Dec 25, 2013

ನಿರೀಕ್ಷಿತ ಫಲಿತಾಂಶದಲ್ಲಿ ‘ಆಮ್ ಆದ್ಮಿ’ ಜಯಶಾಲಿಡಾ ಅಶೋಕ್ ಕೆ ಆರ್.
ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮುಂದಿನ ವರುಷ ನಡೆಯುವ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹೊಸ ಹುರುಪಿನಿಂದ ಮತ್ತಷ್ಟು ಆತ್ಮಾವಲೋಕನದಿಂದ ತಯ್ಯಾರಿ ನಡೆಸಲು ಬೇಕಾದ ಮಾರ್ಗದರ್ಶನವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಕೆಲವರ ಪ್ರಕಾರ ಇದು ಮುಂದಿನ ಫೈನಲ್ ಲೋಕಸಭಾ ಚುನಾವಣಾ ಪೂರ್ವದಲ್ಲಿ ನಡೆದ ಸೆಮಿಫೈನಲ್! ದಕ್ಷಿಣದ ಯಾವೊಂದು ರಾಜ್ಯದಲ್ಲೂ ನಡೆಯದ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ನಡೆಯದ ಈ ಚುನಾವಣೆಯನ್ನು ಸೆಮಿಫೈನಲ್ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ?
ಕೆಲವು ರಾಜ್ಯಗಳ ಫಲಿತಾಂಶದ ಆಧಾರದ ಮೇಲೆ ಮಾಧ್ಯಮಗಳ ಮೂಲಕ ಇಡೀ ದೇಶದ ಮತದಾರರನ್ನು ಪ್ರಭಾವಿಸುವ ಕೆಲಸವಾಗುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು. ಐದು ರಾಜ್ಯಗಳಲ್ಲಿ ಕೆಲವು ಪಕ್ಷಗಳ ಗೆಲುವು ಸೋಲುಗಳನ್ನು ಆಯಾ ಪಕ್ಷದ ರಾಷ್ಟ್ರೀಯ ನಾಯಕರ ಗೆಲುವು ಮತ್ತು ಸೋಲು ಎಂಬ ರೀತಿಯಲ್ಲಿ ನಡೆಯುತ್ತಿರುವ ವ್ಯಾಖ್ಯಾನ ಕೂಡ ಪ್ರಜಾಪ್ರಭುತ್ವವನ್ನು ಕಡೆಗಣಿಸಿ ರಾಜ್ಯದ ನಾಯಕರು ಮತ್ತು ಕಾರ್ಯಕರ್ತರ ಶ್ರಮವನ್ನು ಕಡೆಗಣಿಸಿ ಹೈಕಮಾಂಡಿಗೆ ತಲೆಬಾಗುವ ಸಂಸ್ಕೃತಿಯನ್ನು ಸೂಚಿಸುತ್ತದೆ. ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರ ಪಾತ್ರವೂ ಇರುತ್ತದದಾರೂ ಆಯಾ ಪ್ರದೇಶದ ಅವಶ್ಯಕತೆ ಅನಿವಾರ್ಯತೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಿದ ನಾಯಕರ ಪಾತ್ರ ರಾಷ್ಟ್ರೀಯ ನಾಯಕರಿಗಿಂತ ಹಿರಿದು. ಚುನಾವಣೆಯಲ್ಲಿ ಗೆದ್ದ ತರುವಾಯ ಮಧ್ಯಪ್ರದೇಶದ ಮುಖ್ಯಮಂತ್ರಿ ‘ಇದು ರಾಜ್ಯದ ಜನತೆಗೆ ಸಿಕ್ಕ ಗೆಲುವು’ ಎಂಬ ಹೇಳಿಕೆ ನೀಡಿದ್ದು ರಾಜ್ಯ ನಾಯಕರ ಶ್ರಮವನ್ನು ಗುರುತಿಸದೇ ಹೋಗುತ್ತಿದ್ದಾರೆಂಬ ಆತಂಕದಲ್ಲಿ. ರಾಷ್ಟ್ರೀಯ ನಾಯಕರ ಪ್ರಭಾವವನ್ನು ಗೌರವಿಸಿ, ಅವರ ವೈಫಲ್ಯವನ್ನು ಗುರುತಿಸಿ ಖಂಡಿಸುವ ಕೆಲಸವಾಗಬೇಕೆಂಬುದು ಸತ್ಯವಾದರೂ ಗೆಲುವು ಸೋಲುಗಳಿಗೆ ಕಾರಣವಾಗುವ ಸ್ಥಳೀಯ ಸಂಗತಿಗಳನ್ನು ಕಡೆಗಣಿಸುವ ಕೆಲಸ ಒಂದು ಆರೋಗ್ಯವಂತ ಪ್ರಜಾಪ್ರಭುತ್ವದಲ್ಲಿ ನಡೆಯಬಾರದು.

