Mar 16, 2016

ವ್ಯವಸ್ಥೆಯ ಹಿಂಸೆಯ ‘ವಿಸಾರಣೈ’


visaranai tamil movie review
ಡಾ. ಅಶೋಕ್. ಕೆ. ಆರ್
16/03/2016
ನೈಜತೆಯ ವಿಷಯಕ್ಕೆ ಬಂದರೆ ತಮಿಳು ಸಿನಿಮಾಗಳಿಗೆ ತಮಿಳು ಸಿನಿಮಾಗಳೇ ಸಾಟಿ. ‘ಲಾಕ್ ಅಪ್’ ಎಂಬ ನೈಜ ಘಟನೆಗಳ ಬಗೆಗಿನ ಪುಸ್ತಕವನ್ನಾಧರಿಸಿ ವೆಟ್ರೀಮಾರನ್ ನಿರ್ದೇಶಿಸಿರುವ ‘ವಿಸಾರಣೈ’ ಸಿನಿಮಾ ವ್ಯವಸ್ಥೆಯ ವ್ಯವಸ್ಥಿತ ಹಿಂಸೆಯ ಛಾಯೆಯಲ್ಲಿ ನರಳುವ ನಾಲ್ಕು ಮುಗ್ಧರ ಕತೆ. ಇದು ಬರೀ ವ್ಯವಸ್ಥೆಯ, ಪೋಲೀಸ್ ಹಿಂಸೆಯ ಕತೆಯಷ್ಟೇ ಅಲ್ಲ; ಪೋಲೀಸರ, ಅವರ ಮೇಲಧಿಕಾರಿಗಳಲ್ಲಿರುವ ಕ್ರೌರ್ಯದ ಕತೆ; ಅವರೊಳಗಿರುವ ಪೂರ್ವಾಗ್ರಹಪೀಡಿತ ಮನಸ್ಸುಗಳ ಕತೆ. ವ್ಯವಸ್ಥೆ ನಮಗೆ ಮೋಸ ಮಾಡುವುದಿಲ್ಲ ಎಂದು ನಂಬಿಕೊಂಡ ಅಮಾಯಕರ ಕತೆಯಿದು.

ತಮಿಳುನಾಡಿನ ವಿವಿಧ ಊರುಗಳಿಂದ ನಾನಾ ಕಾರಣಗಳಿಗಾಗಿ ಓಡಿ ಹೋಗಿ ಆಂಧ್ರದಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ – ಪಾಂಡಿ, ಮುರುಗನ್, ಅಫ್ಜಲ್, ಕುಮಾರ್. ಚೆನ್ನಾಗಿ ಸಂಪಾದನೆ ಮಾಡಿ ಊರಿಗೆ ಮರಳಬೇಕೆಂಬ ಕನಸು. ಗಾಂಧಿ ಪಾರ್ಕಿನಲ್ಲಿ ರಾತ್ರಿ ಕಳೆಯುತ್ತಾರೆ, ಬಾಡಿಗೆ ದುಡ್ಡು ಉಳಿಸಲು. ಇವರು ನಾಲ್ವರನ್ನೂ ಆಂಧ್ರದ ಪೋಲೀಸರು ಒಂದು ಮುಂಜಾನೆ ಪೋಲೀಸ್ ಠಾಣೆಗೆ ಕರೆದೊಯ್ದು ಮನಬಂದಂತೆ ಹೊಡೆಯುತ್ತಾರೆ. ಈ ನಾಲ್ವರಿಗೂ ಯಾಕೆ ಹೊಡೆಸಿಕೊಳ್ಳುತ್ತಿದ್ದೀವೆಂದೇ ತಿಳಿಯುವುದಿಲ್ಲ. ಭಾಷೆ ಪೂರ್ಣವಾಗಿ ಬರುವುದಿಲ್ಲ. ಪ್ರಶ್ನೆ ಕೇಳಿದರೆ ಮತ್ತಷ್ಟು ಬಡಿತ. ಪ್ರತಿಷ್ಠಿತರ ಮನೆಯಲ್ಲಿ ದೊಡ್ಡ ಮೊತ್ತ ಕಳುವಾಗಿರುತ್ತದೆ. ಆದಷ್ಟು ಶೀಘ್ರವಾಗಿ ದರೋಡೆಕೋರರನ್ನು ಬಂಧಿಸಬೇಕೆಂದು ಮೇಲಧಿಕಾರಿಗಳಿಂದ ಒತ್ತಡ. ಕಳುವು ಮಾಡಿದವರು ತಮಿಳು ಮಾತನಾಡುತ್ತಿದ್ದರೆಂಬುದನ್ನೇ ನೆಪಮಾಡಿಕೊಂಡು ಈ ನಾಲ್ವರನ್ನು ಹಿಡಿದು ತಂದು ಅವರು ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡುವುದು ಪೋಲೀಸರ ಉದ್ದೇಶ. ಗಾಂಧಿ ಪಾರ್ಕಿನಿಂದ ಶುರುವಾಗುವ ಚಿತ್ರ ಗಾಂಧಿಯ ಸತ್ಯಾಗ್ರಹ ಮಾರ್ಗವನ್ನು ಪಾಂಡಿ ಮತ್ತು ಗೆಳೆಯರು ಪಾಲಿಸುವಂತೆ ಮಾಡುತ್ತದೆ. ಪೋಲೀಸರು ಕೊಟ್ಟ ಯಾವೊಂದು ಆಹಾರ ಪದಾರ್ಥವನ್ನೂ ಮುಟ್ಟುವುದಿಲ್ಲ. ಕೇಸು ಕ್ಲೋಸು ಮಾಡಲು ಪೋಲೀಸರಿಗೆ ಆತುರ. ಕುಟಿಲತೆಯಿಂದ ಸತ್ಯಾಗ್ರಹವನ್ನು ಮುರಿದುಬಿಡುತ್ತಾರೆ. ವ್ಯವಸ್ಥೆ ಗಾಂಧಿವಾದವನ್ನು ಕುಟಿಲತೆಯಿಂದ ಅಂತ್ಯಗೊಳಿಸಿದ್ದರ ಸಂಕೇತದಂತೆಯೂ ಇದು ಕಾಣಿಸುತ್ತದೆ. ಹಿಂಸೆಯ ಯಾವ ರೂಪವೂ ಪಾಂಡಿಯ ಮನಸ್ಸನ್ನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಲು ಸಫಲತೆ ಕಾಣದಾಗ ಭಾವನೆಗಳ ಜೊತೆಗೆ ಆಟವಾಡಿ ಪೋಲೀಸರ ಸಮ್ಮುಖದಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಈ ನಾಲ್ಕು ಪಾತ್ರಧಾರಿಗಳನ್ನಿಟ್ಟುಕೊಂಡು ದೊಡ್ಡದೊಂದು ದರೋಡೆಯ ಕತೆ ಹೆಣೆಯುತ್ತಾರೆ ಪೋಲೀಸರು. ಆದರೆ ನ್ಯಾಯಾಲಯದಲ್ಲಿ ಪಾಂಡಿಗೆ ತಡೆಯಲಾಗುವುದಿಲ್ಲ, ತೆಲುಗು ನ್ಯಾಯಾಧೀಶರಿಗೆ ತಮಿಳಿನಲ್ಲೇ ತಾವುಂಡ ಕಷ್ಟಗಳನ್ನೆಲ್ಲ ಹೇಳಿಬಿಡುತ್ತಾನೆ. ಅದೇ ಸಮಯಕ್ಕೆ ಕೆ.ಕೆ ಎಂಬ ಕ್ರಿಮಿನಲ್ಲನ್ನು ಹಿಡಿಯಲು ಬಂದಿರುತ್ತಾರೆ ತಮಿಳುನಾಡಿನ ಪೋಲೀಸರು. ತಮಿಳುನಾಡು ಪೋಲೀಸ್ ಮುತ್ತುವೇಲು ನ್ಯಾಯಾಧೀಶರ ಮುಂದೆ ಇವರು ತಮಿಳಿನಲ್ಲಿ ಹೇಳಿದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಅವರು ಬಿಡುಗಡೆಯಾಗುವಂತೆ ಮಾಡುತ್ತಾನೆ. ನ್ಯಾಯಾಲಯದಲ್ಲಿ ಶರಣಾಗಲು ಬಂದಿದ್ದ ಕೆ.ಕೆ.ಯನ್ನು ಹಿರಿಯ ಅಧಿಕಾರಿಗಳ ಒತ್ತಡದಿಂದ ಈ ನಾಲ್ವರನ್ನು ಉಪಯೋಗಿಸಿ ಅಪಹರಿಸಿ ತಮಿಳುನಾಡು ಕಡೆಗೆ ಹೊರಳುತ್ತದೆ ಚಿತ್ರ. ಆಂಧ್ರ ಪೋಲೀಸರ ತೆಕ್ಕೆಯಿಂದ ತಮಿಳುನಾಡು ಪೋಲೀಸರ ತೋಳಿಗೆ ಬೀಳುತ್ತಾರೆ ಈ ನಾಲ್ವರು.

