Oct 19, 2015

ಬೇಳೆ ಬೇಯುವುದು ಕಷ್ಟ ಕಷ್ಟ...

high pulses price
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುತ್ತು ಮೋದಿ ಪರವಾಗಿ ವಿರುದ್ಧವಾಗಿ, ಸಿದ್ಧು ಪರವಾಗಿ ವಿರೋಧವಾಗಿ, ದನದ ಮಾಂಸ, ಸಸ್ಯಾಹಾರ, ಕಲಬುರ್ಗಿ ಎಕ್ಸೆಟ್ರಾ ಎಕ್ಸೆಟ್ರಾ ಕಿತ್ತಾಡಿಕೊಂಡು ರಾತ್ರಿ ಸಾರು ಮಾಡಲು ಅಂಗಡಿಗೆ ಹೋಗಿ ಅರ್ಧ ಕೆ.ಜಿ ತೊಗರಿ ಬೇಳೆ ಜೊತೆಗೆ ಹತ್ತು ರುಪಾಯಿಯ 50:50 ಬಿಸ್ಕೆಟ್ ಪ್ಯಾಕ್ ಖರೀದಿಸಿ ನೂರು ರುಪಾಯಿ ಕೊಟ್ಟು ಚಿಲ್ಲರೆಗೆ ಕಾಯುತ್ತಾ ನಿಂತಾಗ ಅಂಗಡಿಯವನ ವಿಚಿತ್ರ ನೋಟದಿಂದ ಅರಿವಾಯಿತು ಬೇಳೆ ಕೆಜಿಗೆ 190 ರುಪಾಯಿ ಮುಟ್ಟಿದೆ ಎಂದು! ವರುಷದ ಹಿಂದೆ ಅರವತ್ತರಿಂದ ಎಂಭತ್ತು ರುಪಾಯಿಯಷ್ಟಿದ್ದ ಬೇಳೆಯ ಬೆಲೆ ಇನ್ನೂರರ ಗಡಿ ದಾಟುವ ದಿನಗಳೂ ದೂರವಿಲ್ಲ.
ಬೇಳೆ ಬೆಲೆ ಹೀಗೆ ಕಂಡಾಪಟ್ಟೆ ಏರಿಕೆಯಾಗಲು ಪ್ರಮುಖ ಕಾರಣ ಉತ್ಪಾದನೆಯಲ್ಲಾದ ಕಡಿತವೆಂದು ಹೇಳಲಾಗುತ್ತಿದೆ. 2013-2014ರ ಸಾಲಿನಲ್ಲಿ 19.78 ಮಿಲಿಯನ್ ಟನ್ನುಗಳಷ್ಟಿದ್ದ ತೊಗರಿ ಬೇಳೆ ಉತ್ಪಾದನೆ 2014 - 2015ರಲ್ಲಿ 17.38 ಮಿಲಿಯನ್ ಟನ್ನುಗಳಿಗೆ ಕುಸಿದಿದೆ. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಮುಂದಿನ ವರುಷ ಬೇಳೆಯ ಬೆಲೆಯಲ್ಲಿ ಮತ್ತಷ್ಟು ಏರಿಕೆಯುಂಟಾಗುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಭಾರತದಲ್ಲಿ ವರುಷಕ್ಕೆ ಇಪ್ಪತ್ತೆರಡು ಮಿಲಿಯನ್ ಟನ್ನುಗಳಷ್ಟು ಬೇಳೆಗೆ ಬೇಡಿಕೆಯಿದೆ. ಆ ಲೆಕ್ಕದಲ್ಲಿ ಈ ಬಾರಿ ಒಟ್ಟು ಐದು ಮಿಲಿಯನ್ ಟನ್ನಿನಷ್ಟು ಬೇಳೆಯ ಕೊರತೆಯುಂಟಾಗಿರುವುದೇ ಬೆಲೆ ಏರಿಕೆಗೆ ಕಾರಣ. ಈ ಮೇಲ್ನೋಟದ ಕಾರಣದ ಜೊತೆಗೆ ಶೇಖರಿಸಿಟ್ಟರೂ ಸುಲಭವಾಗಿ ಕೆಡದ ಬೇಳೆಯ ಗುಣವೂ ಬೆಲೆಯೇರಿಕೆಗೆ ಕಾರಣವಾಗಿದೆ. ಹೆಚ್ಚೆಚ್ಚು ದಾಸ್ತಾನು ಮಾಡಿ ಬೆಲೆ ಮತ್ತಷ್ಟು ಹೆಚ್ಚಿದಾಗ ಮಾರುಕಟ್ಟೆಗೆ ಬಿಡುವ ವ್ಯಾಪಾರೀ ತಂತ್ರ ಕೂಡ ಇದಕ್ಕೆ ಕಾರಣ.
