Sep 16, 2014

“ಚಿದಂಬರ ರಹಸ್ಯ”ವನ್ನೇಕೆ ನಿಷೇಧಿಸಬಾರದು?!poornachandra tejaswi
ಡಾ ಅಶೋಕ್ ಕೆ ಆರ್.
ಯಾಕೋ ಇತ್ತೀಚೆಗೆ ಕೆಲವು ದಿನಗಳಿಂದ ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’ ಬಹಳವಾಗಿ ಕಾಡುತ್ತಿದೆ. ಅಕಸ್ಮಾತ್ ‘ಚಿದಂಬರ ರಹಸ್ಯ’ವೇನಾದರೂ ಈಗ ಬಿಡುಗಡೆಯ ಭಾಗ್ಯ ಕಂಡಿದ್ದರೆ ಅದು ಯಾವ್ಯಾವ ದಿಕ್ಕಿನಿಂದ ವಿರೋಧವೆದುರಿಸಬೇಕಾಗುತ್ತಿತ್ತು ಎಂಬ ಯೋಚನೆ ಬಂತು!

ಮೊಟ್ಟ ಮೊದಲನೆಯ ವಿರೋಧ ಒಕ್ಕಲಿಗರ ವಿವಿಧ ಸಂಘಗಳು ಮತ್ತದಕ್ಕೆ ಸಂಬಂಧಪಟ್ಟ ರಾಜಕೀಯ ನೇತಾರರು, ಪುಡಾರಿಗಳಿಂದ ಬರುತ್ತಿತ್ತು. ‘ಒಕ್ಕಲಿಗ ಜಾತಿಯಲ್ಲೇ ಹುಟ್ಟಿ ತಮ್ಮ ಸಮುದಾಯವನ್ನೇ ಅವಮಾನಿಸುವಂತಹ ಸಾಲುಗಳನ್ನು ಬರೆದ ತೇಜಸ್ವಿಗೆ ಧಿಕ್ಕಾರ’ ಮೊಳಗುತ್ತಿತ್ತು. ರಾಜ್ಯದ ದೊಡ್ಡ ಜಾತಿಗಳಲ್ಲೊಂದಾದ ಒಕ್ಕಲಿಗರನ್ನು ಕೀಳಾಗಿ ಕಾಣುವ ಪುಸ್ತಕವನ್ನು ನಿಷೇಧಿಸುವ ಒತ್ತಡಕ್ಕೆ ಪುಸ್ತಕಗಳನ್ನು ನಿಷೇಧಿಸಲು ಅತ್ಯುತ್ಸಾಹ ತೋರುವ ಸರಕಾರ ಮಣಿಯುತ್ತಿದುದರಲ್ಲಿ ಸಂದೇಹವೇ ಇಲ್ಲ. ‘ಬೆಳ್ಳಗಿದ್ದ ಕಾರಣಕ್ಕೆ ಇಂಗ್ಲೀಷ್ ಗೌಡನೆಂದು ಕರೆಸಿಕೊಳ್ಳುತ್ತಿದ್ದ ರಾಮಪ್ಪನಿಗೆ ತನ್ನ ಬಿಳಿ ಚರ್ಮದ ಹಿಂದೆ ಯುರೋಪಿಯನ್ನರ ಜೊತೆ ಮಲಗಿ ಬಂದ ಅಜ್ಜಿಯೋ ಮುತ್ತಜ್ಜಿಯೋ ಕಾರಣವಿರಬಹುದೆಂಬ ಅನುಮಾನ ಬರುವುದು’ ಇಡೀ ಸಮುದಾಯಕ್ಕೆ ಮಾಡುವ ಅವಮಾನವಲ್ಲವೇ!!
ಎರಡನೆಯ ಮತ್ತು ಅತಿ ದೊಡ್ಡ ವಿರೋಧ ಹಿಂದೂ ಬಲಪಂಥೀಯ ಸಂಘಟನೆಗಳಿಂದ ಮತ್ತದರ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲಿಗರಿಂದ. ‘ಸಿಕ್ಯುಲರ್’ ‘ಡೋಂಗಿ ಜಾತ್ಯತೀತವಾದಿ’ ‘ಲದ್ದಿ ಜೀವಿ’ ಇನ್ನೂ ಮುಂತಾದ ಅನೇಕ ವಿಶೇಷಣಗಳಿಂದ ತೇಜಸ್ವಿಯವರನ್ನು ಸತ್ಕರಿಸುತ್ತಿದ್ದರು. ಏಕೆಂದರೆ ಇವತ್ತು ಹಿಂದೂ ಧರ್ಮಕ್ಕೇ ವಿನಾಶಕಾರಿಯಾಗಿರುವ ‘ಲವ್ ಜಿಹಾದ್’ಅನ್ನು ಪ್ರೋತ್ಸಾಹಿಸುವಂತಹ ಕಥೆಯನ್ನು ಚಿದಂಬರ ರಹಸ್ಯದಲ್ಲಿ ಅಡಗಿಸಿಬಿಟ್ಟಿದ್ದಾರೆ ತೇಜಸ್ವಿ. ಹಿಂದೂ ಹುಡುಗಿ ಜಯಂತಿ ಅನಾಥ ಮುಸ್ಲಿಮನಾದ ರಫಿಯೆಡೆಗೆ ಆಕರ್ಷಿತನಾಗಿ ಪ್ರೀತಿಸುವುದು ಆ ರಫಿ ಹೂಡಿದ ‘ಲವ್ ಜಿಹಾದ್’ ಅಲ್ಲದೆ ಮತ್ತೇನಾಗಲು ಸಾಧ್ಯ? ನನಗನ್ಸುತ್ತೆ 1985ರಲ್ಲೇ ಪ್ರಕಟವಾಗಿರುವ ಚಿದಂಬರ ರಹಸ್ಯವೇ ಇಂದಿನ ‘ಲವ್ ಜಿಹಾದಿ’ಗೆ ಸ್ಪೂರ್ತಿಯಾಗಿ ಕಾರ್ಯ ನಿರ್ವಹಿಸಿರಬಹುದು! ತೇಜಸ್ವಿಯವರ ಮೇಲೆ ಕೇಸ್ ಹಾಕಬಹುದಾ? ವಿಚಾರಿಸಿ ನೋಡಬೇಕು.
ಹಳೆಯ ಕಾದಂಬರಿಗಳನ್ನು ಓದುತ್ತಿದ್ದರೆ ಅವತ್ತಿಗೂ ಇವತ್ತಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲದಂತೆಯೇ ತೋರುತ್ತದೆ. ಕೆಲವೊಂದು ಸಂಗತಿಗಳು ಅಂದಿಗಿಂತಲೂ ಇಂದೇ ಹೆಚ್ಚು ಅಧೋಗತಿಗಿಳಿದಿದೆ! ಚಿದಂಬರ ರಹಸ್ಯ ತನ್ನೊಡಲಲ್ಲಿ ಅಂತರಧರ್ಮೀಯ ಪ್ರೇಮಕಥೆ, ಏಲಕ್ಕಿ ವ್ಯಾಪಾರದ ಬವಣೆ, ವಿಜ್ಞಾನಿ ಜೋಗಿಹಾಳರ ಸಾವು, ಸುಲೇಮಾನ್ ಬ್ಯಾರಿಯ ವ್ಯಾಪಾರ – ಅವ್ಯವಹಾರ, ಕೃಷ್ಣೇಗೌಡ – ಆಚಾರಿಯ ರಾಜಕೀಯ, ಕ್ರಾಂತಿಯ ಹುಡುಗರ ಕಥೆಗಳನ್ನೆಲ್ಲಾ ಅಡಗಿಸಿಟ್ಟುಕೊಂಡಿದೆ. ಇವುಗಳ ಮಧ್ಯೆ ಇರುವ ಸರ್ವಕಾಲಿಕ ಸತ್ಯವೆಂದರೆ ಪ್ರತಿಯೊಬ್ಬರಲ್ಲೂ ಒಂದೊಂದು ಘಟನೆಯ ಬಗ್ಗೆ, ಸಂಗತಿಯ ಬಗ್ಗೆ ಅವರದೇ ಊಹೆಯ ಕಥೆಯಿದೆ. ಕಾದಂಬರಿಯಲ್ಲಿ ಡಿಟೆಕ್ಟೀವ್ ಅಂಗಾಡಿಯ ಒತ್ತಾಯದ ಮೇರೆಗೆ ಜಯರಾಂ ಜೋಗಿಹಾಳರ ಕೊಲೆಯ ಸುತ್ತ, ಸಮಾಜದ ಆಗುಹೋಗುಗಳ ಸುತ್ತ ಒಂದು ಕಥೆ ಹೆಣೆಯುತ್ತಾನೆ. ಆ ಕಥೆ ಕೇಳಿದವರೆಲ್ಲ ಸಮಾಜದ ಪ್ರತೀ ಆಗುಹೋಗುಗಳನ್ನು ತಮ್ಮ ಕಥೆಗೆ ಪೂರಕವಾಗಿಸುತ್ತಾ ಹೋಗುತ್ತಾರೆ. ಕೊನೆಗೆ ಕಥೆ ಮತ್ತದರ ಪೂರಕ ಸಂಗತಿಗಳೇ ನಿಜವೆನ್ನುವ ಭಾವ ಮೂಡುತ್ತ ಸತ್ಯವ್ಯಾವುದು ಎಂಬುದೇ ಮರೆತುಹೋಗುತ್ತದೆ!
