Sep 7, 2016

ಕಾವೇರಿದರೆ ಪ್ರಯೋಜನವಿದೆಯೇ?

ಡಾ. ಅಶೋಕ್. ಕೆ. ಆರ್
07/09/2016
ಪ್ರಜಾಪ್ರಭುತ್ವದಲ್ಲಿ ಬಂದ್, ಮುಷ್ಕರ, ಕೆಲಸಕ್ಕೆ ಹಾಜರಾಗದೇ ಇರುವುದು, ರಸ್ತೆತಡೆ, ರೈಲುತಡೆಗಳೆಲ್ಲವೂ ಪ್ರತಿಭಟಿಸುವ ವಿವಿಧ ಮಾರ್ಗಗಳು. ಬೇಡಿಕೆ ಈಡೇರಲು, ಆಳುವ ಸರ್ಕಾರದ, ಕಂಪನಿಗಳ ತಪ್ಪು ನಡೆಗಳನ್ನು ಖಂಡಿಸಲು – ಆ ನಡೆಯನ್ನು ಅವರು ಪುನರ್ ಪರಿಶೀಲಿಸುವಂತೆ ಮಾಡಲು ಈ ಪ್ರತಿಭಟನೆಯ ಮಾರ್ಗಗಳು ಇರಲೇಬೇಕು. ಬೆಂಗಳೂರಿನ ಗಾರ್ಮೆಂಟ್ ನೌಕರರು ಎರಡು ದಿನ ನಡೆಸಿದ ಪ್ರತಿಭಟನೆಯು ಸರಕಾರವು ಪಿ.ಎಫ್ ನೀತಿಯನ್ನು ಪುನರ್ ಪರಿಶೀಲಿಸುವಂತೆ ಮಾಡಿದ್ದು, ರಸ್ತೆ ಸಾರಿಗೆ ನೌಕರರು ನಡೆಸಿದ ಪ್ರತಿಭಟನೆಯಿಂದ ಒಂದಷ್ಟು ಬೇಡಿಕೆಗಳನ್ನಾದರೂ ಸರಕಾರ ಒಪ್ಪುವಂತೆ ಮಾಡಿದ ಇತ್ತೀಚಿನ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಸರ್ಕಾರದ ವಿರುದ್ಧ, ಖಾಸಗಿ ಕಂಪನಿಗಳ ವಿರುದ್ಧ ನಡೆಯುವ ಪ್ರತಿಭಟನೆಗಳು ಯಶಸ್ವಿಯಾಗಬಹುದು, ಒಂದು ಮಟ್ಟದ ಒಪ್ಪಂದಕ್ಕಾದರೂ ಕಾರಣವಾಗಬಹುದು. ಆದರೆ ನ್ಯಾಯಾಧೀಕರಣದ, ನ್ಯಾಯಾಲಯದ ವಿರುದ್ಧ ನಡೆಯುವ ಪ್ರತಿಭಟನೆಗಳಿಂದ ಪ್ರಯೋಜನವಿದೆಯೇ? ಪ್ರತಿಭಟನೆಯ ಬಿಸಿಯಿಂದಾಗಿ ನ್ಯಾಯಾಲಯಗಳು ಯಾವುದೇ ಕಾರಣಕ್ಕೂ ತಮ್ಮ ತೀರ್ಪನ್ನು ಪುನರ್ ಪರಿಶೀಲಿಸುವುದಾಗಲೀ, ನೀಡಿದ ತೀರ್ಪನ್ನು ವಾಪಸ್ಸು ಪಡೆದುಬಿಡುವುದಾಗಲೀ ಸಾಧ್ಯವಿದೆಯೇ? ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿರುವಾಗ ಕಾವೇರಿಯ ವಿಚಾರದಲ್ಲಿ ನಮ್ಮ ಕಾವೇರಿದ ಪ್ರತಿಭಟನೆಯು, ಶುಕ್ರವಾರ ಕರೆ ನೀಡಲಾಗಿರುವ ಬಂದ್ ಯಾವುದಕ್ಕಾಗಿ? ಯಾರ ವಿರುದ್ಧ?

