Apr 5, 2018

ನೀವಲ್ಲವೇ?

ಪಮ್ಮಿದರಲಗೋಡು (ಪದ್ಮಜಾ ಜೋಯಿಸ್)
ಅಪರಿಚಿತರಾಗಿ ಎದುರಾಗಿದ್ದ ಕ್ಷಣಗಳಲಿ
ಮುಡಿಯಲಿ ಸದಾ ನಗುವ ಅಂಬರಮಲ್ಲಿಗೆ
ಮಾಲೆಗೆ
ಮನಸೋತು ಹೆಸರ ತಿಳಿಯ ಬಯಸಿ
ಹಿಂದೆ-ಹಿಂದೆ ತಿರುಗಿದವರು ನೀವಲ್ಲವೇ ?


ಹತ್ತರ ನಡುವೆಯೂ ಕಳೆದು
ಹೋಗಬಹುದಾದ ಅಂದವಿರದ
ಮೊಗದಲ್ಲಿನ ಆಕರ್ಷಕ ನಗೆಗೆ
ಮರುಳಾಗಿ ಸ್ನೇಹಕ್ಕಾಗಿ ಕಾತರಿಸಿ
ಕೈಚಾಚಿದವರು ನೀವಲ್ಲವೇ... ?

ಸೂಜಿಗಲ್ಲಿನಂತೆ ಸೆಳೆದು
ಮನ-ಮನಗಳ ನಡುವಿನ
ಮೂಕ ಪ್ರೇಮದ ಮೌನ ವೀಣೆಯ
ಮಧುರ ಆಲಾಪನಕ್ಕೆ ನಿಶ್ಯಬ್ಧದಲಿ
ಶೃತಿಯಾದವರು ನೀವಲ್ಲವೇ.....?

ನನ್ನ ಚಿತ್ತವ ಅಪಹರಿಸಿ
ಅರ್ಥರಹಿತಬಿಗುಮಾನ
ತೋರಿ ಅಂತರಾಳದ ಸಾವಿರಾರು
ಅಮರ ಭಾವನೆಗಳ ಅದುಮಿಟ್ಟು
ಸತ್ಯಕ್ಕೆ ದೂರ-ದೂರ ಸರಿದವರು ನೀವಲ್ಲವೇ ?

ನಿಮ್ಮ ಹೃದಯದಲಿ ಹೂವಾಗಿ
ಚಂದದ ನಯನಗಳಲಿ ಮಿಂಚಾಗಿ
ಅರಳಿದ ಅನುರಾಗವನ್ನು
ಗುಪ್ತವಾಗಿರಿಸಿಕೊಂಡೆನೆಂದು
ದೂರಾಗಿ ಹೆಮ್ಮೆ ಪಡದಿರಿ
ನನ್ನ ಹೃನ್ಮನಗಳಲಿ ಅಚ್ಚಳಿಯದ
ಬಿಂಬವಾಗಿಯೆ ಉಳಿದವರು
ನೀವಲ್ಲವೇ?

ನೀವೇ ಅಲ್ಲವೇ ?

1 comment:

  1. ಸೂಪರ್ ಅಕ್ಕಾ..
    ಎಲ್ಲವೂ ನೀವಲ್ಲವೇ ಎಂದು ಹೇಳುತ್ತಾ ಅವರ ಮೇಲೆ ಹಾಕಿದಿರೋ..?
    ಚಂದದ ಭಾವನೆಗಳು ವ್ಯಕ್ತವಾಗಿವೆ.

    ReplyDelete

Related Posts Plugin for WordPress, Blogger...