Feb 10, 2016

ದೇವರ ನಾಡಲ್ಲಿ ಪ್ರತಿಯೊಬ್ಬರೂ ಕತೆ ಹೆಣೆಯುವವರೇ!

Dr Ashok K R
ದೃಶ್ಯ 1: ಪ್ರಮುಖ ಪಾತ್ರಧಾರಿ ಶರತ್ ಶೆಟ್ಟಿ ತನ್ನ ಸಹಪಾಠಿ ಶಬ್ಬೀರ್ ಮನೆಯ ಕಡೆಗೆ ಹೋಗುತ್ತಾನೆ. ಅಲ್ಲಿರುವ ಬಾವಿಯ ಬಳಿಗೆ ನೀರು ಸೇದಿಕೊಳ್ಳಲು ಬರುವ ಸವಿತಾಳ ಜೊತೆಗೆ ಬಳಿಯಿದ್ದ ಮುಸ್ಲಿಂ ಮಹಿಳೆ ಹರಟುತ್ತಾಳೆ. ಮುಂದೊಂದು ದೃಶ್ಯದಲ್ಲಿ ಸವಿತಾ ‘ಕೆಳ ಜಾತಿಯ’ ಹುಡುಗಿ ಎಂದು ನಿರ್ದೇಶಕರು ತೋರಿಸುತ್ತಾರಾದರೂ ಮುಸ್ಲಿಮರ ಜೊತೆ ಜೊತೆಗೆ ಬದುಕುತ್ತಿರುವವರು ನಮ್ಮ ದೇಶದ ದಲಿತರು ಎಂದು ನೀರ ಬಾವಿಯ ಮೂಲಕ ತೋರಿಸಿಕೊಡುತ್ತಾರೆ. ಚಿತ್ರದಲ್ಲಿ ಈ ಮಟ್ಟಿಗಿನ ವಾಸ್ತವಿಕ ಸೂಕ್ಷ್ಮತೆಗಳಿವೆ.

ದೃಶ್ಯ 2: ರಿಚರ್ಡ್ ಸಂಗಡಿಗರೊಂದಿಗೆ ವಿಶೇಷ ಆರ್ಥಿಕ ವಲಯದ (SEZ) ವಿರುದ್ಧ ಸಚಿವರು ಮತ್ತು ಉದ್ಯಮಪತಿಗಳ ನಡುವೆ ನಡೆಯುತ್ತಿದ್ದ ಮೀಟಿಂಗಿನ ಕಟ್ಟಡದ ವಿರುದ್ಧ ಪ್ರತಿಭಟಿಸುತ್ತಿರುತ್ತಾರೆ. ಸಭೆ ಮುಗಿದ ನಂತರ ಸಚಿವ ಸಿ.ಎಂ.ನಾಯ್ಕ ಹೊರಬಂದು ಪ್ರತಿಭಟನಕಾರರೊಂದಿಗೆ ಮಾತನಾಡುತ್ತಿರುವಾಗ ಉದ್ಯಮಪತಿ ಪದ್ಮನಾಭ ಶೆಟ್ಟಿ ಎಲ್ಲರ ಮುಂದೆಯೇ ತನ್ನ ಕಡೆಯ ಗೂಂಡಾಗಳನ್ನು ಕರೆದು ಹೋಗಿ ಗಲಾಟೆ ಮಾಡಿ ಎಂದು ಕಣ್ಸನ್ನೆ ಮಾಡುತ್ತಾನೆ. ಅವನ ಮುಂದೆ ತಲೆಯಾಡಿಸಿ ಹೋದ ಗೂಂಡಾಗಳು ಜನರ ನಡುವೆ ಸೇರಿ ಮಂತ್ರಿಗಳ ಕಡೆಗೆ ಚಪ್ಪಲಿ ಮೊಟ್ಟೆ ಎಸೆಯುತ್ತಾರೆ. ಎಲ್ಲರ ಮುಂದೆಯೇ ಪದ್ಮನಾಭ ಶೆಟ್ಟಿ ಇದನ್ನು ಮಾಡಿದರು ಪ್ರತಿಭಟನಕಾರರಲ್ಲಿ ಒಬ್ಬರಿಗೂ ಇದು ಶೆಟ್ಟಿ ಮಾಡಿದ ಕೆಲಸ ಎನ್ನುವ ಅನುಮಾನ ಬರುವುದಿಲ್ಲ! ಚಿತ್ರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಇಂತಹ ಅವಾಸ್ತವಿಕ ಅಸೂಕ್ಷ್ಮತೆಗಳೂ ಇವೆ!

