Oct 28, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ 2

Saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಇ. ಮೊದಲ ಅಲೆ: ಕೂಟವೆಂಬ ಸಾಮೂಹಿಕ ಎಚ್ಚರಿಕೆ 
ಹೋರಾಟವು ಮೂರು ಅಲೆಗಳಾಗಿ ನಡೆಯಿತು. ಮೊದಲನೆಯದು ಸಾಮೂಹಿಕ ಚಳುವಳಿ; ಎರಡನೆಯದು ಸಾಮೂಹಿಕ ಕಾರ್ಯ, ಮತ್ತು; ಮೂರನೆಯದರಲ್ಲಿ ಸಶಸ್ತ್ರ ಹೋರಾಟ ಪ್ರಮುಖವಾಗಿತ್ತು. 

ಸಾಮೂಹಿಕ ಚಳುವಳಿ ಮತ್ತು ಹೋರಾಟಗಳು 1830ರ ಮೊದಲ ಭಾಗದಲ್ಲೇ ಪ್ರಾರಂಭವಾಯಿತು ಮತ್ತು ಹಲವಾರು ರೂಪಗಳನ್ನು ಪಡೆಯಿತು. ಇವೆಲ್ಲವುಗಳಲ್ಲಿ ಪ್ರಮುಖವಾಗಿದ್ದದ್ದು ಕೂಟ ಅಥವಾ ಸರಳವಾಗಿ ಹೇಳಬೇಕೆಂದರೆ ಜೊತೆ ಸೇರುವಿಕೆ. ಕೂಟದಲ್ಲಿ ಜೊತೆಯಾದ ಕಾರಣದಿಂದ ಸಾಮೂಹಿಕ ಎಚ್ಚರ ಹೊತ್ತಿಕೊಂಡಿತು, ಇದು ಜನಸಮೂಹವನ್ನು ಸಂಘಟತಿರಾಗಿಸುವುದಕ್ಕಿದ್ದ ವಿಶಾಲ ವೇದಿಕೆ. ನಗರದ ಕ್ರಾಂತಿಯ ಸಮಯದಲ್ಲಿ ಕೂಟವು ಸ್ವಾಭಾವಿಕವಾಗಿ ರೂಪುಗೊಂಡಿತು ಎಂದು ತೋರುತ್ತದೆಯಾದರೂ, ಶ್ಯಾಮ ಭಟ್ಟರು ಕರಾವಳಿಯಲ್ಲಿ ನಡೆಸಿರುವ ಅಧ್ಯಯನವು ಕೂಟ ರಚನೆಯು ಕರ್ನಾಟಕದಲ್ಲಿ ಪುರಾತನವಾಗಿದ್ದ ಒಂದು ಪದ್ಧತಿ ಮತ್ತು ಸಾಮಾನ್ಯ ವಿಚಾರವೆಂದು ತಿಳಿದುಬರುತ್ತದೆ. ಹೋರಾಟಗಳು ಸ್ವಾಭಾವಿಕವಾಗಿದ್ದಿರಬಹುದು, ಕೂಟಗಳ ರಚನೆ ತುಂಬ ಅಭಿವೃದ್ಧಿಗೊಂಡ ಪದ್ಧತಿಯಾಗಿತ್ತು. ಇದೇನನ್ನು ತೋರಿಸುತ್ತದೆಯೆಂದರೆ, ರೈತಾಪಿ ವರ್ಗವು ತನ್ನ ವರ್ಗ ಹೋರಾಟದ ದೀರ್ಘೇತಿಹಾಸದಲ್ಲಿ ಮತ್ತು ಬಂಡಾಯಗಳಲ್ಲಿ, ಊಳಿಗಮಾನ್ಯತೆ ವಿರೋಧಿ ಹೋರಾಟದ ಇತಿಹಾಸದ ಭಾಗವಾಗಿ, ಅಳವಡಿಸಿಕೊಂಡಿದ್ದ ಚಳುವಳಿಯ ರೂಪಗಳು ಈ ಹೊಸ ಕಾಲಘಟ್ಟದಲ್ಲೂ ಮುಂದುವರೆಯಿತು ಮತ್ತು ಅದೇ ಸಮಯದಲ್ಲಿ ವಸಾಹತುಶಾಹಿಯನ್ನು ಪ್ರಶ್ನಿಸಲಾರಂಭಿಸಿತು. 

