Apr 22, 2016

ಮೇಕಿಂಗ್ ಹಿಸ್ಟರಿ: ಕೃಷಿಗೆ ಲಕ್ವ ಹೊಡೆದದ್ದು ಭಾಗ 2

ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
22/04/2016


ಇ. ಮರುಕಳಿಸಿದ ಊಳಿಗಮಾನ್ಯತೆ

ವಸಾಹತುಶಾಹಿ ಪಿತೃವಾತ್ಸಲ್ಯದಿಂದ ಊಳಿಗಮಾನ್ಯತೆಯನ್ನು ರಕ್ಷಿಸಿದ ಬಗೆಯನ್ನು ನಾವು ನೋಡಿದ್ದೇವೆ. ಇದರ ಪರಿಣಾಮವಾಗಿ ಮುಳುಗುವ ಹಂತದಲ್ಲಿದ್ದ ಈ ಪ್ರತಿಗಾಮಿ ವ್ಯವಸ್ಥೆ ಒಟ್ಟಾಯಿತು, ಬಲಗೊಂಡಿತು. ಇರಲಿ, ವಸಾಹತು – ಊಳಿಗಮಾನ್ಯ ಮೈತ್ರಿಯ ಮೊದಲರ್ಧ ಶತಮಾನ ಐತಿಹಾಸಿಕ ಚಳುವಳಿ ಹಿಮ್ಮುಖವಾಗಿ ಚಲಿಸುವಂತೆ ಮಾಡಿತು. ಅಸ್ತಿತ್ವದಲ್ಲಿದ್ದ ಊಳಿಗಮಾನ್ಯತೆಯನ್ನೇ ಹೊಸದಾಗಿ ಕಟ್ಟುವ ಪ್ರಕ್ರಿಯೆಯೂ ಚಾಲ್ತಿಯಲ್ಲಿತ್ತು. ವಸಾಹತುಶಾಹಿಗೆ ಕರ್ನಾಟಕದ ಸಾಮಾಜಿಕ ರಚನೆ ಕೊಟ್ಟ ತತ್ ಕ್ಷಣದ ಪ್ರತಿಕ್ರಿಯೆಯಿದು. ಈ ಐತಿಹಾಸಿಕ ಪ್ರಕ್ರಿಯೆಗೆ ಎರಡು ಅಂಶಗಳು ಕಾರಣವಾದವು. ಪ್ರಜ್ಞಾಪೂರ್ವಕ ಉದ್ದೇಶದ ಪರಿಣಾಮ ಮೊದಲಂಶವಾದರೆ ನಮ್ಮ ನಾಡಿನಲ್ಲಿ ವಸಾಹತು ವ್ಯವಸ್ಥೆಯನ್ನು ನೆಟ್ಟು ಬೆಳೆಸಿದ ಪರಿಣಾಮ ಎರಡನೇ ಅಂಶ. ಮೊದಲ ಅಂಶದಲ್ಲಿ, ಕೈಗೊಂಬೆ ಊಳಿಗಮಾನ್ಯತೆ ವಸಾಹತುಶಾಹಿಯ ನಂಬುಗೆಯನ್ನು ತನ್ನನುಕೂಲಕ್ಕೆ ಬಳಸಿಕೊಂಡಿತು. ಈ ಹಿಮ್ಮುಖದ ಚಳುವಳಿ ವಸಾಹತು ಆಕ್ರಮಣದ ಮೊದಲ ಮೂರು ದಶಕಗಳಿಗೂ ವ್ಯಾಪಿಸಿತು. ಎರಡನೇ ಅಂಶದಲ್ಲಿ ಬ್ರಿಟೀಷರು ವಸಾಹತು ಪೂರ್ವ ಸಂಸ್ಥೆಗಳನ್ನೆಲ್ಲಾ ಬುಡಮೇಲು ಮಾಡಿದ್ದರಿಂದ ಅನಿರೀಕ್ಷಿತವಾಗಿ ನಿರುದ್ಯೋಗಿಗಳ ದೊಡ್ಡ ಸಮುದಾಯವೊಂದರ ಸೃಷ್ಟಿಯಾಯಿತು. ಈ ನಿರುದ್ಯೋಗಿಗಳಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇದ್ದ ಒಂದೇ ಒಂದು ದಾರಿಯೆಂದರೆ ಹಳ್ಳಿಗಳಿಗೆ ವಲಸೆ ಹೋಗಿ ಕೃಷಿ ಚಟುವಟಿಕೆಯ ಭಾಗವಾಗುವುದು. ಇದರಿಂದ ಆರ್ಥಿಕತೆಯಲ್ಲಿ ಊಳಿಗಮಾನ್ಯತೆ ಮತ್ತಷ್ಟು ಬಲಶಾಲಿಯಾಯಿತು. ಈ ಚಲನೆಯನ್ನು ಹದಿನೆಂಟನೇ ಶತಮಾನದ ದ್ವಿತೀಯಾರ್ಧದಲ್ಲೂ ಕಾಣಬಹುದು. ವಸಾಹತು – ಊಳಿಗಮಾನ್ಯತೆಯ ಬಂಧ ಮುಂದೆ ಚಲಿಸುತ್ತಿದ್ದ ಸಮಾಜದ ಚಲನೆಗೆ ಅಡ್ಡಿಯಾಗುವುದರ ಜೊತೆಗೆ ತಾತ್ಕಾಲಿಕವಾದ ಹಿಮ್ಮುಖ ಚಲನೆಗೂ ಕಾರಣವಾಯಿತು.

ಮೊದಲ ಏಳು ವರ್ಷ ಬ್ರಿಟೀಷರು ಜಾತಿಯಿಂದ ಬ್ರಾಹ್ಮಣನಾದ ಪೂರ್ಣಯ್ಯನ ಸೇವೆಯನ್ನು ಖರೀದಿಸಿದರು. ಪೂರ್ಣಯ್ಯ ಟಿಪ್ಪುವಿನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ. ಪೂರ್ಣಯ್ಯನಿಗೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಇದ್ದ ಸಂಪೂರ್ಣ ಜ್ಞಾನ ಮತ್ತು ಮುಖ್ಯವಾಗಿ ಮೈಸೂರಿನ ತೆರಿಗೆ ಆಡಳಿತದ ಬಗ್ಗೆ ಇದ್ದ ತಿಳಿವು ಬ್ರಿಟೀಷರಾತನನ್ನು ನೇಮಿಸಿಕೊಳ್ಳಲು ಕಾರಣವಾಯಿತು. ಮೊಲದ ಜೊತೆಗೋಡುತ್ತಲೇ ಬೇಟೆನಾಯಿಯೊಡಗೂಡಿ ಬೇಟೆಯಲ್ಲಿ ತೊಡಗಿಸಿಕೊಂಡಂತಿದ್ದರು ಪೂರ್ಣಯ್ಯ. ಬ್ರಿಟೀಷರು ಶ್ರೀರಂಗಪಟ್ಟಣದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪೂರ್ಣಯ್ಯ ಬ್ರಿಟೀಷರಿಗೆ ಪ್ರೋತ್ಸಾಹ ನೀಡಿದರು ಎಂಬ ‘ಜನಪ್ರಿಯ’ ನಂಬಿಕೆಯೂ ಇದೆ. ಈ ಮೋಸದ ಕೆಲಸಕ್ಕೆ ಪೂರ್ಣಯ್ಯನವರಿಗೆ ಚೆಂದದ ಮರ್ಯಾದೆಯನ್ನೇ ಮಾಡಲಾಯಿತು. ಅವರ ವಾರ್ಷಿಕ ಆದಾಯ 18,000 ರುಪಾಯಿಗಳೆಂದು ನಿಗದಿಪಡಿಸಲಾಗಿತ್ತು. ಸಾಮ್ರಾಜ್ಯಕ್ಕೆ ಬರುವ ಒಟ್ಟು ಆದಾಯದಲ್ಲಿ ಒಂದು ಪರ್ಸೆಂಟನ್ನು ಕೂಡ ಅವರಿಗೆ ನೀಡಲಾಗುತ್ತಿತ್ತು. ಇದು ವಾರ್ಷಿಕವಾಗಿ 62,000 ರುಪಾಯಿಗಳಷ್ಟಾಗುತ್ತಿತ್ತು. (121)

1807ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಸಾಮ್ಯಾಜ್ಯದ ಜವಾಬ್ದಾರಿಗಳನ್ನು ವಹಿಸಿಕೊಂಡಾಗ ಪೂರ್ಣಯ್ಯನವರು ನಿವೃತ್ತರಾದರು. ನಿವೃತ್ತರಾಗುವುದಕ್ಕೂ ಮೂರು ವರುಷಗಳ ಹಿಂದೆ ಪೂರ್ಣಯ್ಯನವರ ಮೇಲೆ ಬ್ರಿಟೀಷರು ಹೊಗಳಿಕೆಯ ಸುರಿಮಳೆಯನ್ನೇ ಸುರಿದರು; ಸಾಮ್ರಾಜ್ಯದ ಆಗುಹೋಗುಗಳನ್ನು ಅಚ್ಚುಕಟ್ಟಾಗಿ ತಮ್ಮ ಆಸಕ್ತಿಯಂತೆ ನಡೆಸಿಕೊಂಡು ಹೋಗಿದ್ದಕ್ಕೆ ಮತ್ತದಕ್ಕಿಂತ ಹೆಚ್ಚಾಗಿ ಅತ್ಯುತ್ಸಾಹದಿಂದ ಜನರ – ಮಧ್ಯವರ್ತಿ ಊಳಿಗಮಾನ್ಯತೆಯ ಪ್ರಮುಖ ಆದಾಯ ಮೂಲವಾದ - ರೈತರ ಬಳಿ ಹಣವನ್ನೀರಿ ತಮಗೆ ಕೊಟ್ಟಿದ್ದಕ್ಕೆ. ಪೂರ್ಣಯ್ಯ ದಿವಾನರ ಕಛೇರಿಯನ್ನು ವಂಶಪಾರಂಪರ್ಯ ಆಸ್ತಿಯನ್ನಾಗಿ ಮಾಡಬೇಕೆಂದು ಆಸೆ ವ್ಯಕ್ತಪಡಿಸಿದಾಗ ಅದನ್ನು ಬ್ರಿಟೀಷರು ನಯವಾಗಿಯೇ ತಿರಸ್ಕರಿಸಿದರು. ಆದರೂ ಪೂರ್ಣಯ್ಯನ ನಿಷ್ಠೆಗೆ ಸೋತು ತನಗಿಷ್ಟವಾದ, ಸಾಮ್ಯಾಜ್ಯದ ಯಾವುದಾದರೂ ತಾಲ್ಲೂಕನ್ನು ಜಾಗೀರಾಗಿ ಪಡೆದುಕೊಳ್ಳಬಹುದು, ಮತ್ತದು ಅವರ ವಂಶದಲ್ಲೇ ಉಳಿಯುತ್ತದೆ ಎಂದು ತಿಳಿಸಿದ್ದರು. (122) ಪೂರ್ಣಯ್ಯ ಯಳಂದೂರನ್ನು ಆಯ್ದುಕೊಂಡದ್ದರ ಕುರಿತು ಪೂರ್ಣಯ್ಯನಿಂದ ಉಪಕೃತರಾದ ನರಸಿಂಹ ಮೂರ್ತಿ ಬರೆಯುತ್ತಾರೆ: “ಪೂರ್ಣಯ್ಯನವರು ತಮ್ಮ ಜಾಗೀರಿಗೆ ಆಯ್ದುಕೊಂಡ ಯಳಂದೂರು ತಾಲ್ಲೂಕು ಚಿಕ್ಕದಾದರೂ ಸಂಪನ್ಮೂಲಭರಿತವಾಗಿದೆ. ಮೈಸೂರಿನಲ್ಲಿ ಅತಿ ದಟ್ಟ ಜನಸಂದಣಿಯಿರುವ ಮತ್ತು ಅತ್ಯಂತ ಫಲವತ್ತಾದ ತಾಲ್ಲೂಕಿನಲ್ಲೊಂದಾಗಿದೆ.….. ಬೆಟ್ಟದ ಮೇಲಿರುವ ಕಾಡುಗಳಲ್ಲಿ ಹೊನ್ನೆ, ಶ್ರೀಗಂಧ, ತೇಗ ಮತ್ತು ಇತರೆ ಅತ್ಯಮೂಲ್ಯ ಮರಗಳು ಹೇರಳ ಸಂಖೈಯಲ್ಲಿವೆ, ಇವೆಲ್ಲವೂ ಜಾಗೀರಿಗೆ ಆದಾಯ ತಂದು ಕೊಡುವ ಮೂಲಗಳು. ತಾಲ್ಲೂಕಿನ ಹೆಚ್ಚಿನ ಭಾಗದಲ್ಲಿ ಸಮತಟ್ಟಾದ ಭೂಮಿಯಿದೆ. ಸುವರ್ಣಾವತಿ ನದಿ ಇಲ್ಲಿ ಹಾದು ಹೋಗುತ್ತದೆ, ಇಲ್ಲಿನ ನೀರಾವರಿಗೆ ಇದೇ ಮೂಲ ನದಿ. ಇಲ್ಲಿನ ಫಲವತ್ತಾದ ಭೂಮಿ ವೀಳ್ಯದೆಲೆ, ಅಡಿಕೆ ಮತ್ತು ತೆಂಗಿನ ತೋಟಗಳನ್ನು ಮಾಡಲು ಹೇಳಿಮಾಡಿಸಿದಂತಿದೆ. ನೇರಳೆ ಹಣ್ಣನ್ನಿಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತದೆ ಮತ್ತು ಭಾರೀ ಪ್ರಮಾಣದಲ್ಲಿ ರೇಷ್ಮೆಯನ್ನು ಉತ್ಪಾದಿಸಲಾಗುತ್ತದೆ.” (123) ತಾಲ್ಲೂಕಿನ ವಾರ್ಷಿಕ ತೆರಿಗೆಯ ಆದಾಯ 30,000 ರುಪಾಯಿಗಳಷ್ಟಿತ್ತು. ಆದರೆ ಅಂಟಿಕೊಂಡಿದ್ದ ಕಾಡಿನ ಅತ್ಯಮೂಲ್ಯ ಸಂಪತ್ತು ಜಾಗೀರುದಾರರ ಆದಾಯಕ್ಕಿಂತಲೂ ಹೆಚ್ಚಿನ ಆದಾಯವನ್ನು ತರಬಲ್ಲುದಾಗಿತ್ತು. (124)

1807ರ ಡಿಸೆಂಬರಿನಲ್ಲಿ ರಾಜನ ಪರವಾಗಿ ರೆಸೆಡೆಂಟ್ ಜಾನ್ ಮಾಲ್ಕಮ್ ಹೊರಡಿಸಿದ ಸನ್ನದಿನಲ್ಲಿ ಈ ರೀತಿ ಇತ್ತು: “…… ನಮ್ಮ ಆಸೆಗಳನ್ನು ಪೂರೈಸುವ ಸಲುವಾಗಿ, ಸಕಲ ಅಧಿಕಾರವೊಂದಿದ ಮಂತ್ರಿಯೊಬ್ಬನನ್ನು ನೇಮಿಸುವುದು ಅನಿವಾರ್ಯವಾಗಿತ್ತು. ಈ ಮಂತ್ರಿಯ ಪ್ರಾಮಾಣಿಕತೆ ಮತ್ತು ಅಧಿಕಾರ ನಡೆಸುವ ಸಾಮರ್ಥ್ಯದ ಮೇಲೆ ನಂಬುಗೆ ಇಡಬೇಕಿತ್ತು. ಗೌರವಾನ್ವಿತ ಪೂರ್ಣಯ್ಯನವರ ನೇರವಂತಿಕೆ, ಸಚ್ಚಾರಿತ್ಯ ಮತ್ತು ಪ್ರಾಮಾಣಿಕತೆಯನ್ನು ಗಮನಿಸಿದ್ದೇವೆ. ಅವರ ಸಾಮರ್ಥ್ಯ ಮತ್ತು ವ್ಯವಹಾರಿಕತೆ ಸಾಬೀತಾಗಿದೆ. ಆದ್ದರಿಂದ ನಂಬಿಕೆಯ ಮತ್ತು ಗೌರವಾನ್ವಿತ ಹುದ್ದೆಯಾದ ಮಂತ್ರಿ ಪದವಿಯನ್ನು ಮೇಲೆ ತಿಳಿಸಿದ ಗೌರವಾನ್ವಿತರಿಗೆ ನೀಡುತ್ತಿದ್ದೇವೆ. (ಹುದ್ದೆಯ ಘನತೆ ಈಗ ದ್ವಿಗುಣಗೊಂಡಿದೆ) ಮತ್ತು ಅವರು ತಮ್ಮ ಕರ್ತವ್ಯದಲ್ಲಿ ತೋರಿದ ನೇರವಂತಿಕೆ, ಪ್ರಾಮಾಣಿಕತೆ ಮತ್ತು ಸ್ವಾಮಿಭಕ್ತಿ ಮತ್ತು ಇಂಗ್ಲೀಷ್ ಕಂಪನಿ ಸರಕಾರಕ್ಕೆ ಅವರು ತೋರಿದ ನಿಷ್ಠೆಗಳೆಲ್ಲವೂ ಅವರಿಗೆ ಈ ಪದವಿ ಸಿಕ್ಕಿರುವುದಕ್ಕಿರುವ ಕಾರಣಗಳು.

ಈ ಗೌರವಾನ್ವಿತ ವ್ಯಕ್ತಿ ನಮಗೆ ನೀಡಿದ ಸೇವೆಗಳು ಮತ್ತು ಮಾಡಿದ ಕೆಲಸಗಳು ಕಾಲದ ಪುಟಗಳಿಂದ ಅಳಿಸಿಹೋಗಬಾರದು ಮತ್ತು ಈ ಗೌರವಾನ್ವಿತ ವ್ಯಕ್ತಿಯ ಮಕ್ಕಳು ಸರ್ವಕಾಲಕ್ಕೂ ಆರಾಮವಾಗಿ, ಸುಲಭದಿಂದ ಬದುಕಲು ಸಾಧ್ಯವಾಗಬೇಕು. ಹಾಗಾಗಿ ಬ್ರಿಟೀಷ್ ಸರಕಾರದ ಸಲಹೆ ಮತ್ತು ಒಪ್ಪಿಗೆಯ ಮೇರೆಗೆ ನಾವು ಯಳಂದೂರು ತಾಲ್ಲೂಕನ್ನು ಮೇಲೆ ಹೆಸರಿಸಿದ ಗೌರವಾನ್ವಿತ ವ್ಯಕ್ತಿಯ ವಂಶಕ್ಕೆ ಇನಾಂ ಆಗಿ ನೀಡುತ್ತಿದ್ದೇವೆ. ಜಗತ್ತು ಬೆಳಗುವ ಸೂರ್ಯ ಚಂದ್ರರಿರುವರೆಗೂ ಈ ಇನಾಂ ಅವರದಾಗಿರುತ್ತದೆ.

ಯಳಂದೂರನ್ನು ಮೈಸೂರಿನ ದಿವಾನರಾದ ಪೂರ್ಣಯ್ಯನವರಿಗೆ ಮೈಸೂರಿನ ರಾಜ ಜಾಗೀರಾಗಿ ನೀಡಿರುತ್ತಾರೆ, ಬ್ರಿಟೀಷ್ ಸರಕಾರದ ಶಿಫಾರಸ್ಸಿನ ಮೇರೆಗೆ. ಪೂರ್ಣಯ್ಯನವರ ನಿಷ್ಠಾವಂತ ಸೇವೆಗೆ ಪ್ರತಿಯಾಗಿ ಈ ಜಾಗೀರು ನೀಡಲು ಮೈಸೂರಿನಲ್ಲಿ ಬ್ರಿಟೀಷ್ ರೆಸೆಡೆಂಟಾದ ನಾನು ಪೂರ್ಣ ಸಮ್ಮತಿಯೊಂದಿಗೆ ಅನುಮೋದಿಸುತ್ತ ಈ ಒಪ್ಪಂದಕ್ಕೆ ಸಹಿ ಹಾಕಿ ನನ್ನ ಹೆಸರು ಬರೆದಿರುತ್ತೇನೆ.” (125)

ನಿವೃತ್ತರಾಗುವ ಸಮಯದಲ್ಲಿ ಪೂರ್ಣಯನವರು ಸರಕಾರಕ್ಕೆ 14,15,729 ಕಂತಾರೇಯ ಪಗೋಡಾಗಳನ್ನು ಪಾವತಿಸಬೇಕಾಗಿತ್ತು (1 ಕಂತಾರೇಯ ಪಗೋಡ = 2.86 ರುಪಾಯಿ). ಈ ಮೊತ್ತವನ್ನು ಕಟ್ಟುವಂತೆ ಪೂರ್ಣಯ್ಯನವರಿಗೆ ಕೇಳಿದಾಗ, 6,69,750 ಕಂತಾರೇಯ ಪಗೋಡಾಗಳನ್ನು ಹಣದ ರೂಪದಲ್ಲಿ ನೀಡಿ, ಅವನ ನೆಂಟರು ಟ್ರೆಷರಿಯಿಂದ ಕದ್ದಿದ್ದ 1,14,00 ಕಂತಾರೇಯ ಪಗೋಡಾಗಳಷ್ಟು ಬೆಲೆ ಬಾಳುತ್ತಿದ್ದ ಒಡವೆಗಳನ್ನು ಹಿಂದಿರುಗಿಸಿದರು. ಉಳಿಕೆ 6,31,978 ಕಂತಾರೇಯ ಪಗೋಡಾಗಳನ್ನು ಕಟ್ಟಲು ನಿರಾಕರಿಸಿದರು. (126) ಮೈಸೂರು ಸಾಮ್ರಾಜ್ಯ ಬ್ರಿಟೀಷರಿಗೆ ವಾರ್ಷಿಕವಾಗಿ ಕೊಡುತ್ತಿದ್ದ ಹಣದಷ್ಟು ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದ ಪೂರ್ಣಯ್ಯ, ಹಣ ಕೊಡಲಾಗುವುದಿಲ್ಲವೆಂದು ಒಂದೇ ಏಟಿಗೆ ನಿರಾಕರಿಸಿಬಿಟ್ಟರು!

ಪೂರ್ಣಯ್ಯ ಸರಕಾರಕ್ಕೆ ಕೊಡಬೇಕಿದ್ದ ಬಾಕಿ ಹಣವನ್ನು ಎಲ್ಲೆಲ್ಲಿ ಖರ್ಚು ಮಾಡಿದ್ದನೆಂಬ ಈ ಲೆಕ್ಕ, ಲೂಟಿ ಹೊಡೆದ ಹಣವನ್ನು ಬ್ರಾಹ್ಮಣರಿಗೆ ಕೊಟ್ಟು ಅತಿಯಾಗಿ ಮುದ್ದಿಸಿ ಹಾಳು ಮಾಡಿದ್ದನ್ನು ತೋರಿಸಿಕೊಡುತ್ತದೆ. 
 

ಯಳಂದೂರಿನಲ್ಲಿ ಕುಸಿತದ ಹಂತದಲ್ಲಿರುವ ಪೂರ್ಣಯ್ಯನವರ ಅರಮನೆಯಂತಹ ಮನೆಯಲ್ಲಿ ಚಿನ್ನ ತುಂಬಿದ ಮಡಿಕೆಗಳು ಆಗಾಗ್ಗೆ ದೊರಕುತ್ತಿದ್ದವು ಎಂಬುದು ಆಸಕ್ತಿಕರ. ತೀರ ಇತ್ತೀಚೆಗೆ 1980ರಲ್ಲೂ ಚಿನ್ನದ ಮಡಿಕೆಗಳು ಸಿಕ್ಕಿದ್ದವು.

‘ಗೌರವಾನ್ವಿತ’ ‘ನೇರವಂತಿಕೆ’ಯ ‘ಘನತೆಯುಳ್ಳ’ ವ್ಯಕ್ತಿಯ ಬಗ್ಗೆ ಇಷ್ಟು ಸಾಕೇನೋ!?!

ಸನ್ನದ್ ಕೊಡುವ ಒಂದು ತಿಂಗಳ ಮುಂಚೆ ಮದ್ರಾಸಿನ ಬ್ರಿಟೀಷ್ ಸರಕಾರಕ್ಕೆ ಬರೆದ ಪತ್ರವೊಂದರಲ್ಲಿ ಮಾಲ್ಕಮ್: “ಪೂರ್ಣಯ್ಯನವರು ಕೇಳಿದ ವಿಪರೀತದ ಬೇಡಿಕೆಗಳಿಗೆ ಹೋಲಿಸಿದರೆ ನಾವು ಕೊಟ್ಟ ಉಡುಗೊರೆಯ ಮೊತ್ತ ಒಪ್ಪತಕ್ಕದ್ದು. ಅದು ದೊಡ್ಡದಲ್ಲ ಮತ್ತಷ್ಟು ಸಾಕು. ಮೈಸೂರು ಸರಕಾರ ಅಸ್ತಿತ್ವದಲ್ಲಿರುವವರೆಗೆ ಪೂರ್ಣಯ್ಯನ ಕುಟುಂಬವನ್ನು ಸಾಕಲು ಇಷ್ಟು ಸಾಕು. ಇಷ್ಟೆಲ್ಲವನ್ನೂ ಕೊಟ್ಟ ಹಿಂದಿನ ಕಾರಣಗಳು ಅದನ್ನನುಭವಿಸುವ ಮುಂದಿನ ಜನಾಂಗದವರಲ್ಲೂ ಗೌರವ ಮೂಡಿಸುತ್ತದೆ.” (128)

ಮತ್ತೆ ಮುಂದಕ್ಕೆ ಇದೇ ರೀತಿಯ ‘ಬಹುಮಾನ’ಗಳನ್ನು ಕೊಟ್ಟುಬಿಟ್ಟರೆ ಎಂಬ ಅನ್ನಿಸಿಕೆಯಿಂದ ಗವರ್ನರ್ ಜೆನರಲ್ ತತ್ ಕ್ಷಣ ಇಂತಹ ವಿಷಯಗಳ ಬಗ್ಗೆ ಯಾವ ನೀತಿಯನ್ನನುಸರಿಬೇಕೆಂದು ಸೂಚನೆ ನೀಡಿದರು: “ಪ್ರಸ್ತುತ ಸಂದರ್ಭದಲ್ಲಿ ಈ ರೀತಿಯ ಕೊಡುವಿಕೆಗೆ ಮುಂದೆ ಅನುಸರಿಸಬೇಕಾದ ನೀತಿಗಳನ್ನು ಗೊತ್ತುಪಡಿಸುವುದು ಸೂಕ್ತವಾದ ಕೆಲಸ. ಮೈಸೂರು ಸರಕಾರಕ್ಕೆ ಈ ಪ್ರಕರಣದಲ್ಲಿ ಸ್ವಲ್ಪ ಸ್ವಾತಂತ್ರ್ಯವಿದ್ದರೆ, ಬಲಹೀನ ನಾಮಕಾವಸ್ಥೆ ರಾಜ ಅಥವಾ ಮಂತ್ರಿ ಕೊಟ್ಟುಬಿಡಬಹುದಾದ ಉಡುಗೊರೆಗಳು ಆ ರಾಜ್ಯ ಬ್ರಿಟೀಷ್ ಸರಕಾರದೊಂದಿಗೆ ಮಾಡಿಕೊಂಡಂತಹ ಒಪ್ಪಂದಗಳ ಅಸ್ತಿತ್ವಕ್ಕೇ ಸಂಚಕಾರ ಉಂಟುಮಾಡಿಬಿಡಬಹುದು. ಮತ್ತೊಂದೆಡೆ ಈ ರೀತಿಯ ಕೊಡುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವುದು ಬುದ್ಧಿವಂತಿಕೆಯ ನಡೆಯಲ್ಲ. ಅತ್ಯಮೂಲ್ಯ ಸೇವೆ ಸಲ್ಲಿಸಿದವರಿಗೆ ಗೌರವ ಸಲ್ಲಿಸಲು, ಉಡುಗೊರೆ ನೀಡಲು ಅಲ್ಲಿನ ಸ್ಥಳೀಯ ಸರಕಾರಗಳಿಗೆ ಅಧಿಕಾರವಿರಲೇಬೇಕು. ನಮ್ಮ ಪ್ರಕಾರ ಒಂದು ನಿರ್ದಿಷ್ಟ ಮೊತ್ತವನ್ನು/ ಜಾಗವನ್ನು ನಿಗದಿಪಡಿಸಬೇಕು, ಮೈಸೂರು ಸಾಮ್ರಾಜ್ಯದ ಒಳಗಿನ ಜಾಗವನ್ನು ಸೇವೆ ಸಲ್ಲಿಸಿದಾತ ಜೀವಿತವಿರುವವರೆಗೆ ಅಥವಾ ವಂಶಪಾರಂಪರ್ಯ ಗುತ್ತಿಗೆಯ ಮೇಲೆ ನೀಡಬೇಕು ಮತ್ತಿದಕ್ಕೆ ಕಂಪನಿ ಸರಕಾರದ ಒಪ್ಪಿಗೆ ಕೊಡುವಂತಿರಬಾರದು.” (129)

ಮಾಲ್ಕಮ್ ಮದ್ರಾಸಿಗೆ ಬರೆದ – ಈಗಾಗಲೇ ನಾವು ಉಲ್ಲೇಖಿಸಿರುವ – ಪತ್ರದಲ್ಲಿ ಈ ಪ್ರಶ್ನೆಗೆ ಉತ್ತರ ಕೊಡುವುದು ಹೀಗೆ: “ಪೂರ್ಣಯ್ಯನವರಿಗೆ ಕೊಟ್ಟ ಈ ಜಾಗೀರನ್ನು ನಿದರ್ಶನವನ್ನಾಗಿ ಬಳಸಿಕೊಳ್ಳಬಾರದು. ಯಾಕೆಂದರೆ ಈ ರಾಜ್ಯದ ಸೇವೆಯಲ್ಲಿರುವ ಯಾವುದೇ ವ್ಯಕ್ತಿಗೂ ಇಂತಹುದೊಂದು ಅವಕಾಶ ಲಭಿಸುವುದಿಲ್ಲ, ಪೂರ್ಣಯ್ಯನವರಿಗೆ ಕೊಟ್ಟಂತೆ ಮತ್ಯಾರಿಗೂ ಕೊಡುವ ಪರಿಸ್ಥಿತಿ ಉದ್ಭವಿಸುವುದಿಲ್ಲ.” (130)

ಹಾಗಾಗಿ ಇದು ಬ್ರಿಟೀಷರು ಉಡುಗೊರೆಯಾಗಿ ಕೊಟ್ಟ ಮೊದಲ ಉದಾಹರಣೆ ಮತ್ತದನ್ನವರು ಕೊನೆಯ ಉದಾಹರಣೆಯಾಗಿಸಬಯಸಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅವರಿಗೆ ಸಾಮ್ರಾಜ್ಯವನ್ನು, ಹದಿನೇಳನೇ ಶತಮಾನಕ್ಕೂ ಮುಂಚಿದ್ದ ಹಳೆಯ ಊಳಿಗಮಾನ್ಯತೆಯ ದಿನಗಳಿಗೆ ತಳ್ಳಲ್ಪಡುವುದನ್ನು ನೋಡುವ ಇಚ್ಛೆಯಿರಲಿಲ್ಲ. ಆದರೆ ಕೃಷ್ಣರಾಜ ಈ ಕೊಡುವಿಕೆಯಿಂದ ಗತಕಾಲದ ಚಕ್ರವರ್ತಿಗಳಂತೆ ಉತ್ಸುಕನಾಗಿದ್ದ ಮತ್ತಿದನ್ನು ಪುನರಾವರ್ತಿಸಲು ಆಸಕ್ತನಾಗಿದ್ದ. ಈ ರೀತಿಯ ಬಹುಮಾನಗಳ ಕೊಡುವಿಕೆ ರಾಜನೆಂಬ ಗುರುತನ್ನು ಪ್ರಕಾಶಮಾನವಾಗಿಸುತ್ತಿತ್ತು. ಇದು 1810ರ ನಂತರದ ಲಕ್ಷಣವಷ್ಟೇ ಆಗಿರದೆ, 1799ರಲ್ಲೇ ಶುರುವಾಗಿತ್ತು.

ಪೂರ್ಣಯ್ಯನ ಆರಂಭಿಕ ಕಾರ್ಯದ ಬಗ್ಗೆ ಶಾಮ ರಾವ್ ತಿಳಿಸುತ್ತಾರೆ. “ಜನರನ್ನು ಒಲಿಸಿಕೊಳ್ಳುವ ಸಲುವಾಗಿ” ಪೂರ್ಣಯ್ಯ “ಟಿಪ್ಪುವಿನ ಕೊನೆಯ ದಿನಗಳಲ್ಲಿ ಸರಕಾರ ವಶಪಡಿಸಿಕೊಂಡಿದ್ದ ಎಲ್ಲಾ ಇನಾಂ ಭೂಮಿ ಮತ್ತು ಹಣವನ್ನು ಆಯಾ ದೇವಸ್ಥಾನ, ಮಠ, ದರ್ಗಾ ಮತ್ತು ಇತರೆ ಪೂಜಾ ಸ್ಥಳಗಳು ಹಾಗು ದಾನಧರ್ಮದ ಸಂಸ್ಥೆಗಳಿಗೆ ಹಿಂದಿರುಗಿಸಬೇಕೆಂಬುದಾಗಿತ್ತು.” (131) ಮುಂದುವರೆಸುತ್ತಾ ಶಾಮ ರಾವ್ ಹೇಳುತ್ತಾರೆ: “ದೇಶದ ವಿವಿಧ ಭಾಗಗಳಲ್ಲಿನ ಪಾಳೇಗಾರರು, ನಕಲಿ ಪಾಳೇಗಾರರು ಸಾಮ್ರಾಜ್ಯದ ಎಲ್ಲಾ ಭಾಗದ ಮೇಲೂ ತಮ್ಮ ಹಕ್ಕಿದೆ ಎಂದು ಹೇಳಲಾರಂಭಿಸಿದರು. ಪಟೇಲರು, ಪೋಲೀಸ್ ಅಧಿಕಾರಿಗಳು ಮತ್ತು ಲಂಚ ಕೊಡುವ ತಾಕತ್ತಿರುವ ರೈತರೂ ಸಹಿತ ತಮ್ಮಳ್ಳಿಯ ಜಾಗವನ್ನು ತಮ್ಮದೆಂದು ಹೇಳತೊಡಗಿದರು, ಅವರದಾಗಿಲ್ಲದೇ ಹೋದರೂ ಸಹ…..”(132)

ಪೂರ್ಣಯ್ಯ ಜನರನ್ನು ಅದರಲ್ಲೂ ವೈದಿಕ ಬ್ರಾಹ್ಮಣರನ್ನು “ಒಲಿಸಿಕೊಳ್ಳಲು” ತೆಗೆದುಕೊಂಡ ಕ್ರಮಗಳ ಬಗ್ಗೆ ವಿಲ್ಕ್ಸ್ ಬರೆಯುತ್ತಾನೆ: “1778ರಲ್ಲಿ ಟಿಪ್ಪು ಸುಲ್ತಾನ್ ಈ ಜಮೀನುಗಳನ್ನು ವಾಪಸ್ಸು ಪಡೆದುಕೊಳ್ಳಬೇಕೆಂದು ಸೂಚಿಸುತ್ತ, ಅದರಿಂದ ಬರುವ ಹಣವನ್ನು ಜುಮ್ಮಾಬಂದಿಗೆ ಸೇರಿಸಬೇಕು ಎಂದು ಆದೇಶಿಸುತ್ತಾನೆ. ದಿವಾನರಾಗುತ್ತಿದ್ದಂತೆ ಪೂರ್ಣಯ್ಯ ಮಾಡಿದ ಮೊದಲ ಕೆಲಸ ಈ ಭತ್ಯೆಗಳನ್ನು ಮತ್ತೆ ಮರುಸ್ಥಾಪಿಸಿದ್ದು…..”(133)

ಇದರಲ್ಲಿ ಹಳ್ಳಿಯ ದೇವಸ್ಥಾನಗಳು, ಜ್ಯೋತಿಷಿಗಳಿಗೆ ಮಠಗಳಿಗೆ ಮಠಗಳ ಗುರುಗಳಿಗೆ ಕೊಟ್ಟಿದ್ದ ಭೂಮಿ, ಕೆರೆ ಕಟ್ಟಲು ಭೂಮಾಲೀಕರಿಗೆ ಕೊಟ್ಟಿದ್ದ ಜಾಗ, ಉದ್ಯಾನವನ ನಿರ್ಮಿಸಲು ಜಾಗೀರುದಾರರಿಗೆ ಕೊಟ್ಟಿದ್ದ ಜಾಗ ಮತ್ತು ರಾಜರ ಸ್ವಂತ ಉದ್ಯಾನಕ್ಕೆ ಕೊಟ್ಟಿದ್ದ ಜಾಗವೆಲ್ಲವೂ ಸೇರಿತ್ತು. ಇವೆಲ್ಲದರ ಒಟ್ಟು ಮೊತ್ತ 2,68,467 ರುಪಾಯಿಗಳಷ್ಟಿತ್ತು. (134)

ಇನಾಮುದಾರರಿಗೆ ವಿವಿಧ ಕಾಲಘಟ್ಟದಲ್ಲಿ ಕೊಟ್ಟ ಇನಾಮುಗಳ ಬಗ್ಗೆ ಲುವಿಸ್ ರೈಸ್ ಆಸಕ್ತಿಕರ ಮಾಹಿತಿಗಳನ್ನು ನಮಗೆ ಕೊಡುತ್ತಾರೆ. (135)


ರೈಸಿನ ಟೇಬಲ್ಲಿನಿಂದ ಒಂದಂಶ ಸ್ಪಷ್ಟವಾಗುತ್ತದೆ, ಒಟ್ಟು 15,90,539 ರುಪಾಯಿಗಳಷ್ಟಾಗಿದ್ದ ಇನಾಮಿನಲ್ಲಿ ಹೆಚ್ಚಿನಂಶವನ್ನು ಮೊದಲ ದಶಕದಲ್ಲಿ ಕೊಡಲಾಗಿತ್ತು. ಊಳಿಗಮಾನ್ಯ ಸ್ಥಿತಿಗೆ ಮರಳಿಸುವುದಕ್ಕೆ ಹೆಚ್ಚು ಪ್ರಯತ್ನ ಪಡಲಾಗಿತ್ತು. ಕೈಗೊಂಬೆ ರಾಜನಡಿಯಲ್ಲಿ ಇನಾಮು ಕೊಡುವ ಪದ್ಧತಿ ಕಡಿಮೆಯಾಯಿತು, 1831ರ ನಂತರ ಅದು ಸಂಪೂರ್ಣ ಮಾಯವಾಯಿತು. 1831ರಷ್ಟರಲ್ಲಿ ಬ್ರಿಟೀಷ್ ಸರಕಾರ ಇದರ ಕುರಿತು ಸ್ಪಷ್ಟ ಹೆಜ್ಜೆ ಇಟ್ಟಿದ್ದನ್ನು ರೆಸಿಡೆಂಟ್ ಮತ್ತು ಗವರ್ನರ್ ನಡುವೆ ನಡೆದ ಪತ್ರ ವಿನಿಮಯದಲ್ಲಿ ಕಾಣಬಹುದು. ಕೃಷ್ಣರಾಜರು “ಭೂಮಿಯನ್ನು ಸನ್ನದಾಗಿ ನೀಡುವುದನ್ನು” ತಡೆಯುವ ಪ್ರಯತ್ನ ಈ ವಿನಿಮಯದಲ್ಲಿತ್ತು. (136)

ರಾಷ್ಟ್ರೀಯತೆಯ ಸೋಗಿನಲ್ಲಿ ಮಧ್ಯವರ್ತಿ ಅಧಿಕಾರಶಾಹಿಯು ಯೋಚಿಸುತ್ತಿದ್ದ ಬಗೆಯನ್ನು ಸಂಗ್ರಹಿಸಿ ಬರೆದಿರುವ ವೆಂಕಟಸುಬ್ಬ ಶಾಸ್ತ್ರಿ ಈ ರೀತಿಯ ಇನಾಂಗಳ ಗುಣಸ್ವರೂಪ ಮತ್ತು ಅದು ಉಂಟು ಮಾಡಿದ ಪರಿಣಾಮಗಳ ಬಗ್ಗೆ ಇನ್ನಷ್ಟು ಒಳನೋಟಗಳನ್ನು ನೀಡುತ್ತಾರೆ. ಅವರು ಹೇಳುತ್ತಾರೆ: “ಇನಾಮಿನ ಹೆಚ್ಚಿನ ಭಾಗ ಕಾವೇರಿ ಮತ್ತು ಹೇಮಾವತಿ ತಟದ ಫಲವತ್ತ ಹಳ್ಳಿಗಳಲ್ಲಿರುತ್ತಿತ್ತು ಅಥವಾ ಉದ್ಯಾನನಗರಿ ಬೆಂಗಳೂರಿನಲ್ಲಿರುತ್ತಿತ್ತು. ಇದರ ಬಗ್ಗೆ ಸರಿಯಾದ ದಾಖಲೆಗಳನ್ನು ಇಟ್ಟಿರಲಿಲ್ಲವಾಗಿ ಇನಾಂ ಆಗಿ ಕೊಟ್ಟ ಭೂಮಿಗಿಂತ ಹೆಚ್ಚನ್ನು ಆಕ್ರಮಿಸಿಕೊಂಡರು. ಜಿಲ್ಲೆಯೊಳಗೆ ಫೌಜಿದಾರರು ಮತ್ತು ಅಮಲ್ದಾರರ ಪ್ರಾಬಲ್ಯದ ಕಾರಣದಿಂದ ಈ ಇನಾಂ ಭೂಮಿ ಮತ್ತಷ್ಟು ವಿಸ್ತಾರಗೊಂಡಿತು. ಪರಿಣಾಮವಾಗಿ ಸರಕಾರಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆದಾಯ ಕೈತಪ್ಪಿಹೋಯಿತು.

