Dec 30, 2016

ಮೇಕಿಂಗ್ ಹಿಸ್ಟರಿ: ಸವಾಲು, ಭ್ರಾಂತಿ ಮತ್ತು ಬಿಕ್ಕಟ್ಟು

Saketh Rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬಂಡಾಯವನ್ನು ಹತ್ತಿಕ್ಕಲು ಕಾಸಾಮೈಯೂರ್ ಹತ್ತಲವು ಲೆಕ್ಕಾಚಾರಗಳನ್ನು ಮಾಡಿದ. ಮೊದಲಿಗೆ ಆತ ಸೈನ್ಯವನ್ನು ಪ್ರಮುಖ ಪಟ್ಟಣ ಮತ್ತು ಕೋಟೆಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ಕಳುಹಿಸಿದ. ಆದರೆ ಸೈನ್ಯ ಅಲ್ಲಿಂದ ತೆರಳುತ್ತಿದ್ದಂತೆಯೇ ಪಟ್ಟಣ ಹಾಗೂ ಕೋಟೆಗಳು ಮರಳಿ ಗೆರಿಲ್ಲಾಗಳ ವಶವಾಗಿಬಿಡುತ್ತಿದ್ದವು. ಆದ್ದರಿಂದ ಆತ ಇನ್ನೂ ಹೆಚ್ಚಿನ ಸೈನ್ಯಕ್ಕಾಗಿ ವಿನಂತಿಸಿಕೊಂಡ, ಬ್ರಿಟೀಷ್ ಸೈನ್ಯವನ್ನು ಕರೆಸಿಕೊಂಡ ಮತ್ತು ನಿರಂತರವಾಗಿ ಸೈನ್ಯದ ಬಲವನ್ನು ಹತ್ತಿರತ್ತಿರ ಹತ್ತು ಸಾವಿರದಷ್ಟು ಹೆಚ್ಚಿಸಿದ, ಇದರಲ್ಲಿ ಅರ್ಧದಷ್ಟು ಸೈನಿಕರನ್ನು ಮೈಸೂರೇ ಪೂರೈಸಿತ್ತು. 
ಹಳ್ಳಿಗಳಲ್ಲಿನ ಪರಿಸ್ಥಿತಿ ನಿಯಂತ್ರಣ ಮೀರಿಬಿಟ್ಟಾಗ, ಸೈನ್ಯವನ್ನು ಸಣ್ಣ ಸಣ್ಣ ಗುಂಪುಗಳಾಗಿ ವಿಭಜಿಸುವ ಆದೇಶಗಳನ್ನಾತ ಕಳುಹಿಸಿದ. ನಂತರ ಅವರಿಗೆ ಹಳ್ಳಿಗಳಿಗೆ ಪ್ರವೇಶಿಸಲು ಸೂಚಿಸಲಾಯಿತು ಮತ್ತು ಒಂದೋ ಎರಡೋ ಮರಣದಂಡನೆಯನ್ನು ವಿಧಿಸುವಂತೆ ಸೂಚಿಸಲಾಯಿತು, ಹಳ್ಳಿಗರಲ್ಲಿ ಭೀತಿಯುಂಟಾಗಲಿ ಎಂಬ ಕಾರಣದಿಂದ. ಈ ನೀತಿಯನ್ನು ಶಿಕಾರಿಪುರದಲ್ಲಿ ಅಳವಡಿಸಿಕೊಂಡ ನಂತರ ಮತ್ತೆಲ್ಲೂ ಮುಂದುವರೆಸಲಿಲ್ಲ; ಕಾರಣ ಈ ನೀತಿಯು ಸೈನ್ಯವನ್ನು ಗೆರಿಲ್ಲಾಗಳ ದಾಳಿಗೆ ಗುರಿಯಾಗಿಸುತ್ತಿತ್ತು, ಮತ್ತು ಸೈನ್ಯವನ್ನು ಗುಂಪಾಗಿ ವಿಭಜಿಸಿಬಿಟ್ಟಿದ್ದ ಕಾರಣದಿಂದಾಗಿ ಸೈನ್ಯವು ಸೋಲುವ ಸಾಧ್ಯತೆಗಳು ಅಧಿಕವಾಗಿತ್ತು. 1832ರ ಜನವರಿ 14ರಂದು ಮೈಸೂರು ವಿಭಾಗವನ್ನು ನಿಯಂತ್ರಿಸುತ್ತಿದ್ದ ಮೇಜರ್ ಜೆನರಲ್ ಹಾಕರ್ ಗೆ ಬ್ರಿಗ್ಸ್ ಬರೆದ ಪತ್ರವು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ: “ಸಿಳ್ಳರ ಕೊಪ್ಪದ (siller coopa) ಹಳ್ಳಿಯನ್ನುಳಿಸುವ ಸಲುವಾಗಿ ಹವಲ್ದಾರರ ರಕ್ಷಣಾ ತಂಡವನ್ನು ವಿಭಜಿಸಿದ್ದಕ್ಕಾಗಿ ಅಧಿಕಾರಿ ಮೇಜರ್ ಜೇಮ್ಸ್‍ಗೆ ನಾನು ಪೂರ್ಣ ಗೌರವವನ್ನು ನೀಡುತ್ತೇನಾದರೂ, ಈ ರೀತಿಯಾಗಿ ಬ್ರಿಟೀಷ್ ಪಡೆಗಳ ಸಣ್ಣ ಸಣ್ಣ ಗುಂಪುಗಳನ್ನು ದಾಳಿಗೆ ಮುಖಾಮುಖಿಯಾಗಿಸುವುದರ ಬಗ್ಗೆ ತೀರ್ವತರವಾದ ಆಕ್ಷೇಪಣೆಗಳಿವೆ. ಮೇಜರ್ ಜೇಮ್ಸ್‍ಗೆ ರಕ್ಷಣಾ ತಂಡವನ್ನು ವಾಪಸ್ಸು ಕರೆಸಿಕೊಳ್ಳುವಂತೆ ನೀವು ಸೂಚಿಸಬೇಕೆಂದು ನಾನು ಬೇಡಿಕೊಳ್ಳುತ್ತೇನೆ, ಹಳ್ಳಿಯನ್ನು ಮತ್ಯಾವುದಾದರೂ ರೀತಿಯಲ್ಲಿ ರಕ್ಷಿಸುವಂತೆ ನೋಡಿಕೊಳ್ಳುತ್ತೇವೆ”. (177) 

