Jun 10, 2016

ಮೇಕಿಂಗ್ ಹಿಸ್ಟರಿ: ಸಮಾಜದ ನೋವಿಗೆ ಔಷಧ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
10/06/2016
ಊಳಿಗಮಾನ್ಯತೆ – ವಸಾಹತು ಸಿದ್ಧಾಂತ ಜನಸಮೂಹವನ್ನು ಹದ್ದುಬಸ್ತಿನಲ್ಲಿಡಲು ಜಾತಿ ಮತ್ತು ಧರ್ಮವನ್ನು ಕೊರಳಪಟ್ಟಿಯಂತೆ ಬಳಸಿತು. ಪ್ರತಿಗಾಮಿ ಸರಕಾರ ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ ಸಾರಾಯಿಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆದುಕೊಂಡಿತು, ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಾರಾಯಿಯನ್ನು ಉತ್ಪಾದಿಸಲು ಮತ್ತು ಸೇವಿಸಲಿದ್ದ ಎಲ್ಲಾ ಅಡಚಣೆಗಳನ್ನು ತೆಗೆದುಹಾಕಿತು. ಈ ನಿರ್ಧಾರ, ರಾಜ್ಯಕ್ಕೆ ಆದಾಯ ಮೂಲವಾಗುವುದರ ಜೊತೆಗೆ ಶೇಂದಿ ಗುತ್ತಿಗೆದಾರರಿಗೆ ಒಳ್ಳೆ ವ್ಯಾಪಾರವೂ ಆಗುವುದಕ್ಕೆ ಅನುಕೂಲವಾಯಿತು. ನಿಷೇಧವನ್ನು ಹಿಂಪಡೆಯಲು ಇವಷ್ಟೇ ಕಾರಣವಲ್ಲ. ಬಹು ಮುಖ್ಯವಾಗಿ, ಧರ್ಮ ಮತ್ತು ಜಾತಿ ಶೋಷಣೆಯಿಂದ ಹೊರಬರಲಿಚ್ಛಿಸುವ ಜನಸಮೂಹವನ್ನು ಭ್ರಮೆಯ ಲೋಕಕ್ಕೆ ತಳ್ಳಿ ನಿದ್ರಾಹೀನ ಸ್ಥಿತಿಗೆ ನೂಕುವ ಸಂಸ್ಕೃತಿಯನ್ನು ಬೆಳೆಸಬೇಕಿತ್ತು. ಶೇಂದಿ ಉದ್ರಿಕ್ತ ಜನಸಮೂಹವನ್ನು ತಣ್ಣಗಾಗಿಸಿತು ಮತ್ತು ಊಳಿಗಮಾನ್ಯ ದೊರೆಗಳ ಹಾಗೂ ಬ್ರಿಟೀಷ್ ಸಾಮ್ರಾಜ್ಯದ ಆಳ್ವಿಕೆಯನ್ನು ಉಳಿಸಿ ಬೆಳೆಸಿತು. ಹಾಗಾಗಿ ಬ್ರಾಹ್ಮಣರು ಮತ್ತು ಲಿಂಗಾಯತರು ಕುಡಿಯದೇ ಇದ್ದರು, ಅವರದೇ ಪ್ರಾಬಲ್ಯವಿದ್ದ ರಾಜ್ಯದಲ್ಲಿ ಮದ್ಯಪಾನ ನಿಷೇಧವನ್ನು ಹಿಂತೆಗೆದುಕೊಂಡಿದ್ದು ತಮ್ಮ ವರ್ಗದ ಆಳ್ವಿಕೆ ಅಭಾದಿತವಾಗಿ ಮುಂದುವರೆಯಲಿ ಎಂಬ ಕಾರಣದಿಂದ.

ಈ ಸಾಂಸ್ಕೃತಿಕ ಎಳೆತದಿಂದಾದ ಪರಿಣಾಮವೆಂದರೆ ಬೆಂಗಳೂರು ನಗರವೊಂದರಲ್ಲೇ “1799 – 1800ರಲ್ಲಿ 487 ಕಾಂತರೇಯ ಪಗೋಡಾಗಳಷ್ಟು ಆದಾಯ ತರುತ್ತಿದ್ದ ಶೇಂದಿ ಮತ್ತು ಮದ್ಯ ವ್ಯವಹಾರ, 1800 – 1801ರಲ್ಲಿ 808 ಕಾಂತರೇಯ ಪಗೋಡಾಗಳಿಗೆ ಏರಿಕೆಯಾಯಿತು.” (202)

ವಸಾಹತು ಆಳ್ವಿಕೆಯ ಮೊದಲ ನಾಲಕ್ಕು ವರ್ಷ ಮೈಸೂರು ಆಡಳಿತದಲ್ಲಿದ್ದ ವಿಲ್ಕ್ಸ್ ಕೊಡುವ ಅಂಕಿಸಂಖೈಗಳು ಸಾರಾಯಿ ವ್ಯಾಪಾರದಿಂದ ರಾಜ್ಯಕ್ಕೆ ಬರುತ್ತಿದ್ದ ಆದಾಯದಲ್ಲಾದ ಏರಿಕೆಯ ಬಗ್ಗೆ ತಿಳಿಸುತ್ತದೆ. ಶೇಂದಿ ಮತ್ತು ಮದ್ಯದಿಂದ ಬಂದ ಒಟ್ಟು ಆದಾಯ 1799-1800ರ ಅವಧಿಯಲ್ಲಿ ಒಟ್ಟು 28,845 ಕಾಂತರೇಯ ಪಗೋಡಾಗಳಷ್ಟಿದ್ದರೆ ಮೂರು ವರ್ಷದೊಳಗೇ ಇದು 44,290 ಪಗೋಡಾಗಳಷ್ಟು ಜಾಸ್ತಿಯಾಯಿತು; ತಂಬಾಕಿನ ನಂತರ ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತರುವ ಮೂಲವಾಯಿತು ಸಾರಾಯಿ. (203)


ಮುಂದಿನ ವಾರ: 
ಪುರುಷ ಸಮಾಜದ ದಬ್ಬಾಳಿಕೆ

No comments:

Post a Comment