Sep 30, 2016

ಮೇಕಿಂಗ್ ಹಿಸ್ಟರಿ: ಬೆಳಗುತ್ತಿ-ಬಾದಾಮಿ-ನಿಪ್ಪಾಣಿ-ಚಿತ್ರದುರ್ಗ-ಬೀದರ್

saketh rajan
ಸಾಕೇತ್ ರಾಜನ್ 

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
26/09/2016
7. ಬೆಳಗುತ್ತಿ (1835)


ಬೆಳಗುತ್ತಿಯನ್ನು 1804ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್, ವೆಂಕಟಪ್ಪ ನಾಯಕನಿಗೆ ಇನಾಮು ಹಳ್ಳಿಯಾಗಿ ನೀಡಿದ್ದ. ಜೊತೆಗೆ, ವೆಂಕಟ್ಟಪ್ಪ ಮಗ ತಿಮ್ಮಾ ನಾಯಕನ ದಿನನಿತ್ಯದ ಹಾಲು ಬೆಣ್ಣೆಗಾಗಿ, ರಾಜ ವಾರ್ಷಿಕ 220 ವರಹಗಳನ್ನು ಕೊಡುಗೆಯಾಗಿ ನೀಡುತ್ತಿದ್ದ. ಆದರಿದನ್ನು ನಂತರದಲ್ಲಿ ಬ್ರಿಟೀಷರು ನಿಲ್ಲಿಸಿಬಿಟ್ಟರು. 1830ರಲ್ಲಿ, ತಿಮ್ಮಪ್ಪ ನಾಯಕ ತನ್ನ ಬಡತನದ ಬಗ್ಗೆ ಬರೆದುಕೊಂಡು ಮುಂಚಿದ್ದ ಜಾಗೀರನ್ನು ಮತ್ತೆ ಸ್ಥಾಪಿಸಬೇಕೆಂದು ಕೇಳಿಕೊಂಡ. ಆದರೆ ಬ್ರಿಟೀಷರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. 1830ರಲ್ಲಿ, ನಗರದ ಬಂಡಾಯವನ್ನು ಮುನ್ನಡೆಸಿದ್ದ ಬೂಡಿ ಬಸಪ್ಪ, ಬೆಳಗುತ್ತಿಗೆ ಭೇಟಿ ನೀಡಿ, ತನ್ನ ಗೆಲುವಿನೊಂದಿಗೆ ನಿನ್ನ ಜಾಗೀರು ನಿನಗೆ ಸಿಗುತ್ತದೆ ಎಂದು ತಿಮ್ಮಪ್ಪನಿಗೆ ಭರವಸೆ ಕೊಟ್ಟಿದ್ದ. ತಿಮ್ಮಪ್ಪ ನಾಯಕ ನಗರದ ಬಂಡಾಯಕ್ಕೆ ತನ್ನ ಬೆಂಬಲ ಸೂಚಿಸಿದ. (48)1835ರ ಮೇ ತಿಂಗಳಿನಲ್ಲಿ, ನಗರದ ಬಂಡಾಯವನ್ನು ಹತ್ತಿಕ್ಕಾದ ಎರಡು ವರುಷಗಳ ನಂತರ, ಬ್ರಿಟೀಷರು ದಂಗೆಯೆದ್ದಿದ್ದ ಬೆಳಗುತ್ತಿಯ ಕಡೆಗೆ ತಮ್ಮ ಗಮನ ಹರಿಸಿದರು. “ತಿಮ್ಮಪ್ಪ ನಾಯಕ ಮತ್ತು ಮರಿಯಪ್ಪ ನಾಯಕ ಸೇರಿ, ತಿಮ್ಮಪ್ಪ ನಾಯಕನ ಮಗನಾದ ದಿಗಂಬರಪ್ಪನನ್ನು ಬೆಳಗುತ್ತಿಯ ಪಾಳೇಗಾರನನ್ನಾಗಿ ನೇಮಿಸಿದರು….” (49). ಆದರೆ ಈ ಚಿಕ್ಕ ಬಂಡಾಯವನ್ನು ಮೈಸೂರಿನಲ್ಲಿ ನೆಲೆ ನಿಂತಿದ್ದ ಬ್ರಿಟೀಷರ ಸೈನ್ಯ ಸುಲಭವಾಗಿ ಮಣಿಸಿತು.

8. ಬಾದಾಮಿ (1840)

ಬ್ರಿಟೀಷರ ದಾಖಲೆಗಳಿಂದ ಹೆಕ್ಕಿದ ಈ ಕೆಳಗಿನ ವಿವರವನ್ನು ಕೃಷ್ಣಾ ರಾವ್ ಮತ್ತು ಹಾಲಪ್ಪ ನಮಗೆ ನೀಡುತ್ತಾರೆ. “ನಿಂಬಿನ ಛತ್ರಪತಿಯನ್ನು ಕಾಶಿಗೆ ಕರೆದುಕೊಂಡು ಹೋಗಿದ್ದಾಗ ನಿಂಬಾಜಿ ಅಥವಾ ನರಸಪ್ಪ ಎನ್ನುವ ಬ್ರಾಹ್ಮಣನೊಬ್ಬ ಸಂದರ್ಶಿಸುತ್ತಾನೆ. ಅಹಮದ್ ನಗರ, ಪೂನಾ, ನಾಸಿಕ್ ಮತ್ತು ರಾಯಚೂರಿನಲ್ಲಿ ಪ್ರವಾಸ ಮಾಡುತ್ತಾನೆ ನಿಂಬಾಜಿ. ಶೋರಾಪುರದಲ್ಲಿ, ಅರಬ್ ಜಮಾದಾರ ಸಲೀಮ್ ಬಿನ್ ಅಸೂದ್ ಅಲಿಯಾಸ್ ಕೊಹೆರಾನನನ್ನು ಭೇಟಿಯಾಗುತ್ತಾನೆ. ಕೊಹೆರಾನ್ ಮತ್ತು ಮತ್ತೊಬ್ಬ ಅರಬ್ ತಲೀಬ್ ಬಿನ್ ಅಲಿಯ ಸಹಾಯದಿಂದ, ಸಾವಿರ ಜನರನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಂಡು ರಾಯಚೂರಿನ ದಿಯೋದುರ್ಗದಿಂದ ಬಾದಾಮಿ ಕೋಟೆಯ ಕಡೆಗೆ ಹೊರಡುತ್ತಾನೆ, ಬಾದಾಮಿಯ ಕೋಟೆಯನ್ನು ಬ್ರಿಟೀಷರು ನಿರ್ಲ್ಯಕ್ಷಿಸಿದ್ದರು. ದಂಗೆಕೋರರು ಕಾವಲುಗಾರರನ್ನು ಸಾಯಿಸಿ ಕೋಟೆಯನ್ನು ವಶಪಡಿಸಿಕೊಂಡರು. ನರಸಿಂಗರಾವ್ ಸತಾರಾ ರಾಜನ ಧ್ವಜವನ್ನು ಹಾರಿಸಿದ ಮತ್ತು ಕೋಟೆಯನ್ನು ಉಪವಿಭಾಗದಂತೆ ಆಳಲಾರಂಭಿಸಿದ. ಆದರೆ, ತತ್ ಕ್ಷಣವೇ ಕಂಪನಿಯ ಸೈನ್ಯವನ್ನು ಕಾರವಾರ ಮತ್ತು ಬೆಳಗಾವಿಯಿಂದ ಬಾದಾಮಿಗೆ ಕಳುಹಿಸಲಾಯಿತು ಮತ್ತು ಕೋಟೆಯನ್ನು ಬ್ರಿಟೀಷರು ವಾಪಸ್ಸು ಪಡೆದರು. ನರಸಿಂಗರಾವ್ ಮತ್ತವನ ಅರಬ್ ಸ್ನೇಹಿತರನ್ನು ಬಂಧಿಸಿ ಬೆಳಗಾವಿಗೆ ಕರೆದುಕೊಂಡು ಹೋಗಿ ಮರಣದಂಡನೆ ವಿಧಿಸಲಾಯಿತು. ಆದರೆ ಅವನ ಕುರುಡುತನದ ಕಾರಣದಿಂದ, ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಯಿತು. ನರಸಿಂಗರಾವನನ್ನು ಅಹಮದಾಬಾದ್ ಜೈಲಿನಲ್ಲಿ ಬಂಧಿಸಿಡಲಾಗಿತ್ತು ಎಂದು ತೋರುತ್ತದೆ ಮತ್ತಲ್ಲಿ ಅವನು 1862ರಲ್ಲಿ ಮರಣ ಹೊಂದಿದ.” (50)

