Jul 29, 2016

ಮೇಕಿಂಗ್ ಹಿಸ್ಟರಿ: ಪರಾವಲಂಬಿ ಖರ್ಚುಗಳು, ಅಸ್ತವ್ಯಸ್ತಗೊಂಡ ಆರ್ಥಿಕತೆ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
29/07/2016
ಬಿಕ್ಕಟ್ಟಿಗೆ ಕಾರಣವಾದ ಮತ್ತೊಂದು ಪ್ರಮುಖ ಅಂಶವೆಂದರೆ ಗೊತ್ತುಗುರಿಯಿಲ್ಲದೆ ನಡೆಯುತ್ತಿದ್ದ ರಾಜ್ಯದ ಖರ್ಚುಗಳು. ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ, ಹತ್ತಿರತ್ತಿರ ಮೈಸೂರು ಸರಕಾರದ ಅರ್ಧದಷ್ಟು ಆದಾಯ ಬ್ರಿಟೀಷ್ ರಾಜ್ ಗೆ ಕೊಡಬೇಕಿದ್ದ ಕಪ್ಪ ಕಾಣಿಕೆಗೇ ಹೋಗಿಬಿಡುತ್ತಿತ್ತು. ಮತ್ತವರು ಮೈಸೂರಿನ ತೆಗೆದುಕೊಂಡದ್ದನ್ನು ಮತ್ತೆ ವಾಪಸ್ಸು ತಂದದ್ದಿಲ್ಲ. ಹಾಗಾಗಿ ಅರ್ಧದಷ್ಟು ಮೊತ್ತ ಪರಿಗಣನೆಗೇ ಬರುವುದಿಲ್ಲ. ರಾಜನಿಗೆ ಐದು ಪ್ರತಿಶತಃದಷ್ಟು ಮತ್ತು ದಿವಾನನಿಗೆ ಒಂದು ಪ್ರತಿಶತಃದಷ್ಟು ನೀಡುವ ಕಮಿಷನ್ನಿನಿಂದ ಕೆಲವು ಲಕ್ಷ ರುಪಾಯಿಗಳು ಸಾರ್ವಜನಿಕ ಉಪಯೋಗಕ್ಕೆ ಬರದೇ ಹೋಗಿಬಿಡುತ್ತಿತ್ತು. ಇನ್ನುಳಿದ ನಲವತ್ತು ಚಿಲ್ಲರೆ ಪ್ರತಿಶತಃದಷ್ಟು ಹಣದಲ್ಲಿ, ಒಂದು ದೊಡ್ಡ ಮೊತ್ತ ಕೆ.ಆರ್.ಒಡೆಯರರ ರಾಜಸ್ವವನ್ನು ಉಳಿಸಲಿಕ್ಕೆ ಸುಟ್ಟು ಹೋಗುತ್ತಿತ್ತು, ಅದರಲ್ಲಲವನ್ನು ಹಿಂದಿನ ಪುಟಗಳಲ್ಲಿ ಹೀಗಾಗಲೇ ನಾವು ನೋಡಿದ್ದೇವೆ. ಮೈಸೂರಿನ ರೆಸೆಡೆಂಟಾಗಿದ್ದ ಕಾಸಾಮೈಯೂರ್, ಫೋರ್ಟ್ ಸೆಂಟ್ ಜಾರ್ಜಿನ ಕಾರ್ಯದರ್ಶಿಯಾಗಿದ್ದ ರಿಚರ್ಡ್ ಕ್ಲೈವ್ ಗೆ 1831ರಲ್ಲಿ ಬರೆದ ಪತ್ರದಲ್ಲಿ ರಾಜನ ಈ ವೈಭವೋಪೇತ ಖರ್ಚುಗಳ ಬಗ್ಗೆ ಬರೆಯುತ್ತಾನೆ. ರಾಜ ರಾಜ್ಯದ ಹಣವನ್ನು ಉಪಯೋಗಿಸುವುದರ ಜೊತೆಗೆ ವಿಪರೀತವಾಗಿ ಸಾಲ ಮಾಡಿಕೊಂಡು “ಅನಗತ್ಯ ಮತ್ತು ದುಬಾರಿ ವಸ್ತುಗಳನ್ನು ಸಾಹುಕಾರರಿಂದ ಖರೀದಿಸಿ ಬ್ರಾಹ್ಮಣ ವಿಧಿವಿಧಾನಗಳಲ್ಲಿ ಪೋಲುಮಾಡಿಬಿಡುತ್ತಾನೆ….ರಾಜ ಮತ್ತೆ ತನ್ನ ಹಿಂದಿನ ಅಭ್ಯಾಸವಾದ ಅನವಶ್ಯಕ ಪ್ರದರ್ಶನಕಾರಕ ವೈಭವಕ್ಕೆ ಮರಳುತ್ತಿದ್ದಾನೆ” ಎಂದು ಬರೆಯುತ್ತಾನೆ ಕಾಸಾಮೈಯೂರ್. (252) 