ನಿನ್ನೆ ಮಂಡ್ಯದಲ್ಲಿ ನಡೆದ ಬಂದ್ ಇರಬಹುದು, ರಾಜ್ಯದ ವಿವಿದೆಡೆ ನಡೆದ ಪ್ರತಿಭಟನೆಗಳಿರಬಹುದು ಅದು ರಾಜ್ಯ ಸರಕಾರ ನೀರು ಬಿಡಬಾರದು ಎಂಬ ಬೇಡಿಕೆಯನ್ನೊಳಗೊಂಡಿದೆ. 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ನ್ಯಾಯಾಧೀಕರಣದ ತೀರ್ಪನ್ನು ಧಿಕ್ಕರಿಸಿದ್ದರು, ಸಿದ್ಧರಾಮಯ್ಯ ಕೂಡ ಅದೇ ರೀತಿ ಮಾಡಬೇಕು ಎನ್ನುವ ಬೇಡಿಕೆಗಳೂ ಇವೆ. ಧಿಕ್ಕರಿಸುವುದು ಸಾಧ್ಯವೇ? ಒಂದು ವೇಳೆ ಸಿದ್ಧರಾಮಯ್ಯ ನೀರು ನೀಡದೇ ಹೋದರೆ, ಸಹಜವಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟಿನ ಮೊರೆ ಹೋಗುತ್ತದೆ, ಕರ್ನಾಟಕದ ಮೇಲೆ ನ್ಯಾಯಾಂಗ ನಿಂದನೆಯ ಆಪಾದನೆ ಬರುತ್ತದೆ. ರಾಜ್ಯ ಸರಕಾರ ವಜಾಗೊಳ್ಳಬಹುದು, ಕೆ.ಆರ್.ಎಸ್ ಕೇಂದ್ರದ ಸುಪರ್ದಿಗೆ ಅಂದರೆ ಮಿಲಿಟರಿ/ಪ್ಯಾರಾ ಮಿಲಟರಿ ಪಡೆಗಳು ಅಣೆಕಟ್ಟನ್ನು ವಶಕ್ಕೆ ತೆಗೆದುಕೊಳ್ಳಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀರು ಬಿಡುವ ಎಲ್ಲಾ ಸಾಧ್ಯತೆಗಳೂ ಇವೆ. ಈಗಾಗಲೇ ಸುಪ್ರೀಂ ಕೋರ್ಟಿನ ಆದೇಶದಂತೆ 15,000 ಕ್ಯುಸೆಕ್ಸ್ ನೀರು ಹರಿದು ಹೋಗಿರಲಿಕ್ಕೂ ಸಾಕು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ನೀರು ಬಿಡೆನು ಎಂದು ಬೆಂಗಳೂರಿನಿಂದ ಮಂಡ್ಯದವರೆಗೂ ಪಾದಯಾತ್ರೆ ನಡೆಸಿದರು, ನಂತರ ಕದ್ದು ಮುಚ್ಚಿ ನೀರು ಬಿಟ್ಟುಬಿಟ್ಟಿದ್ದರು. 

