Oct 7, 2014

ಮಾತಿನ ಮೋಡಿಯಲ್ಲಿ ಚರ್ಚೆಗೊಳಪಡದ ಸಂಗತಿಗಳು

drug mafia hingyake
ಲಾಬಿಗೆ ಮಣಿದ ಸರ್ಕಾರ?
Dr Ashok K R


ಮಾತು ಬೆಳ್ಳಿ ಮೌನ ಬಂಗಾರ”ವೆಂಬ ಗಾದೆಮಾತಿನ ಮೊದಲರ್ಧದ ಅರ್ಥ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಅನುಭವಕ್ಕೆ ಬಂದರೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಗಾದೆಮಾತಿನ ಉಳಿದರ್ಧವನ್ನು ಅರ್ಥ ಮಾಡಿಸುವ ಪಣ ತೊಟ್ಟಂತಿದೆ! ಅನಿವಾರ್ಯವಿದ್ದಾಗಲೂ ಮಾತನಾಡದ ಪ್ರಧಾನಿಯನ್ನು ನೋಡಿದ ನಂತರ ಅವಶ್ಯಕತೆಗಿಂತ ಹೆಚ್ಚಾಗಿ ಅದದೇ ಮಾತುಗಳನ್ನು ನೋಡುವ ಸೌಭಾಗ್ಯ ನಮ್ಮದು! ನರೇಂದ್ರ ಮೋದಿ ತಮ್ಮ ಮಾತಿನ ಮೋಡಿಯಿಂದ ಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು ಮತ್ತು ತಾವು ಮಾತನಾಡಿದ್ದೆಲ್ಲ ನಿಜವೆಂದು ಕೇಳುಗರು ನಂಬುವಂತೆ ಮಾಡುತ್ತಿರುವುದು ಸುಳ್ಳಲ್ಲ. ಉಳಿದದ್ದೇನೇ ಇರಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರಂತೆ ಚಾಣಾಕ್ಷತನದಿಂದ ಮಾಧ್ಯಮವನ್ನು ನಿರ್ವಹಿಸಿದವರನ್ನು ನಾನಂತೂ ನೋಡಿಲ್ಲ. ಪಿ.ಎಮ್.ಓದಿಂದ ಏನು ಸುದ್ದಿ ಬರುತ್ತದೋ ಅದಷ್ಟೇ ಸದ್ದು ಮಾಡುತ್ತಿದೆ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳಲ್ಲಿ. ರಾಜಕೀಯ ಪಕ್ಷದ – ರಾಜಕಾರಣಿಯ ದೃಷ್ಟಿಯಿಂದ ಅವರು ಮಾಡುತ್ತಿರುವುದು ನೂರು ಪ್ರತಿಶತಃ ಸರಿ. ಆದರೀ ಮಾಧ್ಯಮಗಳಿಗೆ ಏನಾಗಿದೆ? ಜನಸಮೂಹದ ಮೇಲೆ ಹೊರೆಯಾಗುವಂತಹ ನಿರ್ಧಾರಗಳನ್ನು ಎನ್.ಡಿ.ಎ ಸರಕಾರ ತೆಗೆದುಕೊಂಡಿರುವುದು ಕೇವಲ ಒಳಪುಟಗಳಲ್ಲಿ ಸಣ್ಣ ವರದಿಯಾಗಿ ಮರೆಯಾಗಿದೆ, ಕೆಲವದರಲ್ಲಿ ಆ ಪುಟ್ಟ ವರದಿಯೂ ಇಲ್ಲ, ಕೆಲವೇ ಕೆಲವು ವಿಶ್ಲೇಷಣಾತ್ಮಕ ವರದಿಗಳನ್ನು ನೀಡಿವೆ. ಇನ್ನು ಮುಂದೆ ಔಷಧಗಳ ಬೆಲೆಗಳ ಮೇಲೆ ನಿಯಂತ್ರಣ ಹೇರುವಂತಿಲ್ಲ ಎಂಬ ಎನ್.ಡಿ.ಎ ಸರಕಾರದ ನಿರ್ಣಯ ಭಾರತದ ಜನರಿಗಷ್ಟೇ ಅಲ್ಲದೆ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಿಗೆಲ್ಲವೂ ಆಘಾತ ಕೊಡುವಂತದ್ದು.

Also Read
ಜನಪ್ರಿಯವೂ ಅಲ್ಲ ಜನಪರವೂ ಅಲ್ಲ


ಏನಿದು ನಿರ್ಣಯ?
