Apr 1, 2016

ಮೇಕಿಂಗ್ ಹಿಸ್ಟರಿ: ಶೋಷಕ ತ್ರಿಮೂರ್ತಿಗಳು ಮತ್ತು ಪ್ರತಿಗಾಮಿ ಸರಕಾರ

saket rajan ashok kr
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
01/04/2016
ವಸಾಹತಿನ ವಿಜಯ ಆಳ್ವಿಕೆಯ ಮೈತ್ರಿಗಳನ್ನು ಬದಲಿಸಿತು. ಬ್ರಿಟೀಷ್ ಆಳ್ವಿಕೆಗೂ ಮುನ್ನ ಊಳಿಗಮಾನ್ಯ ಮತ್ತು ವರ್ತಕ ವರ್ಗ ಮೈಸೂರು ಸಾಮ್ರಾಜ್ಯದ ಅಧಿಕಾರಗಳನ್ನಂಚಿಕೊಂಡಿತ್ತು. ಕರ್ನಾಟಕದ ಉಳಿದ ಭಾಗಗಳಲ್ಲಿ ಊಳಿಗಮಾನ್ಯ ವರ್ಗ ಏಕಸಾಮ್ಯತೆ ಮೆರೆದಿತ್ತು. ಬ್ರಿಟೀಷರ ಆಗಮನ ಇದನ್ನು ಬದಲಿಸಿತು. ಊಳಿಗಮಾನ್ಯ ವರ್ಗಗಳನ್ನು ಉಳಿಸಿಕೊಂಡ ಬ್ರಿಟೀಷರು ವರ್ತಕರ ಒಂದು ವರ್ಗವನ್ನಷ್ಟೇ ಉಳಿಸಿಕೊಂಡು ಉಳಿದವರನ್ನು ಬುಡಸಮೇತ ಕಿತ್ತುಹಾಕಿದರು. ಇಡೀ ಕರ್ನಾಟಕದಲ್ಲಿ ಆಳ್ವಿಕೆಯ ಜಾಗಕ್ಕೆ ಬಂದದ್ದು ವಸಾಹತು – ಮಧ್ಯವರ್ತಿ – ಊಳಿಗಮಾನ್ಯ ಮೈತ್ರಿ.

ಹದಿನೆಂಟನೇ ಶತಮಾನದ ಕೊನೆಯಲ್ಲಿ ಮೈಸೂರು ಸಂಸ್ಥಾನದ ಭೂಮಾಲೀಕ ವರ್ಗ – ಈಗಾಗಲೇ ವರ್ತಕರ ಜೊತೆಗಿದ್ದ ಭೂಮಾಲೀಕ ವರ್ಗ – ಹೊಸ ಮೈತ್ರಿಯ ನಾಯಕತ್ವಕ್ಕೆ ಶರಣಾಯಿತು.

ಈ ಹೊಸ ವಿಧಾನದಲ್ಲಿ, ವಸಾಹತು ಆಕ್ರಮಣದ ನಂತರ ಮೈತ್ರಿಯ ಮುಂದಾಳತ್ವ ವಹಿಸಿದ್ದು ವಸಾಹತುಶಾಹಿ; ತ್ರಿಮೂರ್ತಿಗಳ ಆಳ್ವಿಕೆಯಲ್ಲಿ ಊಳಿಗಮಾನ್ಯ ದೊರೆಗಳು ಮತ್ತು ಮಧ್ಯವರ್ತಿಗಳು ಸಹಕಾರ ನೀಡುತ್ತ ತಮ್ಮ ಮಿತಿಯಿದ್ದ ಸ್ಥಾನದಲ್ಲೇ ಸಂತಸ ಕಂಡುಕೊಂಡರು.

ಈ ಎರಡು ಯುಗಗಳ ಮಧ್ಯೆ ಸರಕಾರದ ರಚನೆ ಮತ್ತು ನೀತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿತ್ತು.