ಈ ರೀತಿಯಾಗಿ ಭೂಮಾಲೀಕರು ಸಂಪೂರ್ಣವಾಗಿ ದುರ್ಬಲರಾಗಿದ್ದರು, ವಸಾಹತುಶಾಹಿಗಳು ಎಷ್ಟಾದರೂ ಪ್ರಯತ್ನಿಸಲಿ, ಅವರು ತಮ್ಮಾಳ್ವಿಕೆಯ ಪ್ರಾಂತ್ಯದ ಹೆಚ್ಚಿನ ಭಾಗದಲ್ಲಿ ಅಂದುಕೊಂಡಷ್ಟು ನಂಬುಗೆಯನ್ನು ತುಂಬಲು ಸಾಧ್ಯವಾಗಲಿಲ್ಲ. 

ಪ್ರಾಂತ್ಯವು ವಿಸ್ತಾರವಾಗಿತ್ತು, ಅವರ ಪಡೆಗಳ ಸಾಮರ್ಥ್ಯ ಸಾಕಷ್ಟಿರಲಿಲ್ಲ, ಬಂಡಾಯಗಾರರು ಶಸ್ತ್ರಸಜ್ಜಿತರಾಗಿದ್ದರು ಮತ್ತು ಭೂಪ್ರದೇಶವೂ ವಿಪರೀತವಾಗಿ ಅನಾನುಕೂಲಕರವಾಗಿತ್ತು. ಅವರು ಪದೇ ಪದೇ ಕಂಡುಕೊಂಡ ಒಂದೇ ಪರಿಹಾರವೆಂದರೆ ತಮ್ಮ ಸೈನಿಕ ಅಸ್ತಿತ್ವವನ್ನು ಬಲಪಡಿಸಿಕೊಂಡಿದ್ದು. ಆದರೂ ಅವರ ಗುರಿಯಾಗಿದ್ದವರು ಯಾವಾಗಲೂ ಜಾರಿಕೊಳ್ಳುತ್ತಿದ್ದರು ಮತ್ತು ಅಂದಾಜಿಗೆ ಸಿಗದವರಾಗಿದ್ದರು. 

ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಬ್ರಿಟೀಷರು ಒಂದು ವಾಸ್ತವಾಂಶವನ್ನು ಗ್ರಹಿಸಲು ವಿಫಲರಾದರು. ಅವರು ಹೊಸದಾದ ಯುದ್ಧತಂತ್ರದ ವಿರುದ್ಧ ನಿಂತಿದ್ದರು, ಅದನ್ನು ಭೇದಿಸುವುದು ಕಷ್ಟವೆಂದವರಿಗೆ ಅರಿವಾಗಿತ್ತು. ಮಾವೋ ತ್ಸೇ ತುಂಗ್ ಇದೇ ರೀತಿಯ ವಸಾಹತು ವಿರೋಧಿ ಚೀನಿ ಅನುಭವವನ್ನು ಅಭಿವೃದ್ಧಿಪಡಿಸಿ, ಕಾರ್ಯರೂಪಕ್ಕೆ ತಂದು, ಕೆಳವರ್ಗದವರು ಮುನ್ನಡೆಸಿದ ಜನರ ದೀರ್ಘ ಯುದ್ಧದ ರೂಪ ಪಡೆದುಕೊಂಡಿತು, ಈ ಯುದ್ಧದಲ್ಲಿ ರೈತ ಗೆರಿಲ್ಲಾ ಯುದ್ಧತಂತ್ರವು ಅತ್ಯವಶ್ಯಕ ಭಾಗವಾಗಿತ್ತು. ನಗರದ ಸಶಸ್ತ್ರ ಹೋರಾಟವು ವಸಾಹತು ವಿರೋಧಿ, ಊಳಿಗಮಾನ್ಯ ವಿರೋಧಿ ರೈತ ಗೆರಿಲ್ಲಾ ಯುದ್ಧವಾಗಿತ್ತು; ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡುವುದಾದರೆ ಕೆಳವರ್ಗದವರು ಈ ಹೋರಾಟವನ್ನು ಜನರ ದೀರ್ಘ ಯುದ್ಧವಾಗಿ ಅಭಿವೃದ್ಧಿಪಡಿಸುವುದಕ್ಕೆ ಮುನ್ನವೇ ಜನಸಮೂಹವನ್ನು ಸಜ್ಜುಗೊಳಿಸಲಾರಂಭಿಸಿಬಿಟ್ಟಿತ್ತು. ಹಾಗಾಗಿ, ಈ ಸಿದ್ಧಾಂತವು ಪೂರ್ಣ ಪ್ರಮಾಣದ ರೂಪುರೇಷೆಗಳೊಂದಿಗೆ ಸಿದ್ಧವಾಗಿರದೇ ಹೋದರೂ, ಗೆರಿಲ್ಲಾ ಯುದ್ಧತಂತ್ರವನ್ನು ರೈತ ಸಮೂಹವು ಹೋರಾಟದ ಭಾಗವಾಗಿ ಅಳವಡಿಸಿಕೊಂಡಿತ್ತು ಎನ್ನುವುದು ಕಟು ವಾಸ್ತವ: ಈ ಯುದ್ಧವನ್ನು ಗ್ರಹಿಸುವುದೇ ಬ್ರಿಟೀಷರಿಗೆ ಸಾಧ್ಯವಾಗಲಿಲ್ಲ ಮತ್ತು ಅವರಿಗೆ ಈ ಯುದ್ಧವನ್ನು ನಿಯಂತ್ರಣದಲ್ಲಿಡುವುದೂ ಸಾಧ್ಯವಾಗಲಿಲ್ಲ. 

ಯುದ್ಧವನ್ನು ಕಣ್ಣಾರೆ ಕಂಡ, ಶೀಘ್ರವಾಗಿ ಫಲಿತಾಂಶಗಳನ್ನು ಪಡೆದುಬಿಡಬಹುದೆಂದು ಯೋಚಿಸಿದ್ದ ಕಾಸಾಮೈಯೂರ್ ಹೇಳುತ್ತಾನೆ: “ಮೈಸೂರಿನ ಸೈನಿಕ ಪಡೆಯು ನಡೆದುಕೊಂಡ ರೀತಿಯು ಉದಾಸೀನತೆಯಿಂದ ಕೂಡಿತ್ತು ಮತ್ತು ಅವಮಾನಕಾರಿಯಾಗಿತ್ತು; ದೇಶದ ಗುಣವನ್ನು ನೋಡಿದಾಗ ಅಶ್ವದಳವು ಅನುಪಯುಕ್ತವಾಗಿತ್ತು”. (178) 

ಕ್ಯಾಪ್ಟನ್ ಹಚಿನ್‍ಸನ್ ಇದನ್ನು “ಕ್ಷುಲ್ಲಕ ಯುದ್ಧ”ವೆಂದು ಕರೆಯುತ್ತಾನೆ, ಯಾಕೆಂದರೆ ಈ ರೀತಿಯ ಯುದ್ಧತಂತ್ರವನ್ನು ಬ್ರಿಟೀಷ್ ಸೈನಿಕ ಶಾಲೆಗಳಲ್ಲಿ ಹೇಳಿಕೊಟ್ಟಿರಲಿಲ್ಲ, ಅವರ ಪಠ್ಯದಲ್ಲೂ ಇದಿರಲಿಲ್ಲ! (179) 

