Apr 22, 2014

ಕಬೀರನ ಸಾವು; ಮನುಷ್ಯತ್ವದ ಎದೆಗೆ ಬಿದ್ದ ಗುಂಡು.

ಉಷಾ ಕಟ್ಟೀಮನಿ

ಯಾವನೋ ಒಬ್ಬ ಸಾಬಿ, ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ. ಇನ್ಯಾರಿಗೋ ಆ ಸುದ್ದಿ ತಲುಪಿ ಅವರು ಒಂದಷ್ಟು ಜನ ಗುಂಪು ಸೇರಿಕೊಂಡು ಬಂದು ಆ ಸಾಬಿಯನ್ನು ದನ ಬಡಿದಂತೆ ಬಡಿಯುತ್ತಾರೆ-ಇಲ್ಲಿನ ಶಬ್ದ ಪ್ರಯೋಗವನ್ನು ಗಮನಿಸಿ, ಅಂದರೆ ದನಕ್ಕೆ ಬಡಿಯುವುದು ಟೇಕನ್ ಫಾರ್ ಗ್ರೆಂಟೆಡ್ ಅಂತನಾ?


ಇಂತಹ ಸುದ್ದಿಗಳನ್ನು ನನ್ನ ತವರು ಜಿಲ್ಲೆಯಾದ ಅವಿಭಜಿತ ದಕ್ಷಿಣ ಜಿಲ್ಲೆಯಿಂದ ಪ್ರಕಟವಾಗುವ ಅನೇಕ ಸ್ಥಳಿಯ ಪೇಪರ್ ಗಳಲ್ಲಿ ನಾನು ಓದುತ್ತಿರುತ್ತೇನೆ. ಆಗ ನನ್ನ ಮನದಲ್ಲಿ ಏಳುವ ಮುಖ್ಯ ಪ್ರಶ್ನೆ; ಈ ಸಾಬಿಗಳಿಗೆ ದನಗಳನ್ನು ಮಾರಾಟ ಮಾಡುವವರು ಯಾರು?


ಮೂವತ್ತಮೂರು ಕೋಟಿ ದೇವತೆಗಳನ್ನು ಹಸುವೊಂದರ ದೇಹದಲ್ಲಿ ಕಾಣುತ್ತಾ, ಅದನ್ನು ಗೋಮಾತೆ ಎಂದು ಕರೆಯುವ ಹಿಂದುವೊಬ್ಬ ತನ್ನ ಜಾನುವಾರುಗಳನ್ನು ಯಾಕೆ ಮಾರಾಟ ಮಾಡುತ್ತಾನೆ? ಆ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಅದು ನಶಿಸಿ ಹೋಗುತ್ತಿರುವ ಕೃಷಿ ಪದ್ದತಿ ಮತ್ತು ಗ್ರಾಮೀಣ ಸಂಸ್ಕೃತಿಯ ಅವನತಿಯತ್ತ ಬಂದು ನಿಲ್ಲುತ್ತದೆ.

ದನಗಳನ್ನು ಮಾರಬೇಡಿ ಎಂದರೆ, ಅದನ್ನು ನೋಡಿಕೊಳ್ಳುವವರು ಯಾರು? ಹಿಂದಿನಂತೆ ಅವು ಗುಡ್ಡದಲ್ಲಿ, ಗೋಮಾಳದಲ್ಲಿ ಹೋಗಿ ಮೇಯುವಂತಿಲ್ಲ. ಗುಡ್ಡಕ್ಕೆ ಅರಣ್ಯ ಇಲಾಖೆ ಬೇಲಿ ಹಾಕಿದೆ. ಗೋಮಾಳಗಳ ಒತ್ತುವರಿಯಾಗಿದೆ. ಕೃಷಿಕಾರ್ಮಿಕರಿಲ್ಲ. ಯುವ ಜನತೆ ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ.

