Mar 11, 2016

ಮೇಕಿಂಗ್ ಹಿಸ್ಟರಿ: ತಲ್ಲೂರು ದೇಶಗತಿಯ ಸೂಕ್ಷ್ಮಜಗತ್ತು

Making History
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

11/03/2016
ಬೆಳಗಾವಿ ಜಿಲ್ಲೆಯ ಸೌಂದತ್ತಿ ತಾಲ್ಲೂಕಿನ ಒಂದು ಹಳ್ಳಿ ತಲ್ಲೂರು. ಬ್ರಿಟೀಷರ ಆಗಮನಕ್ಕೂ ಮುನ್ನ ತಲ್ಲೂರಿನಲ್ಲಿದ್ದ ಲಿಂಗಾಯತ ದೇಸಾಯಿ ಕುಟುಂಬದ ಸಾಮ್ರಾಜ್ಯ ಮೂವತ್ತು ಹಳ್ಳಿಗಳಿಗೆ ವಿಸ್ತರಿಸಿತ್ತು. ತಲ್ಲೂರು ದೇಶಗತಿ ಮೇಲೆ ಅಶೋಕ್ ಶೆಟ್ಟರ್ ರವರು ನಡೆಸಿದ ಸಂಶೋಧನೆಯ ಆಧಾರದಲ್ಲಿ ಕರ್ನಾಟಕ ಅರೆಊಳಿಗಮಾನ್ಯ ಪದ್ಧತಿಯ ಸೂಕ್ಷ್ಮಜಗತ್ತಿನ ತುಣುಕುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. (71)

ಬ್ರಿಟೀಷರು ಕೈವಶ ಮಾಡಿಕೊಂಡ ನಂತರ ತಲ್ಲೂರು ಮಾತ್ರ ದೇಸಾಯಿಗಳ ಇನಾಂ ಆಗಿ ಮುಂದುವರೆಯಿತು. ಆದರೂ ಉಳಿದ ಮೂವತ್ತು ಹಳ್ಳಿಗಳ ಕಾಲುಭಾಗದಷ್ಟು ಆದಾಯವನ್ನು ತಲ್ಲೂರಿನ ದೇಸಾಯಿಗಳಿಗೆ ನೀಡಲಾಗುತ್ತಿತ್ತು. ತಲ್ಲೂರಿನ ಇನಾಂ ಒಂದರಲ್ಲೇ 10,600 ಎಕರೆಗಳಷ್ಟಿತ್ತು ಎಂದು ಹೇಳಲಾಗುತ್ತದೆ. ಇದರಲ್ಲಿ ಆರುಸಾವಿರ ಎಕರೆ ಕಾಡು, ಉಳಿದ ನಾಲ್ಕುಸಾವಿರ ಎಕರೆ ಕೃಷಿಭೂಮಿ. ಸರಕಾರಕ್ಕೆ 2,200 ರುಪಾಯಿ ವಾರ್ಷಿಕ ತೆರಿಗೆ ಕಟ್ಟಲಾಗುತ್ತಿತ್ತು. ಇದರಲ್ಲಿ ‘ಪರಿಹಾರಾರ್ಥ’ವಾಗಿ 192 ರುಪಾಯಿಗಳನ್ನು ಬ್ರಿಟೀಷ್ ಸರಕಾರ ಹಿಂದಿರುಗಿಸುತ್ತಿತ್ತು. ತಲ್ಲೂರಿನಲ್ಲಿ ಬ್ರಿಟೀಷ್ ಸರಕಾರವನ್ನು ಗೌಡ ಪ್ರತಿನಿಧಿಸುತ್ತಿದ್ದ. ಆದಾಯ ತೆರಿಗೆ ಮತ್ತು ನ್ಯಾಯಪಾಲನೆಯೆರಡೂ ಅವನ ಕೆಲಸವಾಗಿತ್ತು. ತಲ್ಲೂರು ದೇಸಾಯಿಗಳ ವಾರ್ಷಿಕ ತೆರಿಗೆಯನ್ನು ಗೌಡ ಟ್ರೆಷರಿಗೆ ವರ್ಗಾಯಿಸುತ್ತಿದ್ದ.

ಹಿಂದೆ ಜಹಗೀರಿನವರು ದೇಸಾಯಿಗೆ ಕೊಡಬೇಕಿದ್ದ ತೆರಿಗೆಗಳನ್ನು ವಸ್ತುವಿನ ರೂಪದಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ ಬ್ರಿಟೀಷರು ಅಧಿಕಾರ ಹಿಡಿದ ನಂತರ ಹಣದ ರೂಪದಲ್ಲಿ ಮಾತ್ರ ತೆರಿಗೆ ಸಂಗ್ರಹಿಸುವುದಾರಂಭವಾಯಿತು.