ಕಾವೇರಿಯ ವಿಷಯದಲ್ಲಿ ಕರ್ನಾಟಕ ಸಂಪೂರ್ಣವಾಗಿ ಸೋತು ಹೋಗಿ ಬಹಳ ಕಾಲವಾಗಿದೆ ಎನ್ನುವುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಸ್ವಾತಂತ್ರಪೂರ್ವದಲ್ಲೂ ಸೋತಿದೆ, ಸ್ವಾತಂತ್ರ್ಯಾನಂತರದಲ್ಲಿ 2007ರಲ್ಲಿ ನ್ಯಾಯಾಧೀಕರಣ ಕೊಟ್ಟ ತೀರ್ಪಿನ ನಂತರ ಪೂರ್ಣವಾಗಿ ಸೋತು ಹೋಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಟಿಪ್ಪು ಸುಲ್ತಾನನ್ನು ಬ್ರಿಟೀಷರು ಸೋಲಿಸಿದ ನಂತರ ಸ್ಥಾಪನೆಯಾಗಿದ್ದು ಮೈಸೂರು ಒಡೆಯರ್ ಗಳ ಆಡಳಿತ. ಹೆಸರಿಗಿಲ್ಲಿ ಮೈಸೂರಿನ ಒಡೆಯರ್ ಗಳು ರಾಜರಾದರೂ ಪರೋಕ್ಷವಾಗಿ ಆಡಳಿತ ನಡೆಸುತ್ತಿದ್ದಿದ್ದು ಬ್ರಿಟೀಷರು. ಅತ್ತ ಕಡೆ ಮದ್ರಾಸಿನಲ್ಲಿ ಬ್ರಿಟೀಷರದೇ ನೇರ ಆಡಳಿತವಿತ್ತು. ಸಹಜವಾಗಿ ಕಾವೇರಿಯ ವಿಷಯದಲ್ಲಿ ಬ್ರಿಟೀಷರು ತಮ್ಮ ನೇರ ಆಳ್ವಿಕೆಯಿದ್ದ ಪ್ರದೇಶಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವಂತಹ ಕಾನೂನುಗಳನ್ನು ಜಾರಿಗೆ ತಂದರು. ಬ್ರಿಟೀಷರ ಕೃಪೆಯಲ್ಲಿದ್ದ ಮೈಸೂರು ರಾಜರಿಗೆ ಅದನ್ನು ಒಪ್ಪದೇ ಬೇರೆ ನಿರ್ವಾಹವಿರಲಿಲ್ಲ. ಕೆ.ಆರ್.ಎಸ್ ಅಣೆಕಟ್ಟೆಯನ್ನು ಕಟ್ಟುವಾಗಲೂ ಬ್ರಿಟೀಷರ ಅರ್ಥಾತ್ ಮದ್ರಾಸಿನ ಕಟ್ಟಪ್ಪಣೆಗಳಿಗೆ ಒಪ್ಪಲಾಗಿತ್ತು. ಸ್ವಾತಂತ್ರ್ಯ ನಂತರದಲ್ಲಾದರೂ ನಮಗೆ ಬೇಕಾದಂತೆ ಅಣೆಕಟ್ಟೆ ಕಟ್ಟುವುದು ಸಾಧ್ಯವಾಯಿತೇ? ಇಲ್ಲ. 1968ರಲ್ಲಿ ಹಾರಂಗಿ ಮತ್ತು ಕಬಿನಿ ಜಲಾಶಯಗಳನ್ನು ‘ಆರು ತಿಂಗಳಿಗಿಂತ ಹೆಚ್ಚಾಗಿ ಈ ಅಣೆಕಟ್ಟೆಗಳಲ್ಲಿ ನೀರು ಇಟ್ಟುಕೊಳ್ಳುವುದಿಲ್ಲ’ ಎನ್ನುವ ಶರತ್ತಿನೊಂದಿಗೇ ಕಟ್ಟಿದ್ದು. ಕರ್ನಾಟಕ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ನ್ಯಾಯಾಲಯಕ್ಕೆ ಹೋಯಿತು. ನೆಲ ಜಲ ಭಾಷೆಯ ವಿಷಯ ಬಂದಾಗ ತಮಿಳರಿಗೆ ತಮಿಳರೇ ಸಾಟಿ. ಪಕ್ಷ ಬೇಧ ಮರೆತು ಸಂಸತ್ತಿನಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಾರೆ, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಾರೆ, ಪ್ರಬಲವಾಗಿ ಲಾಬಿ ಮಾಡುತ್ತಾರೆ. ತಮಿಳುನಾಡಿನ ಪಕ್ಷಗಳಿಗಿರುವ ಮತ್ತೊಂದು ಅನುಕೂಲತೆಯೆಂದರೆ, ‘ನೀವು ಈ ವಿಷಯ ಮಾತಾಡ್ಬೇಡಿ, ಬಾಯ್ಮುಚ್ಚಿ’ ಎಂದು ಅಲ್ಲಿನ ಶಾಸಕ – ಸಂಸದರಿಗೆ ಹೇಳಲು ದೆಹಲಿಯಲ್ಲಿ ಯಾವುದೇ ಹೈಕಮ್ಯಾಂಡ್ ಇಲ್ಲ. ಅವರ ಹೈಕಮ್ಯಾಂಡುಗಳೆಲ್ಲ ಚೆನ್ನೈನಲ್ಲೇ ಇವೆ. ಪ್ರಾದೇಶಿಕ ಪಕ್ಷವಿಲ್ಲದ ಕರ್ನಾಟಕ ಹೈಕಮ್ಯಾಂಡಿನ ಮರ್ಜಿಗೆ ಬಿದ್ದಿರುವುದು ನಾವು ಸೋತು ಹೋಗಿರುವುದಕ್ಕೆ ಕಾರಣವೆಂದರೆ ತಪ್ಪಲ್ಲ. ಇನ್ನು ನ್ಯಾಯಾಲಯಗಳಲ್ಲಿ, ಟ್ರಿಬ್ಯುನಲ್ ಗಳ ಮುಂದೆ ಕರ್ನಾಟಕದ ವಕೀಲರು ಯಾವತ್ತೂ ಸರಿಯಾಗಿ ವಾದಿಸುವುದೇ ಇಲ್ಲ ಎನ್ನುವ ಆರೋಪವೂ ಇದೆ. ಜಲದ ವಿಷಯದಲ್ಲಿ ನಾವು ಪದೇ ಪದೇ ಸೋಲುತ್ತಿರುವುದು ನೋಡಿದರೆ ವಕೀಲರ ಅದಕ್ಷತೆಯೂ ನಮ್ಮ ಸೋಲಿಗೆ ಕಾರಣ ಎನ್ನಿಸದೇ ಇರದು. ಮೊನ್ನಿನ ತೀರ್ಪಿನ ಸಂದರ್ಭದಲ್ಲೂ ಕರ್ನಾಟಕ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತೇವೆ ಎಂದು ಹೇಳಿಕೆ ನೀಡಿತು, ತಮಿಳುನಾಡು ಇಪ್ಪತ್ತು ಸಾವಿರ ಕ್ಯುಸೆಕ್ಸ್ ನೀರು ಕೇಳಿತು. ಚೌಕಾಶಿ ಮಾಡಿದ ನ್ಯಾಯಾಲಯ ಹದಿನೈದು ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕೆಂದು ತೀರ್ಪು ನೀಡಿತು. ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ ಇನ್ನೂ ಬಹಳಷ್ಟು ನೀರು ಬಿಡಬೇಕಿದ್ದ ಕರ್ನಾಟಕವು ಬರ ಬಿದ್ದ ಕಾರಣ ನೀರು ಬಿಟ್ಟಿರಲಿಲ್ಲ. ನೀರು ಕೊಡುವುದಕ್ಕೆ ಸಾಧ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿಬಿಟ್ಟರೆ, ನ್ಯಾಯಾಲಯ ಅದನ್ನು ಅಮಾನವೀಯ ನಿರ್ಣಯ ಎಂದು ತೀರ್ಮಾನಿಸಿ ತಮಿಳುನಾಡಿನ ಬೇಡಿಕೆಯನ್ನೇ ಮನ್ನಿಸಿಬಿಡಬಹುದು ಎನ್ನುವ ಕಾರಣಕ್ಕೆ ಹತ್ತು ಸಾವಿರ ಕ್ಯುಸೆಕ್ಸ್ ನೀರು ಬಿಡುವ ಮಾತನಾಡಿತಾ? 

