Dec 13, 2014

ಪಿರಿಯಾಪಟ್ಟಣ ಎಂಬ ಅಭಿವೃಧ್ದಿ ವಂಚಿತ ತಾಲೂಕು

ಪಿರಿಯಾಪಟ್ಟಣ
Vasanth Raju N
ಪಿರಿಯಾಪಟ್ಟಣ ಮೈಸೂರಿನ ಪ್ರಮುಖ ತಾಲ್ಲೊಕು ಕೇಂದ್ರ. ಕೊಡಗಿನ ಅಂಚಿನಲ್ಲಿರುವ ಈ ತಾಲ್ಲೊಕು ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಕೃಷಿಗೆ ಪ್ರಸಿದ್ದಿ. ಬೈಲ್‍ಕುಪ್ಪೆ (ಟಿಬೆಟ್ ನಿರಾಶ್ರಿತ ಪ್ರದೇಶ) ಕರ್ನಾಟಕದ ಬೌದ್ದ ಧರ್ಮದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಇದಲ್ಲದೇ ಇತಿಹಾಸ ಪ್ರಸಿದ್ದಿ ಕನ್ನಂಬಾಡಿ ಮತ್ತು ಮಸಣಿಕಮ್ಮ ದೇವಸ್ಥಾನಗಳು ಕೂಡ ಪ್ರಮುಖ ಭಕ್ತಿ ಕೇಂದ್ರಗಳು. ಅದರೆ ಈ ತಾಲೂಕು ಯಾವುದೇ ರಚನಾತ್ಮಕ ಅಭಿವೃದ್ದಿ ಕಾಣದೇ ಹಿಂದುಳಿದಿದೆ. ಇದಕ್ಕೆ ಕಾರಣವಾಗಿರುವ ಕೆಲ ಅಂಶಗಳನ್ನು ಕುರಿತು ಚರ್ಚೆಯ ಉದ್ದೇಶ ಈ ಲೇಖನದ್ದು.

ಸಾರಿಗೆ ಮತ್ತು ಆರೋಗ್ಯ ಸೇವೆ:

ತಾಲೂಕು ಆಸ್ಪತ್ರೆಗೆ ದಿನನಿತ್ಯ ಅನೇಕ ಗ್ರಾಮಗಳಿಂದ ನೂರಾರು ಜನರು ಶೂಶ್ರೂಷೆಗೆ ಭೇಟಿ ನೀಡುವರು. ಅದರೂ ಅನೇಕ ತಜ್ಞರ ಕೊರತೆಯನ್ನು ಎದುರಿಸುತ್ತಿದೆ. ಸೂಕ್ತ ತಜ್ಞರ ಅಲಭ್ಯತೆಯಿಂದಾಗಿ ಜನರು ಮೈಸೂರಿನ ದುಬಾರಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. ಇನ್ನೂ ಹೋಬಳಿ ಕೇಂದ್ರಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ವಾರದಲ್ಲಿ ಇಂತಿಷ್ಟು ದಿನಗಳಂತೆ ವೈದ್ಯರು ಎರಡು ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಲ್ಯಾಬ್ ವ್ಯವಸ್ಥೆ ಸೂಕ್ತವಾಗಿಲ್ಲದೇ, ಎಲ್ಲಾ ಪರೀಕ್ಷೆಗಳಿಗೆ ಖಾಸಗಿ ಲ್ಯಾಬ್‍ಗಳನ್ನು ಬಡ ಹಳ್ಳಿ ಜನರು ಅವಲಂಬಿಸಬೇಕಾಗಿದೆ.
ಪಿರಿಯಾಪಟ್ಟಣ ಸಾರಿಗೆ ವ್ಯವಸ್ಥೆಯ ಗೋಳು ಹೇಳತೀರದು. ಈ ತಾಲೂಕಿನ ಬಹುತೇಕ ರಸ್ತೆಗಳು ಸಂಚರಿಸಲು ಯೋಗ್ಯವಾಗಿಲ್ಲ. ರಾಷ್ತ್ರೀಯ ಹೆದ್ದಾರಿಯಾಗಿ ಪರಿವರ್ತಿತವಾಗುತ್ತಿರುವ ಬೆಟ್ಟದಪುರ ರಸ್ತೆ ವಾಹನಗಳು ಸಂಚರಿಸಲು ಯಾವುದೇ ರೀತಿಯಲ್ಲೂ ಸೂಕ್ತವಾಗಿಲ್ಲ. ಸಂಪೂರ್ಣ ಹಳ್ಳಕೊಳ್ಳಗಳಿಂದ ಕೂಡಿದ್ದು, ವಾಹನ ಸಂಚಾರರು ಈ ರಸ್ತೆಯಲ್ಲಿ ಸಂಚರಿಸಲು ಯಮಯಾತನೆ ಅನುಭವಿಸಬೇಕು. ಇನ್ನೂ ಹೊನ್ನಾಪುರ, ರಾವಂದೂರು, ರಾಮನಾಥಪುರ, ಪಿರಿಯಾಪಟ್ಟಣ ಮಾರ್ಗ ಸಿದ್ದಾಪುರ ರಸ್ತೆ, ವಿರಾಜಪೇಟೆ ರಸ್ತೆಗಳ ದುಸ್ಥಿತಿ ಹೇಳತೀರದು. ಪ್ರಮುಖ ಹೋಬಳಿ ಕೇಂದ್ರ ಪ್ರದೇಶ ಬೆಟ್ಟದಪುರದ ಬಸ್ ನಿಲ್ದಾಣ ಕನಿಷ್ಟ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ತಾಲೂಕಿನ ಬಸ್ ನಿಲ್ದಾಣ ಕೂಡ ಮಾನ್ಯ ದೊಡ್ಡ ಕಮರಹಳ್ಳಿ ಸಿದ್ದಲಿಂಗಪ್ಪನವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವಂತೆ 18ನೇ ಶತಮಾನದಲ್ಲಿದೆ. ತಾಲೂಕಿನ ಕೇಂದ್ರ ಭಾಗದಲ್ಲಿರುವ ಅನೇಕ ಹೊಸ ಬಡಾವಣೆಗಳು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ಪ್ರದೇಶಗಳಂತೆ ಕಂಡುಬರುತ್ತಿವೆ.