ಕನ್ನಡದ ‘ಕೂಟ’ವೆಂಬ ಪದಕ್ಕೆ ಇಂಗ್ಲೀಷಿನಲ್ಲಿ “ಗ್ಯಾಂಗ್/ಗುಂಪು” ಎಂಬ ನಕರಾತ್ಮಕ ಅರ್ಥವೂ ಬಂದುಬಿಡಬಹುದು. ಪದದ ಈ ಮಹತ್ವವು ರೈತಾಪಿ ವರ್ಗವು ಕೂಟ ರಚನೆಯ ಹೋರಾಟವನ್ನು ಮತ್ತೆ ಮತ್ತೆ ಆಶ್ರಯಿಸುತ್ತಿದ್ದರು ಎನ್ನುವುದರ ಕುರಿತು ಬೆಳಕು ಚೆಲ್ಲುತ್ತದೆ, ಇಲ್ಲವಾದಲ್ಲಿ, ಊಳಿಗಮಾನ್ಯ ವರ್ಗಗಳ್ಯಾಕೆ ಇದನ್ನು ಇಷ್ಟಪಡದೆ, ಅದರ ನೈಜ ಸಕರಾತ್ಮಕ ಅರ್ಥವನ್ನು ತದ್ವಿರುದ್ಧವಾಗಿಸುತ್ತಿದ್ದರು? ಕೂಟ ಯುದ್ಧವೆಂಬುದು ಗೆರಿಲ್ಲಾ ಯುದ್ಧತಂತ್ರವನ್ನು ವಿವರಿಸುವ ಕನ್ನಡ ಪದ ಎಂದು ಸೂರ್ಯಕಾಂತ್ ಕಾಮತ್ ನಮಗೆ ತಿಳಿಸುತ್ತಾರೆ. (90) ಮತ್ತು ಈ ಗೆರಿಲ್ಲಾ ಯುದ್ಧತಂತ್ರ ಇತಿಹಾಸದಲ್ಲಿ ಕ್ರಾಂತಿಕಾರಿ ರೈತರ ಯುದ್ಧತಂತ್ರವಾಗಿ ಬೆಳೆದಿದೆಯಲ್ಲವೇ? 

ನಗರದ ಕ್ರಾಂತಿಯ ಬಗ್ಗೆ ಮಾತನಾಡುವುದಕ್ಕೆ ಮುಂಚೆ ನಾವು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕ್ರೋಡೀಕರಣಗೊಂಡ ರೈತರ ಕೋಪದ ಬಗ್ಗೆ ಗಮನ ಹರಿಸೋಣ ಮತ್ತು ಕೂಟಗಳು ಹೇಗೆ ಚಳುವಳಿಯ ಪ್ರಮುಖ ರೂಪವಾಗಿದ್ದವು ಎಂದು ತಿಳಿಯೋಣ. ಶ್ಯಾಮ್ ಭಟ್ ಹೇಳುತ್ತಾರೆ: 

“1830-31ರ ರೈತರ ಬಂಡಾಯವು ‘ಕೂಟ ಕ್ರಾಂತಿ’ ಎಂದೇ ಖ್ಯಾತವಾಗಿದೆ. ದಕ್ಷಿಣ ಕೆನರಾದ ಸಂದರ್ಭದಲ್ಲಿ, ಕೂಟವೆಂದರೆ ಕಂಪನಿಯ ಸರಕಾರದಿಂದಾದ ತೊಂದರೆಗಳನ್ನು ಹೇಳಿಕೊಂಡು ಪರಿಹಾರ ಪಡೆಯಲಿದ್ದ ರೈತರ ಒಕ್ಕೂಟಗಳು. ಈ ರೈತ ಬಂಡಾಯಕ್ಕಿದ್ದ ಪ್ರಮುಖ ಕಾರಣವೆಂದರೆ ಭೂ ಕಂದಾಯ, ಭೂಕಂದಾಯವು ರೈತರ ಮತ್ತು ಕಂಪನಿ ಸರಕಾರದ ನಡುವೆ ಘರ್ಷಣೆ ಉಂಟುಮಾಡುತ್ತಿದ್ದ ವಿಷಯವಾಗಿತ್ತು…. 

ರೈತರ ಅಸಹನೆ ಚಿಹ್ನೆಗಳನ್ನು 1830ರ ಕೊನೆಯ ತಿಂಗಳುಗಳಲ್ಲಿ ಕಾಣಬಹುದು, ರೈತರಾಗ ತಮಗಾದ ನಷ್ಟದ ಕುರಿತಾದ ದೂರನ್ನು ಸಾಮಾನ್ಯ ಅರ್ಜಿಗಳ ಮೂಲಕ ಕೊಡುತ್ತಿದ್ದರು. ಅವರು 1831ರ ಪ್ರಾರಂಭದ ತಿಂಗಳುಗಳಷ್ಟರಲ್ಲಿ ಒಂದಷ್ಟು ಅಭಿವೃದ್ಧಿ ಕಂಡರು. ಕಾಸರಗೋಡು, ಕುಂಬ್ಳ, ಮೊಗ್ರಲ್, ಮಂಜೇಶ್ವರ, ಬಂಗ್ರಾ – ಮಂಜೇಶ್ವರ ಮತ್ತು ತಲಪಾಡಿಯ ರೈತರು ಅರ್ಜಿಗಳನ್ನು ಮತ್ತು ದೂರುಗಳನ್ನು ದಕ್ಷಿಣ ಕೆನರಾದ ಕಲೆಕ್ಟರ್ ಡಿಕಿನ್ಸನ್ನಿಗೆ ಕೊಟ್ಟು ತಮಗಾದ ನಷ್ಟದ ಕುರಿತು ತಿಳಿಸಿದರು…. 

ಅರ್ಜಿಗಳಲ್ಲಿ, ರೈತರು ನವೆಂಬರ್ 1830ರಲ್ಲಿ ನಡೆಸಿದ ಕಂದಾಯದಳೆಯುವಿಕೆಯಲ್ಲಿದ್ದ ಕಾಠಿಣ್ಯದ ಬಗ್ಗೆಯಷ್ಟೇ ದೂರದೆ, ತಮಗೆಲ್ಲರಿಗೂ ಸಮಾನ ರೀತಿಯಲ್ಲಿ ಪರಿಹಾರವನ್ನೂ ನೀಡಬೇಕೆಂದು ಬೇಡಿಕೆಯನ್ನಿಟ್ಟರು…. 

