Oct 16, 2015

ಮುಹಮ್ಮದರನ್ನು ಜನಪದವಾಗಿಸುವ ‘ಓದಿರಿ’

odiri
Dr Ashok K R
ಸ್ನಾತಕೋತ್ತರ ಪದವಿ ಓದುತ್ತಿದ್ದ ದಿನಗಳಲ್ಲಿ ಒಂದು ಸುತ್ತು ಭಗವದ್ಗೀತೆ ಓದಿ ಮುಗಿಸಿದ್ದೆ. ಕುರಾನ್ ಓದೋಣವೆನ್ನಿಸಿತ್ತು. ಇಂಗ್ಲೀಷಿನಲ್ಲಿ ಓದೋ ಕಷ್ಟವ್ಯಾಕೆ ಎಂದುಕೊಂಡು ಕನ್ನಡ ಕುರಾನ್ ಹುಡುಕಿದವನಿಗೆ ಪುಸ್ತಕ ಸಿಕ್ಕಿತ್ತಾದರೂ ಮುನ್ನೂರು ರುಪಾಯಿ ಜೇಬಿನಲ್ಲಿರಲಿಲ್ಲ! ಮುಂದೆ ಯಾವಾಗಲಾದರೂ ಓದಿದರಾಯಿತು ಎಂದುಕೊಂಡೆ. ಓದಲಿಲ್ಲ. ರಂಜಾನ್ ಮಾಸದಲ್ಲಿ ಕಲಬುರಗಿಯ ವಿದ್ಯಾರ್ಥಿಗಳು ಇಫ್ತಿಯಾರ್ ಕೂಟ ಏರ್ಪಡಿಸುತ್ತಿದ್ದರು. ಆ ಸಮಯದಲ್ಲಿ ಇಸ್ಲಾಮಿನ ಬಗೆಗಿನ ಪುಸ್ತಕಗಳನ್ನು ಉಚಿತವಾಗಿ ಹಂಚುತ್ತಿದ್ದರು. ಆಂಗ್ಲದಲ್ಲಿದ್ದ ಆ ಪುಸ್ತಕಗಳನ್ನು ಓದುವುದಕ್ಕೆ ಯಮಹಿಂಸೆಯಾಗುತ್ತಿತ್ತು. ಕಾರಣ ಎಲ್ಲೆಲ್ಲಿ Prophet ಎಂದು ಬರೆಯುತ್ತಾರೋ ಅಲ್ಲೆಲ್ಲಾ Peace be upon him ಅಥವಾ ಅದರ ಸಂಕ್ಷಿಪ್ತ ರೂಪವಾದ pbuh ಎಂಬ ಅಕ್ಷರಗಳು. ಸರಾಗ ಓದಿಗೆ ಅಡ್ಡಿಯುಂಟಾದರೆ ಪುಸ್ತಕ ಓದುವ ಆಸಕ್ತಿ ಉಳಿಯುವುದಾದರೂ ಹೇಗೆ? ಪ್ರವಾದಿ/ ಇಸ್ಲಾಮಿನ ಬಗ್ಗೆ ಇರುವ ಪುಸ್ತಕಗಳು/ಲೇಖನಗಳು ಒಂದೋ ಅತಿಯಾದ ಧಾರ್ಮಿಕ ಪ್ರಜ್ಞೆಯ ಭಾರದಿಂದ ನಲುಗಿರುತ್ತವೆ, ಇಲ್ಲ ಇಸ್ಲಾಮೋಫೋಬಿಯಾದ ಪ್ರಭಾವಕ್ಕೆ ಒಳಗಾದವರ ಸುಳ್ಳಿನ ಕಂತೆಯಾಗಿರುತ್ತದೆ. ಎರಡೂ ರೀತಿಯ ಬರಹಗಳು ಧಾರ್ಮಿಕ ನಂಬುಗೆಯಿರದ ದ್ವೇಷದ ಮನಸ್ಥಿತಿಯಿರದ ಓದುವ ಕುತೂಹಲವಷ್ಟೇ ಇರುವ ವ್ಯಕ್ತಿಗೆ ರುಚಿಸಲಾರದು. ಇಂತವರ ಓದಿಗೆ ಅನುಕೂಲಕರವಾಗಲೆಂದೇ ಬೋಳೂವಾರ ಮಹಮದ್ ಕುಂಞಿ ‘ಓದಿರಿ’ ಪುಸ್ತಕವನ್ನು ಬರೆದಿದ್ದಾರೆ. ಪೂರ್ಣವಾಗಲ್ಲದಿದ್ದರೂ ಪ್ರವಾದಿಯನ್ನು ರವಷ್ಟು ಮಟ್ಟಿಗಾದರೂ ಕನ್ನಡದ ಓದುಗರಿಗೆ ಪರಿಚಯಿಸುವ ಹತ್ತಿರವಾಗಿಸುವ ಕೆಲಸವನ್ನು ಓದಿರಿ ಮಾಡುತ್ತದೆ. ಯಾವ ಕಾಲದ ಯಾವ ಪ್ರವಾದಿಯಾದರೂ ಆಗ ಪ್ರಚಲಿತದಲ್ಲಿದ್ದ ಅಂಧಾಚರಣೆಗಳ ವಿರುದ್ಧ ಹೋರಾಡುತ್ತ ಹೊಸ ಧರ್ಮವನ್ನು ಹುಟ್ಟುಹಾಕುತ್ತಾರೆ. ಕಾಲ ಸವೆದಂತೆ ಆ ಹೊಸ ಧರ್ಮವೂ ಕೂಡ ಅಂಧಾಚರಣೆಯ ಕೂಪದಲ್ಲಿ ಬಿದ್ದು ಬಿಡುವುದು ಕೂಡ ಕಾಲ ತಿಳಿಸಿದ ಸತ್ಯವೇ!

ಪ್ರವಾದಿಯನ್ನು ಚಿತ್ರ ರೂಪದಲ್ಲಿ ಮೂಡಿಸುವುದು ಬಿಡಿ ಮಾತನಾಡುವುದು, ಚರ್ಚಿಸುವುದು, ಬರೆಯುವುದು ಕೂಡ ಅಪರಾಧವೆಂದು ನಂಬುವ ಅನೇಕ ಮುಸ್ಲಿಮರಿದ್ದಾರೆ. ಇಸ್ಲಾಮಿನ ವಿಚಾರಗಳನ್ನು ಪ್ರಶ್ನಿಸಿದವರ ಕೈಕತ್ತರಿಸುವವರು, ಕೊಲೆಗೈಯ್ಯುವವರು ಮತ್ತವರನ್ನು ಬೆಂಬಲಿಸುವವರ ಸಂಖೈಯೇನೂ ಕಡಿಮೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೋಳುವಾರು ಮಹಮದ್ ಕುಂಞಿಯವರ ‘ಓದಿರಿ’ ಕಾದಂಬರಿ ಯಾವ ರೀತಿಯಾಗಿ ಪ್ರವಾದಿ ಮುಹಮ್ಮದರನ್ನು ಚಿತ್ರಿಸಿರಬಹುದು ಎನ್ನುವ ಕುತೂಹಲದಿಂದಲೇ ಪುಸ್ತಕವನ್ನು ಕೈಗೆತ್ತಿಕೊಂಡೆ. ಮೊದಲ ನೆಮ್ಮದಿ ಮುಹಮ್ಮದರ ಹೆಸರು ಬಂದಲ್ಲೆಲ್ಲ peace be upon him ಎಂಬ ಸಾಲುಗಳಿಲ್ಲದಿರುವುದು! ಇದು ಶುದ್ಧಾನುಶುದ್ಧ ಕಾದಂಬರಿಯೇ ಹೊರತು ಧಾರ್ಮಿಕ ಪ್ರಜ್ಞೆಯ ಭಾರದಿಂದ ರೂಪಿತವಾಗಿರುವ ಪುಸ್ತಕವಲ್ಲ. ಬೋಳುವಾರರ ಕಥೆಗಳು ಯಾವ ರೀತಿಯಿಂದ ಓದಿಸಿಕೊಳ್ಳುವ ಗುಣವನ್ನಳವಡಿಸಿಕೊಂಡಿವೆಯೋ ‘ಓದಿರಿ’ ಕೂಡ ಸರಾಗವಾಗಿ ಓದಿಸಿಕೊಳ್ಳುತ್ತದೆ ಅಲ್ಲೊಂದು