Mar 2, 2016

ಕರೆಂಟು ಕೇಳುದ್ರೆ ಕೈಕೋಳ ಗ್ಯಾರಂಟಿ!

02/03/2016
ಎಲ್ಲಾ ಸರಕಾರಗಳಲ್ಲೂ ಸೂಪರ್ ಸಿಎಂ ಅಂತೊಬ್ಬರು ಇದ್ದೇ ಇರುತ್ತಾರೆ. ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರಕಾರದಲ್ಲಿ ಸೂಪರ್ ಸಿಎಂ ಪಟ್ಟಕ್ಕೆ ಏರುವುದಕ್ಕೆ ಡಿ.ಕೆ.ಶಿವಕುಮಾರ್ ತುಂಬಾನೇ ಕಷ್ಟಪಡುತ್ತಿದ್ದಾರೆ. ಸಿದ್ಧರಾಮಯ್ಯನವರಿಗೆ ಶಿವಕುಮಾರರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೂ ಹೈಕಮ್ಯಾಂಡಿನಿಂದಲೇ ಶಿವಕುಮಾರ್ ಸಚಿವರಾದವರು. ಇಂಧನವೆಂದರೆ ಪವರ್ರು, ನಾನು ಪವರ್ ಫುಲ್ಲಾಗಿರಬೇಕು ಎಂದು ಯಾರು ಅವರ ಕಿವಿಯೂದಿದರೋ ಇಂಧನ ಮೂಲಗಳನ್ನು ಹೆಚ್ಚಿಸುವುದರ ಕಡೆಗೆ ಗಮನ ಕೊಡದೆ ಪವರ್ರಿನ ಬಗ್ಗೆಯೇ ಅವರ ಗಮನವೆಲ್ಲಾ 'ಸೋರಿ' ಹೋಗುತ್ತಿದೆ. ವರುಷದ ಕೆಳಗೆ ಟಿವಿ 9 ವಾಹಿನಿಯ ವರದಿಗಾರರಿಬ್ಬರು ಕುಟುಕು ಕಾರ್ಯಾಚರಣೆ ನಡೆಸಲು ಡಿ.ಕೆ.ಶಿಯ ಬಳಿಗೆ ಹೋಗಿದ್ದಾಗ ಬೋಗಸ್ ಕಂಪನಿಯಿಂದ ಲಂಚ ಕೊಡಲು ಬಂದಿದ್ದಾರೆ ಎಂದು ದೂರು ನೀಡಿ ಅವರ ಬಂಧನವಾಗುವಂತೆ ನೋಡಿಕೊಂಡಿದ್ದರು ಶಿವಕುಮಾರ್. ಅಷ್ಟಕ್ಕೇ ಸುಮ್ಮನಾಗದೇ ಮತ್ತೆ ಕೇಬಲ್ ಆಪರೇಟುರಗಳ ಮೂಲಕ ಟಿವಿ 9 ವಾಹಿನಿ ಪ್ರಸಾರವಾಗದಂತೆ ಮಾಡಿದ್ದರು ಎಂಬ ವದಂತಿಯೂ ಹರಡಿತ್ತು. ರಾಮನಗರ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ರವರ ಪ್ರಾಬಲ್ಯ ಹೆಚ್ಚುತ್ತಿದ್ದಂತೆ 'ಪವರ್ರೂ' ಹೆಚ್ಚಿಸಿಕೊಳ್ಳಬೇಕೆಂದುಕೊಂಡುಬಿಟ್ಟರಾ? 
ಗಿರಿಧರ್ ರೈ
ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ನಿವಾಸಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ್ ರೈ ಅಲ್ಲಿನ ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಆಗಿದ್ದಾಗೋಗ್ಲೀ ಅಂತ ಇಂಧನ ಸಚಿವರಾದ ಪವರ್ ಫುಲ್ ಡಿ.ಕೆ.ಶಿವಕುಮಾರರಿಗೆ ಫೋನಾಯಿಸಿದ್ದಾರೆ. ಸಮಸ್ಯೆ ಕೇಳಿ ಬಗೆಹರಿಸುತ್ತೇವೆಂದು ಭರವಸೆ ಕೊಟ್ಟರೂ ಮುಗಿಯುತ್ತಿತ್ತು. 'ನನಗೆ ಅವಾಚ್ಯ ಶಬ್ದಗಳಿಂದ ಬಯ್ದರು. ಹಂಗಾಗಿ ಕಂಪ್ಲೇಂಟ್ ಕೊಟ್ಟೆ' ಎಂದು ಡಿ.ಕೆ.ಶಿ ಹೇಳಿದ್ದರೆ, 'ಮೊದಲು ಮಂತ್ರಿಗಳೇ ಕೆಟ್ಟ ಮಾತುಗಳಿಂದ ಬಯ್ದರು, ನನಗೂ ಸಿಟ್ಟು ಬಂದು ತಿರುಗಿಸಿ ಕೆಟ್ಟದಾಗಿ ಬಯ್ದೆ' ಎಂದು ಗಿರಿಧರ್ ರೈ ಹೇಳಿಕೆ ಕೊಟ್ಟಿದ್ದಾರೆ. ಹೋಕ್ಕೋಳ್ಳಿ ಡಿ.ಕೆ.ಶಿ ಪ್ರಕಾರ ಗಿರಿಧರ್ ರೈಯವರೇ ಬಯ್ದಿದ್ದು, ಮಂತ್ರಿಗಳು 'ಸಭ್ಯತೆ'ಯಿಂದಿದ್ದರು ಎಂದೇ ನಂಬೋಣ. ಡಿ.ಕೆ.ಶಿಯವರು ದೂರು ಕೊಟ್ಟಿದ್ದನ್ನೂ ಒಪ್ಪಿಬಿಡೋಣ. ಆದರೆ ಪೋಲೀಸರು ಮಧ್ಯರಾತ್ರಿ ಗಿರಿಧರ್ ರೈಯವರ ಮನೆಗೆ ಹೋಗಿ ಚಾವಣಿ ಹತ್ತಿ ಹೆಂಚು ತೆಗೆದು ಒಳಗಿಳಿದು ದೊಡ್ಡ ದರೋಡೆಕೋರನನ್ನು ಹಿಡಿಯುವಂತೆ ದೂರುದಾರರನ್ನು ಹಿಡಿಯುವ ಅವಶ್ಯಕತೆ ಇತ್ತಾ? ಇದು ಪವರ್ ಫುಲ್ಲೆನ್ನಿಸಿಕೊಳ್ಳಲು ಸೂಪರ್ ಸಿಎಂ ಆಗಲು ಡಿ.ಕೆ.ಶಿ ಮಾಡುತ್ತಿರುವ ಕಿತಾಪತಿಗಳಲ್ಲವೇ? ಪೋಲೀಸರ ಮೇಲೆ ಹಾಕುತ್ತಿರುವ ಒತ್ತಡವಲ್ಲವೇ? ಇಷ್ಟೇ ಅತ್ಯುತ್ಸಾಹವನ್ನು ಇಂಧನ ಮೂಲವನ್ನು ಹೆಚ್ಚಿಸಲು ಉಪಯೋಗಿಸಿದ್ದರೆ ಬೆಂಗಳೂರನ್ನು ಹೊರತುಪಡಿಸಿದ ಕರ್ನಾಟಕ ಕತ್ತಲಲ್ಲಿರುತ್ತಿರಲಿಲ್ಲ. ಸರ್ವಾಧಿಕಾರದ ಧೋರಣೆ ತಾತ್ಕಾಲಿಕವಾಗಿ ಯಶಸ್ಸಿನತ್ತ ಕೊಂಡೊಯ್ಯುತ್ತಿದೆ ಎನ್ನುವ ಭಾವನೆ ಮೂಡಿಸಬಹುದು ಆದರದು ಶಾಶ್ವತವಲ್ಲ ಎನ್ನುವುದು 'ಪವರ್' ಮಂತ್ರಿಗಳಿಗೆ ನೆನಪಿದ್ದರೆ ಒಳ್ಳೆಯದು. ಉದಾಹರಣೆಯಾಗಿ ಅವರದೇ ಪಕ್ಷದಲ್ಲಿ ಮೂಲೆಗುಂಪಾದ ಅನೇಕ ಧುರೀಣರಿದ್ದಾರೆ.

No comments:

Post a Comment