2012ರಲ್ಲಿ ಅಂದಿದ್ದ ಯು.ಪಿ.ಎ ಸರಕಾರ 348 ಅತ್ಯಗತ್ಯ ಔಷಧಿಗಳ ಗರಿಷ್ಟ ಮಾರಾಟ ಬೆಲೆಯನ್ನು ನಿಗದಿಗೊಳಿಸಿ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತಹ ಕಂಪನಿಗಳು ಮತ್ತು ಮಾರಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತೀರ್ಮಾನಿಸಿತ್ತು. ಎನ್.ಡಿ.ಎ ಕೂಡ ಅಧಿಕಾರಕ್ಕೆ ಬಂದ ಹೊಸತರಲ್ಲಿ 348 ಔಷಧಗಳ ಜೊತೆಗೆ ಮತ್ತೆ ನೂರಾ ಎಂಟು ಔಷಧಿಗಳನ್ನು ದರ ನಿಗದಿಯ ಮಾಪಕಕ್ಕೆ ಒಳಪಡಿಸಿತ್ತು. ಈಗ ಇದ್ದಕ್ಕಿದ್ದಂತೆ ಇನ್ನು ಮುಂದೆ ಈ ರೀತಿಯ ಯಾವುದೇ ದರ ನಿಗದಿ ಮಾಡುವುದಿಲ್ಲ ಎಂದು ಹೇಳಿಬಿಟ್ಟಿದೆ. ಮತ್ತೀ ನಿರ್ಣಯ ನರೇಂದ್ರ ಮೋದಿ ಅಮೆರಿಕಕ್ಕೆ ಪ್ರವಾಸ ಹೊರಡುವ ಕೆಲವೇ ದಿನಗಳ ಮುಂಚೆ ಮಾಡಲಾಗಿದೆ. ಔಷಧ ಕಂಪನಿಗಳು ಈ ನಿರ್ಣಯಕ್ಕೆ ಸಂತಸ ವ್ಯಕ್ತಪಡಿಸಿದ್ದರೆ ಅದಕ್ಕೆ ಕಾರಣ ಈ ನಿರ್ಣಯದಿಂದಾಗಿ ಅವರ ಲಾಭಾಂಶದಲ್ಲಿ ಗಣನೀಯವಾಗಿ ಏರಿಕೆಯಾಗುವುದು. ದುರಂತವೆಂದರೆ ಈ ನಿರ್ಣಯ ನಮ್ಮ ದೇಶದ ಜನರ ಜೊತೆಜೊತೆಗೆ ಹತ್ತಲವು ದೇಶಗಳ ಜನರಿಗೂ ಹೊರೆಯಾಗುವುದು.
ಎನ್.ಪಿ.ಪಿ.ಎಯ ಪತನ
National Pharmaceutical Pricing authority (ಎನ್.ಪಿ.ಪಿ.ಎ) ಸೃಷ್ಟಿಯಾಗಿದ್ದು ಜನರಿಗೆ ಕೈಗೆಟುಕುವ ದರದಲ್ಲಿ ಅತ್ಯಗತ್ಯ ಔಷಧಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ. ವಸ್ತುವಿನ ಉತ್ಪಾದಕನಿಗೆ ಅದರ ಬೆಲೆಯನ್ನು ನಿರ್ಧರಿಸುವ ಹಕ್ಕಿರಬೇಕು ಎಂಬುದು ಸಾಮಾನ್ಯ ವಸ್ತುಗಳ ವ್ಯವಹಾರದಲ್ಲಿ ಒಪ್ಪಬಹುದಾದರೂ ಜನರ ಪ್ರಾಣ ಉಳಿಸುವ ಆರೋಗ್ಯ ಕಾಪಿಡುವ ವಸ್ತುಗಳ ವಿಷಯ ಬಂದಾಗ ಕಂಪನಿಗಳಿಗೂ ನಷ್ಟವಾಗದಂತೆ ಜನರಿಗೂ ಅತ್ಯಧಿಕ ಹೊರೆಯಾಗದಂತೆ ನೋಡಿಕೊಳ್ಳುವುದು ಪ್ರಾಮುಖ್ಯತೆ ಪಡೆಯಬೇಕು. ಮತ್ತಿದನ್ನು ಕಂಪನಿಗಳು ಸ್ವತಃ ಮಾಡುವುದು ಅಸಾಧ್ಯದಂತೆ ತೋರಿದಾಗ ಸರಕಾರ ಅನಿವಾರ್ಯವಾಗಿ ಮೂಗು ತೂರಿಸಬೇಕಾಗುತ್ತದೆ. ಔಷಧ ಕಂಪನಿಗಳ ಮೇಲಿನ ನಿಯಂತ್ರಣ ಕೂಡ ಅತ್ಯವಶ್ಯ ವಸ್ತುಗಳು ಜನಸಾಮಾನ್ಯರನ್ನು ತಲುಪಲಿ ಎಂಬುದ್ದೇಶದ್ದೇ ಆಗಿದೆ. ಮೊದಲ ಕಂತಿನಲ್ಲಿ ನಿಯಂತ್ರಣಕ್ಕೊಳಪಟ್ಟ 348 ಔಷಧಿಗಳಲ್ಲಿ ಸಣ್ಣ ಪುಟ್ಟ ಜ್ವರಕ್ಕೆ ನೀಡುವ ಗುಳಿಗೆಗಳಿಂದ ಹಿಡಿದು ಆಪರೇಷನ್ನಿಗೆ ನೀಡುವ ಅರವಳಿಕೆಯವರೆಗೆ ದಿನನಿತ್ಯ ಬಳಕೆಗೆ ಅತ್ಯಗತ್ಯವಾಗಿ ಬೇಕಾಗುವ ಎಲ್ಲಾ ಔಷಧಗಳನ್ನೂ ಸೇರಿಸಲಾಗಿತ್ತು. ಕ್ಯಾನ್ಸರ್ರಿಗೆ ಸಂಬಂಧಪಟ್ಟ ಔಷಧಗಳನ್ನೂ ಕೂಡ ದರ ನಿಯಂತ್ರಣದಡಿ ತರಲಾಗಿತ್ತು. ದರ ನಿಯಂತ್ರಣ ಕಂಪನಿಗಳ ಲಾಭಾಂಶವನ್ನು ಕಡಿತಗೊಳಿಸುತ್ತಿತ್ತೇ ವಿನಹ ನಷ್ಟಕ್ಕೆ ದೂಡುತ್ತಿರಲಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ವರ್ಷ ಸಾರ್ಸ್ ವೈರಾಣುವಿನ ದಾಳಿಯಾದರೆ ಮಗದೊಂದು ವರ್ಷ ಮತ್ತೊಂದು ಖಾಯಿಲೆ ಜನರನ್ನು ಬಾಧಿಸಬಹುದು. ಖಾಯಿಲೆ ಬದಲಾದಂತೆ ಅದಕ್ಕೆ ನೀಡುವ ಔಷಧಿಯೂ ಬದಲಾಗಲೇಬೇಕೆಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಹೊಸ ಔಷಧಗಳನ್ನು ಈ ದರ ನಿಯಂತ್ರಣದಡಿ ತರುವ ಅವಕಾಶ ನೀಡಲಾಗಿತ್ತು. ಅದರ ಪ್ರಕಾರವಾಗಿಯೇ ಮತ್ತೆ ನೂರಾ ಎಂಟು ಔಷಧಿಗಳ ದರ ನಿಗದಿ ಎನ್.ಡಿ.ಎ ಸರಕಾರ ಆಡಳಿತಕ್ಕೆ ಬಂದ ನಂತರ ನಡೆದಿದ್ದು. ಈಗ ಎನ್.ಪಿ.ಪಿ.ಎಗೆ ಹೊಸದಾಗಿ ಯಾವುದೇ ಔಷಧಗಳ ಬೆಲೆ ನಿಯಂತ್ರಿಸುವ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಈಗಾಗಲೇ ದರ ನಿಗದಿಗೆ ಒಳಪಟ್ಟಿರುವ ಔಷಧಿಗಳ ಮೇಲೆ ಈ ಆದೇಶ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸಬಹುದಾದರೂ ಹೊಸದಾಗಿ ಯಾವ ಔಷಧಿಯ ಬೆಲೆಯನ್ನೂ ನಿಯಂತ್ರಿಸುವಂತಿಲ್ಲ ಎನ್ನುವುದು ದೂರಗಾಮಿ ನೆಲೆಯಲ್ಲಿ ಜನರಿಗೆ – ಅದರಲ್ಲೂ ಆರೋಗ್ಯ ವಿಮೆ ಹೆಚ್ಚಿಲ್ಲದ ಭಾರತದಂತಹ ದೇಶದ ಜನರಿಗೆ – ಹೊರೆಯಾಗುವುದು ಖಚಿತ.
