Apr 8, 2016

ಮೇಕಿಂಗ್ ಹಿಸ್ಟರಿ: ಅಧ್ಯಾಯ 3 - ಜನಸಮೂಹದ ಮೇಲೆ ವಸಾಹತುಶಾಹಿ ಮಾಡಿದ ಪರಿಣಾಮ

saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
08/04/2016

ಹಿಂದಿನ ಅಧ್ಯಾಯದಲ್ಲಿ ಬ್ರಿಟೀಷ್ ವಸಾಹತುಶಾಹಿ ಕರ್ನಾಟಕದ ಆಳುವ ವರ್ಗಗಳ ಮೇಲುಂಟು ಮಾಡಿದ ಪರಿಣಾಮಗಳನ್ನು ನೋಡಿದೆವು. ಈಗ ಜನಸಮೂಹದ ಮೇಲೆ ವಸಾಹತುಶಾಹಿ ಉಂಟುಮಾಡಿದ ಪರಿಣಾಮವನ್ನು ನೋಡೋಣ. ಸಾಮಾಜಿಕ ಜೀವನದ ವಿವಿಧ ವರ್ಗಗಳ ಮೇಲುಂಟು ಮಾಡಿದ ಪರಿಣಾಮ ಮತ್ತು ಹೇಗೆ ವಸಾಹತು ತನ್ನಾಡಳಿತದ ಮೊದಲ ಕೆಲ ದಶಕಗಳಲ್ಲಿ ಮುನ್ನಡೆಯನ್ನು ಹಿನ್ನಡೆಯಾಗಿಸಿತು ಮತ್ತು ವಸಾಹತುಶಾಹಿ ಪೂರ್ವದ ದಿನಗಳ ಮುನ್ನಡೆಯನ್ನು ಉಲ್ಟಂಪಲ್ಟ ಮಾಡಿತು ಎನ್ನುವುದನ್ನು ಗಮನಿಸೋಣ.

1. ಸೈನ್ಯದ ವಿಸರ್ಜನೆ
(Dissolution of the Army)
ವಸಾಹತಿನ ಪ್ರಭಾವಳಿ ಬೆಳಗಲಾರಂಭಿಸಿದಾಗಾದ ಮೊದಲ ಮತ್ತು ಕಣ್ಣಿಗೆ ರಾಚಿದ ಪರಿಣಾಮವೆಂದರೆ ಶೀಘ್ರವಾಗಿ ಸೈನ್ಯವನ್ನು - ಊಳಿಗಮಾನ್ಯ ದೊರೆಗಳಿಗಿಂತ ಹೆಚ್ಚಾಗಿ ಮೈಸೂರಿನದ್ದು – ಭಗ್ನಗೊಳಿಸಿದ್ದು. ಈ ಸೈನ್ಯವನ್ನು ವಿಸರ್ಜಿಸಲು ತೋರಿಸಿದ ಅತ್ಯಾತುರಕ್ಕೆ ಕಾರಣ ಕಳೆದ ನಾಲ್ಕು ವರ್ಷಗಳಿಂದ ಇದೇ ಸೈನ್ಯ, ವಸಾಹತು ವಿರೋಧಿ ಹೋರಾಟದ ಮುಂಚೂಣಿಯಲ್ಲಿತ್ತು. ಬ್ರಿಟೀಷರಿಗೆ ಪೆಟ್ಟು ಕೊಡಲು ಮೈಸೂರು ಸೈನ್ಯವೇ ಕೇಂದ್ರ ಸಂಸ್ಥೆಯಾಗಿತ್ತು. ಅದಕ್ಕೆ ತಕ್ಕ ಸಾಮರ್ಥ್ಯವಿತ್ತು, ಆಂತರಿಕ ಒಗ್ಗಟ್ಟು ಮತ್ತು ವಸಾಹತು ವಿರೋಧಿ ಅಸ್ತಿತ್ವಕ್ಕೆ ಬೇಕಾದ ನಿಯಂತ್ರಿತ ಕ್ರಮಾಗತ ವ್ಯವಸ್ಥೆ (Hierarchy) ಈ ಸಾಮರ್ಥ್ಯಕ್ಕೆ ಕಾರಣ. ಟಿಪ್ಪುವಿನ ಸೋಲಿನ ನಂತರವೂ ಹೋರಾಟ ಮುಂದುವರೆಯುವ ಸಾಧ್ಯತೆ ಇತ್ತು. ಹಾಗಾಗಿ ಸೈನ್ಯವನ್ನು ಒಡೆದುಹಾಕುವುದು ಸುಲ್ತಾನನ ಸಾವಿನ ನಂತರ ಬ್ರಿಟೀಷರು ಮಾಡಬೇಕಿದ್ದ ಮೊದಲ ಕೆಲಸವಾಗಿತ್ತು.

