Nov 17, 2017

ಅಮೃತಯಾನ.

ಚಿತ್ರಕಲಾವಿದೆ, ವಿನ್ಯಾಸಕಿ, ರಂಗನಟಿಯಾಗಿದ್ದ ಅಮೃತಾ ರಕ್ಷಿದಿ ತನ್ನ ಬದುಕಿನ ಅನುಭವಗಳನ್ನು "ಅಮೃತ ಯಾನ" ಎಂಬ ಹೆಸರಿನಲ್ಲಿ ಪುಟಗಳ ಮೇಲಿಳಿಸಿದ್ದಾಳೆ. ಆತ್ಮಕತೆ ಬರೆದಾಯ್ತಲ್ಲ ಇನ್ನೇನು ಕೆಲಸ ಎನ್ನುವಂತೆ ತುಂಬಾ ಚಿಕ್ಕ ವಯಸ್ಸಿಗೇ ಅನಾರೋಗ್ಯದಿಂದ ಅಸುನೀಗಿಬಿಟ್ಟಳು ಅಮೃತಾ. ಅವಳ ಅನುಪಸ್ಥಿತಿಯಲ್ಲಿ ಐದು ಸಂಪುಟಗಳ "ಅಮೃತ ಯಾನ" ಇದೇ ಭಾನುವಾರ (19/11/2017) ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಬೇಸ್ ಮೆಂಟ್ ಗ್ಯಾಲರಿಯಲ್ಲಿ ಬಿಡುಗಡೆಗೊಳ್ಳಲಿದೆ. ಬಿಡುವು ಮಾಡಿಕೊಂಡು ಬನ್ನಿ. 
ಅಮೃತಯಾನದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ. 

