Sep 9, 2016

ಮೇಕಿಂಗ್ ಹಿಸ್ಟರಿ: ಊಳಿಗಮಾನ್ಯ ದೊರೆಗಳು ಮುನ್ನಡೆಸಿದ ಸಶಸ್ತ್ರ ಹೋರಾಟ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
09/09/2016
ಬ್ರಿಟೀಷರಾಳ್ವಿಕೆಯಲ್ಲಿ ಊಳಿಗಮಾನ್ಯ ದೊರೆಗಳು ತಮ್ಮ ಹಳೆಯ ಸೌಕರ್ಯಗಳನ್ನೆಲ್ಲ ಕಳೆದುಕೊಂಡರು. ಉತ್ತರಾಧಿಕಾರತ್ವದ ಬಗೆಗಿನ ಬ್ರಿಟೀಷರ ನೀತಿಗಳಿಂದಾಗಿ ಕೆಲವು ಕುಟುಂಬಗಳು ನಿರ್ವೀರ್ಯರಾಗುವ ಹಂತಕ್ಕೆ ಬಂದು ನಿಂತಿದ್ದವು. ತಮ್ಮ ಕಳೆದುಹೋದ ಘನತೆಯನ್ನು ಮರಳಿ ಗಳಿಸುವುದಕ್ಕಾಗಿ ಅವರು ಬ್ರಿಟೀಷರನ್ನು ಕಿತ್ತೆಸೆಯುವ ನಿರ್ಧಾರ ಮಾಡಿದ್ದು, 1857ರವರೆಗೆ ನಡೆದ ಸಶಸ್ತ್ರ ಹೋರಾಟಗಳನ್ನು ಅವರು ಮುನ್ನಡೆಸಿದರು. ನಾವೀಗ ಈ ರೀತಿಯ ಪ್ರತಿಯೊಂದು ಹೋರಾಟವನ್ನೂ ಗಮನಿಸೋಣ, ತದನಂತರ ಕರ್ನಾಟಕ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಡೆಸಿದ ಯುದ್ಧಗಳಲ್ಲಿನ ಅವರ ತ್ಯಾಗದ ಅನುಭವಗಳನ್ನು ಒಟ್ಟುಗೂಡಿಸೋಣ.

1. ತುಳುನಾಡಿನ ಸೈನಿಕ – ಪಾಳೇಗಾರ ಮೈತ್ರಿಕೂಟ (1799 – 1802) 

ಬರ್ಟನ್ ಸ್ಟೈನ್ ಹೇಳುತ್ತಾರೆ: “ಕೆನರಾದಲ್ಲಿ 1800ರ ಸಮಯದಲ್ಲಿ ಕಂಪನಿಯ ಆಳ್ವಿಕೆಯ ವಿರುದ್ಧದ ಪ್ರತಿರೋಧದ ಬಗ್ಗೆ ಮನ್ರೋಗಿದ್ದ ಚಿಂತೆಗಳಿಗೆ ಸಾಕಷ್ಟು ಆಧಾರಗಳಿತ್ತು. ಮನ್ರೋ ಅಲ್ಲಿ ಕೆಲಸವನ್ನಾರಂಭಿಸಿದಾಗ ಇಡೀ ಕರಾವಳಿ ಭಾಗದಲ್ಲಿ ಹೆಚ್ಚಿನ ಮಟ್ಟದ ರಾಜಕೀಯ ಗೊಂದಲಗಳಿತ್ತು. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನಿಂದ ಓಡಿಸಲ್ಪಟ್ಟಿದ್ದ ಅನೇಕ ಸ್ಥಳೀಯ ಮುಖ್ಯಸ್ಥರು, ಕಂಪನಿಯಿಂದ ಪಡೆದುಕೊಂಡ ಶಸ್ತ್ರಗಳ ಸಹಾಯದಿಂದಲೇ ತಮ್ಮ ಪ್ರಾಂತ್ಯವನ್ನು ಪುನಃ ಭದ್ರಪಡಿಸಿಕೊಂಡುಬಿಟ್ಟಿದ್ದರು. 

ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಕೆನರಾದಲ್ಲಿ ಭೂಮಿ ಹೊಂದಿರುವ ಜನರ ಸಮರ ವ್ಯಕ್ತಿತ್ವ ಇದಕ್ಕೆ ಕಾರಣ. ಮನ್ರೋ ಯಾವ ಚಿಕ್ಕ ಪುಟ್ಟ ಎಸ್ಟೇಟುಗಳು ಖಾಸಗಿ ಮಾಲೀಕರನ್ನು ಸಂತೃಪ್ತಿಗೊಳಿಸಬೇಕೆಂದು ಹೇಳಿದ್ದನೋ, ಕೆನರಾದಲ್ಲಿನ ಅಂತಹ ಬಹುತೇಕ ಮಾಲೀಕರು ಬಂಟ್ ಜಾತಿಗೆ ಸೇರಿದವರು, ಈ ಬಂಟ್/ಬಂಟ್ಸ್ ಜಾತಿ ಯೋಧರ ಜಾತಿ, ಥೇಟು ಮಲಬಾರಿನ ನಾಯರುಗಳಂತೆ, ಭಾಷೆಯೊಂದರ ವ್ಯತ್ಯಾಸವನ್ನೊರತುಪಡಿಸಿದರೆ ಅವರಿಗೂ ಇವರಿಗೂ ವ್ಯತ್ಯಾಸವೇ ಇಲ್ಲ”. (22) 

ವಿಟ್ಲದ ಮಾಜಿ ರಾಜರು, ರವಿವರ್ಮ ನರಸಿಂಹ ದೊಂಬ ಹೆಗ್ಗಡೆ, ಮತ್ತು ನೀಲೇಶ್ವರ ಹಾಗೂ ಕುಂಬ್ಲದವರೆಲ್ಲೂ ಬಂಟ್ಸ್ ಜಾತಿಗೆ ಸೇರಿದವರು. ಅವರೆಲ್ಲಾ ಭೂಮಿಯನ್ನು ಹೈದರ್ ಮತ್ತು ಟಿಪ್ಪು ವಶಪಡಿಸಿಕೊಂಡರು ಮತ್ತು ಈ ಕುಟುಂಬಗಳ ಹಲವಾರು ಪ್ರಮುಖರನ್ನು ಹತ್ಯೆ ಮಾಡಲಾಗಿತ್ತು. ಹಾಗಾಗ್ಯೂ, ಅವರ ವಂಶಜರು ಬ್ರಿಟೀಷ್ ರಕ್ಷಿತ ಪ್ರಾಂತ್ಯವಾದ ತಿರುವನಂತಪುರಂಗೆ ತೆರಳಿದರು ಮತ್ತು ಬ್ರಿಟೀಷರೊಂದಿಗೆ ಮೈತ್ರಿ ಬೆಳೆಸಿ ಮೈಸೂರು ಸೈನ್ಯದ ಮೇಲೆ ನಿರಂತರ ದಾಳಿಗಳನ್ನು ನಡೆಸಿದರು. ಆದರೂ, ಬ್ರಿಟೀಷ್ ಗೆಲುವಿನ ನಂತರ, ಈಗಾಗಲೇ ತಮ್ಮ ಮುಖ್ಯಸ್ಥನ ಸ್ಥಾನವನ್ನು ತ್ಯಜಿಸಿದ್ದ ಈ ರಾಜರಿಗೆ ತಮ್ಮ ಹಳೆಯ ಕ್ಷೇತ್ರಗಳನ್ನು ಕೊಡಲಿಲ್ಲ; ಒಂದು ಸಮಾಧಾನಕರ ನಿವೃತ್ತಿ ವೇತನ ಮತ್ತು ಪರಿಹಾರವನ್ನು ಅವರ ಅಳಿದುಳಿದ ಪಿತ್ರಾರ್ಜಿತ ಆಸ್ತಿಯ ಜೊತೆಗೆ ಕೊಟ್ಟು ಅವರನ್ನು ನೆಲೆಗೊಳಿಸಲಾಯಿತು. 