9. ನಿಪ್ಪಾಣಿ (1841)

ಸ್ಟೋಕ್ಸ್ ತನ್ನ Historical Account of Belgaumನಲ್ಲಿ, ಊಳಿಗಮಾನ್ಯ ನಾಯಕತ್ವದಡಿ ನಿಪ್ಪಾಣಿಯಲ್ಲಿ 1841ರಲ್ಲಿ ನಡೆದ ಮತ್ತೊಂದು ಬಂಡಾಯದ ಬಗ್ಗೆ ನಮಗೆ ತಿಳಿಸುತ್ತಾರೆ. ದೇಸಾಯಿಗಳ ಸೇವೆಯಲ್ಲಿದ್ದ ಮುನ್ನೂರು ಜನ ಅರಬರ ಸಹಾಯದೊಂದಿಗೆ, ರಘುನಾಥ ರಾವ್ “ಕೋಟೆಯನ್ನು ವಶಕ್ಕೆ ಪಡೆದುಕೊಂಡು ಪ್ರಭುತ್ವಕ್ಕೆ ಸವಾಲು ಹಾಕಿದ. ಕೋಟೆಯನ್ನು ಸೋಲಿಸಲು ಸೈನ್ಯದ ನೆರವನ್ನು ಕೋರಬೇಕಾಯಿತು. 1841ರ ಫೆಬ್ರವರಿ 20ರಂದು ದಾಳಿ ನಡೆಸಲಾಯಿತು ಮತ್ತು ಮರುದಿನ ಅವರು ಶರಣಾದರು. ಪ್ರಮುಖ ನಾಯಕರನ್ನು ಶಿಕ್ಷಿಸಲಾಯಿತು….” (51)

10. ಚಿತ್ರದುರ್ಗ (1849)

ಶಾಮ ರಾವ್ ಹೇಳುತ್ತಾರೆ “1849ರಲ್ಲಿ, ಚಿತ್ರದುರ್ಗದ ಪಾಳೇಗಾರ ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬ ಬಂಡಾಯವೇಳಿಸಲು ಪ್ರಯತ್ನಿಸಿದ. ಆದರೆ ಈ ಬಂಡಾಯವನ್ನು ಬಲುಸುಲಭದಲ್ಲಿ ಹತ್ತಿಕ್ಕಲಾಯಿತು, ಕಾರಣ ಕುಟುಂಬದವರಾಗಲೀ, ಜನರಾಗಲೀ ಇದರ ಬಗ್ಗೆ ಆಸಕ್ತಿ ತೋರಲಿಲ್ಲ.” (52)

11. ಬೀದರ್ (1852)

ಕೃಷ್ಣರಾವ್ ಮತ್ತು ಹಾಲಪ್ಪ ಬರೆಯುತ್ತಾರೆ: “ಬೀದರ್ ಜಿಲ್ಲೆಯಲ್ಲಿ ಮತ್ತೆ 1852ರಲ್ಲಿ ತೊಂದರೆಗಳಾರಂಭವಾಯಿತು – ಲಿಂಗಪ್ಪ ಬಂಡಾಯವೆದ್ದಾಗ. ಜಿಲ್ಲೆಯ ಹಲವು ಪ್ರದೇಶಗಳನ್ನು ಬಂಡಾಯಗಾರರು ಆಕ್ರಮಿಸಿಕೊಂಡಿದ್ದರು. ಕಂಪನಿಯ ಪಡೆಗಳು ಬಂಡಾಯಗಾರರ ಬಳಿಗೆ ನಡೆದು 1852ರ ಮಾರ್ಚಿ 19ರಿಂದ 24ರವರೆಗೆ ಅವರ ಮೇಲೆ ಕ್ರಮ ಕೈಗೊಂಡರು. ಬಂಡಾಯವನ್ನು ದಮನಗೊಳಿಸಲಾಯಿತು ಮತ್ತು ಸ್ವೇರ್ಗಾಮ್, ದೌಬೆ, ಕೂಕುಲ್ ಗುಂಗ್, ಬೂರ್ಕೆ, ಜುಲೆಕ್ಟೆ, ದಾಪ್ಲಿಯಾ ಮತ್ತು ಹುಲುದ್ಸಿರಾನದ ಕೋಟೆಗಳನ್ನು ವಶಪಡಿಸಿಕೊಂಡು ನಾಶಗೊಳಿಸಲಾಯಿತು.” (53)

1857ರ ಬಂಡಾಯಕ್ಕೂ ಮುನ್ನ ಊಳಿಗಮಾನ್ಯ ಮುಖಂಡರ ನಾಯಕತ್ವದಲ್ಲಿ ನಡೆದ ಕೆಲವು ಹೋರಾಟಗಳಿವು. 1857, ಕರ್ನಾಟಕದಲ್ಲೂ ಪ್ರತಿಧ್ವನಿಸಿತ್ತು. ಪ್ರತಿಯೊಂದು ಹೋರಾಟದ ಸಂಪೂರ್ಣ ವಿವರಗಳಿಗೆ ನಾವು ಹೋಗುವುದು ಬೇಡ, ಯಾಕೆಂದರೆ ಅವೆಲ್ಲವೂ ಊಳಿಗಮಾನ್ಯ ದೊರೆಗಳು ಅಥವಾ ರಾಜರು ಮುನ್ನಡೆಸಿದ್ದು ಮತ್ತು ಅವರ ಪೂರ್ವಜರ ಅಂತ್ಯದಂತೆಯೇ ಇವುಗಳೂ ಕೊನೆಗೊಂಡವು.