1832ರ ಜನವರಿ 20ರಂದು ಮೇಜರ್ ಜನರಲ್‍ರವರ ತಜ್ಞ ಅಭಿಪ್ರಾಯವನ್ನು ಮಂಡಿಸುತ್ತಾ, ಹತಾಶ ಪರಿಸ್ಥಿತಿಯ ಬಗ್ಗೆ ಬ್ರಿಗ್ಸ್ ಈ ರೀತಿ ಬರೆಯುತ್ತಾನೆ: “ಪಶ್ಚಿಮದ ಪಾಳೇಗಾರರು, ಅದರಲ್ಲೂ ನಗರ ಮತ್ತು ತರೀಕರೆಯ ಪಾಳೇಗಾರರ ಬಗ್ಗೆ ಕ್ರಮ ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ ಎಂಬ ಭಾವನೆ ಕಮಿಷನ್ನಿಗೆ ಇದೆ. ಹಾಗಾಗಿ ವಿಭಾಗದ ಅಧಿಪತಿಯಾಗಿರುವ ಮೇಜರ್ ಜೆನರಲ್ ಹಾಕರ್‍ರವರ ಸ್ಥಳೀಯ ಅನುಭವ ಮತ್ತು ವೃತ್ತಿಪರ ಜ್ಞಾನವನ್ನು ಪಡೆಯಲಾಗಿದೆ; ಮೈಸೂರಿನ ಈ ಪ್ರದೇಶದಲ್ಲಿ ಸೈನಿಕ ಪಡೆಗಳಿಗೆ ಎದುರಾಗುವ ಎಡರು ತೊಡರುಗಳನ್ನು ಎದುರಿಸುವ ಬಗ್ಗೆ ಅವರ ಅಭಿಪ್ರಾಯವನ್ನು ಕೋರಲಾಗಿದೆ.... ಯಶಸ್ವಿ ಸೈನಿಕ ಕಾರ್ಯಾಚರಣೆಯನ್ನು ವಿಪರೀತವೆನ್ನಿಸುವಷ್ಟು ಹಣವನ್ನು ಮತ್ತು ಮನುಷ್ಯ ಜೀವವನ್ನು ಖರ್ಚು ಮಾಡದೆ ಮಾಡಲಾಗದು ಎಂದವರು ಯೋಚಿಸುತ್ತಿದ್ದಾರ ಎಂದೆನ್ನಿಸುತ್ತದೆ. ಇದೇ ರೀತಿಯ ಜನರ ವಿರುದ್ಧ ಬಲ್ಲಂನಲ್ಲಿ ಡ್ಯೂಕಿನ ವೆಲ್ಲಿಂಗ್ಟನ್ ನಡೆಸಿದ ಯುದ್ಧವು ಇಂತಹ ಪರಿಸ್ಥಿತಿಯಲ್ಲಿ ಯಶಸ್ಸು ಗಳಿಸಲು ಎಷ್ಟೆಲ್ಲ ತ್ಯಾಗ ಮಾಡಬೇಕಾಗುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ”. (180) 

ಗ್ರಹಿಸಲಾಗದ ಅಥವಾ ನಿಗ್ರಹಿಸಲಾಗದ ಯುದ್ಧವೊಂದು ವ್ಯಾಪಿಸಿಬಿಡುವುದರ ಕುರಿತು ಅವರಿಗೆ ಭೀತಿಯಿತ್ತು, ಈ ಭೀತಿಯಿಂದ ವಸಾಹತುಶಾಹಿಗಳು ಸುಲಭಕ್ಕೆ ಹೊರಬರಲಾಗಲಿಲ್ಲ. 

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಸುಂಡಾದಲ್ಲಿ ಬ್ರಿಟೀಷ್ ಸೈನ್ಯವನ್ನು ಇರಿಸಬೇಕೆಂದು ಕೆನರಾದ ಕಲೆಕ್ಟರ್ ಕ್ಯಾಮರೂನ್ 1832ರಿಂದೀಚೆಗೆ ನಿರಂತರವಾಗಿ ಮೊರೆ ಹೋಗಿದ್ದು ಈ ಭೀತಿಗೆ ಉದಾಹರಣೆ. ಖಜಾನೆಯನ್ನಿರಿಸಲಾಗಿದ್ದ ಬಿಳ್ಗಿಯ ಮೇಲೆ ದಾಳಿ ನಡೆಯಬಹುದೆಂಬ ನಿರೀಕ್ಷೆಯಿಂದ, 1833ರ ಜನವರಿಯಲ್ಲಿ ಕ್ಯಾಮರೂನ್, ಬ್ರಿಟೀಷ್ ಪಡೆಗಳು ಶಿರಸಿಯನ್ನು ತಲುಪುವುದಕ್ಕೆ ಮುಂಚೆಯೇ ಈ ರೀತಿ ಬರೆಯುತ್ತಾನೆ: “ತಾಲ್ಲೂಕಿನ ವನ್ಯ ಗುಣ ಮತ್ತು ಸಾಂದ್ರತೆಯಿಲ್ಲದ ಜನಸಂಖೈಯ ಬಗ್ಗೆ ಸರಕಾರಕ್ಕೆ ಗೊತ್ತಿದೆ. ಧೃಡ ನಿರ್ಧಾರದ ಜನರು ಅದನ್ನು ಒಮ್ಮೆ ವಶಪಡಿಸಿಕೊಂಡುಬಿಟ್ಟರೆ, ಹಸಿವನ್ನೊರತುಪಡಿಸಿ ಮತ್ಯಾವುದಕ್ಕೂ ಅವರನ್ನು ಅಲ್ಲಿಂದ ಹೊರಹಾಕಲು ಶಕ್ಯವಿಲ್ಲ”. (181) 

