Dec 19, 2014

ನಂಬಿಕೆಯ ಸೌಧ

ರೇಷ್ಮಾ ಉಮೇಶ ಭಟ್ಕಳ
ಬೆಳಗಿನಿಂದ ಮನೆಯಲ್ಲಿ ಒಂದೇ ಸವನೆ ಗಜಿವಿಜಿಯಿಂದ ಕೂಡಿದ ಕೆಲಸ ಕಾರ್ಯಗಳು. ಒಂದೆಡೆ ಮಕ್ಕಳ ತಿಂಡಿ ತೀರ್ಥಗಳ ತಕರಾರು,ಇನ್ನೊಂದೆಡೆ ಗಂಡನ ಆಜ್ಞೆಯ ಭೂತಗಳು, ಇವೆಲ್ಲವುಗಳ ನಡುವೆ ತೊಂದರೆ ಅನುಭವಿಸುವವಳು ನನ್ನ ಬೆಟರ್ ಹಾಪ್, ಅಂದರೇ ನನ್ನ ಅರ್ಧಾಂಗಿ. ಆಕೆಯನ್ನು ಅರ್ದಅಂಗಿ ಎಂದು ಸದಾ ನಾನು ರೇಗಿಸುತ್ತಿದ್ದೆ. ಅವಳು ಸಹ ತಮಾಷೆಗೇನು ಕಡಿಮೆ ಇರಲಿಲ್ಲ, ಆಕೆಯ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವಲ್ಲಿಯೂ ನನ್ನ ಮಾತಿಗೆ ಪ್ರತಿಯಾಗಿ ಅರ್ಧ ಅಂಗಿನೋ ಅಥವಾ ಹರಿದ ಅಂಗಿನೋ ಎಂದು ರೇಗಿಸುತ್ತಿದ್ದಳು. ಆದರೆ ಇಂತಹ ತಮಾಷೆಯ ಸಂದರ್ಭದಲ್ಲು ನನ್ನ ಕಣ್ಮುಂದೆ ಕಟ್ಟುತ್ತಿದ್ದ ಸ್ಥಿತಿ ಅಗೋಚರ, ಚಿತ್ತ ಚಂಚಲ ಮಾಡುವಂತದ್ದು.  ಆದರೆ ಅವಳನ್ನು ನೋಡಿದಾಗಲೆಲ್ಲ ಶರೀಫ್‍ರ ಹಾಡು ನೆನಪಿಗೆ ಬರುತ್ತಿತ್ತು.

ಸ್ನೇಹ ಮಾಡಬೇಕಿಂಥವಳ......
ಒಳ್ಳೆ ಮೋಹದಿಂದ ಬಂದು ಕೂಡುವಂಥವಳ
ಚಂದ್ರಗಾವಿ ಶೀರಿನುಟ್ಟು, ದಿವ್ಯ 
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು,
ಬಂದಳು ಮಂದಿರ ಬಿಟ್ಟು, ನಾಲ್ಕು 
ಮಂದಿಯೊಳು ಬಂದು ನಾಚುವಳೆಷ್ಟು!
