Jun 17, 2016

ಮೇಕಿಂಗ್ ಹಿಸ್ಟರಿ: ಪುರುಷ ಸಮಾಜದ ದಬ್ಬಾಳಿಕೆ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
17/06/2016

ಟಿಪ್ಪುವಿನ ನಿಯಮಗಳು ವೇಶ್ಯಾವಾಟಿಕೆ ಮತ್ತು ಮಹಿಳೆಯರ ಮಾರಾಟವನ್ನು ನಿಷೇಧಿಸಿತ್ತು. ಚಾಮುಂಡಿ ದೇವಸ್ಥಾನಕ್ಕೆ ನರಹತ್ಯೆಯ ನೆಪದಲ್ಲಿ ಕನ್ಯೆಯರ ಜೀವಹರಣವಾಗುವುದನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ಆತ ತೆಗೆದುಕೊಂಡಿದ್ದ ಎನ್ನುವ ವರದಿಗಳೂ ಇವೆ. (204)

ವಸಾಹತುಶಾಹಿ ಮತ್ತವರ ಕೈಗೊಂಬೆ ಸರಕಾರದ ಅಧಿಕಾರಕ್ಕೆ ಬರುವುದರೊಂದಿಗೆ ಇಂತಹ ಹೇಯ ಆಚರಣೆಗಳು ಮತ್ತೆ ಪ್ರಾರಂಭವಾದವು, ಮಹಿಳೆಯರಿಗೆ ವಿಪರೀತದ ಉಪದ್ರ ಕೊಡುವ ಕಾಲವಾಯಿತು. ಕೈಗೊಂಬೆ ಸರಕಾರ ಮಹಿಳೆಯರನ್ನು ಶೋಷಿಸಿದ ಬಗ್ಗೆ ಸೆಬಾಸ್ಟಿಯನ್ ಜೋಸೆಫ್ ಹೇಳುತ್ತಾನೆ: “ಮಹಿಳೆಯರ ಸ್ಥಾನಮಾನ ತುಂಬ ಚರ್ಚೆಗೆ ಒಳಗಾಗಿದೆ, ಆದರೆ, ಕರ್ನಾಟಕದ ಇತಿಹಾಸದ ಶೋಧದಲ್ಲಿ ತುಂಬ ಕಡಿಮೆ ಸ್ಥಳವನ್ನು ಪಡೆದಿದೆ. ಪರೋಕ್ಷವಾಗಿಯಾದರೂ ಈ ವಿಷಯದ ಬಗ್ಗೆ ಮಾತನಾಡಿರುವ ಪ್ರತಿಯೊಬ್ಬ ವಿದ್ವಾಂಸರೂ ನವಯುಗ ಪೂರ್ವ ಕರ್ನಾಟಕದಲ್ಲಿ ಮಹಿಳೆಯ ಸ್ಥಾನಮಾನವನ್ನು ವೈಭವೀಕರಿಸಿಯೇ ಚಿತ್ರಿಸಿದ್ದಾರೆ. ಒಬ್ಬರಾದ ನಂತರ ಒಬ್ಬರು ವಿದ್ವಾಂಸರು ಇದೇ ವಾದವನ್ನು ಒಂದೇ ರೀತಿಯಲ್ಲಿ ಮಂಡಿಸಿರುವುದು, ಚಿಕಿತ್ಸಕ ದೃಷ್ಟಿಯ ಓದುಗನಿಗೆ ಈ ಯೋಚನಾ ಲಹರಿಯಲ್ಲಿಯೇ ಏನೋ ಒಂದು ದೋಷವಿರಬೇಕೆಂಬ ಅನುಮಾನ ಮೂಡಿಸುತ್ತದೆ. ಬಹಳ ಸಲ, ಸಮಾಜದಲ್ಲಿ ಮಹಿಳೆಯ ಸ್ಥಾನವನ್ನಳೆಯಲು ಅಲ್ಲೊಂದಿಲ್ಲೊಂದು ರಾಣಿ ಅಥವಾ ನರ್ತಕಿಯ ಉದಾಹರಣೆಯನ್ನು ಬಳಸಲಾಗುತ್ತದೆ. ಆದರೆ, ಒಬ್ಬ ಅಕ್ಕಾದೇವಿ (ಅಕ್ಕಮಹಾದೇವಿ?) ಅಥವಾ ಲಕ್ಷ್ಮಿದೇವಿಯ ಉದಾಹರಣೆಯೊಂದಿಗೆ ಸಾಮಾಜಿಕ ಗತಿಯನ್ನು ಗುರುತಿಸಲು ಅಥವಾ ಐತಿಹಾಸಿಕ ಸತ್ಯಗಳನ್ನು ಸಮರ್ಥಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ನೆನಪಿರಬೇಕು.