ಒಟ್ಟಿನಲ್ಲಿ ಇವೆಲ್ಲದರಿಂದಲೂ ಸ್ಪಷ್ಟವಾಗುವ ಅಂಶವೆಂದರೆ ಕಾವೇರಿ ಕರ್ನಾಟಕದಲ್ಲೇ ಹುಟ್ಟಿ, ತಮಿಳುನಾಡಿಗಿಂತ ಹೆಚ್ಚಾಗಿ ಕರ್ನಾಟಕದಲ್ಲೇ ಹರಿದರೂ ಕೂಡ ಕಾವೇರಿ ನದಿ ನೀರಿನ ಮೇಲೆ ಹೆಚ್ಚು ಹಕ್ಕು ಹೊಂದಿರುವುದು ತಮಿಳುನಾಡು. ಟ್ರಿಬ್ಯುನಲ್ಲಿನ ಕೊನೆಯ ತೀರ್ಪು ತಮಿಳುನಾಡಿನ ಪರವಾಗೇ ಬಂದಿದೆ, ನಾವದರಲ್ಲಿ ಸೋತುಹೋಗಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಮಳೆಯಾದ ದಿನಗಳಲ್ಲಿ ಇವ್ಯಾವುದೂ ನೆನಪಾಗುವುದಿಲ್ಲವಾದರೂ ಬರ ಬಿದ್ದ ಸಮಯದಲ್ಲಿ ಮತ್ತೆ ಭಾವನಾತ್ಮಕವಾಗಿ ನಾವೆಷ್ಟೇ ಪ್ರತಿಭಟಿಸಿದರೂ ಕೊನೆಗೆ ನೀರು ಬಿಡಲೇಬೇಕು ಎನ್ನುವ ವಾಸ್ತವವನ್ನು ಅರ್ಥೈಸಿಕೊಂಡಾದ ಮೇಲೆ ಇದಕ್ಕೆ ಯಾವುದೇ ರೀತಿಯ ಪರಿಹಾರವೂ ಇಲ್ಲವೇ ಎನ್ನುವ ಪ್ರಶ್ನೆಗಳೇಳುತ್ತವೆ. ನನ್ನ ಪ್ರಕಾರ ಕಾವೇರಿ ಸಮಸ್ಯೆಗೆ ಮೂರು ರೀತಿಯ ಪರಿಹಾರವಿದೆ.