ಯುದ್ಧ ಉಂಟುಮಾಡಿದ ಅಸಹನೆ ಮತ್ತು ಮೂಡಿಸಿದ ಸಿಟ್ಟು, ಇದಕ್ಕೆ ಯುದ್ಧ ನಡೆದ ರೀತಿಯೂ ಕಾರಣ, ಹಲವು ಸಲ ಬ್ರಿಟೀಷರಿಗೆ “ಚದುರುವಿಕೆ” ಅಥವಾ “ಹಿಮ್ಮೆಟ್ಟುವಿಕೆ”ಯನ್ನು “ಸೋಲೆಂದು” ಪರಿಗಣಿಸುವಂತೆ ಮಾಡಿಬಿಟ್ಟಿತು. ಯುದ್ಧವನ್ನಿನ್ನೇನು ಗೆದ್ದೇ ಬಿಟ್ಟೆವು ಎಂಬ ಭ್ರಮೆಯಲ್ಲೇ ಕಾಸಾಮೈಯೂರ್ ಇರುತ್ತಿದ್ದ ಮತ್ತು ತನ್ನ ಗೆಳೆಯರೊಂದಿಗೆ ಈ ರೀತಿಯ ಆಶಾದಾಯಕ ಮಾತುಗಳನ್ನೇ ಆಡುತ್ತಿದ್ದ; ಇನ್ನೇನು ಶಾಂತಿಯ ಸ್ಥಾಪನೆಯಾಗಿಬಿಟ್ಟಿತು ಮತ್ತು ಕಂದಾಯವನ್ನು ನಿಯಮಿತವಾಗಿ ಸಂಗ್ರಹಿಸಲಾಗುತ್ತದೆ ಎಂದವರಿಗೆ ಭರವಸೆ ನೀಡುತ್ತಿದ್ದ. ಅರಣ್ಯದಲ್ಲಿ ಚೂರು ಪಾರು ಗುದ್ದಾಟಗಳಿವೆಯಷ್ಟೇ ಎನ್ನುತ್ತಿದ್ದ. ಹಾಗಾಗ್ಯೂ, ಇದೇ ಕಾಸಾಮೈಯೂರ್ ಅತಿ ಶೀಘ್ರವಾಗಿ ತನ್ನದೇ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಮಾತನಾಡಿದ ಮತ್ತು ರೈತರ ಬಂಡಾಯವನ್ನು ಹತ್ತಿಕ್ಕಲು ದೊಡ್ಡ ಮಟ್ಟದ ಸೈನ್ಯದ ಅವಶ್ಯಕತೆಯಿದೆ ಎಂದು ಹೇಳಲಾರಂಭಿಸಿದ. 

1830-31ರ ಮರಣದಂಡನೆಗಳು ನಡೆದ ನಂತರ ಮತ್ತು ರಾಜ ತನ್ನ ರಕ್ತಸಿಕ್ತ ಪ್ರವಾಸವನ್ನು ಮುಗಿಸಿ ಮರಳುವ ಹಾದಿಯಲ್ಲಿದ್ದಾಗ ಕಾಸಾಮೈಯೂರ್ ಬರೆಯುತ್ತಾನೆ: “ರಾಜನಿಗೆ ಕಳೆದೊಂದು ವಾರದಿಂದ ಕೆಲವು ತಾಲ್ಲೂಕುಗಳಿಂದ ತಲುಪಿರುವ ವರದಿಗಳು ಬಂಡಾಯದ ಆತ್ಮವನ್ನು ಮುರಿಯಲಾಗಿದೆ ಮತ್ತದನ್ನು ನಿಗ್ರಹಿಸಲಾಗಿದೆ ಎಂದು ಸೂಚಿಸುತ್ತಿತ್ತು; ನಗರದ ಕೆಲವು ತಾಲ್ಲೂಕುಗಳನ್ನು ಹೊರತುಪಡಿಸಿದರೆ ಕೂಟದ ರೈತರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ ಮತ್ತು ತೆರಿಗೆ ಸಂಗ್ರಹವು ಶುರುವಾಗಿದೆ”. (182) 

