Oct 7, 2016

ಮೇಕಿಂಗ್ ಹಿಸ್ಟರಿ: ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ - 1

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ರೈತಾಪಿ ಜನರು ಬಂದೂಕು ಹಿಡಿದರು 
ಮೂರನೇ ರೀತಿಯ ಸಶಸ್ತ್ರ ಹೋರಾಟದಲ್ಲಿ ರೈತ ಕಾರ್ಮಿಕರು ನೇತೃತ್ವ ವಹಿಸಿದರು. ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ ಕರ್ನಾಟಕದ ವಿಮೋಚನಾ ಹೋರಾಟದಲ್ಲಿ ಇದು ಅತ್ಯಂತ ಮಹತ್ವದ ವಿಚಾರ. ಕರ್ನಾಟಕದ ರೈತಾಪಿ ಸಮೂಹ ವಸಾಹತು ವಿರೋಧಿ ಹೋರಾಟದ ಹಾದಿಯಲ್ಲಿ ದೀವಿಗೆ ಹಿಡಿದು ಬೆಳಕು ಚೆಲ್ಲಿದರು. ನಾಯಕರು ಹುಟ್ಟಿದರು. ಸಂಗೊಳ್ಳಿ ರಾಯಣ್ಣ ಇವರೆಲ್ಲರಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹೋರಾಟ ವಸಾಹತುಶಾಹಿ ಮತ್ತವರ ಊಳಿಗಮಾನ್ಯ ಮಿತ್ರರ ಮೇಲೂ ದಾಳಿ ನಡೆಸಿತು ಮತ್ತು ರೈತ – ಕಾರ್ಮಿಕ ಸಮೂಹದಾಧಾರದಲ್ಲಿ ಗೆರಿಲ್ಲಾ ಯುದ್ಧ ನಡೆಸಿ ವಿಮೋಚನಾ ಹಾದಿಯನ್ನು ರೂಪಿಸಿತು. ನಾವೀಗ ಇವುಗಳಲ್ಲಿ ಮೂರು ಪ್ರಮುಖ ಹೋರಾಟಗಳನ್ನು ಗಮನಿಸೋಣ, ಈ ಮೂರೂ ನಿರಂತರ ಚಳುವಳಿಯಾಗಿತ್ತು, ಒಂದಾದ ನಂತರ ಮತ್ತೊಂದು ನಡೆದಿತ್ತು ಮತ್ತು 1829 ಹಾಗು 1837ರ ಅವಧಿಯ ಮಧ್ಯೆ ನಡೆದಿತ್ತು – ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ, ನಗರದ ಸಶಸ್ತ್ರ ಬಂಡಾಯ ಹಾಗೂ ಕಲ್ಯಾಣಸ್ವಾಮಿ ಮುನ್ನಡೆಸಿದ ಸಶಸ್ತ್ರ ಹೋರಾಟ. ಕರ್ನಾಟಕದ ಜನಸಮೂಹದ ಶ್ರೀಮಂತ ಅನುಭವದಿಂದ ನಾವು ಕಲಿಯೋಣ. ರಕ್ತ ಮತ್ತು ಕಣ್ಣೀರು, ಅತ್ಯಂತ ಅಮೂಲ್ಯವಾದ – ಜೀವದ – ತ್ಯಾಗವೇ ಅಲ್ಲವೇ ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಮೃದ್ಧಗೊಳಿಸುವುದು? 

1. ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ (1829 – 30) 