Related articles
ಮತ್ತೊಂದು ಮಜಲು
ಔಷಧ ಕಂಪನಿಗಳ ವಾದವನ್ನು ಗಮನಿಸದಿದ್ದರೆ ಲೇಖನ ಅಪೂರ್ಣವಾದೀತು. ಬೆಲೆ ನಿಯಂತ್ರಿಸುವುದಿಲ್ಲವೆಂಬ ಸರಕಾರದ ನಿರ್ಣಯವನ್ನು ಸ್ವಾಗತಿಸುತ್ತಿರುವ ಔಷಧ ಕಂಪನಿಗಳ ಪ್ರಮುಖ ವಾದ ‘ಒಂದು ಗುಳಿಗೆಯನ್ನು ತಯಾರಿಸಲು ಅನೇಕ ವಿಜ್ಞಾನಿಗಳು, ತಂತ್ರಜ್ಞರು ವರುಷಗಳ ಕಾಲ ಶ್ರಮಪಟ್ಟಿರುತ್ತಾರೆ. ಶ್ರಮ, ಸಮಯ, ಮತ್ತದಕ್ಕೆ ಕಂಪನಿ ಮಾಡಿದ ವೆಚ್ಚ ನೂರಾರು ಕೆಲವೊಮ್ಮೆ ಸಾವಿರಾರು ಕೋಟಿಯಾಗಿರುತ್ತದೆ. ರಿಸರ್ಚನ್ನು ಮುಂದುವರಿಸಬೇಕೆಂದರೆ ನಾವು ಲಾಭದಲ್ಲಿರಲೇಬೇಕು. ಆದ್ದರಿಂದ ದರ ನಿಯಂತ್ರಣ ತಪ್ಪು ಪದ್ಧತಿ’. ಕಂಪನಿಗಳ ದೃಷ್ಟಿಯಿಂದ ಯೋಚಿಸಿದರೆ ಈ ವಾದದಲ್ಲಿ ಹುರುಳಿದೆ ಎನ್ನಿಸುತ್ತದೆ. ಆದರೆ ಈ ದರ ನಿಯಂತ್ರಣ ತಪ್ಪು ಎಂದು ವಾದಿಸುವ ಎಷ್ಟು ಕಂಪನಿಗಳು ನಿಜವಾದ ಸಂಶೋಧನೆಯಲ್ಲಿ ತೊಡಗಿದೆ?
ಔಷಧಗಳಿಗೆ ಸಂಬಂಧಪಟ್ಟಿರುವಂತಹ ಭಾರತದ ಕಾನೂನು “ರಿವರ್ಸ್ ಇಂಜಿನಿಯರಿಂಗನ್ನು” ಪ್ರೋತ್ಸಾಹಿಸುತ್ತದೆ. ಕಂಪನಿಯೊಂದು ಸಂಶೋಧನೆ ನಡೆಸಿ ತಯಾರಿಸುವ ಒಂದು ಔಷಧಿಯನ್ನು ಅಭ್ಯಸಿಸುವ ಇಂತಹ ಕಂಪನಿಗಳು ಕೆಮಿಕಲ್ ಫಾರ್ಮುಲಾದಲ್ಲಿ ಕೆಲವೊಂದು ಬದಲಾವಣೆ ನಡೆಸಿ ಮೂಲ ಔಷಧದಷ್ಟೇ ಪರಿಣಾಮಕಾರಿಯಾದ ಔಷಧಿಯನ್ನು ತಯಾರಿಸಿಬಿಡುತ್ತದೆ! ಸಹಜವಾಗಿ ಅದರ ಬೆಲೆ ಮೂಲ ಸಂಶೋಧನೆ ನಡೆಸಿದ ಕಂಪನಿಯ ಔಷಧಿಗಿಂತ ಕಡಿಮೆಯಿರುತ್ತದೆ! ಸಂಶೋಧನೆಗೆ ಪ್ರೋತ್ಸಾಹ ನೀಡಬಲ್ಲ ಕಂಪನಿಗಳಿಗೆ ಇದು ದೊಡ್ಡ ಆಘಾತ ಉಂಟುಮಾಡುವ ಸಂಗತಿಯೆಂಬುದನ್ನು ಅಲ್ಲಗಳೆಯುವಂತಿಲ್ಲವಾದರೂ ಸಾಮಾನ್ಯರಿಗೂ ಔಷಧ ಖರೀದಿಸುವ ಸಾಮರ್ಥ್ಯವನ್ನು ನಮ್ಮ ದೇಶದ ಡ್ರಗ್ ಪೇಟೆನ್ಸಿ ಕಾಯ್ದೆ ನೀಡಿರುವುದು ಸುಳ್ಳಲ್ಲ. ಈ ರಿವರ್ಸ್ ಇಂಜಿನಿಯರಿಂಗಿನ ಕಾರಣದಿಂದಲೇ ಭಾರತ ಔಷಧ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಅನೇಕ ಬಡರಾಷ್ಟ್ರಗಳ ಜನರು ಭಾರತದಲ್ಲಿ ತಯಾರಾದ ಕಡಿಮೆ ಬೆಲೆಯ ಔಷಧಿಗಳಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ನೈತಿಕವಾಗಿ ಇದು ತಪ್ಪೆನ್ನಿಸುತ್ತಾದರೂ ಚೀನಾ ಕಡಿಮೆ ಬೆಲೆಯ ಮೊಬೈಲುಗಳನ್ನು ಒಂದಾದ ಮೇಲೊಂದರಂತೆ ಹೊರತರುವುದಕ್ಕೂ ಈ ‘ರಿವರ್ಸ್ ಇಂಜಿನಿಯರಿಂಗ್’ ಕಾರಣ ಎನ್ನುವುದನ್ನು ಗಮನಿಸಿದಾಗ ಪ್ರಾಣ ಉಳಿಸುವ ಔಷಧದ ಬೆಲೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಡೆಯುವ ‘ರಿವರ್ಸ್ ಇಂಜಿನಿಯರಿಂಗ’ನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳಲೇಬೇಕು.