ಶಿಕ್ಷಣದ ಗುಣಮಟ್ಟದಲ್ಲಿನ ಕುಸಿತ:

ಪಿರಿಯಾಪಟ್ಟಣ ತಾಲೂಕಿನಲ್ಲಿ ಎರಡು ಸರ್ಕಾರಿ ಪದವಿ (2013-14ನೇ ಸಾಲಿನಲ್ಲಿ ಬಹುದಿನ ಬೇಡಿಕೆಯ ನಂತರ ಪ್ರಾರಂಭವಾದ ಬೆಟ್ಟದಪುರ ಸರ್ಕಾರಿ ಪದವಿ ಕಾಲೇಜು ಸೇರಿ) ಕಾಲೇಜುಗಳಿದ್ದು, ಇನ್ನೂ ಸೂಕ್ತ ಕಲಿಕೆಯ ವಾತವಾರಣವಿಲ್ಲದೇ ಬಳಲುತ್ತಿವೆ. ತಾಲೂಕಿನ ಪದವಿ ಕಾಲೇಜು 1991ರಲ್ಲಿ ಪ್ರಾರಂಭವಾಗಿದ್ದರೂ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ. ಬುಹುತೇಕ ವಿಷಯಗಳಿಗೆ ಖಾಯಂ ಉಪನ್ಯಾಸಕರಿಲ್ಲ. ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲ್ದಾಣ ಮತ್ತು ಕ್ರೀಡಾಂಗಣದ ಕೊರತೆ ಇದೆ. ಪದವಿ ಕಾಲೇಜು ತಾಲೂಕು ಕೇಂದ್ರದಿಂದ ಬಹು ದೂರವಿದ್ದು, ಸೂಕ್ತ ಬಸ್ ವ್ಯವಸ್ಥೆ ಇಲ್ಲವಾಗಿದೆ. ಬೆಟ್ಟದಪುರ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ ಗಳನ್ನು ವಿದ್ಯಾರ್ಥಿಗಳು ಅವಲಂಬಿಸಬೇಕಾಗಿದೆ. ಹೀಗಾಗಿ ಈ ತಾಲೂಕಿನ ವಿದ್ಯಾರ್ಥಿಗಳು ಪಕ್ಕದ ಹುಣಸೂರು ಮತ್ತು ಮೈಸೂರಿನ ಕಾಲೇಜುಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ತರೆಳುವ ಪರಿಸ್ಥಿತಿ ಇದೆ. 2007-08ನೇ ಸಾಲಿನಲ್ಲಿ ಮಂಜೂರಾದ ಸರ್ಕಾರಿ ಕೈಗಾರಿಕಾ ತರಬೇತಿ ಕಟ್ಟಡ ಇನ್ನೂ ಪೂರ್ಣವಾಗಿಲ್ಲ. ಬಹುತೇಕ ಪದವಿ ಪೂರ್ವ ಕಾಲೇಜುಗಳು ಖಾಯಂ ಉಪನ್ಯಾಸಕರ ಕೊರತೆಯಿಂದ ಬಳಲುತ್ತಿವೆ. ಮಲ್ಲರಾಜಪಟ್ಟಣದ ಸರ್ಕಾರಿ ಶಾಲೆಯಲ್ಲಿ 80 ವಿದ್ಯಾರ್ಥಿಗಳು 2009ರಲ್ಲಿ ಅಭ್ಯಾಸ ಮಾಡುತ್ತಿದ್ದು, ಇಂದು ಅದು 35ರ ಅಸುಪಾಸಿಗೆ ಕುಸಿದಿದ್ದೆ. ತಾಲೂಕಿನ ವಿದ್ಯಾರ್ಥಿಗಳಿಗೆ ಸೂಕ್ತ ಕಲಿಕೆ ವಾತವಾರಣವನ್ನು ನಿರ್ಮಿಸಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ.

