Apr 15, 2016

ಮೇಕಿಂಗ್ ಹಿಸ್ಟರಿ: ಕೃಷಿಗೆ ಲಕ್ವ ಹೊಡೆದದ್ದು ಭಾಗ 1

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
15/04/2016


ಹೊಸ ಮೈತ್ರಿ ಅಧಿಕಾರಕ್ಕೆ ಬಂದ ನಂತರ ಕೃಷಿ ವಿಭಾಗ ಅನೇಕ ಏಳುಬೀಳುಗಳನ್ನು ಕಂಡಿತು, ತಿರುಚಿದ ಸ್ಥಿತಿಗೆ ತಲುಪಿತು. ಇದರ ಒಟ್ಟು ಪರಿಣಾಮವೆಂದರೆ ಬಿಕ್ಕಟ್ಟಿನ ಸ್ಥಿತಿ ಉಂಟಾಗಿ ರೈತ – ಕಾರ್ಮಿಕರನ್ನು ವಿಚಲಗೊಳಿಸಿದ್ದು.

ಅ. ಬೆಳೆ ತೆರಿಗೆಯನ್ನು ಭೂತೆರಿಗೆಯನ್ನಾಗಿಸಿದ್ದು (Taxing land in place of yield)

ಬ್ರಿಟೀಷ್ ರಾಜ್ ನ ಮೊದಲ ಪರಿಣಾಮ ಕೃಷಿ ತೆರಿಗೆಯ ರೀತಿಯಲ್ಲಾದ ಬದಲಾವಣೆ. ಹೊಸ ಆಡಳಿತಶಾಹಿ ರೈತರೊಡನೆ ನಡೆಸಿದ ಎಲ್ಲಾ ಮಾತುಕತೆಗಳು, ಒಪ್ಪಂದಗಳನ್ನೂ ಪ್ರೇರೇಪಿಸಿದ್ದು ಬೆಲೆಕಟ್ಟುವಿಕೆಯ ವಿಧಾನವನ್ನು ಬದಲಿಸಬೇಕೆಂಬ ಹಂಬಲ.

ಈ ಹೊಸ ವಿಧಾನದಲ್ಲಿ “ರಾಜ್ಯದೆಲ್ಲೆಡೆ ಇದ್ದ ಒಣ ಭೂಮಿಯವರು ಸರಕಾರಕ್ಕೆ ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಿತ್ತು. ಈ ಮೊತ್ತ ಬೆಳೆಯ ಮೌಲ್ಯದ ಮೂರನೇ ಒಂದಂಶದಷ್ಟಿತ್ತು” ಎಂದು ಶಾಮ ರಾವ್ ತಿಳಿಸುತ್ತಾರೆ. (116)

ಬ್ರಿಟಿಷರ ಪರಾವಲಂಬಿ ಮನಸ್ಥಿತಿ ಖಾಯಂ ಗುತ್ತ (ಗುತ್ತಿಗೆ) ಎಂಬ ಹೊಸ ಗೇಣಿ ಪದ್ಧತಿಯನ್ನು ಹುಟ್ಟು ಹಾಕಿತು. ಖಾಯಂ ಗುತ್ತಿಗೆಯಲ್ಲಿ ನಿಗದಿಪಡಿಸಿದ ಮೊತ್ತದಲ್ಲಿ ಏರುಪೇರುಗಳಿಗೆ ಅವಕಾಶವಿರಲಿಲ್ಲ. (117)

ಬೆಲೆಕಟ್ಟುವಿಕೆಯ ಈ ಹೊಸ ವಿಧಾನ ಹಿಂದಿನಂತಿರಲಿಲ್ಲ. ಮುಂಚೆ ತೆರಿಗೆಯನ್ನಂದಾಜಿಸಲು ಬಿತ್ತಿದ ಬೀಜಗಳೆಷ್ಟು ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು; ಆದರೂ ಕಟಾವಾದ ನಂತರ ಬಂದ ಬೆಳೆಯ ಪ್ರಮಾಣವನ್ನು ನೋಡಿಕೊಂಡು ತೆರಿಗೆಯನ್ನು ಅಂತಿಮಗೊಳಿಸಲಾಗುತ್ತಿತ್ತು. ಈ ರೀತಿಯ ಕೃಷಿ ತೆರಿಗೆ ಪದ್ಧತಿ ಕರ್ನಾಟಕದಲ್ಲಷ್ಟೇ ಅಲ್ಲ, ವಸಾಹತುಪೂರ್ವ ಭಾರತದಾದ್ಯಂತ ಕಾಣಬಹುದಾಗಿತ್ತು. ಪ್ರದೇಶದಿಂದ ಪ್ರದೇಶಕ್ಕೆ ಎಷ್ಟು ಪ್ರತಿಶತಃ ತೆರಿಗೆ ಎಂಬುದರಲ್ಲಿ ವ್ಯತ್ಯಾಸವಿರುತ್ತಿತ್ತು. ವಸಾಹತು ಪೂರ್ವ ಕರ್ನಾಟಕದಲ್ಲಿ ಸಾಮಾನ್ಯವಾಗಿ ಆರನೇ ಒಂದಂಶದಷ್ಟನ್ನು ಸರಕಾರಕ್ಕೆ ಕೊಡಬೇಕಿತ್ತು. ಆರರಲ್ಲಿ ಎರಡು ಅಥವಾ ಮೂರಂಶದಷ್ಟನ್ನು ವಿವಿಧ ಊಳಿಗಮಾನ್ಯ ದೊರೆಗಳಿಗೆ ನೀಡಿದರೆ ಉಳಿದಿದ್ದು ಕೃಷಿ ಮಾಡಿದ ರೈತನಿಗೆ.

ಹೊಸ ವಿಧಾನ ಬೆಳೆಯ ಪ್ರಮಾಣವನ್ನು ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ. ಕಾರಣ? ಕೃಷಿಯಿಂದ ಏರುಮುಖದ ವಾರ್ಷಿಕ ಆದಾಯದ ಹುಡುಕಾಟದಲ್ಲಿದ್ದದ್ದು.

ಹಳೆಯ ವಿಧಾನ ಲೂಟಿ ಮಾಡುವಂತೆ, ಪೀಡಿಸುವಂತೆ ಇದ್ದರೂ ಕೆಟ್ಟ ವರ್ಷಗಳಲ್ಲಿ ರೈತರಿಗೊಂದಷ್ಟು ಉಸಿರಾಡಲು ಅವಕಾಶ ಮಾಡಿಕೊಡುತ್ತಿತ್ತು. ಬೆಳೆಯ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಹೊಸ ವಿಧಾನ ಇರುವ ಎಕರೆಗಳ ಆಧಾರದಲ್ಲಿ ತೆರಿಗೆಯನ್ನು ವಿಧಿಸಿತು. ಜೊತೆಗೆ ಸರಕಾರಕ್ಕೆ ಸಿಗಬೇಕಾದ ಮೊತ್ತದ ಶೇಕಡಾವನ್ನು ಹೆಚ್ಚಿಸಿತು. ಹಾಗಾಗಿ ಬೆಳೆ ಕೈಹತ್ತದ ವರ್ಷಗಳಲ್ಲೂ ತನ್ನ ಪಾಲಿನ ತೆರಿಗೆ ಹಣವನ್ನು ಕಟ್ಟಲೇಬೇಕಾದ ಒತ್ತಡಕ್ಕೆ ರೈತ ಸಿಲುಕಿದ್ದ. ತೆರಿಗೆ ಭಾಗ್ಯದಲ್ಲಿ ಕಡಿಮೆಯಾಗಬಹುದೆಂದು ಕಾಯುತ್ತಿದ್ದ ಅಥವಾ ಸಶಕ್ತ ವಸಾಹತುಶಾಹಿಯ ಪೆಟ್ಟು ಅನುಭವಿಸುತ್ತಿದ್ದ.