ಯಾವುದೇ ಹೊಸ ಔಷಧವನ್ನು ತಯಾರಿಸಿದಾಗ ಅದಕ್ಕೆ ಐದು ವರುಷಗಳಾಗುವವರೆಗೆ ದರ ನಿಯಂತ್ರಣ ವ್ಯಾಪ್ತಿಗೆ ಒಳಪಡಿಸುವುದಿಲ್ಲ ಎಂದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು ಎನ್.ಪಿ.ಪಿ.ಎ. ಮೂಲ ಸಂಶೋಧನೆ ನಡೆಸಿದ ಕಂಪನಿ ಹೂಡಿದ ಬಂಡವಾಳವನ್ನು ವಾಪಸ್ಸು ಪಡೆದುಕೊಳ್ಳಲಿ ಎಂಬುದಿದರ ಉದ್ದೇಶ. ಈಗ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಎನ್.ಪಿ.ಪಿ.ಎಯ ಹಲ್ಲನ್ನೇ ಕಿತ್ತುಕೊಂಡಿದೆ. ಮತ್ತಿದರ ಹಿಂದೆ ನಿಸ್ಸಂಶಯವಾಗಿ ಔಷಧ ಕಂಪನಿಗಳ ಲಾಬಿ ಕೆಲಸ ಮಾಡಿದೆ. ನರೇಂದ್ರ ಮೋದಿ ಅಮೆರಿಕಕ್ಕೆ ಹೊರಡುವ ಮುಂಚೆ ಈ ನಿರ್ಣಯ ಹೊರಬಂದಿರುವುದು ಭಾರತದ ಕಂಪನಿಗಳ ಜೊತೆಜೊತೆಗೆ ಅಮೆರಿಕಾದ ಕಂಪನಿಗಳ ಲಾಬಿಯೂ ಕಾರ್ಯನಿರ್ವಹಿಸಿರುವುದರ ಸಂಕೇತ. ಸರಕಾರದ ಈ ನಿರ್ಣಯ ಜನಸಾಮಾನ್ಯರಿಗೆ ನಷ್ಟವುಂಟುಮಾಡಿ ಕಂಪನಿಗಳಿಗೆ ಕೋಟ್ಯಂತರ ರುಪಾಯಿ ಲಾಭ ಮಾಡಿಕೊಡುವುದರಲ್ಲಿ ಸಂಶಯವಿಲ್ಲ. ಇವೆಲ್ಲದರ ನಡುವೆ ಅಮೆರಿಕಾದ ಮ್ಯಾಡಿಸನ್ ವೃತ್ತದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆಂಬಂತೆ ಇಪ್ಪತ್ತು ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಅದಾನಿ, ಅಮುಲ್ ಸಮೂಹದ ಜೊತೆಜೊತೆಗೆ ಸನ್ ಫಾರ್ಮಾದಂತಹ ಔಷಧ ಕಂಪನಿಯೂ ಡೈಮಂಡ್ ಪ್ರಾಯೋಜಕರಾಗಿತ್ತು ಎಂಬ ವರದಿಗಳು ಏನನ್ನು ಸೂಚಿಸುತ್ತವೆ?

No comments:

Post a Comment