Feb 29, 2016

ಅಡ್ಮಿರಲ್ ಎಲ್. ರಾಮದಾಸ್: ಅತಿರೇಕದ ರಾಷ್ಟ್ರವಾದ ನಮ್ಮನ್ನು ಸುರಕ್ಷಿತವಾಗಿಸುವುದಿಲ್ಲ.

admiral ramdas at jnu
ಅಡ್ಮಿರಲ್ ಎಲ್. ರಾಮದಾಸ್, ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ. 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
(ಲಂಕೇಶ್ ಪ್ರಕಾಶನ ರೋಹಿತ್ ವೇಮುಲ ಮತ್ತು ಜೆ.ಎನ್.ಯು ಬಗ್ಗೆ ಹೊರತರುತ್ತಿರುವ ಪುಸ್ತಕವೊಂದಕ್ಕೆ ಮಾಡಿಕೊಟ್ಟ ಅನುವಾದವಿದು. ಕರಡು ತಿದ್ದಿದ ಹರ್ಷನಿಗೆ ಧನ್ಯವಾದಗಳು)
29/02/2016
ಭಾರತೀಯ ನೌಕಾಪಡೆಯ ಮುಖ್ಯಸ್ಥನಾಗಿ 1993ರಲ್ಲಿ ನಿವೃತ್ತನಾಗುವ ಮೊದಲು ಸರಿಸುಮಾರು ನಲವತ್ತೈದು ವರ್ಷಗಳ ಸುದೀರ್ಘ ಅವಧಿಯವರೆಗೆ ಸಮವಸ್ತ್ರಧಾರಿ ಸೇನಾ ಭ್ರಾತ್ವತ್ವದ ಹೆಮ್ಮೆಯ ಸದಸ್ಯ ನಾನಾಗಿದ್ದೇನೆ. 

ಸದ್ಯ ನಮ್ಮ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಂಟಾಗಿರುವ ಪ್ರಕ್ಷುಬ್ದ ಸ್ಥಿತಿ ಮತ್ತು ಅವುಗಳ ಸುತ್ತ ಮುಂದುವರೆದೇ ಇರುವ ದೊಂಬಿ, ಹಿಂಸೆ, ನಿರಂಕುಶ ವರ್ತನೆ ಇವೆಲ್ಲವನ್ನು ನೋಡಿ ನಾನು ಮತ್ತೊಮ್ಮೆ ಧ್ವನಿಯೆತ್ತಲ ನನ್ನ ಕಾಳಜಿಯನ್ನು ಈ ಬಹಿರಂಗ ಪತ್ರದ ಮೂಲಕ ವ್ಯಕ್ತಪಡಿಸಲು ಪ್ರೇರೇಪಿಸಿದೆ. ಇತ್ತೀಚೆಗೆ ರಾಷ್ಟ್ರಪತಿ ಮತ್ತು ಪ್ರಧಾನಿಗಳಿಗೆ ಬರೆದ ನನ್ನ ಎರಡು ಪತ್ರಗಳಿಗೆ ಅಧಿಕಾರಶಾಹಿಯ ಎಂದಿನ ಪ್ರತಿಕ್ರಿಯೆಯ ಹೊರತಾಗಿ ಮತ್ತೇನೂ ಸಿಗಲಿಲ್ಲ. ಸೈನ್ಯದಿಂದ ನಿವೃತ್ತಿ ಹೊಂದಿದ ನಂತರ ಸರಕಾರದ ನೀತಿಯ ವಿರುದ್ಧ ಬಹಿರಂಗವಾಗಿ ನಿಲ್ಲುವ ಕೆಲವೇ ಕೆಲವರಲ್ಲಿ ನಾನೂ ಒಬ್ಬ ಎನ್ನುವ ಅರಿವಿದೆ. ಮಾಜಿ ಸೈನಿಕನಾಗಿ, ನಾಗರೀಕನಾಗಿ ಇದು ನನ್ನ ಹಕ್ಕು ಮತ್ತು ಕರ್ತವ್ಯ ಎನ್ನುವುದು ನನ್ನ ದೃಷ್ಟಿಕೋನ. ಸೇವೆಯ ನೀತಿ ನಿಯಮದ ಕಾರಣಗಳಿಂದ ಕರ್ತವ್ಯದಲ್ಲಿರುವ ಸೈನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಿಲ್ಲ. ಸಮವಸ್ತ್ರ ಕಳಚಿದ ಮಾಜಿಗಳಾದ ನಾವು ಅಭಿಪ್ರಾಯ ವ್ಯಕ್ತಪಡಿಸಬಹುದು, ವ್ಯಕ್ತಪಡಿಸಬೇಕು ಕೂಡ. ನನ್ನಂತಹವರು ಈಗ ಮೌನಕ್ಕೆ ಶರಣಾಗಿಬಿಟ್ಟರೆ ನನ್ನ ಮೊಮ್ಮಗ ಕೇಳುತ್ತಾನೆ ``ನೀವಲ್ಲದಿದ್ದರೆ ಇನ್ಯಾರು?'', ``ಈಗಲ್ಲದಿದ್ದರೆ ಇನ್ಯಾವಾಗ'' ``ತಾತ?” ಎಂದು.

