May 2, 2015

ಭೂ‘ಕಂಪನಕ್ಕೆ’ ಕಳಚಿಬಿದ್ದ ಮುಖವಾಡಗಳು

nepal earthquake
Dr Ashok K R
ನೇಪಾಳ ಬೆಚ್ಚಿ ಬಿದ್ದಿದೆ. ಅಕ್ಷರಶಃ ಬಿದ್ದು ಹೋಗಿದೆ. ಭೂಕಂಪನಕ್ಕೆ ಕಟ್ಟಡಗಳನೇಕವು ಬಿದ್ದು ಲೆಕ್ಕಕ್ಕೆ ಸಿಗದಷ್ಟು ಸಾವು ನೋವುಗಳು ಸಂಭವಿಸಿವೆ. ಮೊದಲ ದಿನದ ವರದಿಗಳು ಸಾವಿರದವರೆಗೆ ಸತ್ತಿರಬಹುದೆಂದು ಹೇಳಿತಾದರೂ ಪ್ರತಿದಿನವೂ ಸಾವಿರದಷ್ಟು ಏರಿಕೆಯಾಗುತ್ತಿದೆ. ನಗರದ ಕಟ್ಟಡಗಳ ಅಡಿಯಲ್ಲಿ, ದೂರದ ಕುಗ್ರಾಮಗಳಲ್ಲಿ ಸತ್ತವರ ನಿಖರ ಸಂಖೈಯ ಅರಿವಾಗಲು ಇನ್ನೂ ಅನೇಕ ದಿನಗಳು ಅವಶ್ಯಕ. ಇಂತಹ ನೈಸರ್ಗಿಕ ದುರ್ಘಟನೆಯ ವೇಳೆ ನಿಖರ ಸಂಖೈ ತಿಳಿಯುವುದು ಕಷ್ಟವೂ ಹೌದು. ಇಡೀ ಕುಟುಂಬವೇ ಸಾವಿಗೀಡಾಗಿ ಬಿಟ್ಟಾಗ ‘ನಮ್ಮ ಕುಟುಂಬದವರು ಕಾಣಿಸುತ್ತಿಲ್ಲ’ ಎಂದು ದೂರು ನೀಡುವವರಾದರೂ ಯಾರು. ನಮ್ಮ ಪಶ್ಚಿಮ ಬಂಗಾಳ, ಬಿಹಾರದಲ್ಲೂ ಭೂಮಿ ಕಂಪಿಸಿದೆ. ನೂರರ ಆಸುಪಾಸಿನಲ್ಲಿ ಸಾವುಂಟಾಗಿದೆ. ಭೂಕಂಪನ ಉಂಟುಮಾಡಿದ ಹಿಮಕುಸಿತದಿಂದಾಗಿ ಚಾರಣಕ್ಕೆಂದು ಹಿಮಾಲಯ ಪರ್ವತಶ್ರೇಣಿಯಲ್ಲಿದ್ದವರು ಮೃತಪಟ್ಟಿದ್ದಾರೆ. ನೇಪಾಳದ ಅಥವಾ ಹಿಮಾಲಯದ ತಪ್ಪಲಿನ ಭೂಕಂಪ ಅಚ್ಚರಿಯ ವಿದ್ಯಮಾನವೇನಲ್ಲ. ಭಾರತ ಉಪಖಂಡದ ಚಲನೆಯನ್ನು ಗಮನಿಸಿದಾಗ ಇದು ಶತಮಾನದಲ್ಲೊಮ್ಮೆಯಾದರೂ ನಡೆಯಲೇಬೇಕಾದ ನೈಸರ್ಗಿಕ ವಿದ್ಯಮಾನ ಎಂಬ ಸಂಗತಿ ವೇದ್ಯವಾಗುತ್ತದೆ.

