Sep 18, 2016

ಅಡ್ಗೆ ಮನೆ: ಅಣಬೆ ಮಸಾಲಾ.

ತಾಜಾ ಆಯ್ಸ್ಟರ್ ಅಣಬೆಯನ್ನು ಬಳಸಿಕೊಂಡು ರುಚಿಯಾದ ಅಣಬೆ ಮಸಾಲಾ ಮಾಡುವ ವಿಧಾನ. ಬಟನ್ ಅಣಬೆ ಬಳಸಿದರೂ ರುಚಿಯಾಗಿರುತ್ತದೆ.
ಒಂದು ಪ್ಯಾಕೆಟ್ ಆಯ್ಸ್ಟರ್ ಅಣಬೆಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಳ್ಳಿ.

ಎರಡು ಟೊಮ್ಯಾಟೋ. ಸಣ್ಣಗೆ ಹೆಚ್ಚಿದ  ಎರಡು ಈರುಳ್ಳಿ, ಎರಡು ಕಡ್ಡಿ ಕರಿಬೇವು, ನಾಲ್ಕು ಕಡ್ಡಿ ಪುದೀನಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಕಾಳು ಮೆಣಸು, ಒಂದು ಕಾಳು ಲವಂಗ, ಒಂದು ಚಿಕ್ಕ ತುಂಡು ಚೆಕ್ಕೆ, ಐದು ಗುಂಟೂರು ಮೆಣಸಿನಕಾಯಿ, ಐದು ಬ್ಯಾಡಗಿ ಮೆಣಸಿನಕಾಯಿ. (ಖಾರ ಕಮ್ಮಿ ಬೇಕೆಂದರೆ ಮೆಣಸಿನಕಾಯಿ ಕಡಿಮೆ ಹಾಕಿಕೊಳ್ಳಿ!)

ಬಾಂಡಲಿಗೆ ಎರಡು ಚಮಚ ಎಣ್ಣೆ ಹಾಕಿ.

ಐದು ಗುಂಟೂರು ಮೂರು ಬ್ಯಾಡಗಿ ಮೆಣಸಿನಕಾಯಿ, ಮೆಣಸು ಕಾಳು, ಚೆಕ್ಕೆ, ಲವಂಗ ಹಾಕಿ ಉರಿದುಕೊಳ್ಳಿ.

ನಂತರ ಅದೇ ಬಾಂಡಲಿಗೆ ಪುದೀನಾ ಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಉರಿಯಿರಿ.

ಉರಿದ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ಒಂದು ಚಮಚ ದಿನಿಯಾ ಪುಡಿ ಹಾಕಿ.


ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಂಡು ಬೇರೆ ಪಾತ್ರೆಗೆ ಹಾಕಿಕೊಳ್ಳಿ.

ಕತ್ತರಿಸಿದ ಎರಡು ಟೊಮೋಟೋ ಹಣ್ಣನ್ನು ಮಿಕ್ಸಿಗೆ ಹಾಕಿ.

ಟೊಮೋಟೋ ಪೇಸ್ಟ್ ತಯಾರಿಸಿಕೊಳ್ಳಿ.

ಬಾಂಡಲಿಯಲ್ಲಿ ಕತ್ತರಿಸಿದ ಅಣಬೆಯನ್ನು ಹಾಕಿ ಉರಿಯಿರಿ. ಅಣಬೆ ನೀರು ಬಿಟ್ಟುಕೊಳ್ಳುತ್ತದೆ, ನೀರು ಆವಿಯಾಗಿ ಅಣಬೆ ಒಂಚೂರು ಕಂದು ಬಣ್ಣಕ್ಕೆ ತಿರುಗುವವರೆಗೆ ಉರಿಯಿರಿ.

ಬಾಂಡಲಿಗೆ ಒಂದು ಚಮಚ ಎಣ್ಣೆ ಹಾಕಿ, ಎರಡು ಬ್ಯಾಡಗಿ ಮೆಣಸಿನಕಾಯಿ, ಕರಿಬೇವನ್ನು ಕರಿಯಿರಿ.

ಕರಿದ ಕರಿಬೇವು ಮತ್ತು ಮೆಣಸಿನಕಾಯಿಯನ್ನು ಪಕ್ಕದಲ್ಲಿಡಿ.

ಒಂದು ಚಮಚ ಎಣ್ಣೆಯನ್ನು ಬಾಂಡಲಿಗೆ ಹಾಕಿ ಈರುಳ್ಳಿಯನ್ನು ಉರಿಯಿರಿ.


ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.

ಶುಂಠಿ ಬೆಳ್ಳುಳ್ಳಿಯ ಹಸಿ ವಾಸನೆ ಹೋಗುವವರೆಗೂ ಉರಿಯಿರಿ.

ನಂತರ ಟೊಮ್ಯಾಟೋ ಪೇಸ್ಟ್ ಹಾಕಿ.


ಮೂರು ನಿಮಿಷಗಳ ಕಾಲ ಕುದಿಸಿ. 

ನಂತರ ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ.

ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

ಉರಿದಿಟ್ಟುಕೊಂಡ ಅಣಬೆಯನ್ನುಬಾಂಡಲಿಗೆ ಹಾಕಿ.

ಎಲ್ಲವನ್ನೂ ಚೆನ್ನಾಗಿ ಕಲಸಿ.

ಅರ್ಧದಿಂದ ಮುಕ್ಕಾಲು ಲೋಟ ನೀರು ಹಾಕಿ.

ಮುಚ್ಚಳ ಮುಚ್ಚಿ ಹತ್ತು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ಮಧ್ಯ ಮಧ್ಯ ನೀರಿದೆಯಾ ಎಂದು ನೋಡಲು ಮರೆಯಬೇಡಿ! (ಬಟನ್ ಅಣಬೆಯಾದರೆ ಬೇಗ ಬೆಂದುಬಿಡುತ್ತದೆ)

ಅಣಬೆ ಬೆಂದ ನಂತರ ಕರಿದ ಕರಿಬೇವು ಮತ್ತು ಮೆಣಸಿನಕಾಯಿಯನ್ನು ಹಾಕಿ.

ಸಿದ್ಧವಾದ ಅಣಬೆ ಮಸಾಲಾ ಚಪಾತಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

No comments:

Post a Comment