ಇಡೀ ಚಿತ್ರ ನಡೆಯುವುದು ಒಂದೂವರೆ ದಿನ. ಪೂರಕವಾಗಿ ಒಂದಷ್ಟು ಫ್ಲ್ಯಾಷ್ ಬ್ಯಾಕುಗಳು, ಮತ್ತು ಕತೆ ಕಟ್ಟುವವರ ಕತೆಗಳು! ಒಟ್ಟಾರೆ ಒಂದು ಸರಳ ಕತೆಯನ್ನು ಉತ್ತಮವೆನ್ನಿಸುವಂತೆ ಮಾಡಿರುವುದು ಚಿತ್ರಕತೆ. ಚಿತ್ರಕತೆಯ ಶೈಲಿಯಲ್ಲಿ ಹೊಸತನವಿದೆ. ಬರುವ ಯಾವೊಂದು ಪಾತ್ರವೂ ಒಂದು ದೃಶ್ಯಕ್ಕೆ ಸೀಮಿತವಾಗದೆ ಮುಂದೊಂದು ದೃಶ್ಯದಲ್ಲಿ ಕತೆಯನ್ನು ಮುಂದಕ್ಕೋಡಿಸುವ ಚಾಲಕ ಶಕ್ತಿಯಾಗುತ್ತಾರೆ. ಸಚಿವ ಸಿ.ಎಂ.ನಾಯ್ಕರು ಕಾಲೇಜಿನ ಕಾರ್ಯಕ್ರಮಕ್ಕೆ ಬರಬೇಕಿದ್ದ ದಿನವೇ ಕ್ಲಾಸ್ ರೂಮಿನಲ್ಲಿ ಸ್ಪೋಟವಾಗುತ್ತದೆ. ಕೆಳ ಜಾತಿಯ ಪ್ರಾಧ್ಯಾಪಕ ಸಿದ್ದು ಗಾಯಗೊಳ್ಳುತ್ತಾನೆ. ಈ ಸ್ಪೋಟ ಸಿ.ಎಂ.ನಾಯ್ಕರ ವಿರುದ್ಧದ ಸಂಚಾ ಅಥವಾ ಕೋಮು ದಳ್ಳುರಿಗೆ ಕಾರಣವೇ ಬೇಕಿಲ್ಲದ ಊರೊಂದರಲ್ಲಿ ನಡೆದ ವಿದ್ವಂಸಕ ಕೃತ್ಯವಾ? ಎನ್ನುವುದರ ಸುತ್ತಲೇ ಕತೆ ಸಾಗುತ್ತದೆ. ಸ್ಪೋಟದ ಹಿಂದಿನ ಸಂಚನ್ನು ಹುಡುಕುವ ಹೊಣೆ ಎಸ್.ಪಿ ಪಾತ್ರದಲ್ಲಭಿನಯಿಸಿರುವ ಪ್ರಕಾಶ್ ರೈರವರದು. ಒಬ್ಬೊಬ್ಬ ಪ್ರಾಧ್ಯಾಪಕರೂ ಒಂದೊಂದು ಕತೆ ಹೇಳುತ್ತಾರೆ. ಕೆಲವರ ಪ್ರಕಾರ ಇದು ಕಮ್ಯುನಿಷ್ಟರ ಕೆಲಸ, ಹಲವರಿದನ್ನು ಮುಸ್ಲಿಂ ಮೂಲಭೂತವಾದಕ್ಕೆ ಅಂಟಿಸಿದರೆ ಮತ್ತೆ ಕೆಲವರು ಇದು ಹಿಂದೂ ಮೂಲಭೂತವಾದ ಸಿದ್ದು ಎಂಬ ಕೆಳಜಾತಿಯ ಪ್ರಾದ್ಯಾಪಕನನ್ನು ಮುಗಿಸಲು ಮಾಡಿದ ಯತ್ನ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಆಗಿದ್ದರೆ ಬಾಂಬ್ ಸಿಡಿಸಿದ್ದು ಯಾರು? ಎನ್ನುವ ತನಿಖೆಯಲ್ಲಿ ತೆರೆದುಕೊಳ್ಳುವುದು ಶರತ್ ಶೆಟ್ಟಿ, ಮ್ಯಾಡಿ ಮತ್ತು ರಾಮಚಂದ್ರ ಭಟ್ಟರ ನಡುವಿನ ಗೆಳೆತನ.