ಟಿಪ್ಪು ಸುಲ್ತಾನನ ಸೈನ್ಯದಲ್ಲಿ ಸುಮಾರು 1.4 ಲಕ್ಷ ಜನರಿದ್ದರು. (107) ಇದನ್ನು ವಿಸರ್ಜಿಸಿದ ನಂತರ ಮೈಸೂರು ರಾಜನ ಬಳಿ ಉಳಿದ ಜನರ ಸಂಖೈ ಕೇವಲ ಹನ್ನೆರಡು ಸಾವಿರ. ಟಿಪ್ಪುವಿನ ಕಾಲದಲ್ಲಿ ಕಂದಚಾರ ಸೈನ್ಯದಲ್ಲಿ 1,80,000 ಜನರಿದ್ದರು. (108) ಇದನ್ನೂ ವಿಸರ್ಜಿಸಲಾಯಿತು. ಅವರು ಗಲಭೆಗೆ ಕಾರಣವಾಗಿಬಿಡಬಹುದು ಎಂಬ ಭಯದಿಂದ ಕೈಗೊಂಬೆ ಸರಕಾರ ಮೊದಲ ವರ್ಷದ ಆಳ್ವಿಕೆಯಲ್ಲಿ ಇಪ್ಪತ್ತು ಸಾವಿರ ಜನರನ್ನು ಉಳಿಸಿಕೊಂಡಿತ್ತು. (109)

ಸೈನ್ಯವನ್ನು ಛಿದ್ರಗೊಳಿಸುವ ಕಾರ್ಯ ವಹಿಸಿದ್ದು ಲೆಫ್ಟಿನೆಂಟ್ ಕೊಲೊನಲ್ ಕ್ಲೋಸ್. ಕ್ಲೋಸ್ ನಂತರ ಒಡೆಯರ್ ಅರಮನೆಯ ರಕ್ಷಿತ ಕೊಠಡಿಯಲ್ಲಿ ರೆಸಿಡೆಂಟರಾಗಿ ಕಾರ್ಯನಿರ್ವಹಿಸಿದರು. ಕಮೀಷನರರೊಬ್ಬರಿಗೆ ಬರೆದ ಪತ್ರದಲ್ಲಿ ಈ ಛಿದ್ರಗೊಳಿಸುವ ಪ್ರಕ್ರಿಯೆಯನ್ನು ಹೇಗೆ ಸಂಭ್ರಮದ ವಾತಾವರಣದಲ್ಲಿ ಮತ್ತು ಹುಚ್ಚು ವಸಾಹತು ಹೆಮ್ಮೆಯಿಂದ ಮಾಡಲಾಯಿತು ಎನ್ನುವುದನ್ನು ವಿವರಿಸುತ್ತಾನೆ: “ತನ್ನ ಸರಕಾರದ ವಿವಿಧ ಇಲಾಖೆಗಳಲ್ಲಿ ಬಲಿಷ್ಠ ಮುಸಲ್ಮಾನರನ್ನು ಟಿಪ್ಪು ನೇಮಿಸಿದ್ದನ್ನು ನಿರಾಕರಿಸಲು ಆಗುವುದಿಲ್ಲ, ಆದರೆ ಅವನ ಆಳ್ವಿಕೆಯ ವಿಶೇಷವೆಂದರೆ ಎಲ್ಲಾ ಅಧಿಕಾರವನ್ನು ತನ್ನ ಕೈಯಲ್ಲೇ ಇಟ್ಟುಕೊಳ್ಳುತ್ತಿದ್ದ ಮತ್ತು ವಂಶಪಾರಂಪರ್ಯಕ್ಕೆ ಅಥವಾ ಒಂದೇ ಕಛೇರಿಯಲ್ಲಿ ತಳವೂರಿಬಿಡುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ…… ಪ್ರಮುಖ ಕಛೇರಿಗಳಲ್ಲಿದ್ದ ವ್ಯಕ್ತಿಗಳು ಅಧಿಕಾರ ಚಲಾಯಿಸುತ್ತಿದ್ದುದರ ಬಗ್ಗೆ ಅನುಮಾನ ಬೇಡ ಮತ್ತಾ ಅಧಿಕಾರದಿಂದ ಅವರು ಸ್ವಲ್ಪ ಪ್ರಭಾವಶಾಲಿಗಳೂ ಆಗಿದ್ದರು. ಆದರಿವರಲ್ಲಿ ಎಷ್ಟು ಜನ ಉಳಿದಿದ್ದಾರೆ? ಬಹರುದ್ದೀನ್ ಶ್ರೀರಂಗಪಟ್ಟಣದಲ್ಲಿ ಹತನಾದ. ಬೆಂಕಿ ನವಾಬ ಸಿದ್ದೇಶ್ವರದಲ್ಲಿ ಸೋತ. ಸೈಯದ್ ಸಾಹಿಬ್, ಮೀರ್ ಸಾದಿಕ್ ಮತ್ತು ಸೈಯದ್ ಗಫರ್ ಶ್ರೀರಂಗಪಟ್ಟಣದ ಬಿರುಗಾಳಿಯಲ್ಲಿ ಉರುಳಿಹೋದರು. ಪೂರ್ಣಯ್ಯ ನಮ್ಮ ಇಷ್ಟಾನಿಷ್ಟದ ಮೇಲೆ ನಿಂತಿದ್ದಾರೆ. ಕಮ್ರುದ್ದೀನ್ ನಮ್ಮ ಔದಾರ್ಯದ ಮೇಲಿದ್ದಾರೆ ಮತ್ತು ನಮ್ಮ ಭಕ್ತಮಂಡಳಿಯವರಾಗಿದ್ದಾರೆ.”(110)

