May 29, 2014

ಪಕ್ಷಿ ವೀಕ್ಷಣೆಗೊಂದು ದಿನಗ್ರೇ ಹೆರಾನ್
ಡಾ ಅಶೋಕ್. ಕೆ. ಆರ್ 

ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಪ್ರವಾಸವೆಂದರೆ ದೂರವೂ ಅಲ್ಲದ ತುಂಬಾ ಹತ್ತಿರವೂ ಅಲ್ಲದ ಉತ್ತಮ ಹೋಟೆಲ್ಲಿಗೋ, ಸಕಲ ಐಷಾರಾಮಿ ಸೌಲಭ್ಯಗಳಿರುವ ರೆಸಾರ್ಟಿಗೋ ಹೋಗಿ ವಾರಪೂರ್ತಿ ಮನೆ ಆಫೀಸಿನಲ್ಲಿ ಮಾಡಿದ್ದನ್ನು ವಾರಾಂತ್ಯದಲ್ಲಿ ಹೊಸ ಜಾಗದಲ್ಲಿ ಮಾಡುವುದಷ್ಟೇ ಆಗಿಹೋಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಹೋಗುವವರ ಸಂಖೈಯೂ ಹೆಚ್ಚುತ್ತಿದೆಯಾದರೂ ಬಹಳಷ್ಟು ಮಂದಿ ನಿರ್ಮಲ ಸ್ಥಳಗಳನ್ನು ಮಲಿನಗೊಳಿಸಿ ಹಿಂದಿರುಗುತ್ತಾರೆ. ಇಂತಹವರ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧವಲ್ಲದ ತಾಣಗಳ ಕುರಿತು ಮಾಹಿತಿ ಒದಗಿಸುವುದಕ್ಕೆ ಕೊಂಚ ಹಿಂಜರಿಕೆ ಇರುವುದು ಸುಳ್ಳಲ್ಲ.


ಹೆಜ್ಜಾರ್ಲ(ಪೆಲಿಕಾನ್)
ಪಕ್ಷಿ ವೀಕ್ಷಕರಿಗೆ, ಛಾಯಾಗೃಹಕರಿಗೆ ಕೊಕ್ಕರೆ ಬೆಳ್ಳೂರು ಚಿರಪರಿಚಿತ. ದೇಶ ವಿದೇಶಗಳ ಪಕ್ಷಿಗಳು ಚಳಿಗಾಲದ ಸಮಯದಲ್ಲಿ ಇಲ್ಲಿಗೆ ಆಗಮಿಸಿ ಸಂತಾನೋತ್ಪತ್ತಿ ಮಾಡಿಕೊಂಡು ತಮ್ಮ ತವರಿನೆಡೆಗೆ ನಿರ್ಗಮಿಸುತ್ತವೆ. ಈ ಭಾಗದ ಮತ್ತೊಂದು ಪ್ರಖ್ಯಾತ ಪಕ್ಷಿಧಾಮವಾದ ರಂಗನತಿಟ್ಟನ್ನು ನೋಡಿ, ಹರಿಯುವ ನೀರು, ನೀರಿನ ನಡುವೆ ಅಲ್ಲೊಂದಿಲ್ಲೊಂದು ಗುಡ್ಡಗಳು, ಗುಡ್ಡಗಳಲ್ಲಿನ ಮರಗಳಲ್ಲಿ ಅಸಂಖ್ಯಾತ ಪಕ್ಷಿಗಳು, ಗುಡ್ಡದ ಮೇಲೆ ಮೈಚೆಲ್ಲಿ ಮಲಗಿರುವ ಮೊಸಳೆಗಳು, ಅವುಗಳನ್ನು ಹತ್ತಿರದಿಂದ ವೀಕ್ಷಿಸಲನುವಾಗುವಂತೆ ದೋಣಿ ವಿಹಾರವನ್ನು ನಿರೀಕ್ಷಿಸಿ ಕೊಕ್ಕರೆ ಬೆಳ್ಳೂರಿಗೆ ಬಂದು “ಅಯ್ಯೋ ಇಷ್ಟೇನಾ?!” ಎಂದುದ್ಗರಿಸಿ ನಿರಾಸೆಗೊಳ್ಳುವವರ ಸಂಖ್ಯೆ ಅಧಿಕ! ಕಾರಣ? ಇಲ್ಲಿಗೆ ಆಗಮಿಸುವ ಪಕ್ಷಿಗಳು ಊರೊಳಗಿನ ಮರಗಳಲ್ಲಿಯೇ ಗೂಡು ಕಟ್ಟಿ ಸಂಸಾರ ಹೂಡಿವೆ. ಪಕ್ಷಿ ವೀಕ್ಷಣೆಗೆಂದೇ ಬರುವವರಿಗೆ ಬೇಸರವಾಗುವುದಿಲ್ಲ. ಪ್ರಕೃತಿಯ ಜೊತೆಗೆ ಒಂದಷ್ಟು ಆಧುನಿಕ ಮನೋರಂಜನೆ, ದೋಣಿ ವಿಹಾರಗಳ ಮತ್ತೆ ಒಂದಷ್ಟು ಪಕ್ಷಿ ನೋಡುವ ಉದ್ದಿಶ್ಯದಿಂದ ಬರುವವರಿಗೆ ಊರು – ಮರ – ಪಕ್ಷಿ ಮಾತ್ರವಿರುವ ಕೊಕ್ಕರೆ ಬೆಳ್ಳೂರು ಬೇಸರ ಮೂಡಿಸುವುದು ಸುಳ್ಳಲ್ಲ. ಒಂದಷ್ಟು ಯೋಜನೆಯೊಂದಿಗೆ ಹೊರಟರೆ ಈ ಬೇಸರ ನೀಗಿಸಬಹುದು.