ಮಧ್ಯಪ್ರದೇಶ, ಛತ್ತೀಸ್ ಗಢ, ದೆಹಲಿ, ಮಿಜೋರಾಂ ಮತ್ತು ರಾಜಸ್ತಾನದ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೆಚ್ಚು ಕಡಿಮೆ ನಿರೀಕ್ಷೆಯಂತೆಯೇ ಬಂದಿದೆ. ಚುನಾವಣಾ ನಂತರದ ಸಮೀಕ್ಷೆಗಳು ಕೂಡ ಗೆಲುವು ಕಾಣುವ ಪಕ್ಷಗಳನ್ನು ಗುರುತಿಸುವಲ್ಲಿ ಎಡವಲಿಲ್ಲ. ಸ್ಥಳೀಯ ಕಾರಣಗಳು ಗೆಲುವಿಗೆ ಸಹಕಾರಿಯಾಗಿದ್ದರೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರದ ಎರಡನೇ ಅವಧಿಯ ಅನಂತ ಅವಘಡಗಳು ಇತರೆ ಪಕ್ಷಗಳಿಗೆ ಅಭೂತಪೂರ್ವವೆನ್ನಿಸುವ ಗೆಲುವನ್ನು ತಂದುಕೊಡಲು ಸಹಕಾರಿಯಾಯಿತು. ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ಹತ್ತು ವರುಷಗಳಿಂದಲೂ ಆಡಳಿತದಲ್ಲಿರುವ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಂಡಿದ್ದರೆ, ಮಿಜೋರಾಂನಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶ ಕಂಡಿದೆ. ರಾಜಸ್ಥಾನದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಬಿಜೆಪಿಯ ಅಬ್ಬರಕ್ಕೆ ಕೊಚ್ಚಿ ಹೋಗಿದೆ. ಇನ್ನು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹೊಸತೊಂದು ಅಲೆ ಮತ್ತು ಭರವಸೆ ಮೂಡಿಸಿರುವ ಚುನಾವಣೆ ದೆಹಲಿಯದ್ದು. ರಾಜಕೀಯ ವಿಶ್ಲೇಷಕರ ಚಿಂತನೆಯನ್ನು ಮೀರಿ, ಚುನಾವಣಾ ನಂತರದ ಸಮೀಕ್ಷೆಗಳನ್ನು ಕೆಲಮಟ್ಟಿಗೆ ಸುಳ್ಳು ಮಾಡಿ ಸಂಪೂರ್ಣ ಗೆಲುವು ಕಂಡು ಬಹುಮತ ಪಡೆಯಲು ವಿಫಲವಾದರೂ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆಮ್ ಆದ್ಮಿ ಪಕ್ಷ ಇಂದು ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಬಗೆಗಿನ ಚರ್ಚೆಗಳನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದೆ. ದೆಹಲಿಯಲ್ಲಿ ಮೊದಲ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿ.ಜೆ.ಪಿಗೂ ಬಹುಮತದ ಕೊರತೆಯಿದೆ. ಮತ್ತೊಂದು ಚುನಾವಣೆ ನಡೆಯುವ ಸಾಧ್ಯತೆಗಳು ದೆಹಲಿಯಲ್ಲಿ ನಿಚ್ಚಳವಾಗಿದೆ.