ನಾಲ್ವರಲ್ಲಿ ಕುಮಾರ್ ಪೋಲೀಸ್ ಸ್ಟೇಷನ್ ಬರುವ ಮುಂಚೆಯೇ ತನ್ನ ಊರಿನ ಬಳಿ ಇಳಿದುಕೊಳ್ಳುತ್ತಾನೆ. ಉಳಿದ ಮೂವರು ಪೋಲೀಸ್ ಠಾಣೆಯನ್ನು ಸ್ವಚ್ಛಗೊಳಿಸುತ್ತ ಅಲ್ಲೇ ಉಳಿದುಬಿಡುತ್ತಾರೆ. ಕೆಕೆ ಸುತ್ತಲಿನ ರಾಜಕೀಯಕ್ಕೆ ಸಾಕ್ಷಿಯಾಗಿ, ಡಿಸಿ, ಎಸಿ, ಪೋಲೀಸ್ ಅಧಿಕಾರಿಗಳ ಹಣದ ದಾಹಗಳಿಗೆ ಸಾಕ್ಷಿಯಾಗಿ. ಕೊನೆಗೆ ಈ ಮೂವರು ಬದುಕಿರುವುದು ತಮ್ಮ ಅಸ್ತಿತ್ವಕ್ಕೇ ಅಪಾಯಕಾರಿ ಎಂದರಿತ ಮೇಲಧಿಕಾರಿಗಳು ಅವರನ್ನು ಖೊಟ್ಟಿ ಎನ್ ಕೌಂಟರಿನಲ್ಲಿ ಮುಗಿಸಿಬಿಡಬೇಕೆಂದು ನಿರ್ಧರಿಸುತ್ತಾರೆ. ಮೊದಮೊದಲು ಮುತ್ತುವೇಲು ಅದಕ್ಕೆ ನಿರಾಕರಿಸುತ್ತಾನಾದರೂ ವೈಯಕ್ತಿಕವಾಗಿ ಅವನಿಗೆ ಯಾವೆಲ್ಲ ತೊಂದರೆಗಳು ಬರಬಹುದೆಂಬ ಹೆದರಿಕೆ ಮೂಡಿಸಿಯೇ ಅವನನ್ನು ಒಪ್ಪಿಸಿಬಿಡುತ್ತಾರೆ. ಬಂದೂಕು ಹಿಡಿಯುತ್ತಾನಾದರೂ ಮುತ್ತುವೇಲು ಗುಂಡು ಹಾರಿಸುವುದಿಲ್ಲ. ಎಲ್ಲೋ ಒಳಗೆ ಅವನ ಆತ್ಮಸಾಕ್ಷಿ ಚುಚ್ಚುತ್ತಲೇ ಇತ್ತೇನೋ? ಕೊನೆಗೆ ವ್ಯವಸ್ಥೆಯ ಕ್ರೌರ್ಯಕ್ಕೆ ಮುತ್ತುವೇಲು ಕೂಡ ಬಲಿಪಶುವಾಗಿಬಿಡುತ್ತಾನೆ. ಕುಮಾರ್ ಇಳಿದುಕೊಳ್ಳದಿದ್ದರೆ ಈ ದೌರ್ಜನ್ಯದ ಕತೆ ಹೊರಗಡೆಯೇ ಬರುತ್ತಿರಲಿಲ್ಲವೇನೋ?

ಇನ್ನು ಚಿತ್ರದುದ್ದಕ್ಕೂ ಪೋಲೀಸರಲ್ಲಿ, ವ್ಯವಸ್ಥೆಯಲ್ಲಿ ಇರುವ ಪೂರ್ವಾಗ್ರಹದ ಚಿತ್ರಣ ಒಂದೆರಡು ದೃಶ್ಯಗಳಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ನಾಲ್ವರಲ್ಲಿ ಮೊದಲು ಬಂಧನಕ್ಕೊಳಗಾಗುವುದು ಅಫ್ಜಲ್. ರಾತ್ರಿ ಸಿನಿಮಾ ನೋಡಿಕೊಂಡು ಗಾಂಧಿ ಪಾರ್ಕಿನ ಕಡೆಗೆ ಹೋಗುತ್ತಿರುತ್ತಾನೆ. ಗಸ್ತಿನಲ್ಲಿದ್ದ ಪೋಲೀಸರು ‘ವಿಚಾರಿಸುತ್ತಾರೆ’. ಹೆಸರೇನು ಅನ್ನುತ್ತಾರೆ, ‘ಅಫ್ಜಲ್’ ಅನ್ನುತ್ತಿದ್ದಂತೆ ‘ಅಲ್ ಖೈದಾನ? ಐಸಿಸ್ಸಾ?’ ಅನ್ನುವ ಪ್ರಶ್ನೆ. ‘ಇಲ್ಲಾ ಸರ್ ನಾನು ತಮಿಳುನಾಡಿನವ’ ಎಂಬ ಉತ್ತರಕ್ಕೆ ‘ಓ! ತಮಿಳುನಾಡು! ಹಂಗಾಂದ್ರೆ ನೀನು ಎಲ್.ಟಿ.ಟಿ.ಇ, ಹತ್ತು ಗಾಡಿ’ ಎಂದು ಬಂಧಿಸಿಬಿಡುತ್ತಾರೆ….. ಅಮಾಯಕರನ್ನು ಕೊಲ್ಲುವುದನ್ನು ವಿರೋಧಿಸುವ ಮುತ್ತುವೇಲುವಿಗೆ ಹಿರಿಯ ಅಧಿಕಾರಿ ‘ಈ ರಿಸರ್ವೇಷನ್ನಿನವರಿಂದ ಬಂದವರಿಗೆ ಇವೇನೂ ತಲೇಗೇ ಹೋಗಲ್ಲ’ ಎನ್ನುವ ಮಾತಿನಲ್ಲಿ ಮೇಲ್ಜಾತಿಯವರಿಗಿರುವ ದ್ವೇಷದ ಪರಿಚಯವಾಗಿಬಿಡುತ್ತದೆ. ಪೋಲೀಸರ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ನೋವನುಭವಿಸಿದರೂ ಮುರುಗನ್, ಅಫ್ಜಲ್ ಪೋಲೀಸರ ಬಗ್ಗೆ ಒಳಿತನ್ನೇ ಯೋಚಿಸುತ್ತಾರೆ. ಆಂಧ್ರದ ಪೋಲೀಸರು ಇವರ ಸತ್ಯಾಗ್ರಹ ಮುರಿಯುವ ಸಲುವಾಗಿ ನಾಟಕವನ್ನಾಡಿದಾಗ ಮುರುಗನ್ ‘ನಾವಂದುಕೊಂಡಷ್ಟು ಪಾಪ ಕೆಟ್ಟವರಲ್ಲ’ ಎಂದು ಮುರಿಸಿಕೊಂಡ ಹಲ್ಲಿನೊಡನೆಯೇ ಅನುಕಂಪ ತೋರಿಸುತ್ತಾನೆ. ಇನ್ನೇನು ತಮಿಳುನಾಡು ಪೋಲೀಸರು ನಮ್ಮನ್ನು