ರಾಯಣ್ಣ ಕಿತ್ತೂರು ಸಂಸ್ಥಾನದ ಸಂಗೊಳ್ಳಿ ಎಂಬ ಹಳ್ಳಿಯವನು. ಅವನು ಕಿತ್ತೂರು ದೇಸಾಯಿಯ ಶೇಟ್ ಸನ್ನದಿಯಾಗಿದ್ದ, ಸೈನಿಕ ಗುತ್ತಿಗೆಯ ಆಧಾರದಲ್ಲಿ ಹಲವು ಎಕರೆ ಭೂಮಿಯನ್ನೊಂದಿದ್ದ. ಹಿಂದುಳಿದ ಧನಗಾರ ಅಥವಾ ಕುರುಬ ಜಾತಿಗೆ ಸೇರಿದ್ದ ಈ ಮಧ್ಯಮವರ್ಗದ ರೈತ, ಶೇಟ್ ಸನ್ನದಿಯಾಗಿದ್ದ ಕಾರಣದಿಂದಾಗಿ ಹಳ್ಳಿಯ ಕಾವಲುಗಾರನೂ ಆಗಿದ್ದ. 29ರ ವಯಸ್ಸಿನಲ್ಲಿ, ರಾಯಣ್ಣ ಚೆನ್ನಮ್ಮಳ ಕರೆಗೆ ಓಗೊಟ್ಟು ಕಿತ್ತೂರಿನೆಡೆಗೆ ಪಯಣಬೆಳೆಸಿದ್ದ 5,000 ಸಶಸ್ತ್ರ ಶೇಟ್ ಸನ್ನದಿಗಳ ಜೊತೆಗೆ ತೆರಳಿ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದ. ಕಿತ್ತೂರಿನ ಬಂಡಾಯವನ್ನು ದಮನಿಸಿದ ನಂತರ ರಾಯಣ್ಣನನ್ನು ಬಂಧಿಸಲಾಗಿತ್ತು ಹಾಗೂ 1826ರಲ್ಲಿ ಹಲವಾರು ಖೈದಿಗಳನ್ನು ಬಿಡುಗಡೆ ಮಾಡಿದಂತೆ ಒಂದು ಎಚ್ಚರಿಕೆಯೊಂದಿಗೆ ರಾಯಣ್ಣನನ್ನೂ ಬಿಡುಗಡೆಗೊಳಿಸಿದರು. ಚೆನ್ನಮ್ಮಳ ಬಂಧನಕ್ಕೆ ರಾಯಣ್ಣ ಸಾಕ್ಷಿಯಾಗಿದ್ದ; ಬೈಲಹೊಂಗಲದಲ್ಲಿ ಆಕೆಯನ್ನು ಬಂಧಿಸಿಟ್ಟಿದ್ದಾಗ, ಆಕೆಯ ನೆಂಟರ ಪೈಕಿಯವನು ಎಂದು ನಾಟಕವಾಡಿ ಚೆನ್ನಮ್ಮಳನ್ನು ಭೇಟಿಯಾಗಿ ಕಿತ್ತೂರನ್ನು ಪುನರ್ವಶಮಾಡಿಕೊಳ್ಳುವ ಚೆನ್ನಮ್ಮಳ ಆಸೆಯಿಂದ ಸ್ಪೂರ್ತಿ ಪಡೆದ. 

ಸಂಗೊಳ್ಳಿಗೆ ಹಿಂದಿರುಗಿದಾಗ, ಊಳಿಗಮಾನ್ಯ – ವಸಾಹತು ದೊರೆಗಳ ವಿರುದ್ಧದ ಕೋಪ ಹೆಚ್ಚಾಯಿತು. ಕಿತ್ತೂರು ಬಾಂಬೆಯ ನೇರ ಆಳ್ವಿಕೆಗೆ ಒಳಪಟ್ಟ ನಂತರ, ಕಂಪನಿಯ ಶಾರ್ಕುಗಳು ಪ್ರಾಂತ್ಯದ ಭೂಕಂದಾಯವನ್ನು ಮರುಪರೀಶಿಲಿಸಿದರು. ನಾವೀಗಾಗಲೇ ಈ ಸಂಪುಟದ ಮೊದಲಿನಲ್ಲಿ, ಹೇಗೆ ವಸಾಹತು ಶಕ್ತಿ ಸ್ಥಳೀಯ ಊಳಿಗಮಾನ್ಯ ಪದ್ಧತಿಯ ಜೊತೆಗೆ ಕೈಜೋಡಿಸಿ ಗುತ್ತಿಗೆಯನ್ನು ಮೌಲ್ಯಮಾಪನ ಮಾಡಿತು ಮತ್ತು ಕರ್ನಾಟಕದುದ್ದಗಲಕ್ಕೂ ಹೇಗೆ ರೈತ ಸಮೂಹದ ಮೇಲೆ ಊಳಿಗಮಾನ್ಯತೆಯ ಪ್ರಭಾವವನ್ನು ಹೆಚ್ಚಿಸಿತು ಎಂದು ನೋಡಿದ್ದೇವೆ. ಸ್ಥಳೀಯ ಕುಲಕರ್ಣಿಯಿಂದ ಪ್ರೋತ್ಸಾಹಿತರಾಗಿ, ಸಂಗೊಳ್ಳಿ ರಾಯಣ್ಣನ ಅರ್ಧದಷ್ಟು ಭೂಮಿಯನ್ನು ಜಫ್ತಿ ಮಾಡಲಾಗಿತ್ತು ಮತ್ತು ಇನ್ನುಳಿದ ಅರ್ಧಕ್ಕೆ ಹೆಚ್ಚಿನ ಬಾಡಿಗೆಯನ್ನು ವಿಧಿಸಲಾಯಿತು. (56) ಮತ್ತೊಬ್ಬ ಶೇಟ್ ಸನ್ನದಿ ಸಂಗೊಳ್ಳಿಯ ಮಂಟಗುತ್ತಿಯ ಪರಿಸ್ಥಿಯೂ ಇದಕ್ಕಿಂತ ಭಿನ್ನವಾಗೇನಿರಲಿಲ್ಲ. ಆಗ, ರಾಯಣ್ಣನೇ ಹೇಳಿದಂತೆ, “ತನ್ನಳ್ಳಿಯ ಕುಲಕರ್ಣಿಯ ಜೊತೆಗೆ ನಡೆದ ಜಗಳದ ಪರಿಣಾಮವಾಗಿ”, ಭೂಮಿಯನ್ನು ಕಳೆದುಕೊಂಡದ್ದಷ್ಟೇ ಅಲ್ಲದೆ, ಯಾವುದೇ ತೊಂದರೆಯಿಲ್ಲದೆ ಹಳ್ಳಿಯಲ್ಲಿ ಬದುಕುವ ಎಲ್ಲಾ ಅವಕಾಶಗಳನ್ನೂ ಕಳೆದುಕೊಂಡ; ಮಂಟಗುತ್ತಿಯ ಜೊತೆಗೆ ಹಳ್ಳಿಯನ್ನು ಸಂಪೂರ್ಣವಾಗಿ ತೊರೆದುಹೋದ. (57) 