ಶೃಂಗೇರಿ ಧರ್ಮಸ್ಥಾನದಲ್ಲಿರುವ ದಾಖಲೆಗಳಲ್ಲಿ ಮಹಿಳೆಯ ಸ್ಥಾನಮಾನದ ಬಗ್ಗೆಯಿರುವ ಮಾಹಿತಿಯನ್ನು ಗಮನಿಸಿದಾಗ ಅಘಾತವಾಗುತ್ತದೆ. ಶೃಂಗೇರಿ ಮಠದ ಕಡತಗಳು ಅನಾಥ ಮಹಿಳೆ, ಬಡ – ಅಸಹಾಯಕ ಮಹಿಳೆ, ಜಾರಿದ ನೀತಿಗೆಟ್ಟ ಮಹಿಳೆಯರ ಅಸ್ತಿತ್ವದ ಬಗ್ಗೆ ಮಾತನಾಡುತ್ತದೆ. ಮನುಷ್ಯನ ಆಧ್ಯಾತ್ಮಿಕ ಅವಶ್ಯಕತೆಗಳ ಬಗ್ಗೆ ಕಾಳಜಿ ವಹಿಸುವ ಧರ್ಮಸಂಸ್ಥಾನದೊಳಗೆ ಇಷ್ಟೊಂದು ವಿಭಾಗದ ಮಹಿಳೆಯರು ಹೆಚ್ಚಿನ ಸಂಖೈಯಲ್ಲಿರುವುದೇ ಅಚ್ಚರಿ, ಮಠಕ್ಕೆ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಮತ್ತು ಅವರನ್ನು ಇನ್ನಿತರೆ ವಸ್ತುಗಳಂತೆ ಮಾರಿಬಿಡುವ ಹಕ್ಕಿತ್ತು ಎನ್ನುವುದು ಮತ್ತಷ್ಟು ವಿಚಲಿತರನ್ನಾಗಿ ಮಾಡುತ್ತದೆ. ಕಡತಗಳ ಪ್ರಕಾರ, ಇಂತಹ ಮಹಿಳೆಯರು ತಾವಾಗಿಯೇ ಚಾವಡಿಗೆ (ಹಳ್ಳಿಯ ನ್ಯಾಯಕಟ್ಟೆ) ಬರಬೇಕಿತ್ತು ಅಥವಾ ಬೇರೆಯವರು ಅವರನ್ನು ಎಳೆತರಬಹುದಿತ್ತು. ನಂತರ ಅವರ ಬಗ್ಗೆ ಮಠ ‘ಕಾಳಜಿ’ ತೆಗೆದುಕೊಳ್ಳುತ್ತಿತ್ತು.

ನಂತರ ಆ ಮಹಿಳೆಯರಿಂದ ಮಠದ ಚಾಕರಿ ಮಾಡಿಸುವುದು ಸಾಮಾನ್ಯ ಕ್ರಮವಾಗಿತ್ತು. ಕೆಲವೊಮ್ಮೆ ಈ ಮಹಿಳೆಯರನ್ನು ಇತರೆ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿದೆ, ಬಹುಶಃ ಅವರೂ ಕೂಡ ಈ ಮಹಿಳೆಯರಿಗೆ ಕೈತೋಟದಲ್ಲಿ ಕೆಲಸಕ್ಕೆ ಹಚ್ಚುತ್ತಿದ್ದರು. 1818ರಲ್ಲಿ, ಶೃಂಗೇರಿ ಮಠದ ಪಾರುಪತ್ತೇಗಾರರಾದ ವೆಂಕಟಾಚಲ ಶಾಸ್ತ್ರಿ ವಿಧವೆ ಮಂಜು ಎನ್ನುವವರನ್ನು ಮೂರು ವರಹಗಳಿಗೆ ಅಹೋಬಲ ಸೋಮಯಾಜಿ ಎನ್ನುವವರಿಗೆ ಮಾರಾಟ ಮಾಡಿದ್ದರ ಬಗ್ಗೆ ದಾಖಲೆಗಳಾಧಾರವಿದೆ.