15 ಡಿಸೆಂಬರ್ 1799ರಂದು, ತಲಚೇರಿಯಲ್ಲಿ ವಾಸವಿದ್ದ ವಿಟ್ಲದ ದೊಂಬ ಹೆಗ್ಗಡೆ ಕೊಡಲಾಗಿದ್ದ ಶಸ್ತ್ರಗಳನ್ನು ವಾಪಸ್ಸು ಮಾಡಬೇಕೆಂಬ ಬ್ರಿಟೀಷರ ಆಜ್ಞೆಯನ್ನು ಕಡೆಗಣಿಸಿದ್ದ. 150 ಮಂದಿ ಸಶಸ್ತ್ರ ಅನುಯಾಯಿಗಳೊಂದಿಗೆ, ದೊಂಬ ಹೆಗ್ಗಡೆ ಜಿಲ್ಲೆಯ ಆಡಳಿತವನ್ನು ಕೈಗೆತ್ತಿಕೊಂಡು ಕಂದಾಯವನ್ನು ಸಂಗ್ರಹಿಸಿದ, ಬಹಿರಂಗವಾಗಿ ಬ್ರಿಟೀಷರನ್ನು ಧಿಕ್ಕರಿಸಿದ್ದ. (23) 

ಅದೇ ಸಮಯದಲ್ಲಿ ಬೇಕಲಿನಲ್ಲಿದ್ದ (ಇವತ್ತಿನ ಕಾಸರಗೋಡು) ಮೈಸೂರು ಸೈನ್ಯದಲ್ಲಿ ಅಧಿಕಾರಿಯಾಗಿದ್ದ ತಿಮ್ಮಾ ನಾಯಕ, ತನ್ನ ಇನ್ನೂರು ಮಂದಿ ಸೈನಿಕರನ್ನು ಸಜ್ಜುಗೊಳಿಸಿ ಅವರನ್ನು ದೊಂಬ ಹೆಗ್ಗಡೆಯೆಡೆಗೆ ಮುನ್ನಡೆಸಿದ, ಸುಬ್ಬಾ ರಾವರನ್ನು ಸೇರಿಕೊಳ್ಳಲು. ಸುಬ್ಬಾ ರಾವ್ ಅಷ್ಟೊತ್ತಿಗೆ ಘಟ್ಟವನ್ನು ಇಳಿದು ಪುತ್ತೂರು ತಲುಪಿದ್ದರು, ಮೈಸೂರು ಸೈನಿಕರ ತಮ್ಮ ಚಿಕ್ಕ ಪಡೆಯೊಂದಿಗೆ. ಮೈಸೂರು ಸರಕಾರದಡಿಯಲ್ಲಿ ಕೊಯಮತ್ತೂರಿನ ಮಾಜಿ ಶಿರಸ್ತೇದಾರನಾಗಿದ್ದ ಸುಬ್ಬಾ ರಾವ್ ಗೆ ಯುದ್ಧಕಲೆಯಲ್ಲಿ ಅನುಭವವಿತ್ತು. ಟಿಪ್ಪುವಿನ ಸೈನ್ಯದಲ್ಲಿ ಅನೇಕ ವರುಷಗಳ ಕಾಲ ಕೆಲಸ ಮಾಡಿದ್ದನು. ಸುಬ್ಬಾ ರಾವ್, ತನ್ನ ಕಡೆಯಿಂದ ಕೊಡಗಿನ ಮೆಹತಾಬ್ ಖಾನ್ ಜೊತೆಗೂಡಿದ್ದನು. ಮೆಹತಾಬ್ ಖಾನ್ ಮೊದಲು ಹೈದರ್ ಅಲಿಯ ಆಡಳಿತದಲ್ಲಿ ಮತ್ತು ತದನಂತರ ಟಿಪ್ಪುವಿನಾಡಳಿತದಲ್ಲಿ ಖಜಾನೆಯ ಅಧಿಕಾರಿಯಾಗಿ ಕಾರ್ಯನಿರ್ವಹಸಿದ್ದನು, ಇಸ್ಲಾಮಿಗೆ ಮತಾಂತರಗೊಂಡಿದ್ದನು. ಮೆಹತಾಬ್ ಖಾನನನ್ನು ಟಿಪ್ಪುವಿನ ಹಿರಿಯ ಮಗ ಫತಾ ಹೈದರನ ವೇಷ ನಿರ್ವಹಿಸುತ್ತಿದ್ದನು. ಇದು ಸೈನಿಕರನ್ನು ಬ್ರಿಟೀಷರ ವಿರುದ್ಧ ಸುಲಭವಾಗಿ ದಂಗೆ ಏಳಲು ಉಪಯೋಗಿಸುತ್ತಿದ್ದ ತಂತ್ರವಾಗಿತ್ತು. ಹೀಗೆ ದೊಂಬ ಹೆಗ್ಗಡೆ, ತಿಮ್ಮಾ ನಾಯಕ್, ಸುಬ್ಬಾ ರಾವ್ ಮತ್ತು ಮೆಹತಾಬ್ ಖಾನ್ ಪುತ್ತೂರಿನಲ್ಲಿ ಮೈತ್ರಿಕೂಟ ಮಾಡಿಕೊಂಡು, ಯುದ್ಧಕಲೆಯಲ್ಲಿ ಪರಿಣಿತಿ ಹೊಂದಿರುವ ಸುಬ್ಬಾ ರಾವಿನ ನೇತೃತ್ವದಲ್ಲಿ ಹೋರಾಡಲು ನಿರ್ಧರಿಸಿದರು. 