ಮತ್ತೆ, ಕೆಲವು ದಿನಗಳ ನಂತರ, ಮೈಸೂರು ಸಾಮ್ರಾಜ್ಯದಲ್ಲಿ ಕಂಪನಿಯ ನೇರ ಆಡಳಿತವನ್ನು ಹೇರಿದಾಗ, ಮದ್ರಾಸಿನ ಗವರ್ನರ್ ಲಷಿಂಗ್ಟನ್, ಕೈಗೊಂಬೆ ರಾಜನಿಗೆ ಬರೆದ ಪತ್ರದಲ್ಲಿ ಅವನ ತಪ್ಪುಗಳನ್ನು ತೋರಿಸುತ್ತ ಎಚ್ಚರಿಸುತ್ತಾನೆ: “ಘನತೆವೆತ್ತ ನಿಮ್ಮ ಸಮಸ್ಯೆಯ ಮೂಲವೆಂದರೆ ನೀವು ಹೊಂದಿರುವ ಖಜಾನೆಯ ಹಣವನ್ನು ಪೋಲು ಮಾಡುತ್ತಿರುವ ನಿಮ್ಮ ದುಬಾರಿ ಖರ್ಚುವೆಚ್ಚಗಳು; ಸರಿಯಾದ ಅಧಿಕಾರಿಗಳನ್ನು ನೇಮಿಸಿ ಖಜಾನೆಯ ಹಣವನ್ನು ದೇಶದ ಒಳಿತಿಗಾಗಿ ಉಪಯೋಗಿಸದ ನಿಮ್ಮ ನಿರ್ಧಾರಗಳು…. 

….ನೀವು ಸಾಹುಕಾರರ ಬಳಿ ಮಾಡಿರುವ ಸಾಲದ ಮೊತ್ತವನ್ನು ಸರಿಪಡಿಸಲಿಕ್ಕಾಗಿ, ನನಗೆ ತಿಳಿದಂತೆ ನಿಮ್ಮ ಆದಾಯವನ್ನು ಬಹಳಷ್ಟು ಸಂದರ್ಭದಲ್ಲಿ ಅದರ ಮೂಲ ಉದ್ದೇಶದಿಂದ ತಿರುಗಿಸಿಬಿಡುತ್ತೀರಿ. ನಿಮ್ಮ ಸೈನ್ಯಕ್ಕೆ ಕೊಡಬೇಕಾಗಿರುವ ಹಣಕ್ಕೆ, ನಿಮ್ಮ ಖಾಸಗಿ ಖರ್ಚುವೆಚ್ಚಗಳಿಗೆ ಯಾವಾಗೆಲ್ಲ ಹಣದ ಅಭಾವ ಉಂಟಾಗುತ್ತದೋ ಆಗೆಲ್ಲ ನೀವು ಸಾಹುಕಾರರಿಗೆ ಭೂಮಿಯನ್ನು ದಾನವಾಗಿ ನೀಡೋ ಮತ್ತೊಂದು ಮಾಡಿಯೋ ಹಣ ಪಡೆದುಬಿಡುತ್ತೀರಿ. ನಿಮ್ಮಾದಾಯದ ಹೆಚ್ಚಿನ ಭಾಗವನ್ನು ವಿಪರೀತವಾಗಿ ಇನಾಮು ಕೊಡುತ್ತ ಕಳೆದಿದ್ದೀರಿ, ಬಹಳಷ್ಟು ಸಂದರ್ಭದಲ್ಲಿ ಇಂತಹ ಇನಾಮು ಪಡೆದ ವ್ಯಕ್ತಿ ನಿಮ್ಮಿಂದ ಅದನ್ನು ಪಡೆಯಲು ಯೋಗ್ಯನಾಗಿಯೇ ಇರುವುದಿಲ್ಲ. 