ಹಟ್ಟಿ ತುಂಬಾ ಜಾನುವಾರುಗಳನ್ನಿಟ್ಟುಕೊಳ್ಳುವ ಕಾಲವೇ ಇದು? ನನ್ನ ತವರು ಮನೆಯಲ್ಲಿ ಎರಡು ಹಟ್ಟಿ ತುಂಬಾ ದನಕರುಗಳಿದ್ದವು. ಈಗ ಬೆರಳಿಕೆಯ ದನಗಳಿವೆ..ಅದನ್ನು ಧರ್ಮಕ್ಕೆ ಕೊಡ್ತೇವೆ, ತಗೊಂಡೋಗಿ ಸಾಕಿಕೊಳ್ಳಿ ಎಂದರೆ ಯಾರೂ ಕೊಂಡು ಹೋಗುತ್ತಿಲ್ಲ ಎಂದು ನಮ್ಮಮ್ಮ ಹೇಳುತ್ತಿದ್ದರು...ಸಾಬಿಗಳು ದನ ತಗೊಂಡು ಹೋಗುವ ಬಗ್ಗೆ ಅಕೆಯಲ್ಲಿ ಮಾತಾಡಿದರೆ...’ಅವು ಲಾರಿ ಹತ್ತುವಾಗ ಬೆರೆ...ಬೆರೆ ಅಂತ..ಅಳುವುದನ್ನು ಕೇಳುವಾಗ ಕಣ್ಣಲ್ಲಿ ನೀರು ಬರುತ್ತದೆ..ಹೊಂಡ ಕಡಿಯುವುದೇ ಒಳ್ಳೆಯದು ಅನ್ನುತ್ತಾರೆ. ನಮ್ಮನೆಯಲ್ಲಿ ವರ್ಷಕ್ಕೊಂದೆರಡು ಹೊಂಡ ತೆಗೆಯಬೇಕಾಗುತ್ತದೆ..ಮತ್ತೆ ಕೊಟ್ಟಿಗೆಗೆ ಹೊಸ ದನ ಬರುವುದಿಲ್ಲ..! ಹೇಗಿದ್ದರೂ ಈಗ ಹಸುಗಳಿಗೆ ಕೃತಕ ಗರ್ಭಧಾರಣೆಯ ಯುಗ ತಾನೇ?
ಕೃಷಿ ಜಮೀನು ಇಲ್ಲದಿದ್ದರೆ ಗಂಡು ಕರುಗಳು ಜನಿಸಿದರೆ ಅದನ್ನಿಟ್ಟುಕೊಂಡು ಏನು ಮಾಡುವುದು?

ಆಯುಧಗಳನ್ನಿಟ್ಟುಕೊಂಡವರಿಗೆ, ತನಗಿಂತಲೂ ಅದರ ಮೇಲೆಯೇ ಹೆಚ್ಚು ನಂಬಿಕೆಯಿಟ್ಟವರಲ್ಲಿ ಸಾಮಾನ್ಯವಾಗಿ ವಿವೇಚನಾ ಶಕ್ತಿ ಕಮ್ಮಿಯಿರುತ್ತದೆ. ಅದರ ಜೊತೆ ಅಧಿಕಾರವೂ ಸಿಕ್ಕಿಬಿಟ್ಟರೆ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು.ಮೊನ್ನೆ ಕಭೀರ ಗುಂಡೇಟು ತಿಂದು ಸತ್ತುಬಿದ್ದ ಜಾಗದ ಚೆಕ್ ಪೋಸ್ಟ್ ನಲ್ಲಿ ನಾನೂ ಕೂಡಾ ತಡರಾತ್ರಿಯಲ್ಲಿ ಹಲವಾರು ಬಾರಿ ಸಂಚರಿದ್ದಿದೆ. ಆ ಅರಣ್ಯ ಪ್ರದೇಶದಲ್ಲಿ ಮುಂಜಾನೆಯಲ್ಲಿ ಏನು ನಡೆಯಿತು ಎಂಬುದು ಮಧ್ಯಮಗಳಲ್ಲಿ ವರದಿಯಾಗಿದ್ದಷ್ಟೇ ನಮಗೆ ಗೊತ್ತು.  ಆದರೆ ಆ ಹುಡುಗನ ಮೃತ ದೇಹವನ್ನು ನೋಡಿದಾಗ, ಗುಂಡು ಕರಾರುವಕ್ಕಾಗಿ ಎದೆ ಸೀಳಿದ ಪರಿಯನ್ನು ನೋಡಿದಾಗ ನಕ್ಸಲ್ ನಿಗ್ರಹ ಪಡೆಯ ಮೇಲೆ ಸಂಶಯ ಬರದಿರಲು ಸಾಧ್ಯವೇ? ಮನುಷ್ಯತ್ವದ ಎದೆಗೆ ಬಿದ್ದ ಗುಂಡು ಎಂದು ಅನಿಸದಿರದೇ?