ಡೇವಿಡ್ ಅರ್ನಾಲ್ಡ್ ತನ್ನ ಪುಸ್ತಕ Police Power and Colonial Ruleನಲ್ಲಿ ಬಳ್ಳಾರಿಯಲ್ಲಿ 1850ರ ದಶಕದಲ್ಲಿ ತುಂಬಾ ಆತಂಕಕಾರಿ ಪರಿಸ್ಥಿತಿಯಿತ್ತು ಎಂದು ತಿಳಿಸುತ್ತಾನೆ. ಅವನು ಬರೆಯುತ್ತಾನೆ: “….ಪ್ರಭುತ್ವವು ಚಳುವಳಿಯನ್ನು ನಿಯಂತ್ರಿಸುವ ಮತ್ತು ಬೇಳೆಕಾಳುಗಳ ಬೆಲೆಯನ್ನು ನಿರ್ಧರಿಸುವ ವಿಚಾರದಲ್ಲಿ ಎಚ್ಚರಿಕೆಯಿಂದ ನಿಗ್ರಹ ಕಾಪಾಡಿಕೊಂಡಿದ್ದರೆ, ಜನಸಮೂಹದ ಕೋಪ ಮತ್ತು ಬೇಡಿಕೆಯಿಂದ ವರ್ತಕರನ್ನು ರಕ್ಷಿಸಲು ಮಧ್ಯಪ್ರವೇಶಿಸಲು ತೀರ್ಮಾನ ಮಾಡಿಕೊಂಡಿತ್ತು. 1855ರ ಸೆಪ್ಟೆಂಬರ್ ತಿಂಗಳಿನಲ್ಲಿ, ಲೂಟಿಕೋರರ ಧೈರ್ಯಗೆಡಿಸಲು ಸೈನಿಕರು ಬಳ್ಳಾರಿ ಜಿಲ್ಲೆಯಲ್ಲಿ ಪಥ ಸಂಚಲನ ನಡೆಸಿದರು ಮತ್ತು ಸರಕಾರ ‘ಬೇಳೆ ಕಾಳು ವ್ಯಾಪಾರಗಾರರ ಮೇಲೆ ಹಲ್ಲೆ ನಡೆಸುವ ತಪ್ಪಿತಸ್ಥರೆಲ್ಲರಿಗೂ ತೀರ್ವವಾದ ರೀತಿಯಲ್ಲಿ ಶಿಕ್ಷೆ ಕಾದಿದೆ’ ಎಂದು ಎಚ್ಚರಿಕೆ ನೀಡಿತು’.” (54)

65 ವರುಷಗಳಿಂದ ವಸಾಹತು ಲೂಟಿಗೆ ಒಳಗಾಗಿದ್ದ ಬಳ್ಳಾರಿಯ ಜನತೆ, ಬೇಳೆ ಕಾಳಿಗಾಗಿ ಗಲಭೆ ಎಬ್ಬಿಸಲು, ಲೂಟಿ ಮಾಡಲು ತಯಾರಾಗುವ ಹಂತಕ್ಕೆ ತಲುಪಿಬಿಟ್ಟಿದ್ದರು.

ಹಾಗಿದ್ದರೂ, 1857ರ ಸ್ವಾತಂತ್ರ್ಯದ ಯುದ್ಧದ ನಾಯಕರುಗಳ ಜೊತೆಗೆ ಸಮನ್ವಯದಿಂದ ಕೆಲಸ ಮಾಡಿದ ಊಳಿಗಮಾನ್ಯ ದೊರೆಗಳು, ಜನರ ಈ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಿಲ್ಲ; ಬದಲಿಗೆ ತಮ್ಮಿಡೀ ಪ್ರಯತ್ನವನ್ನು ಕೋಟೆ ಯುದ್ಧಕ್ಕೆ ಸೀಮಿತಗೊಳಿಸಿ, ವಸಾಹತುಶಾಹಿಯ ವಿರುದ್ಧದ ಹೋರಾಟವನ್ನು ಬ್ರಿಟೀಷರ ಕೈ ಸೇರಿಬಿಡುತ್ತಿದ್ದ ತಮ್ಮ ಚಿಕ್ಕ ಪುಟ್ಟ ಪ್ರಾಂತ್ಯಗಳನ್ನುಳಿಸಿಕೊಳ್ಳುವುದಕ್ಕಷ್ಟೇ ಸೀಮಿತಗೊಳಿಸಿಕೊಂಡುಬಿಟ್ಟರು.

ಪ್ರಮುಖ ನಾಯಕರಾಗಿದ್ದವರು ಮುಂಡರಗಿಯ ಭೀಮಾ ರಾವ್, ನರಗುಂದದ ಭಾಸ್ಕರ ರಾವ್ ಅಥವಾ ಬಾಬಾ ಸಾಹೇಬ್ – ಇಬ್ಬರೂ ಧಾರವಾಡದವರು; ಗುಲ್ಬರ್ಗದ ಸುರಪುರದ ಬೇಡರ ರಾಜ ವೆಂಕಟಪ್ಪ ನಾಯಕ. ಇವರಿಗ ಬಿಜಾಪುರದ ಹಿಪ್ಪರಗಿ ತಾಲ್ಲೂಕಿನ ಜಂಬಗಿಯ ದೇಶಮುಖ, ಹಮ್ಮಿಗಿಯ ದೇಸಾಯಿ ಕೆಂಚಣ್ಣ ಗೌಡ, ಸೊರಟೂರು ದೇಸಾಯಿ, ದುಂಬಾಲ್ ದೇಸಾಯಿ, ತೋರಂಗಲ್ಲಿನ ರಾಜ ಮತ್ತು ಕೊಪ್ಪಳದ ಕೆಂಚಣ್ಣ ಗೌಡ ಜೊತೆಯಾದರು. ಇವರು ನಾನಾ ಸಾಹೇಬನ ಜೊತೆ ಸಮನ್ವಯ ಸಾಧಿಸಿ ಚಟುವಟಿಕೆ ನಡೆಸುತ್ತಿದ್ದರು. ಹಾಗಿದ್ಯೂ, ಜೊತೆಜೊತೆಯಲ್ಲೇ ಹೋರಾಟ ನಡೆಸಬೇಕೆಂಬ ಇವರುಗಳ ಯೋಜನೆ ವಿಫಲವಾಯಿತು, ಮತ್ತು ಶತ್ರು ಬ್ರಿಟೀಷರೊಂದಿಗೆ ಮುಖಾಮುಖಿ ಹೋರಾಟ ನಡೆಸಿದರು. ಆದರೆ ಶೀಘ್ರವಾಗಿ ಅವರನ್ನು ಸೋಲಿಸಲಾಯಿತು.