ವಿಪರೀತವಾಗಿ ಇನಾಮು ಭೂಮಿಯನ್ನು ಕೊಟ್ಟಿದ್ದು ಘನತೆವೆತ್ತವರ ಆರ್ಥಿಕ ಬಿಕ್ಕಟ್ಟಿಗೆ ಮತ್ತೊಂದು ಕಾರಣ; ಇದು ಹೆಚ್ಚು ಎಚ್ಚರಿಕೆಯ ವಿಷಯ ಯಾಕೆಂದರೆ ವಾರ್ಷಿಕ ಆದಾಯದಲ್ಲಾಗುವ ಕುಸಿತವನ್ನು ಇದು ಹೆಚ್ಚು ಮಾಡುತ್ತದೆ. ದಿವಾನ್ ಪೂರ್ಣಯ್ಯನವರ ಸಮಯದಲ್ಲಿ ಇನಾಮಿನ ಮೊತ್ತ 1,84,766, 3.14 3/4 ಕಾಂತರೇಯ ಪಗೋಡಾದಷ್ಟಿತ್ತು. 1828ರಲ್ಲಿ ಅದು 3,53,165 ರಷ್ಟಾಗಿದೆ, ಪೂರ್ಣಯ್ಯನವರ ಸಮಯಕ್ಕೆ ಹೋಲಿಸಿದರೆ 1,68,998, 3.9 ಜಾಸ್ತಿಯಾಗಿದೆ. 1828 ಮತ್ತು 1830 ನಡುವೆ ಇದು ಮತ್ತಷ್ಟು ಹೆಚ್ಚಾಗಿ 4,34,346, 5.4 ಕಾಂತರೇಯ ಪಗೋಡಾದಷ್ಟಾಗಿದೆ. ಇದು ರಾಜ್ಯದ ಸಂಪತ್ತಿನಿಂದ ತೆಗೆದುಕೊಂಡ ಸಂಪತ್ತು. 

ಭೂಮಿಯನ್ನು ದಾನ ನೀಡುವುದರಿಂದ ನಿಮ್ಮಾದಾಯದಲ್ಲಾದ ಕುಸಿತ, ನಿಮ್ಮ ಮತ್ತು ಕಂಪನಿಯ ಸರಕಾರದ ನಡುವೆ ನಡೆದ ಪರಸ್ಪರ ಒಪ್ಪಂದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ ಎಂದು ನಿಮಗೆ ತುಂಬ ನೋವಿನೊಡನೆ ತಿಳಿಸಬೇಕಾಗಿದೆ ಮತ್ತು ನಾನು ಘನತೆವೆತ್ತವರಿಗೆ ನೀಡುವ ಸಲಹೆಯಂದರೆ……ಭವಿಷ್ಯದಲ್ಲಿ ಇಂತಹ ಅನುದಾನ ನೀಡುವುದರಿಂದ ದೂರವಿದ್ದುಬಿಡಿ….” (253) 