ಕಮ್ರುದ್ದೀನ್ ಗೆ ಗುರ್ರಂಕೊಂಡದಲ್ಲಿ ಜಾಗೀರುಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು: ಕಂಪನಿಯಿಂದೊಂದು, ಮತ್ತೊಂದು ನಿಜಾಮರಿಂದ. ‘ಮೈಸೂರು ಸೈನ್ಯದ ಮುಖ್ಯ ಕಮಾಂಡರ್’ ಶರತ್ತಿಲ್ಲದೆ ಶರಣಾಗಲು 2000 ಪೌಂಡ್ ನೀಡಲಾಗಿತ್ತು ಎಂದು ಮಾರ್ಕ್ಸ್ ದಾಖಲಿಸುತ್ತಾರೆ. ಮಾರ್ಕ್ಸ್ ಹೇಳುತ್ತಿರುವುದು ವಿದ್ರೋಹಕ್ಕಾಗಿ ಸಾಯಿಸಲಾದ ಮೀರ್ ಸಾದಿಕ್ ಬಗ್ಗೆಯಾ ಎನ್ನುವುದು ಸ್ಪಷ್ಟವಾಗುವುದಿಲ್ಲ. ಕಮ್ರುದ್ದೀನ್ ಅಷ್ಟೊಂದು ದೊಡ್ಡ ಮೊತ್ತವನ್ನು ಪಡೆದಿರುವ ಸಾಧ್ಯತೆಗಳು ಕಡಿಮೆ. (111)