ತೈಲೂರಿನಲ್ಲಿ ಸೂರ್ಯೋದಯ
ಸೂರ್ಯ ಮೂಡುವ ಮೊದಲೇ ಬೆಂಗಳೂರು – ಮದ್ದೂರು ಹೆದ್ದಾರಿಯಿಂದ ಕೊಕ್ಕರೆ ಬೆಳ್ಳೂರಿಗೆ ತಲುಪಿಸುವ ರುದ್ರಾಕ್ಷಿಪುರ – ಹಲಗೂರು ರಸ್ತೆ ತಲುಪಿ ನಾಲ್ಕೈದು ಕಿಮಿ ಕ್ರಮಿಸಿದರೆ ಹುಣಸೆಮರದೊಡ್ಡಿ ಗ್ರಾಮ ಸಿಗುತ್ತದೆ. ಗ್ರಾಮ ದಾಟಿದ ನಂತರ ಸಿಗುವ ವಿಶಾಲವಾದ ತೈಲೂರು ಕೆರೆಯಲ್ಲಿ ಸೂರ್ಯೋದಯವನ್ನು ಸವಿಯಬಹುದು. ಕೆರೆಯ ತೂಬಿನ ಮೇಲೆ ಸಾಗಿ ಬಲಬದಿಯ ಗದ್ದೆ  - ತೋಟಗಳನ್ನು ಗಮನಿಸಿದರೆ ಐಬಿಸ್, ಬೆಳ್ಳಕ್ಕಿ, ಲ್ಯಾಪ್ ವಿಂಗ್, ಮಿಂಚುಳ್ಳಿ, ಕಾಜಾಣ, ಮರಕುಟುಕ ಇನ್ನೂ ಹತ್ತಲವು ಪಕ್ಷಿಗಳ ಮುಂಜಾನೆಯ ಚಟುವಟಿಕೆಗಳನ್ನು ವೀಕ್ಷಿಸಬಹುದು. ನಂತರ ಕೊಕ್ಕರೆ ಬೆಳ್ಳೂರಿಗೆ ತಲುಪಿ ನಿಗದಿತ ಸ್ಥಳದಲ್ಲಿ ವಾಹನ ನಿಲ್ಲಿಸಿ (ಬೆಳಿಗ್ಗೆ ಏಳೂವರೆಗೆ ತಲುಪಿದಾಗ ವಾಹನ ನಿಲ್ದಾಣವಿನ್ನೂ ತೆರೆದಿರಲಿಲ್ಲ!). ಊರ ನಡುವೆ ರಸ್ತೆ ಅಂಚಿನಲ್ಲೇ ಇರುವ ಅನೇಕ ಮರಗಳಲ್ಲಿ ಕೊಕ್ಕರೆ, ಹೆಜ್ಜಾರ್ಲ (ಪೆಲಿಕಾನ್)ಗಳನ್ನು ನೋಡಬಹುದು. ಅವು ಗೂಡು ಕಟ್ಟುವ ರೀತಿ, ಕಾವು ಕೊಡುವ ರಿವಾಜು, ಮರಿಗಳಿಗೆ ಆಹಾರವುಣಿಸುವ ವಿಧಾನಗಳನ್ನು ಅಭ್ಯಸಿಸಬಹುದು.