ಆ. ರೈತವಾರಿ ಪದ್ಧತಿ, ಇಲ್ಲಿ ಕರುಣೆಗೆ ಅವಕಾಶವಿಲ್ಲ (Ryotwari: nothing benign)

ಬ್ರಿಟೀಷರು ಪರಿಚಯಿಸಿದ ರೈತವಾರಿ ತೆರಿಗೆ ಸಂಗ್ರಹ ವ್ಯವಸ್ಥೆಯ ಬಗ್ಗೆ ಸ್ವಲ್ಪ ಗೊಂದಲಗಳಿವೆ ಮತ್ತು ಅನೇಕ ತಪ್ಪು ಅಭಿಪ್ರಾಯಗಳಿವೆ. ‘ಮಾಂಸಾಹಾರಿ’ ಜಮೀನ್ದಾರಿ ತೆರಿಗೆ ಪದ್ಧತಿಗೆ ಹೋಲಿಸಿದರೆ ‘ಸಸ್ಯಾಹಾರಿ’ ರೈತವಾರಿ ಪದ್ಧತಿ ರೈತರ ‘ಹಕ್ಕುಗಳನ್ನು ಗುರುತಿಸಿದ’ ‘ಪ್ರಗತಿಪರ’ ‘ನ್ಯಾಯಸಮ್ಮತ’ ವ್ಯವಸ್ಥೆ ಎಂಬಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಎಲ್ಲಾ ಇತಿಹಾಸಕಾರರು ಕೆ.ಎನ್.ವೆಂಕಟಸುಬ್ಬ ಶಾಸ್ತ್ರಿಯವರ ಸ್ವಾಮಿಭಕ್ತಿ ಮತ್ತು ಲಿಖಿತ ಸಮರ್ಥನೆಯನ್ನು ಸರಿಗಟ್ಟಲಾರರು. ನಮ್ಮ ಭೂಮಿಯ ಮೇಲಿನ ಬ್ರಿಟೀಷ್ ಆಳ್ವಿಕೆಯನ್ನು ಮಧ್ಯವರ್ತಿ ದೃಷ್ಟಿಕೋನದಿಂದ ಸಮರ್ಥಿಸಿಕೊಂಡ ಇತಿಹಾಸದ ಪುಸ್ತಕಗಳಲ್ಲಿ ಅವರ ಪುಸ್ತಕಗಳು ಅತಿ ಉತ್ತಮ ಉದಾಹರಣೆ.