ಇಂಡಿಯನ್ ‍ಪ್ಲೇಟ್ ಎಂದು ಕರೆಯಲ್ಪಡುವ ಭಾರತ ಉಪಖಂಡ ಏಷ್ಯಾ ಖಂಡಕ್ಕೆ ಸೇರುವ ಮೊದಲು, ಮಿಲಿಯಾಂತರ ವರುಷಗಳ ಹಿಂದೆ ಆಫ್ರಿಕಾ ಖಂಡದೊಂದಿಗೆ ಸೇರಿಕೊಂಡಿತ್ತು. ಆಫ್ರಿಕಾದಿಂದ ಬೇರ್ಪಟ್ಟ ಇಂಡಿಯನ್ ಪ್ಲೇಟ್ ವೇಗವಾಗಿ ಯುರೇಷಿಯನ್ ಪ್ಲೇಟ್ ಎಂದು ಕರೆಯಲ್ಪಡುವ ಉಳಿದ ಏಷ್ಯಾ ಖಂಡದ ಕಡೆಗೆ ಸಾಗಲಾರಂಭಿಸಿತು. ಕೊನೆಗೆ ಇಂಡಿಯನ್ ಪ್ಲೇಟ್ ಯುರೇಷಿಯನ್ ಪ್ಲೇಟಿಗೆ ಡಿಕ್ಕಿ ಹೊಡೆದು ಈಗಿರುವ ಸ್ಥಿತಿಯಲ್ಲಿ ನಿಂತಂತೆ ಮಾಡಿತು. ಭೂಮಿಯಲ್ಲಿ ಇಂಡಿಯನ್ ಪ್ಲೇಟ್ ಅತ್ಯಂತ ಚಲನಶೀಲವಾಗಿದೆ. ಏಷ್ಯಾ ಖಂಡದೊಂದಿಗೆ ಮೇಲ್ಮೈಯಲ್ಲಿ ಸೇರಿಕೊಂಡಂತೆ ಮಾಡಿದರೂ ಪ್ರತಿವರ್ಷ ಇಂಡಿಯನ್ ಪ್ಲೇಟ್ ಯುರೇಷಿಯನ್ ಪ್ಲೇಟನ್ನು ನಾಲ್ಕೈದು ಸೆಂಟಿಮೀಟರಿನಷ್ಟು ತಳ್ಳುತ್ತಲೇ ಇದೆ. ಯುರೇಷಿಯನ್ ಪ್ಲೇಟಿನ ಕೆಳಗೂ ಸಾಗುತ್ತಿದೆ. ಈ ಎರಡೂ ಪ್ಲೇಟುಗಳ ತಳ್ಳಾಟ, ನೂಕಾಟ ಹೆಚ್ಚಾದಾಗಲೆಲ್ಲ ಭೂಕಂಪ ಸಂಭವಿಸುವುದು ಖಂಡಿತ. ಒಂದು ಅಧ್ಯಯನದ ಪ್ರಕಾರ ಎಂಭತ್ತು ತೊಂಭತ್ತು ವರುಷಗಳಿಗೊಮ್ಮೆ ಹಿಮಾಲಯದ ತಪ್ಪಲಿನ ಭೂಪ್ರದೇಶದಲ್ಲಿ ಭೂಕಂಪ ನಡೆಯುತ್ತದೆ. ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚು ತೊಂದರೆಗೀಡಾಗುವುದು ಮನುಷ್ಯ ಪ್ರಾಣಿ. ಕಾರಣ, ಕೃತಕ ನಿರ್ಮಾಣದಲ್ಲಿ ವಾಸಿಸುವ ನಮ್ಮ ತಲೆಯ ಮೇಲೆ ನಮ್ಮ ನಿರ್ಮಾಣವೇ ಕುಸಿದು ಬೀಳುವುದು. ಅತಿ ಹೆಚ್ಚು ಭೂಕಂಪವಾಗುವ ಜಪಾನಿನಂತಹ ದೇಶಗಳಲ್ಲಿ ಭೂಕಂಪ ನಿರೋಧಕ ಮನೆಗಳ ನಿರ್ಮಾಣ ಪ್ರಾಮುಖ್ಯತೆ ಪಡೆದುಕೊಂಡಿರುವಂತೆ ನಮ್ಮ ಅಥವಾ ನೇಪಾಳದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿಲ್ಲ. ಸರಕಾರಗಳ ಅಸಡ್ಡೆ ಒಂದು ಕಾರಣವಾದರೆ, ದೇಶದ ಮತ್ತು ಜನರ ಆರ್ಥಿಕ ಪರಿಸ್ಥಿತಿಗಳು ಮತ್ತೊಂದು ಕಾರಣ. ಭೂಕಂಪನದ ಮುನ್ಸೂಚನೆ ನೀಡುವ ತಂತ್ರಜ್ಞಾನ ಅಷ್ಟಾಗಿ ಅಭಿವೃದ್ಧಿಯಾಗಿಲ್ಲದ ಕಾರಣವೂ ಸೇರಿಕೊಂಡು ನಮ್ಮಲ್ಲಿ ಸಾವು ನೋವುಗಳು ಸ್ವಲ್ಪ ಹೆಚ್ಚಾಗಿಯೇ ಇರುತ್ತವೆ. 