ಮಧ್ಯಪ್ರದೇಶದಲ್ಲಿ 2005ರಿಂದ ಸತತವಾಗಿ ಮುಖ್ಯಮಂತ್ರಿಯಾಗಿರುವುದು ಶಿವರಾಜ್ ಸಿಂಗ್ ಚೌಹಾಣ್. ದಕ್ಷತೆ ಮತ್ತು ಕಳಂಕರಹಿತ ಆಡಳಿತ ನೀಡುತ್ತಿದ್ದಾರೆಂಬುದು ಅವರ ಹೆಗ್ಗಳಿಕೆ. ಒಂದು ಹಂತದಲ್ಲಿ ಬಿಜೆಪಿಯೊಳಗೆ ಮುಂದಿನ ಪ್ರಧಾನಮಂತ್ರಿ ಆಯ್ಕೆಯ ಸಂಬಂಧ ಅನೇಕ ಜಟಾಪಟಿಗಳು ನಡೆಯುತ್ತಿರುವಾಗ ನರೇಂದ್ರ ಮೋದಿಯನ್ನು ಪ್ರಧಾನಿ ಪಟ್ಟದಲ್ಲಿ ನೋಡಲಿಚ್ಛಿಸದವರು ಸತತವಾಗಿ ಗೆಲ್ಲುತ್ತಿರುವ ಜನರ ನಡುವಿನ ಒಡನಾಟದಿಂದ ಹೆಸರು ಗಳಿಸಿರುವ ಕಪ್ಪು ಚುಕ್ಕೆಯಿಲ್ಲದ ಶಿವರಾಜ್ ಸಿಂಗ್ ಚೌಹಾಣ್ ಯಾಕೆ ಪ್ರಧಾನಮಂತ್ರಿ ಅಭ್ಯರ್ಥಿಯಾಗಬಾರದು ಎಂದು ಕೇಳಿದ್ದೂ ಇದೆ. ಈ ಚರ್ಚೆಗಳೆಲ್ಲ ನಡೆದಿದ್ದು ಚುನಾವಣೆಗೂ ಮೊದಲು. ತಮ್ಮ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಯಶಸ್ವಿಯಾಗಿದ್ದಾರೆ. ದೇಶಾದ್ಯಂತ ನರೇಂದ್ರ ಮೋದಿ ಅಲೆಯಿದೆ ಎಂಬ ಚರ್ಚೆಯೇ ನಡೆಯುತ್ತಿದ್ದಾಗ ತಣ್ಣಗೆ ನರೇಂದ್ರ ಮೋದಿಯನ್ನು ಚುನಾವಣಾ ಪ್ರಚಾರದಲ್ಲಿ ನಿರ್ಲಕ್ಷಿಸಿ ಗೆಲುವು ಪಡೆದಿದ್ದು ಚೌಹಾಣ್. ಪ್ರಚಾರ ಕಾರ್ಯಕ್ಕೆ ಉಪಯೋಗಿಸುವ ಫ್ಲೆಕ್ಸುಗಳಲ್ಲಿ ಮೋದಿಯ ಭಾವಚಿತ್ರವನ್ನು ಸಣ್ಣದು ಮಾಡಿ ಕೆಲವೆಡೆ ಇಲ್ಲವಾಗಿಸಿದ್ದು ಉದ್ದೇಶಪೂರ್ವಕವಾಗಿಯೇ. ಚುನಾವಣೆಯಲ್ಲಿ ಅಮೋಘ ಗೆಲುವನ್ನು ಕಂಡ ನಂತರ ಎಲ್ಲೆಡೆಯೂ ಮೋದಿ ಅಲೆಯ ಬಗ್ಗೆಯೇ ಚರ್ಚೆಯಾಗುತ್ತಿತ್ತು. ಮಧ್ಯಪ್ರದೇಶದ ಬಿಜೆಪಿಯ ಚುನಾವಣಾ ಗೆಲುವನ್ನು ಕೂಡ ಈ ಮಾಧ್ಯಮವೃಂದದವರು ಸಂಪೂರ್ಣವಾಗಿ ಮೋದಿಗೆ ಅರ್ಪಿಸಿ ತಮ್ಮ ಶ್ರಮವನ್ನು ಕಡೆಗಣಿಸಿಬಿಡುತ್ತಾರೆಂಬ ಭಯದಿಂದಲೋ ಏನೋ ‘ಇದು ರಾಜ್ಯದ ಜನತೆಗೆ ಸಿಕ್ಕ ಜಯ’ ಎಂಬ ಹೇಳಿಕೆ ನೀಡಿದರು ಶಿವರಾಜ್ ಸಿಂಗ್ ಚೌಹಾಣ್! ತಮ್ಮ ವರ್ಚಸ್ಸು, ರಾಜ್ಯದ ಕಾರ್ಯಕರ್ತರು, ಶಾಸಕರ ಶ್ರಮದಿಂದ ಮತ್ತೊಂದು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಪಡೆದಿದ್ದಾರೆ. ಕಳೆದ ಸಾಲಿಗಿಂತ ಹೆಚ್ಚು ಸ್ಥಾನಗಳನ್ನು ಪಡೆಯಲು ಯಶಸ್ವಿಯಾಗಿದ್ದಾರೆ. 