ಎರಡನೆಯ ಹಂತದಲ್ಲಿ, ಅಂದರೆ ಜನವರಿ 1831ರಲ್ಲಿ, ರೈತರು ತಮ್ಮ ಕೂಟ ಅಥವಾ ಒಕ್ಕೂಟಗಳನ್ನು ಪ್ರಾರಂಭಿಸಿದರು. ಈ ಕೂಟಗಳಲ್ಲಿ ಒಕ್ಕೂಟ ಅಥವಾ ಸಂಘಟನೆಯ ಮುಖ್ಯಸ್ಥರು ಹಾಗೂ ರೈತ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಬೆಂಬಲಿಗರು ಸೇರುತ್ತಿದ್ದರು…. 

1831ರ ಜನವರಿ ಮೊದಲ ವಾರದಲ್ಲಿ ಬೇಕಲಿನಲ್ಲಿ (ಕಾಸರಗೋಡು) ಕೂಟದ ಪ್ರಾರಂಭವಾಯಿತು ಹಾಗೂ ಕೆಲವೇ ದಿನಗಳಲ್ಲಿ ಅದು ಕೆನರಾದ ಉತ್ತರದ ಭಾಗಗಳಿಗೂ ಹರಡಿತು…. 

ಬರ್ಕೂರು, ಬ್ರಹ್ಮಾವರ, ಬಂಟ್ವಾಳ, ಮಧೂರು, ಮಂಜೇಶ್ವರ, ಮುಲ್ಕಿ, ಕದ್ರಿ, ಕುಂಬ್ಳ, ಮಳಲಿ, ವಾಮಂಜೂರು, ಮೊಗ್ರಲ್, ಉದ್ಯಾವರ್, ಉಪ್ಪಿನಂಗಡಿ ಹಾಗೂ ವಿಟ್ಲ ರೈತರ ಕೂಟ ಸೇರಿದ್ದ ಕೆಲವು ಪ್ರಮುಖ ಸ್ಥಳಗಳು. ಕೂಟಗಳು ಉತ್ತರ ಕೆನರಾಕ್ಕೂ ಹಬ್ಬಿತು. ಕದ್ರಿಯ ಮಂಜುನಾಥ ದೇವಾಲಯ ರೈತ ಹೋರಾಟಗಳಿಗೆ ಕೇಂದ್ರವಾಗಿತ್ತು, ಅಲ್ಲಿ 1831ರ ಜನವರಿಯ ಕೊನೆಗೆ ಮಹಾಕೂಟವನ್ನು ಆಯೋಜಿಸಲಾಗಿತ್ತು. ಜಿಲ್ಲೆಯ ಪ್ರಮುಖ ಕೇಂದ್ರಗಳಾದ ಕಾಸರಗೋಡು ಮತ್ತು ಬಂಟ್ವಾಳದಿಂದ ರೈತರು ಬಂದು ಕದ್ರಿಯಲ್ಲಿ ಭೇಟಿಯಾದರು. ಬಸ್ರೂರಿನ ವೆಂಕಟರಮಣ ದೇವಸ್ಥಾನ, ಮಂಗಳೂರಿನ ಮಹಾಮಾಯಿ ದೇವಸ್ಥಾನ, ಮಂಜೇಶ್ವರ ದೇವಾಲಯ ಹಾಗೂ ವಾಮಂಜೂರಿನ ಮತ್ತೊಂದು ದೇವಸ್ಥಾನ ಕೂಟ ನಡೆಯುತ್ತಿದ್ದ ಪ್ರಮುಖ ಕೇಂದ್ರಗಳು… 

ದಕ್ಷಿಣ ಕೆನರಾದಲ್ಲಿ, ಪರಿಸ್ಥಿತಿ ಕೊಂಚ ಭಿನ್ನವಾಗಿತ್ತು ಮತ್ತು ಇಲ್ಲಿನ ಹಿಂದೂ ಧರ್ಮದ ಮುಖಂಡರು ರೈತರ ಬಂಡಾಯದೊಡನೆ ಯಾವ ಸಂಬಂಧವನ್ನೂ ಹೊಂದಿರಲಿಲ್ಲ. ಈ ಧಾರ್ಮಿಕ ಕೇಂದ್ರಗಳನ್ನು ರೈತರ ಭೇಟಿಯ ಸ್ಥಳಗಳಾಗಿ ಉಪಯೋಗಿಸುವುದಕ್ಕಷ್ಟೇ ಹೋಲಿಕೆ ನಿಲ್ಲುತ್ತದೆ…. 

