Nov 25, 2016

ಮೇಕಿಂಗ್ ಹಿಸ್ಟರಿ: ಊಳಿಗಮಾನ್ಯತೆಗೆ ಹೊಡೆತಗಳು ಬಿದ್ದಾಗ

ashok k r
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಊಳಿಗಮಾನ್ಯತೆಯನ್ನು ಎರಡು ರೀತಿಯಿಂದ ಗುರಿಯಾಗಿಸಲಾಗಿತ್ತು. ಒಂದನ್ನು ಸುಲಭವಾಗಿ ಗುರುತಿಸಬಹುದಿತ್ತು. ಊಳಿಗಮಾನ್ಯ ವರ್ಗಗಳ ಮೇಲೆ ಸತತವಾಗಿ ನಡೆದ ದಾಳಿಯದು. ಎರಡನೆಯ ರೀತಿ ಸೂಕ್ಷ್ಮವಾಗಿತ್ತು ಮತ್ತು ಅದು ಒಂದು ಸಂದರ್ಭದಲ್ಲಿ ತುಂಬಾ ಖಚಿತವಾಗಿ ತೋರಿಸಿಕೊಂಡಿತಾದರೂ ಅದರ ಬಗ್ಗೆ ನಮ್ಮಲ್ಲಿ ತುಂಬಾ ಸಾಕ್ಷ್ಯಗಳಿಲ್ಲ. ಈ ಎರಡನೆಯ ಅಂಶವನ್ನು ಮೊದಲು ಪರೀಕ್ಷಿಸೋಣ. 

ಸಂಗೊಳ್ಳಿ ರಾಯಣ್ಣ ಪರಿಚಯಿಸಿದ ರೀತಿಯಲ್ಲಿಯೇ, ಹೊಸಂತೆಯಲ್ಲಿ ನಡೆದ ರೈತ ರ್ಯಾಲಿಯಲ್ಲಿ, ಎಲ್ಲಾ ರೈತರು, ತಮ್ಮ ನಡುವಿನ ಜಾತಿ ಭೇದದ ನಡುವೆಯೂ ಸಹಭೋಜನ ನಡೆಸಿದ್ದರು. (120) ವ್ಯಾಪಕ ಜನ ಸಮೂಹ ಜೊತೆಯಾದಾಗ, ಊಳಿಗಮಾನ್ಯತೆ ವಿಧಿಸಿದ್ದ ಕಟ್ಟಳೆಗಳಲ್ಲಿ ಸಂಪೂರ್ಣ ವಿರುದ್ಧ ದಿಕ್ಕಿನ ಮೌಲ್ಯಗಳು ಮತ್ತು ಗ್ರಹಿಕೆಗಳೊಡನೆ ಜೊತೆಯಾಗುತ್ತಿತ್ತು. ಈ ಹೊಸ ಪರಂಪರೆಯು, ದಮನಿತರ ನಡುವಿನ ಒಗ್ಗಟ್ಟನ್ನು ದೃಡಗೊಳಿಸುತ್ತಿತ್ತು ಮತ್ತು ಮೇಲ್ಜಾತಿಯ ಊಳಿಗಮಾನ್ಯ ಮನಸ್ಥಿತಿಯ ವಿರುದ್ಧ ಬಹಿರಂಗವಾಗಿ ದೃಢವಾಗಿ ದಾಳಿ ನಡೆಸುವಂತೆ ಮಾಡುತ್ತಿತ್ತು. 
ಈ ಸಂಪುಟದ ಪ್ರಾರಂಭದ ಅಧ್ಯಾಯಗಳಲ್ಲಿ ನಾವೀಗಾಗಲೇ ನೋಡಿರುವಂತೆ, ವಸಾಹತುಶಾಹಿಯ ಮಧ್ಯಸ್ಥಿಕೆ ವಹಿಸಿದ್ದು ಊಳಿಗಮಾನ್ಯತೆ. ವಸಾಹತು ನಡೆಸಿದ ಲೂಟಿಯನ್ನು ರೈತ ಸಮೂಹಗಳು ಭೂಮಾಲೀಕರ ಲೂಟಿಯ ಮುಂದುವರೆದ ಭಾಗವೆಂದೇ ಗ್ರಹಿಸಿದ್ದರು; ಕಾರಣ ಭೂಮಾಲೀಕರ ಮೂಲಕವೇ ವಸಾಹತುಶಾಹಿ ರೈತರನ್ನು ದೋಚಿದ್ದು. ಹಳ್ಳಿಯ ಮಟ್ಟದಲ್ಲಿ ಕಂದಾಯ ಸಂಗ್ರಹಿಸುತ್ತಿದ್ದ ಅತಿ ಕಿರಿಯ ಅಧಿಕಾರಿಯೆಂದರೆ ಅದು ಪಟೇಲ ಮತ್ತು ಶಾನುಭೋಗ. 