ನಾನು ಹೇಳುತ್ತಿರುವುದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ (ಹೆಚ್.ಸಿ.ಯು) ರೋಹಿತ್ ವೇಮುಲನ ದುರಂತ ಆತ್ಮಹತ್ಯೆಯಿಂದ ಪ್ರಾರಂಭವಾಗಿ ಈಗ ಜೆ.ಎನ್.ಯುನಲ್ಲಿ ನಡೆಯುತ್ತಿರುವ ಇನ್ನೂ ಬಗೆಹರಿಯದ ಘಟನಾವಳಿಗಳ ಕುರಿತು. ಪೋಲೀಸರ ಅನಪೇಕ್ಷಿತ ಪ್ರವೇಶ, ಈ ಪ್ರವೇಶ ಉಂಟುಮಾಡಿದ ``ಮಾಧ್ಯಮಗಳ ಪಾಟೀಸವಾಲು'', ತದನಂತರ ಗಂಭೀರ ಆರೋಪಗಳಾದ ದೇಶದ್ರೋಹ, ರಾಷ್ಟ್ರವಿರೋಧಿ ಮತ್ತು ಭಯೋತ್ಪಾದಕತೆಯ ಹೆಸರಿನಲ್ಲಿ ನಡೆದ ವಿದ್ಯಾರ್ಥಿಗಳ ಬಂಧನ ದೇಶಾದ್ಯಂತ ಪ್ರಮುಖ ಸುದ್ದಿಯಾಗಿದೆ. ಇದು ಅಭಿಪ್ರಾಯಗಳ ಆಧಾರದಲ್ಲಿ ದ್ರುವೀಕರಣವನ್ನು ಮಾಡಿಬಿಟ್ಟಿದೆ, ಈ ಧ್ರುವೀಕರಣವನ್ನು ತಡೆಯಬಹುದಾಗಿತ್ತು; ಇಡೀ ಪ್ರಕರಣವನ್ನು ನಿಭಾಯಿಸುವಲ್ಲಿ ಎದ್ದು ಕಾಣಿಸುವ ಸೂಕ್ಷ್ಮತೆಯ ಕೊರತೆ ಮತ್ತು ವಿದ್ಯಾರ್ಥಿಗಳನ್ನು ಸೈತಾನರಂತೆ ಚಿತ್ರಿಸಿದ ನಡೆಸಿದ ಪಿತೂರಿಗಳೆಲ್ಲವೂ ಧ್ರುವೀಕರಣಕ್ಕೆ ಕಾರಣವಾಗುತ್ತ ಸಂಪೂರ್ಣ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಮಾಡಿದೆ. ಇತ್ತೀಚಿನ ದಿನಗಳಲ್ಲಿ ನಡೆದ ದೊಡ್ಡ ಶಾಂತಿಯುತ ಪ್ರತಿಭಟನಾ ಮೆರವಣಿಗೆಯ ಭಾಗವಾಗುತ್ತ ಸಹಸ್ರಾರು ವಿದ್ಯಾರ್ಥಿಗಳು, ನಾಗರೀಕ ಸಮಾಜದ ಗುಂಪುಗಳು, ಹಲವಾರು ಪತ್ರಕರ್ತರು ದೆಹಲಿಯ ಬೀದಿಗಿಳಿದಿದ್ದಾರೆ. 

ಹಿಂತಿರುಗಿ ನೋಡುವುದಾದರೆ,

ನನ್ನ ವೈಯಕ್ತಿಕ ಜೀವನದ ಕುರಿತಾದ ಸಂಕ್ಷಿಪ್ತ ವಿವರಣೆ ನಾನೆಲ್ಲಿಂದ ಬಂದಿದ್ದೇನೆ ಎನ್ನುವುದರ ಕುರಿತು ತಿಳಿಸುತ್ತದೆ.

ಜನವರಿ 1949ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದೆ? ನಮಗೆ ಸ್ವಾತಂತ್ರ್ಯ ಸಿಕ್ಕು ಹದಿನಾರು ತಿಂಗಳಾಗಿತ್ತಷ್ಟೇ. ಅದು ಅಪಾರ ನಿರೀಕ್ಷೆಗಳು, ದೊಡ್ಡ ಕನಸುಗಳ, ಅವಕಾಶಗಳ ಸಮಯ. ಬ್ರಿಟೀಷ್ ವಸಾಹತುವಿನ ವಿರುದ್ಧದ ನಿರಂತರ ಹೋರಾಟದಿಂದ ಸ್ವಾತಂತ್ರ್ಯ ಪಡೆದು ಪುಟಿದೆದ್ದ ಭಾರತದ ಸೈನ್ಯಕ್ಕೆ ಆಯ್ಕೆಯಾಗುವುದು ಹದಿನೈದರ ಹರೆಯದ ಹುಡುಗನಿಗೆ ನಿಜಕ್ಕೂ ತಲೆತಿರುಗಿಸುವಂತಹ ಸಂಭ್ರಮ ತರುವಂತದ್ದು. ಭಾರತೀಯ ನೌಕಾಪಡೆಯಲ್ಲಿ ಕಳೆದ ಆ ನಲವತ್ತೈದು ವರುಷಗಳು ಪ್ರಪಂಚದಾದ್ಯಂತ ನಡೆದ ಘಟನಾವಳಿಗಳ ವಿಹಂಗಮ ನೋಟವನ್ನು ನನಗೆ ನೀಡಿದೆ. ದೇಶ ವಿಭಜನೆಯ ದಿನಗಳ ಊಹಿಸಲಾಗದ ಹಿಂಸೆಯನ್ನು ಹತ್ತಿರದಿಂದ ನೋಡಿದೆ. ಅದರ ನೆನಪುಗಳು ಇನ್ನೂ ನನ್ನನ್ನು ಮತ್ತು ಗಡಿಯ ಎರಡೂ ಕಡೆ ಇರುವವರನ್ನು ಕಾಡುತ್ತಿವೆ. ಇಟ್ಟಿಗೆಯ ಮೇಲೆ ಇಟ್ಟಿಗೆ ಜೋಡಿಸಿ, ಹೆಜ್ಜೆಯ ಮೇಲೊಂದೆಜ್ಜೆ ಇಟ್ಟು ನಮ್ಮ ನಾಯಕರು ಮತ್ತು ನಾಗರೀಕರು ಜೊತೆಯಾಗಿ ಸ್ವತಂತ್ರ ಭಾರತಕ್ಕೊಂದು ದೃಷ್ಟಿಕೋನ ಕಟ್ಟಿದರು. ಹಲವು ಬಗೆಗಳಲ್ಲಿ ಆಲೋಚಿಸುವ ಮುತ್ಸದ್ಧಿಗಳಿಂದ, ಬಂದ ಭಿನ್ನಭಿನ್ನ ದೃಷ್ಟಿಕೋನಗಳನ್ನು ಒಳಗೊಂಡು ಭಾರತದ ಸಂವಿಧಾನವು ಸಂಕುಚಿತವಾದ ಮತ್ತು ಸಮುದಾಯಗಳನ್ನು ಹೊರಗಿಡುವ ಏಕಸಂಸ್ಕøತಿಯನ್ನು ಮುಲಾಜಿಲ್ಲದೆ ತಿರಸ್ಕರಿಸಿ ಸಮುದಾಯಗಳನ್ನು ಒಳಗೊಳ್ಳವಂತಹ, ವಿಶ್ವಾಸ ಮೂಡಿಸುವ, ಪರಿವರ್ತನೆಗೆ ಸಹಕಾರಿಯಾದ ಕ್ರಾಂತಿಕಾರಿ ನೋಟದ ರಾಷ್ಟ್ರದ ಪರಿಕಲ್ಪನೆಯನ್ನು ಒಪ್ಪಿಕೊಂಡಿತು. 