ಊಳಿಗಮಾನ್ಯ ದೊರೆಗಳು ಹೂಡಿದ ಹೋರಾಟದಲ್ಲಿ ಒಂದು ಭೌಗೋಳಿಕ ಮಾದರಿಯಿದೆ. ಅವೆಲ್ಲವೂ ಬಾಂಬೆ ಪ್ರೆಸಿಡೆನ್ಸಿ ಮತ್ತು ಹೈದರಾಬಾದಿನ ನಿಜಾಮನ ಆಡಳಿತದಲ್ಲಿ ಹೆಚ್ಚು ಕೇಂದ್ರೀಕೃತಗೊಂಡಿತ್ತು. ಊಳಿಗಮಾನ್ಯ ವರ್ಗದ ಪಾಳೇಗಾರರ ಪದರವನ್ನು ಹದಿನೇಳನೇ ಶತಮಾನದ ಕೊನೆಯಲ್ಲಿ ಚಿಕ್ಕದೇವರಾಜ ಒಡೆಯರ್ ಮತ್ತು ಹತ್ತೊಂಭತ್ತನೇ ಶತಮಾನದ ಕೊನೆಯ ದಶಕಗಳಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ನಾಶಪಡಿಸಿದ್ದರು ಎಂದು ಮೇಕಿಂಗ್ ಹಿಸ್ಟರಿಯ ಒಂದನೇ ಸಂಪುಟದಲ್ಲಿ ನಾವು ತೋರಿಸಿದ ಅಂಶವನ್ನು ಮತ್ತೊಮ್ಮೆ ದೃಡೀಕರಿಸುತ್ತದೆ. ಹದಿನೆಂಟನೇ ಶತಮಾನದ ಕೊನೆಯಲ್ಲಿ, ಮೈಸೂರು ಸಂಸ್ಥಾನದ ಹೃದಯ ಭಾಗದಲ್ಲಿ ಊಳಿಗಮಾನ್ಯ ದೊರೆಗಳು ನಡೆಸಿದ ಹೋರಾಟಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪವಾಗಿತ್ತು, ಕಾರಣ ಈ ಪ್ರದೇಶದಲ್ಲಿ ಪಾಳೇಗಾರರ ವರ್ಗವನ್ನು ಆಗಲೇ ನಾಶ ಮಾಡಲಾಗಿತ್ತು.

ಈ ಹಳೆಯ ಪಾಳೇಗಾರರು ಬ್ರಿಟೀಷರ ಜೊತೆ ಯುದ್ಧಕ್ಕೆ ನಿಲ್ಲಲು ಕೆಲವು ಪ್ರಮುಖ ಕಾರಣಗಳಿದ್ದವು. ಒಂದೆಡೆ, ಅಧ್ಯಾಯ ಎರಡರಲ್ಲಿ ಗಮನಿಸಿದಂತೆ ಬ್ರಿಟೀಷರು ಊಳಿಗಮಾನ್ಯತೆಯ ಜೊತೆಗೆ ಮೈತ್ರಿ ಮಾಡಿಕೊಂಡ ಐತಿಹಾಸಿಕ ವಾಸ್ತವ. ಆದರೆ, ಈ ವಾಸ್ತವದೊಳಗೂ, ಮತ್ತೊಂದೆಡೆ ಕರ್ನಾಟಕದಲ್ಲಿ ಬ್ರಿಟೀಷರ ಆಳ್ವಿಕೆ ಪ್ರಾರಂಭಗೊಂಡ ಮೊದಲ ಆರು ದಶಕಗಳಲ್ಲಿ ಒಂದು ಅಸಾಧಾರಣ ಪ್ರವೃತ್ತಿಯೂ ಸಾಂದರ್ಭಿಕವಾಗಿ ಕಾಣಿಸಿಕೊಳ್ಳುತ್ತಲೇ ಇತ್ತು. ಊಳಿಗಮಾನ್ಯ ದೊರೆಗಳ ಒಂದು ವರ್ಗ ಬ್ರಿಟೀಷರ ಜೊತೆಗೆ ಸಾವು – ಬದುಕಿನ ಹೋರಾಟವನ್ನು ಕೈಗೊಂಡರು. ಇದಕ್ಕೆ ಹೇಗೆ ಉತ್ತರಿಸಬೇಕು? ಮತ್ತಿದು, ಬ್ರಿಟೀಷರು ಊಳಿಗಮಾನ್ಯತೆಯ ಜೊತೆಗೆ ಒಂದು ಸ್ಥಿರ ಮೈತ್ರಿಯನ್ನು ಮಾಡಿಕೊಂಡಿದ್ದರೂ ಎಂಬಂಶವನ್ನು ಇಲ್ಲವೆನ್ನುತ್ತದಾ?

ಬ್ರಿಟೀಷರ ಜೊತೆಗೆ ಯುದ್ಧ ಮಾಡಿದ ಎಲ್ಲಾ ಊಳಿಗಮಾನ್ಯ ದೊರೆಗಳೂ, ಪ್ರಾರಂಭದ ದಿನಗಳಲ್ಲಿ ಬ್ರಿಟೀಷರೊಡನೆ ಒಪ್ಪಂದಕ್ಕೆ ಸಹಿ ಹಾಕಿದ್ದರು ಎನ್ನುವುದನ್ನು ಮರೆತುಬಿಡಬಾರದು. ಆ ಸಮಯದಲ್ಲವರಿಗೆ, ಬ್ರಿಟೀಷರೂ ಕೂಡ ತಮ್ಮ ಮಾಜಿ ಊಳಿಗಮಾನ್ಯ ರಾಜರಂತೆಯೇ ಇರುತ್ತಾರೆ ಎನ್ನುವುದರ ಅರಿವಾಗಿರಲಿಲ್ಲ. ಊಳಿಗಮಾನ್ಯತೆಯ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುತ್ತಿದ್ದ ಬ್ರಿಟೀಷರು ಅದೇ ಸಮಯದಲ್ಲಿ ಅವರನ್ನು ಪುನರ್ ರಚಿಸುವ ಕಾರ್ಯವನ್ನೂ ಪ್ರಾರಂಭಿಸಿದ್ದರು. ಇದರಿಂದಾಗಿ, ದೇಶಗತಿಗಳು ಮತ್ತು ಪಾಳೇಗಾರರು ತಮ್ಮ ಹೆಚ್ಚಿನ ಸೈನ್ಯವನ್ನು, ಅನುಕೂಲಗಳನ್ನು, ಸೌಕರ್ಯಗಳನ್ನು, ಪ್ರತಿಷ್ಠೆಯನ್ನು ಕಳೆದುಕೊಂಡರು. ನಿಗ್ರಹಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದವರಿಗೆ ಬ್ರಿಟೀಷ್ ಆಡಳಿತದ ನಿಯಮಿತ ತಪಾಸಣೆ ಮತ್ತು ಸಲಹೆಗಳಿಂದ ಕಿರಿಕಿರಿಯಾಗುತ್ತಿತ್ತು. ಮತ್ತು ಕೊನೆಗೆ, ಗಂಡು ಸಂತಾನವಿಲ್ಲದವರು ತಮ್ಮ ಸಾಮ್ರಾಜ್ಯವನ್ನು ಮತ್ತು ತಮ್ಮ ಅಧಿಕಾರಕ್ಷೇತ್ರವನ್ನು ಸಂಪೂರ್ಣವಾಗಿ ಬಿಟ್ಟುಕೊಡಬೇಕಾಗಿತ್ತು. ಈ ಪುನರ್ ರಚನೆಗೆ ಬಹುತೇಕ ದೊರೆಗಳು ಒಪ್ಪಿಕೊಂಡರಾದರೂ, ಕೆಲವರಿಗೆ ಈ ಹೊಸ ನೀತಿ ನಿಯಮಗಳಿಗೆ ಒಗ್ಗಿಕೊಳ್ಳುವುದಾಗಲೀ, ಬದಲಾದ ರೀತಿಯಲ್ಲಿ ಅಸ್ತಿತ್ವದಲ್ಲಿರುವುದಾಗಲೀ ಸಾಧ್ಯವಾಗಲಿಲ್ಲ.