ಬೆಳಿಗ್ಗೆ ಎಂಟರ ಗಂಟೆ ಹೊಡೆಯತ್ತಿದ್ದಂತೆ ಅದು ನನ್ನ ಉಸಿರನ್ನು ನೆನಪಿಸುತಿತ್ತು, ಆಗತಾನೆ ಮಾತನಾಡಲು ಪ್ರಾರಂಭಿಸಿದ ಮಗು ಮನೆ-ಮಂದಿಯ ಮಾತನಾಡುವ ಶೈಲಿಯನ್ನು ವೀಕ್ಷಿಸುತ್ತ ತಾನು ಮಾತನಾಡಲು ಪ್ರಯತ್ನಿಸಿ ತೊದಲು ನುಡಿಗಳನ್ನಾಡುತ್ತ ಮನೆಯವರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿ, ತಾನು ಸಂತಸದ ಹೂ ನಗೆ ಬೀರುತ್ತ ಎಲ್ಲರ ಮನವನ್ನು ತಣಿಸುತ್ತದೆಯೋ, ಅಂತಹ ಅನನ್ಯ ಅನುಭವ ನನಗೆ.ಕಾಲೇಜಿಗೆ ಹೊರಡುವ ದಾರಿಯಲ್ಲಿ ವಿದ್ಯಾರ್ಥಿಗಳ ನಮಸ್ಕಾರದ ಸುರಿಮಳೆ. ಮನದಲ್ಲಿ ಗೌರವದ ಭಾವನೆ ಇದೆಯೋ, ಇಲ್ಲವೋ? ಅದು ಬೇರೆ ಮಾತು, ಆದರೆ ಬಾಯಲ್ಲಿ ಮಾತ್ರ ಉದ್ಧಾಲಕನ ಗುರುಭಕ್ತಿ. ನನ್ನನ್ನು ಕಂಡರು ಕಾಣದಂತೆ, ನನ್ನ ಎದುರಿನಲ್ಲಿ ತೆಗಳಿ ಹೊಗಳುವ ಕೆಲವರು, ಇಂತವರನ್ನು ಕಂಡಾಗ “ಹೊತ್ತಿಗೊಂದು ರೂಪ,ಹೊತ್ತು ಕಳೆದ ಮೇಲೆ ಕತ್ತೆಯ ಸ್ವರೂಪ” ಎಂಬ ಮಾತನ್ನು ನೆನಪಿಸಿಕೊಂಡು ಮನದಲ್ಲೆ ನಕ್ಕು ಹೋಗುವುದು ನನ್ನ ಶೈಲಿ. ಆದರೆ ಇವೆಲ್ಲದರ ನಡುವೆ ಮನಕಲಕುವ ಸ್ಥಿತಿ ಎದುರಾಗುತಿತ್ತು, ಅದು ನನ್ನ ಹೆಂಡತಿಯ ತಮಾಷೆಯ ಮಾತಿನ ನೈಜ ಸ್ಥಿತಿಯನ್ನು ಹೊತ್ತ ಕಾಲೇಜಿನ ಕ್ಯಾಂಪಸ್ ಪಕ್ಕದಲ್ಲಿ ಇರುವ ಸಾಲು-ಸಾಲು ತಳ್ಳುವ ಗಾಡಿಗಳು, ಅದರ ಪಕ್ಕದಲ್ಲಿ ವಾಸ್ತವ್ಯಕ್ಕಾಗಿ ಕಟ್ಟಿಕೊಂಡ ಗುಡಿಸಲುಗಳು. ಹೊಟ್ಟೆಗೆ ಹಿಟ್ಟಿಲ್ಲದ, ಧರಿಸಲು ಬಟ್ಟೆ ಇಲ್ಲದ ಮಕ್ಕಳ ದಯನೀಯ ಸ್ಥಿತಿ.       
ಕಾಲೇಜಿನ ಬಿಡುವಿನ ವೇಳೆಯಲ್ಲಿ ಮಾತ್ರ ನಮ್ಮ ಉಪನ್ಯಾಸಕರಿಗೆಲ್ಲ ಮಾತನಾಡಲು ಇದೆ ವಿಷಯ ಸಾಕಾಗುತಿತ್ತು. ಬೇರೆ ಯಾವುದೇ ವಿಷಯದ ಪ್ರಸ್ತಾವವೇ ಆಗುತ್ತಿರಲಿಲ್ಲ, ಆದರೂ ಕೆಲವೊಮ್ಮೆ “ಊಟಕ್ಕೆ ಮೊದಲು ಉಪ್ಪಿನ ಕಾಯಿ, ಕೊನೆಯಲ್ಲಿ ಮಜ್ಜಿಗೆ” ಎಂಬಂತೆ ನಡು ನಡುವೆ ಇಂದಿನ ರಾಜಕೀಯದ ಮಾತುಗಳು, ಸ್ಪರ್ಧಾತ್ಮಕ ಯುಗದ ಸಮಸ್ಯೆಗಳು ಕೇಳಿ ಬರುತ್ತಿದ್ದವು. ಆದರೆ, ಕ್ಯಾಂಪಸ್ ಎದುರಿಗಿರುವ ಆ ದಯನೀಯರ ಸ್ಥಿತಿಯನ್ನು ಹೋಗಲಾಡಿಸಲು ಏನಾದರೂ ದಾರಿಗಳಿವಿಯೇ? ಎಂಬುದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. “ಹತ್ತರಂತೆ ಹರ ಹರ” ಎಂಬ ಮಾತಿನಂತೆ ನಾನೂ ಸಹ ಅವರ ಪಕ್ತಿಯಲ್ಲಿ ನಿಂತು ಬಿಡುತ್ತಿದ್ದೆ. ಹೊತ್ತು ಮುಳುಗಿದ್ದಂತೆ ನಾನು ಸಹ ಸಂಸಾರ ಬಂಧನದಲ್ಲಿ ಮುಳುಗಿ ಹೊಗುತ್ತಿದ್ದೆ. 
