Feb 27, 2016

ಪಂಚಾಯತಿ ಚುನಾವಣೆಗೆ ಸುರಿದ ಹಣವೆಷ್ಟು? ನೀವೂ ಲೆಕ್ಕ ಹಾಕಿ!

karnataka panchayat elections 2016
ಭಾರತದ ರಾಜಕೀಯ ವ್ಯವಸ್ಥೆಯ ಬುನಾದಿ ಪಂಚಾಯತಿ ವ್ಯವಸ್ಥೆ ಎಂದಿದ್ದರು ಮಹಾತ್ಮ ಗಾಂಧಿ. ಪಾಪ! ಆ ಮಹಾತ್ಮ ಯಾವ ಅರ್ಥದಲ್ಲಿ ಹೇಳಿದ್ದರೋ ಏನೋ ಇವತ್ತು ಭಾರತದ ಭ್ರಷ್ಟ ರಾಜಕೀಯ ವ್ಯವಸ್ಥೆಯ ಬುನಾದಿಯಾಗಿಬಿಟ್ಟಿದೆ ಪಂಚಾಯತಿ ವ್ಯವಸ್ಥೆ. ಎಲ್ಲಾ ಕೆಲಸಕ್ಕೂ ಶಾಸಕ, ಸಂಸದರ ಬಳಿಗೆ ಜನರು ತೆರಳುವಂತಾಗಬಾರದು; ಪ್ರತಿಯೊಂದು ಹಳ್ಳಿಯಲ್ಲೂ, ತಾಲ್ಲೂಕಿನಲ್ಲೂ, ಜಿಲ್ಲೆಯಲ್ಲೂ ಸರಕಾರವನ್ನು ಪ್ರತಿನಿಧಿಸುವವ ಜನಪ್ರತಿನಿಧಿಗಳಿರಬೇಕು, ಸ್ಥಳೀಯ ಬೇಕು ಬೇಡಗಳನ್ನು ಅವರು ನೋಡಿಕೊಳ್ಳಬೇಕು ಎಂಬ ಉದ್ದೇಶದ ಪಂಚಾಯತಿ ವ್ಯವಸ್ಥೆಯನ್ನು ಹಾಳುಗೆಡವಿದವರ್ಯಾರು? ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಮುಗಿದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಖರ್ಚಾಗಿರಬಹುದಾದ ಅಂದಾಜು ಮೊತ್ತವೆಷ್ಟು?

ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆಗೆ ವಿಜ್ಞಾನಿಗಳು ಏನೇನೋ ತಿಪ್ಪರಲಾಗ ಹಾಕಿ ಉತ್ತರ ಕಂಡುಹಿಡಿದುಬಿಡಬಹುದು ಆದರೆ ಚುನಾವಣೆಗಳನ್ನು ಭ್ರಷ್ಟರಾಗಿಸಿದ್ದು ಮತದಾರರಾ ಅಥವಾ ಅಭ್ಯರ್ಥಿಗಳಾ ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು ಕಷ್ಟ ಕಷ್ಟ. ಅಭ್ಯರ್ಥಿಗಳನ್ನು ಕೇಳಿ ನೋಡಿ ‘ಏನ್ ಮಾಡೋದ್ ಹೇಳಿ. ವೋಟು ಕೇಳಕ್ಕೆ ಹೋದ್ರೆ ಆ ಕೆಲ್ಸ ಆಗಿಲ್ಲ, ಈ ಕೆಲ್ಸ ಆಗಿಲ್ಲ ಅಂತ ಹತ್ತು ನಿಮಿಷ ಬಯ್ತಾರೆ. ಕೆಲ್ಸ ಮಾಡ್ಕೊಡ್ತೀವಿ ನಮಗೆ ವೋಟ್ ಹಾಕಿ ಎಂದು ಹೊರಟರೆ ಏನ್ ಹಂಗೆ ಹೊಂಟುಬಿಟ್ರಿ ಅಂತ ನೇರವಾಗೇ ದುಡ್ಡು ಕೇಳ್ತಾರೆ’ ಎನ್ನುತ್ತಾರೆ. ‘ಅಯ್ಯೋ ಗೆದ್ದ ಮೇಲೆ ಸರಿಯಾಗಿ ಕಮಿಷನ್ ಹೊಡೆಯಲ್ವಾ? ಕೊಡ್ಲಿ ಬಿಡಿ’ ಅನ್ನುತ್ತಾರೆ ಮತದಾರರು. ‘ಈ ಪಂಚಾಯತಿಯವ್ರು ಎಂ.ಎಲ್.ಸಿ ಎಲೆಕ್ಷನ್ನಿನಲ್ಲಿ ಸರಿಯಾಗಿ ದುಡ್ಡು ಮಾಡಿಕೊಂಡಿಲ್ವಾ? ಹಂಗೇ ನಾವೂವೇ’ ಅನ್ನೋರೂ ಇದ್ದಾರೆ. ಹಣ ಕೊಟ್ಟವರಿಗೇ ಮತ ಚಲಾಯಿಸುತ್ತಾರೆ ಎಂದೆಲ್ಲ ನಂಬುವುದು ಕಷ್ಟವಾದರೂ ಹಣ ತೆಗೆದುಕೊಳ್ಳಲು ಹಿಂಜರಿಯುವವರ ಸಂಖೈ ದಿನೇ ದಿನೇ ಕಡಿಮೆಯಾಗುತ್ತಿರುವುದು ಸುಳ್ಳಲ್ಲ. 