ಮೈಸೂರಿನ ರಾಜ ಕೃಷ್ಣರಾಜ ಒಡೆಯರ್ 1826 – 27ರಲ್ಲಿ ಮಹಿಳೆಯರನ್ನು ವಶಪಡಿಸಿಕೊಂಡು ಮಾರಾಟ ಮಾಡುವುದರಲ್ಲಿ ಭಾಗಿಯಾದ. ಎಲ್ಲಾ ಅಮಲ್ದಾರರು ಮತ್ತು ಕಿಲ್ಲೇದಾರರಿಗೆ ಭಕ್ತರ ಕುಟುಂಬದಲ್ಲಿ ‘ಜಾರಿದ’/ ಸೋತ ಹೆಣ್ಣುಮಕ್ಕಳನ್ನು ಮಠಕ್ಕೆ ಒಪ್ಪಿಸಬೇಕೆಂದು ರಾಜನು ಆದೇಶ ಹೊರಡಿಸುತ್ತಾನೆ! ಬದಲಿಗೆ, ಮಠ ‘ಜಾರಿದ’ ಹೆಣ್ಣುಮಕ್ಕಳನ್ನು ತನಗೊಪ್ಪಿಸಿದ ಅಮಲ್ದಾರರು ಮತ್ತು ಕಿಲ್ಲೇದಾರರಿಗೆ ರಸೀದಿಗಳನ್ನು ಕೊಡುವ ಇಚ್ಛೆ ವ್ಯಕ್ತಪಡಿಸುತ್ತದೆ. ಈ ಮಹಿಳೆಯರ ಮನಪರಿವರ್ತನೆ ಮಾಡುವುದರಲ್ಲಿ ಮಠ ಆಸಕ್ತವಾಗಿದೆಯೆಂದು ಹೇಳಲಾಗುತ್ತದೆ. ಇರಲಿ, ನಂಬದವರ ಮನಸ್ಸಿನಲ್ಲಿ ಒಂದು ಅನುಮಾನ ಉಳಿದುಬಿಡುತ್ತದೆ. ಯಾಕೆ ಮಹಿಳೆಯನ್ನಷ್ಟೇ ‘ಜಾರಿದ’ವರೆಂದು ಪರಿಗಣಿಸಬೇಕು? ‘ಜಾರಿದ’ ಗಂಡಸರ ಗತಿಯೇನು? ಅವರನ್ನೂ ಮಠ ಪರಿವರ್ತಿಸಬೇಕಿತ್ತಲ್ಲವೇ? ಅವರನ್ನೂ ಪರಿವರ್ತನೆಯ ಹೆಸರಿನಲ್ಲಿ ವರ್ತಕರಿಗೆ ನಿಗದಿತ ಬೆಲೆಗೆ ಮಾರಾಟಬೇಕಿತ್ತಲ್ಲವೇ?

