Jun 10, 2018

ಪಕ್ಷಿ ಪ್ರಪಂಚ: ಬಣ್ಣದ ಕೊಕ್ಕರೆ.

ಚಿತ್ರ ೧: ಮಡಿವಾಳದಲ್ಲಿ ಸಿಕ್ಕ ಬಣ್ಣದ ಕೊಕ್ಕರೆ
ಡಾ. ಅಶೋಕ್. ಕೆ. ಆರ್
ಮಂಡ್ಯ ಜಿಲ್ಲೆಯಲ್ಲಿರುವ ಕೊಕ್ಕರೆ ಬೆಳ್ಳೂರಿಗೆ ಆ ಹೆಸರು ಬರಲು ಈ ಬಣ್ಣದ ಕೊಕ್ಕರೆಯೇ ಕಾರಣ. ಚಳಿಯ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬರುವ ಈ ಪಕ್ಷಿಗಳು ಸಂತಾನವನ್ನು ಬೆಳೆಸಿಕೊಂಡು ಇಲ್ಲಿ ಬೇಸಿಗೆ ಶುರುವಾಗುವ ನಂತರದಲ್ಲಿ ಮರಳಿಹೋಗುತ್ತವೆ. ಕೆಲವು ಕೊಕ್ಕರೆಗಳು ಇಲ್ಲಿನ ವಾತಾವರಣಕ್ಕೆ  ಪೂರ್ಣವಾಗಿ ಹೊಂದಿಕೊಂಡು ಇಲ್ಲೇ ಶಾಶ್ವತವಾಗಿ ನೆಲೆಸುವುದೂ ಇದೆ.

ಆಂಗ್ಲ ಹೆಸರು: Painted Stork (ಪೇಂಟೆಡ್ ಸ್ಟಾರ್ಕ್)
ವೈಜ್ಞಾನಿಕ ಹೆಸರು: Mycteria Leucocephala (ಮೈಕ್ಟೀರಿಯಾ ಲ್ಯೂಕೊಕೆಫಾಲ)

ಬಹುದೊಡ್ಡ ಪಕ್ಷಿಗಳಿವು. ಉದ್ದನೆಯ ಕತ್ತು, ಗುಲಾಬಿ ಬಣ್ಣದ ಉದ್ದನೆಯ ಕಾಲುಗಳು, ಅಗಲವಾದ ರೆಕ್ಕೆಗಳಿರುವ ಪಕ್ಷಿ ಕೊಕ್ಕರೆ. ಮೀನಿಡಿಯಲು ಅನುವಾಗುವಂತೆ ಉದ್ದನೆಯ ಕೊಕ್ಕಿದೆ. ಕೊಕ್ಕಿನ ತುದಿಯು ಕೊಂಚ ಬಾಗಿದೆ. ಕೊಕ್ಕು ಹಳದಿ ಬಣ್ಣದಾಗಿದ್ದರೆ ತಲೆಯ ಭಾಗ ಕಿತ್ತಳೆಯ ಬಣ್ಣದ್ದಾಗಿದೆ. ಕತ್ತಿನ ಭಾಗ ಬಿಳಿಯಿಂದ ಕೆಂಚು. ರೆಕ್ಕೆಯ ಮೇಲ್ಬಾಗದಲ್ಲಿ ಕಪ್ಪು ಬಿಳುಪಿನ ಪಟ್ಟಿಗಳನ್ನು ಕಾಣಬಹುದು. ರೆಕ್ಕೆಯ ಕೆಳಭಾಗದಲ್ಲಿ 'ಬಣ್ಣದ' ಕೊಕ್ಕರೆ ಎಂಬ ಹೆಸರಿಗೆ ಕಾರಣವಾದ ಗುಲಾಬಿ ವರ್ಣವಿದೆ. ಎದೆಯ ಭಾಗದಲ್ಲಿ ಬಿಳಿಯ ಮಧ್ಯೆ ಕೊಂಚ ಕಪ್ಪು ಪಟ್ಟಿಯಿದೆ.

ದೊಡ್ಡ ಕಡ್ಡಿಗಳನ್ನು ಬಳಸಿಕೊಂಡು ಒರಟೊರಟಾದ  ನಿರ್ಮಿಸಿಕೊಳ್ಳುತ್ತವೆ. ನದಿ/ ಕೆರೆಗೆ ಸಮೀಪದಲ್ಲಿನ ಊರುಗಳಲ್ಲಿನ ದೊಡ್ಡ ಮರಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಕೆರೆಯ ನಡುವಿನ ದ್ವೀಪಗಳೂ  ವಾಸಸ್ಥಾನವಾಗಿದೆ. ಹೆಜ್ಜಾರ್ಲೆ ಅಥವಾ ಜೋಳಿಗೆ ಕೊಕ್ಕಡ ಗೂಡುಗಳ ಜೊತೆಗೆ ಗೂಡು ಕಟ್ಟಿಕೊಂಡು ಸಹಬಾಳ್ವೆ ನಡೆಸುತ್ತವೆ.