ಈ ಮೈತ್ರಿಯನ್ನು ಮುನ್ನಡೆಸುತ್ತಿದ್ದವರಲ್ಲಿದ್ದ ಪ್ರಮುಖ ಅಂಶವೆಂದರೆ, ಮೈತ್ರಿಯನ್ನು ಕಟ್ಟುವುದಕ್ಕೂ ಅವರು ಮುಖ್ಯ ಕಾರಣವಾಗಿದ್ದರು. ಜೊತೆಗೆ ತಮ್ಮ ರಾಜಕೀಯ ಮತ್ತು ಆರ್ಥಿಕ ಅವಶ್ಯಕತೆಗಳಿಗನುಗುಣವಾಗಿ ಮೈತ್ರಿಯ ಪಾಲುದಾರರಾಗಿದ್ದರು. ಇಲ್ಲಿ ವಸಾಹತು ಬಂಡವಾಳದ ಅವಶ್ಯಕತೆಗಳಿಗನುಗುಣವಾಗಿ. ನಾವೀಗಾಗಲೇ ನೋಡಿದಂತೆ, ವಿವಿಧ ಊಳಿಗಮಾನ್ಯ ದೊರೆಗಳು ಮೈತ್ರಿಯ ಭಾಗವಾಗಿದ್ದು ಬ್ರಿಟೀಷ್ ಕೈಗಾರಿಕಾ ಬಂಡವಾಳದ ಪರವಾಗಿರುತ್ತೇವೆಂದು ಒಪ್ಪಿದ ಮೇಲೆ ಮಾತ್ರ. ಈ ಋಣದ ಕಾರಣದಿಂದ ಊಳಿಗಮಾನ್ಯತೆಯಲ್ಲಿ ಬದಲಾವಣೆಗಳಾಯಿತು. ಭೂಮಾಲೀಕರು ತಮ್ಮ ಸೈನ್ಯವನ್ನು ಬಿಟ್ಟುಕೊಡಬೇಕಾಯಿತು, ತಮ್ಮ ನ್ಯಾಯದಾನದ ರೀತಿಯನ್ನು ವಸಾಹತಿನ ನ್ಯಾಯಾಲಯಗಳಿಗೆ ಬಿಟ್ಟುಕೊಟ್ಟರು, ಮುಂಚೆ ಅನುಭವಿಸುತ್ತಿದ್ದ ಅನೇಕ ಊಳಿಗಮಾನ್ಯ ಸೌಲತ್ತುಗಳನ್ನು ಶರಣಾಗಿಸಿದರು. ಊಳಿಗಮಾನ್ಯತೆಯ ಈ ಆಯ್ದ ಬದಲಾವಣೆಗಳು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದೆ, ಮತ್ತು ಇಪ್ಪತ್ತನೇ ಶತಮಾನದಲ್ಲಿನ ಅಂತರಾಷ್ಟ್ರೀಯ ಬಂಡವಾಳದ ಏಕಸ್ವಾಮ್ಯತೆ ಮತ್ತು ಅರೆವಸಾಹತುಶಾಹಿತನದ ದಿನಗಳಲ್ಲಿ ಬದಲಾವಣೆ ಮತ್ತಷ್ಟು ಚುರುಕುಗೊಂಡಿದೆ; ಅದನ್ನು ಮೇಕಿಂಗ್ ಹಿಸ್ಟರಿಯ ಮೂರನೇ ಸಂಪುಟದಲ್ಲಿ ನೋಡೋಣ. ಉದಾಹರಣೆಗೆ, ಮಧ್ಯವರ್ತಿ ಬಂಡವಾಳಶಾಹಿಗಳು ಫ್ಯೂಡಲ್ ಮೂಲದಿಂದ ಬಂದಿದ್ದು ಸಾಮಾಜಿಕ ಹೊಕ್ಕುಬಳಕೆಯ ಕಾರಣದಿಂದ; ಫ್ಯೂಡಲ್ ದೊರೆಗಳು ತಮ್ಮ ಹಳೆಯ ವರ್ಗಸ್ಥಾನವನ್ನು ತ್ಯಜಿಸಿ ಸಂಪೂರ್ಣ ಹೊಸ ಸ್ಥಾನದಲ್ಲಿ ಸ್ಥಾಪಿತರಾಗಿ ಉತ್ಪಾದನೆಯ ಜೊತೆ ಹೊಸ ಸಂಬಂಧವೇರ್ಪಡಿಸಿಕೊಂಡರು. ಆದಾಗ್ಯೂ ಊಳಿಗಮಾನ್ಯತೆಯಲ್ಲಿ ಬದಲಾವಣೆಗಳನ್ನು ತಂದ ವಸಾಹತುಶಾಹಿ ಊಳಿಗಮಾನ್ಯ ಪದ್ಧತಿಯನ್ನು ಇಲ್ಲವಾಗಿಸುವ ಪ್ರಯತ್ನವನ್ನು ಮಾಡಿರಲಿಲ್ಲ ಎಂಬಂಶವನ್ನು ಮರೆಯಬಾರದು.