ಸಾಮಾಜಿಕ ಮಾಧ್ಯಮಗಳು ಮಹತ್ವ ಪಡೆಯುತ್ತ ಮಾಧ್ಯಮಗಳು ಪತ್ರಿಕೋದ್ಯಮದ ನೀತಿಪಾಠಗಳನ್ನೇ ಮರೆಯುತ್ತಿರುವ ಇವತ್ತಿನ ದಿನಗಳಿಗೆ ಚಿದಂಬರ ರಹಸ್ಯ ಅತಿ ಹೆಚ್ಚು ಪ್ರಸ್ತುತವಾಗಿದೆ. ಯಾವ್ಯಾವ ಪತ್ರಿಕೆಗಳಲ್ಲಿ ಯಾವ ರೀತಿಯ ವರದಿ ಬರುತ್ತದೆ, ಯಾವ ರೀತಿಯ ಸಂಪಾದಕೀಯವಿರುತ್ತದೆ, ಒಂದು ಘಟನೆಗೆ ನಿರ್ದಿಷ್ಟ ದೃಶ್ಯ ಮಾಧ್ಯಮ ಕೊಡುವ ಮಹತ್ವ – ಪ್ರತಿಕ್ರಿಯೆ ಯಾವ ರೂಪದಲ್ಲಿರುತ್ತದೆ ಎಂಬುದು ಸುಲಭವಾಗಿ ಗ್ರಾಹ್ಯವಾಗುತ್ತದೆ. ಫೇಸ್ ಬುಕ್ಕಿನಂತಹ ಸಾಮಾಜಿಕ ತಾಣದಲ್ಲಿ ಒಂದು ತಿಂಗಳ ಮಟ್ಟಿಗೆ ದಿನಕ್ಕೆ ಅರ್ಧ ಘಂಟೆ ಮೀಸಲಿರಿಸಿದರೆ ಮೂವತ್ತೊಂದನೇ ದಿನದಿಂದಲೇ ನಮ್ಮ ಗೆಳೆಯರ ಪಟ್ಟಿಯಲ್ಲಿರುವವರು ಯಾವ ರೀತಿಯ ಪೋಸ್ಟುಗಳನ್ನಾಕುತ್ತಾರೆ, ಅವರು ಹಂಚಿಕೊಳ್ಳುವ ಲಿಂಕುಗಳು ಯಾವುದಕ್ಕೆ ಸಂಬಂಧಪಟ್ಟಿರುತ್ತದೆ ಎಂದು ಊಹಿಸಿಬಿಡಬಹುದು. ಮತ್ತಾ ಊಹೆ ಹೆಚ್ಚಿನ ಮಟ್ಟಿಗೆ ನಿಜವಾಗಿರುತ್ತದೆ. ಒಂದೊಂದು ಕಥೆ ಕಟ್ಟಿಕೊಂಡು ಆ ಕಥೆಯೊಳಗೆ ಬಂಧಿಯಾಗಲೆತ್ನಿಸುವವರ ಸಂಖೈ ಆ ಕಥೆಯಾಚೆಗಿನ ಸತ್ಯ ತಲುಪಲು ಬಿಡುಗಡೆ ಬಯಸುವವರಿಗಿಂತ ಹೆಚ್ಚು. ಅನೇಕ ಉದಾಹರಣೆಗಳನ್ನು ನೀಡಬಹುದಾದರೂ ಅವುಗಳಲ್ಲನೇಕ ನಿಮಗೇ ತಿಳಿದಿದೆ, ಬಹಳಷ್ಟರಲ್ಲಿ ನೀವೂ ಪಾತ್ರಧಾರಿಯಾಗಿಯೇ ಇರುತ್ತೀರಿ!
ಮತ್ತೊಂದು ಮಗದೊಂದು ಓದಿಗೆ ‘ಚಿದಂಬರ ರಹಸ್ಯ’ ಖಂಡಿತ ಅರ್ಹ.

1 comment:

  1. ಹೌದು, ಶೀಘ್ರವೇ ಈ ಕಾದಂಬರಿ ಕೂಡಾ ನಿಷೇಧಗೊಳ್ಳಬಹುದು.

    ReplyDelete