ಕೂಟದ ರಚನೆ ಮತ್ತು ಸಮೂಹ ಕಾರ್ಯಾಚರಣೆಯಿಂದಾಗಿ ಆಡಳಿತಯಂತ್ರಕ್ಕೆ ಲಕ್ವ ಹೊಡೆದಾಗ ಉಂಟಾದ ಮೊದಲ ಆರ್ಥಿಕ ಪರಿಣಾಮವೆಂದರೆ ಸರಕಾರಕ್ಕೆ ಹೋಗುತ್ತಿದ್ದ ಆದಾಯವೆಲ್ಲವೂ ನಿಂತುಹೋಗಿದ್ದು. ಉಗ್ರ ಪ್ರವಾಸವು ಈ ಲಕ್ವಾವನ್ನು ಕೊಂಚ ಮಟ್ಟಿಗೆ ಉಪಚರಿಸಲು ಪ್ರಯತ್ನಿಸಿತ್ತು. ತತ್ ಕ್ಷಣವೇ ಯುದ್ಧವನ್ನು ಘೋಷಿಸಲಾಯಿತು ಮತ್ತು ಬ್ರಿಟೀಷ್ ವಸಾಹತುಶಾಹಿ ಅದೇ ಸಮಯದಲ್ಲಿ ತಮ್ಮ ಪಡೆಗಳನ್ನು ಮುಂದುವರೆಸಿದರು ಹಾಗೂ ಅಧಿಕಾರಶಾಹಿಯು ಕಂದಾಯ ಮಾಪನವನ್ನು ನಡೆಸಿ ಹಳ್ಳಿಯ ಪಟೇಲರು ಮತ್ತು ಶಾನುಭೋಗರ ನಡುವೆ ಒಪ್ಪಂದಕ್ಕೆ ಬಂದರು, ಭೂಕಂದಾಯದ ಮೊದಲ ಕಂತನ್ನು ರೈತರಿಂದ ಸಂಗ್ರಹಿಸುವುದಕ್ಕಾಗಿ. ಸರಕಾರದ ಆದಾಯ ಮೂಲಗಳನ್ನು ಸ್ಥಗಿತಗೊಳಿಸುವ ರೈತ ಸಮೂಹದ ದೃಢ ನಿರ್ಧಾರವು, ಊಳಿಗಮಾನ್ಯ ಆಸಕ್ತಿಗಳು ವಸಾಹತುಶಾಹಿಯೊಡನೆ ಮಾಡಿಕೊಂಡ ಒಪ್ಪಂದದ ಪರಿಣಾಮವಾಗಿ ಹಾಳಾಯಿತು. ಒಂದೆಡೆ ಗೆರಿಲ್ಲಾ ಯುದ್ಧದ ಮೂಲಕ ಸೈನಿಕ ಕಾರ್ಯಾಚರಣೆಗೆ ಪ್ರತಿರೋಧ ಒಡ್ಡುತ್ತಿದ್ದರೆ, ಮತ್ತೊಂದೆಡೆ ಸಶಸ್ತ್ರ ಚಳುವಳಿಯು ಅದೇ ಸಮಯದಲ್ಲಿ ವಸಾಹತು ಆಸಕ್ತಿಗಳ ಜೊತೆಗೆ ಕೈಜೋಡಿಸಿದ್ದ ಊಳಿಗಮಾನ್ಯತೆಯ ಮೇಲೂ ಹಳ್ಳಿಗಳ ಮಟ್ಟದಲ್ಲಿ ದಾಳಿ ನಡೆಸುತ್ತಿತ್ತು – ಪ್ರಮುಖವಾಗಿ ಪಟೇಲರು ಮತ್ತು ಶಾನುಭೋಗರ ಮೇಲೆ. 