ಸುಖೈಶ್ವರ್ಯಗಳು ಹೆಚ್ಚಾದ ಸಂದರ್ಭದಲ್ಲಿ ಮನುಷ್ಯರ ಮನಸ್ಸುಗಳು ದೂರವಿದ್ದರೂ ದುರಂತದ ಸಂದರ್ಭಗಳಲ್ಲಿ ತತ್ವ – ಸಿದ್ಧಾಂತ – ಧರ್ಮ ಭೇದಗಳನ್ನು ಮರೆಸುವ ಮಾನವೀಯತೆ ಮೆರೆಯುತ್ತದೆ. ಸೈದ್ಧಾಂತಿಕವಾಗಿ ವಿರೋಧಿಸಿದ ಸಂಘಟನೆಗಳ ಸೇವಾಕಾರ್ಯದ ಬಗ್ಗೆಯೂ ಮೆಚ್ಚಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಸಾವು ನೋವಿನ ನಷ್ಟಗಳ ಜೊತೆಜೊತೆಗೆ ಮನುಷ್ಯರನ್ನು ಒಂದುಗೂಡಿಸುವ ಕೆಲಸವನ್ನೂ ನೈಸರ್ಗಿಕ ವಿಕೋಪಗಳು ಮಾಡುತ್ತವೆ. ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವವರ ಸಂಖೈ ಹೆಚ್ಚಾಗಿರುವ ಈ ದಿನಮಾನದಲ್ಲಿ ಒಗ್ಗೂಡುವಿಕೆ ವೇಗದಿಂದ ನಡೆಯಬೇಕಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಕೋಪದ ಘಟನೆಗಳು ಹಿಂದಾಗಿ ‘ಧಾರ್ಮಿಕ’ ಘಟನೆಗಳು ಮುಂದಾಗುತ್ತ ಮತ್ತಷ್ಟು ವಿಘಟನೆಗೆ ಕಾರಣವಾಗುತ್ತಿದೆ. ಹಿಂದೂ – ಕ್ರೈಸ್ತ – ಮುಸಲ್ಮಾನರೆಲ್ಲರೂ ಈ ವಿಘಟನೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅರ್ಧ ಸತ್ಯ, ಸುಳ್ಳು, ಅತಿರಂಜಿತ ಸತ್ಯ ಮತ್ತು ಅಪರೂಪಕ್ಕೆ ಸತ್ಯವೆಲ್ಲವೂ ಮಿಲಿಸೆಕೆಂಡಿನಲ್ಲಿ ಮಿಲಿಯಾಂತರ ಜನರನ್ನು ತಲುಪುತ್ತ ಜನರ ಮುಖವಾಡಗಳನ್ನು ಕಳಚಿ ಬಿಸಾಡುತ್ತಿವೆ. 

ನೇಪಾಳ ಹಿಂದೂ ಧರ್ಮೀಯರು ಹೆಚ್ಚಿರುವ ದೇಶ. ಕ್ರಿಶ್ಚಿಯನ್ನರಲ್ಲಿ ಕೆಲವರು ‘ಅಯ್ಯೋ ಹಿಂದೂಗಳೇ. ಪಾಪ ಪಾಪ. ಮೊದಲು ನಮ್ಮ ಧರ್ಮಕ್ಕೆ ಬನ್ನಿ’ ಎಂದು ಕ್ರಿಶ್ಚಿಯನ್ನರು ನೈಸರ್ಗಿಕ ವಿಕೋಪದಿಂದ ಸಾಯುವುದೇ ಇಲ್ಲವೆಂಬಂತೆ ಧರ್ಮ ಪ್ರಚಾರದಲ್ಲಿ ತೊಡಗಲಾರಂಭಿಸಿದ್ದಾರೆ! ಬೀಳದ ಮಸೀದಿಯ ಚಿತ್ರವನ್ನಾಕಿಕೊಂಡ (ಆ ಚಿತ್ರವಾದರೂ ಎಷ್ಟರಮಟ್ಟಿಗೆ ಸತ್ಯ ಎಂಬುದು ಪ್ರಶ್ನಾರ್ಹ) ಕೆಲವು ಮುಸ್ಲಿಮರು ‘ನೋಡಿ ನೋಡಿ ನಮ್ಮ ಅಲ್ಲಾ ಹೇಗೆ ಈ ಮಸೀದಿಯನ್ನು ರಕ್ಷಿಸಿದ್ದಾನೆ’ ಎಂದು ಅಲ್ಲಾನಿಗೆ ಪಾಪ ಮಸೀದಿ ಕಾಯುವುದೇ ಕೆಲಸವೆಂಬಂತೆ ಬೊಬ್ಬೆಯೊಡೆಯುತ್ತಿದ್ದಾರೆ. ‘ಕೇದಾರನಾಥದಲ್ಲಿ ಜಲಪ್ರಳಯವಾದಾಗ ಶಿವನ ದೇಗುಲ ಅಲುಗಲಿಲ್ಲ. ಈಗ ನೋಡಿ ನೇಪಾಳದ ಭೂಕಂಪ ಪಶುಪತಿನಾಥ ದೇಗುಲವನ್ನು ಏನು ಮಾಡಿಲ್ಲ. ನಮ್ಮ ದೇವರ ಪವರ್ ಇದು’ ಎಂಬ ಅಸಂಬದ್ಧ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಕೆಲವು ಹಿಂದೂಗಳು ಆಗಿನ ಕಾಲದ ಕಟ್ಟಡ ಕಾರ್ಮಿಕರ ಬುದ್ಧಿಶಕ್ತಿಯನ್ನು ನಿರ್ಲಕ್ಷಿಸುತ್ತಿದ್ದಾರೆ! ರಾಹುಲ್ ಗಾಂಧಿಯೆಂಬ ಮಾಂಸಾಹಾರಿ ‘ಪರಿಶುದ್ಧ’ನಾಗದೇ ಕೇದಾರನಾಥಕ್ಕೆ ಭೇಟಿ ಕೊಟ್ಟಿದ್ದೇ ಈ ಭೂಕಂಪಕ್ಕೆ ಕಾರಣ ಎಂದು ಹೇಳಿದ ವ್ಯಕ್ತಿಯೊಬ್ಬ ನಮ್ಮ ಸಂಸದ ಎನ್ನುವುದು ನಾಚಿಕೆಪಡಬೇಕಾದ ಸಂಗತಿ. ಹಫೀಜ್ ಸಯ್ಯದ್ ಎಂಬ ಉಗ್ರನ ಸಂಘಟನೆ ಪಾಕಿಸ್ತಾನದಲ್ಲಿ ನಡೆದ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಸೇವಾಕಾರ್ಯಗಳನ್ನು ಕೈಗೊಂಡು ಜನ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ಸಂಘಟನೆಯಷ್ಟು ಅಲ್ಲವಾದರೂ ಒಂದಷ್ಟು ಮಟ್ಟಿಗಿನ ಉಗ್ರತೆ ಮತ್ತು ದ್ವೇಷ ಮನೋಭಾವ ಇಟ್ಟುಕೊಂಡಿರುವ ಆರ್ ಎಸ್ ಎಸ್ ಸಂಘಟನೆ ನೈಸರ್ಗಿಕ ವಿಕೋಪದ ಪರಿಸ್ಥಿತಿಗಳಲ್ಲಿ ಸೇವಾಕಾರ್ಯ ಕೈಗೊಳ್ಳುವುದನ್ನು ಅನೇಕ ಸಂದರ್ಭದಲ್ಲಿ ನೋಡಿದ್ದೇವೆ, ಜನ ಮೆಚ್ಚುವಂತಹ ಕೆಲಸಗಳನ್ನು ಅಂತಹ ದುರಂತದಲ್ಲಿ ತಮ್ಮ ಕಾರ್ಯಕರ್ತರ ಮೂಲಕ ಅವರು ಮಾಡುವುದು ಮೆಚ್ಚುವಂತಹ ಕೆಲಸವೇ ಹೌದು. ಆದರೆ ನೇಪಾಳದಲ್ಲಿ ಭೂಕಂಪ ನಡೆದ ಮಾರನೇ ದಿನವೇ 20,000ದಷ್ಟು ಕಾರ್ಯಕರ್ತರು ನೇಪಾಳಕ್ಕೆ ಹೋಗಿದ್ದಾರೆ ಎಂದು ಸುಳ್ಳಾಡುವುದು ಯಾತಕ್ಕಾಗಿ? ಇಂತಹ ಸುಳ್ಳು ಸುದ್ದಿಯನ್ನು ಆರ್ ಎಸ್ ಎಸ್ ಹಬ್ಬಿಸಲಿಲ್ಲ. ಸಾಮಾನ್ಯ ಜನರ್ಯಾರೋ ಹಬ್ಬಿಸಿದ ಸುಳ್ಳೆಂದರೂ ಸುಮ್ಮನಾಗಬಹುದಿತ್ತೇನೋ. ಆದರೆ ಸುಳ್ಳು ಹಬ್ಬಿಸಿದ್ದು ಬಿಜೆಪಿಯ ಸೋಷಿಯಲ್ ಮೀಡಿಯಾ ವಿಭಾಗದವರು! ಬಿಜೆಪಿಯ ಉನ್ನತ ಸ್ಥಾನದಲ್ಲಿರುವವರು! ಸೈನಿಕರು ಹೋಗುವುದೇ ದುಸ್ತರವಾದ ಸಂದರ್ಭದಲ್ಲಿ 20,000 ಕಾರ್ಯಕರ್ತರು ಅಷ್ಟು ಶೀಘ್ರವಾಗಿ ತಲುಪುವುದಾದರೂ ಹೇಗೆ ಎಂಬುದನ್ನು ಯೋಚಿಸದ ‘ವಿದ್ಯಾವಂತ’ ಜನತೆ ಫೋಟೋಗಳನ್ನು ಲೈಕ್ ಮಾಡಿ ಶೇರ್ ಮಾಡಿದರು! ಆ ಫೋಟೋಗಳು ಆರ್.ಎಸ್.ಎಸ್ ಗುಜರಾತಿನಲ್ಲಿ ಮಾಡಿದ ಸೇವೆ ಮತ್ತು ಕೇರಳದ ಹಳೆಯ ಫೋಟೋಗಳು ಎಂದು ನಂತರದ ದಿನಗಳಲ್ಲಿ ತಿಳಿಯಿತು! ಬಿಜೆಪಿಯ ಸೋಷಿಯಲ್ ಮೀಡಿಯಾ ವಿಭಾಗದವರಿಗೆ ಕಾಂಗ್ರೆಸ್ಸನ್ನು ಕೆಲವು ಸತ್ಯ ಮತ್ತು ಸುಳ್ಳುಗಳಿಂದ ಟೀಕಿಸುವುದಕ್ಕೆ ದುರಂತದಲ್ಲೂ ಸಮಯವಿತ್ತು! ಇನ್ನು ನಮ್ಮ ನೆರೆಯ ಪಾಕಿಸ್ತಾನವೆಂಬ ದೇಶ ಹತ್ತಲವು ಆಹಾರ ಪೊಟ್ಟಣಗಳೊಂದಿಗೆ ಬಹುತೇಕ ನೇಪಾಳಿಗರು ಸೇವಿಸದ ದನದ ಮಸಾಲೆಯನ್ನು ಕಳುಹಿಸಿದ್ದಾರೆ! ಸಹಾಯ ಮಾಡುತ್ತಿರುವವರಿಗಿಂತ ಇಂತಹ ವಿಪರೀತದ ವರ್ತನೆಗಳು ಮಿಲಿಸೆಕೆಂಡುಗಳಲ್ಲಿ ಲಕ್ಷಗಳ ಲೆಕ್ಕದಲ್ಲಿ ಶೇರ್ ಆಗುತ್ತಿದೆ!