ಈ ಅರಾಜಕ ಪರಿಸ್ಥಿತಿಯಲ್ಲಿ ಕೃಷಿ ಸಂಕಟಕ್ಕೊಳಗಾಯಿತು. ಕೃಷಿಕ ತನಗುತ್ತಮವೆನ್ನಿಸಿದ ಬೆಳೆಯನ್ನು ಬೆಳೆದುಕೊಳ್ಳಲು ಸ್ವತಂತ್ರನಾಗಿದ್ದ ಮತ್ತು ತನ್ನ ತ್ಯಾಗದ ಫಲವನ್ನು ಪಡೆದುಕೊಳ್ಳಬಲ್ಲವನಾಗಿದ್ದ. ಆದರೆ ವಾಸ್ತವದಲ್ಲಿ ಈ ಬೆಳೆಯಷ್ಟೇ ಅವನ ಸ್ವತ್ತಾಗಿತ್ತು. ಸರಕಾರದ ಬೇಡಿಕೆಗಳ ಜೊತೆಗೆ, ಕಳೆದ ವರ್ಷದ ತೆರಿಗೆ ಕಟ್ಟಲು, ಬೀಜ ಮತ್ತು ಎತ್ತು ಕೊಳ್ಳಲು ಸಹಾಯ ಮಾಡಿದ್ದ ಬಡ್ಡಿ ವ್ಯಾಪಾರಿ ಹೆಚ್ಚಿನ ಬೆಳೆಯನ್ನು ಕಬಳಿಸಿಬಿಡುತ್ತಿದ್ದ. ಮತ್ತೆ ಹೊಚ್ಚ ಹೊಸ ಕರಾರಿನ ಮೇಲೆ ಸಾಲ ನೀಡುತ್ತಿದ್ದ.” (137)

ತುಳುನಾಡಿನ ಆರ್ಥಿಕತೆಯ ಬಗ್ಗೆ ಅಧ್ಯಯನ ನಡೆಸಿದ ಶ್ಯಾಮ್ ಭಟ್ 1830ರಲ್ಲಿನ ಅಲ್ಲಿನ ಬೆಳವಣಿಗೆಗಳ ಬಗ್ಗೆ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅವರು ಬರೆಯುತ್ತಾರೆ: “ಸರಕಾರದ ಕಂದಾಯ ನೀತಿಗಳು ಹಳೆ ಊಳಿಗಮಾನ್ಯ ಮುಖ್ಯಸ್ಥರ ಜಾಗದಲ್ಲಿ ಹೊಸ ಭೂಮಾಲೀಕರ ವರ್ಗವನ್ನು ಸೃಷ್ಟಿಸಿತು. ಜೊತೆಯಲ್ಲಿ ವರ್ತಕ ಬಡ್ಡಿ ವ್ಯಾಪಾರಿಗಳು ಮತ್ತವರ ಸಹವರ್ತಿಗಳ ವರ್ಗವನ್ನು ಈ ಹೊಸ ಪದ್ಧತಿ ಸೃಷ್ಟಿಸಿತು”. (138) ಇವರು ಮುಂದಿನ ದಿನಗಳಲ್ಲಿ ಕೃಷಿಕರ ಭೂಮಿಯ ಒಡೆತನ ತಮ್ಮದೆಂದು ಹೇಳಿಕೊಳ್ಳಲಾರಂಭಿಸಿದರು.

ಕರಾವಳಿಯ ವ್ಯಾಪಾರದ ಬಗ್ಗೆ ಬರೆಯುತ್ತ ಮಾಲತಿ ಕೆ ಮೂರ್ತಿ ಹೀಗೆ ನಿರ್ಧರಿಸುತ್ತಾರೆ: “ಬ್ರಿಟೀಷ್ ಆಳ್ವಿಕೆಯಲ್ಲಿ ಸಂಪನ್ನತೆ ಹೆಚ್ಚಿಬಿಟ್ಟಿತ್ತು ಎನ್ನುವುದನ್ನು ನಂಬಲಾಗುವುದಿಲ್ಲ ಎನ್ನುವುದಕ್ಕೆ ಈ ಭಾಗದ ಆರ್ಥಿಕ ಇತಿಹಾಸವೇ ಸಾಕ್ಷಿ ಒದಗಿಸುತ್ತದೆ. ಕೊನೇಪಕ್ಷ ಹತ್ತೊಂಬತ್ತನೇ ಶತಮಾನದ ಮೊದಲ ಎರಡು ಮೂರು ದಶಕಗಳಲ್ಲಿ.”(139)