ರಾಯಣ್ಣ ಕಿತ್ತೂರಿನ ಅಧಿಕಾರ ಕ್ಷೇತ್ರವನ್ನು ಚೆನ್ನಮ್ಮಳ ದತ್ತು ಪುತ್ರನಿಗೆ ಸಿಗಬೇಕೆಂದು ಹೋರಾಡಿದ್ದು ಅವನಲ್ಲಿದ್ದ ಊಳಿಗಮಾನ್ಯತೆಯ ಪ್ರಭಾವದ ಪ್ರಜ್ಞೆಯನ್ನು ತೋರಿಸುತ್ತಿತ್ತು; ಈ ರೀತಿ ಮಾಡುತ್ತ ವಾಸ್ತವದಲ್ಲಿ ಅದೇ ಸಮಯದಲ್ಲಿ ಊಳಿಗಮಾನ್ಯ ಹಾಗೂ ವಸಾಹತು ವಿರೋಧಿ ಮಹತ್ವಾಕಾಂಕ್ಷೆಯನ್ನೂ ರಾಯಣ್ಣ ತೋರುತ್ತಿದ್ದ, ಕ್ರೂರ ಕಂದಾಯ ಪದ್ಧತಿಯ ಮೇಲೆ ದಾಳಿ ನಡೆಸುತ್ತ ಮತ್ತು ದಿವಾಳಿಯೆದ್ದಿದ್ದ, ಅಪಾರ ಹೊರೆ ಹೊತ್ತಿದ್ದ ರೈತ ಸಮೂಹದ ಭೂಮಿಯ ಪ್ರಶ್ನೆಯನ್ನು ಪ್ರಮುಖ ಪ್ರಶ್ನೆಯಾಗಿಸಿದ್ದ. ಬಹಿರಂಗವಾಗಿರುವುದನ್ನು ನೋಡಿ ಅಂತರಂಗದಲ್ಲಿರುವುದನ್ನು ಮರೆಯುವುದು ಸಾಮಾನ್ಯ, ಆ ಕಾಲದ ಬಗ್ಗೆ ಬರೆದ ಇತಿಹಾಸಕಾರರು ಕೂಡ ಇದಕ್ಕೆ ತುತ್ತಾದರು; ಊಳಿಗಮಾನ್ಯ ರಾಜರು ಮತ್ತು ರಾಣಿಯರು ತಪ್ಪಿಸಿಕೊಳ್ಳುವುದನ್ನಷ್ಟೇ ಗಮನಿಸುತ್ತ ಜನಸಮೂಹವನ್ನು ಮರೆತುಬಿಟ್ಟರು; ಜನಸಮೂಹಕ್ಕೆ ಸ್ಪೂರ್ತಿ ಕೊಟ್ಟು ಕಾರ್ಯನಿರ್ವಹಿಸಿ ಇತಿಹಾಸ ನಿರ್ಮಿಸುವಂತೆ ಮಾಡಿದ ಕಾರಣ - ವರ್ಗ ಕಾರಣವನ್ನು – ಗಮನಿಸಲೇ ಇಲ್ಲ. ಒಂದೇ ಕಾಲಕ್ಕೆ ರೈತ ಮತ್ತು ಸೈನಿಕನಾಗಿದ್ದ ರಾಯಣ್ಣನ ಬಳಿ ಯಾವಾಗಲೂ ಶಸ್ತ್ರವಿರುತ್ತಿತ್ತು, ಊಳಿಗಮಾನ್ಯ ವರ್ಗದ ಸೇವೆಗಾಗಿ, ಈ ಬಾರಿ ಶಕ್ತಿಯುತ ಊಳಿಗಮಾನ್ಯ ಮತ್ತು ವಸಾಹತು ವಿರೋಧಿ ಪ್ರಜ್ಞೆಯಿಂದ ಶಸ್ತ್ರ ಸಬಲವಾಗಿತ್ತು, ಬಂದೂಕಿನ ನಳಿಕೆಗೊಂದು ಹೊಸ ಉದ್ದೇಶ ಪ್ರಾಪ್ತಿಯಾಗಿತ್ತು, ರೈತಾಪಿ ಸಮೂಹದ ಉದ್ದೇಶಗಳನ್ನು ಪೂರೈಸುತ್ತಿತ್ತು. ಈ ಉದ್ದೇಶ ಮತ್ತು ಧೃಡತೆಯೇ ಅವನ ಸಿದ್ಧಾಂತಗಳನ್ನು ರೂಪಿಸಿತು, ಈ ಸಿದ್ಧಾಂತಗಳು ಅಂಚಿನಲ್ಲಿರುವವರ ಕಷ್ಟ ಸುಖಗಳನ್ನು ಗಮನಿಸಲು ರಾಯಣ್ಣನಿಗೆ ಸಹಾಯ ಮಾಡಿತು ಮತ್ತು ಕೇವಲ ನಾಲ್ಕು ತಿಂಗಳ ಚಿಕ್ಕ ಅವಧಿಯೇ ಆದರೂ, ರಾಯಣ್ಣ ಜನರಲ್ಲೊಂದು ಎಚ್ಚರಿಕೆ ಮೂಡಿಸಿದ, ಯಾವ ರಾಜ – ರಾಣಿಗೂ ಇದು ಸಾಧ್ಯವಾಗಿರಲಿಲ್ಲ. 

