Feb 14, 2017

ಸಮಾಜದ ಕ್ರೌರ್ಯದ ಗುಂಡಿಯೊಳಗಿಳಿಸುವ 'ಅಮರಾವತಿ'

ಡಾ. ಅಶೋಕ್. ಕೆ. ಆರ್
ಕನ್ನಡದಲ್ಲಿ ಇಂತಹುದೊಂದು ಹಸಿ ಹಸಿ ಚಿತ್ರವನ್ನು ನೋಡಿ ಬಹಳ ದಿನಗಳಾಗಿತ್ತು. ನಿನ್ನೆ ರಾತ್ರಿ ಮೂಗಿಗಂಟಿದ ಮಲದ ಗುಂಡಿಯ ವಾಸನೆಯು ಇನ್ನೂ ಹೋಗಿಲ್ಲ ಎನ್ನುವುದಷ್ಟೇ ಸಾಕು ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಲು. ಪೌರ ಕಾರ್ಮಿಕರ ಬಗ್ಗೆ ವರದಿಗಳು ಬರುತ್ತವೆ, ಡಾಕ್ಯುಮೆಂಟರಿಗಳೂ ಸಿಗುತ್ತವೆ, ಅವರ ಸುತ್ತಲೇ ಸುತ್ತುವ ಪೂರ್ಣ ಪ್ರಮಾಣದ ಚಿತ್ರವೊಂದು ಇಲ್ಲಿಯವರೆಗಂತೂ ಬಂದಂತಿಲ್ಲ. ಪೌರ ಕಾರ್ಮಿಕರ ಬದುಕಿನ ಸಂಗತಿಗಳನ್ನು ಕತೆಯಾಗಿಸಿ ಸಿನಿಮಾ ಮಾಡುವ ಧೈರ್ಯವನ್ನು ನಿರ್ದೇಶಕ ಗಿರಿರಾಜ್ ತೆಗೆದುಕೊಂಡಿರುವುದರಲ್ಲಿ ಹೆಚ್ಚಿನ ಅಚ್ಚರಿಯೇನಿಲ್ಲ. ನವಿಲಾದವರು ಎಂಬ ಯ್ಯೂಟ್ಯೂಬ್ ಸಿನಿಮಾ, ಜಟ್ಟ, ಮೈತ್ರಿ ಚಿತ್ರಗಳಲ್ಲೂ ಅವರು ವಿಭಿನ್ನ ಕತೆಯನ್ನೇ ಆಯ್ದುಕೊಂಡಿದ್ದರು. ಮುಖ್ಯವಾಹಿನಿಯ ಜನರು ನೋಡದ ಬದುಕನ್ನು, ಊಹಿಸದ ಜೀವನ ರೀತಿಯನ್ನು ತೆರೆಯ ಮೇಲೆ ನೇಯ್ದಿದ್ದರು. ಆ ಎಲ್ಲಾ ಸಿನಿಮಾಗಳಿಗಿಂತಲೂ ಕಷ್ಟಕರವಾದ ಕತೆಯನ್ನು ಈ ಬಾರಿ ಆಯ್ದುಕೊಂಡಿದ್ದಾರೆ, ಅದರಲ್ಲವರು ಸಂಪೂರ್ಣವಾಗಿ ಗೆದ್ದಿದ್ದಾರಾ?
ಮಲದ ಗುಂಡಿಯನ್ನು ಕಿಲೀನು ಮಾಡುವ ಶಿವಪ್ಪನ ಮಗ ಚೆನ್ನ ಓದುವುದರಲ್ಲೂ ಮುಂದು. ತನ್ನ ಜನರ ಬದುಕಿನ ಬಗ್ಗೆ ಪ್ರಾಜೆಕ್ಟ್ ಒಂದರ ಸಲುವಾಗಿ ಡಾಕ್ಯುಮೆಂಟರಿ ತರಹದ ವೀಡಿಯೋ ಮಾಡಲು ತೊಡಗುತ್ತಾನೆ. ಅವನ ವೀಡಿಯೋದ ಮೂಲಕ ಪೌರಕಾರ್ಮಿಕರ ಬದುಕಿನ ಬವಣೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ‘ಸ್ವಸ್ಥ’ ಸಮಾಜದ ಅಸ್ವಸ್ಥ ಮುಖಗಳ ಅನಾವರಣವಾಗುತ್ತಾ ಸಾಗುತ್ತದೆ. ಗಾಜಿನ ಚೂರುಗಳು ಕಣ್ಣ ಮೇಲೆ ಬಿದ್ದು ಒಬ್ಬ ಪೌರಕಾರ್ಮಿಕನ ಕಣ್ಣುಗಳೇ ಇಂಗಿ ಹೋಗುತ್ತದೆ. ಪರ್ಮನೆಂಟ್ ಎಂಪ್ಲಾಯಿ ಅಲ್ಲ ಅವ್ನು ಅನ್ನುವ ಕಾರಣ ನೀಡಿ ಪರಿಹಾರ ನೀಡಲು ನಿರಾಕರಿಸುವ ಅಧಿಕಾರಿಗಳು, ಪೌರ ಕಾರ್ಮಿಕರನ್ನು ಕಂಟ್ರಾಕ್ಟ್ ಮೇಲೆ ಸಪ್ಲೈ ಮಾಡುವ ಜಾನ್ ಎಂಬ ರೌಡಿಯ ದರ್ಪದ ದರ್ಶನವಾಗುತ್ತದೆ. ಪೌರ ಕಾರ್ಮಿಕರ ಪರವಾಗಿ ಹೋರಾಡುವ, ಆ ಕಾರಣಕ್ಕೇ ಬಡಿಸಿಕೊಳ್ಳುವ, ತಾಯಿಯಿಂದ ಚುಚ್ಚು ಮಾತು ಕೇಳುವ ಪೌಲ್ ಕೂಡ ಇಲ್ಲಿದ್ದಾನೆ. ಈ ಎಲ್ಲಾ ಘಟನೆಗಳಿಗೂ ಕಣ್ಣು ಮುಚ್ಚಿಕೊಂಡು, ಪ್ರಪಂಚದ ಆಗುಹೋಗುಗಳಿಗೆ ಸಂಬಂಧವೇ ಪಡದಂತೆ ತನ್ನ ಕುಡಿತಕ್ಕೆ ಕಾಸ್ ಆಯಿತೋ ಸರಿ ಎಂದುಕೊಂಡಿರುವ ಶಿವಪ್ಪನಿಲ್ಲಿದ್ದಾನೆ. ಇಂತ ನಿರ್ಲಿಪ್ತ ‘ನಾಯಿ ಜಾತಿಯ’ ಶಿವಪ್ಪನನ್ನು ಬದಲಿಸುವುದು ಒಂದು ‘ಜಾತಿ ನಾಯಿ’. ಯಾರದೋ ಮನೆಯ ಟಾಯ್ಲೆಟ್ ಕಿಲೀನು ಮಾಡಲೋದಾಗ ಇವನೆಡೆಗೆ ಪ್ರೀತಿ ತೋರುವ ನಾಯಿಯೊಂದು ಶಿವಪ್ಪನನ್ನು ಬದಲಿಸುತ್ತದೆ. ಕುಡಿತದ ವಾಸ್ನೆ ನನ್ ಮಗೀಗ್ ಆಗಲ್ಲ, ದೂರ ಹೋಗ್ಬುಡುತ್ತೆ ಎಂಬ ಕಾರಣ ನೀಡಿ ಕುಡಿತ ಬಿಡ್ತಾನೆ ಶಿವಪ್ಪ; ಮಲದ ಗುಂಡಿಯ ವಾಸ್ನೆ ಹತ್ತಿದ್ರೆ ನನ್ ಮಗ ಹತ್ರ ಬರಲ್ಲ ಅನ್ನೋ ಕಾರಣ ನೀಡಿ ಕಟ್ಟಿಕೊಂಡ ಚರಂಡಿಯೊಳಗೆ ಇಳಿಯಲು ನಿರಾಕರಿಸುತ್ತಾನೆ ಶಿವಪ್ಪ. ಇವನ ನಿರಾಕರಣೆಯ ಕಾರಣದಿಂದಾಗಿ ಅನನುಭವಿಯೊಬ್ಬ ಗುಂಡಿಯೊಳಗೆ ಇಳಿದು ಸಾವನ್ನಪ್ಪುತ್ತಾನೆ. 