ಜೊತೆ ಜೊತೆಗೆ ಮತ್ತೊಂದು ಅಂಶವೂ ಕಾರ್ಯನಿರ್ವಹಿಸುತ್ತಿತ್ತು. ಬ್ರಿಟೀಷರ ಜೊತೆಗಿನ ಮೈತ್ರಿಯು, ನಾವೀಗಾಗಲೇ ಮೊದಲ ಭಾಗದಲ್ಲಿ ಕಂಡಂತೆ ಆರ್ಥಿಕ ಹೊರೆಯನ್ನೇರುತ್ತಿತ್ತು. ಮಾಜಿ ಪಾಳೇಗಾರರು ಊಹಿಸಲೂ ಆಗದಷ್ಟು ಹೆಚ್ಚಿನ ಮೊತ್ತದ ಕಪ್ಪ ಕಾಣಿಕೆಯನ್ನು ವಾರ್ಷಿಕವಾಗಿ ಕೊಡಬೇಕಾಗಿತ್ತು. ಆದ್ದರಿಂದ ಅವರು ಹೊಸ ರೀತಿಯ ದೋಚುವ ತೆರಿಗೆ ಪದ್ಧತಿಯನ್ನು ಪರಿಚಯಿಸಿದರು. ಪ್ರತಿ ವರುಷವೂ ಕಾರ್ಮಿಕರನ್ನು, ಕುಶಲ ಕೆಲಸಗಾರರನ್ನು ಮತ್ತು ಸಣ್ಣ ವ್ಯಾಪಾರಿಗಳನ್ನು ಹಿಂಡಿ ಹಿಪ್ಪೆ ಮಾಡಲಾಗುತ್ತಿತ್ತು. ಬ್ರಿಟೀಷ್ ಉತ್ಪಾದನೆಯನ್ನು ಆಮದು ಮಾಡಿಕೊಳ್ಳುತ್ತಿದ್ದ ಕಾರಣದಿಂದ ಜನಸಮೂಹದಲ್ಲಿ ದಿವಾಳಿಯೇಳುವವರ ಸಂಖೈ ಅಧಿಕವಾಗುತ್ತಿತ್ತು. ಜನಸಮೂಹದ ಪರಿಸ್ಥಿತಿ ಹದಗೆಟ್ಟಿತು ಮತ್ತು ಕ್ಷಾಮದ ಸಮಯದಲ್ಲಿ, ನೊಗದ ಭಾರ ಹೊರುವುದು ಅಸಾಧ್ಯವಾಗಿಬಿಟ್ಟಿತು. ಜನರು ಪ್ರಕ್ಷುಬ್ಧರಾಗಿದ್ದರು. ಊಳಿಗಮಾನ್ಯ ದೊರೆಗಳಿಗೆ ಇದು ಗೊತ್ತಿತ್ತು. ಮತ್ತು ಪುನರ್ ರಚನೆಗೆ ಒಗ್ಗಿಕೊಳ್ಳಲಾಗದ ಕೆಲವರು, ಈ ಬಿಕ್ಕಟ್ಟನ್ನು ಬ್ರಿಟೀಷರ ವಿರುದ್ಧ ಕ್ರೋಡೀಕರಿಸಲು ಪ್ರಯತ್ನಿಸಿದರು.

ಸೌಕರ್ಯಗಳನ್ನು ಕಳೆದುಕೊಂಡು, ಕೋಪದಿಂದ ಉದ್ರಿಕ್ತವಾಗಿದ್ದ ಜನರ ಗುಂಪಿನ ನಾಯಕರಾಗಿದ್ದ ಕೆಲವರು ಯುದ್ಧವನ್ನು ಆಯ್ದುಕೊಂಡರು. ಅವರು ವಸಾಹತುಶಾಹಿ ಮತ್ತು ಊಳಿಗಮಾನ್ಯತೆಯ ನಡುವಿನ ಸಾಮಾನ್ಯ ಮೈತ್ರಿಕೂಟಕ್ಕೆ ಅಪವಾದದಂತಾದರು. ಅವರು ಕರ್ನಾಟಕದ ಇತಿಹಾಸವನ್ನು ತಮ್ಮ ಅಸಾಧಾರಣವಾದ ಧೀರ ಕಾರ್ಯಗಳಿಂದ ಅಲಂಕರಿಸಿದರು.