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಒಂದೂಕಾಲು ಒಂದೂವರೆ ಕೋಟಿಯಷ್ಟು ಖರ್ಚು ಮಾಡಿದ್ದರೆ ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಅರವತ್ತರಿಂದ ಎಂಭತ್ತು ಲಕ್ಷ ಖರ್ಚು ಮಾಡಿದ್ದಾರೆ, ಒಂದು ಕೋಟಿ ಖರ್ಚು ಮಾಡಿಯೂ ಸೋತವರಿದ್ದಾರೆ. ಇನ್ನು ಉಳಿದ ಅಭ್ಯರ್ಥಿಗಳೂ ಒಂದಷ್ಟು ಖರ್ಚು ಮಾಡಿದ್ದಾರೆ, ಅದನ್ನು ಬಿಟ್ಟುಬಿಡೋಣ ಬಿಡಿ. ಮೊದಲ ಸ್ಥಾನ ಪಡೆದ ಅಭ್ಯರ್ಥಿ ಒಂದು ಕೋಟಿ ಮತ್ತು ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಐವತ್ತು ಲಕ್ಷ ಖರ್ಚು ಮಾಡಿದ್ದಾರೆಂದು ಇಟ್ಟುಕೊಳ್ಳೋಣ, ಅಲ್ಲಿಗೆ ಇಬ್ಬರೂ ಸೇರಿ ಮಾಡಿದ ಖರ್ಚು ಒಂದೂವರೆ ಕೋಟಿ. ಒಟ್ಟು 1083 ಜಿಲ್ಲಾ ಪಂಚಾಯತ್ ಸ್ಥಾನಗಳಿದ್ದವು. ಇನ್ನೂರು, ಬೇಡ ಮುನ್ನೂರು ಸ್ಥಾನಗಳಲ್ಲಿ ಹಣದ ವಹಿವಾಟೇ ನಡೆಯಲಿಲ್ಲ ಎಂದು ‘ನಂಬೋಣ’. ಅಲ್ಲಿಗೆ ಉಳಿದಿದ್ದು 783 ಸ್ಥಾನಗಳು. 

783 x 1.5 ಕೋಟಿ = 1174,50,00,000 ಕೋಟಿ ಹಣ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಹರಿದು ಹೋಗಿದೆ! (ಇಷ್ಟೊಂದು ಉದ್ದದ ಸಂಖೈ ಇದ್ದಾಗ ಎಷ್ಟು ಸಾವಿರ ಕೋಟಿ ಎಂದು ಲೆಕ್ಕ ಹಾಕುವುದು ಗೊತ್ತಿಲ್ಲ, ನಿಮಗೆ ಗೊತ್ತಾದರೆ ತಿಳಿಸಿ!)

ತಾಲ್ಲೂಕು ಪಂಚಾಯತಿಗೆ ಬರುವ ಅನುದಾನಗಳು ಕಡಿಮೆಯಂತೆ. ಹಾಗಾಗಿ ಇಲ್ಲಿ ಖರ್ಚಾಗುವ ಹಣವೂ ಕಡಿಮೆ. ಇಪ್ಪತ್ತು ಮೂವತ್ತು ಲಕ್ಷ ಖರ್ಚು ಮಾಡುವವರೂ ಇದ್ದಾರಾದರೂ ಅಂದಾಜು ಲೆಕ್ಕದ ಸಲುವಾಗಿ ಗೆದ್ದ ಅಭ್ಯರ್ಥಿ ಹದಿನೈದು ಲಕ್ಷ ಮತ್ತು ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಐದು ಲಕ್ಷ ಖರ್ಚು ಮಾಡಿದ್ದಾರೆ ಎಂದುಕೊಳ್ಳೋಣ. ಅಲ್ಲಿಗೆ ಒಂದು ತಾಲ್ಲೂಕು ಪಂಚಾಯತಿ ಸ್ಥಾನಕ್ಕೆ ಇಪ್ಪತ್ತು ಲಕ್ಷ. ಒಟ್ಟು ತಾಲ್ಲೂಕು ಪಂಚಾಯತಿ ಸ್ಥಾನಗಳು 3884, ಅದರಲ್ಲಿ ಸಾವಿರ ಸ್ಥಾನಗಳಲ್ಲಿ ಯಾವುದೇ ದುಡ್ಡು ಹರಿಯಲಿಲ್ಲ ಎಂದು ಬಿಟ್ಟುಬಡೋಣ. ಉಳಿದಿದ್ದು 2884 ಸ್ಥಾನಗಳು.