1834ರಲ್ಲಿ ಬ್ರಿಟೀಷ್ ಕಮಿಷನರ್ರಿನ ಕೈಕೆಳಗೆ ಕಾರ್ಯನಿರ್ವಹಿಸುತ್ತಿದ್ದ ನಗರದ ಫೌಜುದಾರ ತಿಮ್ಮಪ್ಪ ರಾವ್ ‘ಜಾರಿದ’ ಮಹಿಳೆಯರ ಚಲನವಲನಗಳ ಮೇಲೆ ಕಣ್ಣಿಡಬೇಕೆಂದು ತನ್ನ ಕೈಕೆಳಗಿನ ಅಮಲ್ದಾರರು ಮತ್ತು ಕಿಲ್ಲೇದಾರರಿಗೆ ಸುತ್ತೋಲೆ ಕಳುಹಿಸುತ್ತಾನೆ. ಇಲ್ಲಿ ಲಭ್ಯವಿರುವ ದಾಖಲೆಗಳು ಯಾವ ಯಾವ ಕಾರಣಕ್ಕೆ ಮಹಿಳೆಯನ್ನು ‘ಜಾರಿಣಿ’ ಎಂದು ಕರೆಯಬಹುದು ಎನ್ನುವುದಕ್ಕೆ ಆಸಕ್ತಿಕರ ವಿಷಯಗಳನ್ನು ತಿಳಿಸುತ್ತದೆ. ಬಹಳಷ್ಟು ಸಲ ನೈತಿಕತೆಯನ್ನು ಮರೆತದ್ದಾಗಲೀ, ಪರಿಶುದ್ಧತೆಯನ್ನು ಕಳೆದುಕೊಂಡದ್ದಾಗಲೀ ಮಹಿಳೆಯರನ್ನು ಮಠದ ದೈವದತ್ತ ಕೈಗಳ ವಶಕ್ಕೆ ಕೊಡುವುದಕ್ಕೆ ಕಾರಣವಾಗುತ್ತಿರಲಿಲ್ಲ. ಬದಲಿಗೆ, ಕಿಲ್ಲೇದಾರ ಅಥವಾ ಅಮಲುದಾರರಿಗೆ ಒಂದು ಹೆಂಗಸು ತನ್ನ ಜಾತಿಯ ನಿಯಮಗಳನ್ನು ಮೀರಿದ್ದು ಕಂಡುಬಂದರೆ, ಅವಳನ್ನು ಬಲವಂತವಾಗಿ ಮಠಕ್ಕೆ ಮನಪರಿವರ್ತನೆಯ ಸಲುವಾಗಿ ಕಳುಹಿಸಿಬಿಡುತ್ತಿದ್ದರು. ಪರಿವರ್ತನೆಯ ಕ್ರಮದಲ್ಲಿ ಮೊದಲಿಗೆ ಮಠದ ಚಾಕರಿಗಳನ್ನು ಮಾಡಿಸಿದರೆ, ನಂತರ ‘ಪರಿವರ್ತಕರಾದ’ ಅಹೋಬಲ ಸೋಮಯಾಜಿ ಅಂತವರಿಗೆ ಮಾರಿಬಿಡಲಾಗುತ್ತಿತ್ತು. ಇದೆಲ್ಲವೂ 1834ರಲ್ಲಿ ಕಮಿಷನರ್ ಬ್ರಿಗ್ಸ್ ಹೊರಡಿಸಿದ ಆದೇಶಕ್ಕೆ ಅನುಗುಣವಾಗಿಯೇ ಇತ್ತು.

ಬ್ರಿಟೀಷ್ ಆಡಳಿತ ವಿಧಿಸಿದ ಒಂದೇ ಒಂದು ಶರತ್ತೆಂದರೆ ಮಹಿಳೆಯರನ್ನು ಖರೀದಿಸುವುದಕ್ಕೂ ಅಥವಾ ಮಾರುವುದಕ್ಕೂ ಮೊದಲು ಮಠ ಸರಕಾರೀ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು.

‘ಜಾರಿದ’ ಹೆಣ್ಣುಮಕ್ಕಳ ಮನಪರಿವರ್ತನೆಗಾಗಿ ಅವರನ್ನು ವಶಪಡಿಸಿಕೊಳ್ಳುವುದರಲ್ಲಿ ಶೃಂಗೇರಿ ಮಠದ ಜೊತೆಗೆ ಬೇರೆ ಮಠಗಳೂ ಇದ್ದವು ಎನ್ನುವ ಅಂಶ ಕೆಲವು ದಾಖಲೆಗಳಿಂದ ತಿಳಿಯುತ್ತದೆ. ಪಂಚಗ್ರಾಮಕ್ಕೆ ಸೇರಿದ, ತಮ್ಮ ಜಾತಿಯನ್ನು ಕಳೆದುಕೊಂಡಿದ್ದ ಮಹಿಳೆಯರನ್ನು ಬಲವಂತವಾಗಿ ಬೇರೆ ಮಠದ ಜನರು ಕರೆದುಕೊಂಡು ಹೋಗಿಬಿಡುತ್ತಿದ್ದರು. ಹಾಗಾಗಿ ಈ ಮಹಿಳೆಯರ ಮೇಲಿನ ತನ್ನ ಹಕ್ಕನ್ನು ಅಮಲ್ದಾರರು ಮತ್ತು ಇತರೆ ಅಧಿಕಾರಿ ವರ್ಗದ ಮುಂದೆ ಶೃಂಗೇರಿ ಮಠ ಪ್ರತಿಪಾದಿಸಿತು. ಧರ್ಮಸಂಸ್ಥಾನದೊಳಗೆ, ಪುರುಷ ನಿರ್ಮಿತ ಜಾತಿಯ ನೀತಿಗಳಿಂದ ದೌರ್ಜನ್ಯಕ್ಕೊಳಗಾದ ಮುಗ್ಧ ಹುಡುಗಿಯರನ್ನು ಮಾರಾಟದ ಸರಕಾಗಿ ಬದಲಿಸಬಹುದಿತ್ತು. ಅವರನ್ನು ಮಠ ತಿರಸ್ಕರಿಸಲಾಗದ ಹಕ್ಕೆಂಬಂತೆ ವಶಕ್ಕೆ ಪಡೆಯಬಹುದಿತ್ತು. ಮತ್ತು ಇತರರು ಅವರನ್ನು ಪ್ರಾಣಿಗಳಂತೆ ಕೊಂಡು ಮಾರಾಟ ಮಾಡಬಹುದಿತ್ತು.