ಪಾಳೇಗಾರ ವರ್ಗವು ಮುನ್ನಡೆಸಿದ ಈ ಎಲ್ಲಾ ಹೋರಾಟಗಳಲ್ಲೂ ಒಂದು ಸಾಮಾನ್ಯ ಮಾದರಿಯಿತ್ತು. ಒಬ್ಬರಿಂದೊಬ್ಬರು ದೂರವಿದ್ದರು, ಚದುರಿ ಹೋಗಿದ್ದರು ಮತ್ತು ಪರಸ್ಪರರಲ್ಲಿ ಹೊಂದಾಣಿಕೆ ತುಂಬಾ ಕಡಿಮೆಯಿತ್ತು. ಇತರೆ ಹೋರಾಟಗಳೊಂದಿಗೆ ಸಮನ್ವಯತೆ ಸಾಧಿಸುವುದಕ್ಕೆ ಕಷ್ಟವಾಗಿದ್ದಕ್ಕೆ ಕಾರಣ ಮುಖಂಡತ್ವದಲ್ಲಿದ್ದ ವರ್ಗ ಗುಣಗಳು. ತನ್ನ ಪ್ರಪಂಚದ ಸುತ್ತಳತೆಯೊಳಗೇ ಕಾರ್ಯನಿರ್ವಹಿಸುತ್ತಿತ್ತು. ಮತ್ತು ಆ ಪ್ರಪಂಚವೆಂದರೆ ಒಂದಷ್ಟು ಹಳ್ಳಿಗಳ ಗುಂಪು ಅಥವಾ ಅಬ್ಬಬ್ಬಾ ಎಂದರೆ ಒಂದು ಪ್ರಾಂತ್ಯ. ಊಳಿಗಮಾನ್ಯ ವರ್ಗದ ನಾಯಕತ್ವ ಹೋರಾಟಕ್ಕೆ ಸ್ವನಿಯಂತ್ರಣದ ಮಾದರಿಯನ್ನೂ ಹೇರಿಕೊಂಡಿತ್ತು. ಈ ಎಲ್ಲಾ ಹೋರಾಟಗಳು, ಕೆಲವು ಕಿತ್ತೂರಿನಂತೆ, ದೊಡ್ಡ ಪ್ರಮಾಣದಲ್ಲಿ ನಡೆದರೂ, ಹಳೆಯ ವರ್ಗೀಯ ಹೆಜ್ಜೆಗುರುತುಗಳಿರುತ್ತಿತ್ತು ಮತ್ತು ಯಾವುದೇ ರೀತಿಯ ಪ್ರಗತಿ ಕಾಣಲು ವಿಫಲವಾಗುತ್ತಿತ್ತು. ವಸಾಹತುಶಾಹಿಯೊಡನೆ ಮುಖಾಮುಖಿಯಾದ ತಕ್ಷಣ ಐತಿಹಾಸಿಕ ಸಂದರ್ಭವನ್ನು ತೊರೆದು ಹೋಗುವ ಸುಸ್ತಾಗಿಹೋಗಿರುವ ವರ್ಗದಿಂದ ಮತ್ತೇನನ್ನು ನಿರೀಕ್ಷಿಸಬಹುದು? ಒಂದು ವರ್ಗವಾಗಿ ಅದು ವಸಾಹತುವಿಗೆ ನೇತು ಬಿದ್ದಿತು, ಮತ್ತು ತಮ್ಮ ಹಳೆಯ ಸೌಕರ್ಯಗಳನ್ನು ಮರಳಿ ಪಡೆಯುವ ಸಲುವಾಗಿ ಕೆಲವು ಹತಾಶ ಸದಸ್ಯರು ಹೋರಾಟ ನಡೆಸಿದರು, ಐತಿಹಾಸಿಕ ಮುನ್ನಡೆಯನ್ನು ಕಂಡರೂ, ಸುಲಭವಾಗಿ ಸೋಲುಂಡರು. ಈ ಹೋರಾಟಗಳು ರೈತ - ಕಾರ್ಮಿಕರು ನಡೆಸಿದ ಹೋರಾಟಕ್ಕೆ ಹೋಲಿಸಿದರೆ ಸಂಪೂರ್ಣ ತದ್ವಿರುದ್ಧ ನೆಲೆಯಲ್ಲಿವೆ. ವರ್ಗ ನಾಯಕತ್ವ ಮತ್ತು ವಸಾಹತು ವಿರೋಧಿ ಪ್ರಜ್ಞೆಯಿರುವ ಪೀಳಿಗೆಯ ನಡುವಿನ ಸಂಬಂಧದ ಬಗ್ಗೆ ಸಂಪುಟಗಟ್ಟಲೇ ಮಾತನಾಡುತ್ತದೆ.

ಹಾಗಾದರೆ, ಈ ಊಳಿಗಮಾನ್ಯ ನಾಯಕತ್ವ ಮುನ್ನಡೆಸಿದ ಹೋರಾಟಗಳ ಗುಣ ಲಕ್ಷಣಗಳೇನಿದ್ದವು? ಅದರಲ್ಲಿ ಮೂರು ಪ್ರಮುಖ ಲಕ್ಷಣಗಳಿದ್ದವು. ಮೊದಲಿಗೆ, ರೈತ – ಕಾರ್ಮಿಕ ಸಮೂಹವನ್ನು ಸಜ್ಜುಗೊಳಿಸಲು ವಿಫಲವಾದರು; ಎರಡನೆಯದಾಗಿ, ಅವು ಕಡಿಮೆ ಸಮಯವಷ್ಟೇ ಜೀವಂತವಾಗಿದ್ದ ಹೋರಾಟಗಳಾಗಿದ್ದವು; ಮತ್ತು ಮೂರನೆಯದಾಗಿ, 1640ರಷ್ಟು ಹಿಂದೆಯೇ ಬೂರ್ಜ್ವಾ ಕ್ರಾಂತಿಯ ಸಂದರ್ಭದಲ್ಲಿ ದೊರೆಗಳ ಜಹಗೀರುಗಳನ್ನು, ರಾಜರ ಕೋಟೆಗಳನ್ನು ಪುಡಿಗಟ್ಟಿದ್ದ ಶತ್ರುವಿನ ವಿರುದ್ಧ ಕೋಟೆಯಾಧಾರಿತ ಯುದ್ಧವನ್ನು ನಡೆಸಿದ್ದು.

ಜನಸಮೂಹದ ಕೋಪವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಊಳಿಗಮಾನ್ಯ ನಾಯಕತ್ವ ವಿಫಲವಾಯಿತು. ಶೇಟ್ ಸನ್ನದಿಗಳನ್ನು ಕೋಟೆಗಳನ್ನು ರಕ್ಷಿಸಲು ಕರೆತಂದಿದ್ದರ ಹೊರತು, ಸೈನಿಕರನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಅವಶ್ಯಕವಿದ್ದ ಜನಸಮೂಹದ ನೆರವನ್ನು ಪಡೆದುಕೊಳ್ಳಲಿಲ್ಲ. ಹಾಗಾಗಿ, ಬ್ರಿಟೀಷರೆಡೆಗೆ ಕೋಪವಿದ್ದರೂ ಜನಸಮೂಹ ಜಡವಾಗಿತ್ತು, ತಟಸ್ಥವಾಗಿತ್ತು. ಇದು ಸೋಲಿಗೆ ಪ್ರಮುಖ ಕಾರಣ. ಕಾಲದಿಂದಲೂ ಜನಸಮೂಹವನ್ನು ಶೋಷಣೆಗೊಳಪಡಿಸಿದ್ದ ಊಳಿಗಮಾನ್ಯ ವರ್ಗ, ಅವರ ಅನುಕಂಪವನ್ನು ಪಡೆಯಲು ವಿಫಲವಾಯಿತು. ಜನಸಮೂಹ ಊಳಿಗಮಾನ್ಯರ ಯುದ್ಧವನ್ನು ಅನುಮಾನದಿಂದ ನೋಡುತ್ತಿತ್ತು. ವಾಸ್ತವದಲ್ಲಿ, ಪಾಳೇಗಾರರು ಈ ಮುಂಚೆ ನಡೆಸಿದ ಯುದ್ಧಗಳಿಂದ ಹೊರೆಯಾಗುತ್ತಿದ್ದ ಕುಶಲಕರ್ಮಿಗಳಿಗೆ ಮತ್ತು ರೈತರಿಗೆ. ಆದ್ದರಿಂದ ಈ ಸಮೂಹ ಸಿಕ್ಕ ಮೊದಲ ಅವಕಾಶದಲ್ಲೇ ವಸಾಹತುಶಾಹಿಗಳ ವಿರುದ್ಧದ ಹೋರಾಟದಲ್ಲಿ ಊಳಿಗಮಾನ್ಯ ಮುಖಂಡರ ಕೈಜೋಡಿಸಲು ಆತುರ ಪಡುವ ಯಾವುದೇ ಮನಸ್ಥಿತಿಯಲ್ಲಿರಲಿಲ್ಲ. ಊಳಿಗಮಾನ್ಯ ವರ್ಗದ ಪ್ರತ್ಯೇಕತೆ, ಅವರ ಶೋಷಣಾತ್ಮಕ ವರ್ತನೆಗಳಿಂದಾಗಿ ಇದು ಸಹಜವಾಗಿತ್ತು, ಈ ಸಶಸ್ತ್ರ ಹೋರಾಟಗಳ ವ್ಯಾಪ್ತಿಯನ್ನು ಕುಗ್ಗಿಸಿತು, ಬಹಳ ಎಂದರೆ ಇದು ಅಲ್ಲಲ್ಲಿ ಕಂಡ ಅದ್ಭುತ ಸೈನಿಕ ಹೋರಾಟವಷ್ಟೇ.