230 ಸಾಮರ್ಥ್ಯದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 165 ಸ್ಥಾನಗಳನ್ನು ಗಳಿಸಿದರೆ, ಕಾಂಗ್ರೆಸ್ 58 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬಿಜೆಪಿ ಕಳೆದ ಸಾಲಿಗಿಂತ 22 ಸ್ಥಾನಗಳನ್ನು ಅಧಿಕವಾಗಿ ಗಳಿಸಿಕೊಂಡಿದ್ದರೆ ಕಾಂಗ್ರೆಸ್ 13 ಸ್ಥಾನಗಳನ್ನು ಕಳೆದುಕೊಂಡಿದೆ. ಎಂದಿನಂತೆ ಕಾಂಗ್ರೆಸ್ಸಿನ ಹೈಕಮಾಂಡ್ ಪದ್ಧತಿ ಮತ್ತಷ್ಟು ಸ್ಥಾನಗಳನ್ನು ಕಳೆದುಕೊಂಡು ಹೀನಾಯ ಸೋಲನ್ನನುಭವಿಸುವಂತೆ ಮಾಡಿದೆ. ರಾಜ್ಯದ ನಾಯಕರ ವಿರೋಧದ ನಡುವೆಯೂ ಚುನಾವಣೆಯಲ್ಲಿ ಗೆಲುವು ಕಂಡರೆ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧ್ಯರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಯಿತು. ರಾಜ್ಯದ ನಾಯಕರು ಮನಪೂರ್ತಿಯಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಲ್ಲ. ಎಷ್ಟೇ ಒಳ್ಳೆಯ ಆಡಳಿತ ನೀಡಿದ್ದರೂ ಹಲವು ವರುಷದ ಆಡಳಿತದ ನಂತರ ರಾಜ್ಯದ ಜನರಲ್ಲಿ ಸಣ್ಣದೊಂದು ಆಡಳಿತ ವಿರೋಧಿ ಅಲೆ ಇದ್ದೇ ಇರುತ್ತದೆ. ಆ ಸಣ್ಣ ಲೋಪಗಳನ್ನೂ ಸರಿಪಡಿಸುವ ಭರವಸೆ ಮೂಡಿಸುವ ವಿರೋಧ ಪಕ್ಷವಿದ್ದರೆ ಆಡಳಿತ ಪಕ್ಷಕ್ಕೆ ಚುನಾವಣೆ ಗೆಲ್ಲುವುದು ಕಷ್ಟಸಾಧ್ಯವಾಗುತ್ತದೆ. ಸಮರ್ಥ ವಿರೋಧ ಪಕ್ಷವಿರದಿದ್ದಲ್ಲಿ ಜನತೆ ಮತ್ತೆ ಆಡಳಿತ ಪಕ್ಷಕ್ಕೆ ಮತ ಚಲಾಯಿಸುವುದು ಖಂಡಿತ. ಶಿವರಾಜ್ ಸಿಂಗ್ ಚೌಹಾಣ್ ಆಡಳಿತದ ಲೋಪಗಳನ್ನು ಗುರುತಿಸುವಲ್ಲಿ ಆ ಸರಕಾರದ ವಿರುದ್ಧ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ಸೋತ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಕಳೆದ ಬಾರಿಗಿಂತ ಹೀನಾಯ ಸೋಲು ಕಂಡಿರುವುದರಲ್ಲಿ ಅಚ್ಚರಿಯೇನಿಲ್ಲ.