1831ರ ಮೇ 20ರಂದು ಬರೆದಿದ್ದ ಪತ್ರದಲ್ಲಿ, ಹಳ್ಳಿಗಳಲ್ಲಿ ಕಂದಾಯ ಸಂಗ್ರಹವನ್ನು ಪುನರ್ ಸ್ಥಾಪಿಸುವುದಕ್ಕಾಗಿ ನಗರದಲ್ಲಿ ಪ್ರವಾಸ ಮಾಡುತ್ತಿದ್ದ ಕಾಸಾಮೈಯೂರ್ ಬರೆಯುತ್ತಾನೆ: “ತರೀಕೆರೆ, ಬಂಕಿಪುರ ಮತ್ತು ಹೊಳೆಹೊನ್ನೂರು ತಾಲ್ಲೂಕುಗಳ ಪಟೇಲರು ಮತ್ತು ಗೌಡರೊಡನೆ ನಡೆಸಿದ ಮಾತುಕತೆಯಿಂದಾಗಿ ದಂಗೆಕೋರರಿಗೆ ನಿವಾಸಿಗಳಿಂದ ಪ್ರತಿಕೂಲ ವಾತಾವರಣವಿರುವುದು ಸಾಮಾನ್ಯವಾಗಿದೆ ಎಂದು ತಿಳಿದು ನನ್ನಲ್ಲಿ ಭರವಸೆ ಮೂಡಿದೆ…..ಮೈಸೂರು ಸರ್ಕಾರ ಮುಂದಿಟ್ಟಿರುವ ಕೌಲಿನ ಶರತ್ತುಗಳನ್ನು ಒಪ್ಪಿಕೊಳ್ಳುವ ಇಚ್ಛೆಯನ್ನವರು ವ್ಯಕ್ತಪಡಿಸಿದರು ಮತ್ತು ಉಳಿಕೆ ಹಣವನ್ನು ಕಂತುಗಳಲ್ಲಿ ಕಟ್ಟಲು ಒಪ್ಪಿಕೊಂಡರು, ಆದರೆ ಈ ಒಪ್ಪಂದಗಳಿಗೆ ಒಪ್ಪಲು ಅವರಿಗಿರುವ ಭಯ ದಂಗೆಕೋರರಲ್ಲಿದ್ದ ವೈರತ್ವದ ಭಾವನೆ….” (121) 

ಮೊದಲ ಸೈನಿಕ ಕಾರ್ಯಾಚರಣೆಯು ಕೊನೆಗೊಳ್ಳುವ ಸಂದರ್ಭದಲ್ಲಿ, ಗವರ್ನರ್ ಜೆನರಲ್ಲರ ಕಾರ್ಯದರ್ಶಿ ಬರೆಯುತ್ತಾನೆ: “ಈ ಪ್ರಸಕ್ತ ಕೋಪೋದ್ರಿಕ್ತ ಪರಿಸ್ಥಿತಿಯು ಇರುವುದರಲ್ಲಿ ಮೈಸೂರು ಸರಕಾರದ ಪಾತ್ರವೂ ಇದೆ ಎಂದು ನಾನು ನಂಬಿದ್ದೇನೆ, ಅವರು ರಕ್ಷಣೆಯನ್ನು ಸರಿಯಾಗಿ ನೀಡುತ್ತಿಲ್ಲ….. ರಕ್ತಪಾತದ ಅಸಹ್ಯಕರ ದೃಶ್ಯಗಳು [ಗೆರಿಲ್ಲಾ ಯುದ್ಧದಲ್ಲಿ ಭೂಮಾಲೀಕರ ಮೇಲೆ ನಡೆದ ದಾಳಿ] ಮತ್ತು ಕಂದಾಯ ಕಟ್ಟಿರುವ ಹಾಗೂ ಹಳ್ಳಿಗಳಲ್ಲೇ ಉಳಿದಿರುವ ನರ್ದೋಷಿ ರೈತರ ಮೇಲಿನ ಕ್ರೂರತೆಯನ್ನು ದಂಗೆಕೋರರು ಮತ್ತಷ್ಟು ಮುಂದುವರಿಸುತ್ತಾರೆ ಎಂದು ಹೇಳಲು ವಿಷಾದಿಸುತ್ತೇನೆ. ಅವರನ್ನು ಸೈನಿಕರು ರಕ್ಷಿಸದೇ ಹೋದಲ್ಲಿ, ಶಸ್ತ್ರ ಹೊಂದಿರುವ ದಂಗೆಕೋರರ ಜೊತೆಗೆ ಕೈಜೋಡಿಸದೇ ಅವರಿಗೆ ಮತ್ಯಾವ ದಾರಿಯೂ ಉಳಿದಿರುವುದಿಲ್ಲ”. (122) 

