮಿಂಚುಳ್ಳಿ. 
ಡಾ. ಅಶೋಕ್. ಕೆ. ಆರ್ 
ನೀರಿನ ಮೂಲಗಳ ಬಳಿಯಲ್ಲಿನ ಗಿಡಗಳ ಮೇಲೆ, ಕೊಂಬೆಗಳ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ನೀಲಿ ಬಣ್ಣದ ಪಕ್ಷಿಯನ್ನು ನೀವು ಕಂಡಿರುವಿರಾದರೆ ಅದು ನೀಲಿ ಮಿಂಚುಳ್ಳಿಯೇ ಸೈ! 

ಆಂಗ್ಲ ಹೆಸರು: Common kingfisher (ಕಾಮನ್ ಕಿಂಗ್ ಫಿಷರ್), small blue kingfisher (ಸ್ಮಾಲ್ ಬ್ಲೂ ಕಿಂಗ್ ಫಿಷರ್), river kingfisher (ರಿವರ್ ಕಿಂಗ್ ಫಿಷರ್) 

ವೈಜ್ಞಾನಿಕ ಹೆಸರು: Alcedo Atthis (ಅಲ್ಕೆಡೋ ಅಥಿಸ್) 

ಪುಟ್ಟ ಕಾಲುಗಳು, ಚಿಕ್ಕ ಬಾಲ, ಡುಮ್ಮ ದೇಹ, ಉದ್ದ ಕೊಕ್ಕಿನ ಪಕ್ಷಿಯಿದು. ನಮ್ಮಲ್ಲಿ ಕಾಣಸಿಗುವ ಮಿಂಚುಳ್ಳಿಗಳಲ್ಲಿ ಇದೇ ಪುಟ್ಟದು. ಹಾಗಾಗಿ ಕಿರು ಮಿಂಚುಳ್ಳಿಯೆಂದೂ ಕರೆಯುತ್ತಾರೆ. ಬೆನ್ನು, ಬಾಲದ ಬಣ್ಣವೆಲ್ಲಾ ಪಳ ಪಳ ಹೊಳೆಯುವ ಕಡು ನೀಲಿ. ಎದೆಯ ಭಾಗ ಹೊಂಬಣ್ಣವನ್ನೊಂದಿದೆ. ನೆತ್ತಿ ನೀಲಿ ಬಣ್ಣದ್ದು, ಕಣ್ಣಿನ ಸುತ್ತ ಹೊಂಬಣ್ಣದ ಪಟ್ಟಿಯಿದೆ, ಇದರ ಹಿಂದೆ ಬಿಳಿ ಬಣ್ಣದ ಪಟ್ಟಿಯಿದೆ. ಇವುಗಳ ಕೆಳಗೆ ಮತ್ತೆ ನೀಲಿ ಬಣ್ಣದ ಪಟ್ಟಿಯಿದೆ, ಈ ನೀಲಿ ಬಣ್ಣ ಬೆನ್ನಿನ ಮೇಲೆ ಮುಂದುವರಿಯುತ್ತದೆ. ಕತ್ತಿನ ಭಾಗದಲ್ಲಿ ಕೊಂಚ ಬಿಳಿ ಬಣ್ಣವನ್ನು ಕಾಣಬಹುದು. ಕೊಕ್ಕಿನ ಬಣ್ಣ ಕಪ್ಪು.

ಮತ್ತಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

ಚಿತ್ರ ೨: ಮೀನಿನೊಂದಿಗೆ ನೀಲಿ ಮಿಂಚುಳ್ಳಿ
ಹೆಣ್ಣು ಗಂಡುಗಳೆರಡೂ ಒಂದೇ ರೀತಿಯಾಗಿ ಕಾಣಿಸುತ್ತವೆ.

ಕೆರೆ ನದಿಗಳ ದಡದ ದಂಡೆಯ ಮೆದು ಮಣ್ಣಿನಲ್ಲಿ ಪೊಟರೆ ಕೊರೆದು ಗೂಡು ಕಟ್ಟಿಕೊಳ್ಳುತ್ತವೆ.

ಹೆಚ್ಚಿನಂಶ ಒಂಟಿಯಾಗೇ ಆಹಾರ ಅರಸುವ ನೀಲಿ ಮಿಂಚುಳ್ಳಿಗಳು ಸಂಸಾರ ಹೂಡುವ ಸಮಯದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತವೆ. ಬಹಳಷ್ಟು ಸಮಯ ನೀರಿನೊಳಗಿನ ಮೀನುಗಳ ಚಲನೆಯನ್ನು ಗಮನಿಸುತ್ತಾ ಕುಳಿತುಕೊಂಡೇ ಇರುತ್ತವೆ. ಕತ್ತನ್ನು ಹಿಂದಕ್ಕೆ ಮುಂದಕ್ಕೆ ಬಲಕ್ಕೆ ಎಡಕ್ಕೆ ಕೆಳಕ್ಕೆ ತಿರುಗಿಸುತ್ತಲೇ ಇರುತ್ತವೆ. ಹಿಡಿಯಬಹುದಾದಂತಹ ಪುಟ್ಟ ಮೀನು ನೀರಿನಡಿ ಕಂಡಾಕ್ಷಣ ರೆಕ್ಕೆಗಳನ್ನು ಪಟ ಪಟ ಬಡಿಯುತ್ತಾ ನೀರಿನ ಮೇಲ್ಮೆಯಲ್ಲಿ ಹಾರುತ್ತಾ ದಡಕ್ಕನೆ ನೀರಿನೊಳಗೆ ಮುಳುಗಿ ಮೀನನ್ನು ಕೊಕ್ಕಿನಲ್ಲಿ ಕಚ್ಚಿಹಿಡಿದು ಮೇಲೆ ಬರುತ್ತದೆ. ಮತ್ತೆ ಕೊಂಬೆಯ ಮೇಲೆ ಕುಳಿತು ಸಾವಾಕಾಶವಾಗಿ ಮೀನು ಸಾಯುವವರೆಗೂ ಅದನ್ನು ಹಿಂದೆ ಮುಂದೆ ತಿರುಗಿಸಿ ಕೊಂಬೆಗೆ ಬಡಿಯುತ್ತದೆ. ಸತ್ತದ್ದು ಖಚಿತವಾದ ನಂತರ ನುಂಗಿಕೊಳ್ಳುತ್ತದೆ.