ನೇಪಾಳದಲ್ಲಿ ಭಾರತೀಯ ಸೈನ್ಯ
ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ತಮ್ಮ ವೇಗದ ನಿರ್ಣಯಗಳಿಂದ ನೇಪಾಳಕ್ಕೆ ಸಹಾಯ ಒದಗಿಸುತ್ತ ಇಡೀ ಭಾರತ ನಿಮ್ಮ ಜೊತೆಗಿದೆ ಎಂಬ ಭರವಸೆ ತುಂಬುತ್ತಿದ್ದರೆ ಅವರದೇ ಪಕ್ಷದವರು ಬಿಜೆಪಿಯ ‘ರಾಜಕೀಯ’ದ ಬಗ್ಗೆ ಅಸಹ್ಯ ಮೂಡುವಂತೆ ಮಾಡುತ್ತಿದ್ದಾರೆ. ದೇಶದ ನೂರ ಇಪ್ಪತ್ತೈದು ಕೋಟಿ ಜನತೆ ನಿಮ್ಮ ಜೊತೆಗಿದ್ದಾರೆ ಎಂದು ಪ್ರಾರಂಭದಲ್ಲಿ ಹೇಳಿ ಮೆಚ್ಚುಗೆ ಪಡೆದ ಮೋದಿ ನಂತರದ ದಿನಗಳಲ್ಲಿ ‘ಸೇವೆ ನಮ್ಮ ಧರ್ಮ’ ‘ನೇಪಾಳದ ಪ್ರಧಾನಿಗೆ ಭೂಕಂಪ ಗೊತ್ತಾಗಿದ್ದೇ ನನ್ನಿಂದ’ ಎಂಬಂತಹ ಮಾತುಗಳನ್ನು ಅನವಶ್ಯಕವಾಗಿ ಹೇಳುತ್ತಿರುವುದ್ಯಾಕೋ ತಿಳಿಯುವುದಿಲ್ಲ. ಭಾರತ ನೇಪಾಳದ ನೆರವಿಗೆ ಮೊದಲು ಬಂದಿದ್ದು ಹೌದಾದರೂ ನಂತರದ ದಿನಗಳಲ್ಲಿ ಪಾಕಿಸ್ತಾನ, ಚೀನಾ ಸೇರಿದಂತೆ ಅನೇಕ ದೇಶಗಳು, ವಿವಿಧ ದೇಶಗಳ ಎನ್.ಜಿ.ಒಗಳು ನೇಪಾಳಕ್ಕೆ ತಮ್ಮ ಕೈಲಾದ ಮಟ್ಟಿಗೆ ನೆರವು ನೀಡುತ್ತಿವೆ. ಪುಟ್ಟ ರಾಷ್ಟ್ರವೊಂದಕ್ಕೆ ನೆರವು ನೀಡುವುದರ ಮೂಲಕ ರಾಜಕೀಯ ಪ್ರಭಾವ ಪಡೆದುಕೊಳ್ಳಲು ನೆರೆಯ ರಾಷ್ಟ್ರಗಳು ನಂತರದ ದಿನಗಳಲ್ಲಿ ಯತ್ನಿಸುವುದು ನಿಜವಾದರೂ ತತ್ ಕ್ಷಣದಲ್ಲಿ ಇದು ಮಾನವೀಯತೆಯ ದೃಷ್ಟಿಯ ನೆರವು. ಸಮೂಹ ಮಾಧ್ಯಮಗಳು ಓದುಗರಿಂದ ದುರಂತಕ್ಕೀಡಾದ ದೇಶಕ್ಕೆ ನೆರವು ಯಾಚಿಸುವುದು ಸಾಮಾನ್ಯ. ಸಾಮಾಜಿಕ ತಾಣ ಫೇಸ್ ಬುಕ್ ಕೂಡ ನೇಪಾಳದ ದುರಂತಕ್ಕೆ ನೆರವು ನೀಡಲು ಪ್ರೇರೇಪಿಸುತ್ತಿರುವುದು ಅಭಿನಂದನಾರ್ಹ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರಕಾರದ ಸ್ಪಂದನೆಯನ್ನು ಅಭಿನಂದಿಸುತ್ತಲೇ ಮಾಧ್ಯಮಗಳು ನೇಪಾಳದಲ್ಲಿ ‘ಮೋದಿಯನ್ನು ಹೊಗಳಿ’ ‘ಸರಕಾರವನ್ನು ಹೊಗಳಿ’ ಎಂದು ಸಂತ್ರಸ್ತ ಜನರಿಗೆ ಹೇಳುವಂತೆ ಮಾಡಿದ ಕುರಿತು ನೇಪಾಳದಲ್ಲಿದ್ದ ಭಾರತೀಯನೊಬ್ಬ ಟ್ವೀಟಿಸಿದ್ದು ಪ್ರಸ್ತುತ ಸರಕಾರದ ಅತಿಯಾದ ಪ್ರಚಾರಪ್ರಿಯತೆಯನ್ನು ತೋರಿಸುತ್ತದೆ. ಸರಕಾರವೊಂದಕ್ಕೆ ಇಷ್ಟೊಂದು ಪ್ರಚಾರ ಬೇಕಾ?