“ಕಾಲಾಯ ತಸ್ಮೈ ನಮಃ” ಎಂದುಕೊಂಡು ಒಳ್ಳೆಯ ಕಾರ್ಯ ಮಾಡುವ ಮನಸಿದ್ದರೆ, ಕಾಲವೇ ಮಾರ್ಗ ತೋರಿಸುತ್ತದೆ ಎಂದುಕೊಂಡು, ಭಗವಂತನಲ್ಲಿ ನಂಬಿಕೆ ಇಟ್ಟು ಜೀವನ ಸಾಗಿಸುತ್ತಿದ್ದೆ. ಆದರೆ ನನ್ನ ಕಡೆಯಿಂದ ಆಗುವ ಖರ್ಚು ಮಾತ್ರ ಅವಶ್ಯಕತೆಯ ವಸ್ತುಗಳಿಗೆ ಮಾತ್ರ ಮೀಸಲಿತ್ತು. ಅರ್ಧಾಂಗಿಯ ಕಡೆಯಿಂದ ಆಡಂಬರದ ಕಾರ್ಯಕ್ಕೆ ಹಣ ಖರ್ಚಾಗುವ ವೇಳೆಯಲ್ಲಿ ಮಾತ್ರ, ಹೊತ್ತಿನ ಕೂಳಿಗು ಕಷ್ಟ ಪಡುವ ಆ ಮುಗ್ಧ ಜೀವಿಗಳ ದಯನೀಯ ಸ್ಥಿತಿ ಕಣ್ಣೆದುರಿನಲ್ಲಿ ಬರುತಿತ್ತು. ಜೀವನವೆಂಬ ಸಾಗರದಲ್ಲಿ ಬರುವ ಭರತ ಇಳಿತಗಳಿಗೇನು ಮಿತಿ ಇಲ್ಲ, ಆದರೆ ಅವೆಲ್ಲವುಗಳನ್ನು ಮೀರಿ ನಿಂತು ದಡ ಸೇರುವುದೇ ಜೀವನ. ಕುಟುಂಬದವರ ಜವಾಬ್ದಾರಿ, ಹಾಗೂ ತಮ್ಮ ತಂಗಿಯರ ಜವಬ್ದಾರಿಯನ್ನು ಹೊತ್ತ ನನಗೆ ಅವರನ್ನು ದಡ ಸೇರಿಸುವುದರಲ್ಲಿಯೇ ಕೆಲವು ವರ್ಷಗಳು ಕಳೆದವು.