ಚಳುವಳಿಗಿದ್ದ ಊಳಿಗಮಾನ್ಯ ವಿರೋಧಿ ಗುಣಗಳ ಬಗ್ಗೆ ಮತ್ತಷ್ಟು ಉದಾಹರಣೆಯನ್ನು ಚಿಕ್ಕಮಗಳೂರು ಮತ್ತು ವಸ್ತಾರೆಯಿಂದ ಹೆಕ್ಕಿ ಕೊಡುತ್ತಾರೆ ಬಿ.ಎಸ್.ರಾಮಭಟ್ಟ. ಅವರು ಬರೆಯುತ್ತಾರೆ: “ಬಂಡಾಯಗಾರರು ಶ್ರೀಮಂತರ ಮನೆಗಳಿಂದ ಕಾಳುಗಳನ್ನು ಹೊರತಂದರು ಮತ್ತದನ್ನು ಬಡ ರೈತರಿಗೆ ಹಂಚಿದರು. ಅವರ ಜಮೀನುಗಳಲ್ಲಿದ್ದ ಬೆಳೆಗಳನ್ನು ಕಟಾವು ಮಾಡಿ ಗುತ್ತಿಗೆದಾರರ ಮನೆಗಳಿಗೆ ಹೊತ್ತೊಯ್ದರು.” (123) ವಸಾಹತುಶಾಹಿಯ ಜೊತೆ ಕೈಜೋಡಿಸಿದ್ದ ಊಳಿಗಮಾನ್ಯ ಶಕ್ತಿಗಳ ವಿರುದ್ಧ ದಾಳಿ ನಡೆಯುತ್ತಿತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಮತ್ತು ಪತನದ ಹಾದಿಯಲ್ಲಿದ್ದ ಈ ವರ್ಗವು ತನ್ನ ರಕ್ಷಣೆಗಾಗಿ ದೀನತೆಯಿಂದ ವಸಾಹತು ಪ್ರಭುತ್ವದ ಕಡೆಗೆ ನೋಡಿತು. ಗೆರಿಲ್ಲಾ ಯುದ್ಧವು ನಡೆದ ಸಮಯದುದ್ದಕ್ಕೂ ಈ ರೀತಿಯ ಊಳಿಗಮಾನ್ಯ ವಿರೋಧಿತನದ ಕಾವಿದ್ದ ಬಗ್ಗೆ ಅನುಮಾನಗಳಿಲ್ಲ, ಇದು ಗೆರಿಲ್ಲಾ ಯುದ್ಧವು ಅಸ್ತಿತ್ವದಲ್ಲಿರುವುದಕ್ಕಿದ್ದ ಮುಖ್ಯ ತಳಹದಿಯಾಗಿತ್ತು ಮತ್ತು ಇದರಿಂದ ರೈತ ಸಮೂಹದ ಬೆಂಬಲವು ದೊರಕುತ್ತಿತ್ತು. 