ಹಳ್ಳಿಯ ಜನರು ದೇಸಾಯಿಗಳಿಗೆ ಉಪಯುಕ್ತರಾಗುವಂತಿರಬೇಕು ಎಂಬ ಪೂರ್ವ ನಿರ್ಧರಿತ ನಿಯಮವಿತ್ತು. ಇದಕ್ಕೆ ಕಾರಣ ತಲ್ಲೂರಿನ ಸುತ್ತಮುತ್ತಲಿದ್ದ ರೈತರು ಹತ್ತಲವು ವಿಧದಲ್ಲಿ ದೇಸಾಯಿಗಳ ಮೇಲೆ ಅವಲಂಬಿತರಾಗಿದ್ದರು. ಅವರ ಹಸುಗಳು ದೇಸಾಯಿಯ ಕಾಡಿನಲ್ಲಿ ಮೇಯಬೇಕಿತ್ತು. ಉರುವಲನ್ನು, ಮರಮುಟ್ಟುಗಳನ್ನು ಇದೇ ಕಾಡಿನಿಂದ ಪಡೆಯಬೇಕಿತ್ತು. ನೀರನ್ನು ಇಲ್ಲಿಂದಲೇ ತೆಗೆದುಕೊಳ್ಳುತ್ತಿದ್ದರು. ದೇಸಾಯಿಗಳ ವಿರುದ್ಧ ದನಿಯೆತ್ತುವ ಧೈರ್ಯ ತೋರಿದರೆ ಈ ಸವಲತ್ತುಗಳಿಗೆಲ್ಲ ಕೊಕ್ಕೆ ಬೀಳುತ್ತಿತ್ತು. ಹರಾಜಿನ ಮುಖಾಂತರ ಭೂಮಿಯನ್ನು ಐದು ವರ್ಷದ ವ್ಯವಸಾಯಕ್ಕೆ ರೈತರಿಗೆ ಗುತ್ತಿಗೆ ನೀಡಿದ ನಂತರ ಈ ಬಾಡಿಗೆದಾರರು ದೇಸಾಯಿಗಳಿಗೆ ಕೊರ್ವಿ (ಬಿಟ್ಟಿ) ಸಲ್ಲಿಸಬೇಕಿತ್ತು. ಸಲ್ಲಿಸದಿದ್ದಲ್ಲಿ ಪ್ರತೀ ವರುಷದ ಕಟಾವಿನ ಸಮಯದಲ್ಲಿ 20 ರುಪಾಯಿಗಳನ್ನು ನೀಡಬೇಕಿತ್ತು.

ತಲ್ಲೂರಿನ ಪಂಚಾಯತಿಯನ್ನು ಉಚಿತ ಶ್ರಮದಿಂದ ಕಟ್ಟಿದ್ದು ರೈತ ಕಾರ್ಮಿಕರು. ಕಟ್ಟಲು ಬೇಕಾದ ಮರದ ದಿಮ್ಮಿಗಳನ್ನು ದೂರದ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಿಂದಲೂ ಹೊತ್ತು ತಂದಿದ್ದರು.

ತಲ್ಲೂರಿನಲ್ಲಿ ಎಂಟು ಹೊಲೆಯರ ಕುಟುಂಬಗಳಿದ್ದವು. ದೇಶಗತಿಗಳಿಗೆ ಅವರು ಮಾಡುವ ಸೇವೆಗೆ ಊರಿನ ಜನರು ಹಣ ಪಾವತಿಸಬೇಕಿತ್ತು.

ದೇಶಗತಿ ಸಾಮ್ರಾಜ್ಯದ ಆಳ್ವಿಕೆಯಿಂದ ಉದ್ಭವವಾದ ಕೆಲವು ಧಾರ್ಮಿಕ ಆಚರಣೆಗಳ ಕುರಿತು ಅಶೋಕ್ ಶೆಟ್ಟರ್ ಉತ್ತಮ ಒಳನೋಟಗಳನ್ನು ಕೊಡುತ್ತಾರೆ.

ತಲ್ಲೂರಿನ ದೇಸಾಯಿಗಳಂತ ಕುಟುಂಬಗಳಿಂದ ಮಧ್ಯವರ್ತಿ – ಖರೀದಿದಾರರ (comprador) ವರ್ಗ ಹುಟ್ಟುತ್ತದೆ. ಇದು ಹತ್ತೊಂಬತ್ತನೇ ಶತಮಾನದ ಕೊನೆ ಮತ್ತು ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ನಿಚ್ಚಳವಾಗುತ್ತದೆ. ಅದನ್ನು ಮೇಕಿಂಗ್ ಹಿಸ್ಟರಿಯ ಮೂರನೇ ಭಾಗದಲ್ಲಿ ಚರ್ಚಿಸೋಣ. (ಸಾಕಿಯ ಸಾವಿನಿಂದಾಗಿ ಮೂರನೇ ಭಾಗ ಹೊರಬರಲಿಲ್ಲ – ಅನುವಾದಕ)

ಸದ್ಯಕ್ಕೆ ತಲ್ಲೂರಿನ ದೃಷ್ಟಿಯಿಂದ ಕಂಡಾಗ ವಸಾಹತುಶಾಹಿ ಅರೆಊಳಿಗಮಾನ್ಯ ಪದ್ಧತಿಯ ಅಡಿಪಾಯ ಮತ್ತು ಮೇಲ್ರಚನೆಯನ್ನು ಹೇಗೆ ಗಟ್ಟಿಗೊಳಿಸಿತು ಎನ್ನುವುದು ಗೋಚರಿಸುತ್ತದೆ.

ಮುಂದಿನ ವಾರ:
ಮಧ್ಯವರ್ತಿ – ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಆವರಣ


Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

No comments:

Post a Comment