1. ಕರ್ನಾಟಕ ರಾಜ್ಯವು ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವುದು

ತಮಿಳುನಾಡು ಕೇಂದ್ರದ ಮಟ್ಟದಲ್ಲಿ ಮಾಡುವ ಲಾಬಿ, ಅಲ್ಲಿನ ಪ್ರಾದೇಶಿಕ ಪಕ್ಷಗಳು ಕೇಂದ್ರದ ಮೇಲೆ ನಡೆಸುವ ಸವಾರಿ, ನಮ್ಮಲ್ಲಿ ಯಾವುದೇ ಪ್ರಾದೇಶಿಕ ಪಕ್ಷವಿಲ್ಲದಿರುವುದರಿಂದ ಭಾರತ ದೇಶದೊಳಗೆ ಕರ್ನಾಟಕ ಒಂದು ರಾಜ್ಯವಾಗಿ ಇರುವವರೆಗೂ ಈ ಸಮಸ್ಯೆ ಬಗೆಹರಿಯುವುದಿಲ್ಲ. ಕರ್ನಾಟಕ ಪ್ರತ್ಯೇಕ ದೇಶವಾಗಿಬಿಟ್ಟರೆ ಈಗಿರುವ ಯಾವ ಕಾನೂನೂ ಅನ್ವಯವಾಗುವುದಿಲ್ಲ, ಅಂತರರಾಷ್ಟ್ರೀಯ ಟ್ರಿಬ್ಯುನಲ್ ಗಳಲ್ಲಿ ವಾದ ವಿವಾದ ನಡೆಯಬಹುದು. ಕರ್ನಾಟಕ ದೇಶದ ಸೈನ್ಯ ಬಲವಾಗಿದ್ದರೆ ಆ ಟ್ರಿಬ್ಯುನಲ್ಲಿನ ತೀರ್ಪನ್ನು ಒಪ್ಪಬೇಕೆಂಬ ಕಟ್ಟಪ್ಪಣೆಯೂ ಇರುವುದಿಲ್ಲ. ಕಾವೇರಿಯ ನೀರು ಬರ್ತಾ ಬರ್ತಾ ಬೆಂಗಳೂರಿನ ಕುಡಿಯುವ ನೀರಾಗಷ್ಟೇ ಉಳಿದುಹೋಗುತ್ತಿದೆ. ಇದಕ್ಕೆ ಅನ್ಯರಾಜ್ಯಗಳ ವಲಸಿಗರ ಹೆಚ್ಚಳವೂ ಕಾರಣ. ಪ್ರತ್ಯೇಕ ದೇಶವಾಗಿಬಿಟ್ಟರೆ ಆ ಸಮಸ್ಯೆಗೂ ಪರಿಹಾರ ಸಿಗುತ್ತದೆ. 

2. ಅಣೆಕಟ್ಟೆಗಳನ್ನು ರೈತರ – ಜನರ ಸುಪರ್ದಿಗೆ ಬಿಟ್ಟುಬಿಡುವುದು

ರಾಜಕೀಯವೇ ಮುಖ್ಯವಾದ ರಾಜಕಾರಣಿಗಳು ಇದಕ್ಕೊಂದು ಪರಿಹಾರ ಕಂಡುಹಿಡಿಯುವುದಿಲ್ಲ, ನ್ಯಾಯಾಲಯಗಳು ಕೊಡುವ ಪರಿಹಾರ ನ್ಯಾಯಬದ್ಧವಾಗಿದೆಯೆಂದು ಎರಡೂ ಕಡೆಯವರಿಗೆ ಅನ್ನಿಸುವುದಿಲ್ಲ. ಸರಕಾರ ಮತ್ತು ನ್ಯಾಯಾಲಯದ ಮಟ್ಟದಲ್ಲಿ ಪರಿಹಾರವಾಗದ ಸಮಸ್ಯೆಯನ್ನು ಜನರೇ ಪರಿಹರಿಸಿಕೊಳ್ಳಲು ಸರಕಾರಗಳ ನಿಯಂತ್ರಣದಲ್ಲಿರುವ ಅಣೆಕಟ್ಟೆಗಳನ್ನು ರೈತರ – ಜನರ ಸುಪರ್ದಿಗೆ ಬಿಟ್ಟುಬಿಡಬೇಕು. ಎರಡೂ ರಾಜ್ಯಗಳ ರೈತರು – ಜನರು ಎರಡೂ ರಾಜ್ಯಗಳಲ್ಲಾಗಿರುವ ಮಳೆ, ಅಣೆಕಟ್ಟೆಯಲ್ಲಿರುವ ನೀರನ್ನು ಅಳೆದು ತೂಗಿ ಆಯಾ ವರುಷಕ್ಕೆ ನಿಯಮಗಳನ್ನು ರೂಪಿಸಿಕೊಳ್ಳುವುದು. ನದಿಪಾತ್ರದ ಜನರು ಈ ವರ್ಷ ಯಾವ ಯಾವ ಬೆಳೆಗಳನ್ನು ಬೆಳೆಯಬಹುದು, ಎಷ್ಟು ಬೆಳೆ ಬೆಳೆಯಬಹುದು ಎನ್ನುವ ಒಪ್ಪಂದವು ಪ್ರತಿ ವರುಷ ನವೀಕರಣವಾಗುತ್ತಲೇ ಇರಬೇಕು. ಇಲ್ಲಿನ ರೈತರ ಕಷ್ಟ ಅಲ್ಲಿನವರಿಗೆ, ಅಲ್ಲಿನ ರೈತರ ಕಷ್ಟ ಇಲ್ಲಿನವರಿಗೆ ಅರ್ಥವಾದರೆ ಅರ್ಧಕ್ಕರ್ಧ ಸಮಸ್ಯೆ ಪರಿಹಾರವಾಗಿಬಿಡುತ್ತದೆ. 