ವಾಸ್ತವದಲ್ಲಿ, ಕೈಗೊಂಬೆ ರಾಜನು ನಡೆಸಿದ ಈ ಪ್ರವಾಸವು ರೈತರ ಗೆರಿಲ್ಲಾ ಯುದ್ಧದಾರಂಭವನ್ನು ಉದ್ಘಾಟಿಸಿತು. ಮೇಲಿನ ಮಾತುಗಳನ್ನು ಹೇಳಿದ ಕೆಲವೇ ದಿನಗಳಲ್ಲಿ ಕಾಸಾಮೈಯೂರ್ “ನಿಗ್ರಹಿಸಲಾದ” ಅದೇ ಪ್ರದೇಶಗಳಿಗೆ ಸಾವಿರ ಜನರ ಪಡೆಗಳನ್ನು ನಿಯೋಜಿಸಿದ. 

ಮತ್ತ, 1831ರ ಏಪ್ರಿಲ್ಲಿನಲ್ಲಿ ಕಾಸಾಮೈಯೂರ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ: “ಶಿವಮೊಗ್ಗದ ದಿವಾನರಿಂದ ಮೈಸೂರಿನ ಘನತೆವೆತ್ತ ಮಹಾರಾಜರು ಸ್ವೀಕರಿಸುತ್ತಿರುವ ಮೊತ್ತವು ಹೆಚ್ಚುತ್ತಿದೆ ಮತ್ತು ಉತ್ತರದ ತಾಲ್ಲೂಕುಗಳಲ್ಲಿ ಶಾಂತಿಯ ಸ್ಥಾಪನೆ ಅತಿ ಶೀಘ್ರದಲ್ಲಿ ಆಗುತ್ತದೆ ಎಂದು ನಿರೀಕ್ಷಿಸಬಹುದು. ಬಂಡಾಯವು ಅಸ್ತಿತ್ವದಲ್ಲಿದ್ದ ಶಿವಮೊಗ್ಗ, ಹೊಳೆ ಹೊನ್ನೂರು, ತರೀಕರೆ, ಅಜ್ಜಂಪುರ, ಹೊನ್ನಾಳಿ, ಶಿಕಾರಿಪುರ, ಅನವಟ್ಟಿ, ಚೆನ್ನಗಿರಿ, ಬಸವಾಪಟ್ಟಣ, ಹರಿಹರ, ಚಿಕ್ಕಮಗಳೂರು, ಈಗಟ್ಟಿ ಮತ್ತು ಕಡೂರು ತಾಲ್ಲೂಕುಗಳಲ್ಲಿ ಈಗ ಕಂದಾಯ ಸಂಗ್ರಹವು ಪ್ರಗತಿಯಲ್ಲಿದೆ ಮತ್ತು ಪಾಳೇಗಾರರನ್ನು ಉಚ್ಛಾಟಿಸಲಾದ ಇತರೆ ಎಲ್ಲಾ ತಾಲ್ಲೂಕುಗಳಲ್ಲೂ, ನಿವಾಸಿಗಳು ತಮ್ಮ ಭೂಮಿಗೆ ಹಿಂದಿರುಗಿದ್ದಾರೆ ಮತ್ತು ಸ್ವಯಂಪ್ರೇರಿತರಾಗಿ ಸರಕಾರದೊಂದಿಗಿನ ವ್ಯವಹಾರವನ್ನು ಮತ್ತೆ ಪ್ರಾರಂಭಿಸಿದ್ದಾರೆ.....” (183) 

ಮತ್ತೆ ಕಾಸಾಮೈಯೂರ್ ಅಗತ್ಯಕ್ಕಿಂತ ಹೆಚ್ಚು ಭ್ರಮೆಯಲ್ಲಿದ್ದ. ವಾಸ್ತವದಲ್ಲಿ, ಆ ವರುಷ ಕಂದಾಯ ಸಂಗ್ರಹವು ಹೆಚ್ಚು ಕಡಿಮೆ ನಿಂತೇ ಹೋಗಿತ್ತು ಮತ್ತು ಸಾಮೂಹಿಕ ಚಳುವಳಿಯು ವ್ಯಾಪಕ ಸಶಸ್ತ್ರ ಹೋರಾಟವಾಗಿ ಉನ್ನತಿ ಹೊಂದಿತು. 

