Oct 5, 2014

ಎಂ.ಆರ್.ಪಿ.ಎಲ್ ಕಂಪನಿಯ ವಿರುದ್ಧ ಪ್ರತಿಭಟನಾ ಪ್ರದರ್ಶನ

Press Release
ನಾಗರೀಕ ಬಂಧುಗಳೇ,
ಮಂಗಳೂರು ತೈಲಾಗಾರ ನಿರ್ಮಾಣ ಈ ಭಾಗದ ಜನತೆಯ ಕನಸಾಗಿತ್ತು. ಬೃಹತ್ ಕೈಗಾರಿಕೆಯ ಆಗಮನದಿಂದ ಯುವಜನರಿಗೆ ಉದ್ಯೋಗ ದೊರಕುತ್ತದೆ, ಪ್ರದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ ಎಂಬ ಕನಸಿನೊಂದಿಗೆ ತಮ್ಮ ಫಲವತ್ತಾದ ಭೂಮಿಯನ್ನು ಎಂ.ಆರ್.ಪಿ.ಎಲ್‍ಗೆ ಬಿಟ್ಟು ಕೊಟ್ಟಿದ್ದೇವೆ. ಆದರೆ ನಮ್ಮ ಭೂಮಿ, ನಮ್ಮ ಬೆಂಬಲದೊಂದಿಗೆ ಸ್ಥಾಪನೆಯಾದ ಎಂ.ಆರ್.ಪಿ.ಎಲ್ ಇಲ್ಲಿಯ ಜನತೆಗೆ ನೀಡಿದ್ದೇನು? ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸಿದ ಕಂಪನಿ ಇಂದು ಎಸ್.ಇ.ಝಡ್‍ನೊಂದಿಗೆ ಸೇರಿ ಜನತೆಯ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಇಂದು ವಿಸ್ತಾರವಾಗಿ ಬೆಳವಣಿಗೆಯಾಗುತ್ತಿರುವ ಕಂಪನಿಯು ಹಲವು ವಿನಾಶಕಾರಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ಎರಡನೇ ಹಂತ, ಮೂರನೇ ಹಂತದಲ್ಲಿ ಜೋಕಟ್ಟೆ ಭಾಗದಲ್ಲಿ ಕೋಕ್ ಮತ್ತು ಸಲ್ಫರ್ ಉತ್ಪಾದನೆ ಮಾಡುತ್ತಿರುವುದು ಜನತೆಯ ನೆಮ್ಮದಿಯ ಬದುಕಿಗೆ ನೇರವಾಗಿ ಬೆದರಿಕೆಯೊಡ್ಡಿದೆ.
ಈ ಘಟಕ ಹೊರಸೂಸುವ ದುರ್ಗಂಧ, ಹಾರುಬೂದಿ, ನೀರುಮಾಲಿನ್ಯ, ಶಬ್ದಮಾಲಿನ್ಯಗಳಿಂದ ಜೋಕಟ್ಟೆ, ಕೆಂಜಾರು, ಮರವೂರು, ಕಳವಾರು, ತೋಕೂರು ಗ್ರಾಮಗಳ ಜನತೆಯ ಬದುಕು ಸಂಕಷ್ಟಕ್ಕೀಡಾಗಿದೆ. ಈ ಭಾಗದ ಜನತೆ ಈಗಾಗಲೇ ತಲೆಸುತ್ತು, ವಾಕರಿಕೆ, ಚರ್ಮ ಸಂಬಂಧಿ ಸಮಸ್ಯೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಮಾರಕ ರೋಗಗಳು ಇಲ್ಲಿನ ಜನತೆಯ ಬದುಕನ್ನು ಬಲಿಪಡೆಯುವುದು ನಿಶ್ಚಿತ. ಇಂತಹ ಅಪಾಯಕಾರಿ ಸ್ಥಾವರವನ್ನು ಕಂಪನಿಯು, ಸ್ಥಳೀಯ ಪಂಚಾಯತ್ ಸಹಿತ ಜನತೆಯನ್ನು ಕತ್ತಲಲ್ಲಿಟ್ಟು ಆರಂಭಿಸಿದೆ. ಈ ಘಟಕದ ಕಾರ್ಯಾರಂಭದ ವಿರುದ್ಧ ಈ ಭಾಗದ ನಾಗರಿಕರು ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ವಿವಿಧ ಪ್ರಭಾವಗಳನ್ನು ಬಳಸಿಕೊಂಡು ಕಂಪನಿ ಹೋರಾಟವನ್ನು ತಣ್ಣಗಾಗಿಸಿದೆ. ಅಸ್ಸಾಂನ ಗೌಹತಿಯ ಇಂತಹದ್ದೇ ಪ್ಲಾಂಟ್‍ಗೆ ನಾಗರೀಕರ ನಿಯೋಗವನ್ನು ಕರೆದೊಯ್ದು ಕಣ್ಣಿಗೆ ಮಣ್ಣೆರಚಲು ನೋಡಿದೆ.
ಇಷ್ಟೆಲ್ಲಾ ಆದರೂ ಇಲ್ಲಿನ ಜನತೆ ಪ್ಲಾಂಟ್ ಸ್ಥಾಪನೆಯ ವಿರುದ್ಧ ಗಟ್ಟಿಯಾಗಿ ನಿಂತಿದ್ದಾರೆ. ಕಂಪನಿ ಮಾತ್ರ ಜಿಲ್ಲಾಡಳಿತವನ್ನು ಲೆಕ್ಕಿಸದೆ, ಸರಕಾರಗಳ ಬೆಂಬಲದೊಂದಿಗೆ ಕೋಕ್, ಸಲ್ಫರ್ ಅನ್ನು ಉತ್ಪಾದಿಸುತ್ತಿದೆ. ಕಂಪನಿಯ ಇಂತಹ ಸರ್ವಾಧಿಕಾರವನ್ನು ಸಹಿಸಲು ಸಾಧ್ಯವಿಲ್ಲ. ಜನತೆಯ ಆರೋಗ್ಯಕ್ಕೆ ಮಾರಕವಾಗುವ, ಜೀವದೊಂದಿಗೆ ಚೆಲ್ಲಾಟವಾಡುವ ಸಲ್ಫರ್ ಮತ್ತು ಕೋಕ್ ಉತ್ಪಾದನೆ ನಿಲ್ಲಲೇಬೇಕು. ನೆಲದ ಕಾನೂನಿಗೆ ಎಂ.ಆರ್.ಪಿ.ಎಲ್ ತಲೆಬಾಗಲೇಬೇಕು ಎಂಬ ಧೃಡ ನಿರ್ಧಾರದೊಂದಿಗೆ ತೀವ್ರ ರೀತಿಯ ಹೋರಾಟಕ್ಕೆ ಮುಂದಾಗಿದ್ದೇವೆ. ನಾಗರಿಕ ಬಂಧುಗಳು ಸಂಪೂರ್ಣವಾಗಿ ಈ ಹೋರಾಟವನ್ನು ಬೆಂಬಲಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
ತಾ: 10/10/2014 ರ ಶುಕ್ರವಾರ, ಅಪರಾಹ್ನ 3:00ಕ್ಕೆ
ಸ್ಥಳ: ಜಿಲ್ಲಾಧಿಕಾರಿ ಕಛೇರಿ ಮುಂಭಾಗ, ಮಂಗಳೂರು.
ನಾಗರೀಕರ ಹೋರಾಟ ಸಮಿತಿ, ಜೋಕಟ್ಟೆ.

ದೂ – 9986694196, 9845149676

No comments:

Post a Comment