Sep 16, 2016

ಮೇಕಿಂಗ್ ಹಿಸ್ಟರಿ: ಐಜೂರ್ - ಕೊಪ್ಪಳ - ಬೀದರ್ - ಸಿಂಧಗಿ.

Making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
16/09/2016
ಶ್ರೀರಂಗಪಟ್ಟಣದಿಂದ ಓಡಿಹೋದ ಮೇಲೆ ದೊಂಡಿಯಾ ಮೊದಲಿಗೆ ತಲುಪಿದ್ದು ಬ್ರಿಟೀಷರ ವಿರುದ್ಧ ಹೋರಾಡಲು ತಯಾರಿ ಮಾಡಿಕೊಳ್ಳುತ್ತಿದ್ದ ಪಾಳೇಗಾರ ವೆಂಕಟಾದ್ರಿ ನಾಯಕರ ಪ್ರಾಂತ್ಯವಾದ ಐಜೂರಿಗೆ. 

ಹಾಸನದ ಸಕಲೇಶಪುರ ತಾಲ್ಲೂಕಿನ ಐಜೂರಿನ ಪಾಳೇಗಾರರು ಇಕ್ಕೇರಿಯ ನಾಯಕರ ಸಾಮಂತರು. ಕೊಡವರನ್ನು ನಿಗ್ರಹಿಸಲು ಪ್ರಯತ್ನಿಸಿ ಕಲಿತ ಪಾಠಗಳಿಂದ, ಟಿಪ್ಪು ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕನೊಡನೆ ಗೆಳೆತನ ಬೆಳೆಸಿಕೊಂಡು; ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕ ಬ್ರಿಟೀಷರಿಗೆ ಬೆಂಬಲ ಕೊಡುತ್ತಿದ್ದರೂ ಅವನೊಡನೆ ಗೆಳೆತನ ಬೆಳೆಸಿಕೊಂಡ ಟಿಪ್ಪು, ಅವನಿಗೆ ತನ್ನ ಪ್ರಾಂತ್ಯವನ್ನು ಉಳಿಸಿಕೊಳ್ಳಲು ಅನುಮತಿ ನೀಡಿದ, ವಾರ್ಷಿಕ ಕಪ್ಪ ಕಾಣಿಕೆಯನ್ನು ಶ್ರೀರಂಗಪಟ್ಟಣಕ್ಕೆ ನೀಡಬೇಕು ಎಂಬ ಶರತ್ತಿನೊಂದಿಗೆ. ನಂತರ, ಬೆಂಗಳೂರು ಮಂಗಳೂರು ರಸ್ತೆಯಲ್ಲಿರುವ ಬಲ್ಲಂ ಪ್ರದೇಶದಲ್ಲಿ ಮಂಜರಾಬಾದ್ ಕೋಟೆಯನ್ನು ಕಟ್ಟಿದ, ಕರಾವಳಿಯೊಡನೆ ತೊಂದರೆಯಿಲ್ಲದ ವಾಣಿಜ್ಯಕ ವ್ಯವಹಾರವನ್ನು ಸಾಧಿಸಿದ.

ಮೈಸೂರು ಬ್ರಿಟೀಷರ ಕೈವಶವಾದ ಸಮಯದಲ್ಲಿ ಕೃಷ್ಣಪ್ಪನ ಮಗ ವೆಂಕಟಾದ್ರಿ ನಾಯಕ ಐಜೂರಿನ ಪಾಳೇಗಾರನಾಗಿದ್ದ; ತನ್ನ ಸಾಮ್ರಾಜ್ಯವನ್ನು ಬ್ರಿಟೀಷರು ವಶಪಡಿಸಿಕೊಂಡುಬಿಡುತ್ತಾರೆ ಎಂದರಿವಾದಾಗ, ಬಂಡಾಯಕ್ಕೆ ಅಣಿಯಾದ. ಅರಕೆರೆ ಪ್ರದೇಶದಲ್ಲಿ ಕೋಟೆಯ ರಕ್ಷಣೆಯಲ್ಲಿ ಸೇರಿಕೊಂಡ; ಈ ಪ್ರದೇಶದ ಸುತ್ತ ದಟ್ಟಾರಣ್ಯವಿತ್ತು ಮತ್ತು ಇದನ್ನು ಮುತ್ತಿಗೆ ಹಾಕಿ ವಶಪಡಿಸಿಕೊಳ್ಳುವ ಬ್ರಿಟೀಷರ ಪ್ರಯತ್ನ 1800ರಲ್ಲಿ ವಿಫಲವಾಗಿತ್ತು. ಅದಾಗ್ಯೂ, ಶಾಮ ರಾವ್ ನಮಗೆ ತಿಳಿಸುತ್ತಾರೆ: “ಸೆಪ್ಟೆಂಬರ್ 1800ರಂದು ದೊಂಡಾಜಿ ವಾಗ್ ನಿಧನರಾದ ನಂತರ, ಐಜೂರಿನ ಪಾಳೇಗಾರರನ್ನುಡುಕಲು ಕೊಲೊನೆಲ್ ಆರ್ಥರ್ ವೆಲ್ಲೆಸ್ಲಿಯ ನೇತೃತ್ವದಲ್ಲಿ ಮೈಸೂರು ಮತ್ತು ಬ್ರಿಟೀಷರ ಪಡೆಗಳು ತೀರ್ವವಾಗಿ ಹುಡುಕಾಟ ನಡೆಸಿದವು. ಎಷ್ಟರ ಮಟ್ಟಿಗೆಂದರೆ ಈ ಹುಡುಕಾಟದಲ್ಲಿದ್ದ ಸೈನ್ಯಕ್ಕೆ ವೆಂಕಟಾದ್ರಿ ನಾಯಕರ ಬಂಧುಗಳು ಮತ್ತವರ ಪಡೆಯಲ್ಲಿದ್ದ ಪ್ರಮುಖ ವ್ಯಕ್ತಿಗಳು ಸಿಕ್ಕುಬಿದ್ದಿದ್ದರು. ವೆಂಕಟಾದ್ರಿ ನಾಯಕ, ತನ್ನ ಕೆಲವು ಹಿಂಬಾಲಕರೊಂದಿಗೆ ಅರಣ್ಯದಲ್ಲಿ ಆಶ್ರಯ ಪಡೆದಿದ್ದ. ಈ ಅರಣ್ಯದಲ್ಲಿ ಹುಡುಕಾಟ ನಡೆಸುವುದು ಉಪಯೋಗವಿಲ್ಲದ ಕೆಲಸ ಎಂದು ನಿರ್ಧರಿಸಿ, ಮೈಸೂರು ಸೈನ್ಯದ ಚಿಕ್ಕ ಚಿಕ್ಕ ಪಡೆಗಳನ್ನು ಈ ಅರಣ್ಯದಲ್ಲಿ ಮತ್ತದಕ್ಕೆ ಹೊಂದಿಕೊಂಡಂತಿದ್ದ ಹಳ್ಳಿಗಳಲ್ಲಿ ಗಸ್ತು ತಿರುಗುವಂತೆ ಮಾಡಲಾಯಿತು; ಈ ಹಳ್ಳಿಗಳಿಗೆ ಅವರು ಸಾಮಾನು ಸರಂಜಾಮುಗಳನ್ನು ತೆಗೆದುಕೊಳ್ಳಲಾದರೂ ಬರಲೇಬೇಕಿತ್ತು. 1802ರ ಫೆಬ್ರವರಿ 19ರಂದು, ಪಾಳೇಗಾರ ತನ್ನ ಕೆಲವು ಜನರನ್ನು ಸಾಮಾನು ತರಲು ಕಳುಹಿಸಿದ ಹಳ್ಳಿಯನ್ನು ಮೈಸೂರಿನ ಅಶ್ವಾರೋಹಿಗಳ ತಂಡ ಆಕ್ರಮಿಸಿತ್ತು. ಪಾಳೇಗಾರನ ಇರುವಿಕೆಯ ಬಗ್ಗೆ ಗುಪ್ತಚರ ಮಾಹಿತಿ ದೊರೆತ ನಂತರ, ಈ ಅಶ್ವಾರೋಹಿಗಳು ಆ ಜಾಗಕ್ಕೆ ತೆರಳಿ ನಾಯಕರನ್ನು ಮತ್ತವರ ಸಹಚರರನ್ನು ಬಂಧಿಸಿದರು. ಹತ್ತನೇ ತಾರೀಖಿನಂದು ನಾಯಕರನ್ನು ಮತ್ತವರ ಜೊತೆಗಿದ್ದ ಆರು ಮಂದಿಯನ್ನು ಸಾಯಿಸಲಾಯಿತು, ಇವರಲ್ಲಿ ಕೆಲವರು ಪೂರ್ಣಯ್ಯ ನೀಡಿದ್ದ ಕ್ಷಮಾದಾನವನ್ನು ಮೀರಿ ಪಾಳೇಗಾರನಿಗೆ ಸಾಮಾನು ತರಲು ಸಹಕರಿಸಿದ್ದರು. ಇದೇ ಸಮಯದಲ್ಲಿ, ಪ್ರತಿಯೊಂದೂ ಹಳ್ಳಿಯಲ್ಲೂ ಬಲವಾದ ಕೋಟೆಗಳಿರುವುದು ಗಮನಕ್ಕೆ ಬಂತು ಮತ್ತು ಅಂತ ರಕ್ಷಣಾ ಕೋಟೆಗಳನ್ನು ನಾಶ ಮಾಡಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಜೊತೆಗೆ, ಪೂರ್ಣಯ್ಯ ಬಂಡಾಯದಲ್ಲಿ ಭಾಗವಹಿಸಿದ್ದ ಮುನ್ನೂರು ಕುಟುಂಬಗಳನ್ನು ಒತ್ತೆಯಿಟ್ಟುಕೊಂಡ ಮತ್ತವರು ತಮ್ಮ ಬಳಿಯಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನೂ ಹಾಗೂ ಕಂದಾಯದ ಪೂರ್ತಿ ಬಾಕಿಯನ್ನು ಕಟ್ಟುವವರೆಗೆ ಒಬ್ಬರಿಗೂ ಹೊರಹೋಗುವ ಅವಕಾಶ ನೀಡಲಿಲ್ಲ. ಒಂದು ಬಾರಿ ಕಡಿದು ಹಾಕಿದ ಮರಗಳು ಹಾಗೂ ಪೊದೆ ಕಂಟಿಗಳು ಮತ್ತೊಮ್ಮೆ ಬೆಳೆದು ಹಳ್ಳಿಗಳಿಗೆ ಶಕ್ತಿ ನೀಡುವಂತಾಗಬಾರದು ಎಂದು ಅಮಲ್ದಾರರಿಗೆ ನಿರ್ದಿಷ್ಟವಾಗಿ ಸೂಚಿಸಲಾಗಿತ್ತು”. (32) 

ಇದರಿಂದ ಗೊತ್ತಾಗುವುದೇನೆಂದರೆ, ಪ್ರಮುಖ ಕೇಂದ್ರಗಳನ್ನು 1800ರ ಕೊನೆಯಷ್ಟೊತ್ತಿಗೆ ವಶಕ್ಕೆ ತೆಗೆದುಕೊಂಡುಬಿಟ್ಟಿತ್ತಾದರೂ, ಕೈಗೊಂಬೆ ಸರಕಾರಕ್ಕೆ ವೆಂಕಟಾದ್ರಿಯನ್ನು ಹಿಡಿದು ಸಾಯಿಸಲು ಒಂದು ವರುಷ ಎರಡು ತಿಂಗಳು ಬೇಕಾಯಿತು. ಮಲೆನಾಡು ನೀಡಿದ ಅನುಕೂಲಕರವಾದ ಭೂಭಾಗವನ್ನುಪಯೋಗಿಸಿಕೊಂಡು ವೆಂಕಟಾದ್ರಿ ಅವಿತುಕೊಂಡಿದ್ದ. 

3. ಕೊಪ್ಪಳ (1819) 

ಕೃಷ್ಣ ರಾವ್ ಮತ್ತು ಹಾಲಪ್ಪ ತಮ್ಮ History of freedom movement in karnatakaದ ಮೊದಲ ಸಂಪುಟದಲ್ಲಿ ನಮಗೆ ಹೇಳುತ್ತಾರೆ: “ಟಿಪ್ಪುವಿನ ಜೊತೆಗೆ ನಡೆದ ಯುದ್ಧದ ನಂತರ (1792ರ ಯುದ್ಧ) ಮಾಡಿಕೊಂಡ ಪ್ರಾದೇಶಿಕ ಒಪ್ಪಂದಗಳನ್ವಯ, ರಾಯಚೂರು ಜಿಲ್ಲೆಯ ಕೊಪ್ಪಳದ ಪ್ರಾಂತ್ಯಗಳನ್ನು ಹೈದರಾಬಾದಿನ ನಿಜಾಮರಿಗೆ ಒಪ್ಪಿಸಲಾಗಿತ್ತು. ಜಿಗುಪ್ಸೆ ಹುಟ್ಟಿಸಿದ, ನಿಗ್ರಹಕ್ಕಾಗಿ ಒಪ್ಪಂದದ ಮೂಲಕ ರಕ್ಷಣೆಯಲ್ಲಿದ್ದ ನಿಜಾಮನ ಸರ್ವಾಧಿಕಾರವನ್ನು ಇನ್ನು ಮುಂದಕ್ಕೆ ತಾಳಲಾಗದ ಕಾರಣಕ್ಕೆ, ಜಮೀನ್ದಾರರಲ್ಲಿ ಒಬ್ಬರಾದ ವೀರಪ್ಪ 1819ರಲ್ಲಿ ಬಂಡಾಯವೆದ್ದು ಕೊಪ್ಪಳ ಮತ್ತು ಬಹಾದ್ದೂರ್ ಬಂದಾದ ಕೋಟೆಗಳಿಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡ”. (33) 

ಇದು ನಡೆದ ತಕ್ಷಣವೇ, ಬ್ರಿಟೀಷ್ ಸೈನ್ಯವನ್ನು ಕಳುಹಿಸಿ ಬಂಡಾಯವನ್ನು ಶೀಘ್ರವಾಗಿ ಹತ್ತಿಕ್ಕಲಾಯಿತು ಮತ್ತು ಕೋಟೆಗಳನ್ನು ನಿಜಾಮನಾಡಳಿತಕ್ಕೆ ಒಪ್ಪಿಸಲಾಯಿತು. 

4. ಬೀದರ್ (1820) 

ನಿಜಾಮರ ಕೈಕೆಳಗಿದ್ದ ದೇಶಮುಖರಾದ ಶಿವಲಿಂಗಪ್ಪ, ತಿರುಮಲ ರಾವ್ ಮತ್ತು ಮೇಘಶ್ಯಾಮರ ಮುಂದಾಳತ್ವದಲ್ಲಿ ಬೀದರಿನ ಉದ್ಗೀರಿನಲ್ಲಿ ವ್ಯಾಪಕ ಬಂಡಾಯವೆದ್ದಿತು. (34) ಈ ಮೂವರೂ ಹೊಂದಾಣಿಕೆಯೊಂದಿಗೇ ಹೋರಾಡಿದರಾದರೂ, ಈ ಹೋರಾಟ ಅಲ್ಪಾಯುಷಿಯಾಗಿತ್ತು, ವಸಾಹತು ಶಕ್ತಿಗಳು ಅದನ್ನು ದಮನ ಮಾಡಿದರು. 

5. ಸಿಂಧಗಿ (1824) 

ಬಿಜಾಪುರದ ಸಿಂಧಗಿಯ ಊಳಿಗಮಾನ್ಯ ದೊರೆಗಳು ಹಚ್ಚಿದ ಮತ್ತೊಂದು ಬೆಂಕಿಯ ಕುರಿತು ಎಸ್.ಬಿ.ಚೌಧುರಿ ಬರೆಯುತ್ತಾರೆ: “1824ರಲ್ಲಿ, ಬ್ರಾಹ್ಮಣನಾದ ದಿವಾಕರ್ ದೀಕ್ಷಿತ್ ಎಂಬಾತ, ರಾವೋಜಿ ರಸ್ತಿಯಾ ಮತ್ತು ಬಾಲಪ್ಪ ತಕಲ್ಕಿಯ ನೆರವಿನೊಂದಿಗೆ ಒಂದಷ್ಟು ಹಿಂಬಾಲಕರ ಗುಂಪನ್ನು ಹುಟ್ಟುಹಾಕಿ ಬಿಜಾಪುರದಿಂದ ನಲವತ್ತು ಮೈಲು ಪೂರ್ವಕ್ಕಿದ್ದ ಸಿಂಧಗಿಯನ್ನು ಲೂಟಿ ಹೊಡೆದರು. ತನ್ನದೇ ಸರಕಾರವನ್ನು ಸ್ಥಾಪಿಸಿ, ಠಾಣೆಯನ್ನು ಸ್ಥಾಪಿಸಿ ಕಂದಾಯ ಸಂಗ್ರಹಿಸುವುದಕ್ಕೆ ಬೇಕಾದ ಏರ್ಪಾಟುಗಳನ್ನು ಮಾಡಿದರು. ಇತರೆ ಹಳ್ಳಿಗಳನ್ನು ಲೂಟಿ ಹೊಡೆದು ಅಧಿಕಾರವನ್ನು ಉಳಿಸಿಕೊಂಡ. ಈ ಪರಿಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿ ದೊರಕುತ್ತಿದ್ದಂತೆ, ಒಂದು ಸಣ್ಣ ಪಡೆಯನ್ನು ಬಂಡಾಯಗಾರರ ವಿರುದ್ಧ ಹೋರಾಡಲು ಧಾರವಾಡದಿಂದ ಕಳಿಸಲಾಯಿತು…. ಸಿಂಧಗಿಯನ್ನು ಮರಳಿ ತೆಗೆದುಕೊಳ್ಳಲಾಯಿತು ಮತ್ತು ದಿವಾಕರ್ ಹಾಗೂ ಅವನ ಹಿಂಬಾಲಕರನ್ನು ಬಂಧಿಸಿ ತೀರ್ವವಾಗಿ ಶಿಕ್ಷಿಗೊಳಪಡಿಸಲಾಯಿತು.” (35)

ಮುಂದಿನ ವಾರ:
ಕಿತ್ತೂರು (1824)

No comments:

Post a Comment