ಈ ಕೂಟಗಳನ್ನು ಆಯೋಜಿಸುವುದಕ್ಕಾಗಿ, ರೈತರು ಒಬ್ಬ ಪಟೇಲನನ್ನು ಮತ್ತು ಇಬ್ಬರು ರೈತ ಮುಖಂಡರನ್ನು ಪ್ರತಿ ಊರಿನಲ್ಲೂ ನಿಯೋಜಿಸಿದ್ದರು. ಪ್ರತಿ ವಿಭಾಗಕ್ಕೂ(magane?) ಒಬ್ಬ ಪ್ರತ್ಯೇಕ ಮುಖ್ಯಸ್ಥರಿದ್ದರು. ಯಾವುದಾದರೊಂದು ವಿಷಯ ಚರ್ಚೆಯಾದಾಗ ಮತ್ತು ಯಾವುದಾದರೂ ಯೋಜನೆ ಅಥವಾ ಕಾರ್ಯವನ್ನು ಕೂಟಗಳಲ್ಲಿ ಮುಂದಿಟ್ಟಾಗ, ಈ ಮುಖಂಡರು ಅದನ್ನು ಹಳ್ಳಿಯ ರೈತರಿಗೆಲ್ಲರಿಗೂ ತಲುಪಿಸುತ್ತಿದ್ದರು. ಪ್ರತಿಯೊಂದು ಕೂಟದಲ್ಲೂ ಅವರದೇ ಮುಖಂಡರಿರುತ್ತಿದ್ದರು ಮತ್ತು ಅವರೆಲ್ಲರೂ ಕದ್ರಿಯ ಮಹಾ ಕೂಟದಲ್ಲಿ ಸೇರಿ ಚರ್ಚೆ ನಡೆಸುತ್ತಿದ್ದರು. ಈ ಕೂಟದ ಆಯೋಜಕರು ‘ರಹಸ್ಯ ಮಂಡಳಿಯೂ’ ಇತ್ತು. ಇದರಲ್ಲಿ ಪ್ರತಿ ವಿಭಾಗದಿಂದಲೂ ಇಬ್ಬರು ಅಥವಾ ಮೂವರು ಮುಖ್ಯಸ್ಥರಿರುತ್ತಿದ್ದರು. ಈ ರಹಸ್ಯ ಮಂಡಳಿಯ ಉದ್ದೇಶವೇನೆಂದರೆ, ಕೂಟದ ಆಯೋಜನೆಗಳ ಬಗ್ಗೆ ರಹಸ್ಯ ಕಾಪಾಡುವುದು. ಹಾಗಿದ್ದರೂ, ಈ ಮಂಡಳಿಯಲ್ಲಿ ನಡೆದ ಚರ್ಚೆಗಳ ವಿವರಗಳನ್ನು ವಿವಿಧ ಕೂಟಗಳಿಗೆ ತಿಳಿಸಲಾಗುತ್ತಿತ್ತು. ಹಾಗಾಗಿ, ಈ ರಹಸ್ಯ ಮಂಡಳಿ ರೈತ ಬಂಡಾಯದ ಆಯೋಜಕ ಸಂಸ್ಥೆಯಾಯಿತು. ವಾಸ್ತವದಲ್ಲಿದು ಬಂಡಾಯದ ಚಿಂತಕರ ಚಾವಡಿಯಾಗಿತ್ತು. ಮುಂದಕ್ಕೆ, ಅನಾಮಧೇಯ ಕರಪತ್ರಗಳನ್ನುಪಯೋಗಿಸಿಕೊಂಡು ಮುಖಂಡರು ತಮ್ಮ ಯೋಚನೆಗಳು ಹಾಗೂ ಯೋಜನೆಗಳನ್ನು ರೈತರ ನಡುವೆ ಹಂಚುತ್ತಿದ್ದರು. ಇಂತಹ ಕರಪತ್ರಗಳು ವಿವಿಧ ಕೂಟಗಳಲ್ಲಿ ಪ್ರಸಾರವಾಗುತ್ತಿತ್ತು. 