ರೈತವಾರಿ ತೆರಿಗೆ ಪದ್ಧತಿಯನ್ನು ಪ್ರಾರಂಭಿಸಿದ್ದು ಕೊಲೋನಲ್ ರೀಡ್. ರೀಡ್ 1792ರಲ್ಲಿ ಬರ್ಮಹಲ್ ಜಿಲ್ಲೆಯ ಪ್ರಥಮ ಬ್ರಿಟೀಷ್ ಕಲೆಕ್ಟರ್ ಆಗಿದ್ದ. ತಮಿಳು ದೇಶದ ಬರ್ಮಹಲ್ ಅನ್ನು ಬ್ರಿಟೀಷರು ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನನ್ನು ಸೋಲಿಸಿದ ನಂತರ ವಶಪಡಿಸಿಕೊಂಡಿದ್ದರು. ಮನ್ರೋ, ರೀಡ್ ನ ಕೈಕೆಳಗೆ ಕೆಲಸ ಮಾಡಿದ್ದ. ರೈತವಾರಿ ಪದ್ಧತಿಯ ಬಗ್ಗೆ ಮನ್ರೋ ರೀಡ್ ನ ಕಿವಿಯೂದಿದನೋ ಅಥವಾ ರೀಡ್ ಮನ್ರೋನ ಕಿವಿಕಚ್ಚಿದನೋ ನಮಗೆ ಅಷ್ಟೊಂದು ಮುಖ್ಯವಲ್ಲ. ಇಲ್ಲಿ ಟಿಪ್ಪಣಿ ಮಾಡಿಕೊಳ್ಳಬೇಕಾದ ಅಂಶವೆಂದರೆ ಮೈಸೂರು ಸಾಮ್ರಾಜ್ಯದ ಭಾಗವೊಂದನ್ನು ಆಕ್ರಮಿಸಿದ ಕ್ಷಣವೇ ಬ್ರಿಟೀಷರಿಗೆ ಜಮೀನ್ದಾರಿ ತೆರಿಗೆ ಪದ್ಧತಿಯನ್ನು ಮುಂದುವರಿಸುವುದು ಸಾಧ್ಯವಿಲ್ಲ ಎನ್ನುವುದರ ಅರಿವಾಗಿತ್ತು. ಕಾರಣ ಸ್ಪಷ್ಟವಿತ್ತು. ಮೈಸೂರಿನಲ್ಲಾಗಲೇ ಹಳೆಯ ಜಮೀನ್ದಾರರು ನಿರ್ನಾಮವಾಗಿದ್ದರು. ಅವರ ನಿರ್ನಾಮದ ನಂತರ ತೆರಿಗೆ ಸಂಗ್ರಹಿಸುತ್ತಿದ್ದುದು ಮೈಸೂರು ಕಂದಾಯ ಇಲಾಖೆಯೇ ಹೊರತು ಪಾಳೇಗಾರರಲ್ಲ. ರೈತವಾರಿ ಪದ್ಧತಿಯ ರೀತಿಯಲ್ಲಿಯೇ – ಸರಕಾರ ಕೃಷಿಕರಿಂದ ನೇರವಾಗಿ ತೆರಿಗೆ ಕಟ್ಟಿಸಿಕೊಳ್ಳುವುದು, ಊರ ಪಟೇಲರ ಮತ್ತು ಶಾನುಭೋಗರ ಸಹಾಯದಿಂದ – ಒಂದು ಪದ್ಧತಿ ಅದಾಗಲೇ ರೂಢಿಯಲ್ಲಿತ್ತು. ವಾಸ್ತವದಲ್ಲಿ ಬ್ರಿಟೀಷರು ಕೊಯಮತ್ತೂರು ಜಿಲ್ಲೆಯಲ್ಲಿ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತರಲು ಪ್ರಯತ್ನಿಸಿದರು. ಅದಕ್ಕೆ ತಕ್ಷಣವೇ ಪ್ರತಿರೋಧ ಎದುರಾಯಿತು. ಜಿಲ್ಲೆಯ ಗೆಜೆಟೀಯರ್ ಹೇಳುತ್ತಾರೆ – ಹಳ್ಳಿಗಳ ಭೂಮಾಲೀಕರು ಮತ್ತು ಕೃಷಿ ಕಾರ್ಮಿಕರು ಈ ಪದ್ಧತಿಯನ್ನು ವಿರೋಧಿಸಿದ್ದಕ್ಕೆ ಕಾರಣ ಭೂಮಿಯ ಮೇಲಿನ ಅವರ ಹಕ್ಕುಗಳಿಗೆ ಚ್ಯುತಿ ಬರುತ್ತದೆ ಎಂಬುದು. ಈ ಹಳೆಯ ತೆರಿಗೆ ಪದ್ಧತಿಯನ್ನೇ ಮುಂದುವರಿಸಿದ ಥಾಮಸ್ ಮನ್ರೋ ಕೆಲವು ನವೀನ ಅಂಶಗಳನ್ನು ಸೇರಿಸಿ ಬ್ರಿಟೀಷ್ ಗುರುತು ಅಚ್ಚಾಗುವಂತೆ ಮಾಡುವಲ್ಲಿ ಸಫಲನಾದ. ಉದಾಹರಣೆಗೆ ಹಿಂದಿನ ಭಾಗದಲ್ಲಿ ನೋಡಿದಂತೆ ಕೃಷಿ ತೆರಿಗೆ ಪದ್ಧತಿ ಭೂಮಿಯ ಮೇಲೆ ನಿರ್ಧರಿಸಲಾಯಿತೇ ಹೊರತು ಬೆಳೆಯ ಮೇಲಲ್ಲ. ರೈತವಾರಿ ಪದ್ಧತಿಯಲ್ಲಿ ಭೂತೆರಿಗೆಯನ್ನು ನಿರ್ಧರಿಸುವಲ್ಲಿ ಬ್ರಿಟೀಷರ ನಿರಂಕುಶ ವ್ಯಕ್ತಿತ್ವ ಎದ್ದು ಕಾಣಿಸಿತು.