3. ತಮಿಳುನಾಡಿನ ಮಾದರಿಯನ್ನು ಅನುಸರಿಸುವುದು

ಮೇಲಿನೆರಡೂ ಪರಿಹಾರಗಳು ಎಷ್ಟು ಅವಾಸ್ತವಿಕ ಎನ್ನುವುದು ನಿಮ್ಮ ಅರಿವಿಗೂ ಬಂದಿರಬೇಕು. ಕರ್ನಾಟಕ ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವುದಿಲ್ಲ, ಭಾವನಾತ್ಮಕವಾಗಿ ಉಪಯೋಗಕ್ಕೆ ಬರುವ ವಿಷಯದಲ್ಲಿ ತಟಸ್ಥರಾಗಿ ನೀವೇ ಪರಿಹರಿಸಿಕೊಳ್ಳಿ ಎಂದು ಯಾವ ಸರಕಾರವೂ –ಯಾವ ಪಕ್ಷವೂ ಈ ಸಂಗತಿಯನ್ನು ಜನರೇ ಪರಿಹರಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ. ಮತ್ತಿದಕ್ಕಿರುವ ಪರಿಹಾರವೇನು? ತಮಿಳುನಾಡಿನ ಮಾದರಿಯೇ ಇದಕ್ಕೆ ಪರಿಹಾರ! ತಮಿಳುನಾಡು ನಡೆಸುವ ಲಾಬಿ, ಚಾಕಚಕ್ಯತೆಯಿಂದ ವಾದ ಮುಂದಿಡುವ ಅವರ ವಕೀಲರು, ನೆಲ-ಜಲ-ಭಾಷೆಯ ವಿಷಯಲ್ಲಿ ಅಲ್ಲಿನ ರಾಜಕಾರಣಿಗಳಲ್ಲಿರುವ ಒಗ್ಗಟ್ಟಿನ ಮಾದರಿಯನ್ನು ಕರ್ನಾಟಕವೀಗ ಅನುಸರಿಸಿದರೂ ಹೆಚ್ಚಿನ ಪ್ರಯೋಜನವಿಲ್ಲ. ಯಾಕೆಂದರೆ ಈಗಾಗಲೇ ಹೇಳಿರುವಂತೆ, ಕಾವೇರಿ ವಿಷಯದಲ್ಲಿ ಕರ್ನಾಟಕ ಸೋತು ಹೋಗಿ ಬಹಳ ವರುಷಗಳಾಗಿಬಿಟ್ಟಿದೆ. ಮತ್ಯಾವುದಿದು ನಾವು ಅನುಸರಿಸಬೇಕಿರುವ ತಮಿಳುನಾಡು ಮಾದರಿ?