ಚಿತ್ರ ೨: ಮೀನಿನ ಬೇಟೆಯೊಂದಿಗೆ ಬಣ್ಣದ ಕೊಕ್ಕರೆ.
ಇವುಗಳ ಪ್ರಮುಖ ಆಹಾರ ಮೀನು. ಕಪ್ಪೆ, ಏಡಿ, ಹಾವುಗಳನ್ನೂ ಬೇಟೆಯಾಡಬಲ್ಲವು. ಉದ್ದನೆಯ ಕೊಕ್ಕನ್ನು ಅಗಲಿಸಿಕೊಂಡು ನೀರಿನೊಳಗೆ ಮುಳುಗಿಸಿಟ್ಟುಕೊಂಡು ದೀರ್ಘ ಸಮಯದವರೆಗೆ ಕಾಯಬಲ್ಲ ಚಾಕಚಕ್ಯತೆ ಇವಕ್ಕಿದೆ. ಕೆಲವೊಮ್ಮೆ ಒಂದೇ ಸ್ಥಳದಲ್ಲಿ ಅಲುಗಾಡದೆ ನಿಲ್ಲುತ್ತವೆ, ಇನ್ನು ಕೆಲವೊಮ್ಮೆ ನಿಧಾನಗತಿಯಲ್ಲಿ ಚಲಿಸುತ್ತಿರುತ್ತವೆ. ದೀರ್ಘಕಾಲದವರೆಗೆ ಕೊಕ್ಕನ್ನು ನೀರಿನಲ್ಲಿ ಮುಳುಗಿಸಿಡುವುದಕ್ಕೆ ಅನುವಾಗುವಂತೆ ಕೊಕ್ಕು ಮತ್ತು ತಲೆಯ ನಡುವೆ ಇವುಗಳ ಮೂಗಿದೆ. ಅಗಲಿಸಿದ ಕೊಕ್ಕಿನ ನಡುವೆ ಮೀನೊಂದು ಸರಿದಾಗ ಥಟ್ಟಂತ ಹಿಡಿದುಕೊಂಡು ತಲೆ ಮೇಲೆತ್ತಿ ಮೀನನ್ನು ನುಂಗಿಕೊಳ್ಳುತ್ತವೆ.

 ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕಾವೇರಿ ನದಿ ದಂಡೆಯಲ್ಲಿರುವ ರಂಗನತಿಟ್ಟಿಗೆ ಭೇಟಿ ಕೊಟ್ಟಿದ್ದರೆ ಈ ಪಕ್ಷಿಯನ್ನು ನೀವು ಗಮನಿಸಿಯೇ ಇರುತ್ತೀರಿ. ನಿಮ್ಮ ಊರಿನ ಸುತ್ತಮುತ್ತಲಿರುವ ಕೆರೆ ಗದ್ದೆಗಳಲ್ಲೂ ಈ ಪಕ್ಷಿಗಳು ಒಂಟಿಯಾಗಿ ಅಥವಾ ಜೋಡಿಯಾಗಿ ಅಥವಾ ಹೆಚ್ಚಿನ ಸಲ ಗುಂಪಿನಲ್ಲಿ ಕಾಣಿಸಿಕೊಳ್ಳಬಹುದು.

ಚಿತ್ರನೆನಪು: - 
೧) ಬೆಂಗಳೂರಿನ ಮಡಿವಾಳ ಕೆರೆಯಲ್ಲಿ ತೆಗೆದ ಪಟವಿದು. ಈ ಚಿತ್ರ ತೆಗೆಯಲು ವಿಶೇಷ ಪರಿಣಿತಿ - ತಾಳ್ಮೆಯ ಅಗತ್ಯವಿರಲಿಲ್ಲ. ಕೆರೆಯ ಮಧ್ಯದಲ್ಲಿನ ದ್ವೀಪಗಳಲ್ಲಿ ಗೂಡು ಮಾಡಿಕೊಂಡಿದ್ದವು. ನಮ್ಮ ದೋಣಿಯನ್ನು ದ್ವೀಪದತ್ತ ನಡೆಸಿದರೂ ಜನರ ಇರುವಿಕೆಗೆ ಒಗ್ಗಿಹೋಗಿದ್ದ ಪಕ್ಷಿ ಅಲುಗಾಡಲಿಲ್ಲ. ಕೊಕ್ಕು - ತಲೆ - ಕತ್ತಿನ ವಿವರಗಳು ಸ್ಪಷ್ಟವಾಗಿ ಕಾಣಿಸುತ್ತಿರುವ ಕಾರಣಕ್ಕೆ ಈ ಚಿತ್ರ ಇಲ್ಲಿದೆ.

೨) ಮಂಡ್ಯದ ಸೂಳೆಕೆರೆಯಲ್ಲಿ ತೆಗೆದ ಪಟವಿದು. ಬಣ್ಣದ ಕೊಕ್ಕರೆ ಬಹಳಷ್ಟು ತಾಳ್ಮೆಯಿಂದ ಮೀನಿನ ಬೇಟೆಗೆ ಕಾದಿತ್ತು. ಬಣ್ಣದ ಕೊಕ್ಕರೆಯ ಕೊಕ್ಕಿನಲ್ಲೊಂದು ಮೀನಿರುವ ಚಿತ್ರ ಸೆರೆಯಿಡಿಯುವ ಸಲುವಾಗಿ ನಾನೂ ಅದರೊಟ್ಟಿಗೆ ಕಾದಿದ್ದೆ. ಮಾಧ್ಯಮ ಗಾತ್ರದ ಮೀನೊಂದನ್ನು ಹಿಡಿದು ತಲೆ ಮೇಲೆತ್ತಿ ಪೂರ್ತಿಯಾಗಿ ನುಂಗುವ ಮುಂಚೆ ಕ್ಯಾಮೆರಾದೊಳಗೆ ಸೆರೆಯಾದ ಚಿತ್ರವಿದು. ಗುಲಾಬಿ ಬಣ್ಣದ ಕಾಲುಗಳು ಹಾಗೂ ರೆಕ್ಕೆಯ ತುದಿಯನ್ನೂ ಗಮನಿಸಬಹುದು.


3 comments: