Jul 22, 2016

ಮೇಕಿಂಗ್ ಹಿಸ್ಟರಿ: ಉತ್ಪಾದನೆಯ ನಾಶ

ಸಾಕೇತ್ ರಾಜನ್
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
22/07/2016
ನಾವೀಗಾಗಲೇ ನೋಡಿರುವಂತೆ, ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡಲಾಯಿತು. ಇಡೀ ನೀರಾವರಿ ವ್ಯವಸ್ಥೆ, ಕೃಷಿ ಉತ್ಪನ್ನವನ್ನು ಸಂಸ್ಕರಿಸಲಿದ್ದ ನವೀನ ಉಪಕರಣಗಳು, ಶಸ್ತ್ರಾಸ್ತ್ರ ತಯಾರಿಸಲಿದ್ದ ಆಧುನಿಕ ಯಂತ್ರಗಳು, ನೂರಾರು ನೇಕಾರಿಕೆಗಳು, ಹಲವಾರು ಕುಲುಮೆಗಳು, ಅಸಂಖ್ಯಾತ ಭಟ್ಟಿಗಳು, ಅಸಂಖ್ಯಾತ ಎಣ್ಣೆ ಉತ್ಪಾದನಾ ಕೇಂದ್ರಗಳು – ಶತಮಾನಗಳಿಂದ ಜನಸಮೂಹದ ಶ್ರಮದಿಂದ ರೂಪಿಸಲ್ಪಟ್ಟ ವ್ಯವಸ್ಥೆಯನ್ನು ವಸಾಹತು ಚಂಡಮಾರುತ ಸೀಳಿ ಹಾಕಿತು. ಕನ್ನಡ ದೇಶದ ಸಂಪತ್ತಾಗಿದ್ದ ಈ ಉತ್ಪಾದನಾ ಮೂಲಗಳು ನಾಶವಾದವು. ಕಾರ್ಮಿಕರ, ಕಸುಬುದಾರರ, ರೂಪುಗೊಳ್ಳುತ್ತಿದ್ದ ಬಂಡವಾಳಶಾಯಿಗಳು ಮತ್ತು ವರ್ತಕರ ಕಾರ್ಯಕ್ಷೇತ್ರ, ಕಾರ್ಖಾನೆ ಮತ್ತು ವ್ಯಾಪಾರಸ್ಥಳಗಳೆಲ್ಲವೂ ಲೂಟಿಯಾದವು, ಗುಜರಿ ಸೇರಿದವು. ರೈತರ ಭೂಮಿ ಬಡ್ಡಿವ್ಯಾಪಾರಸ್ಥರ ಕೈವಶವಾಯಿತು ಮತ್ತವರು ಹೊಸ ಮಾಲೀಕರಾದರು. ಈ ಕಾಲಘಟ್ಟದಲ್ಲಿ ಉತ್ಪಾದನೆ ಕುಸಿತ ಕಂಡಿತು. ಸಾಮಾಜಿಕ ಸಂಪತ್ತಿನ ಈ ವ್ಯಾಪಕ ನಾಶ, ವಸಾಹತುಶಾಹಿ ಉದ್ಘಾಟಿಸಿದ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿತ್ತು. ಕಾರ್ಲ್ ಮಾರ್ಕ್ಸ್ ಈ ವಿನಾಶ ಉಂಟುಮಾಡುವ ಪರಿಣಾಮಗಳನ್ನು ಗ್ರಹಿಸಿದ್ದ. ತನ್ನ ಕಣ್ಣಮುಂದೆ ತೆರೆದುಕೊಂಡ ಅಪಾರ ಹಿಂಸೆಗೆ ಸಾಕ್ಷಿಯಾಗಿದ್ದ ಕಾರ್ಲ್ ಮಾರ್ಕ್ಸ್ ಬರೆಯುತತಾರೆ: “ಇಂಗ್ಲೆಂಡ್ ಭಾರತ ಸಮಾಜದ ಚೌಕಟ್ಟನ್ನು ಸಂಪೂರ್ಣವಾಗಿ ಮುರಿದು ಹಾಕಿದೆ. ಪುನರ್ ನಿರ್ಮಿಸುವ ಯಾವುದೇ ಚಿನ್ಹೆಯೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಮುಂಚಿನ ದಿನಗಳ ಸರ್ವನಾಶ ಮತ್ತು ಹೊಸತೇನೂ ಸೃಷ್ಟಿಯಾಗದ ಕಾರಣ, ತನ್ನಳೆಯ ಪರಂಪರೆಯನ್ನು ಕಳೆದುಕೊಂಡ ಮತ್ತು ತನ್ನಡೀ ಇತಿಹಾಸವನ್ನು ಕಳೆದುಕೊಂಡ ಬ್ರಿಟನ್ನಿನ ಆಳ್ವಿಕೆಯಲ್ಲಿರುವ ಹಿಂದೂಸ್ತಾನದಲ್ಲಿ ಪ್ರಸ್ತುತ ದುಃಖದ ಜೊತೆಗೆ ವ್ಯಾಕುಲತೆಯೂ ಸೇರಿಕೊಂಡಿದೆ. 

ಬ್ರಿಟೀಷರು ಹಿಂದೂಸ್ಥಾನದ ಮೇಲೆ ಹೇರಿರುವ ಈ ದುಃಖಾವಸ್ಥೆ, ವಿಭಿನ್ನವಾಗಿದೆ ಮತ್ತು ಇದುವರೆಗೆ ಹಿಂದೂಸ್ಥಾನ ಅನುಭವಿಸಿದ ಎಲ್ಲಾ ದುಃಖಕ್ಕಿಂತಲೂ ಭೀಕರವಾಗಿದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನವಿಲ್ಲ”. (248) 

ಈ ವಿನಾಶದ ಒಂದು ಪ್ರಮುಖ ಪರಿಣಾಮವೆಂದರೆ ಉತ್ಪಾದನೆಗೊಂಡ ವಸ್ತುಗಳ ಬೆಲೆ ಕುಸಿತ ಕಂಡಿದ್ದು, ಇದು ಉತ್ಪಾನೆಯಲ್ಲಿದ್ದ ಎಲ್ಲಾ ವರ್ಗದವರ ಮೇಲೂ ಗಂಭೀರ ಪರಿಣಾಮ ಉಂಟುಮಾಡಿತು ಮತ್ತು ಅಗತ್ಯವಸ್ತುಗಳ ಉತ್ಪಾದನೆಯ ಹೋರಾಟಕ್ಕೆ ತಡೆ ಹಾಕಿತು. ಶಾಮ ರಾವ್ ಈ ಬಿಕ್ಕಟ್ಟಿನ ಒಂದು ವಾಸ್ತವವನ್ನು ವಿವರಿಸುತ್ತಾರೆ. ಅವರು ಬರೆಯುತ್ತಾರೆ: “ಕೆಲವು ಆರ್ಥಿಕ ವಿಚಾರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ್ದು ಕೂಡ ಈ ಸಮಯದಲ್ಲಿ ಮುಜುಗರ ಮೂಡಿಸಲು ಕಾರಣವಾಯಿತು. ಹೈದರ್ ಮತ್ತು ಟಿಪ್ಪುವಿನ ಕಾಲದಲ್ಲಿ ದೊಡ್ಡ ಮಟ್ಟದ ಸೈನ್ಯವನ್ನು ನಿರ್ವಹಿಸಲಾಗುತ್ತಿತ್ತು, ಇವರ ಸಲುವಾಗಿ ಹೆಚ್ಚಿನ ಪ್ರಮಾಣದ ಧಾನ್ಯ ಕಾಳುಗಳು ಮತ್ತು ಇತರೆ ವಸ್ತುಗಳಿಗೆ ಬೇಡಿಕೆಯಿರುತ್ತಿತ್ತು. ದೇಶದಲ್ಲಲ್ಲಿ ಶಾಂತಿಯ ವಾತಾವರಣ ಇಲ್ಲದೇ ಹೋದರೂ ನಿರುದ್ಯೋಗದ ಕುರಿತು ದೂರುಗಳಿರಲಿಲ್ಲ, ಹಣ ಖರ್ಚಾಗುತ್ತಿತ್ತು, ಎಲ್ಲ ವರ್ಗದ ಜನರಿಗೆ ಅನುಕೂಲಕರವಾಗುತ್ತಿತ್ತು. ಪೂರ್ಣಯ್ಯರ ದಿನಗಳಲ್ಲೂ ಕೂಡ ದೊಡ್ಡ ಬ್ರಿಟೀಷ್ ಸೈನ್ಯವಿತ್ತು, ರಾಜ್ಯದ ವಿವಿಧ ಭಾಗಗಳಲ್ಲಿ ಚಿಕ್ಕ ಚಿಕ್ಕ ತುಕಡಿಗಳಾಗಿ ಕಾರ್ಯನಿರ್ವಹಿಸುತ್ತಿತ್ತು, ಇದೇ ರೀತಿ ಹಂಚಿಹೋಗಿದ್ದ ದೊಡ್ಡ ಸಂಖೈಯ ಮೈಸೂರು ಸೈನ್ಯದ ಕಾರಣದಿಂದ, ಕೃಷಿಕರು, ಉತ್ಪಾದಕರು, ಕಲಾವಿದರು, ವರ್ತಕರು ಮತ್ತು ಇತರೆ ವರ್ಗದವರಿಗೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಿತ್ತು. ಆದರೆ 1810ರಷ್ಟರಲ್ಲಿ, ಬ್ರಿಟೀಷ್ ಸೈನ್ಯವಿದ್ದ ಪ್ರದೇಶಗಳ ಸಂಖೈ ಗಣನೀಯವಾಗಿ ಕಡಿಮೆಯಾಯಿತು ಮತ್ತು ಬ್ರಿಟೀಷ್ ಸೈನಿಕರ ಸಂಖೈಯೂ ಕಡಿಮೆಯಾಯಿತು. ತತ್ಪರಿಣಾಮವಾಗಿ, ಉತ್ಪನ್ನಗಳಿಗಿದ್ದ ಬೇಡಿಕೆಯೂ ಕಡಿಮೆಯಾಯಿತು, ವೆಚ್ಚವಾಗುವ ಹಣದಲ್ಲೂ ಕುಸಿತವಾಯಿತು. ಜೊತೆಜೊತೆಗೆ, ಉತ್ಪನ್ನಗಳಿಗಿದ್ದ ಬೇಡಿಕೆ ಕಡಿಮೆಯಾದಾಗ ಕೃಷಿಯಲ್ಲಿ ಹೆಚ್ಚಳವಾಯಿತು, ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಹೆಚ್ಚೆಚ್ಚು ಲಗ್ಗೆಯಿಟ್ಟಂತೆ ಅವುಗಳ ಬೆಲೆಯಲ್ಲೂ ಇಳಿತವಾಯಿತು. ವಾರ್ಷಿಕ ಸಬ್ಸಿಡಿಯನ್ನು ಮಾಸಿಕ ಕಂತುಗಳಲ್ಲಿ ಕಟ್ಟಬೇಕಿದ್ದದ್ದು ಕೂಡ ಈ ಬೆಲೆ ಕುಸಿತಕ್ಕೆ ಕಾರಣ…. 

ಮೈಸೂರು ಸರಕಾರ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರವೇ ನಿಯಮಿತವಾಗಿ ದುಡ್ಡು ಕಟ್ಟಲು ಯೋಗ್ಯವಾಗಿದೆಯಾ ಎಂದು ಗಮನಿಸುವುದು ಬ್ರಿಟೀಷ್ ರೆಸಿಡೆಂಟರಿಗಿದ್ದ ಆತಂಕವಾಗಿತ್ತು. ವ್ಯಾಪಾರದ ಇಳಿಮುಖದಿಂದಾಗಿ ಕಂದಾಯದ ಮೂಲವಾದ ಸೇಯರ್, ಅಬಕಾರಿ ಮತ್ತಿತರೆ ಆದಾಯ ಮೂಲಗಳಲ್ಲೂ ಕುಸಿತವಾಯಿತು ಮತ್ತು ಉಳಿದ ಏಕೈಕ ಮೂಲವೆಂದರೆ ಅದು ಭೂಮಿ….”(249) 

ಬೆಲೆ ಕುಸಿತದ ಕಾರಣದಿಂದಾಗಿ ಬಾಕಿಯಾದ ಮೊತ್ತವನ್ನು ತುಂಬುವ ಸಲುವಾಗಿ ಶರಾತ್ ವ್ಯವಸ್ಥೆ ಹೊರಹೊಮ್ಮಿತು ಎಂದು ಶಾಮ ರಾವ್ ಅಭಿಪ್ರಾಯ ಪಡುತ್ತಾರೆ. 

ಉತ್ಪಾದನೆಯ ಮೂಲಗಳಿಗಾದ ಹಾನಿ ಮತ್ತದರ ಜೊತೆಜೊತೆಗೆ ಕುಸಿದ ಬೆಲೆಗಳು ಉತ್ಪಾದನಾ ವರ್ಗವನ್ನು ಹೆಚ್ಚುಕಡಿಮೆ ಇಲ್ಲವಾಗಿಸಿಬಿಟ್ಟಿತ್ತು. ಸಾಲ ಮಾಡುವುದು, ವಸಾಹತು ಪೂರ್ವ ದಿನಗಳಲ್ಲೂ ಇದ್ದ ಸಂಗತಿಯೇ ಆಗಿತ್ತು; ಆದರೆ ಬಡತನ ಮತ್ತು ಉತ್ಪಾದನೆಯಿಂದ ದೂರ ಉಳಿಯುವಿಕೆಯ ಕಾರಣದಿಂದ ಈಗದ ಪೈಶಾಚಿಕ ರೂಪ ಪಡೆದುಕೊಂಡಿತ್ತು, ದಿವಾಳಿಯಾಗುವುದು ದ್ವಿಗುಣಗೊಂಡುಬಿಟ್ಟಿತ್ತು. ನಗರ ಮತ್ತು ಹಳ್ಳಿಯ ದೊಡ್ಡ ಜನಸಮೂಹ ಮೊದಲ ಬಾರಿಗೆ ಬಡ್ಡಿವ್ಯಾಪಾರಿಗಳ ಮತ್ತು ಕರ್ನಾಟಕದ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರವಾಡಿ, ಸಿಂಧಿಯಾ ಮತ್ತು ಬನಿಯಾಗಳ ಕಾಲಿಗೆ ಸಿಕ್ಕ ಚೆಂಡಿನಂತಾದರು. ಅಮಿನಾ ಘೋಷ್ ಹೇಳುವಂತೆ “ಬ್ರಿಟೀಷರು ಹೇರಿದ ಹೊಸ ಪರಿಸ್ಥಿತಿಯಲ್ಲಿ…..ಬಡ್ಡಿವ್ಯಾಪಾರಿಗಳ ಬೆಳವಣಿಗೆ ಗಮನಾರ್ಹವಾಗಿತ್ತು”. (250) 

ಈ ಪರವಾಲಂಬಿ ಬಂಡವಾಳಶಾಹಿಗಳನ್ನು ಮೈಸೂರಿನ ಕಮಿಷನರ್ ಆಗುತ್ತಿದ್ದಂತೆ ಮಾರ್ಕ್ ಕಬ್ಬನ್ ಪ್ರೋತ್ಸಾಹ ನೀಡಿದರು, ಈ ಬೇಟೆಗಾರ ಸಮಾಜಕ್ಕೆ ರಾಜ್ಯವೇ ಬೆನ್ನೆಲುಬಾಗುವಂತೆ ನೋಡಿಕೊಂಡರು. ಫಣಿ ಮತ್ತಿತರರು ಕಬ್ಬನ್ ಪರಿಚಯಿಸಿದ ಈ ವಿಧಾನವನ್ನು ಮತ್ತು ತೆಗೆದುಕೊಂಡ ದುರಾಡಳಿತದ ಕ್ರಮಗಳನ್ನು ವಿವರಿಸಿದರು. 

“…..ಸಾಲ ಮಾಡುವುದು ಮತ್ತು ಸಾಲಗಾರರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ಅಪಾರ ಬದಲಾವಣೆಗಳಾಯಿತು… 

ಸರಕಾರದ ಹೊಸ ಕಾನೂನು ಹೇಳುತ್ತದೆ: ‘ಪೇಶ್ಕಾರ್ ಬಂದ ಅರ್ಜಿಯ ಆಧಾರದ ಮೇಲೆ ಒಂದು ಪುಸ್ತಕದಲ್ಲಿ ಸಾಲ ವಸೂಲಾತಿಗಾಗಿ ಅರ್ಜಿ ಹಾಕಿದವನ ಹೆಸರು ಬರೆದುಕೊಂಡು, ಸಾಲಗಾರನ ಹೆಸರು, ಸಾಲದ ಮೊತ್ತ, ಯಾವಾಗ ಮತ್ತು ಯಾಕಾಗಿ ಸಾಲ ನೀಡಲಾಗಿತ್ತು ಎನ್ನುವುದನ್ನು ನಮೂದಿಸಿಕೊಂಡ ನಂತರ ವಿಚಾರಣೆಗೆ ಒಂದು ದಿನವನ್ನು ಗೊತ್ತು ಮಾಡಬೇಕು. ವಿಚಾರಣೆಯನ್ನು ದೂರು ಸ್ವೀಕರಿಸಿದ ಎಂಟನೇ ದಿನಕ್ಕೆ ನಿಗದಿಪಡಿಸಲಾಗುತ್ತಿತ್ತು ಮತ್ತು ತೀರ್ಪು ಹೇಳಿದ ನಂತರ ತೀರ್ಪು ಜಾರಿಗೆ ಬರಲು 35 ದಿನಗಳ ಕಾಲಾವಕಾಶವಿರುತ್ತಿತ್ತು’. ಸಾಲ ಮರುಪಾವತಿಸಲಾಗದವರನ್ನು ಜೈಲಿಗೆ ನೂಕುವ ಕಾನೂನನ್ನು ಪ್ರಥಮ ಬಾರಿಗೆ ಪರಿಚಯಿಸಲಾಯಿತು ಮತ್ತು ಮುಂದಿನ ಹೆಜ್ಜೆಯಂತೆ, ‘ಸಾಲಗಾರ ಒಂದಾದರೂ ಕಂತನ್ನು ಕಟ್ಟಲು ವಿಫಲನಾದರೆ, ಸಾಲ ನೀಡಿದವನ ಅರ್ಜಿಯ ಆಧಾರದ ಮೇಲೆ ಸಾಲಗಾರನ ಆಸ್ತಿಯನ್ನು ಜಫ್ತಿ ಮಾಡಿ ನ್ಯಾಯಾಲಯದ ಮೂಲಕ ಹರಾಜು ಹಾಕಲಾಗುವುದು’. ನಿರೀಕ್ಷೆಯಂತೆ ಇದಕ್ಕೆ ಹೆಚ್ಚಿನ ವಿರೋಧವಿತ್ತು…..ಪ್ರತಿಭಟನೆಯ ನಡುವೆಯೂ ಸಾಲ ಮಾಡಿದ್ದಕ್ಕಾಗಿ ಜೈಲಿಗೆ ಹಾಕುವ ವ್ಯವಸ್ಥೆಯನ್ನು ಬ್ರಿಟೀಷರು ಪರಿಚಯಿಸಿದರು”. (251) 

ಈ ರೀತಿಯಾಗಿ ಕರ್ನಾಟಕದ ನ್ಯಾಯ ಮತ್ತು ಕಾನೂನು ವ್ಯವಸ್ಥೆ ಜಾರಿಗೆ ಬಂತು. ಕಾನೂನಿನ ರಚನೆ ನಡೆದಿದ್ದು ತೀರ್ವವಾದ ಬಿಕ್ಕಟ್ಟಿನ ನಡುವೆ, ಪ್ರತಿಭಟನೆಯ ನಡುವೆ ಮತ್ತು ಬಡವರು, ಸಾಲಗಾರ ಸಮೂಹದ ಆಸಕ್ತಿಗಳಿಗೆ ವಿರುದ್ಧವಾಗಿ. ರಕ್ತ ಹೀರುವ ಜೊತೆಗಾರರಿಗೆ ಅನುಕೂಲಕರವಾಗುವಂತಹ ವ್ಯವಸ್ಥೆಯನ್ನು ವಸಾಹತುಶಾಹಿ ಸ್ಥಾಪಿಸಿತು. 

ಕಾನೂನು ಭವನದೊಂದಿಗೆ ಗುರಿಯೂ ಬಂತು. ಕರಿ ಕೋಟು ಧರಿಸಿ ನ್ಯಾಯ ನೀಡಲು ಕುಳಿತ ವ್ಯಕ್ತಿ, ಜನಸಮೂಹದ ದೃಷ್ಟಿಯಿಂದ ತಮ್ಮನ್ನು ಸೆರೆಮನೆಗೆ ದೂಡುವ ಜೈಲರ್ ಮಾತ್ರ.

ಮುಂದಿನ ವಾರ
ಪರಾವಲಂಬಿ ಖರ್ಚುಗಳು, ಅಸ್ತವ್ಯಸ್ತಗೊಂಡ ಆರ್ಥಿಕತೆ

No comments:

Post a Comment