ಅದು ಎಂತಹ ಪರಿಸ್ಥಿತಿಯಾಗಿತ್ತೆಂದರೆ ಕ್ಲೋಸ್ ಮತ್ತೆ ಹೇಳುತ್ತಾರೆ: “ನಮ್ಮನ್ನು ಮುಜುಗರಗೊಳಿಸಲು ಅಥವಾ ರಾಜಕೀಯಕ್ಕೊಂದು ತಿರುವು ಕೊಡಲು ಮೊಹಮ್ಮದೀಯರು ಎಲ್ಲಿದ್ದಾರೆ? ಟಿಪ್ಪುವಿನ ಕಾಲಾಳು ಸೈನ್ಯವನ್ನು ವಿಸರ್ಜಿಸಲಾಯಿತು. ಅವನ ಸಿಲ್ಲೇದಾರ ಕುದುರೆಗಳನ್ನು ಕರಗಿಸಲಾಯಿತು, ಅವನ ಕಿಲ್ಲೇದಾರರು ನಮಗೆ ಮುಜುರೆ ಸಲ್ಲಿಸುತ್ತಾರೆ. ಅವನ ಅಸೋಫರಿಗೆ (asophs) ನಮ್ಮನ್ನು ಎದುರಿಸಲು ಅವಕಾಶಗಳಿಲ್ಲ, ಶಕ್ತ ಕುದುರೆಗಳು ಉಳಿದಿವೆ ಮತ್ತು ಉಳಿಯುವಿಕೆಗೆ ನಮ್ಮೆಡೆಗೆ ನೋಡುತ್ತಿವೆ. ಬಿಡಿ ಬಿಡಿ ವ್ಯಕ್ತಿಗಳಿದ್ದಾರೆ, ತಲೆಯಿಲ್ಲದೆ, ವಿವಿಧ ಉದ್ದೇಶಗಳಿಂದ ಬೇರೆ – ಬೇರೆಯಾಗಿ. ಅವರು ನಮ್ಮ ಸೇವೆಗೈಯಲು ಒಂದು ಇಶಾರೆ ಸಾಕು.” (112)

ಪೂರ್ಣಯ್ಯನವರ ಸೃಷ್ಟಿಯಲ್ಲೊಬ್ಬರಾದ ನರಸಿಂಹ ಮೂರ್ತಿ ಮೈಸೂರು ಪ್ರಾಂತ್ಯದ ಸೈನ್ಯಕ್ಕೊಂದು ಗತಿ ಕಾಣಿಸಬೇಕೆಂದು ಕಮಿಷನರ್ರಿಗೆ ಪತ್ರ ಬರೆಯುತ್ತಾನೆ. ಮೈಸೂರು ಪ್ರಾಂತ್ರದ ಸದಸ್ಯರಾದ ಬ್ರಾರ್ರಿ ಕ್ಲೋಸ್ ರನ್ನು 8 ಜೂನ್ 1799ರಂದು ಶ್ರೀರಂಗಪಟ್ಟಣದಲ್ಲಿ ಭೇಟಿಯಾಗುತ್ತಾನೆ. ಕಮ್ರುದ್ದೀನ್ ತಾನು ಪಡೆದುಕೊಂಡಿದ್ದಕ್ಕೆ ಪ್ರತಿಯಾಗಿ ನೆಮ್ಮದಿಯಿಂದ ಹಿಂದೆ ಸರಿದರೆ, ಇತರ ಮುಖ್ಯ ಅಧಿಕಾರಿಗಳು ತಮ್ಮ ಹಳೆಯ ಸಂಬಳದ ಮೇಲೆ ನಿವೃತ್ತರಾದರು. ಯುದ್ಧದಲ್ಲಿ ಸಾವನ್ನಪ್ಪಿದ ಅಧಿಕಾರಿಗಳ ಕುಟುಂಬಳಿಗೆ ಸೂಕ್ತ ಸವಲತ್ತನ್ನು ನೀಡಲಾಯಿತು, ಅಸಹನೆ ಬೆಳೆಯುವುದನ್ನು ತಡೆಗಟ್ಟಲು. ಟಿಪ್ಪುವಿನ ನಾಗರೀಕ ಸೇವೆಯ ಅಧಿಕಾರಿಗಳಿಗೆ ಪಿಂಚಣಿ ನೀಡಲಾಯಿತು ಮತ್ತು ಫ್ರೆಂಚರನ್ನು ಯುದ್ಧಖೈದಿಗಳನ್ನಾಗಿ ಬಂಧಿಸಲಾಯಿತು. (113)

ತಮ್ಮ ಗ್ರಂಥದಲ್ಲಿ ಮೀರಾ ಸೆಬಾಸ್ಟಿಯನ್ ಉಳಿಕೆ ಸೈನ್ಯವನ್ನು ಹೇಗೆ ನಿರ್ನಾಮ ಮಾಡಲಾಯಿತು ಎಂದು ತಿಳಿಸುತ್ತಾರೆ. 1831ರಷ್ಟರಲ್ಲಿ ಅದು ಪರಿಣಾಮಕಾರಿಯಲ್ಲದ ಇತಿಹಾಸದ ಸ್ಮಾರಕವಾಗಷ್ಟೇ ಉಳಿದಿತ್ತು. (114)