ಮತ್ತು ಕೊನೆಯಲ್ಲಿ ಲಷಿಂಗ್ಟನ್ ಬ್ರಿಟೀಷರು ದತ್ತು ಪಡೆದ ಮಗನಿಗೆ ತಂದೆ ನೀಡುವ ಸಲಹೆಯನ್ನು ಕಾಠಿಣ್ಯದಿಂದ ತಿಳಿಸುತ್ತಾರೆ: “…..ನೀವು ನಿಮ್ಮ ದಿನದ ಒಂದಷ್ಟು ಸಮಯವನ್ನು ನಿಗದಿತವಾಗಿ ನಿಮ್ಮ ಕರ್ತವ್ಯಗಳನ್ನು ಪೂರೈಸಲು ಮೀಸಲಿಡಬೇಕಾಗಿರುವುದು ಅತ್ಯವಶ್ಯಕವಾಗಿದೆ, ಆಗ ನಿಮ್ಮ ಆರ್ಥಿಕತೆ ಒಂದು ಉತ್ತಮ ರೂಪಕ್ಕೆ ಮರಳುತ್ತದೆ….” (254) 

ಮೈಸೂರು ಸಾಮ್ರಾಜ್ಯದ ಪ್ರಮುಖ ಖರ್ಚುಗಳಲ್ಲಿ ವಸಾಹತು ದೊರೆಯ ಸೈನ್ಯದ ನಿರ್ವಹಣೆಯೂ ಒಂದು ಎಂದು ಮೀರಾ ನಮಗೆ ತಿಳಿಸುತ್ತಾರೆ. 1830ರಲ್ಲೇ, ಮೈಸೂರಿನಲ್ಲಿ ಬೀಡುಬಿಟ್ಟಿದ್ದ ಚಿಕ್ಕ ಸೈನ್ಯದ ನಿರ್ವಹಣೆಗೆ 1,50,156 ರುಪಾಯಿಗಳು ಬೇಕಾಗಿತ್ತು. ಹೀಗಾಗಿ “ರಾಜನಿಗೆ ಹತ್ತಲವು ರೂಪದ ಜವಾಬ್ದಾರಿಗಳಿತ್ತು, ಮತ್ತಿದರಿಂದ ದೇಶ ಅಭಿವೃದ್ಧಿವಂಚಿತವಾಯಿತು”. (255) 

ಇಡೀ ಮೂವತ್ತು ವರುಷಗಳ ಅವಧಿಯಲ್ಲಿ ಬ್ರಿಟೀಷರು ಅತ್ಯಮೂಲ್ಯ ಸಂಪತ್ತನ್ನು ದೋಚಿದರು, ಇಡೀ ಭಾರತವನ್ನು ಆಕ್ರಮಿಸುವ ಸಲುವಾಗಿ ಇಲ್ಲಿಂದಲೇ ಹತ್ತಾರು ಲಕ್ಷ ರುಪಾಯಿಗಳನ್ನು ಲೂಟಿ ಹೊಡೆದರು. ಮೀರಾ ಸೆಬಾಸ್ಟಿಯನ್ ಹೇಳುತ್ತಾರೆ: “ವೆಲ್ಲೆಸ್ಲಿ ನಡೆಸಿದ ಸತತ ಯುದ್ಧಗಳಲ್ಲಿ ಮೈಸೂರು ಸಾಮ್ರಾಜ್ಯವನ್ನು ಎಳೆದ ಕಾರಣದಿಂದಾಗಿ ರಾಜ್ಯದ ಬೊಕ್ಕಸದ ಹಣ ಪೋಲಾಯಿತು. ಹಾಗಾಗಿ ದಿವಾನ್ ಪೂರ್ಣಯ್ಯನವರ ಆಡಳಿತಾವಧಿಯಲ್ಲಿ, ಆರ್ಥಿಕತೆಯನ್ನುಳಿಸುವ ಅವರ ತೀವ್ರವಾದ ಪ್ರಯತ್ನಗಳ ನಡುವೆಯೂ ಸೈನ್ಯದ ಖರ್ಚಿಗೆ 1809-10ರಲ್ಲಿ 20.7 ಲಕ್ಷ ರುಪಾಯಿಗಳಷ್ಟು ಖರ್ಚಾಗಿತ್ತು. ಈ ದುಬಾರಿ ನಿರ್ವಹಣೆಯ ಕಾರಣದಿಂದಾಗಿ ಮಹಾರಾಜರ ನೇರ ಆಳ್ವಿಕೆಯ ಸಮಯದಲ್ಲಿ ಸೈನ್ಯಕ್ಕೆ ಕೊಡಬೇಕಾದ ಮೊತ್ತ ಬಾಕಿ ಉಳಿಯುತ್ತಿತ್ತು ಎನ್ನುವುದರ ಕುರಿತು ಯಾವುದೇ ಅನುಮಾನಗಳಿಲ್ಲ. ಕಂದಾಚಾರದ ಗುಮಾಸ್ತರಿಗೆ 1824-25ರಲ್ಲಿ ಕೊಡಬೇಕಿದ್ದ ಮೊತ್ತವೇ 7,03,181 ರುಪಾಯಿಗಳಷ್ಟಿತ್ತು. ಈ ನಿರಂತರ ಯುದ್ಧಗಳ ಕಾರಣದಿಂದಾಗಿ ಸೊವಾರ್ ಕಛೇರಿಗಳಿಗೆ ಮತ್ತು ಬರ್ಗೀರಿಗೆ 10.5 ಲಕ್ಷ ರುಪಾಯಿ ವೆಚ್ಚವಾಗಿತ್ತು, 1824-25ರಲ್ಲಿ”. (256) 