ಗೂಗಲ್ ಮ್ಯಾಪ್ ತೆರೆಯಿರಿ. ಕಾವೇರಿ ಉಗಮವಾಗುವ ತಲಕಾವೇರಿಯಿಂದ ಕಾವೇರಿ ಸಮುದ್ರ ಸೇರುವವರೆಗೂ ಸ್ಕ್ರಾಲ್ ಮಾಡಿಕೊಂಡು ಸಾಗಿ. ನದಿಯ ಅಕ್ಕಪಕ್ಕದಲ್ಲಿ ಹಲವು ನೀಲಿ ಪ್ರದೇಶಗಳು ಕಾಣುತ್ತವೆ. ಕರ್ನಾಟಕದಲ್ಲಿ ವಿರಳವಾಗಿ ಕಂಡುಬರುವ ಈ ನೀಲಿ ಪ್ರದೇಶಗಳು, ಕಾವೇರಿ ನದಿ ತಮಿಳುನಾಡಿಗೆ ಪ್ರವೇಶಿಸಿದ ನಂತರ ಹೆಚ್ಚಾಗುತ್ತದೆ. ಮೆಟ್ಟೂರು ದಾಟಿ ಸಮುದ್ರದ ಬಳಿ ಸಾಗುತ್ತಿದ್ದಂತೆ ಮತ್ತಷ್ಟು ಮಗದಷ್ಟು ಹೆಚ್ಚಾಗುತ್ತದೆ. ಏನಿದು ನೀಲಿ ಪ್ರದೇಶಗಳು? ಚಿಕ್ಕ ಚಿಕ್ಕ ಕೆರಗಳನ್ನು ಸೂಚಿಸುತ್ತವೆ ಈ ನೀಲಿ ಪ್ರದೇಶಗಳು. ಕಾವೇರಿ ನದಿಯ ವಿಷಯದಲ್ಲಿ ಕರ್ನಾಟಕಕ್ಕೆ ಏನಾದರೂ ಪರಿಹಾರ ಅಂತ ಇದ್ದರೆ ಅದು ಕೆರೆಗಳಲ್ಲಿದೆ. ನಮ್ಮ ನೀರಾವರಿ ತಜ್ಞರು, ಜಲ ತಜ್ಞರು, ನೀರಾವರಿ ಇಲಾಖೆಯ ಅಧಿಕಾರಿಗಳು ನೀರಿನ ವಿಷಯದಲ್ಲಿ ಮುಂದಾಗಿ ಯೋಚಿಸದೆ ಹಲವು ಶತಮಾನಗಳ ಹಿಂದಾಗಿ ಯೋಚಿಸಿದರಷ್ಟೇ ನೀರಿನ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬಹುದು. ಕರ್ನಾಟಕದಲ್ಲಿ ಕಾವೇರಿ ನದಿ ಹರಿಯುವ ಊರುಗಳಲ್ಲಿನ ಕೆರೆಗಳು ಮಾಯವಾಗಿಬಿಟ್ಟಿವೆ, ನಾಲೆ ನೀರು ಕೊಂಡೊಯ್ಯುವ ಪ್ರದೇಶಗಳಲ್ಲಿನ ಬಹುತೇಕ ಕೆರೆಗಳಲ್ಲಿ ಒಂದೋ ಹೂಳು ತುಂಬಿಕೊಂಡಿದೆ, ಇಲ್ಲಾ ಒತ್ತುವರಿಯಾಗಿಬಿಟ್ಟಿದೆ. ಮಂಡ್ಯ ನಗರದಲ್ಲಿರುವ ನಮ್ಮ ಮನೆಯಲ್ಲಿರುವ ಬಾವಿಯಲ್ಲಿ ನೀರು ಬತ್ತಿದ್ದೇ ಇಲ್ಲ. ಆ ಬಾವಿಯೇನೂ ಆಳವಾದದ್ದಲ್ಲ, ಕೇವಲ ಹದಿಮೂರು ಅಡಿಯ ಬಾವಿಯದು. ಮಂಡ್ಯದ ಬಸ್ ನಿಲ್ದಾಣದಿಂದ ಎರಡು ಕಿಲೋಮೀಟರುಗಳ ಅಂತರದಲ್ಲಿದ್ದ ಚಿಕ್ಕಮಂಡ್ಯ ಕೆರೆಯನ್ನು ಮುಚ್ಚಿ ಹಾಕಿ ಅಲ್ಲಿ ನಿವೇಶನಗಳನ್ನು ಮಾಡಿಬಿಡೋಣ ಎಂಬ ಭಯಂಕರ ಯೋಚನೆ ಯಾರಿಗೆ ಬಂತೋ ಏನೋ ಕೆರೆ ಮುಚ್ಚಿ ಹೋಯಿತು. ನಮ್ಮ ಮನೆಯ, ಮಂಡ್ಯದ ಬಹುತೇಕ ಮನೆಗಳ ಕಡಿಮೆ ಆಳದ ಬಾವಿಗಳೂ ನೀರಿಲ್ಲದಂತಾಗಿಬಿಟ್ಟವು. ಈಗ ಮಂಡ್ಯಕ್ಕೂ ಪೈಪುಗಳ ಮೂಲಕ ಬರುವ ಕಾವೇರಿ ನೀರೇ ಬೇಕು, ಇಲ್ಲಾ ಅಂತರ್ಜಲವನ್ನು ಮೇಲೆತ್ತುವ ಬೋರ್ ವೆಲ್ಲುಗಳೇ ಬೇಕು. ಬೆಂಗಳೂರಿನಲ್ಲಿನ ಕೆರೆ ಒತ್ತುವರಿಯೂ ಇಲ್ಲಿನ ನೀರಿನ ಸಮಸ್ಯೆಗೆ ಕಾರಣವೆನ್ನುವುದು ತಿಳಿದೇ ಇದೆಯಲ್ಲ. ಇರೋ ಕೆರೆಗಳ ಹೂಳೆತ್ತುವುದಕ್ಕೆ ಆಸಕ್ತಿ ತೋರಿಸದ ಸರಕಾರ, ಊರಲ್ಲಿರುವ – ಊರಲ್ಲಿದ್ದ ಕೆರೆಗಳನ್ನು ಉಳಿಸಿಕೊಳ್ಳುವುದಕ್ಕೆ ಆಸಕ್ತಿ ತೋರಿಸದ ಸ್ಥಳೀಯರ ಸಂಖೈ ಹೆಚ್ಚಿರುವಾಗ ತಮಿಳುನಾಡಿನ ಮಾದರಿಯನ್ನು ಅನುಸರಿಸುತ್ತೀವಾ? ಹಳೆಯ ಕೆರೆಗಳನ್ನೇ ಉಳಿಸಿಕೊಳ್ಳದವರು ಹೊಸ ಕೆರೆಗಳನ್ನು ನಿರ್ಮಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೀವಾ? ಕೆರೆಗಳ ಬಗ್ಗೆ ಯೋಚಿಸದ ಸರಕಾರ ಮೇಕೆದಾಟುವಿನಲ್ಲಿ ಮತ್ತೊಂದು ಅಣೆಕಟ್ಟೆ ಕಟ್ಟುವ ಮಾತನ್ನಾಡುತ್ತದೆ. ಮತ್ತೊಂದು ಅಣೆಕಟ್ಟೆಯೆಂದರೆ ತಮಿಳುನಾಡಿನ ಜೊತೆಗೆ ಮತ್ತೊಂದು ಸುತ್ತಿನ ವಾದ ವಿವಾದಕ್ಕೆ ದಾರಿಯೆಂದೇ ಅರ್ಥವಲ್ಲವೇ? 