ಇಲ್ಲೊಂದು ಅಡೆತಡೆಗಳನ್ನೊರತುಪಡಿಸಿ. ಅಂತರಂಗ, ಬಹಿರಂಗ ಮತ್ತು ಚದುರಂಗದಲ್ಲಿ ಪ್ರವಾದಿಯವರ ವಿವಿಧ ಕಾಲಘಟ್ಟದ ಕಥೆಗಳನ್ನು ಹೆಣೆಯಲಾಗಿದೆ. ಅಂತರಂಗ ಬಾಲಕ ಮುಹಮ್ಮದರಲ್ಲಿ ನಿಧನಿಧಾನಕ್ಕೆ ರೂಪುಗೊಳ್ಳುವ ಪ್ರವಾದಿತನದ ಬಗೆಗಿದ್ದರೆ ಬಹಿರಂಗ ಮುಹಮ್ಮದರು ಕೊನೆಯ ಪ್ರವಾದಿಯೆಂಬ ಘೋಷಣೆಯೊಂದಿಗೆ ಇಸ್ಲಾಂ ಧರ್ಮ ಸ್ಥಾಪನೆಯಾಗಿ ಆಗ ಅಸ್ತಿತ್ವದಲ್ಲಿದ್ದ ಇನ್ನಿತರೆ ಧರ್ಮಗಳು ಇಸ್ಲಾಂ ಅನ್ನು ನಾಶಪಡಿಸಬೇಕೆಂದು ನಿರ್ಧರಿಸುವ ಬಗ್ಗೆ. ಸುಳ್ಳು ಹೇಳದ, ಕೆಡಕು ಬಯಸದ, ಕೆಟ್ಟತನವನ್ನೇನೂ ಚಟವಾಗಿಸಿಕೊಳ್ಳದ ಮುಹಮ್ಮದ್ ಮಕ್ಕಾದ ಎಲ್ಲರಿಗೂ ಪ್ರೀತಿ ಪಾತ್ರ ಹುಡುಗ. ಬಡ್ಡಿ ವ್ಯವಹಾರದ ವಿರುದ್ಧ, ವ್ಯಭಿಚಾರದ ವಿರುದ್ಧ, ಮದ್ಯಸೇವನೆಯ ವಿರುದ್ಧದ ಆತನ ನಿಲುವುಗಳನ್ನು ಯಾರೂ ಪಾಲಿಸದಿದ್ದರೂ ಎಲ್ಲರಿಗೂ ಈ ಸತ್ಯಸಂಧನನ್ನು ಕಂಡರೆ ಗೌರವ – ಆದರ. ಈ ಗೌರವಾದರಗಳೆಲ್ಲವೂ ಮಣ್ಣುಪಾಲಾಗುವುದು ಬಹಿರಂಗದಲ್ಲಿ. ದೇವರ ದರ್ಶನವಾಗಿ ಹಿಂದಿನ ಧರ್ಮಗ್ರಂಥಗಳಲ್ಲಿ ಹೇಳಿರುವ ಕೊನೆಯ ಪ್ರವಾದಿ ನಾನೇ ಎಂಬ ಸಂಗತಿ ಮುಹಮ್ಮದರಿಗೆ ತಿಳಿದ ನಂತರ ಅಲ್ಲಿಯವರೆಗೆ ಪಾಲಿಸಿದ ಧರ್ಮಾಚರಣಗೆಗಳನ್ನು ತೊರೆದು ದಿನಕ್ಕೈದು ಬಾರಿ ನಮಾಜು ಮಾಡುವ ಮೂಲಕ ಅಲ್ಲಾಹು ಕೊಟ್ಟ ಸಂದೇಶಗಳನ್ನು ಜನರಿಗೆ ತಲುಪಿಸುವ ಮೂಲಕ ಹೊಸ ಧರ್ಮದ ಹುಟ್ಟಿಗೆ ಕಾರಣರಾಗುತ್ತಾರೆ. ಕೆಲವರು ಈ ಹೊಸ ಧರ್ಮವನ್ನು ಅಪ್ಪಿದರೆ, ಹಲವರು ಅಪ್ಪದಿದ್ದರೂ ಒಪ್ಪಿ ದೂರವುಳಿಯುತ್ತಾರೆ, ಬಹುತೇಕರು ಅಲ್ಲಿಯವರೆಗೆ ಗೌರವಿಸುತ್ತಿದ್ದ ಮುಹಮ್ಮದರನ್ನು ದ್ವೇಷಿಸಲಾರಂಭಿಸುತ್ತಾರೆ.