ಮತ್ತೊಂದು ಸಂದರ್ಭದಲ್ಲಿ, ಕಾಸಾಮೈಯೂರ್ ಬರೆಯುತ್ತಾನೆ: “25 ತಾಲ್ಲೂಕುಗಳ ನಗರ ಫೌಜುದಾರಿಯ 24 ತಾಲ್ಲೂಕುಗಳಲ್ಲಿ, ಅಮಲ್ದಾರರು ಮತ್ತು ಸ್ಥಾಪಿತರಾಗಿದ್ದಾರೆ, ಶಾಂತಿಯ ಸ್ಥಾಪನೆಯಾಗಿದೆ; ಲಕ್ಕವಳ್ಳಿ ತಾಲ್ಲೂಕಿನಲ್ಲಿ ಮಾತ್ರ ಇದು ಸಾಧ್ಯವಾಗಿಲ್ಲ....”. (184) 

ಮೊದಲ ಸೈನಿಕ ಕಾರ್ಯಾಚರಣೆ ಮುಗಿದ ನಂತರ, ಕಾಸಾಮೈಯೂರ್ ಬರೆಯುತ್ತಾನೆ: “ನಿವಾಸಿಗಳಲ್ಲಿದ್ದ ಬಂಡಾಯ ಮತ್ತು ಅಸಮಾಧಾನವನ್ನು ಈಗ ಅಡಗಿಸಲಾಗಿದೆ ಮತ್ತು ಸಕ್ರಿಯ ಹಾಗೂ ಜಾಗರೂಕ ಆಡಳಿತವಿರುವಾಗ ಮತ್ತೆ ಬಂಡಾಯವೇಳುವ ಅಪಾಯಗಳಿಲ್ಲ”. (185) 

ಆದರೆ ನಡೆದ ಘಟನೆಗಳು ಈ ಭರವಸೆಗೆ ತದ್ವಿರುದ್ದವಾಗಿದ್ದವು. 

ಈ ಹೇಳಿಕೆಗಳು ತನ್ನ ಜೊತೆಗಾರರನ್ನು ಖುಷಿಯಾಗಿರಿಸಲು ರೆಸೆಡೆಂಟ್ ನೀಡಿದ್ದಲ್ಲ. ತಾನು ಬರೆದ ಪ್ರತಿ ಪದವನ್ನೂ ಆತ ನಂಬಿದ್ದ. ಶಾಮ ರಾವ್ ಹೇಳುತ್ತಾರೆ: “….ರೆಸೆಡೆಂಟ್ ಮತ್ತು ದಿವಾನ ನಗರ ದೊಡ್ಡ ಸಂಖೈಯ ರೈತರೊಡನೆ ಸಂವಾದ ನಡೆಸುತ್ತಾರೆ ಮತ್ತು ಕೃಷಿ ನಡೆಸಿದ ಭೂಮಿಯ ತೆರಿಗೆಯನ್ನು ಮಾತ್ರ ಸಂಗ್ರಹಿಸಬೇಕು ಹಾಗೂ ಎಲ್ಲಾ ಖರಾಬು ಭೂಮಿ ತೆರಿಗೆಯನ್ನು ಮನ್ನಾ ಮಾಡಬೇಕೆಂಬ ಒಪ್ಪಂದಕ್ಕೆ ಬರುತ್ತಾರೆ. ‘ಬಿಟ್ಟಿ’ ಅಥವಾ ಕೂಲಿಯಿಲ್ಲದ ಕೆಲಸವನ್ನು ಅಧಿಕಾರಿಗಳು ತಮ್ಮ ಖಾಸಗಿ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ ಎಂಬ ಒಪ್ಪಂದಕ್ಕೆ ಬರುತ್ತಾರೆ. ಶಿವಮೊಗ್ಗಕ್ಕೆ ನಾನು ಬಂದ ನಂತರ ಶಾಂತಿ ಸ್ಥಾಪನೆಗಾಗಿ ತೆಗೆದುಕೊಂಡ ಕ್ರಮಗಳು ಆಶಾದಾಯಕವಾಗಿವೆ ಎಂದು ಕಾಸಾಮೈಯೂರ್ ಮೇ ಮೂವತ್ತರಂದು ಮದ್ರಾಸಿನ ಸರಕಾರಕ್ಕೆ ಮಾಹಿತಿ ನೀಡುತ್ತಾನೆ; ಹೆಚ್ಚುವರಿ ಪಡೆಗಳ ಅವಶ್ಯಕತೆ ಇನ್ನಿಲ್ಲ ಎಂದು ತಿಳಿಸುತ್ತಾನೆ. ಕಂಪನಿಯ ದೊಡ್ಡ ಪಡೆಗಳ ಉಪಯುಕ್ತತೆ ಇನ್ನಿಲ್ಲ ಎಂದು ನಂಬುವ ರೆಸೆಡೆಂಟ್ ಜೂನ್ 12ರಂದು ಕ್ಯಾಪ್ಟನ್ ಕ್ಲೆಮನ್ಸ್ ನೇತೃತ್ವದಲ್ಲಿ 300 ಸಿಪಾಯಿಗಳ ಪಡೆಯನ್ನಿರಿಸಿ ಉಳಿದ ಪಡೆಯನ್ನು ಮಳೆಗಾಲ ಶುರುವಾಗುವದರೊಳಗೆ ಬೆಂಗಳೂರು ಮತ್ತು ಹರಿಹರದ ಕಡೆಗೆ ಕಳುಹಿಸುತ್ತೇನೆ”. (186) 