ಮಿಲಿಟರಿಯ ಉನ್ನತಾಧಿಕಾರಿಗಳನ್ನು ಖರೀದಿಸಲಾಯಿತು. ಕೆಳಹಂತದ ಸೈನಿಕರನ್ನು ಸುಮ್ಮನೆ ಪ್ರಪಾತಕ್ಕೆ ತಳ್ಳಿಬಿಡಲಾಯಿತು. ವಸಾಹತುಶಾಹಿಯ ವಿರುದ್ಧದ ಸೈನ್ಯ ರಾತ್ರಿ ಬೆಳಗಾಗುವುದರಲ್ಲಿ ನಿರುದ್ಯೋಗಿಗಳ ಸೈನ್ಯವಾಗಿಬಿಟ್ಟಿತ್ತು. ಸಂಪನ್ಮೂಲ ನಾಶವಾಯಿತು.

ಬ್ರಿಟೀಷರ ಮೊದಲ ಹೊಡೆತ ಮೈಸೂರಿನ ಮುಸ್ಲಿಮರಿಗೆ. ಆಳ್ವಿಕೆಯಲ್ಲಿದ್ದ, ವಿದೇಶೀ ಆಕ್ರಮಣಕಾರನ ವಿರುದ್ಧದ ಹೋರಾಟಕ್ಕೆ ಸಾವಿರಾರು ಮಕ್ಕಳನ್ನು ಕಳೆದುಕೊಂಡ, ಶೋಷಿತ ಜಾತಿಗಳಿಗೆ ಆಸರೆಯಾಗಿದ್ದ ವೀರ ಸಮುದಾಯ ವಸಾಹತು ಶಕ್ತಿಯ ಏಳಿಗೆಯೊಂದಿಗೆ ಬ್ರಿಟೀಷ್ ರಾಜ್ ನ ಕೋಟೆಯಡಿಯಲ್ಲಿ ಸಿಲುಕಿ ನಲುಗಿತು. ಮುಸ್ಲಿಂ ಸಮುದಾಯ ಇದ್ದಕ್ಕಿದ್ದಂತೆ ಸಾವನ್ನಪ್ಪಿತು. ಯುರೋಪಿನ ಆಕ್ರಮಣ ಸೈನ್ಯವನ್ನು ವಿಸರ್ಜಿಸಿತು; ಇದು ಒಂದೇ ಏಟಿನಲ್ಲಿ ಸೈನ್ಯಕ್ಕೆ ಸೇರಿ ಅಭ್ಯುದಯ ಹೊಂದುತ್ತಿದ್ದ ಮೈಸೂರಿನ ಮುಸ್ಲಿಮರ ಭವಿಷ್ಯದ ಮೇಲೆ ಮಂಕು ಕವಿಸಿತು. ಸೈನ್ಯ ಮೈಸೂರು ಮುಸ್ಲಿಮರಿಗೆ ಬಹುಮುಖ್ಯ ನೌಕರಿಯ ಸೆಲೆಯಾಗಿತ್ತು. ಮೈಸೂರಿನ ಸೋಲು ಮುಸ್ಲಿಮರ ಐತಿಹಾಸಿಕ ಕುಸಿತಕ್ಕೆ ಕಾರಣವಾಯಿತು. ಆ ಕುಸಿತ ಮೂಡಿಸಿದ ಮಂಪರಿನ ಚಿನ್ಹೆಗಳನ್ನು ಇವತ್ತಿಗೂ ಕಾಣಬಹುದು……

ಮುಸ್ಲಿಮರು ಅಸ್ಪ್ರಶ್ಯರಾದರು, ಸಮಾಜದ ಕಸಕ್ಕೆ ದೂಡಲ್ಪಟ್ಟರು. 1799ರ ವಸಾಹತು ಆಕ್ರಮಣ ತನ್ನ ಪ್ರಭಾವವನ್ನು ಎರಡು ಶತಮಾನದ ನಂತರವೂ ಉಳಿಸಿದೆ. ಮುಸ್ಲಿಮರು ಆರ್ಥಿಕತೆಯ ಒಂದು ನಿರ್ದಿಷ್ಟ ವಿಭಾಗದಲ್ಲಿ ಇವತ್ತಿಗೂ ‘ಏಕಸ್ವಾಮ್ಯತೆ’ ಹೊಂದಿದ್ದಾರೆ – ಕಸವಾಯುವ ಕಾಯಕದಲ್ಲಿ.