ಸಶಸ್ತ್ರ ಹೋರಾಟಕ್ಕಿದ್ದ ಊಳಿಗಮಾನ್ಯ ವಿರೋಧಿ ನೆಲೆಯ ಬಗೆಗಿನ ಸಾಕ್ಷಿಯನ್ನು ಅನುಬಂಧ ಮೂರರಲ್ಲಿ ಕಾಣಬಹುದು. ಮುಖ್ಯ ಕಾರ್ಯದರ್ಶಿಗೆ ಬ್ರಿಗ್ಸ್ ನೀಡಿದ ಹೇಳಿಕೆಯು ನಮಗೆ ಗೆರಿಲ್ಲಾ ಹೋರಾಟಗಾರರು 1831ರ ಅಕ್ಟೋಬರ್ 27ರಿಂದ 1832ರ ಜನವರಿ 8ವರೆಗೆ – ಅಂದರೆ ಒಟ್ಟು 73 ದಿನಗಳ ಕಾಲ ನಡೆಸಿದ ಸಶಸ್ತ್ರ ಕಾರ್ಯಾಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಈ ಪಟ್ಟಿಯು ಅಮಲ್ದಾರರು ಮತ್ತು ಕೆಳಗಿನ ಅಧಿಕಾರಿಗಳು ಈ ಎರಡೂವರೆ ತಿಂಗಳುಗಳ ಕಾಲ ಕೊಟ್ಟ ವರದಿಗಳನ್ನಾಧರಿಸಿದೆ, ಕಂಪನಿ ಮೈಸೂರು ಆಡಳಿತವನ್ನು ತನ್ನ ನೇರ ವಶಕ್ಕೆ ಪಡೆದುಕೊಂಡ ನಂತರದ ಕಾಲಾವಧಿಯಿದು. ಹೇಳಿಕೆಯ ಕೊನೆಯಲ್ಲಿ ಬ್ರಿಗ್ಸ್ ಹೇಳುತ್ತಾನೆ: “ಈ ಬಹಳಷ್ಟು ದಾಳಿಗಳ ಸ್ವಭಾವವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು, ಇದಕ್ಕೆ ಪ್ರಮುಖ ಕಾರಣ ಸ್ಥಳೀಯ ಮ್ಯಾಜಿಸ್ಟ್ರೇಟರುಗಳಾದ ಪಟೇಲರು ಮತ್ತು ಶಾನುಭೋಗರ ಮೇಲಿನ ದ್ವೇಷ ಮತ್ತು ಪರಿಹಾರ ದೊರಕುವವರೆಗೆ ಸ್ಥಳೀಯ ನಿವಾಸಿಗಳು ಕಂದಾಯವನ್ನು ಕಟ್ಟದಂತೆ ನೋಡಿಕೊಳ್ಳುವುದು”. (124) 

ಹಾಗಂತ ಇದು ರೈತರ ನಿರ್ಧಾರವನ್ನು ಧಿಕ್ಕರಿಸಿಬಿಡುವ ಪ್ರಶ್ನೆಯಷ್ಟೇ ಆಗಿರಲಿಲ್ಲ. ಈ ಪಟ್ಟು ಸಡಿಲಿಸದ ಮ್ಯಾಜಿಸ್ಟ್ರೇಟರುಗಳಷ್ಟೇ ರೈತ ಸಮೂಹಕ್ಕೆ ಬಹಿರಂಗವಾಗಿ ಸವಾಲಾಕುತ್ತಿದ್ದುದು. ಮತ್ತಿದು ಸಹಜವಾಗಿತ್ತು, ಯಾಕೆಂದರೆ ಅವರು ಹಳ್ಳಿಗಳ ದೊಡ್ಡ ಭೂಮಾಲೀಕರಷ್ಟೇ ಅಲ್ಲದೆ ಸಾಮಾಜಿಕ ಕೆಲಸಗಳಲ್ಲಿ ಭಾಗವಹಿಸುವುದರಿಂದ ಒಂದು ಅಂತರವನ್ನು ಕಾಯ್ದುಕೊಂಡಿದ್ದರು. ಅವರು ಸ್ಥಳೀಯ ಮಟ್ಟದಲ್ಲಿ ಹಿಂಸೆಯನ್ನು ಹರಡುತ್ತಿದ್ದ ದುಷ್ಟರು, ಶೋಷಿತ ರೈತ ಸಮೂಹದ ಗಂಡಸರು, ಹೆಂಗಸರು ಮತ್ತು ಮಕ್ಕಳಿಗೆ ಶಿಕ್ಷೆ ನೀಡುತ್ತಿದ್ದರು, ಕಿರುಕುಳ ಕೊಡುತ್ತಿದ್ದರು. 