ರಾಯಣ್ಣ ಮತ್ತವನು ಮುನ್ನಡೆಸಿದ ಹೋರಾಟದಲ್ಲಿ ಎರಡು ಗಮನಾರ್ಹ ವೈಶಿಷ್ಟತೆಗಳಿವೆ; ಬೇರೆ ಕೋನದಿಂದ ಅದು ಜನಪ್ರಿಯ ಊಳಿಗಮಾನ್ಯ ವಿರೋಧಿ ವಿಷಯವನ್ನು ಮುನ್ನೆಲೆಗೆ ತಂದಿತು. 

ರಾಯಣ್ಣನಿಗೆ ಜನಪ್ರಿಯ ನ್ಯಾಯದ ಅರಿವಿತ್ತು. ಸಾಮನ್ಯ ಜನರೆಡೆಗೆ ಅಪಾರವಾದ ಒಲವಿತ್ತು ಮತ್ತವರನ್ನು ರಾಯಣ್ಣ ತುಂಬು ಗೌರವದಿಂದ ಕಾಣುತ್ತಿದ್ದ. ಒಬ್ಬ ನಾಯಕನಾಗಿ ತನ್ನ ಕಮಾಂಡರುಗಳು ಹಾಗೂ ಸೈನಿಕರು ಜನರ ವಿರುದ್ಧ ನಡೆದುಕೊಂಡಾಗ ಅವರನ್ನು ವಿಚಾರಿಸಿ ಶಿಕ್ಷಿಸಬೇಕಾಗಿರುವ ತನ್ನ ಪಾತ್ರದ ಬಗ್ಗೆ ಅರಿವಿತ್ತು. 

ಉದಾಹರಣೆಗೆ, ಬಾಪು ಭಂಡಾರಿ ಹಡಲಗಿಯ ಮೇಲೆ ನಡೆಸಿದ ದಾಳಿಯ ಸಮಯದಲ್ಲಿ ಮಕ್ಕಳು ಮತ್ತು ಹಸುಗಳನ್ನು ಸುಟ್ಟು ಹಾಕಲಾಯಿತು ಎಂದು ಮುದುಕನೊಬ್ಬ ರಾಯಣ್ಣನಿಗೆ ತಿಳಿಸಿದ. ರಾಯಣ್ಣ ಮುದುಕನಿಗೆ ಪರಿಹಾರ ರೂಪದಲ್ಲಿ ಹಣವನ್ನು ನೀಡಿದ. (58) 