ಅಜ್ಜಮನೆ

ಅಣ್ಣಯ್ಯನಿಗೆ ಅಕ್ಟೋಬರ್ ರಜೆ ಪ್ರಾರಂಭವಾಗಿತ್ತು. ಮಳೆಗಾಲ ಕಳೆದು ಬಿಸಿಲು ಬಂದಿತ್ತು. ಈ ನಡುವೆ ಅಪ್ಪ ದೇವಾಲದ ಕೆರೆಯಲ್ಲಿನ ಕೆಲಸವನ್ನು ಬಿಟ್ಟು ಹಾರ್ಲೆಗೆ ಕೆಲಸಕ್ಕೆ ಸೇರಿದ್ದರು. ಒಮ್ಮೆ ಅಜ್ಜಮನೆಗೆ ಹೋಗಿಬರಬೇಕೆಂದು ಅಮ್ಮ ಅಪ್ಪನಲ್ಲಿ ಹೇಳುತ್ತಿದ್ದುದು ಅಣ್ಣಯ್ಯ ಮತ್ತು ಅಮೃತಾರ ಕಿವಿಗೆ ಬದ್ದಿತ್ತು. ರಜೆ ಬಂದ ಕೂಡಲೇ ಅಣ್ಣಯ್ಯ ಮತ್ತು ಅಮೃತಾ “ಅಮ್ಮ ಅಜ್ಜಮನೆಗೋಗದು ಯಾವಾಗ?” ಎಂದು ಗೋಗರೆಯಲಾರಂಭಿಸಿದರು. ಆದರೆ ಅಮ್ಮ “ಅಪ್ಪನ ಕೇಳ್ಬೇಕಷ್ಟೆ” ಎನ್ನುತ್ತಿದ್ದಳು. ಅಜ್ಜಿಯನ್ನು ಬಿಟ್ಟು ಅಮ್ಮನಿಗೆ ತಕ್ಷಣ ಹೊರಡಲಾಗುತ್ತಿರಲಿಲ್ಲ. ಅಮ್ಮ ಇಲ್ಲದಿದ್ದಾಗ ಒಬ್ಬರೇ ಮನೆಕೆಲಸಗಳನ್ನು ಮಾಡಲು ಅಜ್ಜಿಗೆ ಆಗುತ್ತಿರಲಿಲ್ಲ. ಅಪ್ಪ ಯಾವಾಗಲೂ ಹೊರಗಡೆ ದುಡಿಯಲು ಹೋಗುತ್ತಿದ್ದರು. ಹಾಗಾಗಿ ಅಪ್ಪ ಒಪ್ಪಿದ ಮೇಲೆಯೇ ಅವರೆಲ್ಲರೂ ಹೊರಡುವುದು. ಅಣ್ಣಯ್ಯ ಅಪ್ಪ ಮನೆಯಲ್ಲಿಲ್ಲದಾಗ ಅಮ್ಮನೊಂದಿಗೆ ಹಟ ಮಾಡುತ್ತಿದ್ದ. ಆದರೆ ಅಮೃತಾಳಿಗಾಗಲೀ ಅಣ್ಣಯ್ಯನಿಗಾಗಲೀ ಅಪ್ಪನಲ್ಲಿ ಕೇಳಲು ಧೈರ್ಯವಿರಲಿಲ್ಲ.
ಕೊನೆಗೊಂದು ದಿನ ಅಪ್ಪನಿಂದ ಅನುಮತಿ ಸಿಕ್ಕಿತು. ಅಮ್ಮ, ಅಣ್ಣಯ್ಯ, ಅಮೃತಾ ಅಜ್ಜ ಮನೆಗೆ ಹೊರಟರು. ಬೆಳಗಿನಿಂದ ಮಧ್ಯಾಹ್ನವರೆಗೆ ಬಸ್ಸಿನಲ್ಲಿ ಪ್ರಯಾಣ, ಬಳಿಕ ಅಜ್ಜಮನೆ ಬಂತು. ಚೊಕ್ಕಾಡಿ ದಾರಿಯ ‘ಶೇಣಿ’ ಎಂಬ ಜಾಗದಲ್ಲಿ ಬಸ್ ನಿಂತಿತು. ಅಲ್ಲಿ ಬಸ್ಸಿನಿಂದಿಳಿದು ನಡೆದರು. ಹರಳು ಹರಳಾದ ಕಲ್ಲುಗಳಿರುವ ಡಾಮರ್ ಹಾಕದ, ಕೆಂಪು ಮಣ್ಣುದಾರಿ. ದಾರಿ ಬದಿಯಲ್ಲಿ, ಮಳೆಬಂದು ಚರಂಡಿಗಳೆಲ್ಲ ಕೊರಕಲು ಕೊರಕಲಾಗಿದ್ದವು. ಸುತ್ತಲೂ ಕಾಡುಮರಗಳಿದ್ದವು. ಅದರೊಳಗೆ ಸುರಂಗದಂತ ದಾರಿಯಿತ್ತು. ಅಮೃತಾಳ ಊರಾದ ರಕ್ಷಿದಿಯಲ್ಲಿ ಈ ರೀತಿಯ ಕೊರಕಲು ದಾರಿ ಇರಲಿಲ್ಲವಾದ್ದರಿಂದ ಅವಳಿಗೆ ನಡೆಯಲು ಕಷ್ಟವಾಗುತ್ತಿತ್ತು. ದಾರಿಯುದ್ದಕ್ಕೂ ಕೇಪಳೆ ಹಣ್ಣಿನ ಗಿಡಗಳಿದ್ದವು. ಮಧ್ಯೆ ಮಧ್ಯೆ ಚರಂಡಿಗಳನ್ನು ದಾಟಲು ಪಾಲಗಳಿದ್ದವು (ಕಿರಿದಾದ ಸೇತುವೆ). ಅವುಗಳನ್ನು ಅಡಿಕೆ ಮರಗಳನ್ನು ಕತ್ತರಿಸಿ ಮಾಡಲಾಗಿತ್ತು. ಅವುಗಳನ್ನು ಹತ್ತಿ ದಾಟಲು ಅಮೃತಾ ಹೆಣಗಾಡಿದಳು. ಅಂತೂ ಅವುಗಳನ್ನೆಲ್ಲ ದಾಟಿ ನಡೆದು ಅಜ್ಜ ಮನೆಯನ್ನು ತಲಪಿದರು.