ಮೈಸೂರಿಗೆ ಭೇಟಿ ಕೊಟ್ಟ ಬ್ರಿಟೀಷ್ ವರ್ತಕರು ಮತ್ತು ಅಧಿಕಾರಿಗಳ ಹತ್ತಿರ ತನ್ನ ಉದಾರತನ ತೋರಿದ ಮೈಸೂರು ರಾಜ. ಬ್ರಿಟಿಷ್ ಕಮಿಷನರ್ರುಗಳು ಲೆಕ್ಕಹಾಕಿದಂತೆ 1830ರ ದಶಕದಲ್ಲಿ ಬ್ರಿಟನ್ನಿಗೆ ವಾರ್ಷಿಕವಾಗಿ 20 ಲಕ್ಷ ರುಪಾಯಿಗಳಷ್ಟು ಮೌಲ್ಯದ ಉಡುಗೊರೆಗಳು ಮೈಸೂರಿನ ವಿದೂಷಕನಿಂದ ತಲುಪುತ್ತಿದ್ದವು. (257) 

ಆ ಕಾಲದಲ್ಲಿದ್ದ ಪ್ರಮುಖ ಖರ್ಚುಗಳೆಂದರೆ, ಬ್ರಿಟೀಷ್ ರಾಜ್ ಗೆ ಕೊಡಬೇಕಿದ್ದ ಕಪ್ಪಕಾಣಿಕೆ, ಕೈಗೊಂಬೆ ರಾಜ ಮತ್ತವನ ದಿವಾನನಿಗೆ ಕೊಡಬೇಕಿದ್ದ ಕಮಿಷನ್, ತಿಕ್ಕಲು ರಾಜನ ಊಳಿಗಮಾನ್ಯ ಖರ್ಚುಗಳಾದ ಬ್ರಿಟೀಷ್ ವರ್ತಕರಿಗೆ, ಅಧಿಕಾರಿಗಳಿಗೆ, ಮಠಗಳಿಗೆ, ದೇವಸ್ಥಾನಗಳಿಗೆ ಕೊಡುವ ಉಡುಗೊರೆ ಮತ್ತು ಕೊನೆಯದಾಗಿ ಭಾರತವನ್ನು ಮತ್ತಷ್ಟು ದುರ್ಬಲಗೊಳಿಸಲು ಬ್ರಿಟೀಷ್ ಸೈನ್ಯಕ್ಕೆ ನೀಡುವ ಮೊತ್ತ. ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲೂ ಈ ನಾಲ್ಕು ತಲೆಗಳಿಗೆ ಮತ್ತಷ್ಟು ಮಗದಷ್ಟು ಹಣದ ಅವಶ್ಯಕತೆ ಬೀಳುತ್ತಿತ್ತು. ಪರಿಣಾಮವಾಗಿ, 1822ರಲ್ಲಿ, ತಿಂಗಳು ತಿಂಗಳು ಕಟ್ಟಬೇಕಿದ್ದ ಕಪ್ಪಕಾಣಿಕೆಯಲ್ಲಿ ವ್ಯತ್ಯಾಸವಾಗುತ್ತಿತ್ತು, ಮತ್ತು ಹಲವು ಸಂದರ್ಭದಲ್ಲಿ, ಮೈಸೂರು ರಾಜನಡಿಯಿದ್ದ ಸೈನಿಕರ ಸಂಬಳ ಬಾಕಿಯುಳಿಯುತ್ತಿತ್ತು, ಇದು ಸೈನಿಕರಲ್ಲೂ ಬಿಕ್ಕಟ್ಟನ್ನು ಹೆಚ್ಚಿಸಿತು. 