ಅದೇ ರೀತಿ, ವಯಸ್ಸಾದ ಬ್ರಾಹ್ಮಣ ಹೆಂಗಸೊಬ್ಬಳು, ಬಾಪು ಭಂಡಾರಿ ತನ್ನ ಗಂಡನನ್ನು ಕಟ್ಟಿಹಾಕಿ ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ ಎಂದಾಗ, ತತ್ ಕ್ಷಣವೇ ಅದನ್ನು ನಿಲ್ಲಿಸುವಂತೆ ಸೂಚನೆಗಳನ್ನು ಕಳುಹಿಸಿದ. ಆದರದು ತಲುಪುವುದು ತಡವಾಗಿತ್ತು. ನಂತರ ಬಾಪು ಭಂಡಾರಿಗೆ ಶಿಕ್ಷೆಯಾಯಿತು ಮತ್ತು ರಾಯಣ್ಣನ ಕಡೆಯವನೊಬ್ಬನ ಏಟಿಗೆ ಬಾಪು ಭಂಡಾರಿ ಸಾವನ್ನಪ್ಪಿದ. (59) 

ರಾಯಣ್ಣನ ಹೇಳಿಕೆಗಳಿಂದ, ಸಂಗ್ರಹಿಸಿದ ಅಥವಾ ವಶಪಡಿಸಿಕೊಂಡ ಹಣದ ಬಗೆಗಿನ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲಾಗಿತ್ತು ಎಂದು ಗೊತ್ತಾಗುತ್ತದೆ. ಹಣವನ್ನು ತನ್ನ ಹೋರಾಟಗಾರರಿಗೆ ಆಹಾರವನ್ನು ತರಲು ಉಪಯೋಗಿಸುತ್ತಿದ್ದ ಎನ್ನುವುದನ್ನು ತಿಳಿಯುವುದಿಲ್ಲಿ ಮುಖ್ಯವಾಗುತ್ತದೆ. ಅವನು ಲೂಟಿಯನ್ನಾಗಲೀ ದೋಚುವುದನ್ನಾಗಲೀ ಮಾಡಲಿಲ್ಲ. 

ರಾಯಣ್ಣನ ಹೋರಾಟದಲ್ಲಿದ್ದ ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಸೈನ್ಯದಲ್ಲಿದ್ದ ವಿಶಾಲ ಜಾತಿ ಸಂಯೋಜನೆ. ಬ್ರಿಟೀಷರಿಂದ ಬಂಧಿತರಾದ ರಾಯಣ್ಣನ 12 ಬೆಂಬಲಿಗರಲ್ಲಿ, ಐವರು ಬೇಡರು, ಇಬ್ಬರು ಲಿಂಗಾಯತರು, ಒಬ್ಬ ಪಂಚಮಸಾಲಿ, ಒಬ್ಬ ಮುಸ್ಲಿಮ್, ಒಬ್ಬ ಮರಾಠ, ಒಬ್ಬ ನರ್ವೇಕರ್ ಮತ್ತು ಒಬ್ಬ ಜೈನರವನು. (60) ನಾವೀಗಾಗಲೇ ಹೇಳಿದಂತೆ ರಾಯಣ್ಣ ಒಬ್ಬ ಕುರುಬ. ಜನಪದ ಹಾಡುಗಳಿಂದ ನಮಗೆ ತಿಳಿದು ಬರುವುದೇನೆಂದರೆ, ಅವನ ಸೈನ್ಯದಲ್ಲಿ ಬೋವಿ ಜನಾಂಗದವರಿದ್ದರು ಮತ್ತು ಮೊಜಂಬಿಕ್ಕಿನಿಂದ ಗೋವಾಕ್ಕೆ ಪೋರ್ಚುಗೀಸರು ಗುಲಾಮರಾಗಿ ಕರೆತಂದಿದ್ದ ಸಿದ್ಧಿಗಳು ಕಿತ್ತೂರಿನ ಪಶ್ಚಿಮ ಭಾಗಗಳಲ್ಲಿದ್ದರು, ಈ ಸಿದ್ಧರು ರಾಯಣ್ಣನ ಕಾವಲುಗಾರರಾಗಿದ್ದರು. ಗಜವೀರ ಎಂಬ ಸಿದ್ಧಿ ರಾಯಣ್ಣನ ಸಾವನ್ನು ಕೇಳಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ. (61) 

ಈ ವಿಶಾಲ ಸಂಯೋಜನೆ, ಅವರಲ್ಯಾರೂ ಭೂಮಾಲೀಕರಿಲ್ಲದಿರುವುದು, ಇಡೀ ಹೋರಾಟಕ್ಕಿದ್ದ ಊಳಿಗಮಾನ್ಯ ವಿರೋಧಿ ಲಕ್ಷಣ ಮತ್ತು ಗುರಿಯನ್ನು ಪ್ರತಿಫಲಿಸುತ್ತದೆ. 