ಕೇವಲ 73 ದಿನಗಳಲ್ಲಿ ಗೆರಿಲ್ಲಾಗಳು 86 ಸೈನಿಕ ಕಾರ್ಯಾಚರಣೆ ಕೈಗೊಂಡರು ಎಂಬಂಶ ಸಶಸ್ತ್ರ ಹೋರಾಟದ ತೀವ್ರತೆ ಎಷ್ಟಿತ್ತೆಂಬುದನ್ನು ಸಾದರಪಡಿಸುತ್ತದೆ. ಇದರಲ್ಲಿ ಕಡಿಮೆಯೆಂದರೂ 70 ಪ್ರತಿಶತಃದಷ್ಟು ದಾಳಿಗಳು ನಡೆದದ್ದು ಪಟೇಲರು, ಶಾನುಭೋಗರು, ಉಳಿಕೆ ಭೂಮಾಲೀಕರು ಮತ್ತು ಬಡ್ಡಿ ವ್ಯಾಪಾರಿಗಳ ವಿರುದ್ಧ. ಹಾಗಾಗಿ ಈ ಸಶಸ್ತ್ರ ಹೋರಾಟವು ದಿನಕ್ಕೊಂದಕ್ಕಿಂತ ಹೆಚ್ಚು ದಾಳಿ ನಡೆಸುವುದರಲ್ಲಿ ತೋರಿಸಿದಷ್ಟೇ ತೀವ್ರತೆಯನ್ನು ಊಳಿಗಮಾನ್ಯತೆಯ ಮೇಲೆ ನಡೆಸಿದ ದಾಳಿಯಲ್ಲೂ ತೀವ್ರತೆ ತೋರಿಸಿತು, ಊಳಿಗಮಾನ್ಯತೆಗೆ ಮೇಲಿನಿಂದ ಕೆಳಗಿನವರೆಗೂ ಛಡಿ ಏಟು ಕೊಟ್ಟಿತು. ಊಳಿಗಮಾನ್ಯತೆಯ ಈ ಪ್ರತಿನಿಧಿಗಳನ್ನು ಒಂದೋ ಸಾಯಿಸಲಾಯಿತು, ಅಂಗವಿಹೀನರನ್ನಾಗಿ ಮಾಡಲಾಯಿತು ಮತ್ತು ಅವರ ಸಂಪತ್ತನ್ನು ವಶಪಡಿಸಿಕೊಳ್ಳಲಾಯಿತು ಅಥವಾ ನಾಶಪಡಿಸಲಾಯಿತು. 