ಕೃಷಿ ಉತ್ಪನ್ನಗಳ ಬೆಲೆ ಕುಸಿತ (ತಂಬಾಕು):

ಈ ಭಾಗದ ಪ್ರಮುಖ ಬೆಳೆ ತಂಬಾಕು. ಉತ್ತಮ ದರ್ಜೆಯ ತಂಬಾಕನ್ನು ಬೆಳೆಯುವ ಇಲ್ಲಿನ ಕೃಷಿಕರು ಪ್ರತಿವರ್ಷ ಬೆಲೆ ಕುಸಿತದಿಂದ ತಾವು ಬೆಳೆದ ಫಸಲಿಗೆ ಸೂಕ್ತಬೆಲೆ ಸಿಗದೇ ಪರದಾಡುವ ಪರಿಸ್ಥಿತಿ. ಹೆಚ್ಚುತ್ತಿರುವ ಬೆಳೆಯ ವೆಚ್ಚ ಇಲ್ಲಿನ ಕೃಷಿಕರನ್ನು ಹೈರಾಣಾಗಿಸಿದೆ. ಒಂದು ಕೆ.ಜಿ. ತಂಬಾಕು ಬೆಳೆಯಲು 110-120 ರೂಪಾಯಿ ವೆಚ್ಚವಾಗುತ್ತಿದ್ದು, ಸೂಕ್ತ ಸಮಯದಲ್ಲಿ ಕೂಲಿಗಳು ಸಿಗದೆ, ತಂಬಾಕಿನ ಎಲೆಗಳನ್ನು ಒಣಗಿಸಲು ಮರದ ಕಟ್ಟಿಗೆಗಳ ಕೊರತೆ; ಸಿಕ್ಕರೂ ಬೆಲೆ ಹೆಚ್ಚಳದ ಸಮಸ್ಯೆ ಮತ್ತು ಸರ್ಕಾರದ ತಂಬಾಕು ಬೆಳೆ ನಿಷೇಧದ ಬಗ್ಗೆಗಿನ ಗೊಂದಲದ ಹೇಳಿಕೆಗಳು ಈ ರೈತರನ್ನು ಮತ್ತಷ್ಟು ಕಂಗಾಲಾಗಿಸಿವೆ. ತಂಬಾಕು ಬೆಳೆಯನ್ನು 2020ರ ವೇಳೆಗೆ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದ್ದರೂ ಪ್ರತಿವರ್ಷ ತಂಬಾಕು ಬೆಳೆಯನ್ನು ಬೆಳೆಯುವರು ಹೆಚ್ಚುತ್ತಿದ್ದಾರೆ (ಅನುಮತಿ ಇಲ್ಲದೇ ಬೆಳೆಯುವವರು ಅಧಿಕ). ಇಲ್ಲಿನ ಜನ ಪರ್ಯಾಯ ಬೆಳೆಯತ್ತ ಗಮನವನ್ನೆ ಹರಿಸುತ್ತಿಲ್ಲ. ಇಲ್ಲಿ ಜೋಳ, ರಾಗಿ, ಇತರ ಧಾನ್ಯಗಳನ್ನು ಬೆಳೆದರೂ ಅವುಗಳನ್ನು ಎರಡನೇ ಬೆಳೆಯಾಗಿ ಬೆಳೆಯುತ್ತಾರೆ. ಪರ್ಯಾಯ ಬೆಳೆಯನ್ನು ಬೆಳೆಯಲು ಉತ್ತೇಜಿಸಬೇಕಾದ ಕೃಷಿ ಇಲಾಖೆ ನಿಷ್ಕ್ರಿಯವಾಗಿದೆ.

ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ಹಿಂದೆ:

ಪಿರಿಯಾಪಟ್ಟಣ ಹಿಂದಿನಿಂದಲೂ ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ಸಮೃದ್ದವಾಗಿರುವಂತಹ ಪ್ರದೇಶ. ಪಿರಿಯಾಪಟ್ಟಣ ಕಳಗದಂತಹ ಜಾನಪದೀಯ ಮಹಾಕಾವ್ಯದ ತವರು. ಸಿನಿಮಾ ಕ್ಷೇತ್ರದಲ್ಲಿ ಇಂದಿಗೂ ತನ್ನದೇ ಛಾಪು ಮೂಡಿಸಿರುವ ಹೊಸ ನಿರ್ದೇಶಕರ ಮಾದರಿ ಪುಟ್ಟಣ ಕಣಗಾಲ್ ಪಿರಿಯಾಪಟ್ಟಣದವರು ಎಂಬುದು ಗಮನಾರ್ಹ. ಇತ್ತೀಚಿನ ದಿನಗಳಲ್ಲಿ ಉತ್ತಮ ಸಿನಿಮಾಗಳನ್ನು ನೀಡುತ್ತಿರುವ ಮಹಿಳಾ ನಿರ್ದೇಶಕಿ ಸುಮನಾ ಕಿತ್ತೂರು ಕೂಡ ಈ ತಾಲೂಕಿನ ಪ್ರತಿಭೆ. ಅದರೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಒಂದು ಸುಸಜ್ಜಿತ ರಂಗಮಂದಿರವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಖಾಸಗಿ ಸಭಾ ಭವನಗಳನ್ನು ಅಥವಾ ಕಲ್ಯಾಣ ಮಂಟಪಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ.

ಬತ್ತಿ ಹೋಗಿರುವ ಬಹುತೇಕ ಕೆರೆಗಳು:

ಈ ತಾಲೂಕಿನ ಬಹುತೇಕ ಕೆರೆಗಳು ಇಂದು ತಳಮಟ್ಟ ತಲುಪಿವೆ. ಕಂಪಲಾಪುರ ಮತ್ತು ಬಸಲಾಪುರ ಗಾಮ್ರಗಳ ನಡುವೆ ಇರುವ ಕೆರೆಯಲ್ಲಿ ಎರಡು ವರ್ಷಗಳ ಹಿಂದೆ ಮೀನುಗಾರಿಕೆಯನ್ನು ಮಾಡಲಾಗುತ್ತಿತ್ತು. ಅದರೆ ಇಂದು ಅದು ಸಂಪೂರ್ಣ ಬತ್ತಿ ಹೋಗಿದ್ದು ಬರಡು ಭೂಮಿಯಾಗಿ ಪರಿವರ್ತಿತವಾಗಿದೆ. ಪಿರಿಯಾಪಟ್ಟಣ ತಾಲೂಕು ಕಚೇರಿಯ ಎದರು ಇರುವ ಕೆರೆಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇತ್ತೀಚೆಗೆ ಈ ಕೆರೆಗೆ ಕಾಯಕಲ್ಪ ನೀಡುವ ಪ್ರಯತ್ನ ಮಾಡಲಾಗಿದ್ದರು ಅದು ಕೂಡ ಪೂರ್ಣವಾಗಿಲ್ಲ. ಈ ತಾಲೂಕಿನಲ್ಲಿ ಸಾಕಷ್ಟು ಮಳೆಯಾದರೂ ಸಕಾಲಕ್ಕೆ ಕೆರೆಗಳಿಗೆ ನೀರು ಬೀಡದೆ ಅವುಗಳು ತಳಮಟ್ಟ ತಲುಪಿವೆ. ಬೆಟ್ಟದಪುರದ ಅನೇಕ ಗ್ರಾಮಗಳ ಕೆರೆಗಳು, ಮೈಸೂರು-ಕೊಡಗು ಮಾರ್ಗ ಹಾದುಹೋಗುವ ಅನೇಕ ಊರುಗಳ ಕೆರೆಗಳು ಸಂಪೂರ್ಣ ಬತ್ತಿರುವುದು ದಿನನಿತ್ಯದ ಚಿತ್ರಣ. ತಾಲೂಕಿನ ಅನೇಕ ಹಳ್ಳಿಗಳು ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. 
ಇಲ್ಲಿನ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದಾಗಿ ಈ ತಾಲೂಕು ಅಭಿವೃದ್ಧಿ ಹೊಂದದ್ದೆ ಹಿಂದುಳಿಯಲು ಕಾರಣವಾಗಿದೆ. ಪಿರಿಯಾಪಟ್ಟಣ ಪಟ್ಟಣ ಪಂಚಾಯಿತಿಯನ್ನು ಪುರಸಭೆ ದರ್ಜೆಗೆ ಏರಿಸಲಾಗಿದೆ. ಈಗಲಾದರೂ ಇಲ್ಲಿನ ಜನರು ಸಂಘಟಿತ ರೂಪದಲ್ಲಿ ಹೋರಾಟವನ್ನು ಕಟ್ಟುವುದರ ಮೂಲಕ ತಾಲೂಕಿನ ಅಭಿವೃಧ್ದಿಗೆ ಶ್ರಮಿಸುವಂತೆ ಇಲ್ಲಿನ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿ ವರ್ಗಕ್ಕೆ ಒತ್ತಡ ಹೇರಬೇಕಾಗಿದೆ.