ಆದರೆ ನನ್ನ ಅಂತರಾಳದಲ್ಲಿ ಹುದುಗಿದ್ದ ಆ ಬಡ, ಮುಗ್ಧ ಜೀವಿಗಳ ನೋವಿನ ಸ್ಥಿತಿ ಮಾಸಿರಲಿಲ್ಲ. ನಮ್ಮ ಕಾಲೇಜಿನಲ್ಲಿ ಹಿಂದಿನಂತೆ ಈ ವರ್ಷವು ಸಹ “ವಾರ್ಷಿಕ ಸ್ನೇಹ ಸಮ್ಮೇಳನ“ ಮಾಡಲು ಆಯೋಜಿಸಲಾಗಿತ್ತು. ಕಾರ್ಯದರ್ಶಿಯಾಗಿ ನನ್ನನ್ನು ನೇಮಕ ಮಾಡಿದ್ದರಿಂದ ಹಿಂದಿನ ವರ್ಷಗಳಿಗಿಂತ ಈ ವರ್ಷ ನನ್ನ ಕಾರ್ಯ ಸ್ವಲ್ಪ ಅಧಿಕವಾಗಿತ್ತು. ಒಂದು ದಿನ ಕಾಲೇಜಿನಿಂದ ಮನೆಗೆ ಬರುವ ವೇಳೆಯಲ್ಲಿ ಕ್ಯಾಂಪಸ್ ಎದುರಿಗಿರುವ ಗುಡಿಸಲುಗಳಲಿದ್ದ ಮಕ್ಕಳು ತಾಯಂದಿರು ಚಿರಾಡುತ್ತಿದ್ದರು. ಸಾಹುಕಾರನಂತೆ ತೋರುತ್ತಿದ್ದ ಬಿಳಿಯ ಪಂಚೆ, ರೇಷ್ಮೆ ಜುಬ್ಬ ಧರಿಸಿದ್ಧ ವ್ಯಕ್ತಿಯೊರ್ವನಲ್ಲಿ, ತಮ್ಮ ಕರಾಳ ಬದುಕಿನ ಘೋರ ಚಿತ್ರಣವನ್ನು ಅವನೆದುರು ಹೇಳಿಕೊಂಡು ಗೋಳಾಡುತ್ತಿದ್ದರು.
ಆದರೆ, ಏನು ಫಲ? ಶ್ರೀಮಂತಿಕೆಯ ದರ್ಪದಲ್ಲಿ ಮೆರೆದವನಿಗೇನು ಗೊತ್ತು, ಬಡತನದ ಹಸಿವು. ಅಲ್ಲವೇ? ಇವರ ಗೋಳಾಟವನ್ನು ಕಂಡು ಸಹಿಸಲಾರದೆ ನಾ ಏರಿದ ಬೈಕನ್ನು ಇಳಿದು ಅವರತ್ತ ಧಾವಿಸಿದೆ. ಆ ವೇಳೆಗಾಗಲೇ, ಅವರ ದೃಷ್ಟಿ ನನ್ನ ಕಡೆ ಹರಿಯಿತು. “ಮುಳುಗುವವನಿಗೆ ಹುಲ್ಲು ಕಡ್ಡಿಯು ನೇರವಾಗುವುದು” ಎಂದು ಭಾವಿಸಿದ್ಧ ಆ ಮುಗ್ಧ ಜೀವಿಗಳು ನನ್ನಿಂದ ಒದಗಬಹುದಾದ ಸಹಾಯವನ್ನು ನೀರಿಕ್ಷಿಸುತ್ತಿದುದ್ದಕ್ಕೆ, ಅವರ ಆ ಬೆನ್ನಿಗಂಟಿದ ಹೊಟ್ಟೆ, ತೇವವಾದ ಕಂಗಳೇ ಸಾಕ್ಷಿಯಾಗಿದ್ದವು. ಅವರ ಆ ಹೀನಾಯ ಸ್ಥಿತಿಯನ್ನು ಕಂಡು, ಮರುಕ ಪಟ್ಟು ವಿದಿ ಇಲ್ಲದೇ ಅವರ ಗೋಳಿನ ಕಥೆಗೆ ಪೂರ್ಣ ವಿರಾಮ ಹಾಕಲು ನಿಂತುಬಿಟ್ಟೆ. ಸಾಹುಕರನ ಸಾಲದ ಮೊತ್ತವೆಷ್ಟೆಂದು ಲೆಕ್ಕಹಾಕಿ ಅದನ್ನು ಅವರಿಗೆ ಕೊಟ್ಟು ಬಡಜನರ ಸಂಕಷ್ಟಕ್ಕೆ ಬೆನ್ನೆಲುಬಾಗಿ ನಿಂತೆ. ಆ ವೇಳೆಯಲ್ಲಿ ಸಾಹುಕಾರನ ಸಾಲವನ್ನು ತೀರಿಸಿ ಅವರನ್ನು ಸಂಕಷ್ಟದಿಂದೇನೋ ಪಾರು ಮಾಡಿದೆ. ಆದರೆ ಮುಂದೆ ಅವರ ಬದುಕು? ರಾತ್ರಿಯಿಡೀ ಯೋಚಿಸುತ್ತ ಕುಳಿತರು ಏನು ತೋಚಲಿಲ್ಲ. 