ಸೈನಿಕ ಶಕ್ತಿ ಮತ್ತು ದೇಶ

ಸ್ವತಂತ್ರ ದೇಶದ ಸೈನ್ಯ ದೇಶ ಕಟ್ಟುವಿಕೆಗೆ ವಿವಿಧ ರೀತಿಯಲ್ಲಿ ಜೊತೆಯಾಯಿತು. ನಮಗೆ ತರಬೇತುಗೊಳಿಸಿದ ರೀತಿಯಲ್ಲಿ ಶಿಸ್ತಿನಿಂದ, ವೃತ್ತಿಪರತೆಯಿಂದ ಕೆಲಸ ಮಾಡುವುದರ ಜೊತೆಗೆ ಸಹಾನುಭೂತಿಯಿಂದ ಮತ್ತು ಮನುಷ್ಯತ್ವದಿಂದ ಕಾರ್ಯನಿರ್ವಹಿಸಿದೆವು.

ಸೈನ್ಯದಲ್ಲಿರುವವರು ರಾಜಕೀಯ ಮಾಡುವುದಿಲ್ಲ ಎನ್ನುವುದು ಹೇಳಬೇಕಿಲ್ಲದ ಸಂಗತಿ. ಸತ್ಯವೆಂದರೆ ಸೈನ್ಯಕ್ಕೆ ಸೇರುತ್ತಿದ್ದಂತೆ ನಾಗರೀಕರಿಗೆ ಸಂವಿಧಾನ ನೀಡಿರುವ ಹಲವಾರು ಹಕ್ಕುಗಳನ್ನು ನಾವು ಕಳೆದುಕೊಂಡುಬಿಡುತ್ತೇವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಸೈನ್ಯದ ಮೇಲೆ ರಾಜಕೀಯ (ಸರಕಾರದ) ನಿಯಂತ್ರಣವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇವೆ. ಈ ಒಪ್ಪಿಗೆಯ ಅಲಿಖಿತ ಅರ್ಥವೆಂದರೆ ಸರಕಾರಗಳು ಜನರೆಡೆಗಿನ ತಮ್ಮ ಜವಾಬ್ದಾರಿಯನ್ನು (ಸೈನ್ಯವನ್ನೂ ಸೇರಿಸಿ) ಗೌರವದಿಂದ ಮತ್ತು ಸಮಗ್ರತೆಯೊಂದಿಗೆ ನಿರ್ವಹಿಸುತ್ತಾರೆ ಎಂಬುದು.

ನಿವೃತ್ತಿಯ ನಂತರ ನಾವೆಲ್ಲರೂ (ಸೈನ್ಯದವರು) ಮತ್ತೆ ಭಾರತೀಯ ನಾಗರೀಕರಾಗುತ್ತೇವೆ, ಹಕ್ಕು, ಕರ್ತವ್ಯ ಮತ್ತು ಜವಾಬ್ದಾರಿಗಳನ್ನೊಂದಿದ ಭಾರತೀಯ ನಾಗರೀಕರಾಗುತ್ತೇವೆ. ನೌಕಾಪಡೆ, ವಾಯುಪಡೆ, ಸೈನ್ಯ ವಿಧಿಸಿದ್ದ ನಿಯಮಗಳೀಗ ನಮಗೆ ಅನ್ವಯವಾಗುವುದಿಲ್ಲ. ಸಮವಸ್ತ್ರದಲ್ಲಿದ್ದೆವೋ ಇಲ್ಲವೋ ಪ್ರಜಾಪ್ರಭುತ್ವದ ಹೆಗ್ಗುರುತಾದ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಯಾವತ್ತಿಗೂ ಗೌರವಿಸಿದ್ದೇವೆ. ಮತ ಚಲಾಯಿಸುತ್ತಿದ್ದದ್ದು ನಮ್ಮಲ್ಲಿನ ಪ್ರತಿಯೊಬ್ಬರೂ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಅಥವಾ ದೃಷ್ಟಿಕೋನವನ್ನು ಆಯ್ದುಕೊಂಡಿದ್ದೇವೆಂಬುದನ್ನು ಸೂಚಿಸುತ್ತಿತ್ತು. ಪ್ರಬುದ್ಧತೆ ಹೊಂದುತ್ತಿದ್ದ, ಆದರೂ ಪ್ರಕ್ಷುಬ್ದವಾಗಿದ್ದ ಪ್ರಜಾಪ್ರಭುತ್ವದಲ್ಲಿ ನಾಲ್ಕು ದಶಕಗಳ ಕಾಲ ಸೇವೆಗೈದದ್ದು ನಿವೃತ್ತಿಯ ನಂತರದ ನನ್ನ ರಾಜಕೀಯ ಯೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದೆ.