ಜಮಾಲಾಬಾದನ್ನು ಮುತ್ತಿಗೆ ಹಾಕಿ ವಶಪಡಿಸಿಕೊಂಡರು ಮತ್ತು ಅಲ್ಲಿಂದಲೇ ಹೋರಾಟಕ್ಕೆ ಬೇಕಾದ ಹಣವನ್ನು ಸಂಗ್ರಹಿಸಲು ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನೇಕ ಪರ್ಯಟನೆ ಕೈಗೊಂಡರು. “1800ರ ಮೇ 7 ರಂದು, ಸುಬ್ಬಾ ರಾವ್, ವಿಟಲ್ ಹೆಗ್ಡೆಯ ಸಹಾಯದೊಂದಿಗೆ ಕಡಬದ ತಹಸೀಲ್ದಾರರ ಕಛೇರಿಯಿದ್ದ ಉಪ್ಪಿನಂಗಡಿಯ ದೇವಸ್ಥಾನದ ಮೇಲೆ ದಾಳಿ ನಡೆಸಿದರು. ಕತ್ತಲಲ್ಲಿ ನದಿ ದಾಟಿ ತಹಸೀಲ್ದಾರ್ ತಪ್ಪಿಸಿಕೊಂಡ ಮತ್ತಾ ಸಮಯದಲ್ಲಿ ಅಲ್ಲಿದ್ದ ಹಲವಾರು ಪಟೇಲರು ಓಡಿ ಹೋಗುವಲ್ಲಿ ಯಶಸ್ವಿಯಾದರು. ಸುಬ್ಬಾ ರಾವ್ ನಂತರ ದಕ್ಷಿಣ ಕೆನರಾದ ವಾಣಿಜ್ಯ ಕೇಂದ್ರ ಬಂಟ್ವಾಳದೆಡೆಗೆ ಪಯಣ ಬೆಳೆಸಿದ, ಅದನ್ನು ಲೂಟಿ ಮಾಡಿದ ನಂತರ ತಮ್ಮ ಕೇಂದ್ರವಾದ ಪುತ್ತೂರಿಗೆ ಮರಳಿ ಕಂದಾಯವನ್ನು ಸಂಗ್ರಹಿಸಿದ”. (24) 

ಹೀಗೆ ದಕ್ಷಿಣ ಕನ್ನಡದ ಘಟ್ಟದ ಕಡೆಗಿದ್ದ ದಕ್ಷಿಣ ಭಾಗ ಬಂಡಾಯಗಾರರ ನಿಯಂತ್ರಣಕ್ಕೆ ಬಂತು, ಮತ್ತು ಮನ್ರೋ ವರ್ಣಿಸಿದಂತೆ “ಭಾರತದ ಅತ್ಯಂತ ಶಕ್ತಿಯುತ ಬೆಟ್ಟದ ಕೋಟೆಗಳಲ್ಲೊಂದಾಗಿದ್ದ” ಜಮಾಲಾಬಾದ್ ಕೋಟೆ ಬಂಡಾಯಗಾರರ ಬಳಿಯಿತ್ತು. (25) 