ಮುಂಜಾವಿನ ರವಿಯ ಕಿರಣಗಳು ಮನೆಯನ್ನು ಪ್ರವೇಶಿಸುತಿದ್ದಂತೆ,ಎದ್ದುಕೊಂಡು ನಿತ್ಯಕರ್ಮಗಳನ್ನು ಮುಗಿಸಿಕೊಂಡು, ಎಂದಿನಂತೆ ಸಮುದ್ರ ದಂಡೆಯ ಕಡೆ ನನ್ನ ಪ್ರಯಾಣ ಬೆಳೆಸಿದೆ. ನನ್ನ ಕಲ್ಪನಾ ಲಹರಿ ಹರಿಯತೊಡಗಿತು, ವಿಶಾಲ ಸಮುದ್ರವನ್ನೊಮ್ಮೆ ನೋಡುತ್ತ ನಿಂತೆ. ಅದೆಷ್ಟೋ ವರ್ಷಗಳಿಂದ ಈ ಸಾಗರವನ್ನು ನೋಡುತ್ತಲೆ ಇದ್ದೆನೆ, ಅದು ಹಾಗೆ ಭೋರ್ಗರೆಯುತ್ತಲೇ ಇದೆ. ಅದರ ಅಲೆಗಳು ಒಂದು ದಿನವೂ ದಣಿದದ್ದನ್ನು ಕಂಡಿಲ್ಲ. ಸಾವಿರಾರು ವರುಷಗಳಿಂದ ಹಗಲಿರುಳೆನ್ನದೆ ಕೋಟ್ಯಂತರ ಅಲೆಗಳು ದಂಡೆಗೆ ಅಪ್ಪಳಿಸುತ್ತಲೇ ಬಂದಿವೆ. ಯಾವತ್ತೂ ಅವು ನಿಂತದ್ದಿಲ್ಲ. ಕೋಳೆ ಕಶ್ಮಲಗಳೆನ್ನುವ ಭೇಧವಿಲ್ಲದೆ, ಒಳಿತು ಕೆಡುಕು, ಜೀವ-ನಿರ್ಜೀವ ಎನ್ನುವ ವ್ಯತ್ಯಾಸ ನೋಡದೇ, ಎಲ್ಲವನ್ನು ತನ್ನೊಡಲ ಗರ್ಭದಲ್ಲಿ ಸೇರಿಸಿಕೊಂಡು ಮರೆಯಾಗುತ್ತದೆ. ಅದನ್ನು ಇನ್ನೆಲ್ಲಿಗೊ ಕೊಂಡೊಯ್ದು ದಡಕ್ಕೆ ತಂದು ಬಿಡುತ್ತದೆ. ಸಾಗರ ತನ್ನೊಡಲಲ್ಲಿ ಏನನ್ನು ಇಟ್ಟುಕೊಳ್ಳುವುದಿಲ್ಲ. ಸಾಗರದ ಜೊತೆ ಅಂತಹ ತೆರೆಗಳೊಂದಿಗೆ ಸೆಣೆಸಾಡಿ ಸ್ವತಂತ್ರವಾಗಿ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಕಷ್ಟ ಸಾದ್ಯ. ಹಾಗೆಯೇ ಜೀವನವೂ,ಅಲ್ಲವೇ. ಇಲ್ಲಿನ ಸಮಸ್ಯೆಗಳ ವಿರುದ್ಧ ಸೆಣೆಸಾಡಿ, ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೂ “ಪ್ರಕೃತಿಯನ್ನೇ ಗೆಲ್ಲಲು ಹೊರಟ ನಾವು” ಇವೆಲ್ಲವನ್ನು ಮೀರಿ ನಿಂತು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳ ಬಹುದಲ್ಲವೇ? ಎಂದು ಯೋಚಿಸಿ ನನ್ನ ಯೋಚನಾ ಲಹರಿಗೆ ಪೂರ್ಣ ವಿರಾಮ ಇಟ್ಟು ಮನೆಯತ್ತ ಧಾವಿಸಿದೆ.  