2 comments:

  1. ಪಿರಿಯ ಪಟ್ಟಣದ ಕಾಳಗ ಎಂಬ ಒಂದು ಲಾವಣಿ ತುಂಬಾ ಪ್ರಸಿದ್ಧವಾಗಿದೆ .ಪಿರಿಯಾ ಪಟ್ಟಣದ ರಾಜ ವೀರ್ರಾಜನಿಗೆ ತನ್ನದು ಗಂಡು ಭೂಮಿ ಎಂಬ ಅಭಿಮಾನ .ಹೆಣ್ಣು ಭೂಮಿ ಮೈಸೂರ್ ಅನ್ನು ತುಳಿಯಲಾರೆ ಎಂಬ ಶಪಥ ತೊಟ್ಟಿದ್ದ.
    ಎಲ್ಲ ವಿಷಯದಲ್ಲಿ ನೀತಿಪರನೇ ಆಗಿರವ ವೀರ್ರ್ರಾಜ ತನ್ನ ಮಗಳನ್ನೇ ತಾನು ಮದುವೆಯಾಗ ಹೊರಟದ್ದು ದುರಂತಕ್ಕೆ ಕಾರಣವಾಗುತ್ತದೆ.ವೀರ್ರಾಜನ ಮಡದಿ ಮೈಸೂರ್ ನ ದಳವಾಯಿ ಆಗಿದ್ದ ತನ್ನ ತಮ್ಮನಿಗೆ ಹೇಳಿ ಕಳುಹಿಸಿದಾಗ ಆತ ದಂಡು ತಂದು ಯುದ್ಧ ಮಾಡಿ ಗೆದ್ದು ವೀರ್ರಾಜನ ಮಗಳನ್ನು ಮದುವೆಯಾಗುತ್ತಾನೆ ಎಂಬ ಐತಿಹಾಸಿಕ ಕಥಾನಕವನ್ನು ಈ ಲಾವಣಿಯಲ್ಲಿ ಹೇಳುತ್ತಾರೆ .ವೀರ್ರಾಜ ದಕ್ಷ ಆಡಳಿತಗಾರ ನಾಗಿದ್ದು ಅವನ ಕಾಲದಲ್ಲಿ ಪಿರಿಯ ಪಟ್ಟಣ ಅತ್ಯಂತ ಸಮೃದ್ಧವಾಗಿತ್ತಂತೆ.ಯುದ್ಧದಲ್ಲಿ ಅವನು ಮರಣ ಹೊಂದಿದ ಮೇಲೆ ಪಿರಿಯ ಪಟ್ಟಣ ಅವನತಿಯನ್ನು ಹೊಂದಿತು ಎಂದು ಲಾವಣಿ ಹೇಳುತ್ತದೆ .ಈ ಲಾವಣಿಯನ್ನು ಕಂಸಾಳೆ ಕುಣಿತದಲ್ಲಿಯೂ ಉಪಯೋಗಿಸುತ್ತಾರೆ

    ReplyDelete
  2. @Laxmi Prasad
    ಪಿರಿಯಾಪಟ್ಟಣದ ಬಗ್ಗೆ ಗೊತ್ತೇ ಇಲ್ಲದ ಅನೇಕ ಮಾಹಿತಿಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಮ್.

    ReplyDelete