ಈ ಕುಸಿತಕ್ಕೆ ಬುಚನನ್ ಆಗಲೇ ಸಾಕ್ಷಿಯಾಗಿದ್ದ. ಒಂದು ಚಿಟಿಕೆ ಅನುಕಂಪ, ಚೂರು ತಿರಸ್ಕಾರದೊಂದಿಗೆ ಬುಚನನ್ ಹುಣಸೂರು ತಾಲ್ಲೂಕಿನ ಹುಸೇನ್ ಪುರ ಮತ್ತು ಮುಲ್ಲೂರಿನ ಬಗ್ಗೆ ಬರೆಯುತ್ತಾನೆ: “ಟಿಪ್ಪುವಿನ ಸೇವೆಯಲ್ಲಿದ್ದ ಮುಸಲ್ಮಾನರು ಪ್ರತಿ ನಿತ್ಯ ದೇಶದ ಈ ಭಾಗಕ್ಕೆ ಬರುತ್ತಿದ್ದಾರೆ. ಸಾಧ್ಯವಿದ್ದವರು ಕಾಳುಗಳನ್ನು ತಂದು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ; ಬಡವರಾದವರು ರೈತರ ಬಳಿ ಸೇವಕರಾಗೋ ಅಥವಾ ದಿನಗೂಲಿಯಾಗೋ ಕೆಲಸ ಮಾಡುತ್ತಿದ್ದಾರೆ. ಕೃಷಿ ಕೆಲಸ ಗೊತ್ತಿಲ್ಲದ ಇವರನ್ನು ಕೆಲಸಕ್ಕೆ ಬೇರ್ಯಾರೂ ಸಿಗದಿದ್ದಾಗಷ್ಟೇ ನೇಮಿಸಿಕೊಳ್ಳಲಾಗುತ್ತದೆ. ಅವರಿಗೆ ಸಿಗುವ ಸಂಬಳ ಕಡಿಮೆ. ಅವರಿಗೆ ತಿಂಗಳಿಗೆ ಮೂವತ್ತು ಸೇರು ಕಾಳು ನೀಡಲಾಗುತ್ತಿದೆ (ಮೂರು ಫನಂಗೆ ಸಮ) ಹಾಗು ಒಂದು ಫನಂ ಹಣವನ್ನು ನೀಡಲಾಗುತ್ತದೆ…….ಅದಾಗ್ಯೂ ಈ ಮುಸ್ಲಿಮರು ತಮ್ಮ ನಾಯಕನನ್ನು ಕೊಂದ ಕಾಫಿರ ಬ್ರಿಟೀಷರ ಸೇವೆ ಮಾಡುವುದಕ್ಕಿಂತ ಇದನ್ನೇ ಉತ್ತಮವೆಂದು ಭಾವಿಸಿದ್ದಾರೆ.” (115)

ಬೆಂಗಳೂರಿನ ಮುಸ್ಲಿಮರಲ್ಲೂ ಇದೇ ರೀತಿಯ ವ್ಯಥೆಯಿರುವುದನ್ನು ಬುಚನನ್ ಗಮನಿಸಿದ್ದಾರೆ. ನಗರ ಆರ್ಥಿಕತೆಯ ಭಾಗವಾಗುವ ಭರದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಲಾರಂಭಿಸಿದರು. ಈ ವ್ಯಾಪಾರ ಕೆಳಮುಖವಾಗಿ ಚಲಿಸುತ್ತ ಅವರನ್ನು ಶೀಘ್ರವಾಗಿ ಕಸದ ವರ್ತಕರನ್ನಾಗಿಸಿತು.
ಮುಂದಿನ ವಾರ:
ಕೃಷಿಗೆ ಲಕ್ವ ಹೊಡೆದದ್ದು

No comments:

Post a Comment