ಕೆರೆಗಳನ್ನು ನಿರ್ಮಿಸುವುದರಿಂದ ನೀರಿನ ಸಮಸ್ಯೆ ಅರ್ಧಕ್ಕರ್ಧ ಬಗೆಹರಿಯುತ್ತದೆ. ಆದರದಲ್ಲಿ ಅಣೆಕಟ್ಟೆಯ ನಿರ್ಮಾಣಕ್ಕೆ ಖರ್ಚಾಗುವಷ್ಟು ದುಡ್ಡಿಲ್ಲ, ಭಾವನಾತ್ಮಕವಾಗಿಯೂ ಕೆರೆಯ ನೀರು ನಮ್ಮನ್ನು ತಟ್ಟುವುದಿಲ್ಲ. ಮುಂದಿನ ವರುಷ ಮಳೆ ಚೆನ್ನಾಗಿ ಆದಾಗ ಕಾವೇರಿ ಸಮಸ್ಯೆಯೂ ಮರೆತುಹೋಗಿರುತ್ತದೆ, ತಮಿಳುನಾಡೂ ಮರೆತುಹೋಗಿರುತ್ತದೆ – ಐದಾರು ವರುಷಗಳ ನಂತರ ಮತ್ತೆ ಬರ ಬಿದ್ದಾಗ ಮತ್ತಿದೇ ಘಟನೆಗಳು ಪುನರಾವರ್ತನೆಯಾಗುತ್ತವೆ……

ಕಾವೇರಿಯ ವಿಷಯದಲ್ಲಿ ನಾವು ಸೋತು ಬಹಳ ಕಾಲವಾಗಿದೆ…… ಹೊಸ ಕೆರೆಗಳ ನಿರ್ಮಾಣ ಮತ್ತು ಇರುವ ಕೆರೆಗಳ ನವೀಕರಣದಿಂದಷ್ಟೇ ನಮ್ಮ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ…….

(ಕಾವೇರಿ ನದಿ ವಿವಾದದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಲು ವಸಂತಬಂದಾ ಬ್ಲಾಗಿನ ಈ ಲೇಖನಗಳನ್ನೂ ಓದಿ: ಭಾಗ 1, ಭಾಗ 2, ಭಾಗ 3, ಭಾಗ 4)

1 comment:

  1. ಕಾವೇರಿ ವಿವಾದವು ಮುಗಿದ ಅಧ್ಯಾಯ. ಇದಕ್ಕೆ ಪರಿಹಾರ ಬಿದ್ದ ಮಳೆ ನೀರನ್ನು ಹರಿಯಲು ಬಿಡದೆ ನೀರಿಂಗಿಸುವುದು. ಬಂದ್ ಮಾಡುವುದರಿಂದ ನಷ್ಟವೇ ಹೊರತು ಯಾವುದೇ ಪ್ರಯೋಜನ ಇಲ್ಲ. ಬಂದ್ ಮಾಡುವುದು ನಮ್ಮ ಕಾಲಿನ ಮೇಲೆ ನಾವೇ ಕಲ್ಲು ಎತ್ತಿ ಹಾಕಿಕೊಂಡಂತೆ. ಕಾವೇರಿ ಹೆಸರಿನಲ್ಲಿ ದಾಂಧಲೆ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ತಪ್ಪು. ಮಾಧ್ಯಮಗಳು ಜನರಿಗೆ ವಿವೇಕ ಹೇಳುವುದು ಒಳ್ಳೆಯದು. ಕಾವೇರಿ ವಿವಾದ ಮಳೆ ಕಡಿಮೆ ಇರುವ ವರ್ಷಗಳಲ್ಲಿ ಮಾತ್ರ ಭುಗಿಲೇಳುವುದರಿಂದ ರೈತರು ಮಹಾರಾಷ್ಟ್ರದ ಹಿವ್ರೆ ಬಜಾರ್ ಗ್ರಾಮ, ಅಣ್ಣಾ ಹಜಾರೆಯವರ ರಾಲೇಗಾವ್ ಸಿದ್ಧಿ ಗ್ರಾಮಗಳ ಮಾದರಿಯನ್ನು ಅನುಸರಿಸುವುದು ಎಲ್ಲರಿಗೂ ಕ್ಷೇಮ. ವೃಥಾ ಗಲಾಟೆ ಮಾಡುವುದರಿಂದ ಯಾವುದೇ ಸಾಧನೆ ಆಗುವುದಿಲ್ಲ.

    ReplyDelete