ಯುದ್ಧದಿಂದ ಶಾಂತಿಯೆಡೆಗೆ

ಸೆಪ್ಟೆಂಬರ್ 1993ರಲ್ಲಿ ನಿವೃತ್ತನಾದ ನಂತರ ಮಹಾರಾಷ್ಟ್ರದ ಆಲಿಬಾಗಿನ ಹಳ್ಳಿಗೆ ಹೋಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡೆ, ಈಗಲೂ ನನ್ನ ಜೀವನ ಅಲ್ಲೇ. ಗ್ರಾಮೀಣ ಭಾರತದಲ್ಲಿ ಬದುಕುವುದು ಸಂಪೂರ್ಣ ಶಿಕ್ಷಣವನ್ನು ಹೊಸದಾಗಿ ಪಡೆದಂತೆ, ಈ ಬದುಕು ನನಗೆ ಹಲವಾರು ಪ್ರಮುಖ ಒಳನೋಟಗಳನ್ನು ನೀಡಿದೆ. ಸಾಮಾನ್ಯ ರೈತನೊಬ್ಬ ಅನುಭವಿಸುವ ಏರಿಳಿತಗಳ ಜೊತೆಯಾಗಿದ್ದೇನೆ. ಹವಾಮಾನ ವೈಪರೀತ್ಯ, ಮಾಲಿನ್ಯ, ಸ್ಥಳೀಯ ರಾಜಕೀಯ, ಎಸ್.ಇ.ಝಡ್ ಎಂಬ `ಅಭಿವೃದ್ಧಿಯ' ಹೆಸರಿನಲ್ಲಿ ನಮ್ಮನ್ನು ಎತ್ತಂಗಡಿ ಮಾಡುವ ಬೆದರಿಕೆ, ಹೀಗೆ ಹಲವಾರು ವಿಷಯಗಳು ರೈತನ ಏರಿಳಿತವನ್ನು ಪ್ರಭಾವಿಸುತ್ತವೆ. ಸೈನ್ಯದಲ್ಲಿದ್ದ ವರ್ಷಗಳು, ಎರಡು ಯುದ್ಧಗಳಲ್ಲಿ ನೇರವಾಗಿ ಭಾಗವಹಿಸಿದ್ದಾಗಿನ ಅನುಭವದ ಜೊತೆಗೆ ದೇಶದ ಎಪ್ಪತ್ತು ಪ್ರತಿಶತಃ ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಕೃಷಿ ಬಿಕ್ಕಟ್ಟುಗಳನ್ನು ಹತ್ತಿರದಿಂದ ಕಂಡು ನಂತರ ಬಡತನ ಮತ್ತು ಹಸಿವಿನಿಂದ ನಿಜವಾದ ಬಿಡುಗಡೆ ಅಥವಾ `ಆಜಾದಿ' ದೊರೆಯುವುದು ಈ ನಾಡಿನ ಗಣ್ಯರು ತಮ್ಮ ಸ್ವಾರ್ಥವನ್ನು ಕಡಿಮೆಮಾಡಿಕೊಳ್ಳುತ್ತ ಸಮಗ್ರತೆಯನ್ನು ತೋರಿಸಿದಾಗ ಎನ್ನುವ ನನ್ನ ನಂಬಿಕೆಯನ್ನು ಪ್ರಭಾವಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಆರ್.ಬಿ.ಐ ಇಂಡಿಯನ್ ಎಕ್ಸ್‍ಪ್ರೆಸ್ಸಿಗೆ ನೀಡಿದ ಮಾಹಿತಿಯು ಕೈಗಾರಿಕೆಗಳು ಸಾರ್ವಜನಿಕ ಬ್ಯಾಂಕುಗಳಿಗೆ ನೀಡಬೇಕಾದ ಸಾಲದ ಮೊತ್ತ 2.11 ಲಕ್ಷ ಕೋಟಿ ಎಂದು ಬಹಿರಂಗಪಡಿಸಿತು. ಇದರಲ್ಲಿನ ಅರ್ಧದಷ್ಟು ಮೊತ್ತವನ್ನು 2013 - 2015ರ ಅವಧಿಯಲ್ಲಿ ವಸೂಲಾಗದ ಸಾಲ ಪಟ್ಟಿಗೆ ಸೇರಿಸಿ ಸಾಲ ಮನ್ನಾ ಮಾಡಲಾಗಿದೆ ಎಂದು ವರದಿಯಾಗಿದೆ. ಅಚ್ಚರಿಯೆಂದರೆ ಈ ಮಾಹಿತಿಯನ್ನಾಗಲೀ ಅಥವಾ ಇದು ಒಟ್ಟಾರೆ ಆರ್ಥಿಕತೆಯ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆಯಾಗಲೀ ಆರ್ಥಿಕ ಸಚಿವಾಲಯ ಮಾತೇ ಆಡುವುದಿಲ್ಲ. ಆದರೆ ದುರ್ಬಲ ವರ್ಗಗಳ ವಿದ್ಯಾರ್ಥಿಗಳ ಓದಿಗೆಂದು ಜೆ.ಎನ್.ಯು ಮತ್ತು ಇತರೆ ವಿಶ್ವವಿದ್ಯಾನಿಲಯಗಳಲ್ಲಿ ಕೊಡುವ ಜುಜುಬಿ ಮೊತ್ತದ ಹಣದ ಬಗ್ಗೆ ಗಂಭೀರ ಟೀಕೆಗಳನ್ನು ಕೇಳುತ್ತಿದ್ದೇವೆ. ತೆರಿಗೆದಾರರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದ ಎಂದು ಹೇಳಲು ಇದನ್ನು ಉದಾಹರಣೆಯಾಗಿ ಬಳಸುತ್ತಿದ್ದಾರೆ! ಆದರೆ ಮನ್ನಾ ಮಾಡಲಾದ ಸಾಲವನ್ನು ಕೂಡ ತೆರಿಗೆದಾರರ ಹಣದಿಂದಲೇ ಕೊಡಲಾಗಿರುತ್ತದೆಯಲ್ಲವೇ? ಇದನ್ನು ನಾವು ಪ್ರಶ್ನಿಸುವುದಿಲ್ಲ.