ಈ ದ್ವೇಷ, ಅನಾದಾರ, ಅಪಹಾಸ್ಯಗಳನ್ನೆಲ್ಲಾ ಎದುರಿಸಿ ಮುಹಮ್ಮದರು ಹೇಗೆ ಇಸ್ಲಾಂ ಧರ್ಮ ಹಬ್ಬಲು ಕಾರಣವಾದರು ಎನ್ನುವುದು ಚದುರಂಗದ ಭಾಗ. ಅಂತರಂಗ ಮತ್ತು ಬಹಿರಂಗದಲ್ಲಿ ಮುಗ್ಧರಂತೆ, ಕೆಲವು ಕಡೆ ದಡ್ಡರಂತೆಯೂ ಕಾಣಿಸಿಬಿಡುವ ಮುಹಮ್ಮದ್ ಚದುರಂಗದಲ್ಲಿ ಚಾಣಾಕ್ಷ್ಯ ಧಾರ್ಮಿಕ ನಾಯಕರಾಗಿ ರೂಪುಗೊಳ್ಳುತ್ತಾರೆ. ಈಗ ಮುಸ್ಲಿಮರ ಪವಿತ್ರ ಸ್ಥಳವೆನ್ನಿಸಿಕೊಳ್ಳುವ ಮಕ್ಕಾದಲ್ಲಿಯೇ ಪ್ರವಾದಿಗೆ ಮತ್ತವರ ಹೊಸ ಧರ್ಮದ ಹಿಂಬಾಲಕರಿಗೆ ರಕ್ಷಣೆಯಿರುವುದಿಲ್ಲ. ತಾತ್ಕಾಲಿಕವಾಗಿ ಮಕ್ಕಾ ತೊರೆದು ಮದೀನಾ ಸೇರುತ್ತಾರೆ. ಇಸ್ಲಾಂ ಧರ್ಮ ವ್ಯಾಪಕವಾಗಿಸಲು ಪ್ರವಾದಿ ವಿರೋಧಿಸುವವರ ಮೇಲಿನ ಯುದ್ಧಗಳಲ್ಲಿ ಗೆದ್ದಿದ್ದಕ್ಕಿಂತ ಆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದ್ದ ಗುಲಾಮಗಿರಿ ಪದ್ಧತಿ ಮತ್ತು ಶ್ರೇಷ್ಟ ಗೋತ್ರದ ವ್ಯಸನ ಪ್ರಮುಖ ಕಾರಣವಿರಬೇಕು. ಗುಲಾಮರಿಗೆ ಸ್ವಂತಿಕೆಯ ಧರ್ಮವಿರಲಿಲ್ಲ. ತಮ್ಮ ಒಡೆಯರ ಧರ್ಮವನ್ನೇ ಪಾಲಿಸಬೇಕಾದ ಅನಿವಾರ್ಯತೆ. ಗುಲಾಮಗಿರಿಯೇ ತಪ್ಪೆಂದು ಸಾರಿದ ಪ್ರವಾದಿಯ ಧರ್ಮ ಅವರನ್ನು ಸೆಳೆದಿದ್ದರೆ ಅಚ್ಚರಿಯಿಲ್ಲ. 