ಈ “ಊಳಿಗಮಾನ್ಯತೆಯಿಲ್ಲದ್ದು” ಜಡವಾಗಿರಲಿಲ್ಲ. ಪ್ರತ್ಯೇಕತೆಯನ್ನು ಕೊನೆಗಾಣಿಸಬೇಕೆಂದು ಕರೆಕೊಟ್ಟ ರಾಯಣ್ಣ, ಜೊತೆಯಾಗಿ ಕುಳಿತು ಊಟಮಾಡುವ ಪದ್ಧತಿಯನ್ನು ಪರಿಚಯಿಸಿದ. ‘ಊಳಿಗಮಾನ್ಯತೆಯ ಇಲ್ಲದಿರುವಿಕೆಯನ್ನು’ ರಾಯಣ್ಣ ‘ಊಳಿಗಮಾನ್ಯತೆಯ ವಿರೋಧಿಯಾಗಿ’ ಪರಿವರ್ತಿಸಿದ್ದ. 

ಊಳಿಗಮಾನ್ಯ ಪ್ರಾಬಲ್ಯದ ನಡುವೆ ಚಳುವಳಿ ಬೆಳೆದಿದ್ದರೆ ಈ ಸಾಧ್ಯತೆಗಳಾಗಲೀ ವಿಶಿಷ್ಟತೆಗಳಾಗಲೀ ಅರಳುತ್ತಿರಲಿಲ್ಲ. 

ಜನಸಮೂಹದಿಂದ ಅಂತ ಕಾಯ್ದುಕೊಳ್ಳುತ್ತಿದ್ದ ಊಳಿಗಮಾನ್ಯ ವರ್ಗದ ಮಿತಿಗಳನ್ನು ದಾಟಿ, ರಾಯಣ್ಣನ ಮುಂದಾಳತ್ವದಲ್ಲಿ, ರೈತಾಪಿ ಜನರ ಗೆರಿಲ್ಲಾ ಯುದ್ಧಕ್ಕೆ ಬೇಕಾದ ತಳಹದಿಯನ್ನು ಹಾಕಲಾಗಿತ್ತು. ಇದನ್ನು ಹೇಗೆ ಸಾಧಿಸಲಾಯಿತು ಎಂದು ನಾವು ನೋಡೋಣ. 

ಅ. ಚಿಕ್ಕದರಿಂದ ದೊಡ್ಡದಕ್ಕೆ 

ರಾಯಣ್ಣ ಬಿಡಿಯ ಸರಕಾರಿ ಕಛೇರಿಯನ್ನು ಸುಟ್ಟುಹಾಕುವ ತನ್ನ ಮೊದಲ ದಾಳಿಯನ್ನು ನಡೆಸಿದಾಗ, ಅವನೊಡನೆ ಸುಮಾರು ನೂರು ಜನರಿದ್ದರು; ಈ ದಾಳಿ ನಡೆದಿದ್ದು 1830ರ ಜನವರಿ 5ರಂದು. ಮತ್ತು 1830ರ ಏಪ್ರಿಲ್ 8ರಂದು ಅವನನ್ನು ಸೆರೆಹಿಡಿಯುವ ಸಮಯದಲ್ಲಿ ಅವನೊಡನೆ 1000 ಜನ ಹೋರಾಟಗಾರರಿದ್ದರು. (62) 

ಧಾರವಾಡದ ಕಲೆಕ್ಟರ್ ಆಗಿದ್ದ ನಿಸ್ಬೆಟ್ ಬರೆದ ಪತ್ರದಲ್ಲಿ ಇದು ಪ್ರತಿಫಲಿಸಿದೆ: “ಬಂಡಾಯಗಾರರ ಸಂಖೈ ವೇಗವಾಗಿ ಹೆಚ್ಚುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನ ಬೇಡ ಮತ್ತು ಇದಕ್ಕೆ ಶೀಘ್ರವಾಗಿ ತಡೆ ಹಾಕದಿದ್ದರೆ ಇನ್ನೂ ಹಲವರು ಸೇರಿಬಿಡುತ್ತಾರೆ ಎಂದು ತಲೆಕೆಡಿಸಿಕೊಳ್ಳುವುದಕ್ಕೆ ಸಕಾರಣಗಳಿವೆ….” (63) 