ಚಿಕ್ಕ ಪುಟ್ಟ ಏಡಿಗಳನ್ನೂ ತಿನ್ನುತ್ತದಾದರೂ ಮೀನೀ ಇದರ ಪ್ರಮುಖ ಆಹಾರ. 

ಮುಂದಿನ ಬಾರಿ ನದಿ ತೀರಕ್ಕೆ ಹೋದಾಗ, ಕೆರೆಯೇರಿಗೆ ಹೋದಾಗ ಮಿಂಚುಳ್ಳಿಗಳಲ್ಲೆಲ್ಲ ಉಜ್ವಲ ಬಣ್ಣಗಳಿಂದ ಹೊಳೆಯುವ ನೀಲಿ ಮಿಂಚುಳ್ಳಿಯನ್ನು ಗಮನಿಸುವುದನ್ನು ಮರೆಯಬೇಡಿ. 

ಚಿತ್ರನೆನಪು:

ಚಿತ್ರ ೧: ಮಂಡ್ಯದ ಸೂಳೆಕೆರೆಯಲ್ಲಿ ತೆಗೆದ ಪಟವಿದು. ಕೆರೆಯಲ್ಲಿ ನೀರು ಕಡಿಮೆಯಿದ್ದ ಸಮಯ. ಕೆಸರಿನಲ್ಯಾರೋ ಮರದ ಒಣ ಕೊಂಬೆಯನ್ನುಉ ಸಿಕ್ಕಿಸಿದ್ದರು ಅಥವಾ ಬಹುಶಃ ಅದೇ ಸಿಕ್ಕಿಕೊಂಡಿತ್ತೇನೋ ಗೊತ್ತಿಲ್ಲ. ಕೆಸರಿನ ಸುತ್ತಲಿದ್ದ ಚೂರು ಪಾರು ನೀರಿನಲ್ಲಿದ್ದ ಮೀನುಗಳ ಹುಡುಕಾಟದಲ್ಲಿತ್ತು ಈ ನೀಲಿ ಮಿಂಚುಳ್ಳಿ. ಹಿಂದ್ಕೆ ಮುಂದ್ಕೆ ಹಾರಾಡಿಕೊಂಡು ಬಂದು ಇದೇ ಜಾಗದಲ್ಲಿ ಕುಳಿತುಕೊಳ್ಳುತ್ತಿತ್ತು. ನಿಧಾನಕ್ಕೆ ಹತ್ತಿರವಾದೆ. ಇನ್ನೇನು ಹಾರಲು ಸಿದ್ಧವಾಗುತ್ತಿದ್ದ ನೀಲಿ ಮಿಂಚುಳ್ಳಿ ಕ್ಯಾಮೆರಾದಲ್ಲಿ ಸೆರೆಯಾಯಿತು. 

ಚಿತ್ರ ೨: ಮಂಡ್ಯದ ಸೂಳೆಕೆರೆಯ ದಂಡೆಯಲ್ಲಿ ಕುಳಿತು ತೆಗೆದ ಪಟವಿದು. ಸರಿಸುಮಾರು ಅರ್ಧ ತಾಸು ಕಾದು ಕುಳಿತಿದ್ದೆ, ಫೋಟೋಗಾಗಿ; ಈ ಮಿಂಚುಳ್ಳಿಯೂ ಕಾದು ಕುಳಿತಿತ್ತು, ಮೀನಿಗಾಗಿ! ಕೊನೆಗೂ ಒಂದು ಮೀನನ್ನು ಹಿಡಿದು ತಂದು ‘ಹೆಂಗಿದೆ ಬೇಟೆ?’ ಅಂತ ಕೇಳುವಂತೆ ನನ್ನೆಡೆಗೆ ನೋಡಿದಾಗ ಕ್ಲಿಕ್ಕಿಸಿದ ಪಟವಿದು. ರೆಕ್ಕೆಯ ಕೊಂಚ ಭಾಗ ತೆರೆದುಕೊಂಡಿರುವುದು, ದೇಹದ ಮೇಲೆ ನೀರಿನ ಹನಿಗಳಿರುವುದು ಚಿತ್ರದ ಅಂದವನ್ನು ಹೆಚ್ಚಿಸಿದೆ ಅಲ್ಲವೇ? 

No comments:

Post a Comment