ಈ ಕೂಟದಲ್ಲಿ ಭಾಗವಹಿಸುತ್ತಿದ್ದವರು ಬೇಕಾದಂತಹ ಸಮಯದಲ್ಲಿ ಸರಕಾರಿ ನೌಕರರ ಮೇಲೆ ಧೈರ್ಯದಿಂದ ದಾಳಿ ನಡೆಸುತ್ತಿದ್ದರು. ಜನವರಿ 1831ರ ಕೊನೆಯ ಭಾಗದಲ್ಲಿ ಡಿಕಿನ್ಸನ್ ಕುಂದಾಪುರ ತೊರೆದು ಮಂಗಳೂರಿಗೆ ಹೋಗುವ ಮೊದಲು, ಬರ್ಕೂರಿನ ತಹಸೀಲ್ದಾರನಿಂದ ಆ ತಾಲ್ಲೂಕಿನ ರೈತರು ಕೂಟದಲ್ಲಿ ಜೊತೆಯಾಗಿದ್ದರು ಮತ್ತು ಕೆಲವು ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ್ದರು ಎಂಬ ವರದಿ ಬಂದಿತ್ತು. ಬರ್ಕೂರಿನ ತಹಸೀಲ್ದಾರನ ವರದಿಯಲ್ಲಿ ವಿಭಾಗದ ಶಾನುಭೋಗ ಪ್ರಕಟಣೆಯನ್ನೋದುವಾಗ ತೀರ್ವವಾಗಿ ಹಲ್ಲೆ ಮಾಡಲಾಗಿತ್ತು. ಮತ್ತೆ ಮುಲ್ಕಿಯಲ್ಲಿ, ರೈತರು ಅಮೀನನ ಮೇಲೆ ಕೈ ಮಾಡಿದ್ದರು, ಅಮೀನನ್ನು ಸರಕಾರದ ಪ್ರಕಟಣೆಯೊಂದನ್ನು ಓದುವ ಸಲುವಾಗಿ ಕಳುಹಿಸಲಾಗಿತ್ತು. ಹೊಸತೊಂದು ಒಪ್ಪಂದವಾಗುವವರೆಗೆ, ರೈತರು ಸರಕಾರದ ಭಿಕ್ಷೆಯನ್ನು ತಿರಸ್ಕರಿಸುವ ಧೃಡ ನಿರ್ಧಾರ ಮಾಡಿಬಿಟ್ಟಿದ್ದರು, ಮತ್ತವರ ಚಿತ್ತದಲ್ಲಿ ಪ್ರತಿಭಟಿಸುವ ಧೈರ್ಯ ಎಷ್ಟರ ಮಟ್ಟಿಗೆ ಸೇರಿಹೋಗಿತ್ತೆಂದರೆ ಕೆಲವೇ ದಿನಗಳ ಹಿಂದೆ ತಾವು ಹೆದರುತ್ತಿದ್ದ ಸರ್ಕಾರಿ ನೌಕರರ ಮೇಲೆ ಯಾವುದೇ ಹಿಂಜರಿಕೆ ಇಲ್ಲದೆ ಹಲ್ಲೆ ನಡೆಸುತ್ತಿದ್ದರು. ತಮ್ಮಲ್ಲಿನ ಒಗ್ಗಟ್ಟು ಬೆಳೆಯುತ್ತಿರುವ ಭಾವನೆ ಮತ್ತು ತಮ್ಮ ಸಂಘಟನೆಯ ಶಕ್ತಿಯ ಮೇಲಿದ್ದ ನಂಬುಗೆ ಇಂತಹ ಉಲ್ಲಂಘಿಸುವ ಕಾರ್ಯವನ್ನು ಮಾಡಲು ಅವರಿಗೆ ಕೊಟ್ಟಿತ್ತು. ನವೆಂಬರ್ 1830ರಲ್ಲಿ ಪ್ರಾರಂಭವಾದ ರೈತರ ಈ ಛಲದ ವರ್ತನೆ 1831ರ ಮಾರ್ಚಿ ತಿಂಗಳ ಕೊನೆಯವರೆಗೂ ಮುಂದುವರೆಯಿತು. 1831ರ ಮಾರ್ಚಿ ತಿಂಗಳಿನಲ್ಲಿ ರೈತರ ಅರ್ಜಿಗಳನ್ನು ಪರಿಶೀಲಿಸಿ ಅವರಿಗಾದ ನಷ್ಟವನ್ನು ಪರೀಕ್ಷಿಸಿ ಮನ್ನಾ ಮಾಡುವುದಾಗಿ ಕೆಮರಾನ್ ಭರವಸೆ ನೀಡಿದ ನಂತರವಷ್ಟೇ ರೈತರು ಚದುರಿದ್ದು ಮತ್ತು ಕೂಟಗಳಾಯೋಜನೆಯನ್ನು ನಿಲ್ಲಿಸಿದ್ದು. ಹಾಗಾಗಿ, 1831ರ ಏಪ್ರಿಲ್ ತಿಂಗಳಷ್ಟೊತ್ತಿಗೆ ಕೂಟ ಬಂಡಾಯದ ಘೀಳಿಡುವಿಕೆ ಸತ್ತು ಹೋಯಿತು”. (91) 

ಇದು ದಕ್ಷಿಣ ಕನ್ನಡದಲ್ಲಿ ನಡೆದಿದ್ದು. ಕೂಟವೆಂಬುವುದು ರೈತರ ಸಂಘಟನಾತ್ಮಕ ಪ್ರಜ್ಞೆಯಷ್ಟೇ ಆಗಿರದೆ ಅದಕ್ಕೆ ತನ್ನದೇ ಆದಂತರ ಕೇಂದ್ರೀಕೃತ ರಚನೆಯೂ ಇತ್ತು ಎನ್ನುವುದು ಶ್ಯಾಮ್ ಭಟ್ಟರ ವಿವರಣೆಗಳಿಂದ ತಿಳಿಯುತ್ತದೆ. ಕರಾವಳಿಯಲ್ಲಿ ಕೂಟಗಳು ಸಶಸ್ತ್ರ ಹೋರಾಟವಾಗಿ ಬದಲಾಗಲಿಲ್ಲ; ಕಾರಣ ಬ್ರಿಟೀಷ್ ಸರಕಾರ ಕೂಟದ ಮುಖ್ಯಸ್ಥರಿಗೆ ನೀಡಿದ ಭರವಸೆಗಳು, ಮತ್ತು ಈಗಾಗಲೇ ನಗರದಲ್ಲಿ ಸ್ಪೋಟಕ ಪರಿಸ್ಥಿತಿಯನ್ನು ಕಂಡಿದ್ದವರಿಗೆ, ಎಲ್ಲಾ ಪ್ರದೇಶಗಳಲ್ಲೂ ಒಂದೇ ಸಮಯದಲ್ಲಿ ತೊಂದರೆಗಳನ್ನೆದುರಿಸುವುದು ಅವರಿಗೆ ಬೇಕಿರಲಿಲ್ಲ. 1831ರ ಮೇ 16ರಂದು ಮುಖ್ಯಕಾರ್ಯದರ್ಶಿ ಗವರ್ನರ್ ಜೆನರಲ್ ಗೆ ಬರೆದ ಪತ್ರದಲ್ಲಿ: “ಉತ್ತರದ ಜಿಲ್ಲೆಗಳು ಈಗಾಗಲೇ ಬೆಂಕಿಯುಂಡೆಗಳಾಗಿವೆ, ಕಂಪನಿಯ ಕೆನರಾ, ಬಿಲ್ಗೀ ಮತ್ತು ಸೂಂಡಾ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ….. 