ಬ್ರಿಟೀಷ್ ವಸಾಹತುಶಾಹಿ ತುಂಬಾ ಗಂಭೀರವಾದ ಬಿಕ್ಕಟ್ಟಿನಲ್ಲಿತ್ತು. ತನ್ನದೇ ಮಾತುಗಳನ್ನು ನುಂಗಿಕೊಳ್ಳುವುದರ ಹೊರತಾಗಿ ಕಾಸಾಮೈಯೂರ್ ಇನ್ನೂ ಉತ್ತಮ ಕೆಲಸವನ್ನು ಮಾಡಬಹುದಿತ್ತು; ತನ್ನ ಹಾಗೂ ತನ್ನ ಹಿರಿಯ ಅಧಿಕಾರಿಗಳು ನಿರಾಶೆಯಿಂದ ಗೊಂದಲಕ್ಕೊಳಗಾಗುವುದನ್ನು ತಪ್ಪಿಸಬಹುದಿತ್ತು. ಸಶಸ್ತ್ರ ಹೋರಾಟವು ಆರಂಭಗೊಳ್ಳುವುದಕ್ಕೂ ಮೊದಲು 1830ರ ಡಿಸೆಂಬರ್ 6ರಂದು ತಾನೇ ಬರೆದಿದ್ದ ಪದಗಳೆಡೆಗೆ ಇನ್ನೂ ಹೆಚ್ಚಿನ ಗಮನವನ್ನು ನೀಡಬಹುದಿತ್ತು ಕಾಸಾಮೈಯೂರ್. ಕಲ್ಕತ್ತಾದ ಮುಖ್ಯ ಕಾರ್ಯದರ್ಶಿಗೆ ಕಾಸಾಮೈಯೂರ್ “….ಬಂಡಾಯದ ಸ್ಪೂರ್ತಿಯನ್ನು ಕೆರಳಿಸುವಷ್ಟು ಸುಲಭವಾಗಿ ಅದನ್ನು ಶಾಂತಗೊಳಿಸಲಾಗದು” ಎಂದು ಬರೆದಿದ್ದ. (187) 

ಈ ಎಲ್ಲಾ ಕಹಿ ಅನುಭವಗಳ ಒಟ್ಟು ಪರಿಣಾಮದ ಕಾರಣದಿಂದ ಬ್ರಿಟೀಷ್ ಅಧಿಕಾರಿಗಳು 1857ರ ಹೋರಾಟದಲ್ಲಿ ಗೆರಿಲ್ಲಾ ಯುದ್ಧವು ಶುರುವಾಗಿಬಿಡಬಹುದೆಂದು ಭಯಭೀತರಾಗಿದ್ದರು. ಏಂಜೆಲ್ಸ್ ಬರೆದಂತೆ, “ಗೆರಿಲ್ಲಾ ಯುದ್ಧತಂತ್ರವು….. ಪ್ರಸ್ತುತ ಯುದ್ಧ ಮತ್ತು ಮುತ್ತಿಗೆಗಳಿಗಿಂತ ಬ್ರಿಟೀಷರಿಗೆ ಹೆಚ್ಚಿನ ಹಿಂಸೆಯನ್ನುಂಟುಮಾಡುತ್ತದೆ ಹಾಗೂ ಹೆಚ್ಚು ಹಾನಿಕಾರಕವಾಗುತ್ತದೆ” ಎಂದು ಬ್ರಿಟೀಷರು ನಿರೀಕ್ಷಿಸಿದ್ದರು. (188)

ಮುಂದಿನ ವಾರ: ಸಶಸ್ತ್ರ ಹೋರಾಟದ ಅಂತ್ಯ

No comments:

Post a Comment