ತನ್ನ ಪುಸ್ತಕ Peasants and Imperial Ruleನಲ್ಲಿ ನ್ಹೀಲ್ ಚಾರ್ಲ್ಸ್ ವರ್ಥ್, ಬಾಂಬೆ ಕರ್ನಾಟಕ ಭಾಗದಲ್ಲಿ ಊಳಿಗಮಾನ್ಯತೆಯ ಮರಳುವಿಕೆಯೊಂದಿಗೆ ಸರಕಾರದ ಆದಾಯ ಕಡಿಮೆಯಾಗಿದ್ದನ್ನು ವಿವರಿಸುತ್ತಾನೆ. ಅವನು ಬರೆಯುತ್ತಾನೆ: “ಹದಿನೆಂಟನೇ ಶತಮಾನದ ಕೊನೆಯಲ್ಲಿ ಮತ್ತು ಹತ್ತೊಂಭತ್ತನೇ ಶತಮಾನದ ಪ್ರಾರಂಭದಲ್ಲಿ ಬಾಂಬೆ ಪ್ರಾಂತ್ಯದಲ್ಲಿ ಸರಕಾರದ ಕಣ್ಣಿಂದ ಪ್ರತ್ಯೇಕವಾದ ಭೂಮಿ ಮತ್ತು ಆದಾಯ ಬಹಳಷ್ಟಿತ್ತು. ಇಡೀ ಹಳ್ಳಿಗಳು, ಹತ್ತಲವು ಹಳ್ಳಿಗಳ ಗುಂಪುಗಳನ್ನು ಜಾಗೀರು ಮತ್ತು ಇನಾಮು ಮಾಡಲಾಗಿತ್ತು; ಇದರ ಜೊತೆಗೆ ಪ್ರತಿ ಹಳ್ಳಿಯ ಭೂಮಿಯಲ್ಲೂ ಮಹತ್ತರ ಭಾಗವನ್ನು ಪ್ರತ್ಯೇಕಗೊಳಿಸಿಬಿಡಲಾಗಿತ್ತು. 1850ರಲ್ಲಿ ನಡೆದ ಅಧಿಕೃತ ಅಂದಾಜಿನ ಪ್ರಕಾರ ಬಾಂಬೆಯಲ್ಲಿ ಈ ರೀತಿಯಲ್ಲಿ ಪ್ರತ್ಯೇಕಗೊಂಡ ಆದಾಯ ಪ್ರಾಂತ್ಯದ ಒಟ್ಟು ಆದಾಯದ ಮೂರನೇ ಒಂದಂಶದಷ್ಟಿತ್ತು. 82 ಲಕ್ಷ ಬೆಲೆಬಾಳುವ ಭೂಮಿಯಿತ್ತು. ಶತಮಾನದ ಮಧ್ಯಭಾಗದಲ್ಲಿ ಸರಕಾರದ ಆದಾಯ ಇಡೀ ಪ್ರಾಂತ್ಯದಲ್ಲಿ ಕೃಷಿ ಮಾಡಲ್ಪಟ್ಟ ಭೂಮಿಯ 20 ರಿಂದ 30 %ನಷ್ಟು ಮಾತ್ರ ಇತ್ತು ಎಂದು ಸುಲಭವಾಗಿ ಊಹಿಸಿಬಿಡಬಹುದು. ಇದರಲ್ಲಿ ಹೆಚ್ಚಿನಂಶ ಬಹುಶಃ ಗುಜರಾತಿನಲ್ಲಿತ್ತು, ಆದರೆ ದಖ್ಖನಿ ಮತ್ತು ದಕ್ಷಿಣ ಮರಾಠ ದೇಶಗಳಲ್ಲೂ ಇಂತಹ ಪ್ರತ್ಯೇಕಗೊಂಡ ಭೂಮಿಗಳು ಬಹಳಷ್ಟಿದ್ದವು. 1828ರಲ್ಲಿ ಸೈಕ್ಸ್ ಪೂನಾ, ಅಹಮದನಗರ, ಖಂದೇಶ್ ಮತ್ತು ಧಾರವಾಡದಲ್ಲಿ ಐದನೇ ಒಂದಂಶದಷ್ಟು ಪಟ್ಟಣಗಳು ಮತ್ತು ಹಳ್ಳಿಗಳು ಪ್ರತ್ಯೇಕಗೊಂಡಿದ್ದನ್ನು ಗುರುತಿಸುತ್ತಾನೆ; ಜೊತೆಗೆ ಹೆಚ್ಚುಕಡಿಮೆ ಪ್ರತಿ ಹಳ್ಳಿಯಲ್ಲೂ ಪಟೇಲರು, ಕುಲಕರ್ಣಿಗಳು, ಮಹರ್ ಗಳು ಬಾಡಿಗೆ ರಹಿತ ಭೂಮಿಯನ್ನು ಹೊಂದಿದ್ದರು.(140) ಪ್ರಾಂತ್ರದೊಳಗೆ ಈ ರೀತಿಯ ಪ್ರತ್ಯೇಕತೆ ಪುಣೆಯಿಂದ ಮುಂದಕ್ಕೋದರೆ ಮತ್ತಷ್ಟು ಹೆಚ್ಚಾಗಿರುವುದು ತಿಳಿಯುತ್ತಿತ್ತು. ದಕ್ಷಿಣದಲ್ಲಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮರಾಠ ಸೈನ್ಯದ ಮುಖ್ಯಸ್ಥರು ಮತ್ತವರ ವಂಶಸ್ಥರು ಅಗಾಧ ಎಸ್ಟೇಟುಗಳನ್ನು ಹೊಂದಿದ್ದರು, ಅನೇಕ ಹಳ್ಳಿಗಳನ್ನು ಜಾಗೀರಾಗಿ ಅಥವಾ ಸುರಿಂಜಮ್ (surinjam) ಆಗಿ ಪಡೆದುಕೊಂಡಿದ್ದರು. ಇಲ್ಲಿನ ಸರಕಾರೀ ಹಳ್ಳಿಗಳಲ್ಲೂ ಹೆಚ್ಚಿನ ಭೂಮಿ ಇನಾಂದಾರರ ನಿಯಂತ್ರಣದಲ್ಲಿತ್ತು. ಒಂದು ಅಂದಾಜಿನಂತೆ 1848ರಲ್ಲಿ ಸರಿಸುಮಾರು 60,000 ಸಣ್ಣ ಪುಟ್ಟ ಭೂಮಿ ಪ್ರತ್ಯೇಕವಾಗಿತ್ತು. ದಕ್ಷಿಣದಲ್ಲಿ ಅಧ್ಯಯನ ನಡೆಸಲು ಬೆಳಗಾವಿ ಜಿಲ್ಲೆಯ ಬಾದಾಮಿ ತಾಲ್ಲೂಕು ಉತ್ತಮವಾದುದು. ಇಲ್ಲಿ 76 ಹಳ್ಳಿಗಳು ಸಂಪೂರ್ಣವಾಗಿ ಪ್ರತ್ಯೇಕಗೊಂಡಿದ್ದವು ಮತ್ತು 151 ಹಳ್ಳಿಗಳಲ್ಲಿ ಸರಕಾರ ಹಕ್ಕು ಸಾಧಿಸಿತ್ತು ಎಂದು 1852ರಲ್ಲಿ ಗಮನಿಸುತ್ತಾರೆ ವಿನ್ ಗೇಟ್. ಸರಕಾರದ ಹಕ್ಕಿದ್ದ ಹಳ್ಳಿಗಳಲ್ಲಿ ಕೃಷಿಗೆ ಯೋಗ್ಯವಾದ ಭೂಮಿಯಲ್ಲಿ 42%ನಷ್ಟು ಇನಾಂ ಭೂಮಿಯಾಗಿತ್ತು ಅಥವಾ ಒಂದು ಸಣ್ಣ ಮೊತ್ತದ ಬಾಡಿಗೆ ಕಟ್ಟಿದರೆ ಮುಗಿದುಹೋಗುತ್ತಿತ್ತು.” (141)

ಮುಂದುವರೆಸುತ್ತಾ ಚಾರ್ಲ್ಸ್ ವರ್ಥ್: “ಪ್ರತ್ಯೇಕಗೊಂಡ ಭೂಮಿಯಲ್ಲಿ ಅನೇಕವು ಸರಕಾರದ ಉಡುಗೊರೆಯಿಂದಲೇ ಸೃಷ್ಟಿಯಾಗಿತ್ತಾದರೂ ಅಧಿಕಾರಶಾಹಿಗೆ, ಅದನ್ನು ಮಿತಿಗೊಳಿಸಬೇಕೆಂಬ ಆಸಕ್ತಿಯೂ ಗಣನೀಯ ಪ್ರಮಾಣದಲ್ಲಿತ್ತು.”(142)