ಅಜ್ಜಮನೆ ತುಂಬಾ ಹಳೇಕಾಲದ ದೊಡ್ಡ ಮನೆ. ಅಜ್ಜಿ ಕೂಡಾ ಅಲ್ಲೇ ಹುಟ್ಟಿ ಬೆಳೆದಿದ್ದರು. ಅಜ್ಜಿ ಅಮ್ಮನ ಸೋದರತ್ತೆ. ಆ ಮನೆಯನ್ನು ಪೂರ್ತಿ ಮಣ್ಣಿನಿಂದಲೇ ಕಟ್ಟಿದ್ದರು. ಮನೆಯ ಮುಂಭಾಗದಲ್ಲಿ ಉದ್ದದ ಜಗುಲಿಯಿತ್ತು. ಜಗಲಿಗೆ ಅಡಿಕೆ ಮರದ ದಳಿಯ ದೊಡ್ಡ ಉದ್ದದ ಕಿಟಿಕಿಯಿತ್ತು. ಜಗುಲಿ ಒಂದು ಪಕ್ಕಕ್ಕೆ ಜಗುಲಿಗೆ ಸೇರಿದಂತೆ ಉದ್ದದ ಚಾವಡಿಯಿತ್ತು. ಅದರ ಮುಂಭಾಗದ ಗೋಡೆಯನ್ನೂ ದಳಿಗಳಿಂದಲೇ ಮಾಡಲಾಗಿತ್ತು. ಜಗುಲಿಯ ಇನ್ನೊಂದು ಕೊನೆಗೆ ದೊಡ್ಡಮಾವ ಮಲಗುವಕೋಣೆ. ಮೇಲೊಂದು ದೊಡ್ಡ ಮಹಡಿ, ಆ ಮಹಡಿಯ ಮೇಲೊಂದು ಅಟ್ಟ, ಜಗುಲಿಯ ಮತ್ತೊಂದು ಪಕ್ಕದಲ್ಲಿ ದೇವರ ಕೋಣೆ, ಅದರ ಬಲಭಾಗದಲ್ಲಿ ಬಾಣಂತಿ ಕೋಣೆ, ದೇವರ ಕೋಣೆಯಿಂದಾಚೆ ಉದ್ದದ ಮೂಡಜಗುಲಿ, ಅದರ ಒಂದುತುದಿಯಲ್ಲಿ ಊಟದ ಮನೆ ಅಡಿಗೆ ಮನೆಗಳು, ಅದರಿಂದಾಚೆ ಕೊಟ್ಟಿಗೆ ಹೀಗೆ ಲೆಕ್ಕಕ್ಕೆ ಸಿಕ್ಕದಷ್ಟು ಕೋಣೆಗಳಿದ್ದವು. ಇವೆಲ್ಲವೂ ಸೇರಿ ಅಜ್ಜಮನೆ ಆಟವಾಡಲು ಸೊಗಸಾದ ಮನೆಯಾಗಿತ್ತು. ಅಲ್ಲಿ ದೊಡ್ಡಮಾವ, ಅಜ್ಜಮನೆ ಅತ್ತೆ, ಬೀಟ್ರೂಟ್ ಮಾವ, ಮೀನಿಅತ್ತೆ, ಬಾಲಮಾವ, ಚುನ್ನ ಭಾವು, ಚಿಂತು ಚೀನಿ, ಅಜ್ಜಮನೆ ಅಜ್ಜಿ ಎಲ್ಲರೂ ವಾಸಿಸುತ್ತಿದ್ದರು.

ಮಾರನೇ ದಿನ ಹೇಮಮ್ಮ, ಪ್ರೇಮಚಿಕ್ಕಿ, ಪ್ರೇಮಚಿಕ್ಕಿಯ ಮಗಳು ಜಾಹ್ನವಿ, ಬಂದರು. ಜಾಹ್ನವಿಯನ್ನು ಎಲ್ಲರೂ ಚಿಕ್ಲಿ ಎಂದು ಕರೆಯುತ್ತಿದ್ದರು. ಚಿಕ್ಲಿ ಮತ್ತು ಚೀನಿ ಒಂದೇ ವಯಸ್ಸಿನವರು. ಅವರು ಅಮೃತಾಳಿಗಿಂತ ಒಂದು ವರ್ಷ ದೊಡ್ಡವರು. ಆದ್ದರಿಂದ ಅವರಿಬ್ಬರೂ ಅಮೃತಾಳನ್ನು ಅವರ ಜೊತೆ ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವರಿಬ್ಬರೂ ಅಮೃತಾಳ ಕಣ್ಣು ತಪ್ಪಿಸಿ ಕೊರಕಲು ದಾರಿಯಲ್ಲಿ ಓಡುತ್ತಿದ್ದರು. ಅಮೃತಾಳಿಗೆ ಅವರೊಂದಿಗೆ ಓಡಲಾಗುತ್ತಿರಲಿಲ್ಲ. ಅಮೃತಾ ಅವರ ಜೊತೆ ಆಡಬೇಕೆಂದು ಅಳುತ್ತಿದ್ದಳು.