ಅಂತರಂಗ ಮತ್ತು ಬಹಿರಂಗದಲ್ಲಿ ಕಾಣುವ ಮುಹಮ್ಮದರ ವಿಮರ್ಶೆ ಚದುರಂಗದಲ್ಲಿ ನಿಧಾನಕ್ಕೆ ಕಣ್ಮರೆಯಾಗಿಬಿಟ್ಟಿದೆ. ಘೋಷಿತ ಪ್ರವಾದಿಯ ಬಗ್ಗೆ ವಿಮರ್ಶಾತ್ಮಕ ಅಂಶಗಳು ಕಡಿಮೆಯಿರಬೇಕು ಎಂದು ಲೇಖಕರು ಬಯಸಿರಬೇಕು ಅಥವಾ ಕಾದಂಬರಿಯ ಪಾತ್ರಗಳು ಬಯಸಿರಬೇಕು! ಪ್ರವಾದಿಯನ್ನು ಸಂಪೂರ್ಣ ಸರಿಯಾಗಿಸಿಬಿಡುವ ಪ್ರಯತ್ನದಲ್ಲಿ ಅಲ್ಲಿಯವರೆಗೂ ಇದ್ದ ಧರ್ಮದ ಜನರನ್ನು ಸಂಪೂರ್ಣ ತಪ್ಪೆಂದು ಬಿಂಬಿಸುವುದೂ ನಡೆದಿದೆ. ಒಂದೇ ಒಂದು ಕಡೆ ಇಸ್ಲಾಮಿಗೆ ಪರಿವರ್ತನೆಗೊಂಡ ಮಗನ ಮನೆಯನ್ನು ತೊರೆದು ಹೋಗುವ ವಯಸ್ಸಾದ ತಾಯಿ ನನ್ನ ಧರ್ಮ ನನಗೆ ಎಂದು ಸೆಡ್ಡುಹೊಡೆಯುವ ಧೈರ್ಯ ತೋರುತ್ತಾಳೆ. ಪ್ರವಾದಿ ಮುಹಮ್ಮದರ ಪ್ರಕಾರ ಕುರ್ ಆನ್ ಅಂತಿಮ ಸತ್ಯವಿರಬಹುದು. ಆದರೆ ಅಂತಿಮ ಸತ್ಯವೆಂಬುದಿದೆಯೇ? ‘ಪ್ರವಾದಿಯ ಅಲ್ಲಾ ದಿನಕ್ಕೆ ಐವತ್ತು ಸಲ ನಮಾಜು ಮಾಡಲು ಹೇಳಿದ್ದನಂತೆ. ಅಷ್ಟೊಂದು ಸಲ ನಮಾಜು ಮಾಡಿದರೆ ಉಳಿದ ಕೆಲಸಗಳಿಗೆ ಸಮಯವಿರುವುದಿಲ್ಲ ಎಂದು ಐದು ಸಲಕ್ಕೆ ಇಳಿಸಲು ಕೇಳಿಕೊಂಡರಂತೆ’ ಎಂಬಂತಹ ಹಾಸ್ಯಾತ್ಮಕ ವಿಮರ್ಶೆಗಳು ಬಹಿರಂಗದ ನಂತರದ ಭಾಗದಲ್ಲಿ ಕಾಣಿಸುವುದಿಲ್ಲ. ಪುಸ್ತಕದ ಕೊನೆಯಲ್ಲಿ ಮುಗಿಯಿತು ಎನ್ನುವುದರ ಬದಲಾಗಿ ‘ಸಶೇಷ’ ಎಂದು ಬೋಳುವಾರರು ಬರೆದಿರುವುದರಿಂದ ‘ನಿರೀಕ್ಷಿಸಬಹುದು’! 