ಈ ಮೇಲಿನ ಎಲ್ಲಾ ಮಾಹಿತಿಯಿಂದ ಸ್ಪಷ್ಟವಾಗುವ ಅಂಶವೆಂದರೆ ವಸಾಹತು ಆಳ್ವಿಕೆಯ ಮೊದಲ ಕೆಲವು ದಶಕಗಳು ಊಳಿಗಮಾನ್ಯತೆಯನ್ನು ಶಕ್ತಗೊಳಿಸುವುದರ ಜೊತೆಗೆ ಕರ್ನಾಟಕದ ಉದ್ದಗಲಕ್ಕೂ ಊಳಿಗಮಾನ್ಯತೆ ಹೊಸ ಹೊಸತಾಗಿ ಚಿಗುರಿಕೊಳ್ಳುವ ಅವಕಾಶವನ್ನೂ ಒದಗಿಸಿತು. ಈ ಅಂಶಕ್ಕೆ ಪೂರಕವಾಗಿ ನಾವು ಒದಗಿಸಿರುವ ಇತಿಹಾಸದ ಪುರಾವೆಗಳು ಸರಕಾರ – ಧಾರ್ಮಿಕ, ಭೂಮಾಲೀಕ, ರಾಜಸ್ವ, ಮಿಲಿಟರಿ – ಜನರಿಗೆ ಭೂಮಿ ಮತ್ತು ಹಳ್ಳಿಯನ್ನು ದೇಣಿಗೆಯಾಗಿ ನೀಡಿ ಊಳಿಗಮಾನ್ಯತೆಯ ಆಸಕ್ತಿಯನ್ನು ಕಾಪಿಡಿದರು. ಈ ಹಿಮ್ಮುಖ ಚಲನೆಯಿಂದಾಗಿ ದೊಡ್ಡ ಮಟ್ಟದ ಜನಸಂಖ್ಯೆ ಮತ್ತೆ ಕೃಷಿಯೆಡೆಗೆ ಹೆಜ್ಜೆ ಹಾಕಿದರು. ಮೈಸೂರೊಂದಲ್ಲೇ ಸುಮಾರು ಮೂರು ಲಕ್ಷ ಜನರು (ಒಟ್ಟು ಜನಸಂಖೈಯ 12%ನಷ್ಟು) ಈ ಹಿಮ್ಮುಖ ಚಲನೆಯ ಭಾಗವಾದರು. ಈಗಾಗಲೇ ಉಲ್ಲೇಖಿಸಿರುವ ಬುಚನನ್ ನ ಮಾಹಿತಿಯಂತೆ ಈ ಹಿಮ್ಮುಖ ಚಲನೆಗೆ ಕಾರಣ ವ್ಯಾಪಾರ ವಹಿವಾಟು ಮತ್ತು ಕೈಗಾರಿಕೆಯಲ್ಲುಂಟಾದ ಬಿರುಕುಗಳು ಮತ್ತು ಸೈನ್ಯವನ್ನು ವಿಸರ್ಜಿಸಿದ್ದು. ಬಂಡವಾಳಶಾಹಿತನದ ಉದಯದ ಲಕ್ಷಣವೆಂದರೆ ಕೈಗಾರಿಕೆಯನ್ನು ಕೃಷಿಯಿಂದ ಬೇರ್ಪಡಿಸುವುದು ಮತ್ತು ಪಟ್ಟಣ ಹಾಗೂ ನಗರಗಳ ಶೀಘ್ರ ಬೆಳವಣಿಗೆ; ಹದಿನೆಂಟನೇ ಶತಮಾನದ ಮೊದಲರ್ಧದಲ್ಲಿ ನಡೆದದ್ದು ಇದಕ್ಕೆ ಸಂಪೂರ್ಣ ವಿರುದ್ಧವಾದ ಪ್ರಕ್ರಿಯೆ – ಕೈಗಾರಿಕೆ ಕೃಷಿಯೊಂದಿಗೆ ಕೈಜೋಡಿಸಿತು, ನಗರದ ಜನರು ಹಳ್ಳಿಗಳ ಕಡೆಗೆ ಗುಳೇ ಹೋದರು. ಈ ಐತಿಹಾಸಿಕ ಹಿಮ್ಮುಖ ಚಲನೆ ಕಾರ್ಮಿಕರ ವೇತನವನ್ನು ಗಣನೀಯವಾಗಿ ಕಡಿಮೆ ಮಾಡಿತು ಮತ್ತು ಕಾರ್ಮಿಕರನ್ನು ಭೂಮಾಲೀಕ ವರ್ಗದ ಕೃಪಾಕಟಾಕ್ಷಕ್ಕೆ ನೂಕಿ ಬಿಟ್ಟಿತು. ಈ ಪ್ರಕ್ರಿಯೆಯನ್ನು ಭೂಮಾಲೀಕರು ತಮ್ಮನುಕೂಲಕ್ಕೆ ಬಳಸಿಕೊಂಡರು; ಕೂಲಿಯನ್ನು ಕಡಿಮೆ ಮಾಡಿ ಎಂದು ಬುಚನನ್ನ ತಿಳಿಸುತ್ತಾರೆ. ಬ್ರಿಟೀಷ್ ವಸ್ತುಗಳು ಕೊಟ್ಟ ಪೈಪೋಟಿಯಿಂದಾಗಿ ಪತನ ಕಂಡ ಬಾಂಬೆ ಕರ್ನಾಟಕ ಭಾಗದಲ್ಲಿನ ಕಸುಬುದಾರರು(ನೇಕಾರರು) ಬರ್ಬಾದಾದ ಬಗ್ಗೆ ಡಿಕೆ ಚೋಕ್ಸಿ ಬರೆಯುತ್ತಾರೆ: “ನೇಕಾರರು ತಮ್ಮ ಕೈಮಗ್ಗ ತೊರೆದು ಉಳುವುದಕ್ಕೆ ಹೊರಟರು, ಸೈನಿಕರಂತೆ ಹೊರಟರು, ಭೂಮಿಗೆ ಭಾರವಾದರು. ಅವರು ಉತ್ತ ಭೂಮಿ ಮ್ಯಾಂಚೆಸ್ಟರ್ರಿನ ದೈತ್ಯ ವಸ್ತ್ರ ತಯಾರಿಕಾ ಕಂಪನಿಗಳಿಂತ ಕಚ್ಛಾ ವಸ್ತುಗಳನ್ನು ಪೂರೈಸುತ್ತಿತ್ತು. ಭಾರತದ ಮಿಲಿಯನ್ನುಗಟ್ಟಲೆ ಜನರು ತಮ್ಮ ಹೊಸ ಮಾಲೀಕರ ದುರಾಸೆಗಳನ್ನು ಈಡೇರಿಸಲು ಉಳುಮೆ ಮಾಡುತ್ತಿದ್ದರು, ಹೊಸ ಮಾಲೀಕರ ಲಾಭದಿಂದ ಇಂಗ್ಲೆಂಡ್ ಪ್ರಪಂಚದ ಶ್ರೀಮಂತ ರಾಷ್ಟ್ರವಾದರೆ ಭಾರತದ ರೈತ ಬಡತನದ ಬೇಗೆಯಲ್ಲಿ ಬೆಂದು ಮತ್ತೊಂದು ದಾರಿಯನ್ನು ಹುಡುಕುವುದಕ್ಕೂ ಕಷ್ಟಪಡಬೇಕಾದ ಸ್ಥಿತಿಗೆ ಬಂದು ನಿಂತ.”(143)

Historical Premises for India’s transition to capitalismನಲ್ಲಿ ಆರನೇ ಪಾವ್ಲಾವ್ ಈ ಪ್ರಕ್ರಿಯೆಯನ್ನು “ನಿರಂತರ ಅ-ಕೈಗಾರೀಕರಣ”(progressive deindustrialization) ಎಂದು ಕರೆಯುತ್ತಾನೆ. ಅವನು ಹೇಳುತ್ತಾನೆ: “ಮಹಾರಾಷ್ಟ್ರದ ಕಾರ್ಮಿಕ ಶಕ್ತಿ ಕೈಗಾರಿಕೆಗಳಿಂದ ಕೃಷಿಯ ಕಡೆಗೆ ಹೊರಳಿದ್ದನ್ನು ಬ್ರಿಟೀಷ್ ಆಡಳಿತಾಧಿಕಾರಿಗಳೂ ಒಪ್ಪಿಕೊಳ್ಳುತ್ತಾರೆ. ಅವರಲ್ಲೊಬ್ಬರು 1830ರಲ್ಲಿ ಅನೇಕ ನೇಕಾರರು ಅಸ್ತಿತ್ವದ ಹುಡುಕಾಟದಲ್ಲಿ ಮರಳಿ ಕೃಷಿ ಕ್ಷೇತ್ರಕ್ಕೆ ತೆರಳಿದರು ಎಂದು ಬರೆಯುತ್ತಾರೆ. ಈಗಾಗಲೇ ಭೂಮಿಯ ಮೇಲಿದ್ದ ಅವಲಂಬನೆಯ ಭಾರ, ಅವನ ಅಭಿಪ್ರಾಯದಂತೆ ಬಹಳಷ್ಟು ಹೆಚ್ಚಿತ್ತು.”(144)

ಈ ಹಿಮ್ಮುಖ ಚಲನೆಯಿಂದಾಗಿ ಗುಳೇ ಹೋದವರು ಅನೇಕ ವಿಧದ ಬಂಧಕ್ಕೊಳಗಾಗಿದ್ದರ ಬಗ್ಗೆ ಅನುಮಾನವೇ ಬೇಡ. ಈ ಪ್ರಕ್ರಿಯೆಯಿಂದಾಗಿ ಅತಿ ಹೆಚ್ಚಿನ ಹೊಡೆತ ಅನುಭವಿಸಿದ್ದು ಆಗಷ್ಟೇ ಶತಶತಮಾನಗಳ ಬಂಧನವನ್ನು ಕಳಚಿಕೊಳ್ಳಲಾರಂಭಿಸಿದ್ದ ದಲಿತ ಜೀತದಾಳುಗಳು. ಹಾಗಾಗಿ ಇದು ಇಡೀ ಕರ್ನಾಟಕದಲ್ಲಿ ಕಾಣಿಸಿಕೊಂಡ ಊಳಿಗಮಾನ್ಯತೆಯ ಪ್ರತಿಗಾಮಿ ಅಲೆ. ದಿನನಿತ್ಯದ ಉಪಯೋಗದ ವಸ್ತುಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದ ಹಳೆ ಮೈಸೂರು ಪ್ರಾಂತ್ಯದಲ್ಲಿ ಇದರ ಪರಿಣಾಮಗಳು ಹೆಚ್ಚಾಗಿ ಕಂಡವು. ಕ್ರೂರ ಅಟ್ಲಾಂಟಿಕ್ ಸಾಗರದ ಅಲೆಯ ಕಾರಣದಿಂದ ಊಳಿಗಮಾನ್ಯತೆಯ ದಡಕ್ಕೆ ಬಂದು ಬಿದ್ದ ನಿಸ್ಸಹಾಯಕ ಗಂಡಸು, ಹೆಂಗಸು, ಮಕ್ಕಳನ್ನು ‘ಮೊತ್ತವಾಗಿ’ ಪರಿವರ್ತಿಸಿಕೊಳ್ಳುವುದಕ್ಕೆ ಭೂಮಾಲೀಕರ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿತು. 
 
ಮುಂದಿನ ವಾರ
ಕೃಷಿಗೆ ಲಕ್ವ ಹೊಡೆದದ್ದು ಭಾಗ 3

No comments:

Post a Comment