ಸುಸ್ಥಿರ ಅಭಿವೃದ್ಧಿಯ ತಳಹದಿಯ ಮೇಲೆ ನ್ಯಾಯಬದ್ಧ ಸಮಾಜವನ್ನು ನಿರ್ಮಿಸಲು ನೆರೆಹೊರೆಯವರೊಂದಿಗೆ ಶಾಂತಿಯನ್ನು ಬೆಳೆಸಬೇಕು. ಇದರರ್ಥ ಪ್ರಸ್ತುತ ಸಮಸ್ಯೆಗಳಿಗೆ ರಾಜಕೀಯ ಪರಿಹಾರಗಳನ್ನು ಕಂಡುಕೊಳ್ಳುವುದು. ಇದಾದ ನಂತರವಷ್ಟೇ ನಾವು ಶಸ್ತ್ರಗಳ ಮೇಲಿನ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು, ಬಳಕೆಯನ್ನು ನಿಯಂತ್ರಿಸಬಹುದು, ವಿದ್ಯುತ್ತಿನ ಬೇಡಿಕೆಯನ್ನು ಪೂರೈಸಬಹುದು ಮತ್ತು ನಾಗರೀಕರಿಗೆ ಆಹಾರ, ಸೂರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ನೀಡಬಹುದು. ನಾನು ರಾಯಗಡದಲ್ಲಿ ಎಸ್.ಇ.ಝೆಡ್ ವಿರುದ್ಧ ನಡೆದ ಹೋರಾಟದ ಭಾಗವಾಗಿದ್ದೇನೆ, ಮುನ್ನಡೆಸಿದ್ದೇನೆ. ನವೀಕರಿಸಬಹುದಾದ ಇಂಧನ ಮೂಲವನ್ನು ಪ್ರೋತ್ಸಾಹಿಸಬೇಕೆಂದು ನಿರಂತರವಾಗಿ ಆಗ್ರಹಿಸುತ್ತಿದ್ದೇನೆ. ಅಣು ವಿದ್ಯುತ್ ಕೇಂದ್ರಗಳ ವೆಚ್ಚ, ಸುರಕ್ಷತೆಯ ಬಗೆಗಿನ ಪ್ರಶ್ನೆಗಳು, ಅಣು ಕಸದ ವಿಲೇವಾರಿಯ ಸಮಸ್ಯೆಗಳೆಲ್ಲವೂ ನನ್ನನ್ನು ಅಣು ವಿದ್ಯುತ್ತಿನ ವಿರುದ್ಧದ ಹೋರಾಟದಲ್ಲಿ ಭಾಗವಹಿಸುವಂತೆ, ಕಾರ್ಬನ್ ಮುಕ್ತ ಅಣು ಮುಕ್ತ ಪರಿಹಾರಗಳನ್ನು ಹುಡುಕಲು ಆಗ್ರಹಿಸುವಂತೆ ಮಾಡಿದೆ. ಶಾಂತಿಯನ್ನು ಶಕ್ತಗೊಳಿಸುವ ಪ್ರಯತ್ನಗಳು ನನ್ನನ್ನು ಪಿ.ಐ.ಪಿ.ಎಫ್.ಪಿ.ಡಿ (Pakistan India Peoples Forum for peace and democracy -ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ಪಾಕಿಸ್ತಾನ ಮತ್ತು ಭಾರತೀಯ ಜನರ ಸಂಘ) ಮತ್ತು ಐ.ಪಿ.ಎಸ್.ಐ (India Pakistan Soldiers Initiative for Peace, ಶಾಂತಿಗಾಗಿ ಭಾರತೀಯ ಮತ್ತು ಪಾಕಿಸ್ತಾನೀ ಸೈನಿಕರು) ಸಂಘಟನೆಗಳ ಮುಂದಾಳತ್ವ ವಹಿಸುವಂತೆ ಮಾಡಿದೆ. ಇವರೆಡೂ ಸಂಘಟನೆಗಳು ಎರಡೂ ದೇಶದ ಜನರ ನಡುವೆ ಸಂಪರ್ಕವೇರ್ಪಡಿಸುತ್ತ ಪಾಕಿಸ್ತಾನದ ಜೊತೆಗೆ ಉತ್ತಮ ಬಾಂಧವ್ಯ ಹೊಂದುವಂತೆ ಮಾಡಿವೆ. ಮರಣದಂಡನೆಯನ್ನೂ ನಾನೂ ವಿರೋಧಿಸುತ್ತೇನೆ, ಜೊತೆಗೆ ಸತತವಾಗಿ ಎ.ಎಫ್.ಎಸ್.ಪಿ.ಎ (Armed Forces Special Powers Act)ಯನ್ನು ಹೇರುವುದನ್ನು ವಿರೋಧಿಸುತ್ತೇನೆ. ಇದರ ಬಗ್ಗೆ ಬರೆದಿದ್ದೇನೆ ಮತ್ತು ಅನೇಕ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿದ್ದೇನೆ.

ನನ್ನ ಪ್ರಕಾರ ಮೇಲಿನ ಸಂಗತಿಗಳು ಚರ್ಚೆಗೆ ಯೋಗ್ಯವಾದವು, ನಾಗರೀಕರಾಗಿ ಇದರ ಬಗ್ಗೆ ಮಾತನಾಡುವುದು ಹಕ್ಕಿನ ಪ್ರಶ್ನೆಯಷ್ಟೇ ಅಲ್ಲ, ಕರ್ತವ್ಯವೂ ಹೌದು. ಅದು ಆ ದಿನದ ಸರಕಾರದ ನೀತಿಗಳ ವಿರುದ್ಧವಾಗಿದ್ದರೂ ಸಹ. ಈ ಮೇಲಿನ ಸಂಗತಿಗಳು ನನ್ನನ್ನಾಗಲೀ ಅಥವಾ ಯಾರನ್ನೇ ಆಗಲಿ ರಾಷ್ಟ್ರವಿರೋಧಿಯಾಗಿಸುತ್ತದಾ? ದೇಶದ್ರೋಹಿಯಾಗಿಸುತ್ತದಾ? ದೇಶಪ್ರೇಮವನ್ನು ಕಡಿಮೆಯಾಗಿಸುತ್ತದಾ? 

ಇಲ್ಲ ಎಂದೇ ನಾನು ನಂಬಿದ್ದೇನೆ.

ರಾಜಕೀಯ ಪಕ್ಷಗಳು ಮತ್ತು ಸರಕಾರಗಳು ನಾಡಿನ ಸಂವಿಧಾನಕ್ಕೆ ನಮ್ಮಂತೆಯೇ ಬದ್ಧವಾಗಿರಬೇಕೆಂಬುದೇ ನನ್ನ ಈ ನಿಲುವಿಗೆ ಕಾರಣ. ಪ್ರತಿಯೊಬ್ಬ ನಾಗರೀಕನಿಗೂ ಚಿಂತಿಸುವ ಸ್ವಾತಂತ್ರ್ಯವಿದೆ, ದಮನದ ಭಯವಿಲ್ಲದೇ ತನ್ನಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆಧುನಿಕ ಪ್ರಜಾಪ್ರಭುತ್ವದಲ್ಲಿ ವಸಾಹತುಶಾಹಿ ದಿನಗಳ ದೇಶದ್ರೋಹದ ಕಾನೂನು ಮಾನ್ಯವಾಗಬಾರದು.