2884 x 20 ಲಕ್ಷ = 576,80,00,000 ಕೋಟಿ ಹಣ ತಾಲ್ಲೂಕು ಪಂಚಾಯತಿಗಳಲ್ಲಿ ಖರ್ಚಾಗಿದೆ!

(ಇಷ್ಟೊಂದು ಉದ್ದದ ಸಂಖೈ ಇದ್ದಾಗ ಎಷ್ಟು ಸಾವಿರ ಕೋಟಿ ಎಂದು ಲೆಕ್ಕ ಹಾಕುವುದು ಗೊತ್ತಿಲ್ಲ, ನಿಮಗೆ ಗೊತ್ತಾದರೆ ತಿಳಿಸಿ!)

ನೆನಪಿರಲಿ, ಇಲ್ಲಿ ಎರಡು ಅಭ್ಯರ್ಥಿಗಳ ಖರ್ಚನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಕನಿಷ್ಟ ಖರ್ಚನ್ನು ಮಾತ್ರ ಪರಿಗಣಿಸಲಾಗಿದೆ. ಪೂರ್ಣ ಖರ್ಚು ಇದರ ಎರಡು ಮೂರು ನಾಲಕ್ಕು ಪಟ್ಟೇ ಹೆಚ್ಚಿರಬಹುದು.

ಅಲ್ಲಿಗೆ ಕನಿಷ್ಟ 1751 ಕೋಟಿ ರುಪಾಯಿ (ಲೆಕ್ಕಾ ಕರೆಕ್ಟಾ?!) ಖರ್ಚಾಗಿದೆ. ಈ ಪಂಚಾಯತಿ ಸದಸ್ಯರು ಇನ್ನೇನು ಸಮಾಜದ ಪರವಾಗಿ ಕಾರ್ಯನಿರ್ವಹಿಸುತ್ತಾರೆ? 

ಹಣ ಖರ್ಚಾಗಿರುವುದು ಭ್ರಷ್ಟತೆಯನ್ನು ಹೆಚ್ಚಿಸುವುದರ ಜೊತೆಜೊತೆಗೇ ಆರ್ಥಿಕ ಸಾಮರ್ಥ್ಯವಿಲ್ಲದವರಿಗೆ ಚುನಾವಣೆಯಲ್ಲಿ ಗೆಲ್ಲುವ, ಪಕ್ಷದಿಂದ ಸ್ಪರ್ಧಿಸುವ ಅವಕಾಶವನ್ನೂ ಕಸಿದುಕೊಳ್ಳುತ್ತಿದೆ. ಊರಿನಲ್ಲಿ ವಾಸವಿರುವ ಸ್ಥಳೀಯ ಅಭ್ಯರ್ಥಿಗಳಿಗಿಂತ ನಗರಗಳಲ್ಲಿ ವಾಸಿಸುತ್ತ ಚುನಾವಣೆಗೆ ನಿಂತವರ ಸಂಖೈ ಹೆಚ್ಚುತ್ತಿದೆ, ಜೊತೆಗೆ ವ್ಯಾಪಾರ ವಹಿವಾಟು ನಡೆಸುವ ವ್ಯಕ್ತಿಗಳಿಗೇ ಕರ್ನಾಟಕದ ಪ್ರಮುಖ ಮೂರೂ ಪಕ್ಷಗಳು ಮಣೆ ಹಾಕುತ್ತಿವೆ. ಅಲ್ಲಿಗೆ ಪಂಚಾಯತ್ ರಾಜ್ ಎಂಬ ಅಧಿಕಾರವನ್ನು ಜನರಿಗೆ ತಲುಪಿಸುವ ವಿಕೇಂದ್ರೀಕರಣದ ವ್ಯವಸ್ಥೆ ಸಂಪೂರ್ಣವಾಗಿ ಹಳ್ಳ ಹಿಡಿಯುವತ್ತ ದುಡುದುಡನೆ ಸಾಗುತ್ತಿದೆ.

No comments:

Post a Comment

Related Posts Plugin for WordPress, Blogger...