ಮತ್ತೊಂದೆಡೆ ಚೆನ್ನ ತನ್ನ ವೀಡಿಯೋದಿಂದಾಗಿಯೇ ಜಾನ್ ಮತ್ತವನ ಸಂಗಡಿಗರ ದ್ವೇಷ ಕಟ್ಟಿಕೊಳ್ಳುತ್ತಾನೆ. ಜಾನ್ ಚೆನ್ನನ ಮನೆಗೆ ನುಗ್ಗಿ ಚೆನ್ನನ ತಮ್ಮನ ಕಣ್ಣು ಇಂಗಿಸುತ್ತಾನೆ, ಶಿವಪ್ಪನ ಪ್ರೀತಿಯ ನಾಯಿಯನ್ನು ಬಡಿದು ಸಾಯಿಸುತ್ತಾನೆ. ಶಿವಪ್ಪನೊಳಗಿನ ಸಿಟ್ಟು - ಕ್ರೌರ್ಯ ನಾನಾ ರೂಪ ಪಡೆದುಕೊಳ್ಳಲಾರಂಭಿಸುತ್ತದೆ. ಪೌರ ಕಾರ್ಮಿಕರ ಹೋರಾಟದ ಹಾದಿ ಯಾವುದಿರಬೇಕೆಂದು ನೀವೇ ನಿರ್ಧರಿಸಿ ಎಂದು ಪೌಲ್ ಹೇಳಿದಾಗ ಇಡೀ ಊರನ್ನೇ ಕಸದ ತೊಟ್ಟಿಯನ್ನಾಗಿಸುವ ಸಲಹೆ ಕೊಡುತ್ತಾನೆ ಶಿವಪ್ಪ. ಕೆಲವು ವರುಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಯ ಮಾದರಿಯೇ ಈ ಚಿತ್ರಕ್ಕೆ ಸ್ಪೂರ್ತಿ. ತಣ್ಣಗಿನ ಕ್ರೌರ್ಯದೊಂದಿಗೆ ಜಾನ್ ನ ಮಗನನ್ನು ಸಾಯಿಸಿಬಿಡುತ್ತಾನೆ ಶಿವಪ್ಪ. ಪ್ರತಿಭಟನೆ ಪಡೆದುಕೊಳ್ಳುವ ನಾನಾ ರೂಪಗಳು, ಆ ಪ್ರತಿಭಟನೆಯನ್ನು ಹತ್ತಿಕ್ಕಲು ಆಳುವ ವರ್ಗಗಳು ಮಾಡುವ ಕುಟಿಲೋಪಾಯಗಳೆಲ್ಲವೂ ಚಿತ್ರ ರಭಸದಿಂದ ಸಾಗುವಂತೆ ಮಾಡುತ್ತವೆ. ಕೊನೆಗೆ ಗೆದ್ದಿದ್ಯಾರು? ಸಮಾಜವನ್ನು ಎಚ್ಚರಿಸಲು ಪೌಲ್ ತೆಗೆದುಕೊಂಡ ನಿರ್ಧಾರ ದುಡುಕಿನದ್ದಾ?