ಕೆನರಾ ಜಿಲ್ಲೆಗೆ ಬಂಡಾಯವಬ್ಬಿದ್ದಕ್ಕೆ ಆ ಜಿಲ್ಲೆ ಮೊದಲು ಬೆದನೂರಿನ ರಾಜನ ಆಳ್ವಿಕೆಯ ಕಾರಣದಿಂದ ಎಂದು ನಾನು ಯೋಚಿಸುವುದಿಲ್ಲ, ಬದಲಿಗೆ ಜನರು ನಾವು ನಿಗದಿಪಡಿಸಿರುವ ಹೆಚ್ಚಿನ ಕಂದಾಯವನ್ನು ಕಟ್ಟಲು ಶಕ್ತರಾಗಿಲ್ಲದಿರುವುದು, ಬೆಳೆಗಳ ಬೆಲೆ ಕುಸಿದಿರುವಾಗಲೂ ಕಂದಾಯ ಹೆಚ್ಚೇ ಇರುವುದು ಕಾರಣ. ಜಿಲ್ಲೆಯಲ್ಲಿ ತೆರಿಗೆ ಮನ್ನಾ ಮಾಡುವ ಬೇಡಿಕೆಗೆ ನಾವು ಒಪ್ಪಬೇಕು ಮತ್ತು ಘಟ್ಟದ ಮೇಲಿನ ಪ್ರದೇಶಗಳಲ್ಲಿ, ಆಯಾ ಸಂದರ್ಭದ ಯೋಗ್ಯತೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಬೇಕು; ಮತ್ತು ಸಾಧ್ಯವಾದರೆ ಮೈಸೂರಿನ ವಿಚಾರಗಳೊಂದಿಗೆ ಯಾವುದೇ ಕಾರಣಕ್ಕೂ ಸೇರಿಸಬಾರದು, ಇಲ್ಲಿನ ಅಸಮಾಧಾನದ ಪರಿಸ್ಥಿತಿಯು ಸಂಪೂರ್ಣ ವಿಭಿನ್ನ ಕಾರಣಗಳಿಂದಾಗಿದೆ ಎಂದು ಆಶಿಸಬಹುದಾಗಿದೆ. ಆದರೆ, ಬಂಡಾಯಗಾರರು ಕೆನರಾದೊಂದಿಗೆ ಹೊಂದಿರಬಹುದಾದಂತಹ ಸಂಪರ್ಕಗಳು ಮತ್ತು ಮಲಬಾರಿಗೆ ಈ ಬಂಡಾಯ ಹಬ್ಬಬಹುದಾದಂತಹ ಅಪಾಯಗಳನ್ನು ನೆನಪಿನಲ್ಲಿಟ್ಟುಕೊಂಡು ಕೆನರಾದ ಸಮಸ್ಯೆಯನ್ನು ಆದಷ್ಟು ಬೇಗ ಶಮನ ಮಾಡುವುದು ಅವಶ್ಯಕ….” (92) 

ಬಳ್ಳಾರಿಯಲ್ಲೂ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಇಲ್ಲಿನ ರೈತರು ಕೂಟ ರಚನೆಗೆ ಮುಂದಾಗಿದ್ದರೇ ಇಲ್ಲವೇ ಎಂಬುದರ ಬಗ್ಗೆ ನಮಗೆ ಖಚಿತವಾಗಿ ತಿಳಿದಿಲ್ಲ. ಆದರೂ, ಇಲ್ಲಿನ ಕೋಪದ ಪ್ರಮಾಣ ಹೆಚ್ಚೇ ಇದೆ. ಮನ್ರೋ, 1824ರಲ್ಲಿ ಈ ಜಿಲ್ಲೆಗೆ ಭೇಟಿ ನೀಡಿದ್ದಾಗ: “ಪ್ರತಿ ಸಂಜೆ ರೈತರ ಗುಂಪು ನನ್ನ ಟೆಂಟಿನ ಬಳಿ ಸೇರಿ ಪಾಳು ಭೂಮಿಗೆ ತೆರಿಗೆ ಹಾಕುವುದರ ಬಗ್ಗೆ ದೂರು ನೀಡುತ್ತಿದ್ದರು, ದೂರುದಾರರಂತೆ ಅವರು ತೋರದೆ ಜನ ಸಮೂಹವನ್ನು ಹೋಲುತ್ತಿದ್ದರು”. (93) 