ಆದರೂ, ಬಂಡಾಯಗಾರರನ್ನು ಸದೆಬಡಿಯಲು ಕಾರ್ಯಾಚರಣೆ ಆರಂಭಿಸುವ ಮುನ್ನ ಮನ್ರೋ ಆತ್ಮವಿಶ್ವಾಸದಿಂದ ಹೇಳುತ್ತಾನೆ: “ಬಂಡಾಯವೆಂದು ಕರೆಯಲಾಗುವ ಇದನ್ನು ದಮನಿಸಲು ಐವತ್ತು ಸೈನಿಕರ ಜೊತೆಗೆ ನನ್ನ ಸಿಪಾಯಿಗಳು ಸಾಕು ಎನ್ನುವುದರ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಶತ್ರುವಿಗೆ ನಿಜವಾದ ಶಕ್ತಿಯೇ ಇಲ್ಲ, ಯಾಕೆಂದರೆ ದೇಶದ ಯಾವ ಭಾಗವೂ ಅವರದಲ್ಲ”. (26) 

ಏಪ್ರಿಲ್ 1800ರ ಕೊನೆಯಷ್ಟೊತ್ತಿಗೆ ಬಂಡಾಯಗಾರರನ್ನು ದಮನಿಸುವ ಬ್ರಿಟೀಷರ ಪ್ರಯತ್ನ ಜಮಾಲಾಬಾದಿನ ಮೇಲಿನ ದಾಳಿಯೊಂದಿಗೆ ಪ್ರಾರಂಭವಾಯಿತು. ಕೋಟೆಯನ್ನು ಕಾಯುತ್ತಿದ್ದ ತಿಮ್ಮಾ ನಾಯಕ ಮತ್ತವನ ಸಂಗಡಿಗರಿಂದಾಗಿ ಬ್ರಿಟೀಷ್ ದಾಳಿಕೋರರು ಬಹುಗಂಭೀರ ನಷ್ಟಗಳನ್ನನುಭವಿಸಬೇಕಾಯಿತು. ನಂತರ ಅವರು ತಮ್ಮ ಗುರಿ ತಲುಪುವ ಸಲುವಾಗಿ ಬೇರೆ ದಾರಿ ಉಪಯೋಗಿಸಿದರು. 

ಶ್ಯಾಮ್ ಭಟ್ ಬರೆಯುತ್ತಾರೆ: “ತಿಮ್ಮಾ ನಾಯಕರನ್ನು ಬಂಧಿಸಲು ಆತಂಕಿತರಾಗಿದ್ದ ಬ್ರಿಟೀಷರು, ಬೇಕಲ್ಲಿನ ಪ್ರಭಾವಶಾಲಿ ಮುಖ್ಯಸ್ಥ ರಮಣ ನಾಯರನನ್ನು ನೇಮಿಸಿದರು. ಅಕ್ಟೋಬರಿನಲ್ಲಿ ರಮಣ ನಾಯರ್ ತಿಮ್ಮಾ ನಾಯಕನಿಗೆ ಶಿಕಾರಿಗೋಗಲು ಆಹ್ವಾನ ನೀಡಿದನು ಮತ್ತು ತಿಮ್ಮಾ ನಾಯಕ್ ಅದಕ್ಕೆ ಒಪ್ಪಿಗೆ ಕೊಟ್ಟನು. ಶಿಕಾರಿಗೋದ ಸಮಯದಲ್ಲಿ, ತಿಮ್ಮಾ ನಾಯಕನನ್ನು ಬೇಕಲಿನಲ್ಲಿ ವಶಪಡಿಸಿಕೊಂಡು, ಅವನನ್ನು ಮುಗಿಸಿ ಹಾಕಿ ರಮಣ ನಾಯರನ ತಂಡ ಚದುರಿಹೋಯಿತು”. (27) ರಮಣ ನಾಯರ್ ವೈಯಕ್ತಿಕವಾಗಿ ತೆರಳಿ ತಿಮ್ಮಾ ನಾಯಕನ ತಲೆಯನ್ನು ಬ್ರಿಟೀಷರಿಗೆ ಒಪ್ಪಿಸಿದ ಎನ್ನಲಾಗುತ್ತದೆ. “ಈ ಸೇವೆಗೆ ಬದಲಾಗಿ ರಮಣ ನಾಯರ್ ಗೆ 590 ರುಪಾಯಿಗಳ ಬಹುಮಾನ ಸಿಕ್ಕಿತು ಮತ್ತು ಬ್ರಿಟೀಷರಿಂದ ಸಾರ್ವಜನಿಕವಾಗಿ ಮೆಚ್ಚುಗೆ ದಕ್ಕಿತು. ಬ್ರಿಟೀಷರು ಕೋಟೆಗೆ ಲಗ್ಗೆಯಿಟ್ಟರು ಮತ್ತು ಜಮಾಲಾಬಾದನ್ನು ವಶಪಡಿಸಿಕೊಂಡರು:. (28) 