ಒಂದುದಿನ ಬೆಳಗ್ಗೆ ಅಮೃತಾ ಆಟವಾಡಿ ಒಳ ಬರುವಾಗ ಅಲ್ಲೆಲ್ಲೋ ಇದ್ದ ಅಜ್ಜಮನೆ ಅತ್ತೆ “ಅಮೃತಾ ನಿನ್ನ ಕೂದಲು ಕುರುಂಬಿ ಹಾಗೆ ಕಾಣ್ತೆ, ಚಂದವೇ ಕಾಣುದಿಲ್ಲ ಅದಿಕ್ಕೊಂದು ಕ್ಲಿಪ್ ಹಾಕು”. ಎಂದಳು. ಅಮೃತಾಳ ಮುಖ ಪೆಚ್ಚಾಯಿತು. ಅವಳ ಕೂದಲು ದಟ್ಟವಾಗಿ ಕಪ್ಪಾಗಿತ್ತು. ಆಟವಾಡುವಾಗ, ಓಡುವಾಗ, ಕುಣಿಯುವಾಗೆಲ್ಲ ಅದು ಹಾರಾಡಿ ಹರಡಿಕೊಳ್ಳುತ್ತಿತ್ತು. ಹಾಗೆ ಕೂದಲನ್ನು ಗಾಳಿಗೆ ಹಾರಿ ಬಿಡುವುದೆಂದರೆ ಅಮೃತಾಳಿಗೆ ಭಾರೀ ಖುಷಿ. ಆದರೆ ಕ್ಲಿಪ್ ಹಾಕಿದರೆ ಕೂದಲನ್ನು ಅಂಟಿಸಿಟ್ಟಂತೆ ಕಾಣುವುದರಿಂದ ಅವಳು ಕ್ಲಿಪ್ ಹಾಕಲು ಬಿಡುತ್ತಿರಲಿಲ್ಲ. 

ಅಮೃತಾ ಅಲ್ಲಿಂದೆದ್ದು ಒಳನಡೆದಳು. ಅಮ್ಮ ಮತ್ತು ಪ್ರೇಮಚಿಕ್ಕಿ ಊಟದ ಕೋಣೆಯಲ್ಲಿದ್ದರು. “ಅಮ್ಮ... ಅಜ್ಜ ಮನೆ ಅತ್ತೆ ನನ್ನ ಕುರುಂಬಿ ಹೇಳಿತ್ತು” ಅಮೃತಾ ಅಳಲಾರಂಭಿಸಿದಳು. ಆಗ ಪ್ರೇಮಚಿಕ್ಕಿ “ಇಲ್ಲದ್ರು ನಿನ್ನ ಕೂದ್ಲು ಕಣ್ಣಿಗೆ ಬರ್ತೆ, ಕೂದ್ಲೂ ದಟ್ಟ .... ಹುಬ್ಬೂ ದಪ್ಪ ಮೊದ್ಲೇ ನೀನು ಕಪ್ಪು, ಮುಖ ಸಣ್ಣ ಕಾಣ್ತೆ,.. ಚಂದ ಕಾಣುದಿಲ್ಲ” ಎಂದಳು. ಅಮೃತಾ ಇನ್ನೂ ಜೋರಾಗಿ ಅಳಲಾರಂಭಿಸಿದಳು. ಅಷ್ಟರಲ್ಲಿ ಬಾಲಮಾವ ಬಂದ “ಅಮೃತಾ ಕೂಗುದೆಂತಕೆ” (ಅಳುವುದು) ಎಂದ. “ಅದು ಕೂದ್ಲಿಗೆ ಕ್ಲಿಪ್ ಹಾಕು ಹೇಳಿದ್ದಕ್ಕೆ” ಎಂದಳು ಪ್ರೇಮಚಿಕ್ಕಿ.

ಅಮೃತಾ ಮನಸ್ಸಿನಲ್ಲಿಯೇ ಯೋಚಿಸಿದಳು. ಪ್ರೇಮಚಿಕ್ಕಿ ಕ್ಲಿಪ್ ಹಾಕಕ್ಕೆ ಮಾತ್ರ ಹೇಳಿದ್ದ ? ಇವರೆಲ್ಲ ನೀನು ಕುರುಂಬಿ, ಕಪ್ಪು,.. ಚಂದ ಕಾಣದಿಲ್ಲ ಅಂತೆಲ್ಲ ಹೇಳಿದ್ರಲ್ಲ ಅದ್ರ ಯಾಕೆ ಹೇಳದಿಲ್ಲ! ಆಗ ಬಾಲಮಾವನೂ “ಕ್ಲಿಪ್ ಹಾಕು ಕ್ಲಿಪ್ ಹಾಕು ಅಮೃತಾ” ಎಂದು ಹೇಳಿದ. ಅಮ್ಮ ಹಟದಿಂದ ತಲೆಕೂದಲಿಗೆ ಕ್ಲಿಪ್ ಹಾಕಿ ಬಿಟ್ಟಳು. ಅಮೃತಾ ಅಳುತ್ತಳುತ್ತಾ ಹೊರಗೆ ಹೋದಳು.