ಇನ್ನು ನಕ್ಸಲರ ಹೋರಾಟ ಉತ್ತುಂಗದಲ್ಲಿರುವ ಛತ್ತೀಸ್ ಗಢದಲ್ಲಿ ಮತ್ತೊಂದು ಸುತ್ತಿಗೆ ಬಿಜೆಪಿಯ ಡಾ. ರಮಣ್ ಸಿಂಗ್ ಆಯ್ಕೆಯಾಗಿದ್ದಾರೆ. ಕೊನೆಯವರೆಗೂ ಕುತೂಹಲ ಮೂಡಿಸಿದ ಇಲ್ಲಿನ ಚುನಾವಣಾ ಫಲಿತಾಂಶ ಅಜಿತ್ ಜೋಗಿಯ ನೇತೃತ್ವದಲ್ಲಿ ಕಣಕ್ಕಿಳಿದ ಕಾಂಗ್ರೆಸ್ ಮತ್ತೊಮ್ಮೆ ಮುಗ್ಗರಿಸಿರುವುದು ಹೌದಾದರೂ ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಗೆ ಹೋಲಿಸಿದರೆ ಇದ್ದುದರಲ್ಲಿ ಮಾನ ಉಳಿಸಿಕೊಳ್ಳುವ ಫಲಿತಾಂಶ ಪಡೆದಿದೆ. 2003ರಲ್ಲಿ ಮಧ್ಯಪ್ರದೇಶದಿಂದ ಬೇರ್ಪಟ್ಟು ಅಸ್ತಿತ್ವಕ್ಕೆ ಬಂದ ಛತ್ತೀಸ್ ಗಢ ರಾಜ್ಯದಲ್ಲಿ ಆರಂಭದಿಂದಲೂ ಬಿಜೆಪಿಯದೇ ಸರಕಾರವಿದೆ. ಡಾ. ರಮಣ್ ಸಿಂಗ್ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ತೊಂಭತ್ತು ಸಂಖ್ಯೆಯ ಸಾಮರ್ಥ್ಯದ ವಿಧಾನಸಭೆಯಲ್ಲಿ ಬಿಜೆಪಿ 49 ಸ್ಥಾನದಲ್ಲಿ ಗೆಲುವು ಕಂಡಿದ್ದರೆ, ಕಾಂಗ್ರೆಸ್ 39 ಸ್ಥಾನದಲ್ಲಿ ಜಯ ಗಳಿಸಿದೆ. ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದೆ, ಕಾಂಗ್ರೆಸ್ ಒಂದು ಸ್ಥಾನ ಹೆಚ್ಚುವರಿಯಾಗಿ ಪಡೆದಿದೆ. ನಕ್ಸಲ್ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ಸಿನ ಮಹೇಂದ್ರ ಕರ್ಮ ಜೊತೆಗೂಡಿ ಬಿಜೆಪಿ ಸರಕಾರ ನಡೆಸಿದ ಸಲ್ವಾ ಜುಡುಂ ಹೋರಾಟ ಡಾ.