ಕೊಂದೇ ಬಿಡುತ್ತಾರೆ ಎಂಬ ಸನ್ನಿವೇಶದಲ್ಲೂ ‘ನಮ್ಮನ್ನು ಆಂಧ್ರ ಪೋಲೀಸರಿಂದ ಬಚಾವು ಮಾಡಿಸಿ ತಂದಿದ್ದಾರೆ, ಹೆಂಗೆ ಸಾಯಿಸ್ತಾರೆ’ ಅಂತ ಕೇಳುವಷ್ಟು ಮುಗ್ಧತೆ ಅಫ್ಜಲ್ ನಲ್ಲಿದೆ. ವ್ಯವಸ್ಥೆಯ ಪೂರ್ವಾಗ್ರಹಗಳ ಮುಂದೆ ಅಮಾಯಕರ ಮುಗ್ಧತೆಗೆ ಬೆಲೆಯಿರುತ್ತದೆಯೇ? ಇಂತಹ ವ್ಯವಸ್ಥೆಯಲ್ಲೂ ಈ ಅಮಾಯಕರ ಪರವಾಗಿ ಮಿಡಿದಿದ್ದು ಆಂಧ್ರ ಠಾಣೆಯ ಮಹಿಳಾ ಇನ್ಸ್ ಪೆಕ್ಟರ್ ಮತ್ತು ತಮಿಳುನಾಡಿನ ಮುತ್ತುವೇಲು ಮಾತ್ರ. ಕೊನೆಗೆ ಮುತ್ತುವೇಲು ಕೂಡ ವ್ಯವಸ್ಥೆಯ ಭಾಗವಾಗಿಬಿಡುವುದು ದುರಂತ.

ಇನ್ನು ಚಿತ್ರದ ಪ್ರಾರಂಭದಲ್ಲಿ ತಮಿಳು ಪಾಂಡಿ ಮತ್ತು ತೆಲುಗು ಶಾಂತಿಯ ನಡುವೊಂದು ಭಾಷೆ ಅರ್ಥವಾಗದ, ಭಾವದಿಂದಲೇ ನಡೆಯುವ ಪ್ರೇಮವಿದೆ. ದಕ್ಷಿಣ ಭಾರತದ ಚಿತ್ರಗಳು ಹೇಗೆ ದ್ವಿಭಾಷಾ ಚಿತ್ರಗಳಾಗಿ ಹೊಸ ರೀತಿಯ ಸಿನಿಮಾಗಳನ್ನು ಕೊಡಬಹುದು ಎನ್ನುವುದಕ್ಕೂ ಈ ಚಿತ್ರ ಸಾಕ್ಷಿಯಾಗಿದೆ. ಕನ್ನಡದಲ್ಲೂ ಹಿಂದೆ H2O ಚಿತ್ರದಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳೆರಡೂ ಇತ್ತು, ದ್ವಿಭಾಷಾ ಚಿತ್ರದ ದೃಷ್ಟಿಯಿಂದ ಅದೊಂದು ಉತ್ತಮ ಪ್ರಯತ್ನ, ಕಾವೇರಿ ವಿಷಯವಾಗಿ ತಮಿಳುನಾಡನ್ನು ವಿರೋಧಿಸುವವರ ಒತ್ತಡ, ಪ್ರತಿಭಟನೆಯಿಂದಾಗಿ ಕೊನೆಗೆ ತಮಿಳು ಭಾಗಗಳನ್ನೆಲ್ಲ ಕನ್ನಡವನ್ನಾಗಿ ಮಾಡಿಬಿಡಲಾಯಿತು. ದ್ವಿಭಾಷೆಯ ಪ್ರಯತ್ನಗಳೂ ನಂತರ ದೊಡ್ಡ ಮಟ್ಟದಲ್ಲಿ ನಡೆಯಲಿಲ್ಲ. ಇರಲಿ. ವಿಸಾರಣೈ ನೋಡಲು ಮರೆಯಬೇಡಿ ಮತ್ತೆ.

No comments:

Post a Comment