ಶಿವಪ್ಪನ ಮಗ ಮಾರುತಿ ಮತ್ತವನ ದೇವರು ಚಿತ್ರದಲ್ಲಿರುವ ಮತ್ತೊಂದು ಪ್ರಮುಖ ಆಕರ್ಷಣೆ. ಕಾಲೇಜಿನಲ್ಲಿ, ಸಮಾಜದಲ್ಲಿ, ತನ್ನ ತಂದೆಯ ಕಸುಬಿನ ಕಾರಣದಿಂದಾಗಿ ಪದೇ ಪದೇ ಅವಮಾನಕ್ಕೀಡಾಗಿ ಬಡಿಸಿಕೊಳ್ಳುವ ಚೆನ್ನ ಯಾವುದಕ್ಕೂ ಎದೆಗುಂದದೇ ಮುನ್ನಡೆಯುವುದು ಚಿತ್ರದ ಗುಣಾತ್ಮಕ ಅಂಶಗಳಲ್ಲಿ ಒಂದು. ತಮ್ಮ ಬೇಡಿಕೆಗಳನ್ನೆಲ್ಲ ಈಡೇರಿಸಿಕೊಂಡ ಪೌರಕಾರ್ಮಿಕರು ಗೆಲುವಿನೊಂದಿಗೆ ಚಿತ್ರ ಮುಗಿದುಬಿಡುವುದಿಲ್ಲ. ಚಿತ್ರದ ಕೊನೆಯಲ್ಲಿ ಈ ಪ್ರತಿಭಟನೆಗಳೆಲ್ಲಕ್ಕೂ ಮೂಲ ಕಾರಣವಾದ ಶಿವಪ್ಪನನ್ನು ಮರಾಮೋಸದಿಂದ ಸಾಯಿಸಲಾಗುತ್ತದೆ. ಪ್ರಭುತ್ವದ ಕ್ರೌರ್ಯದ ಮುಂದೆ ಮತ್ಯಾವ ಕ್ರೌರ್ಯವೂ ದೊಡ್ಡದಲ್ಲ ಎನ್ನುವುದನ್ನು ತಿಳಿಸಿ ಸಿನಿಮಾ ಮುಗಿಸುತ್ತಾರೆ ನಿರ್ದೇಶಕರು.