ಹಾಗಾಗಿ ಪ್ರಶ್ನೆ ಹುಟ್ಟುತ್ತದೆ: ರೋಹಿತ್ ವೇಮುಲ, ಕನ್ಹಯ್ಯ ಕುಮಾರ್, ಉಮರ್ ಖಾಲಿದನ ಮೇಲೆ ರಾಷ್ಟ್ರವಿರೋಧಿ, ದೇಶದ್ರೋಹಿ, ಭಯೋತ್ಪಾದಕ ಕೃತ್ಯಗಳ ಆರೋಪಗಳನ್ನು ನಾವ್ಯಾಕೆ ಮಾಡುತ್ತಿದ್ದೇವೆ? ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳು, ಈ ಮೂರೂ ಯುವಕರು ನಮ್ಮ ಸಂವಿಧಾನದ ಗುರಿಗಳನ್ನು ಮುಂದೊಯ್ಯುವ ಪ್ರಯತ್ನ ಮಾಡುತ್ತಿದ್ದರೇ ಹೊರತು ಯಾವುದೇ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ ಎನ್ನುವುದನ್ನು ತೋರಿಸುತ್ತವೆ. 

ರಾಷ್ಟ್ರವಾದವನ್ನು ವ್ಯಾಖ್ಯಾನಿಸುವುದ್ಯಾರು?

ರೋಹಿತನ ಸಾವು, ಕನ್ಹಯ್ಯನ ಬಂಧನ ಮತ್ತು ಉಮರ್ ಖಾಲಿದನನ್ನು ಹುಡುಕುತ್ತಿರುವುದು ರಾಷ್ಟ್ರವಾದ ಎಂದರೇನು? ರಾಷ್ಟ್ರವಿರೋಧಿ ಎಂದರೇನು ಎಂಬುದರ ಕುರಿತು ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ. ಜೊತೆಗೆ ಸಮಾಜದಲ್ಲಿರುವ ಜಾತಿ, ಧರ್ಮ ಮತ್ತು ತಾರತಮ್ಯದ ಬಗೆಗೂ ಚರ್ಚೆಗಳಾಗುತ್ತಿವೆ. ನನ್ನಲ್ಲಿನ ರಾಷ್ಟ್ರೀಯತೆಯನ್ನು ಅಥವಾ ರಾಷ್ಟ್ರೀಯತಾ ಭಾವದ ಕೊರತೆಯನ್ನು ನಿರ್ಧರಿಸುವ ಹಕ್ಕು ಯಾರಿಗಾದರೂ ಇದ್ದರೆ ಅದು ಯಾರಿಗಿದೆ ಎನ್ನುವ ಕುರಿತು ಮತ್ತಷ್ಟು ದೀರ್ಘ ಹಾಗೂ ಪ್ರಬುದ್ಧ ಚರ್ಚೆಗಳಾಗಬೇಕು. ನನ್ನರಿವಿನ ಮಟ್ಟಿಗೆ ಸ್ವಾತಂತ್ರ್ಯದ ದಿನಗಳಿಂದಲೂ ಇಂತಹುದೊಂದು ಚರ್ಚೆ ನಡೆದಿಲ್ಲ. ಇರುವ ಕಾನೂನುಗಳು ಮತ್ತು ಅಭ್ಯಾಸಗಳೆಲ್ಲವೂ ವಸಾಹತು ಸಂದರ್ಭದಿಂದ ಎರವಲು ಪಡೆದಿರುವುದೇ ಹೊರತು ಸಮಕಾಲೀನ ಚೌಕಟ್ಟಿನೊಳಗೆ ಅದನ್ನು ಸಂಭೋದಿಸಲಾಗಿಲ್ಲ. ಇದು ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ಅತ್ಯವಶ್ಯ. ಅಬ್ಬರದ ಅತಿರೇಕತನ, ರಾಷ್ಟ್ರಧ್ವಜವನ್ನು ಬೀಸುವುದು ಮತ್ತು ಘೋಷಣೆಗಳನ್ನು ಕೂಗುವುದು ದೇಶಭಕ್ತಿಯನ್ನು ಪ್ರಮಾಣೀಕರಿಸುವುದಿಲ್ಲ. ದೇಶದ್ರೋಹದ ಆರೋಪವನ್ನು ಹೊರಿಸುವುದಾಗಲೀ, ಭಯೋತ್ಪಾದಕರ ಜೊತೆ ನಂಟಿದೆ ಎಂದು ಕೂಗುವುದಾಗಲೀ ನ್ಯಾಯಾಲಯದ ಸೂಕ್ಷ್ಮ ಪರಿಶೀಲನೆಯಲ್ಲಿ ಪಾಸಾಗುವ ಸಾಧ್ಯತೆಗಳಿರುವುದಿಲ್ಲ. ಘೋಷಣೆಗಳ ಬಗ್ಗೆ, ಪ್ರತಿಭಟನೆಯ ರೀತಿಯ ಬಗ್ಗೆ ಹಲವರು ಸಾರ್ವಜನಿಕವಾಗಿ ಅಸಮ್ಮತಿ ತೋರ್ಪಡಿಸಿದ್ದಾರೆ, ಆದರೆ ಇದ್ಯಾವುದೂ ಹೊಸದಲ್ಲ ಮತ್ತು ತೀವ್ರಗಾಮಿತ್ವವೂ ಅಲ್ಲ. ಕೆಲವು ಮಾಧ್ಯಮಗಳು ಮತ್ತವರ ಹಿಂದಿರುವ ಅದೃಶ್ಯ ಮಾಲೀಕರು ಕೆಲವು ವಿದ್ಯಾರ್ಥಿಗಳು ದೇಶದ ಒಗ್ಗಟ್ಟಿಗೆ ಅಪಾಯಕಾರಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ನಗೆಪಾಟಲಿನ ವಿಷಯ.

ನನ್ನಂತವನಿಗೆ ಕಳವಳಕ್ಕೆ ದೂಡುವ ಸಂಗತಿಯೆಂದರೆ, ಕಾನೂನನ್ನು ಕಾಪಿಡುವ ವೃತ್ತಿಯಲ್ಲಿರುವವರೆನ್ನಲಾದ ಕೆಲವರು ನ್ಯಾಯಾಲಾಯದ ಆವರಣದಲ್ಲಿ ಗಲಭೆಯೆಬ್ಬಿಸಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕನ್ಹಯ್ಯಕುಮಾರನ ಮೇಲೆ ಹಾಕಿದ ಬೆದರಿಕೆ ಮತ್ತು ನಡೆಸಿದ ಹಲ್ಲೆ. ಇದೆಲ್ಲವೂ ನಡೆದಿದ್ದು ಏನೂ ಮಾಡದೇ ಕಲ್ಲಿನಂತೆ ನಿಂತುಬಿಟ್ಟಿದ್ದ ದೊಡ್ಡ ಸಂಖೈಯ ಪೋಲೀಸರ ಸಮ್ಮುಖದಲ್ಲಿ. ಸಮವಸ್ತ್ರ ಧರಿಸಿದ, ಶಿಸ್ತಿನವರೆಂದು ಹೇಳಲಾದ ಪೋಲೀಸ್ ಇಲಾಖೆಯ ಈ ನಡೆಯನ್ನು ಒಪ್ಪುವುದು ಸಾಧ್ಯವೇ ಇಲ್ಲ.