ನಮಗೆ ಪರಿಚಿತವೇ ಇಲ್ಲದ ಪರಿಸರ ಸಂಸ್ಕೃತಿಯನ್ನು ಸರಾಗವಾಗಿ ಓದುವಂತೆ ಮಾಡಿದೆ ಬೋಳುವಾರರ ಲೇಖನಿ. ಪ್ರವಾದಿಯ ಕತೆ ಓದುತ್ತಿದ್ದರೆ ನಮ್ಮ ದೇಶದ ಬುದ್ಧ, ಬಸವಣ್ಣ ನೆನಪಾಗದೆ ಇರಲಾರರು. ಅಂಧಾಚರಣೆಯ ವಿರುದ್ಧದ ಹೋರಾಟದಲ್ಲಿ ಇವರೆಲ್ಲರೂ ಪ್ರಮುಖರೇ ಅಲ್ಲವೇ? ಕಾಲ ಸರಿದಂತೆಲ್ಲ ಇವರು ಪ್ರಾರಂಭಿಸಿದ ಧರ್ಮ ಯಾವ ರೂಪ ಪಡೆದಿದೆ? ಅಂಧಾಚರಣೆಗಳಿಂದ ಮುಕ್ತವಾಗಿದೆಯಾ ಎಂದು ನೋಡಿದರೆ ನಿರಾಶೆಯೇ ಆಗುತ್ತದೆ. ಬಹುದೈವತ್ವವನ್ನು, ಮನುಷ್ಯ ರೂಪಿತ ದೇವಾರಾಧನೆಯನ್ನು ವಿರೋಧಿಸಿದ ಪ್ರವಾದಿ ಮುಹಮ್ಮದ್ ಮಕ್ಕಾದ ಕಅಬಾವನ್ನು, ಮದೀನಾವನ್ನು ಪವಿತ್ರ ಸ್ಥಳ ಮಾಡಿಬಿಡುತ್ತಾರೆ. ಮನುಷ್ಯ ರೂಪಿತ ದೈವದ ಜಾಗವನ್ನು ಮನುಷ್ಯ ನಿರ್ಮಿತ ದುಬಾರಿ ಮಸೀದಿಗಳು ಆಕ್ರಮಿಸಿಕೊಳ್ಳುತ್ತವೆ. ತಮ್ಮ ದೇವ ಮೂರ್ತಿಯನ್ನು ಘಾಸಿಗೊಳಿಸಿದವರ ಮೇಲೆ ಕೋಪಗೊಳ್ಳುತ್ತಿದ್ದ ಕುರೈಶರು ಮುಹಮ್ಮದರನ್ನು ವಿರೋಧಿಸಿದವರಲ್ಲಿ ಪ್ರಮುಖರು. ರೂಪವಿಲ್ಲದ ದೇವರನ್ನು ಮುಹಮ್ಮದರು ಸ್ಥಾಪಿಸಿದರು. ಮಸೀದಿಯನ್ನು ಹಾನಿಗೊಳಿಸಿದವರ ಮೇಲೆ, ‘ಅಪವಿತ್ರ’ಗೊಳಿಸಿದವರ ಮೇಲೆ ಇವತ್ತಿನ ಮುಸ್ಲಿಮರಿಗೂ ಕೋಪವುಕ್ಕುತ್ತದೆ. ಅಲ್ಲಿಗೆ ಬದಲಾದದ್ದೇನು? ಎಂಬಂತಹ ಪ್ರಶ್ನೆಗಳನ್ನು ನಮ್ಮೊಳಗೆ ಮೂಡಿಸುವುದರಲ್ಲಿಯೇ ‘ಓದಿರಿ’ಯ ಯಶಸ್ಸಿದೆ. ಇನ್ನೇನು ಹೇಳುವುದಕ್ಕಿಲ್ಲ. ಒಮ್ಮೆ ಓದಿರಿ!
ಬೆಲೆ: 220/- ನವಕರ್ನಾಟಕದ ಮೂಲಕ ಆನ್ ಲೈನಿನಲ್ಲಿ 176 ರುಪಾಯಿಗೆ ತರಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

No comments:

Post a Comment