ಶರತ್ ಶೆಟ್ಟಿ ಉದ್ಯಮಪತಿ ಪದ್ಮನಾಭ ಶೆಟ್ಟಿಯವರ ಮಗ, ಬಂಡವಾಳಶಾಹಿತನದ ಪ್ರತೀಕ; ಮ್ಯಾಡಿ ಅಲಿಯಾಸ್ ಮೈಖೆಲ್ ಮಡಗಾಸ್ಕರ್ ಕಮ್ಯುನಿಷ್ಟ್ ಹೋರಾಟಗಾರ ರಿಚರ್ಡ್ ಮಗ, ಇವರ ಹೋರಾಟವಿರುವುದು ಪದ್ಮನಾಭ ಶೆಟ್ಟಿಯವರ ವಿರುದ್ಧ!; ಇನ್ನು ರಾಮಚಂದ್ರ ಭಟ್ಟ ಆರೆಸ್ಸೆಸ್ಸಿನ ಕಟ್ಟಾಳು, ಹಿಂದೂ ಮೂಲಭೂತವಾದತನದ ಪ್ರತೀಕ! ಸೈದ್ಧಾಂತಿಕವಾಗಿ ಒಂದೊಂದು ದಿಕ್ಕಿನಲ್ಲಿರುವ ಈ ಮೂವರನ್ನೂ ಜೊತೆಯಾಗಿಸಿರುವುದು ಗೆಳೆತನವೆಂಬ ಬಂಧ! ಗೆಳೆತನಕ್ಕೂ ಸಿದ್ಧಾಂತಗಳಿಗೂ ಸಂಬಂಧವಿಲ್ಲ ಎನ್ನುವ ಅಂಶವನ್ನು ನಿರ್ದೇಶಕರು ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಆದರೆ ಮುಂದೆ ಸಾಗುತ್ತಿದ್ದಂತೆ ಹೇಗೆ ಬಂಡವಾಳಶಾಹಿತನ ತನ್ನ ಅನುಕೂಲಕ್ಕೆ ಧರ್ಮ ಮತ್ತು ಹೋರಾಟಗಳನ್ನು ಬಳಸಿಕೊಳ್ಳುತ್ತದೆ ಎನ್ನುವುದನ್ನೂ ತೋರಿಸಿದ್ದಾರೆ. ಪದ್ಮನಾಭ ಶೆಟ್ಟರು ರಾಮಚಂದ್ರನ ಭಟ್ಟನ ಗುರು ಅತ್ರಾಡಿ ಗೋವಿಂದನ ಸಿದ್ಧಾಂತಗಳ ಬಗ್ಗೆ ಚೂರೂ ಗೌರವ ಕೊಡದಿದ್ದರೂ ಹಣ ಸಹಾಯ ಮಾಡುತ್ತಾನೆ. ತನ್ನನುಕೂಲಕ್ಕೆ ರಾಜಕಾರಣಿಗಳನ್ನು ಉಪಯೋಗಿಸಿಕೊಳ್ಳುತ್ತಾನೆ. ಗೆಳೆತನದ ಬಂಧವಿದ್ದರೂ ಚಿತ್ರ ಸಾಗಿದಂತೆ ಶರತ್ ಶೆಟ್ಟಿ ತನ್ನನುಕೂಲಕ್ಕೆ ರಾಮಚಂದ್ರ ಭಟ್ಟ ಮತ್ತು ಮ್ಯಾಡಿಯನ್ನು ಉಪಯೋಗಿಸಿಕೊಳ್ಳುತ್ತಾನೆ. ಚಿತ್ರದ ಓಘದಲ್ಲಿ ಸವಿತಾಳೊಡನೆ ಪ್ರೀತಿಯಲ್ಲಿ ಬಿದ್ದ ಶರತ್ ಶೆಟ್ಟಿ ಆ ಪ್ರೀತಿ ಸಫಲವಾಗಲು ತನ್ನ ಗೆಳೆಯರಿಂದ ನೆರವು ಪಡೆದುಕೊಳ್ಳುತ್ತಿದ್ದಾನೆ ಎಂದಷ್ಟೇ ಅಂದುಕೊಂಡರೂ ನಡೆದುಬಿಡುತ್ತೆ. ಆದರೆ ಪ್ರತಿಯೊಬ್ಬನಿಗೂ ಒಂದು ಸೈದ್ಧಾಂತಿಕ ಹಿನ್ನೆಲೆಯಿರುವ ಕಾರಣ ಅರ್ಥವ್ಯಾಪ್ತಿಯನ್ನು ಕೊಂಚ ಹಿಗ್ಗಿಸಿಕೊಂಡರೆ ಒಳ್ಳೆಯದೇನೋ? ಪ್ರಾರಂಭದಲ್ಲಿ ವಿರುದ್ಧ ದಿಕ್ಕಿನ ರಾಮಚಂದ್ರ ಭಟ್ಟ (ಹಿಂದೂ ಮೂಲಭೂತವಾದ) ಮತ್ತು ಮ್ಯಾಡಿಯನ್ನು (ಕಮ್ಯುನಿಷ್ಟ್) ಜೊತೆಗೂಡಿಸುವುದು ಶರತ್ ಶೆಟ್ಟಿ (ಬಂಡವಾಳಶಾಹಿ). ಕೊನೆಗೆ ಎಲ್ಲವನ್ನೂ ಛಿದ್ರಛಿದ್ರವಾಗಿಸುವುದೂ ಕೂಡ ಅದೇ ಬಂಡವಾಳಶಾಹಿತನ. ತುಂಬ ಗೆಳೆಯನಲ್ಲದ ಆದರೆ ಸಹಪಾಠಿಯಾದ ಶಬ್ಬೀರ್ ಮತ್ತವನ ತಂದೆ ಕೂಡ ಶರತ್ ಶೆಟ್ಟಿಯ ಕಾರಣಕ್ಕೆ ಸಿಕ್ಕಿಬೀಳುತ್ತಾರೆ. ಒಂದು ಪಟಾಕಿ ಹೊಡೆದ್ರೂ ನಮ್ಮೋರನ್ನೇ ಹಿಡಿದುಕೊಳ್ತಾರೆ ಎಂದು ಟೀ ಅಂಗಡಿಯ ಸಾಬಿ ಸಹಜವಾಗಿ ಹೇಳಿಬಿಡುವುದು ಮುಸ್ಲಿಮರೊಳಗೆ ಸ್ಪೋಟದ ನಂತರದ ವಿಚಾರಣೆಗಳ ಕುರಿತು ಬೆಳೆದು ಬಿಟ್ಟಿರುವ ಜಡತೆಯ ಸಂಕೇತವಾ? ಟೀ ಅಂಗಡಿಯೊಳಗೆ, ಪಾನ್ ಶಾಪಿನೊಳಗೆ, ಕಾಲೇಜಿನ ಪ್ರಾದ್ಯಾಪಕ ಮಂಡ್ಯ ರಮೇಶ್, ಪ್ರಾದ್ಯಾಪಕಿ ಮಂಜು ಭಾಷಿಣಿ ತಮ್ಮನುಕೂಲಕ್ಕೆ ತಕ್ಕಂತಹ ಕತೆಗಳನ್ನು ಹೆಣೆಯುತ್ತಾರೆ. ಮತ್ತಾ ಕತೆಗೆ ಪೂರಕವಾದ ಸಾಕ್ಷಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.