ಕುರುಪ್ ಮತ್ತು ಶ್ಯಾಮ್ ಭಟ್ ಹೇಳುವಂತೆ ರೈತವಾರಿ ಪದ್ಧತಿ ಉಳುವವನೊಡನೆ ಸರಕಾರ ಮಾಡಿಕೊಂಡ ಒಪ್ಪಂದವಾಗಿರಲಿಲ್ಲ. ರೈತವಾರಿ ಪದ್ಧತಿ ಭೂಮಾಲೀಕನೊಡನೆ ಒಪ್ಪಂದ ಮಾಡಿಕೊಂಡಿತು. ಹತ್ತೊಂಬತ್ತನೇ ಶತಮಾನದ ಮೊದಲ ಭಾಗದಲ್ಲಿ ಭೂಮಿಯ ಒಡೆತನ ಪ್ರಮುಖವಾಗಿದ್ದದ್ದು ಭೂಮಾಲೀಕರ ಬಳಿ; ಸ್ವಲ್ಪ ಭಾಗ ಮಾತ್ರ ನೇರವಾಗಿ ರೈತರ ಒಡೆತನದಲ್ಲಿತ್ತು. ತುಳುನಾಡಿನ ಕೃಷಿ ಸಂಬಂಧಗಳ ಬಗ್ಗೆ ಅಧ್ಯಯನ ನಡೆಸಿದ ಚಂದ್ರಶೇಖರ ಬಿ ದಾಮ್ಲೆ ಹೇಳುತ್ತಾರೆ: “…. ಅಸ್ತಿತ್ವದಲ್ಲಿದ್ದ ಭೋಗ್ಯವನ್ನು ನಿಯಮದಡಿ ತರುವ ಮೂಲಕ ಪಟ್ಟೇದಾರರು ಮತ್ತು ಭೂಮಾಲೀಕರ ಅಂತಸ್ತನ್ನು ಮರುಸ್ಥಾಪಿಸಲಾಯಿತು. ಗುತ್ತಿಗೆದಾರ/ ಬಾಡಿಗೆದಾರರ ವಿಚಾರವನ್ನು ಇತ್ಯರ್ಥಗೊಳಿಸಲಿಲ್ಲ.” (119A) ಹಾಗಾಗಿ ರೈತವಾರಿ ಪದ್ಧತಿಯಲ್ಲಿ “ಪ್ರಗತಿಪರ” “ನ್ಯಾಯಪರ” “ರಾಜನೀತಿ”ಗಳ್ಯಾವುದೂ ಇರಲಿಲ್ಲ. ಜಮೀನ್ದಾರಿ ಪದ್ಧತಿ ಮಾಡಿದಂತೆಯೇ ಈ ರೈತವಾರಿ ಪದ್ಧತಿಯೂ ಅಸ್ತಿತ್ವದಲ್ಲಿದ್ದ ಭೂಮಾಲೀಕರ ಕಡೆಗೆ ಸ್ನೇಹಹಸ್ತ ಚಾಚಿತು; ಭಾರತದ ಇತರೆ ಭಾಗಗಳಲ್ಲಿ ಮಹಲ್ ವಾರಿ ಮತ್ತು ಮಿರಸ್ ದಾರಿ ಪದ್ಧತಿಗಳು ಮಾಡಿದಂತೆ. ತೆರಿಗೆಯಲ್ಲಿನ ಅಪಾರ ಏರಿಕೆ ರೈತರನ್ನು ಸಾಲಗಾರರನ್ನಾಗಿ ಮಾಡಿತು ಮತ್ತು ನಿಧಾನವಾಗಿ ಭೂಮಿಯು ಬಡ್ಡಿ ವ್ಯಾಪಾರಿಗಳ ಕೈಸೇರಿತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಬಾಂಬೆ, ಮದ್ರಾಸ್ ಪ್ರಾಂತ್ಯದಲ್ಲಿ ಮತ್ತು ಮೈಸೂರು ಸಾಮ್ರಾಜ್ಯದಲ್ಲಿ ಜಾರಿಗೆ ಬಂದ ರೈತವಾರಿ ಪದ್ಧತಿ ಅರೆಊಳಿಗಮಾನ್ಯ ಪದ್ಧತಿಯ ಚಲನೆಗೆ ನೆರವಾಯಿತು.