ನೇಪಾಳಕ್ಕೆ ತೆರಳಿದ ಕರ್ನಾಟಕದ ವೈದ್ಯರು
ನೇಪಾಳಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಕರ್ನಾಟಕದವರನೇಕರು ಭೂಕಂಪನಕ್ಕೆ ಸಿಲುಕಿಕೊಂಡಿದ್ದರು. ಅವರಲ್ಲಿ ಬಹುತೇಕರು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ದೂರದ ನೇಪಾಳಕ್ಕೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಮುಂದೆ ಬಂದ ವೈದ್ಯರ ತಂಡವನ್ನು ಕರ್ನಾಟಕ ಸರಕಾರ ಇನ್ನೂರು ಕೆ.ಜಿ ಮಾತ್ರೆಗಳೊಂದಿಗೆ ನೇಪಾಳಕ್ಕೆ ಕಳುಹಿಸಿದೆ. ಕರ್ನಾಟಕ ಬಿಜೆಪಿಯ ವತಿಯಿಂದಲೂ ವೈದ್ಯರ ತಂಡವೊಂದು ನೇಪಾಳಕ್ಕೆ ತೆರಳಲು ಸಿದ್ಧತೆ ನಡೆಸಿದೆ. ಪಕ್ಷಾತೀತವಾಗಿ, ದೇಶಾತೀತವಾಗಿ ನೇಪಾಳಕ್ಕೆ ಸಹಾಯ ಮಾಡಲು ಜನರು ಮುಂದೆ ಬರುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಧರ್ಮ ದ್ವೇಷವನ್ನೇ ಪ್ರಮುಖವಾಗಿಸಿಕೊಂಡವರ ಅಟ್ಟಹಾಸ ಬೇಸರ ಮೂಡಿಸುತ್ತದೆ. ನಕಾರಾತ್ಮಕ ಕಾರಣಗಳಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಜಾಲತಾಣಗಳು ನಿಧಾನಕ್ಕೆ ಜನರಿಂದ ದೂರಾಗುತ್ತಿದೆಯಾ ಎಂಬ ಸಂಶಯ ಮೂಡುವುದು ಫೇಸ್ ಬುಕ್, ಟ್ವಿಟರ್ರಿನಲ್ಲಿ ಆ್ಯಕ್ಟೀವ್ ಆಗಿರುವವರ ಸಂಖೈಯಲ್ಲಿ ಕಡಿತವಾಗುತ್ತಿದೆ ಎಂಬ ಅಧ್ಯಯನಾತ್ಮಕ ವರದಿಗಳು. 

ಕರ್ನಾಟಕ ಬಿಜೆಪಿ ವತಿಯಿಂದ ನೇಪಾಳಕ್ಕೆ ತೆರಳಿದ ವೈದ್ಯರ ತಂಡ
ಜನರು ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ ಎಂಬುದಕ್ಕೆ ನೇಪಾಳ ಭೂಕಂಪಕ್ಕೆ ಸಂಬಂಧಿಸಿದಂತೆಯೇ ಎರಡು ಉದಾಹರಣೆಗಳಿವೆ. thelapine.ca ಎಂಬ ಕೆನಡಾದ ಅಂತರ್ಜಾಲ ಪುಟವೊಂದು ನೇಪಾಳ ಭೂಕಂಪನ ನಡೆದ ಎರಡನೇ ದಿನ ಒಂದು ವರದಿ ಪ್ರಕಟಿಸಿತ್ತು. ಕ್ರಿಶ್ಚಿಯನ್ ಧರ್ಮಪ್ರಚಾರಕರು ನೇಪಾಳಕ್ಕೆ ಹತ್ತು ಸಾವಿರ ಬೈಬಲ್ಲುಗಳನ್ನು ಕಳುಹಿಸಿದ್ದಾರೆ. ದುರಂತದ ಸಮಯದಲ್ಲಿ ಇಂತಹ ಧರ್ಮಪ್ರಚಾರವನ್ನು ಮಾಡುತ್ತಿರುವ ಸಂಘಟನೆಯನ್ನು ನೇಪಾಳಿಗರು ಕಟು ಮಾತಿನಲ್ಲಿ ಟೀಕಿಸಿದ್ದಾರೆ. ಹಸಿದವರೇನು ಬೈಬಲ್ಲು ತಿನ್ನುತ್ತಾರೆಯೇ ಎಂದು