iii) ಹಿಂಸೆ ಮತ್ತು ಪ್ರತೀಕಾರ 
ಅನುಬಂಧ ಮೂರನ್ನು ಗಮನಿಸಿದಾಗ ಮತ್ತು ಬ್ರಿಟೀಷ್ ವರದಿಗಳನ್ನು ಅಭ್ಯಸಿಸಿದಾಗ ಅಥವಾ ಆ ದಿನಗಳ ಬಗೆಗಿನ ಇತಿಹಾಸಕಾರರ ಬರಹಗಳನ್ನು ಗಮನಿಸಿದಾಗ ರೈತರು “ತೀವ್ರ” ರೀತಿಯ ಹಿಂಸಾಕೃತ್ಯಗಳನ್ನು ಅಳವಡಿಸಿಕೊಂಡಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಆಳುವ ವರ್ಗ ಮತ್ತು ಆಸ್ಥಾನ ಇತಿಹಾಸಕಾರರು ರೈತರ “ಪಾಶವೀಕೃತ್ಯ”ಗಳಿಗೆ ಬಹಿರಂಗವಾಗಿ ಧಿಕ್ಕಾರ ಕೂಗುತ್ತಾರೆ. ಬಹಳಷ್ಟು ಪ್ರಗತಿಪರ ಲೇಖಕರು, ನಗರದ ಹೋರಾಟವನ್ನು ಸಾಮಾನ್ಯವಾಗಿ ಎತ್ತಿ ಹಿಡಿಯುತ್ತಲೇ, ದಶಕಗಳ ಗಾಂಧಿವಾದದಿಂದ ಉಸಿರುಗಟ್ಟಿದಂತಾಗಿ, ರೈತರ “ಬುದ್ಧಿಗೇಡಿ” ವರ್ತನೆಗಳಿಗೊಂದು ಗಡಿಯನ್ನೆಳೆಯಬಯಸುತ್ತಾರೇನೋ. ಇನ್ನಷ್ಟು ಸೂಕ್ಷ್ಮಜ್ಞರು ಇಡೀ ಪ್ರಶ್ನೆಗೆ ಮೌನವನ್ನೇ ಉತ್ತರವನ್ನಾಗಿಸಿಬಿಡುತ್ತಾರೆ. ಆದರೆ ಈ ಎಲ್ಲಾ ವ್ಯಾಖ್ಯಾನಗಳು, ಸ್ಪಷ್ಟವಾಗಿರಲಿ ಇಲ್ಲದಿರಲಿ, ಆ ಕಾಲದ ರೈತ ಬಂಡಾಯದ ಉದ್ದೇಶಗಳ ದೃಷ್ಟಿಕೋನವನ್ನು ನೀಡಲಾರವು. ಈ ಬಲವಂತದ ಪ್ರಶ್ನೆಯನ್ನು ಅರ್ಥೈಸಿಕೊಳ್ಳಬೇಕು ಮತ್ತು ಉತ್ತರಿಸಬೇಕು: ಬಂಡಾಯವೆದ್ದವರು ಆ ರೀತಿಯಾಗಿ ವರ್ತಿಸಿದ್ದ್ಯಾಕೆ? 

ಈ ಸಂಪುಟದ ಮೊದಲ ಭಾಗದಲ್ಲಿ, ಬ್ರಿಟೀಷರು ರೈತರಿಂದ ಕಂದಾಯ ವಸೂಲಿ ಮಾಡಲು ಹಿಂಸೆಯನ್ನು ಉಪಯೋಗಿಸಿದ ಬಗೆಯನ್ನು ನಾವೀಗಾಗಲೇ ನೋಡಿದ್ದೇವೆ. ಬ್ರಿಟೀಷರು ಮತ್ತವರ ಕೈಜೋಡಿಸಿದ್ದ ರಾಜರು, ಫೌಜಿದಾರರು, ಅಮಲ್ದಾರರು ಹಾಗೂ ಶಾನುಭೋಗರು ಅವರ ಅಧಿಕಾರ ಸುರಕ್ಷಿತವಾಗಿದ್ದಾಗ ತಣ್ಣಗಿನ ಕ್ರೌರ್ಯದಿಂದ ಹಿಂಸಿಸಿ ಶೋಷಿಸಿದರು. “ದೊಂಬಿ ಮತ್ತು ಸಂಘರ್ಷದ ಸಮಯದ ಕ್ರೋಧದಲ್ಲಿ, ಅವರು ನಡೆಸಿದರೆನ್ನಲಾಗುವ ಕ್ರೌರ್ಯ ಮತ್ತು ಹಿಂಸೆಯ ಬಗ್ಗೆ ಬಂಡಾಯವೆದ್ದ ಹಿಂದೂಗಳು ಪಶ್ಚಾತ್ತಾಪ ಪಡಬೇಕಾ?”(125) 