ಅತ್ಯಂತ ಹೆಚ್ಚಿನ ರಕ್ಷಣೆಯಿದ್ದ ಜಮಾಲಾಬಾದ್ ಮತ್ತು ಅದರ ಮುಂದಾಳುಗಳಲ್ಲೊಬ್ಬರಾದ ತಿಮ್ಮಾ ನಾಯಕರ ಅವಸಾನದೊಂದಿಗೆ, ಬ್ರಿಟೀಷರು ಬಂಡಾಯಗಾರರ ಪಡೆಗಳನ್ನು ಸೋಲಿಸುವ ಕಾರ್ಯವಾರಂಭಿಸಿದರು, ಮುಂದೆ ಸುಬ್ಬಾ ರಾವರ ಪಡೆಯನ್ನು ಗುರಿಯಾಗಿಸಿದರು. ಅದಾಗ್ಯೂ, ಮನ್ರೋ ಆರಂಭಿಕ ನಿರೀಕ್ಷೆಗಳೊಡನೆ ಬಡಾಯಿ ಕೊಚ್ಚಿಕೊಂಡಿದ್ದಕ್ಕೆ ಹೋಲಿಸಿದರೆ ಇದು ಹೆಚ್ಚು ಕಠಿಣವಾದ ಕೆಲಸವೇ ಆಗಿತ್ತು. 

“ಇಷ್ಟೊತ್ತಿಗೆ, ಮನ್ರೋ 200 ಜನರ ಸಶಸ್ತ್ರ ಸೈನ್ಯವನ್ನು ತಯಾರು ಮಾಡಿದ್ದ ಮತ್ತವರನ್ನು ಧರ್ಮಸ್ಥಳದ ಕುಮಾರ ಹೆಗ್ಗಡೆಯ ಕೈಕೆಳಗೆ ಕಾರ್ಯನಿರ್ವಹಿಸುವಂತೆ ಮಾಡಿದ್ದ. ಕುಮಾರ ಹೆಗ್ಗಡೆ ಬಂಟ್ವಾಳದ ಪಟೇಲರಲ್ಲಿ ಒಬ್ಬ, ಜಮಾಲಾಬಾದಿನ ಕಾರ್ಯಾಚರಣೆಯಲ್ಲಿ ಉತ್ತಮ ಸೇವೆ ಮಾಡಿದ್ದ. ಕುಮಾರ ಹೆಗ್ಗಡೆ ಸುಬ್ಬಾರಾವಿನ ವಿರುದ್ಧ ಹೋರಾಡಿ 11/05/1800ರಂದು ಸೋಲಿಸಿದ. ಆದರೆ ಅವನ ತೋಳಿಗೆ ಗುಂಡು ತಗುಲಿದ ಕಾರಣ, ದಂಗೆಕೋರರನ್ನು ಚದುರಿಸಲು ಸಾಧ್ಯವಾಗಲಿಲ್ಲ. ಕೊನೆಗೆ 16ನೇ ತಾರೀಖಿನಂದು ಆಂಗ್ಲರು ಸುಬ್ಬಾ ರಾವರನ್ನು ಮಣಿಸಿ ಪುತ್ತೂರು ಮತ್ತು ಬಂಟ್ವಾಳವನ್ನು ವಶಪಡಿಸಿಕೊಂಡರು. ಜುಲೈ ತಿಂಗಳ ಹದಿನೈದನೇ ತಾರೀಖಿನಂದು ಸುಬ್ಬಾ ರಾವರನ್ನು ಕೊಲ್ಲಲಾಯಿತು. ಫತೇ ಹೈದರನನ್ನು ಮಣಿಸಿ ಕೊನೆಗಾಣಿಸಲಾಯಿತು….” (29) 