ಥಾಮಸ್ ಮನ್ರೋ ಜೊತೆಗೆ ಹೊರಬಂದ ಮತ್ತೊಬ್ಬ ಮದ್ರಾಸ್ ಮೂಲದ ಇಂಗ್ಲೀಷ್ ತಿಮಿಂಗಲ ಆರ್. ರಿಚರ್ಡ್ಸ್ ರೈತವಾರಿ ಪದ್ಧತಿಯ ಕಾರ್ಯವೈಖರಿಯ ಬಗ್ಗೆ ಹಲವಾರು ಉಪಯುಕ್ತ ಒಳನೋಟಗಳನ್ನು ನೀಡುತ್ತಾನೆ. ಸೆಂಟ್ ಜಾರ್ಜ್ ಕೋಟೆಯೊಳಗೆ ನಡೆಯುತ್ತಿದ್ದ ಹಾರಾಟಗಳ ಬಗ್ಗೆ ಬ್ರಿಟೀಷನೊಬ್ಬ ಹೀಗೂ ಬರೆದುಬಿಡಬಹುದಾ? ಎಂಬ ಅಚ್ಚರಿ ಮೂಡಿಸುತ್ತಾನೆ: “ರೈತವಾರಿ ಪದ್ಧತಿಯ ಮೂಲೋದ್ದೇಶ ದೇಶದಿಂದ ಸಾಧ್ಯವಾದಷ್ಟು ಹೆಚ್ಚಿನ ಆದಾಯವನ್ನು ಲೂಟಿ ಮಾಡುವುದು…..ಈ ಪದ್ಧತಿಯಲ್ಲಿ ತೆರಿಗೆ ಕಟ್ಟುವುದು ವರುಷದಿಂದ ವರ್ಷಕ್ಕೆ ಕಷ್ಟವಾಗುತ್ತದೆಂಬ ಅರಿವು ನಿಧಾನಕ್ಕೆ ಆಗುತ್ತದೆ. ವ್ಯವಸ್ಥೆ ಕೊಳೆಯುವುದನ್ನು ಯಾರೂ ತಡೆಗಟ್ಟಲಾರರು.” (118)

ತಲೆತೂರಿಸಿದ ಈ ರೈತವಾರಿ ಪದ್ಧತಿ ಮತ್ತಷ್ಟು ಹೀನವಾದ ಶರಾತ್ (Sharat) ಪದ್ಧತಿಗೆ ಕೆಂಪು ಹಾಸಿನ ಸ್ವಾಗತವನ್ನು ಕೋರಿತು ಎಂಬುದರ ಕುರಿತು ಕುರುಡಾಗಲು ಸಾಧ್ಯವಿಲ್ಲ.

ರೈತವಾರಿ ಪದ್ಧತಿಯ ಮೂಲಕ ಊಳಿಗಮಾನ್ಯತೆಯ ಕಡೆ ಸ್ನೇಹ ಹಸ್ತ ಚಾಚಲಾಯಿತು. ಮಾಜಿ ಭೂಮಾಲೀಕರ ಬೆಳವಣಿಗೆಯ ಜೊತೆಗೆ ಹೊಸ ಬಡ್ಡಿವ್ಯಾಪಾರಿ ಭೂಮಾಲೀಕರು ತಲೆಎತ್ತಿದರು, ಸ್ವಾರ್ಥದ ಪಕ್ಕೆಯಿಂದ.

ಕಟಾವಿನ ಮೊದಲೇ ಸರಕಾರಕ್ಕೆ ಹಣ ಪಾವತಿಸಬೇಕಾದ ಅನಿವಾರ್ಯತೆಯಿಂದ ರೈತರ ಮೇಲಾದ ಹೊರೆಯ ಬಗ್ಗೆ ಸಿದ್ಧಲಿಂಗ ಸ್ವಾಮಿ ವಿವರಿಸುತ್ತಾರೆ. ಹಣ ತುಂಬಲು ರೈತರು ಸಾಹುಕಾರರ ಮೊರೆ ಹೋದರು ಮತ್ತು ಸ್ವಲ್ಪ ಸಮಯದಲ್ಲೇ ಈ ಬಡ್ಡಿ ವ್ಯಾಪಾರಿಗಳ ಬಳಿ ದೊಡ್ಡ ಸಾಲಗಾರರಾಗಿಬಿಟ್ಟರು. ರೈತರು ತಮ್ಮ ‘ಹುಜೂರ್’ (ಮೈಸೂರು ರಾಜ) ಬಳಿಗೆ ಗುಂಪಿನಲ್ಲೋಗಿ ದೂರು ನೀಡಿದರು. ವ್ಯಂಗ್ಯವೆಂದರೆ 1826ರಲ್ಲಿ ಮೈಸೂರು ಪೀಠದ ಮೇಲೆ ಆಸೀನರಾಗಿದ್ದ ಇವರ ‘ಜೀ ಹುಜೂರ್’ ಬಡ್ಡಿವ್ಯಾಪಾರಿಗಳ ಬಳಿ 4 ಲಕ್ಷ ಕೆಪಿ (ಕಂತಾರೇಯ ಪಗೋಡ) ಸಾಲ ಮಾಡಿಕೊಂಡಿದ್ದ! (119)