ವಸಾಹತುಶಾಹಿ ಭಾರತದಲ್ಲಿನ ಸರಕಾರಗಳ ರಚನೆಯನ್ನು ಮಾರ್ಪಡಿಸಿತು. ಭಾರತದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಐಕ್ಯತೆಯ ಕೇಂದ್ರ ಸರಕಾರವೊಂದರ ರಚನೆಯಾಯಿತು. ಚದುರಿಹೋಗಿದ್ದ, ಭಾಗಗಳಾಗಿದ್ದ ಊಳಿಗಮಾನ್ಯ ರಾಜ್ಯಗಳನ್ನು ಪುನರ್ ರಚಿಸುವ ಮೂಲಕ ಈ ಹೊಸ ಕೇಂದ್ರ ಸರಕಾರದ ರಚನೆಯಾಯಿತು. ಈ ಸರಕಾರದ ರೂಪುಗೊಳ್ಳುವಿಕೆಗೆ ಕಾರಣವಾದದ್ದು ವಿಕೇಂದ್ರೀಕರಣದ ಆಧಾರದಲ್ಲಿ ರಚಿತವಾಗಿದ್ದ ಊಳಿಗಮಾನ್ಯ ಸೈನ್ಯದ ಅಳಿವು. ಕೆಲವರು ಇದು ಊಳಿಗಮಾನ್ಯತೆಯನ್ನು ನಿಶ್ಯಕ್ತಗೊಳಿಸಿತು ಎಂದು ಭಾವಿಸಿದರು. ಆದರೆ ವಾಸ್ತವವೆಂದರೆ ಇದು ಊಳಿಗಮಾನ್ಯತೆಗೆ ಹೊಸ ಶಕ್ತಿ ತುಂಬಿತು. ಮೇಲ್ನೋಟಕ್ಕೆ ಊಳಿಗಮಾನ್ಯರ ಸೈನ್ಯದ ಅಳಿವು ಊಳಿಗಮಾನ್ಯತೆಯನ್ನು ಬಲಹೀನರಂತೆ ಮಾಡಿದರೂ ವಾಸ್ತವ ಅದರ ವಿರುದ್ಧದಂತಿತ್ತು ಎನ್ನುವುದು ಸತ್ಯ. ಊಳಿಗಮಾನ್ಯ ಸೈನ್ಯವನ್ನು ವಿಸರ್ಜಿಸಿದ್ದು ಹೊಸ ಕೇಂದ್ರೀಕೃತ, ಶಕ್ತಿಶಾಲಿ ಸೈನ್ಯದ ನಿರ್ಮಾಣಕ್ಕಾಗಿ. ಭೂಮಾಲೀಕರನ್ನು ಪ್ರತಿಗಾಮಿ ವರ್ಗಗಳ ಮೈತ್ರಿಯ ಕಡೆಗೆ ಸೆಳೆದುಕೊಂಡ ಬ್ರಿಟೀಷ್ ವಸಾಹತುಶಾಹಿ ಹೊಸದಾಗಿ ರಚಿತವಾದ ಕೇಂದ್ರ ಸರಕಾರದ ನೆರವಿನಿಂದ ಊಳಿಗಮಾನ್ಯತೆಯನ್ನು ತಾನೇ ಮುಂದೆ ನಿಂತು ರಕ್ಷಿಸಿತು. ವಸಾಹತುಶಾಹಿ, ಭೂಮಾಲೀಕರು ಮತ್ತು ಮಧ್ಯವರ್ತಿಗಳ ಪರವಾಗಿತ್ತು. ವಸಾಹತುಶಾಹಿ ಭಾರತದ ಜನಸಮೂಹಕ್ಕೆ ಕೊಟ್ಟ ಬಹುದೊಡ್ಡ ಐತಿಹಾಸಿಕ ಹೊಡೆತವಾಗಿತ್ತಿದು. ಈಗಿನಿಂದ, ದೇಶದ ಯಾವುದೇ ಭಾಗದಲ್ಲಿ ಒಬ್ಬ ಸಣ್ಣ ಭೂಮಾಲೀಕನ ವಿರುದ್ಧದ ಹೋರಾಟವನ್ನು ದಮನಿಸಲು ಭಾರತದ ಕೇಂದ್ರ ಸರಕಾರವೇ ತತ್ ಕ್ಷಣ ಮಧ್ಯಪ್ರವೇಶಿಸುತ್ತಿತ್ತು. ಸಾಯುತ್ತಿದ್ದ ಭೂಮಾಲೀಕ ವರ್ಗಕ್ಕೆ ಹೊಸದಾಗಿ ಬಲ ತುಂಬಿ ಪುನರ್ಜನ್ಮ ನೀಡಲಾಯಿತು. ವಸಾಹತು ಬಂಡವಾಳದ ಶಕ್ತಿ ಮತ್ತು ಪ್ರತಿಗಾಮಿ ಭಾರತ ಸರಕಾರದ ಅಗಾಧ ಸಂಪನ್ಮೂಲಗಳು ಊಳಿಗಮಾನ್ಯತೆಯನ್ನು ರಕ್ಷಿಸಿ, ಎಚ್ಚೆತ್ತ ರೈತ ಕಾರ್ಮಿಕರನ್ನು ದಮನಿಸಲು ಉಪಯೋಗಿಸಬಹುದಾಗಿತ್ತು. ಕೆಲಸಕ್ಕೆ ಬಾರದ ಭೂಮಾಲೀಕರೆಲ್ಲ ರಾಣಿಯ ಪಾದದ ಬಳಿ ಎದ್ದು ನಿಂತರು. ಈ ಪ್ರಮುಖ ಐತಿಹಾಸಿಕ ಬದಲಾವಣೆಗಳು ಭಾರತದ ಜನಸಮೂಹದಲ್ಲಿನ ಊಳಿಗಮಾನ್ಯತೆ ವಿರೋಧಿ ಅಲೆಗಳ ಅಬ್ಬರವನ್ನು ಕಡಿಮೆಗೊಳಿಸಿಬಿಟ್ಟಿತು.