ಆ. ಜನಸಾಮಾನ್ಯರ ಸಶಸ್ತ್ರ ಕಾರ್ಯಾಚರಣೆ 

ಅಮಲ್ದಾರರ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ಮೊದಲು ರಾಯಣ್ಣ ಕೊಟ್ಟ ಶಾಂತ ರೀತಿಯ ‘ತಪ್ಪೊಪ್ಪಿಗೆ’ಯಿಂದ ಹೇಗೆ ರಾಯಣ್ಣ ಜನರನ್ನು ಸಶಸ್ತ್ರ ಹೋರಾಟಕ್ಕೆ ಅಣಿಗೊಳಿಸಿದ ಎಂಬುದರ ಚಿತ್ರಣ ಲಭಿಸುತ್ತದೆ: “ಸಾವಿರದಷ್ಟು ಜನರು ಮಲೆನಾಡು ದೇಶದಿಂದ ಬಂದಿದ್ದರು. ಅವರನ್ನು ಜೊತೆಯಾಗಿಸಿಕೊಂಡು ನಾವು ಖಾನಾಪುರವನ್ನು ಲೂಟಿ ಮಾಡಿ ಶಂಶೇರ್ಗರ್ರಿಗೆ ವಾಪಸ್ಸಾದೆವು. ಆ ದಿನ 3000 ಜನರು ಜೊತೆಯಾದರು. ಅವರನ್ನು ಜೊತೆಯಾಗಿಸಿಕೊಂಡು ಇಟಗಿಗೆ ಹೋದೆವು ಮತ್ತು ಭೂಮಾಲೀಕ ರೈತರಿಂದ 5000 ರುಪಾಯಿಗಳಷ್ಟು ತೆರಿಗೆ ಸಂಗ್ರಹಿಸಿದೆವು.” (64) 

ರಾಯಣ್ಣ ಮುನ್ನಡೆಸಿದ ದಾಳಿಗಳಿಂದ ಜನರ ಸಂಖೈಯನ್ನು ಹೆಚ್ಚಿಸಿಕೊಳ್ಳಲಾಗುತ್ತಿತ್ತು. ಗೆರಿಲ್ಲಾಗಳು ಪ್ರಾರಂಭಿಸಿದ ಈ ರೀತಿಯ ಅಸಂಖ್ಯಾತ ದಾಳಿಗಳು ಹೆಚ್ಚಾಗಿ ಸರಕಾರಿ ಆಸ್ತಿಯ ಮೇಲೇ ನಡೆಯುತ್ತಿತ್ತು, ಹೊಸ ಭೂ ದಾಖಲೆಗಳನ್ನು ಸುಟ್ಟುಹಾಕುವುದು ಮತ್ತು ಬ್ರಿಟೀಷರ ಆಳ್ವಿಕೆಯ ಪ್ರಾರಂಭವಾಗುತ್ತಿದ್ದಂತೆ ಲೂಟಿಗಿಳಿದಿದ್ದ ಕ್ರೂರ ಭೂಮಾಲೀಕರು ಮತ್ತು ಅಧಿಕಾರಿಗಳಿಂದ ವಸೂಲು ಮಾಡುತ್ತಿದ್ದರು. ಈ ದಾಳಿಗಳಲ್ಲಿ ಜನಸಾಮಾನ್ಯರು ಹೆಚ್ಚಿನ ಸಂಖೈಯಲ್ಲಿ ಭಾಗವಹಿಸುತ್ತಿದ್ದುದು ಗೆರಿಲ್ಲಾಗಳು ಜನರನ್ನು ಕಾಡುತ್ತಿದ್ದ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿದ್ದರಷ್ಟೇ ಅಲ್ಲದೆ, ಈ ರೀತಿ ಸ್ಪಂದಿಸುವ ಮೂಲಕ, ದೊಡ್ಡ ಜನಸಮೂಹವನ್ನು ಅಣಿಗೊಳಿಸಿಕೊಂಡಿದ್ದರು, ದಾಳಿ ನಡೆಸಿದ ನಂತರ ಗೆರಿಲ್ಲಾಗಳು ಆ ಸ್ಥಳವನ್ನು ತೊರೆದುಬಿಡುವಷ್ಟರಲ್ಲಿ ಸ್ವಾಭಾವಿಕವಾಗೇ ಅನೇಕ ಹೋರಾಟಗಾರರು ಈ ಉದ್ದೇಶಕ್ಕೆ ಜೊತೆಯಾಗಿಬಿಡುತ್ತಿದ್ದರು. ಸಂಪಗಾಂವಿನ ಮೇಲೆ ನಡೆದ ದಾಳಿ ಇದಕ್ಕೊಂದು ಉದಾಹರಣೆ. (65) ಸಶಸ್ತ್ರ ದಾಳಿಯಲ್ಲಿದ್ದ ಈ ನಮೂನೆಯು ರಾಯಣ್ಣನ ಪಡೆ ಯಾಕಷ್ಟು ವೇಗವಾಗಿ ಬೆಳೆಯುತ್ತಿತ್ತು ಎನ್ನುವುದನ್ನು ತಿಳಿಸುತ್ತದೆ. 