ಮೈಸೂರು ಪ್ರಾಂತ್ಯದಲ್ಲಿ 1830ರಲ್ಲಿ ಪ್ರಾರಂಭವಾದ ಸಮೂಹ ಹೋರಾಟದಲ್ಲಿ, ಇಡೀ ಮೈಸೂರಿನಲ್ಲಿ ಈ ಕೂಟಗಳು ಹೇಗೆ ರಚನೆಯಾಗಿ ಕಾರ್ಯನಿರ್ವಹಿಸುತ್ತಿದ್ದವು ಎನ್ನುವುದು ಸ್ಪಷ್ಟವಾಗಿಲ್ಲ. ಆದರೂ ಕೂಟದ ಸಂಘಟನಾ ರೂಪವನ್ನು ಮೈಸೂರಿನ ರೆಸೆಡೆಂಟ್ ಕಾಸಾಮೈಯೂರ್, ಕೊಲ್ಕೊತ್ತಾದ ಮುಖ್ಯ ಕಾರ್ಯದರ್ಶಿ ಫೋರ್ಟ್ ವಿಲಿಯಮ್ ಗೆ 1831ರ ಜನವರಿ 5ರಂದು ಬರೆದ ಪತ್ರದಿಂದ ತಿಳಿಯಬಹುದು: “ನಿವಾಸಿಗಳಲ್ಲಿ ಸಾಮಾನ್ಯವಾಗಿರುವ ಅಸಮಾಧಾನನ್ನು ವರದಿ ಮಾಡಲು ವಿಷಾದಿಸುತ್ತೇನೆ. ತಾಲ್ಲೂಕಿನ ಮುಖ್ಯ ಪಟೇಲರು ‘ಕೂಟ’ ಎಂಬ ಸಂಸ್ಥೆಯನ್ನು ರಚಿಸಿಕೊಂಡಿದ್ದಾರೆ, ಪ್ರತಿಯೊಂದು ಕೂಟದಲ್ಲೂ ಎರಡರಿಂದ ಮೂರು ಸಾವಿರ ರೈತರಿದ್ದಾರೆ, ಈ ಪಕ್ಷಗಳು ತಮ್ಮ ತಮ್ಮಲ್ಲೇ ಪತ್ರ ವ್ಯವಹಾರ ನಡೆಸಿಕೊಂಡಿವೆ ಮತ್ತು ಸರಕಾರದ ಅಧಿಕಾರಿಗಳ ವಿರುದ್ಧ ಹೋರಾಡಲು ಕೈಜೋಡಿಸದವರನ್ನು ಶಿಕ್ಷಿಸುತ್ತಿವೆ”. (94) 

ಇದರಿಂದ ಸ್ಪಷ್ಟವಾಗುವುದೇನೆಂದರೆ ಕೂಟಗಳು ತಾಲ್ಲೂಕು ಮಟ್ಟದವರೆಗೂ ಕೇಂದ್ರೀಕೃತಗೊಂಡಿತ್ತು, ಹಳ್ಳಿಗಳ ಕೂಟದಲ್ಲಿದ್ದ ಸಾವಿರಾರು ರೈತ ಸದಸ್ಯರನ್ನು ಪ್ರತಿನಿಧಿಸುತ್ತಿತ್ತು. 

ಸೆಬಾಸ್ಟಿಯನ್ ನಮಗೆ ತಿಳಿಸುತ್ತಾರೆ: “ಚೆನ್ನಗಿರಿ ದಂಗೆಯಲ್ಲಿ ಮೊದಲ ಬಾರಿಗೆ ‘ಕೂಟ’ ಮೂಲಕ ಸೇರಿ ಸರಕಾರಕ್ಕೆ ಪ್ರತಿರೋಧ ಒಡ್ಡಲಾಗಿತ್ತು. ಇದಾದ ನಂತರ ತಕ್ಷಣವೇ ಬುಸ್ವೆನ್ ಕೊಟ್ಟಾ, ಶಿವಮೊಗ್ಗ, ಹೊಳೆಹೊನ್ನೂರು, ಅನಂತಪುರ, ತರಿಕೆರೆ ಮತ್ತು ಅನವಟ್ಟಿಯ ರೈತರು ದಂಗೆಯೆದ್ದರು….ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಮತ್ತು ಕಾಯೆಕೊಂಡ ತಾಲ್ಲೂಕಿನ ರೈತರು ಕೂಟವನ್ನು ರಚಿಸಿಕೊಂಡರು ಮತ್ತು ತೆರಿಗೆ ಹಾಗೂ ಲಂಚದ ರೂಪದಲ್ಲಿ ಕೊಟ್ಟಿದ್ದ ತಮ್ಮ ಹಣವನ್ನು ಹಿಂದಿರುಗಿಸಬೇಕೆಂದು ಅಮಲ್ದಾರ ಮತ್ತು ಶಿರಸ್ತೇದಾರರನ್ನು ಒತ್ತಾಯಪಡಿಸಿದರು…. 

ಈ ಮಧ್ಯೆ, ಹಾಸನ ತಾಲ್ಲೂಕಿನ ರೈತರಿಗೆ ಕೂಟವನ್ನು ಸೇರುವಂತೆ ಹಾಗೂ ಕಂದಾಯ ಕಟ್ಟುವುದಕ್ಕೆ ನಿರಾಕರಿಸಿ ಎಂದು ಮನವಿ ಮಾಡುವ ಕರಪತ್ರಗಳು ಬಂದವು….. 