ಬಹುಶಃ ಗೃಹ ಇಲಾಖೆ, ಪೋಲಿಸ್ ಇಲಾಖೆಗೆ ಸೇರುವವರಿಗೆ ತರಬೇತಿ ಅವಧಿಯಲ್ಲಿ ಕಡ್ಡಾಯವಾಗಿ ಮನಶ್ಯಾಸ್ತ್ರದ ತರಗತಿಗಳೊಂದಿಗೆ ನಾಗರಿಕರೊಂದಿಗೆ ವ್ಯವಹರಿಸುವ ವರ್ತನಾ ವಿಜ್ನಾನವನ್ನು ಕಡ್ಡಾಯವಾಗಿ, ವಿಸ್ತಾರವಾಗಿ ಕಲಿಸುವ ಬಗ್ಗೆ ಯೋಚಿಸಬೇಕಾಗಿದೆ. ಅವರಲ್ಲಿಯೂ ಕೋಮು ಭಾವನೆ ತುಂಬಿಕೊಂಡಿದ್ದರೆ ನಾವು ಯಾರನ್ನು ನಂಬುವುದು?

ಅಯ್ತು..ಹೇಗೋ ಏನೋ ಆ ಹುಡುಗನನ್ನು ಎಲ್ಲಿಂದಲೋ ಬಂದ ಗುಂಡು ಬಲಿ ತೆಗೆದುಕೊಂಡಿತು.ಆದರೆ.ಆತನ ಮೃತ ದೇಹವನ್ನು ತಗೊಂಡು ಹೋಗಲು ಬಂದ ಕುಟುಂಬ ಸದಸ್ಯರು ಬಂದಾಗ ಅವರ ಮೇಲೂ ಹಲ್ಲೆ ನಡೆಸುವುದು ಅಂದರೆ...? ಅವನೇನು ಶತ್ರು ಪಾಳೆಯದವನೇ? ನಮ್ಮ ನೆರೆಕರೆಯ ಹುಡುಗನಲ್ಲವೇ?

ಜಾನುವಾರು ಸಾಗಿಸುವವರಾದರೂ ಪರವಾನಿಗೆ ಇದ್ದರೂ ಅ ಅಪರಾತ್ರಿಯಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಯಾಕೆ ಹೋಗಬೇಕಿತ್ತು? ಅದು ಕೂಡಾ ಈಗ ತಾನೇ ಚುನಾವಣೆ ಮುಗಿದ ಬಿಸಿ ಇರುವಾಗಲೇ...ಈ ಪ್ರಶ್ನೆ ಕೂಡಾ ನಮ್ಮಲ್ಲಿದೆ.

ಈಗ ಏನು ಮಾತಾಡಿ ಏನು ಪ್ರಯೋಜನ? ಆತನ ಕುಟುಂಬಕ್ಕೆ ಒಂದಷ್ಟು ಪರಿಹಾರ ಕೊಡಬಹುದು ಆದರೆ ಹೋದ ಜೀವ ಮರಳಿ ಕೊಡಲು ಸಾಧ್ಯವೇ?..

ನನಗೆ ಮತ್ತೆ ಮತ್ತೆ ಅನ್ನಿಸುವುದು ಇದು ಓಟು ಬ್ಯಾಂಕ್ ರಾಜಕಾರಣದ ಫಲಶ್ರುತಿ. ಅವರದ್ದು ಒಡೆದಾಳುವ ನೀತಿ..ಅವರು ಮನುಷ್ಯರ ನಡುವೆ ಕಂದಕಗಳನ್ನು ನಿರ್ಮಿಸುತ್ತಾರೆ.ತಮ್ಮ ಕೋಟೆಗಳನ್ನು ಭದ್ರಪಡಿಸಿಕೊಳ್ಳುತ್ತಾರೆ. ಕಂದಕ ನಿರ್ಮಾಣದ ಆರಂಭ ಮಾಡಿದ್ದು ಕಾಂಗ್ರೇಸ್..ಅದರ ಫಲಾನುಭವಿಗಳು ಬಲಪಂಥೀಯ ಮೂಲಭೂತ ಸಂಘಟನೆಗಳು...ನಾವೆಲ್ಲಾ ಅದರ ಬಲಿಪಶುಗಳು.
ಇದನ್ನು ಬರೆಯುತ್ತಿರುವಾಗಲೇ ಆ ಪ್ರವೀಣ ತೊಗಾಡಿಯ ಅದೆನೋ ಹುಚ್ಚು ಹೇಳಿಕೆಯನ್ನು ನೀಡಿದ್ದಾರೆ..ಕೆಲವೊಮ್ಮೆ ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿದ್ದೆವೆಯೋ ಎಂಬುದರ ಬಗ್ಗೆ ಅನುಮಾನ ಮೂಡುತ್ತದೆ.
[ ವಿವಾದಾಸ್ಪದ ವಿಷಯಗಳ ಬಗ್ಗೆ ಬರೆಯಬಾರದೆಂದುಕೊಳ್ಳುತ್ತೇನೆ. ಆದರೆ ವರ್ತಮಾನದ ಆಗು ಹೋಗುಗಳಿಗೆ ಸ್ಪಂದಿಸಲಾದವರು ಬರಹಗಾರನೇ ಅಲ್ಲ ಎಂದುಕೊಂಡು ಬರೆದುಬಿಡುತ್ತೇನೆ..ಮೊಸರಲ್ಲಿ ಕಲ್ಲು ಹುಡುಕುವವರು ದಯವಿಟ್ಟು ಕಮೆಂಟಿಸಬೇಡಿ...ನನಗೆ ಹೇಳಬೇಕೆನಿಸಿತ್ತು ಹೇಳಿದೆ ಅಷ್ಟೇ..]

4 comments:

 1. Article of ವಿನಾಯಕ ಭಟ್ಟ ಮೂರೂರು:
  ಪೊಲೀಸರು ಗುಂಡು ಹೊಡೆದ ತಪ್ಪಿಗೆ ಮೃತನ ತಪ್ಪು ಮುಚ್ಚಿಹೋಗುವುದೇ?

  http://www.kannadaprabha.com/columns/%E0%B2%AA%E0%B3%8A%E0%B2%B2%E0%B3%80%E0%B2%B8%E0%B2%B0%E0%B3%81-%E0%B2%97%E0%B3%81%E0%B2%82%E0%B2%A1%E0%B3%81-%E0%B2%B9%E0%B3%8A%E0%B2%A1%E0%B3%86%E0%B2%A6-%E0%B2%A4%E0%B2%AA%E0%B3%8D%E0%B2%AA%E0%B2%BF%E0%B2%97%E0%B3%86-%E0%B2%AE%E0%B3%83%E0%B2%A4%E0%B2%A8-%E0%B2%A4%E0%B2%AA%E0%B3%8D%E0%B2%AA%E0%B3%81-%E0%B2%AE%E0%B3%81%E0%B2%9A%E0%B3%8D%E0%B2%9A%E0%B2%BF%E0%B2%B9%E0%B3%8B%E0%B2%97%E0%B3%81%E0%B2%B5%E0%B3%81%E0%B2%A6%E0%B3%87/201891.html#.U1XYg3b1ANQ.facebook

  ReplyDelete
  Replies
  1. cant expect a better article from kannada prabha!

   Delete
 2. article is more emotionally driven...not elaborated about da causes nor about situation.inconclusive article.just an attempt to b in touch of current sensational news!

  ReplyDelete
  Replies
  1. as far as i know usha kattemane madam is not reporter to elaborate all the causes or situations. if a state sponsored death doesnt evoke our emotions what else will make us emotionally sensitive?

   Delete