ಹದಿನೇಳನೇ ಶತಮಾನದ ಅಂತ್ಯದಲ್ಲಿ ಚಿಕ್ಕದೇವರಾಜ ಒಡೆಯರ್ ಪ್ರಾರಂಭಿಸಿದ್ದ ಸ್ಥಳೀಯತೆಯ ರೀತಿಯನ್ನು (Regional Phenomenon) ಇನ್ನು ಮುಂದೆ ನಿರೀಕ್ಷಿಸಲು ಸಾಧ್ಯವಿಲ್ಲ. ಕಾರಣ ಭಾರತದ ಭೂಮಾಲೀಕರೆಲ್ಲ ಆಂತರಿಕ ಬಂಧದ ಹೆಸರಿನಲ್ಲಿ ಒಂದಾಗಿಬಿಟ್ಟಿದ್ದರು. (106)

ಚಿಕ್ಕ ಪುಟ್ಟ ಪ್ರದೇಶಗಳು ಪ್ರತ್ಯೇಕ ರಾಷ್ಟ್ರೀಯತೆ ಘೋಷಿಸಿಕೊಂಡು ಸ್ವತಂತ್ರಕ್ಕಾಗಿ ಹೋರಾಡುವ ಕಾಲವೂ ಮುಗಿಯಿತು ಎನ್ನುವುದು ಇದರರ್ಥವಾಗಿತ್ತು. ರಾಷ್ಟ್ರೀಯತೆಯ ಭವಿಷ್ಯ ಪರಸ್ಪರರ ನಡುವಿನ ಐಕ್ಯತೆಯ ಮೇಲೆ ಅವಲಂಬಿತವಾಗಿತ್ತು. ಭಾರತದಾದ್ಯಂತ ಚದುರಿಹೋಗಿದ್ದ ರೈತ – ಕಾರ್ಮಿಕರಲ್ಲೂ ಏಕತೆಯ ಅವಶ್ಯಕತೆಯಿತ್ತು. ಊಳಿಗಮಾನ್ಯತೆ ವಿರೋಧಿ ಹೋರಾಟಗಳು ಇನ್ನೂ ಶೈಶಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ಊಳಿಗಮಾನ್ಯತೆ ರದ್ದಾಗಬೇಕಾದ ಅನಿವಾರ್ಯತೆಯಿತ್ತು. ಇತಿಹಾಸದ ದೃಷ್ಟಿಯಿಂದ ಹೇಳುವುದಾದರೆ ಸಮಗ್ರ ಭಾರತದ ಪ್ರಜ್ಞೆ ಕೆಲಸ ಮಾಡಿ ರೈತ ಕಾರ್ಮಿಕರಿಗೆ ಹಾದಿ ತೋರಬೇಕಿತ್ತು.

ಈ ಹೊಸ ಸರಕಾರದ ರಚನೆಯಿಂದ ಊಳಿಗಮಾನ್ಯ ವಿರೋಧಿ ಹೋರಾಟ ವಸಾಹತಿನ ವಿರುದ್ಧದ ಹೋರಾಟದೊಂದಿಗೆ ಮಿಳಿತವಾಗಬೇಕಾಯಿತು. ಒಂದನ್ನೊರತುಪಡಿಸಿ ಮತ್ತೊಂದಿರಲು ಸಾಧ್ಯವಿರಲಿಲ್ಲ, ಒಂದನ್ನು ಬುಡಸಮೇತ ಕಿತ್ತು ಹಾಕದೆ ಮತ್ತೊಂದನ್ನು ಇಲ್ಲವಾಗಿಸುವುದು ಸಾಧ್ಯವಿರಲಿಲ್ಲ. ಅದೇನು ಪ್ರಜ್ಞಾಪೂರ್ವಕವಾಗಿ ನಡೆಯಿತೋ ಅಥವಾ ತಕ್ಷಣದ ಪ್ರತಿಕ್ರಿಯೆಯೋ ಗೊತ್ತಿಲ್ಲ, ಈ ಅಂಶ ಸ್ವತಂತ್ರಕ್ಕಾಗಿ ಹಂಬಲಿಸಿದ ಕರ್ನಾಟಕ ಮತ್ತು ಭಾರತದ ಜನಸಮೂಹದಲ್ಲಿ ಅಚ್ಚಾದಂತೆ ಕಂಡುಬಂತು. ಇದು ದ್ವಂದ್ವ ಹೋರಾಟವಲ್ಲ, ಬದಲಿಗೆ ಒಗ್ಗಟ್ಟಾಗಿ ಶತ್ರುವನ್ನು ಎದುರಿಸಲು ಮಾಡಲೇಬೇಕಿದ್ದ ಎರಡು ಪದರಿನ ಹೋರಾಟ.

ಅಧ್ಯಾಯ 2 ಮುಗಿಯಿತು

ಮುಂದಿನ ವಾರ: 
ಅಧ್ಯಾಯ 3: ಜನಸಮೂಹದ ಮೇಲೆ ವಸಾಹತುಶಾಹಿ ಮಾಡಿದ ಪರಿಣಾಮ

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

No comments:

Post a Comment