1830ರ ಕೊನೆಯಷ್ಟೊತ್ತಿಗೆ, ಕ್ರಾಂತಿ ಹೊಸ ಆಯಾಮವನ್ನೇ ಪಡೆದಿತ್ತು. ಅದು ನಗರ ಮತ್ತದರ ಸುತ್ತಮುತ್ತಲಿನ ಪ್ರದೇಶಗಳಿಗೆ ಸೀಮಿತವಾಗಿರಲಿಲ್ಲ. 1831ರ ಬಹುಶಃ ಜನವರಿ 4ರ ಪತ್ರವೊಂದರಲ್ಲಿ ಬೆಂಗಳೂರಿನ ಫೌಜುದಾರ 5,000 ರೈತರ ದೊಡ್ಡ ಗುಂಪೊಂದು ದೇವರಹೊಸಹಳ್ಳಿಯಲ್ಲಿದೆ ಮತ್ತವರು ತುಮಕೂರಿನೆಡೆಗೆ ಹೋಗುತ್ತಿದ್ದಾರೆ ಎಂದು ಬರೆದಿದ್ದ…. 

1830ರ ಡಿಸೆಂಬರ್ 16ರಂದು, ಮೈಸೂರಿನ ಮಹಾರಾಜರಿಗೆ ಬರೆದ ಪತ್ರದಲ್ಲಿ ಬೆಂಗಳೂರಿನ ಫೌಜುದಾರ ಬೆಂಗಳೂರು ಜಿಲ್ಲೆಯಲ್ಲಿನ ಜನರು ದೊಡ್ಡ ಮಟ್ಟದಲ್ಲಿ ಎಚ್ಚರಗೊಂಡಿದ್ದಾರೆ ಮತ್ತು ಬಂಡಾಯವೇಳುವ ಮನಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದ”. (95) 

1830ರ ಆಗಷ್ಟ್ 23ರಂದು ಹೊಸಂತೆ ಗ್ರಾಮದಲ್ಲಿ ಮಾನಪ್ಪನ ಮುಂದಾಳತ್ವದಲ್ಲಿ ನಡೆದ ದೊಡ್ಡ ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಚುನಾವಣೆ ನಡೆಯಿತು. ಇದು ಜಿಲ್ಲಾ ಮಟ್ಟದಲ್ಲಿ ನಡೆದ ಕೇಂದ್ರೀಕರಣದ ಸಂಕೇತ. 

1830ರ ಪ್ರಾರಂಭದಿಂದ 1830ರ ಡಿಸೆಂಬರ್ ವರೆಗೆ ಬದುಕುಳಿದಿದ್ದ ಕೂಟಗಳು ದೊಡ್ಡ ಪ್ರಮಾಣದಲ್ಲಿ ರೈತರನ್ನು ಎಚ್ಚರಿಸಿತು. ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಊಳಿಗಮಾನ್ಯ ಪದ್ಧತಿಗಳಿಗೆ ಹೋಲಿಸಿದರೆ ಕೂಟಗಳಲ್ಲಿ ರೈತ ಪ್ರಜಾಪ್ರಭುತ್ವವಿತ್ತು ಎಂದು ಗಮನಿಸಬಹುದು. ಕೂಟಗಳು ಪ್ರತಿ ಹಳ್ಳಿಯಲ್ಲೂ ಆಯೋಜಿಸಲಾದ ರೈತರ ದೊಡ್ಡ ಸಭೆಗಳು, ಇಲ್ಲಿ ರೈತರು ಸ್ಪಷ್ಟವಾಗಿ ತಮ್ಮ ಬೇಡಿಕೆಗಳನ್ನು ಮುಂದಿಡುತ್ತಿದ್ದವು. ಈ ಬೇಡಿಕೆಗಳನ್ನು ಗ್ರಾಮ ಕೂಟದ ಮುಖ್ಯಸ್ಥ ತಾಲ್ಲೂಕು ಕೂಟದ ಮುಂದಿಡುತ್ತಿದ್ದ, ನಂತರ ಬೇಡಿಕೆಗಳನ್ನು ಅಮಲ್ದಾರರಿಗೆ ಮುಂದಿಡಲಾಗುತ್ತಿತ್ತು. ರೈತ ಸಮೂಹ ತಮ್ಮ ಬೇಡಿಕೆಗಳನ್ನು ಅಮಲ್ದಾರರಿಗೆ ತಲುಪಿಸಲು ತಾಲ್ಲೂಕು ಕೇಂದ್ರಗಳಿಗೆ ಹೋಗಲಾರಂಭಸುತ್ತಿದ್ದಂತೆಯೇ, ಕೂಟ ಮಾದರಿಯ ಹೋರಾಟದಲ್ಲಿ ಪರಿವರ್ತನೆಗಳಾಗಿ ವಿಭಿನ್ನ ರೀತಿಯ ಸಾಮೂಹಿಕ ಕ್ರಿಯೆಗಳು ನಡೆದವು.

ಮುಂದಿನ ವಾರ: ನಗರದ ರೈತಾಪಿ ಬಂಡಾಯ ಭಾಗ 3

No comments:

Post a Comment