ಮೈಸೂರಿನ ನಗರ ವಿಭಾಗದ ವರದಿಯಲ್ಲಿ ಹೆಚ್.ಸ್ಟೋಕ್ಸ್ ಬರೆಯುತ್ತಾನೆ:

‘ಶುದ್ಧತೆ ಕಳೆದುಕೊಂಡ ನೆಪದಿಂದ ವಿಧವೆಯರನ್ನು ಮಾರಾಟ ಮಾಡುವ ಪದ್ಧತಿಯನ್ನು ಸರ್ಕಾರ ರದ್ದು ಮಾಡಿದೆ, ಆದರದನ್ನು ಮಠಗಳು ಕೆಲವೊಮ್ಮೆ ಬಲವಂತದಿಂದ ಹೇರುತ್ತಿವೆ. ಎಲ್ಲೋ ಕೆಲವೊಮ್ಮೆ ಮಹಿಳೆಯರನ್ನು ಅವರ ಸಂಬಂಧಿಕರೇ ಖರೀದಿಸುತ್ತಾರೆ, ಮೂರರಿಂದ ಹನ್ನೆರಡು ಪಗೋಡಾಗಳ ಮಾಮೂಲಿ ಮೊತ್ತವನ್ನು ಕಟ್ಟಿ. ಬೇಲಿ ಅನ್ನವನ್ನು ತಿನ್ನುವ ಮಹಿಳೆಯರು ತಮ್ಮ ಕೆಳಜಾತಿಯನ್ನು ಕೆಲವು ಪಗೋಡಾಗಳಿಗೆ ಕಳೆದುಕೊಳ್ಳುತ್ತಾರೆ ಮತ್ತು ಪಗೋಡಾದಿಂದ ರಕ್ಷಣೆ ಪಡೆಯುತ್ತಾರೆ. ಅವರು ನಂತರ ಅಲ್ಲೇ ಉಳಿದು ಚಿಕ್ಕಪುಟ್ಟ ಚಾಕರಿ ಮಾಡಿಕೊಂಡಿರಬೇಕು ಅಥವಾ ಬೇರೆಡೆ ಬದುಕುವ ಇಚ್ಛೆಯಿದ್ದರೆ ವಾರ್ಷಿಕ ಇಷ್ಟೆಂದು ದುಡ್ಡು ನೀಡಬೇಕು. ಅವರಲ್ಲಿನ ಅನೇಕರು ಸೂಳೆಯರಾಗುತ್ತಾರೆ’.” (205)

ಮಹಿಳೆಯರನ್ನು ಗುಲಾಮರನ್ನಾಗಿಸುವುದು ಮಠಗಳಿಗಷ್ಟೇ ಸೀಮಿತವಾಗಿರಲಿಲ್ಲ, ಕೃಷ್ಣರಾಜ ಒಡೆಯರರ ಆಳ್ವಿಕೆಯಲ್ಲಿ ಅದು ವಾಡಿಕೆಯಂತಾಗಿ ಹೋಗಿತ್ತು. ಈ ಭಯಾನಕ ಸಂಸ್ಕೃತಿಯ ಪ್ರಾಬಲ್ಯದ ಬಗ್ಗೆ ರೈಸ್ ತಿಳಿಸುತ್ತಾರೆ:

“ಹಿಂದಿನ ಆಡಳಿತದ ಅವಧಿಯಲ್ಲಿ, ಅದರಲ್ಲೂ ಹಿಂದೂ ರಾಜರ ಆಳ್ವಿಕೆಯಲ್ಲಿ ಮಹಿಳೆಯರ ಸ್ಥಿತಿ ಮತ್ತವರನ್ನು ನೋಡಿಕೊಳ್ಳುತ್ತಿದ್ದ ರೀತಿ ಶೋಚನೀಯವಾಗಿತ್ತು. ಸತತ ಮೂದಲಿಕೆಯಲ್ಲಿ ಬದುಕುವುದು, ವಿಪರೀತದ ಅವಮಾನಗಳನ್ನೆದುರಿಸುವುದು, ಅನುಮಾನಸ್ಪದ ಮಾಹಿತಿದಾರರ ಹೀನ ಆರೋಪಗಳಿಗೆ ಬಲಿಯಾಗುವುದು, ಗುಲಾಮರಂತೆ ಮಾರುಕಟ್ಟೆಯಲ್ಲಿ ಮಾರಾಟವಾಗುವುದು, ನಂತರದಲ್ಲಿ ಸೇವಕಿಯಾಗಿ ಸುದೀರ್ಘ ಕಾಲ ನರಳುವುದು. ದೊಡ್ಡ ನಗರಗಳಲ್ಲಿ ಸರಕಾರದ ಆದಾಯದ ಮೂಲವಾಗಿದ್ದ ‘ಸಮಯಾಚಾರಿ’ನ ಲಾಭದ ಭಾಗದಲ್ಲಿ ಅಶುದ್ಧತೆಯ ಹೆಸರಿನಲ್ಲಿ ಮಹಿಳೆಯರನ್ನು ಮಾರುವುದರಿಂದ ಬರುವ ಹಣ ಅಥವಾ ಅಶುದ್ಧತೆಯ ಕಾರಣಕ್ಕೆ ವಿಧಿಸಲಾಗುವ ದಂಡದ ಹಣವಿರುತ್ತಿತ್ತು. ಅಪರಾಧ ಎಸಗಿದವರ ನೇರ ಬೆಂಬಲವನ್ನು ಪಡೆಯುವ ಸ್ಥಿತಿಯಲ್ಲಿತ್ತು ಸರಕಾರ, ಇನ್ನೂ ದುರಂತವೆಂದರೆ ಮಾಹಿತಿದಾರರ ಜೊತೆಗೆ ಸೇರಿ ಈ ಹೀನ ಲೂಟಿಯನ್ನು ಹಂಚಿಕೊಳ್ಳುತ್ತಿದ್ದರು.

ಈ ವ್ಯವಸ್ಥೆಯಲ್ಲಿನ ನೀತಿ ನಿಯಮಗಳು ಅಪಾದಿತೆಯ ಜಾತಿಯ ಆಧಾರದಲ್ಲಿ ನಿರ್ಧರಿತವಾಗುತ್ತಿದ್ದವು. ಬ್ರಾಹ್ಮಣರಲ್ಲಿ ಮತ್ತು ಕೊಮ್ಟಿಗಳಲ್ಲಿ, ಮಹಿಳೆಯರನ್ನು ಮಾರಲಾಗುತ್ತಿರಲಿಲ್ಲ ಆದರೆ ತಮ್ಮ ಜಾತಿಯಿಂದ ಹೊರಹಾಕಿಬಿಡುತ್ತಿದ್ದರು ಮತ್ತವರಿಗೆ ಸೂಳೆ ಪಟ್ಟ ಕಟ್ಟಿಬಿಡುತ್ತಿದ್ದರು; ನಂತರ ಈ ಮಹಿಳೆಯರು ಜೀವಿತಾವಧಿಯುದ್ದಕ್ಕೂ ಇಜಾರುದಾರರಿಗೆ ವರುಷಾ ವರುಷ ದುಡ್ಡು ಕಟ್ಟಬೇಕಿತ್ತು. ಮಹಿಳೆ ಸತ್ತಾಗ, ಅವಳ ಆಸ್ತಿಯೆಲ್ಲ ಇಜಾರುದಾರರ ಪಾಲಾಗುತ್ತಿತ್ತು. ಇನ್ನಿತರೆ ಹಿಂದೂ ಜಾತಿಯ ಮಹಿಳೆಯರನ್ನು ಯಾವೊಂದು ಪಶ್ಚಾತ್ತಾಪವೂ ಇಲ್ಲದೆ ಇಜಾರುದಾರರ ಮಾರಿಬಿಡುತ್ತಿದ್ದ; ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಯಾರಾದರೂ ಇಜಾರುದಾರ ಮುಂದೆ ಬಂದರೆ ಮಾರಾಟ ನಡೆಯುತ್ತಿರಲಿಲ್ಲ. ಕಳ್ಳನ ಹೆಂಡತಿ ಮತ್ತು ಕುಟುಂಬವನ್ನೂ ಬಂಧಿಸಿ ಗಂಡನ ಜೊತೆಗೆ ಜೈಲಿಗೆ ನೂಕಿಬಿಡುತ್ತಿದ್ದರು. ಅವರನ್ನು ಬಂಧಿಸಲು ಯಾವುದೇ ಕಾರಣಗಳು ಇಲ್ಲದಿದ್ದಾಗ್ಯೂ. ಈ ಮಾರಾಟಗಳು ಅಂದುಕೊಂಡಂತೆ ಕಳ್ಳತನದಲ್ಲಾಗಲೀ, ಸಾಮಾನ್ಯರ ಕಣ್ಣು ತಪ್ಪಿಸಿ ದೂರದ ಸ್ಥಳದಲ್ಲಾಗಲೀ ನಡೆಯುತ್ತಿರಲಿಲ್ಲ; ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ, ಯುರೋಪಿಯನ್ನರ ಕಣ್ಣಳತೆಯೊಳಗೆ ದೊಡ್ಡ ದೊಡ್ಡ ಕಟ್ಟಡಗಳನ್ನು ಇಂತಹ ದುರದೃಷ್ಟದ ಮಹಿಳೆಯರ ವಸತಿಗೆ ಉಪಯೋಗಿಸಿಕೊಂಡು ಅಲ್ಲೇ ಮಾರಲಾಗುತ್ತಿತ್ತು…..”(206)

ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಒಡೆಯರರ ಆಳ್ವಿಕೆಯ ಕಾಲದಲ್ಲಿದ್ದ ಸತಿ ಪದ್ಧತಿಯ ಬಗ್ಗೆ ಶಾಮ ರಾವ್ ತಿಳಿಸುತ್ತಾರೆ. ಇದರ ಬಗ್ಗೆ ಪ್ರತಿಕ್ರಯಿಸುವುದಿರಲಿ, ಪ್ರತಿಕ್ರಯಿಸುವ ಬಗ್ಗೆ ಯೋಚಿಸುವುದೂ ಯೋಗ್ಯವಲ್ಲ ಎಂದು ರಾಜ ಅಂದುಕೊಂಡಿದ್ದ. ಮುಂದುವರಿಸುತ್ತಾ ರೈಸ್ ಹೇಳುತ್ತಾನೆ: “ಮೊರಲು ವಕ್ಕಲಿಗರ ಒಂದು ವರ್ಗದಲ್ಲಿ ವಿಚಿತ್ರ ಆಚರಣೆಯೊಂದು ಚಾಲ್ತಿಯಲ್ಲಿತ್ತು; ಮಹಿಳೆಯರ ಬಲಗೈಯಲ್ಲಿನ ಉಂಗುರ ಬೆರಳು ಮತ್ತು ಕಿರುಬೆರಳನ್ನು ತೆಗೆದುಬಿಡಲಾಗುವ ಆಚರಣೆ. ದೊಡ್ಡ ಮಗಳನ್ನು ಮದುವೆಗೆ ತಯಾರಾಗಿಸಲು ಕಿವಿ ಚುಚ್ಚುವ ಮುನ್ನ ಪ್ರತಿ ಮಹಿಳೆಯೂ ಈ ಅಂಗಹೀನತೆಯ ಪ್ರಕ್ರಿಯೆಗೆ ಒಳಗಾಗಲೇಬೇಕಿತ್ತು. ಹಳ್ಳಿಯ ಅಕ್ಕಸಾಲಿಗ ಈ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಒರಟೊರಟಾಗಿ ಮಾಡಿಬಿಡುತ್ತಿದ್ದ, ನಿರ್ದಿಷ್ಟ ಮೊತ್ತವನ್ನು ಕಟ್ಟಿಸಿಕೊಂಡು. ತೆಗೆಯಲಾಗುವ ಬೆರಳನ್ನು ಕಲ್ಲಿನ ಮೇಲಿರಿಸಿ, ಅಕ್ಕಸಾಲಿಗ ಉಳಿಯನ್ನು ಕೀಲಿನ ಮೇಲಿಟ್ಟು ಒಂದೇ ಹೊಡೆತಕ್ಕೆ ಬೆರಳನ್ನು ಬೇರೆ ಮಾಡಿಬಿಡುತ್ತಿದ್ದ. ಮದುವೆಗೆ ಸಿದ್ಧವಾಗಿರುವ ಹುಡುಗಿಗೆ ಅಮ್ಮನಿಲ್ಲದಿದ್ದರೆ, ಆಕೆಯೇ ಈ ತ್ಯಾಗಕ್ಕೆ ಸಿದ್ಧವಾಗಬೇಕಾಗುತ್ತಿತ್ತು.” (207) ಇಂತಹ ಪದ್ಧತಿಗಳನ್ನು ವಿರೋಧಿಸುವುದನ್ನು ಬಿಟ್ಟು, ಸರಕಾರ ಮೌನವಾಗುಳಿದಿತ್ತು ಅಥವಾ ತನ್ನ ಬೆಂಬಲವನ್ನು ನೀಡಿ ಮಹಿಳೆಯರ ಜೀವನವನ್ನು ಬರ್ಬರವನ್ನಾಗಿಸಿತ್ತು.