ಈ ಬಾಂಬ್ ಸ್ಪೋಟ, ಸೈದ್ಧಾಂತಿಕ ತಾಕಲಾಟಗಳನ್ನೆಲ್ಲ ಒಂದು ಕ್ಷಣ ಮರೆತು ನಿಂತರೆ ಒಂದು ನವಿರಾದ ಪ್ರೇಮ ಕತೆಯಿದೆ. ಪ್ರೀತಿ ಪ್ರೇಮವೆಂಬುದು ಕೂಡ ಪೌರುಷದ ಸಂಕೇತದಂತೆಯೇ ಹೆಚ್ಚೆಚ್ಚು ಚಿತ್ರಿತವಾಗುವಾಗ ದೊಡ್ಡ ತೆರೆಯಲ್ಲಿ ಹದಿಹರೆಯದ ನವಿರು ಪ್ರೀತಿಯ ಮುದ್ದು ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದು ಖುಷಿ ಕೊಡುತ್ತದೆ. ಕೊನೆಗೀ ಪ್ರೀತಿಯೂ ಜಾತಿಯ ಬಲೆಗೆ ಸಿಕ್ಕಿಕೊಳ್ಳುತ್ತದೆ. ಶೆಟ್ಟಿ, ಭಟ್ಟ, ರಿಚರ್ಡ್, ನಾಯರ್, ಶಬ್ಬೀರ್ ಎಂದೆಲ್ಲ ಜಾತಿ ಮತ್ತು ಧರ್ಮದ ಐಡೆಂಟಿಟಿಯನ್ನು ಖಡಕ್ಕಾಗಿ ಗುರುತಿಸುವಂತೆ ಮಾಡುವ ನಿರ್ದೇಶಕರು (ಬಿ.ಸುರೇಶ್) ಸಿದ್ದು ಮತ್ತು ಸವಿತಾಳ ವಿಷಯಕ್ಕೆ ಬಂದಾಗ ಮಾತ್ರ ಕೆಳಜಾತಿ ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತಾರೆ. ಅವರ ಜಾತಿಯ ಐಡೆಂಟಿಟಿ ತಿಳಿಯುವುದಿಲ್ಲ. ತುಂಬಾ ವಿಷಯಗಳನ್ನು ಎರಡು ಘಂಟೆಯಲ್ಲೇ ಹೇಳಿ ಮುಗಿಸುವುದು ಸಾಧ್ಯವಾ ಎಂಬ ಪ್ರಶ್ನೆಗೆ ಉತ್ತರವಾಗಿಯೂ ಈ ಚಿತ್ರವಿದೆ. ಕರಾವಳಿಯ ಕೋಮುವಾದದ ಮುಖಗಳ ಪರಿಚಯ, ಬಂಡವಾಳಶಾಹಿತನ ಹೇಗೆ ಪ್ರತಿಯೊಂದನ್ನೂ ನಿಯಂತ್ರಿಸಬಯಸುತ್ತಿದೆ ಎಂಬುದರ ಅರಿವಿದ್ದರೆ ಚಿತ್ರದ ಸೂಕ್ಷ್ಮಗಳು ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತವೆ. ಈ ಸೂಕ್ಷ್ಮಗಳ ಗೊಡವೆ ಮರೆತರೂ ಚಿತ್ರವನ್ನು ಒಮ್ಮೆ ನೋಡಲಡ್ಡಿಯೇನಿಲ್ಲ. 