ನಂತರ, ವಿಠ್ಠಲಕ್ಕೆ ಸಾವಿರ ಜನರ ತಂಡವನ್ನು ಕಳುಹಿಸಲಾಯಿತು ಹಾಗೂ ಜುಲೈ 18ರಂದು ದೊಂಬ ಹೆಗ್ಡೆಯ ಇಡೀ ಕುಟುಂಬವನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಮೈಸೂರಿನ ರೆಸಿಡೆಂಟರಾಗಿದ್ದ ಕ್ಲೋಸ್ ಗೆ ಬರೆದ ಪತ್ರದಲ್ಲಿ ಮನ್ರೋ ದೊಂಬಾ ಹೆಗ್ಡೆಯನ್ನು ತೊಡೆದುಹಾಕಲು ನಿರ್ಧರಿಸಿದ್ದಕ್ಕೆ ವಿವರಣೆ ನೀಡುತ್ತಾನೆ: “ಅವನ ಮತ್ತವನ ಸಹಚರರನ್ನು ಉದಾಹರಣೆಯನ್ನಾಗಿಸಿಕೊಂಡು ಇನ್ನು ಮುಂದೆ ಕೆನರಾದಲ್ಲಿ ಆಂತರಿಕ ಗಲಭೆಗಳಿಲ್ಲದಂತೆ ನೋಡಿಕೊಳ್ಳಬಹುದು….. ಈ ಜಿಲ್ಲೆಯಲ್ಲಿರುವ ಸಣ್ಣ ಪುಟ್ಟ ಮುಖ್ಯಸ್ಥರಿಗೂ ಸಾಮ್ರಾಜ್ಯಕ್ಕೆ ಕೊಡುವಷ್ಟೇ ಮರ್ಯಾದೆ ಮತ್ತು ಗಮನವನ್ನು ಕೊಡುವುದು ತಪ್ಪು; ಇದರಿಂದ ನಾವೇನನ್ನು ಕೊನೆಗಾಣಿಸಬೇಕೆಂದಿದ್ದೇವೆಯೋ ಅವುಗಳು ಜೀವಂತವಾಗಿ ಅಪಾಯಕಾರಿಯಾಗಿ ಪರಿಣಮಿಸುತ್ತದೆ”. (30) 

ಸೈನಿಕ ವಿಚಾರಣೆ (ಕೋರ್ಟ್ ಮಾರ್ಷಲ್) ನಡೆಸಿ ಬಂಡಾಯಗಾರರ ವಿಚಾರಣೆ ನಡೆಸಲಾಯಿತು ಮತ್ತವರಿಗೆ ಮರಣದಂಡನೆ ವಿಧಿಸಲಾಯಿತು. ವಿಠ್ಠಲ ಹೆಗ್ಡೆ, ಅವನ ಸಹೋದರನ ಇಬ್ಬರು ಮಕ್ಕಳು, ಭಾವ, ಒಬ್ಬ ಶಾನುಭೋಗ ಮತ್ತು ಜಮಾದಾರನಿಗೆ ಮರಣದಂಡನೆಯನ್ನು ವಿಧಿಸಲಾಯಿತು. ಅವರನ್ನು 25, ಆಗಸ್ಟ್ 1800ರಂದು ಮಂಗಳೂರಿನ ಆಸುಪಾಸಿನವರಿಗೆಲ್ಲ ಮುಖ್ಯ ಸ್ಥಳದಂತಿದ್ದ ಈದ್ಗಾ ಬೆಟ್ಟದಲ್ಲಿ ನೇಣಿಗೇರಿಸಲಾಯಿತು. (31)

ಮುಂದಿನ ವಾರ:
ಐಜೂರ್ (1799 – 1800)

No comments:

Post a Comment