ಜೆ.ಎನ್.ಯು ಮತ್ತು ಹೆಚ್.ಸಿ.ಯುನ ಕಳವಳಗಳ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಅನೇಕ ಲಿಖಿತ ವರದಿಗಳು ಮತ್ತು ಅನೇಕ ವೀಡಿಯೋಗಳನ್ನು ಗಮನಿಸಿದ್ದೇನೆ. ನಿಜವಾದ ದುರಂತವೆಂದರೆ ವಿದೇಶಿ ಹಣದಿಂದ ನಡೆಯುತ್ತಿರುವ ಈ `ಭಯೋತ್ಪಾದಕ' `ದೇಶದ್ರೋಹಿ' ಚಟುವಟಿಕೆಗಳ ವಿರುದ್ಧದ ಕೂಗನ್ನು ಉಪಯೋಗಿಸಲಾಗುತ್ತಿರುವುದು ದೇಶದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವಂತೆ, `ಶುದ್ಧ'ಗೊಳಿಸುವಂತೆ ಆಗ್ರಹಿಸುವುದಕ್ಕಾಗಿ! ಇದಿವರ ಗುಪ್ತ ಕಾರ್ಯಾಚರಣೆಯ ರೀತಿ ಎಂದು ಹೇಳಲೇಬೇಕಾಗಿದೆ. ಮತ್ತಿದು ಗಂಭೀರವಾದ ವಿಷಯ. ಎಲ್ಲಾ ರೀತಿಯಿಂದಲೂ ಘಟನೆಯನ್ನು ತನಿಖೆಗೊಳಪಡಿಸಿ; ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಸೂಕ್ತ ಶಿಸ್ತು ಕ್ರಮವನ್ನೂ ತೆಗೆದುಕೊಳ್ಳಲಿ. ಆದರೆ ಪೋಲೀಸರನ್ನು ಕರೆಸುವ ಮುಂಚೆ, ದೇಶದ್ರೋಹದಂತ ಗಂಭೀರ ಆರೋಪಗಳನ್ನು ಹೊರಿಸುವ ಮುನ್ನ ವಿವೇಚನೆಯಿರಬೇಕು. 

ಮುಂದಿನ ದಾರಿ

ಜೆ.ಎನ್.ಯುವನ್ನು `ಮುಚ್ಚಿಬಿಡಿ' (ShutdownJNU) ಅಥವಾ ಜೆ.ಎನ್.ಯುವನ್ನು `ಶುದ್ಧಗೊಳಿಸಿ' ಎಂದು ಕೂಗಾಡುತ್ತಿರುವವರಿಗೆ, ಕೂಗಾಟವನ್ನು ಮುನ್ನಡೆಸುತ್ತಿರುವವರಿಗೆ ಇದರ ಪರಿಣಾಮವೇನೆಂದು ತಿಳಿದಂತಿಲ್ಲ, ಕುರುಡಾಗಿ ಗುಂಪಿನ ಹಿಂದೆ ಹೋಗುವ ಭೀತಗೊಳಿಸುವ ಪ್ರವೃತ್ತಿಯನ್ನವರು ತೋರಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವುದರ ಜೊತೆಗೆ, ಮಿಲಿಟರಿ ಸಂಸ್ಥೆಗಳಾದ ಎನ್.ಡಿ.ಎ, ಎನ್.ಡಿ.ಸಿ, ನೇವಲ್ ಅಕಾಡೆಮಿ ನಡೆಸುವ ಕೋರ್ಸುಗಳಿಗೆ ಜೆ.ಎನ್.ಯು ಮತ್ತು ಭಾರತದ ಕೆಲ ವಿಶ್ವವಿದ್ಯಾನಿಲಯಗಳು ಮಾನ್ಯತೆ ಕೊಟ್ಟಿದೆ ಎಂದು ನೆನಪಿಸಿಕೊಳ್ಳುವುದು ಈ ಸಂದರ್ಭಕ್ಕೆ ಸೂಕ್ತವಾದದ್ದು ಎನ್ನಿಸುತ್ತದೆ. ವಿಶ್ವವಿದ್ಯಾನಿಲಯಗಳು ಮತ್ತು ಮಿಲಿಟರಿ ಸಂಸ್ಥೆಗಳ ನಡುವಿನ ಈ ಸಂಬಂಧವನ್ನು ನಮ್ಮ ಸೈನ್ಯದಲ್ಲಿನ ಉದ್ಯೋಗಿಗಳು ಇಲ್ಲಿ ನಡೆವ ಸಂವಾದಗಳಿಂದ ಉಪಯೋಗ ಪಡೆದುಕೊಂಡು ನವೀನ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ಹಲವಾರು ಸೈನಿಕ ಸಿಬ್ಬಂದಿ ಜೆ.ಎನ್.ಯುನಲ್ಲಿನ ಅಕಾಡೆಮಿಕ್ ಕೋರ್ಸುಗಳಲ್ಲಿ ಭಾಗವಹಿಸುವುದರಿಂದ ಲಾಭ ಪಡೆದುಕೊಂಡಿದ್ದಾರೆ ಮತ್ತು ಅವರು ಇಲ್ಲಿನ ಹಳೆಯ ವಿದ್ಯಾರ್ಥಿಗಳು. ಹಲವು ನಾಗರೀಕ ಸೇವೆಯಲ್ಲಿರುವ ಅಧಿಕಾರಿಗಳು, ಪೋಲೀಸರು ಇದೇ ಗುಂಪಿಗೆ ಸೇರುತ್ತಾರೆ. ಇದನ್ನು ನಾನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸುತ್ತಿದ್ದೇನೆ. ಡಿಗ್ರಿ ಮತ್ತು ಪ್ರಶಸ್ತಿಗಳನ್ನು ಹಿಂದಿರುಗಿಸುವ ಆತುರದ ನಿರ್ಧಾರಗಳು ಉಂಟುಮಾಡಬಹುದಾದ ಪರಿಣಾಮಗಳನ್ನು ಕೂಲಂಕುಷವಾಗಿ ನನ್ನ ಸೋದರ, ಸೋದರಿಯರು ಮತ್ತು ಮಾಜಿ ಸೈನಿಕರು ವಿವೇಚಿಸಬೇಕೆಂದು ತಿಳಿಸುವ ಉದ್ದೇಶದಿಂದ.