ಎರಡು ಘಂಟೆಯಲ್ಲಿ ಚಕಾಚಕ್ ಅಂತ ಮುಗಿದುಬಿಡುವುದು ಈ ಸಿನಿಮಾದ ವಿಶೇಷತೆಯೂ ಹೌದು ಮಿತಿಯೂ ಹೌದು. ಗಿರಿರಾಜ್ ಬಳಿ ಹೇಳಬೇಕಾದ ವಿಷಯಗಳು ಸಾಕಷ್ಟಿವೆ. ಅಷ್ಟನ್ನೂ ಎರಡು ಘಂಟೆಯಲ್ಲೇ ಹೇಳಲು ಪ್ರಯತ್ನಿಸಿರುವುದು ಕೆಲವೊಮ್ಮೆ ಭಾರವೆನ್ನಿಸುತ್ತದೆ. ಹತ್ತಾರು ಸಂಗತಿಗಳು ಅಲ್ಲೊಮ್ಮೆ ಇಲ್ಲೊಮ್ಮೆ ಬಂದು ಮರೆಯಾಗಿಬಿಡುತ್ತವೆ. ಸಿನಿಮಾದ ಆಶಯಕ್ಕೆ ಈ ಸಂಗತಿಗಳು ಬರದೇ ಇದ್ದರೆ ಚೆಂದಿತ್ತಲ್ಲವೇ ಎನ್ನಿಸುತ್ತದೆ. ಆದರೆ ಇದೇ ಸಂಗತಿಗಳು ಸಿನಿಮಾವನ್ನು ಡಾಕ್ಯುಮೆಂಟರಿಯಾಗುವ ಅಪಾಯದಿಂದಲೂ ತಪ್ಪಿಸಿವೆ ಎಂದರದು ಸುಳ್ಳಲ್ಲ. ಇಡೀ ಅಮರಾವತಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿರುವುದು ಶಿವಪ್ಪನ ಪಾತ್ರದಲ್ಲಿ ನಟಿಸಿರುವ ಅಚ್ಯುತ್ ಕುಮಾರ್ ಮತ್ತು ಪೌಲ್ ಪಾತ್ರದಲ್ಲಿ ನಟಿಸಿರುವ ಕಿರಣ್ ಕುಮಾರ್. ಉಳಿದ ಪಾತ್ರಧಾರಿಗಳೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪ್ರಾರಂಭದ ದೃಶ್ಯಗಳಲ್ಲಿ ವಿಭಿನ್ನ ಕ್ಯಾಮೆರಾ ಕೋನಗಳು ಗಮನ ಸೆಳೆಯುತ್ತವೆ, ನಂತರದಲ್ಲಿ ಕ್ಯಾಮೆರಾ ಕೆಲಸ ಸಾಧಾರಣವಾಗಿದೆಯಷ್ಟೇ. ಕತೆಗೆ ಪ್ರಾಮುಖ್ಯವಿರುವ ಚಿತ್ರದಲ್ಲಿ ಇಂತಹ ತಾಂತ್ರಿಕ ಕೊರತೆಗಳು ಹೆಚ್ಚಾಗಿ ಕಾಣುವುದಿಲ್ಲ ಎನ್ನುವುದು ಸತ್ಯವಾದರೂ ತಾಂತ್ರಿಕವಾಗಿಯೂ ಉತ್ತಮವಾಗಿದ್ದರೆ ಮತ್ತಷ್ಟು ನೋಡಿಸಿಕೊಳ್ಳುತ್ತದೆ, ಮತ್ತಷ್ಟು ಕಾಡುತ್ತದೆ ಎನ್ನುವುದೂ ಸತ್ಯ. 

ಸ್ವಸ್ಥ ಸಮಾಜವೊಂದರಲ್ಲಿ ಇಂತಹ ಚಿತ್ರಗಳು ಗೆಲ್ಲಬೇಕು, ಸಮಾಜವನ್ನು ಎಚ್ಚರಿಸಬೇಕು. ನಮ್ಮದು ಅಂತಹ ಸ್ವಸ್ಥ ಸಮಾಜವೇನಲ್ಲ, ಅಮರಾವತಿ ಗೆಲ್ಲುವುದೂ ಇಲ್ಲ.
ಅಕಸ್ಮಾತ್ ನಿಮ್ಮ ಊರಲ್ಲಿ ಇದು ಬಿಡುಗಡೆಯಾಗಿದ್ದರೆ ಒಮ್ಮೆ ನೋಡಿ.

No comments:

Post a Comment