ಪುರುಷ ಪ್ರಧಾನ ಸಮಾಜ ಊಳಿಗಮಾನ್ಯತೆಯ ಕೈಕೆಳಗೆ ಅನೇಕ ಕುರೂಪಗಳನ್ನು ಪಡೆದುಕೊಂಡಿತು. ಊಳಿಗಮಾನ್ಯತೆಯ ಪೌರುಷತ್ವ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲೂ ಸಶಕ್ತವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾದರೂ, ಇಂತಹ ಅಮಾನವೀಯ ಪದ್ಧತಿಗಳಲ್ಲಿ ಕೆಲವನ್ನಾದರೂ ತಡೆಯಲು ನಡೆದಂತಹ ಪ್ರಯತ್ನಗಳನ್ನು ಗಮನಿಸಬಹುದು. ಕನ್ಯೆಯರನ್ನು ಬಲಿಕೊಡುವುದನ್ನು ನಿಷೇಧಿಸಲಾಯಿತು, ಸೂಳೆಗಾರಿಕೆಯನ್ನು ಬಹಿಷ್ಕರಿಸಲಾಯಿತು ಮತ್ತು ವಯನಾಡು ಹಾಗೂ ಮಲಬಾರಿನಲ್ಲಿ ಮೊಲೆ ತೋರಿಸಿಕೊಂಡೇ ಓಡಾಡಬೇಕಿದ್ದ ಮಹಿಳೆಯರಿಗೆ ಬಟ್ಟೆ ಹಾಕಿಕೊಳ್ಳಲು ಸೂಚಿಸಲಾಯಿತು. ಆದರೆ ವಸಾಹತಿನ ಮೇಲುಗೈ ಈ ಪ್ರಗತಿಪರತೆಯನ್ನು ತಡೆಹಿಡಿಯಿತು ಮತ್ತು ಬ್ರಾಹ್ಮಣ ಧಾರ್ಮಿಕ ಸಂಸ್ಥೆಗಳು ಹಾಗೂ ಪ್ರತಿಗಾಮಿ ಊಳಿಗಮಾನ್ಯತೆಯ ಆಸಕ್ತಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದಕ್ಕೆ ನೆರವಾಯಿತು. ಕರ್ನಾಟಕ ವಸಾಹತು ಆಳ್ವಿಕೆಗೆ ಒಳಪಟ್ಟಿದ್ದರಿಂದ ಉಂಟಾದ ಪರಿಣಾಮಗಳಲ್ಲಿ ಪುರುಷ ಸಮಾಜ ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯದ ಹೆಚ್ಚಳವೂ ಒಂದು ಎಂದರದು ತಪ್ಪಾಗಲಾರದು.

ಮುಂದಿನ ವಾರ:
ಸಾಮಾಜಿಕ ಕುಸಿತ ಮತ್ತು ಅರೆಊಳಿಗಮಾನ್ಯ – ವಸಾಯತು ಆಳ್ವಿಕೆಯಲ್ಲಿನ ಬಿಕ್ಕಟ್ಟು

No comments:

Post a Comment