ಮಧ್ಯಾಹ್ನ ಊಟದ ನಂತರ ಚಿಕ್ಲಿ ಮತ್ತು ಚೀನಿ ಹೊರಗೆ ಆಟವಾಡುತ್ತಿದ್ದರು. ಅವರು ಅಮೃತಾಳನ್ನು ಸೇರಿಸಿಕೊಳ್ಳುವುದಿಲ್ಲವೆಂದು ಅಮೃತಾ ಸುಮ್ಮನೇ ನಿಂತು ನೋಡುತ್ತಿದ್ದಳು. ಆಗ ಪ್ರೇಮಚಿಕ್ಕಿ “ಬನ್ನಿ ಮಕ್ಳೇ ಈಗ ಬಾಲಮಾವ ಫೊಟ ತೆಗೀತಾನೆ,.. ಬನ್ನಿ..ಬನ್ನಿ” ಎಂದು ಕರೆದಳು. ಅಮೃತಾ, ಚಿಕ್ಲಿ, ಪೋಟೋ ತೆಗೆಸಿಕೊಳ್ಳಲು ಅಂಗಳದಲ್ಲಿ ನಿಂತರು. ಪ್ರೇಮಚಿಕ್ಕಿ ಚಿಕ್ಲಿಯ ತಲೆಬಾಚಿ ಬಣ್ಣಬಣ್ಣದ ಕ್ಲಿಪ್‍ಗಳನ್ನು ಹಾಕಿದ್ದಳು.

ಬಾಲಮಾವ ಕ್ಯಾಮರಾ ಹಿಡಿದುಕೊಂಡು ಅಂಗಳಕ್ಕೆ ಬಂದ. ಪ್ರೇಮ ಚಿಕ್ಕಿ ಅಮೃತಾ ಮತ್ತು ಚಿಕ್ಲಿಯರನ್ನು ಅಂಗಳದ ಬದಿಯ ಕ್ರೋಟನ್ ಗಿಡಗಳ ಮಧ್ಯೆ ಕರೆದುಕೊಂಡು ಹೋದಳು. ಇಬ್ಬರ ತಲೆಗೂ ಕೆಂಪು ಬಣ್ಣದ ಕೇಪಳೆ ಹೂವನ್ನು ಮುಡಿಸಿದಳು. ಆಗ ಅಮೃತಾಳಿಗೆ ಚಿಕ್ಲಿಯ ತಲೆಯಲ್ಲಿ ಸ್ವಲ್ಪ ಜಾಸ್ತಿ ಹೂವು ಕಂಡಂತಾಯಿತು “ಅಮ್ಮಾ ಚಿಕ್ಲಿಗೆ ಜಾಸ್ತಿ ಹೂ ನನಿಗೆ ಕಮ್ಮಿ” ಎಂದಳು. ಆಗ ಪ್ರೇಮಚಿಕ್ಕಿ “ನೋಡುವ ಕೊಡು ಚಿಕ್ಲಿ ಒಂದುಚೂರು” ಎಂದು ಅವಳ ತಲೆಯಿಂದ ತೆಗೆಯಲು ಹೊರಟಳು.”ಆಂ..ಆನು ಕೊಡ್ತಿಲ್ಲೆ ಎನಿಗೆ ಬೇಕು”. ಚಿಕ್ಲಿ ಕಿರುಚಿದಳು. ಕೊನೆಗೆ ಅಮೃತಾಳಿಗೆ ಬೇರೆ ಹೂವಿಟ್ಟಳು ಪ್ರೇಮಚಿಕ್ಕಿ. ಚಿಕ್ಲಿಯ ತಲೆಕೂದಲು ತೆಳುವಾದ್ದರಿಂದ ಹೇಗೆ ಬೇಕೋ ಹಾಗೆ ಕ್ಲಿಪ್ ಸಿಕ್ಕಿಸಬಹುದಾಗಿತ್ತು. ಆದರೆ ಅಮೃತಾಳ ದಟ್ಟ ಕೂದಲಿಗೆ ಬೇಕಾದ ಹಾಗೆ ಕ್ಲಿಪ್ ಹಾಕಲು ಆಗುತ್ತಿರಲಿಲ್ಲ. ನಂತರ ಪ್ರೇಮಚಿಕ್ಕಿ ಇಬ್ಬರಿಗೂ ಅಗಲವಾದ ಕೆಂಪು ಹಣೆ ಬೊಟ್ಟನ್ನು ಇಟ್ಟಳು. ಅಮೃತಾಳಿಗೆ ‘ಚಿಕ್ಲಿಯ ಮುಖ ಅಗಲವಾಗಿದೆ ಅಲ್ಲದೇ ತನಗಿಂತ ಬೆಳ್ಳಗಿದ್ದಾಳೆ,” ಎನಿಸಿತು. ಅಲ್ಲದೇ ಅವಳಿಗೆ ಅಲಂಕಾರ ತನಗಿಂತ ಚೆನ್ನಾಗಿ ಒಪ್ಪುತ್ತದೆ. ತನಗೆ ಚೆನ್ನಾಗಿ ಕಾಣುವುದಿಲ್ಲ. ತನ್ನನ್ನು ಎಲ್ಲರೂ ಕಪ್ಪು ಕಪ್ಪು ಎನ್ನುತ್ತಾರೆ’ ಎಂದುಕೊಂಡಳು. ಎಲ್ಲರೂ ಹೇಳುವುದನ್ನು ಕೇಳಿ ಚಿಕ್ಲಿಯೂ ತಾನು ಬೆಳ್ಳಗಿದ್ದೇನೆ ಎನ್ನುತ್ತಿದ್ದಳು.