ಎರಡನೆಯ ಲಕ್ಷಣವೆಂದರೆ ಈ ಹೋರಾಟಗಳು ಹಸುಗೂಸಿನ ಹಂತದಲ್ಲೇ ಮರಣ ಹೊಂದಿದ್ದು. ಹುಟ್ಟಿದ ತಕ್ಷಣವೇ ಈ ಹೋರಾಟಗಳು ಸೋಲನ್ನನುಭವಿಸಿದವು ಮತ್ತು ಜೀವಂತವಾಗುಳಿಯಲು ವಿಫಲವಾದವು. ಕೆಲವಂತೂ ಕೇವಲ ಕೆಲವು ದಿನಗಳ ಮಟ್ಟಿಗೆ ಮಾತ್ರವಿದ್ದವು; ಇನ್ನುಳಿದವು, ಬಹಳ ಅಂದರೆ ಹಲ ತಿಂಗಳುಗಳ ಮಟ್ಟಿಗಿತ್ತು. ಈ ಹೆಚ್ಚಿನ ಕಾಲಾವಧಿ ಕೂಡ ಬಂಡಾಯವೆದ್ದವರ ಹೋರಾಟದ ಕೆಚ್ಚಿನ ಕಾರಣಕ್ಕಾಗಿ ಆಗದೆ, ಶತ್ರು ಬೇರೆಡೆ ತೊಡಗಿಸಿಕೊಂಡಿದ್ದು ಹಾಗೂ ಬೇಕಾದ ಪಡೆಗಳನ್ನು ಸೇರಿಸಲು ಸಮಯ ಬೇಕಾಗಿದ್ದುದು ಕಾರಣವಾಗಿತ್ತು. ಬಹಳಷ್ಟು ಹೋರಾಟಗಳು ಶತ್ರುವಿಲ್ಲದಾಗ ಅಥವಾ ಶತ್ರುವಿನ ಪಡೆ ಕಡಿಮೆ ಪ್ರಮಾಣದಲ್ಲಿ ಬಂದಿದ್ದಾಗ ಮಾತ್ರ ಗೆಲುವು ಕಂಡಿದ್ದರು, ವಸಾಹತುಶಾಹಿ ಪೂರ್ಣ ತಯಾರಿಯಿಂದ ನಡೆಸಿದ ಮೊದಲ ದಾಳಿಯಲ್ಲೇ ಧೂಳೀಪಟವಾಗಿಬಿಟ್ಟವು. ಶತ್ರುವಿನ ದಾಳಿಯಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಉಳಿಯುವುದೇ ಸಾಧ್ಯವಾಗದಿದ್ದದ್ದು ಜನಸಮೂಹದ ಬೆಂಬಲವನ್ನು ಗಳಿಸಿಕೊಳ್ಳದೇ ಹೋದದ್ದಕ್ಕೆ ಮತ್ತೊಂದು ಪ್ರಮುಖ ಕಾರಣ. ಈ ದುರ್ಬಲತೆಗೆ ಕಾರಣವೇನೆಂದು ನೋಡಿದರೆ, ಒಂದೆಡೆ ಜನಸಮೂಹದ ಬೆಂಬಲ ಗಳಿಸಿಕೊಳ್ಳದೇ ಇದ್ದದ್ದು ಹಾಗೂ ಈ ಬಂಡಾಯವನ್ನು ಪ್ರಾರಂಭಿಸಿದವರು ನಡೆಸಿದ ಯುದ್ಧದ ರೀತಿ.