ನನ್ನನ್ನೆ ನಂಬಿದ ಆ ಮುಗ್ಧ ಜೀವಿಗಳ ಮುಖ ಸದಾ ನನ್ನ ಕಣ್ಣೆದುರಿನಲ್ಲಿ ಬರುತಿತ್ತು. ಅವರ ಪರಿಸ್ಥಿತಿಯ ಸುಧಾರಣೆಗಾಗಿ ಹಲವು ಗಣ್ಯರ, ಸಮಾಜ ಸುಧಾರಕರ ಮನೆಯ ಮೆಟ್ಟಿಲುಗಳನ್ನು ಹತ್ತಿಳಿದೆ, ಏನು ಪ್ರಯೋಜನವಾಗುವಂತೆ ಕಾಣಲಿಲ್ಲ. “ಎತ್ತರದ ಶಿಖರದ ಮೇಲೆ ಕುಳಿತ ಕಾಗೆ ಎಂದಿಗೂ ಗರುಡವಾಗಲಾರದು” ಎಂದು ಕೊಂಡು, ಕೊನೆಗೆ ನಾನೇ ಮುಂದಾಗಿ ಹತ್ತಾರು ಬ್ಯಾಂಕಗಳ ಮೆಟ್ಟಿಲುಗಳನ್ನು ಹತ್ತಿಳಿದೆ, ಆದರೆ ಅವರಿಗೆಲ್ಲ ನೆಲೆಯಿಲ್ಲ, ಸರಿಯಾದ ಉದ್ಯೋಗ ಇಲ್ಲದ ಕಾರಣ ನೀಡಿ ಸಾಲವನ್ನು ನೀಡಲು ಹಿಂದೇಟು ಹಾಕಿದರು ಅಧಿಕಾರಿಗಳು ಆ ವೇಳೆಯಲ್ಲಿ ನನ್ನ ಮತಿಗೆ ಹೊಳೆದದ್ದು, “ಗ್ರಾಮೀಣ ಬ್ಯಾಂಕ್” ಸ್ಥಾಪನೆ. ನನ್ನ ನಿಸ್ವಾರ್ಥ ಪ್ರಯತ್ನದ ಫಲವಾಗಿ ಹಾಗೂ ಕೆಲವು ಉದಾರ ಮನದ ಮನುಜರ ನೆರವಿನೊಂದಿಗೆ, ನನ್ನ ಮುಂದಾಳತ್ವದಲ್ಲಿ ಬ್ಯಾಂಕ್ ಸ್ಥಾಪನೆಯಾಯಿತು. ಅದುವೇ “ನಂಬಿಕೆಯ ಸೌಧ” ಇಲ್ಲಿ ಬ್ಯಾಂಕಿನ ಠೇವಣಿ, ಸಾಲ, ಎಲ್ಲವೂ ನಂಬಿಕೆಯ ತಳಪಾಯದಲ್ಲಿಯೇ ನಿಂತಿತು. 
ಅವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಅತೀ ಕಡಿಮೆ ಮೊತ್ತದ ಹಣವನ್ನು ಸಹ ಬ್ಯಾಂಕಿನಲ್ಲಿಟ್ಟು ವ್ಯವಹಾರ ನಡೆಸಬಹುದೆಂದು ಜನರಲ್ಲಿ ಅರಿವನ್ನು ಮೂಡಿಸಿದೆ. ದಿನದ ಅಧಿಕ ವೇಳೆಯನ್ನು ಮುಗ್ಧ ಜನರ ಕಣ್ ತೆರೆಸಲು ಮೀಸಲಿಟ್ಟೆ. ಇದರಿಂದಾಗಿ ಬ್ಯಾಂಕನ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿಯನ್ನೆ ಕೈಗೊಂಡಂತಾಯಿತು.ಬ್ಯಾಂಕ್ ನಲ್ಲಿರುವ ಠೇವಣಿದಾರರು, ಸಾಲಗಾರರಲ್ಲಿ ದಿನಗೂಲಿ ಕಾರ್ಮಿಕರೆ ಅಧಿಕ ಜನರಿದ್ದರು. ಇವರೆಲ್ಲರು ಪ್ರತಿ ದಿನ ದುಡಿದ ಸಣ್ಣ ಮೊತ್ತದ ಹಣವನ್ನು ತೆಗೆದುಕೊಂಡು ಹೋಗಿ ಉಳಿತಾಯ ಮಾಡುವ ಗೋಜಿಗೆ ಹೋಗುತ್ತಿರಲಿಲ್ಲ. ಆದುದರಿಂದ ಬ್ಯಾಂಕ್ ಅವರ ಬಳಿ ಬಂದಿತು. ಇದರಿಂದ ಉಳಿತಾಯವು ಆಯಿತು, ಅವರ ಶ್ರಮವು ಉಳಿಯಿತು. ಅಗರಬತ್ತಿ, ಮೇಣಬತ್ತಿ ತಯಾರಿಕೆ, ಹಪ್ಪಳ.ಸಂಡಿಗೆ, ಈ ಮೊದಲಾದ ಅವಶ್ಯಕ ವಸ್ತುಗಳ ತಯಾರಿಕೆಯಲ್ಲಿ ಕೆಲವರನ್ನು ತೊಡಗಿಸಿ, ಅವರಿಗೆ ಅವಶ್ಯಕವಾದ ಮಾರ್ಗದರ್ಶನ ನೀಡಿದೆ. ಆ ಮುಗ್ಧ ಜೀವಿಗಳ ಶ್ರಮದ ಫಲವಾಗಿ ನಾನು ನನ್ನ ಕನಸಿನ ಮೆಟ್ಟಿಲನ್ನು ಏರಲು ಪ್ರಾರಂಭಿಸಿದೆ.   ಬ್ಯಾಂಕಿನ ಠೇವಣಿ ಅಧಿಕವಾಯಿತು. ವಾರಕ್ಕೊಮ್ಮೆ ಕೆಲವು ನೌಕರರು ಅವರ ಬಳಿ ಹೋಗಿ ಹಣ ಸಂಗ್ರಹಿಸುತ್ತಿದ್ದರು. ಸರ್ಕಾರದ ಯೋಜನೆಗಳ ಕುರಿತಾಗಿ ಮನಮುಟ್ಟುವಂತೆ ಹೇಳುತ್ತಿದ್ದರು. ಇವೆಲ್ಲವುಗಳಿಂದಾಗಿ ಆ ಬಡ ಜೀವಿಗಳ ಬದುಕು ಸುಧಾರಿಸಿತು, ಬವಣೆ ತೀರಿತು. ಕೈ ನೀಡಿ ಕೇಳುತ್ತಿದ್ದ ಆ ನೊಂದ ಜೀವಗಳು, ಕೊಡುಗೈದಾನಿಗಳಾದರು. ನನ್ನ ಈ ನಿಸ್ಕಾಮ ಶ್ರಮದ ಫಲ ಕೇವಲ ನನ್ನ ಹಳ್ಳಿಗೆ ಸೀಮಿತವಾಗಿರದೆ ನೂರಾರು ಹಳ್ಳಿಗಳಿಗೆ ವ್ಯಾಪಿಸಿತು. ಆ ಮುಗ್ಧ ಜೀವಿಗಳಲ್ಲಿ ಬೆಳ್ಳಿಯ ಆಶಾ ಕಿರಣ ಮೂಡಿಸಿತು.ಅವರು ಕಾಣದ  ರಾಮ,ರಹೀಮ್, ಪೈಗಂಬರನನ್ನು ನನ್ನ ನಿಲುವಿನಲ್ಲಿ ಕಂಡರು.  

No comments:

Post a Comment