ಇಗ್ಲೂರು ಬ್ಯಾರೇಜ್
ಹಿನ್ನೀರಿನಲ್ಲೊಂದು ದೃಶ್ಯಕಾವ್ಯ
ಕೊಕ್ಕರೆ ಬೆಳ್ಳೂರಿನ ಪಕ್ಷಿಗಳನ್ನು ನೋಡಿಕೊಂಡು ರುದ್ರಾಕ್ಷಿಪುರ – ಹಲಗೂರು ರಸ್ತೆಯಲ್ಲಿ ಹಲಗೂರಿನ ಕಡೆಗೆ ಒಂಬತ್ತು ಕಿಮಿ ಕ್ರಮಿಸಿದರೆ ಇಗ್ಲೂರು ಬ್ಯಾರೇಜ್ ತಲುಪಬಹುದು. ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಿರುವ ಪುಟ್ಟ ಅಣೆಕಟ್ಟೆಯಿದು. ಕೊಕ್ಕರೆ ಬೆಳ್ಳೂರಿನಿಂದಾಚೆಯ ರಸ್ತೆ ದುರಸ್ತಿಯಲ್ಲಿರುವ ಕಾರಣ ಪ್ರಯಾಣ ಪ್ರಯಾಸಕರ. ಇಗ್ಲೂರು ಅಣೆಕಟ್ಟೆಯ ಹಿನ್ನೀರಿನಲ್ಲಿ ಕಾಣುವ ಪ್ರಕೃತಿ ಸೌಂದರ್ಯ ಪಯಣದ ಆಯಾಸವನ್ನೆಲ್ಲ ನಿವಾಳಿಸುತ್ತದೆ! ಹಿನ್ನೀರಿನ ದ್ವೀಪ, ದ್ವೀಪದ ಮರಗಳಲ್ಲಿನ ಪಕ್ಷಿಗಳ ಕಲರವ ನೋಡಿ – ಕೇಳಿಯೇ ಸವಿಯಬೇಕು. ದ್ವೀಪದ ಮುಂದೆ ತೆಪ್ಪದಲ್ಲಿ ಸಾಗುವ ಮೀನುಗಾರರು ಸುಂದರ ವರ್ಣಚಿತ್ರವನ್ನು ನೆನಪಿಸದೆ ಇರಲಾರರು. ಹಿನ್ನೀರಿನ ಬಳಿಗೆ ಹೋಗಲು ದಾರಿ ಇದೆಯಾದರೂ ಕೆಸರು, ಕಳೆ ಹೆಚ್ಚಿರುವ ಕಾರಣ ಜಾಗರೂಕತೆ ಅಗತ್ಯ; ಇಳಿಯದಿದ್ದರೆ ಉತ್ತಮ. ಅಣೆಕಟ್ಟೆಯ ಮತ್ತೊಂದು ಬದಿಗೆ ತೆರಳಿದರೆ ಮತ್ತಷ್ಟು ಪಕ್ಷಿಗಳನ್ನು ಸಮೀಪದಿಂದ ವೀಕ್ಷಿಸಬಹುದು. ಕೊಕ್ಕರೆ ಬೆಳ್ಳೂರಿನ ಪಕ್ಷಿಗಳು ಆಹಾರವನ್ನರಸಿ ಇಗ್ಲೂರಿಗೂ ಬರುತ್ತವೆ. ಪಕ್ಷಿಗಳಿಗೆ ತೊಂದರೆ ಮಾಡದೆ, ತಿಂಡಿ ತಿನಿಸುಗಳ ಖಾಲಿ ಪೊಟ್ಟಣವನ್ನು ಅಲ್ಲೆಲ್ಲೂ ಬಿಸಾಡದೆ ನಿಮ್ಮೊಡನೆಯೇ ಮರಳಿ ತಂದರೆ ಪ್ರಕೃತಿಯೂ ಧನ್ಯ!

ಪಂಜು ಅಂತರ್ಜಾಲ ಪತ್ರಿಕೆಗೆ  ಬರೆದ ಲೇಖನ

No comments:

Post a Comment