ಕರಾವಳಿಯಲ್ಲಿನ ಬೆಳವಣಿಗೆಗಳು ಇದೇ ರೀತಿಯಲ್ಲಿದ್ದವು ಎಂದು ತಿಳಿಸುತ್ತಾರೆ ಮಾಲತಿ ಕೆ ಮೂರ್ತಿ. 1800ರ ಸ್ಟೋಕ್ಸ್ ವರದಿಯ ಆಧಾರದಲ್ಲಿ ಮಾಲತಿ ನಿರ್ದಿಷ್ಟವಾಗಿ ಗೌಡ ಸಾರಸ್ವತರ ಬಗ್ಗೆ ಬರೆಯುತ್ತಾರೆ: “ಜಿಲ್ಲೆಗೆ ವರ್ತಕರಾಗಿ ಬಂದ ಜನರಿಗೆ ಭೂಮಿ ಖರೀದಿಸುವುದು ಲಾಭದಾಯಕ ಮತ್ತು ಗೌರವ ತರುವಂತದು ಎನ್ನಿಸಿತು. ಭೂಮಿಯನ್ನು ಹೊಂದಿದ್ದರೆ ನಿರ್ದಿಷ್ಟ ಮೊತ್ತವನ್ನು ಪಾವತಿಸಿದ ನಂತರ ಒಟ್ಟು ಉತ್ಪಾದನೆಯ ಬಹುಭಾಗವನ್ನು ಸಂತಸದಿಂದನುಭವಿಸಬಹುದೆಂದು ತಿಳಿದುಕೊಂಡರು. ಹಾಗಾಗಿ ಭೂಮಿ ಖರೀದಿಸುವುದು ಅವರಿಗೆ ಪ್ರಿಯವಾದ ಕೆಲಸವಾಯಿತು. ಸರಕಾರೀ ಕೆಲಸದಲ್ಲಿರುವವರೂ ಭೂಮಿ ಖರೀದಿಸುವ ಸ್ಪರ್ಧೆಯ ಮುಂಚೂಣಿಯಲ್ಲಿದ್ದರು. ಈ ಪ್ರಕ್ರಿಯೆಯಲ್ಲಿ ಅರಿವಿಲ್ಲದ ರೈತರು ಹೊರದೂಡಲ್ಪಟ್ಟರು; ಭೂಮಿಯ ಹೆಚ್ಚಿನ ಭಾಗ ಕೃಷಿಕ ವರ್ಗದ ಕೈಯಿಂದ ವರ್ತಕ ವರ್ಗ ಮತ್ತು ಇತರೆ ವರ್ಗಗಳ ಕೈಸೇರಿತು.” (120)

ರೈತವಾರಿ ಪದ್ಧತಿ ಪೀಡಿಸುವ ಪದ್ಧತಿ. ಅದರಲ್ಲಿ ಕರುಣೆಯ ಅಂಶವಿರಲಿಲ್ಲ. ಅದೇ ರೀತಿ ಥಾಮಸ್ ಮನ್ರೋನ ಬಗ್ಗೆ ‘ಗೌರವಾನ್ವಿತ’ ಅಂಶಗಳಿಲ್ಲ. ಅಡಿಯಾಳಾಗಿದ್ದ ಭಾರತದ ರೈತರ ಮೇಲೆ ಯುದ್ಧ ಸಾರಿದ್ದ ಬ್ರಿಟೀಷ್ ‘ಝಾರ್’ ಆಗಿದ್ದನಾತ. (ಝಾರ್/czar: ರಷ್ಯಾದ ಚಕ್ರವರ್ತಿ) 
 
ಮುಂದಿನ ವಾರ :
ಕೃಷಿಗೆ ಲಕ್ವ ಹೊಡೆದದ್ದು ಭಾಗ 2

No comments:

Post a Comment