ಚಿಕ್ಕರಾಜ ಒಡೆಯರ ಕಾಲದಿಂದಾರಂಭವಾಗಿ, ಊಳಿಗಮಾನ್ಯ ರೀತಿಯ ಯುದ್ಧ ಸೈನ್ಯ ಪದ್ಧತಿಯಲ್ಲಾಗಲೇ ಬಳಕೆಯಿಂದ ದೂರ ಸರಿದುಬಿಟ್ಟಿತ್ತು. ಹೈದರ್ ಇದಕ್ಕೆ ಪ್ರಮುಖ ಬದಲಾವಣೆಗಳನ್ನು ಮಾಡಿ ಹೊಸ ಹೊಸ ರೀತಿಯ ಯುದ್ಧ ರೀತಿಗಳನ್ನು ಅನ್ವೇಷಿಸಿದ; ಇದನ್ನು ನಂತರ ಟಿಪ್ಪು ಅವುಗಳನ್ನು ನಿರೂಪಿಸಿ, ಹೊಸ ರಾಜ್ಯದ ಉದಯದೊಂದಿಗೆ ಮಿಲಿಟರಿ ವಿಜ್ಞಾನದಲ್ಲಿ ಆಧುನಿಕತೆಯನ್ನು ಪರಿಚಯಿಸಿದ. ಆಧುನಿಕ ಭಾರತ ಸೃಷ್ಟಿಸಿದ ವಸಾಹತುಶಾಹಿ ಈಗಾಗಲೇ ಬ್ರಿಟನ್ನಿನಲ್ಲಿ ಊಳಿಗಮಾನ್ಯ ಯುದ್ಧ ಪದ್ಧತಿಯನ್ನು ದಮನಿಸುವ ಅನುಭವ ಗಳಿಸಿಕೊಂಡಿತ್ತು ಮತ್ತು ಭಾರತದ ಜಮೀನ್ದಾರರ ಪ್ರತಿಭಟನೆಯ ದನಿಯನ್ನು ಹತ್ತಿಕ್ಕಿತ್ತು. ಈ ‘ಬೆಟ್ಟದ ಮೇಲಿನ ಮುಖ್ಯಸ್ಥರು’ ಹೈದರ್ ಮತ್ತು ಟಿಪ್ಪು ನಡೆಸಿದ ಪಾಳೇಗಾರ ವಿರೋಧಿ ಅಲೆಯಲ್ಲಿ ಕೊಚ್ಚಿಹೋದರು. ಪಾಳೇಗಾರರು ತಮ್ಮ ಕೋಟೆಯೊಳಗೆ ಕುಳಿತ ಕಾರಣ ಅವರನ್ನು ಸುತ್ತುವರೆಯುವುದು ಸುಲಭವಾಯಿತು ಮತ್ತವರನ್ನು ಸೋಲಿಸುವುದು ಸಲೀಸಾಯಿತು. ಅದರ ವರ್ಗ ಗುಣಗಳ ಕಾರಣದಿಂದ, ಅದು ಇತಿಹಾಸದಿಂದ ಪಾಠ ಕಲಿಯಲೇ ಇಲ್ಲ. ಬ್ರಿಟೀಷರೆಡೆಗೆ ಪ್ರತಿಭಟಿಸಲು, ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು, ಅದು ಹಳೆಯ ಆತ್ಮಹತ್ಯಾ ಮಾದರಿಯ ಯುದ್ಧ ಪದ್ಧತಿಗೇ ಶರಣಾಯಿತು. ಚೆನ್ನಮ್ಮಳ ಉದಾಹರಣೆಯಲ್ಲಿ, ಶೇಟ್ ಸನ್ನದಿಗಳನ್ನು ದೊಡ್ಡ ಸಂಖೈಯಲ್ಲಿ ಕೋಟೆಗೆ ಬರಲು ಆದೇಶಿಸಿದ್ದು, ಅವಳ ಅಪಾರ ಸೈನಿಕ ಶಕ್ತಿಯನ್ನು ಸಮಾಧಿಯೊಳಗೆ ಕೂರಿಸಿದಂತೆ ಆಗಿಹೋಯಿತು. ಇದು ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ತಡೆ ಹಾಕಿತು. ಕೋಟೆಯೊಳಗಿನಿಂದ ಯುದ್ಧ ಮಾಡುವ ಪದ್ಧತಿ ತತ್ ಕ್ಷಣದ ಸಾವನ್ನೊರತುಪಡಿಸಿ ಮತ್ಯಾವ ಫಲವನ್ನೂ ಕೊಡುವುದಿಲ್ಲ. ಅದು ಆತ್ಮಹತ್ಯಾ ಮಾದರಿಯ ಯುದ್ಧ ಪದ್ಧತಿ, ಸಾಯುತ್ತಿರುವ ಇತಿಹಾಸದ ಪಡೆಯೊಂದರ ಪದ್ಧತಿ. ಆದ್ದರಿಂದ, ಕಿತ್ತೂರು ಕೋಟೆಯಲ್ಲಿ ಮೊದಲ ಗೆಲುವಿಗಾಗಿ ನಡೆದ ಸಂಭ್ರಮಾಚರಣೆಗಳು ಭ್ರಮಾತ್ಮಕವಷ್ಟೇ, ಯಾವುದೇ ಶ್ರಮವಿಲ್ಲದೇ ಒಡೆದುಹೋಗುವ ನೀರ ಮೇಲಣ ಗುಳ್ಳೆಯಂತೆ. ಊಳಿಗಮಾನ್ಯ ವರ್ಗ, ಶಸ್ತ್ರ ತರಬೇತಿ ಪಡೆದ ರೈತರನ್ನೂ ಸೇರಿಸಿ ಎಲ್ಲರನ್ನೂ ಕೋಟೆಯೊಳಗಡೆಯೇ ಸೇರಿಸಿಕೊಂಡಿದ್ದು, ಜನಸಮೂಹವನ್ನು ಎಚ್ಚರಿಸುವುದಿರಲಿ, ಅವರನ್ನು ಅಕಸ್ಮಾತ್ ಹೋರಾಟದಲ್ಲಿ ಭಾಗವಹಿಸುವಂತೆ ಮಾಡುವ ಅವಕಾಶವನ್ನೂ ಹಾಳುಮಾಡಿಬಿಟ್ಟಿತ್ತು. ಹೀಗಾಗಿ, ಜನಸಮೂಹವು ಊಳಿಗಮಾನ್ಯತೆಯ ವಿರುದ್ಧದ, ವಸಾಹತುಶಾಹಿಯ ವಿರುದ್ಧದ ತಮ್ಮ ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರುವ ಮೊದಲೇ ಹೋರಾಟದಲ್ಲಿ ಸೋಲಾಗಿರುತ್ತಿತ್ತು ಮತ್ತು ತ್ಯಾಗದ ಭಾವನೆಗಳು ಮೂಡಿಸಿದ್ದ ವಸಾಹತು ವಿರೋಧಿ ಪ್ರಜ್ಞೆ, ದುರದೃಷ್ಟವಶಾತ್ ವ್ಯರ್ಥವಾಗುತ್ತಿತ್ತು. ಫ್ರೆಡೆರಿಕ್ ಏಂಜೆಲ್ಸ್ ಸರಿಯಾಗಿ ಹೇಳಿದ್ದಾರೆ: “ಸೈನ್ಯ ಮತ್ತು ನೌಕಾಪಡೆಯಷ್ಟು ಆರ್ಥಿಕ ಪೂರ್ವಕಟ್ಟಳೆಗಳ ಮೇಲೆ ಅವಲಂಬಿತವಾಗಿರುವುದು ಮತ್ತ್ಯಾವುದೂ ಇಲ್ಲ. ಅವರ ಶಸ್ತ್ರಾಸ್ತ್ರಗಳು, ಸಂಯೋಜನೆ, ಸಂಘಟನೆ, ತಂತ್ರ ಮತ್ತು ನೀತಿ ಎಲ್ಲದ್ದಕ್ಕಿಂತ ಹೆಚ್ಚಾಗಿ ಉತ್ಪಾದನೆ ಮತ್ತು ಸಂವಹನ ಆ ಸಮಯದಲ್ಲಿ ಎಷ್ಟಿದೆ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ.” (55)

ಈ ಎಲ್ಲಾ ಕಾರಣಗಳಿಂದ, ವರ್ಗ ಗುಣಗಳಿಂದ ಬೆಳೆದ ನಾಯಕತ್ವವು, ಊಳಿಗಮಾನ್ಯ ವರ್ಗ ಮುನ್ನಡೆಸಿದ ವಸಾಹತು ವಿರೋಧಿ ಸಶಸ್ತ್ರ ಹೋರಾಟಗಳು, ಐತಿಹಾಸಿಕ ದೃಷ್ಟಿಯಿಂದ ಪ್ರಗತಿಪರವಾಗಿದ್ದರೂ, ತುಂಬ ವೇಗವಾಗಿ ಸೋಲುಂಡವು.

ಮುಂದಿನ ವಾರ: 
ರೈತಾಪಿ ಜನರು ಬಂದೂಕು ಹಿಡಿದರು

No comments:

Post a Comment