ರಾಯಣ್ಣನ ಸಶಸ್ತ್ರ ಬಂಡಾಯಕ್ಕಿದ್ದ ಜನಪ್ರಿಯತೆಯನ್ನು ಅಸಹಾಕಾರದ ಮೂಲಕವೂ ಜನರು ವ್ಯಕ್ತಪಡಿಸಿದರು; ಅದರಲ್ಲೂ ಶೇಟ್ ಸನ್ನದಿಗಳು ರಾಯಣ್ಣನ ಚಟುವಟಿಕೆಯ ಬಗ್ಗೆ ಸರಕಾರಕ್ಕೆ ಯಾವುದೇ ಗುಪ್ತ ಮಾಹಿತಿಯನ್ನು ಹಂಚಿಕೊಳ್ಳಲೂ ನಿರಾಕರಿಸಿದರು. ಸಂಪಗಾವಿನ ಮೇಲೆ ನಡೆದ ದಾಳಿಯ ನಂತರ, ಸರಕಾರಿ ಪಡೆ ರಾಯಣ್ಣನನ್ನು ಹುಡುಕುತ್ತಿದ್ದಾಗ ಕಲೆಕ್ಟರ್ ನಿಸ್ಬೆಟ್ ಬರೆಯುತ್ತಾನೆ: “ಅಮಲ್ದಾರ ಮತ್ತು ಇತರರು ಕೆಲವು ಹಳ್ಳಿಗಳ ಗುಮಾಸ್ತರು ಬಂಡಾಯವೆದ್ದವರ ಕುರಿತು ಯಾವುದೇ ಮಾಹಿತಿ ನೀಡಲು ಸಹಕರಿಸುತ್ತಿಲ್ಲ ಎಂದು ಪದೇ ಪದೇ ಹೇಳಿದರು. ಈ ಗುಮಾಸ್ತರೂ ಕೂಡ ಬಂಡಾಯವೆದ್ದವರ ಜೊತೆಗೆ ಕೆಲಸ ಮಾಡುತ್ತಿದ್ದಂತೆ ಕಾಣುತ್ತದೆ, ಅವರಿಗೆ ಬೇಕಾದ ಮಾಹಿತಿಯನ್ನು ಕೊಡುತ್ತ, ಅವರ ದಾಳಿಗೆ ಯಾವೊಂದು ಪ್ರತಿರೋಧವನ್ನೂ ತೋರದೆ…..”(66) 

ಮುಂದುವರೆಸುತ್ತಾ ನಿಸ್ಬೆಟ್ “ಪ್ರಾಂತ್ಯದಲ್ಲಿರುವ ಎಲ್ಲಾ ಶೇಟ್ ಸನ್ನದಿಗಳು’ ಬಂಡಾಯಗಾರರ ಜೊತೆಯಾಗಿದ್ದಾರೆ ಎಂದು ಗಮನಿಸುತ್ತಾನೆ. (67) 

ಜನವರಿ 14ರಂದು, ಚಳುವಳಿಗಿದ್ದ ಜನಪ್ರಿಯ ಬೆಂಬಲದ ಬಗ್ಗೆ ನಿಸ್ಬೆಟ್ ಬರೆಯುತ್ತಾನೆ: “ಬಂಡಾಯಗಾರರನ್ನು ಬೀದಿಗಳಲ್ಲಿ ನೋಡಿದ್ದ ಜನರು ಅದರ ಬಗ್ಗೆ ನಮಗೆ ಹೇಳುವುದಿಲ್ಲ. ಲೂಟಿಕೋರರು ಇಲ್ಲಿದ್ದಾರೆ, ಅಲ್ಲಿದ್ದಾರೆ, ಎಲ್ಲೆಲ್ಲಿಯೂ ಇದ್ದಾರೆ – ನಮಗಿನ್ನೂ ಅವರನ್ನು ಹುಡುಕಲಾಗಿಲ್ಲ, ನಮ್ಮ ಚಟುವಟಿಕೆಯ ಬಗ್ಗೆ ಅವರಿಗೆ ಮಾಹಿತಿ ನೀಡಿಬಿಡುತ್ತಾರೆ.” (68) 

ಮುಂದಿನ ವಾರ:  ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ - 2

No comments:

Post a Comment