ದಂಗೆಯ ಸಮಯದಲ್ಲಿ ಬಂಡುಕೋರರು ನಡೆಸಿದ “ಅಸಹನೀಯ” ಮತ್ತು “ತೀವ್ರವಾದ” ಕಾರ್ಯಾಚರಣೆಯ ಮೂಲವನ್ನು ಹುಡುಕುತ್ತಾ ಹೋದರೆ ಪ್ರತಿಗಾಮಿಗಳು ಆ ರೀತಿಯ ತೀಕ್ಷ್ಣ ವಿಧಾನಗಳನ್ನು ಬಹಳ ಸಾಮಾನ್ಯವಾಗಿ ಉಪಯೋಗಿಸುತ್ತಿದ್ದುದರ ಅರಿವಾಗುತ್ತದೆ. ಆದ್ದರಿಂದ ಇದು “ಇಂಗ್ಲೆಂಡ್ ಭಾರತದಲ್ಲಿ ತೋರಿದ ನಡತೆ ಪ್ರತಿಫಲನವಾಗಿತ್ತಷ್ಟೇ.” (126) 

ಮೂಳೆ ಮತ್ತು ಬೇವಿನೆಲೆಗಳನ್ನು ಹೊಯ್ಯುವ ರೈತರನ್ನು ನೇಣಿಗೇರಿಸಬೇಕೆಂಬ ಘೋಷಣೆಯನ್ನು 1830ರ ಡಿಸೆಂಬರ್ 21ರಂದು ಮಾಡಿದ ಮರುದಿನ, ಬೆಂಗಳೂರಿನ ಫೌಜುದಾರನಿಗೆ “ಪ್ರತಿ ತಾಲ್ಲೂಕಿನಲ್ಲೂ ಒಬ್ಬ ಅಥವಾ ಇಬ್ಬರನ್ನು ಹಿಡಿದು ನೇಣಿಗೇರಿಸಬೇಕು” ಎಂಬ ಸೂಚನೆ ತಲುಪಿತು. “ಬಹಳಷ್ಟು ಬಂಡಾಯಗಾರರನ್ನು ಬಂಧಿಸಿ ನೇಣಿಗೇರಿಸಲಾಯಿತು. ಕೆಲವು ಬಂಡಾಯಗಾರರ ಮೂಗು ಮತ್ತು ಕಿವಿಗಳನ್ನು ಕತ್ತರಿಸಿ ಹಾಕಿ ವಿಕಾರಿಗಳನ್ನಾಗಿ ಮಾಡಲಾಯಿತು.” (127) 

1857ರ ಭಾರತೀಯ ಬಂಡಾಯವನ್ನು ವಿಶ್ಲೇಷಿಸುತ್ತಾ, ಕಾರ್ಲ್ ಮಾರ್ಕ್ಸ್ ಬಂಡಾಯಗಾರರು ನಡೆಸಿದ ಹಿಂಸೆಯ ಬಗೆಗಿನ ಪ್ರಶ್ನೆಗೆ ಉತ್ತರ ಹುಡುಕಲೆತ್ನಿಸುತ್ತಾನೆ. ಆ ಸಮಯದ ಜನಪ್ರಿಯ ಬಂಡಾಯಗಳನ್ನು ಅಧ್ಯಯನ ಮಾಡುವಾಗ ಕಾರ್ಲ್ ಮಾರ್ಕ್ಸ್ ಮಾಡಿದ ವಿಶ್ಲೇಷಣೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು: “ಮಾನವ ಇತಿಹಾಸದಲ್ಲಿ ಪ್ರತೀಕಾರವೆಂಬುದಿದೆ; ಈ ಐತಿಹಾಸಕ ಪ್ರತೀಕಾರದ ನಿಯಮವೆಂದರೆ, ಅದು ಅಪರಾಧಿಯ ತಪ್ಪಾಗುತ್ತದೆಯೇ ಹೊರತು ನೊಂದವನ ತಪ್ಪಾಗುವುದಿಲ್ಲ.” (128)
ಮುಂದಿನ ವಾರ: ಯುದ್ಧದ ಸ್ವಭಾವ

No comments:

Post a Comment