ಮರೆತಿದ್ದೆ, ಚಿತ್ರದಲ್ಲಿನ ಅನೇಕ ಘಟನೆಗಳಿಗೆ ಸಾಕ್ಷಿಯಾಗಿ ಗಾಂಧಿಯ ಮೂಕ ಪ್ರತಿಮೆ ಮತ್ತು ನವಿಲುಗರಿ ಸಿಕ್ಕಿಸಿಕೊಂಡು ಕೆಟ್ಟು ಹೋದ ಟ್ಯೂಬ್ ಲೈಟಿನಲ್ಲಿ ಕೊಳಲು ನುಡಿಸುವ ಹುಚ್ಚನ ಪಾತ್ರಕ್ಕೂ ಉಳಿದವರಿಗಿರುವಷ್ಟೇ ಮಹತ್ವವಿದೆ. ಬಿಗಿ ಚಿತ್ರಕತೆಗೆ ಪೂರಕವಾಗಿ ಛಾಯಾಗ್ರಹಣವಿದೆ. ದೇವರ ನಾಡಲ್ಲಿ ‘ಕಲಾತ್ಮಕ’ ಚಿತ್ರವೆಂಬ ಬ್ರ್ಯಾಂಡಿಗೆ ಸಿಕ್ಕಿ ಹಾಕಿಕೊಳ್ಳದಿರುವುದಕ್ಕೆ ಛಾಯಾಗ್ರಹಣದ ಪಾತ್ರ ಬಹಳವಿದೆ; ‘ಕಲಾತ್ಮಕ’ವೆಂಬ ಚಿತ್ರದಲ್ಲಿ ಅದೊಂದು ಅಘೋಷಿತ ನಿಯಮವೆಂಬಂತೆ ಕ್ಯಾಮೆರಾ ಚಲಿಸುವುದೇ ಇಲ್ಲ, ಚಲಿಸಿದರೂ ಭಯಂಕರ ನಿಧಾನ. ಕೆಲವೊಂದು ದೃಶ್ಯಕ್ಕೆ ನಿಧಾನಗತಿಯ ನಿಂತೇ ಹೋಗಿರುವ ಕ್ಯಾಮೆರಾ ಚೆಂದವಾದರೂ ಚಿತ್ರದ ತುಂಬ ಅಂತಹುದೇ ದೃಶ್ಯಗಳು ಅವಶ್ಯಕತೆಯಿಲ್ಲದಿದ್ದರೂ ಇದ್ದುಬಿಟ್ಟರೆ ನೋಡಲು ಬೇಸರವೇ. ಕರಾವಳಿಯ ಸುಂದರ ತಾಣಗಳನ್ನು ಛಾಯಾಗ್ರಹಕರು ಸೊಬಗಿನೊಂದಿಗೆ ಖುಷಿ ಮೂಡಿಸುವಂತೆ ಸೆರೆಹಿಡಿದಿದ್ದಾರೆ. ಹಾಡುಗಳಲ್ಲಿ ಸಾಹಿತ್ಯ ಚೆನ್ನಾಗಿದೆ, ಇದೇ ಮಾತನ್ನು ಸಂಗೀತದ ಬಗ್ಗೆ ಹೇಳುವಂತಿಲ್ಲ. ಹಾಡುಗಳು ನೆನಪಲ್ಲುಳಿಯದಂತೆ ಮಾಡಲು ಸಂಗೀತದ ಕೊಡುಗೆ ಜಾಸ್ತಿ. ಜೊತೆಗೆ ಇಂತಹ ಚಿತ್ರಗಳಲ್ಲಿ ಒಂದು ಮೂಡು ಸೃಷ್ಟಿಸಬೇಕಾದ ಅನಿವಾರ್ಯತೆ ಹಿನ್ನೆಲೆ ಸಂಗೀತಕ್ಕಿರುತ್ತದೆ. ಅಲ್ಲಲ್ಲಿ ಬಿಟ್ಟರೆ ಉಳಿದೆಡೆಯೆಲ್ಲ ಹಿನ್ನೆಲೆ ಸಂಗೀತ ಸಾಧಾರಣವೇ.

No comments:

Post a Comment