ಇದನ್ನಿವತ್ತು ಯಾಕೆ ಬರೆದಿದ್ದೇನೆ ಎನ್ನುವುದರ ಬಗ್ಗೆ ಹಲವಾರು ಕಾರಣಗಳನ್ನು ವಿವರಿಸಿದ್ದೇನೆ. ಹಿರಿಯರಾದ ನನ್ನಂತವರು ಮಾತನಾಡಬೇಕು, ತಡವಾಗುವ ಮುನ್ನ ಎಚ್ಚರ ಮೂಡಿಸಬೇಕಾದುದು ಅತ್ಯಗತ್ಯ. ನಿರಂಕುಶ ಆಡಳಿತ ಆಳ್ವಿಕೆ ನಡೆಸುವಂತಾಗುವುದು ಒಳ್ಳೆಯ ಜನರು ಮೌನದಿಂದಿರುವುದರಿಂದ ಎನ್ನುವುದನ್ನು ಇತ್ತೀಚಿನ ಇತಿಹಾಸ ನಮಗೆ ತೋರಿಸಿಕೊಟ್ಟಿದೆ. ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವವನ್ನು, ಸ್ವಾತಂತ್ರ್ಯವನ್ನು, ಪ್ರಶ್ನಿಸುವ ಹಕ್ಕನ್ನು, ಭಿನ್ನಮತೀಯತೆಯನ್ನು, ಚರ್ಚೆ, ಸಂವಾದಗಳನ್ನು ಉಳಿಸುವ ಸಲುವಾಗಿ ಇದು ಅತ್ಯಗತ್ಯ. ಭೀತಿಯಿಲ್ಲದೆ ಮಾತನಾಡಬಲ್ಲ ಚಿಂತಕರನ್ನು ಮತ್ತು ವೃತ್ತಿಪರರನ್ನು ರೂಪಿಸುವಲ್ಲಿ ಜೆ.ಎನ್.ಯು ಮುಂಚೂಣಿಯಲ್ಲಿದೆ. ನಿರ್ಬಿಡೆಯಿಂದ ಹೇಳಬೇಕೆಂದರೆ, ಯುವ ವಿದ್ಯಾರ್ಥಿ ನಾಯಕ ಕನ್ಹಯ್ಯನ ಮಾತುಗಳನ್ನು ಕೇಳಿದ ಮೇಲೆ - ಸಂಕೀರ್ಣತೆಯ, ಅಸಮಾನತೆಯ ದೇಶದಲ್ಲಿ ಇಪ್ಪತ್ತರ ಆಸುಪಾಸಿನ ಯುವಕನೊಬ್ಬ ಇಷ್ಟೊಂದು ಸಹಾನುಭೂತಿಯಿಂದ, ಬುದ್ಧಿವಂತಿಕೆಯಿಂದ, ಉತ್ಕುಟತೆಯಿಂದ ದೇಶ ಎದುರಿಸುತ್ತಿರುವ ನಿಜವಾದ ಸವಾಲುಗಳು ಮತ್ತು ಆತಂಕಗಳ ಬಗ್ಗೆ ಮಾತನಾಡುತ್ತಾನೆ ಎಂದರೆ - ಇಲ್ಲಿ ಎಲ್ಲವೂ ಸರಿಯಾಗಿದೆ ಎಂಬ ನಂಬಿಕೆಯನ್ನು ನನ್ನಲ್ಲಿ ಗಾಢಗೊಳಿಸಿದೆ. 

ರಾಷ್ಟ್ರಧ್ವಜಕ್ಕೆ ವಂದಿಸುವುದರ ಆಚೆಗೂ (ಧ್ವಜಕ್ಕೆ ಹೆಮ್ಮೆ ಮತ್ತು ಗೌರವದಿಂದ ವಂದಿಸುವುದನ್ನು ನಾನೆಂದೂ ಬಿಡುವುದಿಲ್ಲ) ನೋಡಿದಾಗ ಈ ದೇಶದಲ್ಲಿ ರಾಷ್ಟ್ರೀಯವಾದ ಮತ್ತು ದೇಶಪ್ರೇಮದ ನಿಜದ್ಯೋತಕವೆಂದರೆ ಯುವ ಚಿಂತಕರಾದ ರೋಹಿತ್ ವೇಮುಲ, ಕನ್ಹಯ್ಯ ಕುಮಾರ್, ಶೀಲಾ ರಷೀದ್, ಉಮರ್ ಖಾಲೀದ್ ಮತ್ತು ಇವರೊಟ್ಟಿಗೆ ದೇಶದಾದ್ಯಂತ ಇರುವ ಅನಾಮಿಕ ಯುವಕ, ಯುವತಿಯರ ಚಿಂತನೆಗಳೇ. ರೋಹಿತ್ ವೇಮುಲನ ರೀತಿ ದುಡುಕು ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಗಟ್ಟುವುದನ್ನು ನಾವು ಒಟ್ಟಾಗಿ ಮಾಡುವುದರ ಜೊತೆಗೆ ಈಗ ಬಂಧನದಲ್ಲಿರುವ, ಪ್ರಾಣಭೀತಿಯಿಂದ ಅವಿತುಕೊಂಡಿರುವವರಿಗೆ ನ್ಯಾಯ ಸಿಗುವುಂತೆಯೂ ನೋಡಿಕೊಳ್ಳಬೇಕು.

ಅಂತಿಮವಾಗಿ ನೋಡಿದರೆ ರಾಷ್ಟ್ರೀಯ ಭದ್ರತೆಗೆ ಇರುವ ಅತ್ಯುತ್ತಮ ಖಾತ್ರಿ ಎಂದರೆ ಮನುಷ್ಯನ ಸುರಕ್ಷತೆಯೇ ಆಗಿದೆ. 

No comments:

Post a Comment