ಬೇಳೆಯ ಬೆಲೆ ಕಡಿಮೆಯಾಗುವಂತೆ ನೋಡಿಕೊಳ್ಳುವುದು ಮುಖ್ಯವಾಗಿ ಕೇಂದ್ರದ ಕರ್ತವ್ಯ. ಈಗಾಗಲೇ ಐದು ಸಾವಿರ ಟನ್ನುಗಳಷ್ಟು ಬೇಳೆಯನ್ನು ಆಮದು ಮಾಡಿಕೊಳ್ಳಲಾಗಿದೆ. ಮತ್ತೆರಡು ಟನ್ನುಗಳನ್ನು ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜೊತೆಗೆ ಬೇಳೆಯನ್ನು ದಾಸ್ತಾನು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಕೇಂದ್ರದ ಇಷ್ಟೆಲ್ಲ ಕ್ರಮಗಳ ನಂತರವೂ ಬೆಲೆ ಇಳಿಯುತ್ತಿಲ್ಲ. ಏರುತ್ತಲೇ ಇದೆ. ಡಿಸೆಂಬರ್ ವರೆಗೂ ಬೇಳೆಯ ಬೆಲೆಯಲ್ಲಿ ಇಳಿತವಾಗುವುದು ಕಷ್ಟವೆಂದು ಹೇಳಲಾಗುತ್ತಿದೆ. ಸದ್ಯಕ್ಕೆ ತಮಿಳುನಾಡು ಮತ್ತು ಆಂಧ್ರಪ್ರದೇಶ ಮಾತ್ರ ಕೇಂದ್ರ ಸರಕಾರ ತರಿಸುತ್ತಿರುವ ವಿದೇಶಿ ಬೇಳೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಉಳಿದ ರಾಜ್ಯಗಳು ಬೇಳೆಯನ್ನು ತರಿಸಿಕೊಳ್ಳಲು ಹಿಂದೇಟು ಹೊಡೆಯುತ್ತಿವೆ. ಕಾರಣ ವಿದೇಶದಿಂದ ಬರುತ್ತಿರುವ ಈ ಬೇಳೆಯನ್ನು ಸಂಸ್ಕರಿಸಲಾಗಿಲ್ಲ. ಮತ್ತು ಬೇಳೆ ಸಂಸ್ಕರಣೆ ಹೆಚ್ಚಾಗಿ ಖಾಸಗಿಯವರ ಕೈಯಲ್ಲೇ ಇದ್ದು ಸರಕಾರೀ ಸಂಸ್ಕರಣಾ ಘಟಕಗಳು ಇಲ್ಲವೇ ಇಲ್ಲ. ತರಿಸಿಕೊಂಡು ಮಾಡುವುದೇನು ಎನ್ನುವ ಪ್ರಶ್ನೆ ರಾಜ್ಯ ಸರಕಾರಗಳದ್ದು.
ಒಟ್ಟಿನಲ್ಲಿ ಸದ್ಯಕ್ಕಂತೂ ಬೇಳೆ ಬೆಲೆ ಆಕಾಶದೆತ್ತರದಲ್ಲೇ ಇರಲಿದೆ. ಬೇಳೆಯ ಬೆಲೆಯ ಮತ್ತೆ ಇಳಿಯುವಷ್ಟರಲ್ಲಿ (ಅಕಸ್ಮಾತ್ ಇಳಿದರೆ) ದೇಶದಲ್ಲಿ ಮತ್ತಷ್ಟು ಅಪೌಷ್ಟಿಕತೆ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಕೆಳಮಧ್ಯಮ ಮತ್ತು ಬಡವರ್ಗದ ಜನರಿಗೆ ಪ್ರೋಟೀನು, ವಿಟಮಿನ್ನುಗಳನ್ನು ನೀಡುವುದರಲ್ಲಿ ಈ ಬೇಳೆಗಳದ್ದೇ ಮೇಲುಗೈ. ಬೇಳೆಯ ಬೆಲೆ ಕೊಂಡುಕೊಳ್ಳಲಾರದಷ್ಟು ಹೆಚ್ಚಾಗಿರುವಾಗ ಅಪೌಷ್ಟಿಕತೆ ಹೆಚ್ಚುವುದು ಖಂಡಿತ. ಬೇಳೆಯ ಬೆಲೆ ಇಳಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಲೇ ಅಪೌಷ್ಟಿಕತೆ ನಿವಾರಣೆಗೂ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಸರಕಾರಕ್ಕಿದೆ. 

No comments:

Post a Comment

Related Posts Plugin for WordPress, Blogger...