ಫೋಟೋ ತೆಗೆಯುವ ವೇಳೆಯಾಯಿತು. ಆಗ ಪ್ರೇಮಚಿಕ್ಕಿ ಮಕ್ಕಳಿಗೆಲ್ಲಾ ಮೂರು ಮೂರೂ ಚಾಕಲೇಟ್ ಕೊಟ್ಟು “ಬಾಯಿಲಿಟ್ಟುಕೊಳ್ಳಿ ಮಕ್ಳೆ” ಎಂದಳು!. ತಾನೇ ಸಿಪ್ಪೆ ಬಿಡಿಸಿ ಅಮೃತಾ ಮತ್ತು ಚಿಕ್ಲಿಯರ ಬಾಯಿಗೆ ಹಾಕಿದಳು. “ರೆಡಿ” ಎಂದ ಬಾಲಮಾವ ಅಮೃತಾ ಮತ್ತು ಚಿಕ್ಲಿ ರೆಡಿಯಾಗಿ ನಿಂತರು. ಅಮೃತಾ ಚಿಕ್ಲಿಯ ಅಂಗಿಯ ಮೇಲೆ ಕೈಯಿಡಲು ಹೊರಟಳು. ಆದರೆ ಚಿಕ್ಲಿಗದು ಇಷ್ಟವಾಗಲಿಲ್ಲ, ಅವಳಿಗೆ ಕೋಪಬಂತು. ಆಗ ಅಮ್ಮ “ಮುಟ್ಲಿ ಬಿಡು ಚಿಕ್ಲಿ” ಎಂದಳು. ಆಗ ಅವಳು “ಆಂ” ಎನ್ನುತ್ತಾ ಅರೆ ಮನಸ್ಸಿನಿಂದ ಒಪ್ಪಿದಳು. “ಬಾಯಿ ಬಿಡಿ ಚಾಕ್ಲೇಟ್ ಕಾಣ್ಲಿ” ಎಂದಳು ಪ್ರೇಮಚಿಕ್ಕಿ ತಮಾಷೆಗೆ. ಅಮೃತಾ ಬಾಯಿ ಬಿಟ್ಟು ನಿಂತಳು. ಚಿಕ್ಲಿ ಸಿಟ್ಟಿನಿಂದ ಮುಖ ತಿರುವಿ ನಿಂತಿದ್ದಳು. ಅವಳು ಬಾಯಿ ಬಿಡಲಿಲ್ಲ. ಫೋಟೋ ಹಾಗೇ “ಕ್ಲಿಕ್” ಆಯಿತು.

No comments:

Post a Comment