ರಾಜ್ಯದ ಖರ್ಚು ವೆಚ್ಚಗಳನ್ನು ಗಮನಿಸುವುದು ಅಂತಿಮವಾಗಿ ಒಂದಷ್ಟು ಆಘಾತಕಾರಿ ಮಾಹಿತಿಗಳನ್ನು ಹೊರಹಾಕುತ್ತದೆ. ಅರೆ ಊಳಿಗಮಾನ್ಯ ಮತ್ತು ವಸಾಹತು ಅಚ್ಚಿನಿಂದ ತಯಾರಾದ ಅಸಹ್ಯ ಮೂಡಿಸುವ ಕೈಗೊಂಬೆ ರಾಜನ ಸರಕಾರ ಸಾಮಾಜಿಕ ಕಾರ್ಯಗಳಿಗೆ ಮಾಡಬೇಕಾದ ಖರ್ಚುಗಳೆಡೆಗೆ ಅಪಾರ ನಿರ್ಲಕ್ಷ್ಯ ತೋರಿಸುತ್ತದೆ. ಈ ದಿಕ್ಕಿನಲ್ಲಿ ಖರ್ಚು ಮಾಡಿದ ಚಿಕ್ಕ ಪುಟ್ಟ ಮೊತ್ತ ಕೂಡ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲಿದ್ದ ಪರಂಪರೆಯ ಮುಂದುವರಿಕೆಯಷ್ಟೇ. ಹೈದರ್ ಮತ್ತು ಟಿಪ್ಪು ಸರಕಾರ ಸಂಪನ್ಮೂಲ ಮತ್ತು ಸಾಮಾಜಿಕ ಆಸ್ತಿಯನ್ನು ಸೃಷ್ಟಿಸುವ ಸಲುವಾಗಿ ಹೂಡಿದ ದೊಡ್ಡ ಮೊತ್ತದ ಬಂಡವಾಳವನ್ನು ಕಾಪಿಡುವ ಸಲುವಾಗಿ ಅದನ್ನು ಮುಂದುವರೆಸಲೇಬೇಕಿತ್ತು. ಹಿಂದಿನ ಕಾಲದ ಊಳಿಗಮಾನ್ಯ ಸರಕಾರದಲ್ಲಿದ್ದಂತೆ, ವಸಾಹತುಶಾಹಿ ಮಧ್ಯಯುಗದ ಕಾಲಕ್ಕೆ ಸಮಾಜ ಜಾರಿಹೋಗಲು ಅನುವು ಮಾಡಿಕೊಟ್ಟಿತು. ಬ್ರಿಟೀಷ್ ಕೈಗೊಂಬೆ ಪರಾವಲಂಬತನ ಒರಟಾಗಿತ್ತು, ಪರಿಪೂರ್ಣವಾಗಿತ್ತು.

ಮುಂದಿನ ವಾರ
ಕ್ಞಾಮ, ಕಾಲರ ಮತ್ತು ಪ್ಲೇಗ್: ಬಿಳಿ ದೇವರ ಶಾಪ

No comments:

Post a Comment