ನೇಪಾಳದ ಪ್ರಧಾನಮಂತ್ರಿ ಕೇಳಿದ್ದಾರೆ ಎಂದು ಬರೆಯಲಾಗಿತ್ತು. ಎರಡು ದಿನಗಳ ನಂತರ ಭಾರತದ ಅನೇಕ ವೆಬ್ ಪುಟಗಳು ಇದನ್ನು ಕೆಲವು ಮಾರ್ಪಾಡುಗಳೊಂದಿಗೆ ಮರುಪ್ರಕಟಿಸಿದ್ದಾರೆ. ಅದನ್ನು ಸಾವಿರಾರು ಜನರು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ! ಸತ್ಯಾಂಶವೆಂದರೆ thelapine.ca ಒಂದು ವಿಡಂಬನಾತ್ಮಕ ಅಂತರ್ಜಾಲ ಪುಟ! ಎಲ್ಲವನ್ನೂ ವಿಡಂಬನೆಯ ದೃಷ್ಟಿಯಿಂದ ಟೀಕಿಸುತ್ತಾರೆನ್ನುವ ಅಂಶ ಅದರ ಇನ್ನಿತರೆ ಲೇಖನಗಳನ್ನು ಓದಿದಾಗ ಅರಿವಾಗುತ್ತದೆ! This is satirical website ಅಂತ ಅವರೇ ಹಾಕಿಕೊಂಡಿದ್ದಾರೆ. ಮೂರೊತ್ತು ಧರ್ಮ ಪ್ರಚಾರದ ಬಗ್ಗೆಯೇ ಯೋಚಿಸುವ ಕ್ರಿಶ್ಚಿಯನ್ ಮಿಷಿನರಿಗಳನ್ನು ವಿಡಂಬಿಸುವ ಉದ್ದೇಶದಿಂದ ಬರೆದ ಲೇಖನವೊಂದು ‘ಸತ್ಯ’ ಪ್ರಕಟಿಸುವ ಪುಟಗಳಲ್ಲೂ ‘ಸತ್ಯವೆಂಬಂತೆ’ ಪ್ರಕಟವಾಗಿಬಿಟ್ಟಿದ್ದು ನಿಜವಾದ ವಿಡಂಬನೆ! ಕೊನೆಗೆ thelapine.ca ಆ ಲೇಖನವನ್ನೇ ತೆಗೆದುಹಾಕಿಬಿಟ್ಟಿದೆ! ಮತ್ತೊಂದು ಉದಾಹರಣೆ ನಮ್ಮದೇ ದೇಶದ ಸಂಘಟನೆಯದ್ದು. ಬಿಜೆಪಿ ಘನತೆವೆತ್ತ ನಾಯಕ/ನಾಯಕಿಯರು ಮತ್ತದರ ಬೆಂಬಲಿಗರು, ಬೆಂಬಲಿಗ ಅಂತರ್ಜಾಲ ಪುಟಗಳು ಆರ್.ಎಸ್.ಎಸ್ಸಿನ ಬಗ್ಗೆ ಪುಂಖಾನುಪುಂಖವಾಗಿ ಸುಳ್ಳನ್ನು ಹರಿಯಬಿಡಲಾರಂಭಿಸಿಬಿಟ್ಟಾಗ ತನ್ನ ಅಧಿಕೃತ ಟ್ವಿಟರ್ ಖಾತೆಯ ಮುಖಾಂತರ ಆರ್.ಎಸ್.ಎಸ್ ಸಮಜಾಯಿಷಿ ನೀಡಬೇಕಾಯಿತು. ಇಪ್ಪತ್ತು ಸಾವಿರ ಜನರು ನೇಪಾಳಕ್ಕೆ ಹೋಗಿಲ್ಲ. ಮುಖಂಡರು ಹೋಗಿ ಅಲ್ಲಿನ ಹಿಂದೂ ಸಂಘಟನೆಯ ಜೊತೆಗೆ ಪರಿಸ್ಥಿತಿಯನ್ನು ಅಭ್ಯಸಿಸುತ್ತಿದ್ದಾರೆ, ಅದಾದ ನಂತರ ನೇಪಾಳಕ್ಕೆ ಯಾವ ರೀತಿಯ ಸಹಾಯ ಮಾಡಬಹುದೆಂದು ಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ. ಆರ್.ಎಸ್.ಎಸ್ ಆ ರೀತಿ ಹೇಳಿದ ನಂತರವೂ ನಕಲಿ ಸುದ್ದಿಗಳು ಪ್ರಚಾರ ಪಡೆಯುತ್ತಲೇ ಇರುವುದು ‘ವಿದ್ಯಾವಂತ’ ಜನರ ಜಾಣತನದ ವಿಘಟನಾ ಬುದ್ಧಿಗೆ ಉದಾಹರಣೆಯಷ್ಟೇ! ಅವರವರು ನಂಬಿದ ದೇವರುಗಳು ಅವರಿಗೆ ಒಳ್ಳೆಯ ಸದ್ಭುದ್ಧಿ ಕೊಡಲಿ!

No comments:

Post a Comment