ರಮಣ್ ಸಿಂಗ್ ಆಡಳಿತದ ಕರಾಳ ನಿರ್ಧಾರವೆನ್ನಬಹುದು. ಸುಪ್ರೀಂ ಕೋರ್ಟಿನಿಂದಲೂ ಸಲ್ವಾ ಜುಡುಂ ಛೀಮಾರಿಗೊಳಪಟ್ಟಿತ್ತು. ಆದಿವಾಸಿ ಹೋರಾಟಗಾರರ ವಿರುದ್ಧ ಆದಿವಾಸಿಗಳನ್ನೇ ಎತ್ತಿಕಟ್ಟುವ ಸರಕಾರೀ ಪ್ರಾಯೋಜಿತ ಪ್ರತಿಗಾಮಿ ನಡವಳಿಕೆ ಲಕ್ಷಾಂತರ ಆದಿವಾಸಿಗಳನ್ನು ನಿರಾಶ್ರಿತರನ್ನಾಗಿ ಮಾಡಿ ಸಾವಿರಾರು ಜನರ ಸಾವಿಗೆ ಕಾರಣವಾಗಿತ್ತು. ಪ್ರಮುಖ ನಾಯಕರ ಬಂಧನ ಮತ್ತು ಹತ್ಯೆಯ ನಂತರ ನಕ್ಸಲ್ ಚಟುವಟಿಕೆ ಮಂದಗತಿಯಲ್ಲಿ ಸಾಗುತ್ತಿದೆ. ನಕ್ಸಲ್ ಚಟುವಟಿಕೆ ಕಡಿಮೆಯಾಗಿರುವ ಶ್ರೇಯವನ್ನು ರಾಜ್ಯ ಬಿಜೆಪಿ ಮತ್ತು ಕೇಂದ್ರದ ಕಾಂಗ್ರೆಸ್ ಎರಡೂ ಪಡೆದುಕೊಳ್ಳಲು ಹವಣಿಸುತ್ತವೆ. ಕಳೆದ ವರುಷ ನಡೆದ ನಕ್ಸಲ್ ದಾಳಿಯಲ್ಲಿ ಕಾಂಗ್ರೆಸ್ಸಿನ ಮುಖಂಡರು ಹತ್ಯೆಗೊಳಗಾಗಿದ್ದರು. ಆ ಅನುಕಂಪದ ಅಲೆ ಮತ್ತು ಆ ದಾಳಿ ರಾಜ್ಯ ಸರಕಾರದ ವೈಫಲ್ಯದಿಂದಾಗಿದ್ದು ಎಂಬ ವಿಷಯವೂ ಕೂಡ ಕಾಂಗ್ರೆಸ್ಸಿನ ಗೆಲುವಿಗೆ ಸಹಕಾರಿಯಾಗಲಿಲ್ಲ. ಮುಖಂಡರನ್ನು ಗುರುತಿಸುವಲ್ಲಿ ಸದಾ ಎಡವುವ ಕಾಂಗ್ರೆಸ್ಸಿನ ವಿಳಂಬ ಮನೋಭಾವವೂ ಕೂಡ ಈ ಸೋಲಿಗೆ ಕಾರಣ. ಅಜಿತ್ ಜೋಗಿಯನ್ನು ಒಂದಷ್ಟು ದಿನಗಳ ಮೊದಲೇ ಚುನಾವಣ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆ ಹತ್ತು ವರುಷಗಳ ಬಿಜೆಪಿ ಆಡಳಿತವನ್ನು ಕೊನೆಗಾಣಿಸಬಹುತ್ತಿತ್ತೆಂಬುದು ರಾಜಕೀಯ ವಿಶ್ಲೇಷಕರ ಅನಿಸಿಕೆ. ನಕ್ಸಲರ ಪ್ರಾಬಲ್ಯವಿರುವ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ 8ರಲ್ಲಿ ಗೆಲುವು ಕಂಡಿದೆ. ಇನ್ನು ಛತ್ತೀಸ್ ಗಢದಲ್ಲಿನ ಬಿಜೆಪಿ ಗೆಲುವಿಗೆ ಡಾ. ರಮಣ್ ಸಿಂಗ್ ಮುಖ್ಯ ಕಾರಣ. ರಾಜ್ಯ ಸರಕಾರದ ಆಹಾರ ಭದ್ರತಾ ಯೋಜನೆ ಅವರ ಜನಪ್ರಿಯ ಯೋಜನೆಗಳಲ್ಲೊಂದು. ಈ ಬಾರಿಯ ಚುನಾವಣೆಯಲ್ಲಿ ‘ಯಾರಿಗೂ ಮತವಿಲ್ಲ’ ಎಂಬ ಆಯ್ಕೆಯೂ ಇತ್ತು. ಆ ಆಯ್ಕೆ ಅತಿ ಹೆಚ್ಚು ಉಪಯೋಗಿಸಲ್ಪಟ್ಟಿರುವುದು ಬುಡಕಟ್ಟು ಜನಾಂಗ, ಆದಿವಾಸಿಗಳು ಮತ್ತು ಹಿಂದುಳಿದವರೇ ಹೆಚ್ಚಿರುವ ಛತ್ತೀಸ್ ಗಢದಲ್ಲಿ! ನಕ್ಸಲರ ಬಂದೂಕಿನ ನಳಿಕೆಗೂ ಹೆದರದೆ ಮತ ಚಲಾಯಿಸಿದ ಜನತೆ ಎಂಬ ವರದಿಯನ್ನು ಪ್ರತಿ ಬಾರಿಯ ಚುನಾವಣೆಯಲ್ಲೂ ಓದುತ್ತೇವೆ! ನಿಜಕ್ಕೂ ನಕ್ಸಲ್ ಪ್ರಾಬಲ್ಯದ ಪ್ರಾಂತ್ಯಗಳಲ್ಲಿ ಮತಚಲಾವಣೆ ಆಗುತ್ತದೆಯೇ? ಅಥವಾ ಚಲಾವಣೆಯಾದ ಮತಗಳು ಮತ್ತು ಮತದಾರರ ಸಂಖೈಯಲ್ಲೇ ವ್ಯತ್ಯಾಸಗಳಿದ್ದು ಮತದಾನದಲ್ಲಿ ಏರಿಕೆಯಾಗುವ ಸುದ್ದಿ ಬರುತ್ತದೆಯೇ?

ಇನ್ನು ‘ಮುಖ್ಯ ಭಾರತದ’ ನಿರ್ಲಕ್ಷ್ಯಕ್ಕೆ ಒಳಗಾಗುವ ಈಶಾನ್ಯ ಭಾರತದ ಪುಟ್ಟ ರಾಜ್ಯ ಮಿಜೋರಾಂನಲ್ಲೂ ಕೂಡ ಈ ಬಾರಿ ಚುನಾವಣೆ ನಡೆಯಿತು ಎಂಬ ವಿಷಯ ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದೇ ಇರಲಾರದು! ರಾಷ್ಟ್ರೀಯವೆಂದು ಸ್ವಯಂ ಘೋಷಿಸಿಕೊಂಡಿರುವ ಕೆಲವು ಮಾಧ್ಯಮಗಳ ನಿರ್ಲಕ್ಷ್ಯವೂ ಕೂಡ ದೇಶದ ಇತರ ಭಾಗದ ಜನತೆಯನ್ನು ಈ ರಾಜ್ಯಗಳ ವಿಷಯವಾಗಿ ಕತ್ತಲಲ್ಲೇ ಇಟ್ಟಿವೆ. ಈ ನಿರ್ಲಕ್ಷ್ಯದ ಪರಿಣಾಮವೇ ಈ ರಾಜ್ಯಗಳಲ್ಲಿ ಭಾರತವೆಂಬ ಬೃಹತ್ ದೇಶದಿಂದ ಹೊರಹೋಗುವ ಹೋರಾಟಗಳು ಪದೇ ಪದೇ ವರದಿಯಾಗುವುದು. ಮಿಜೋರಾಂ ಕೂಡ ಈ ಹೋರಾಟಕ್ಕೆ ಹೊರತಲ್ಲ. 1986ರವರೆಗೂ ಪ್ರಖರವಾಗಿದ್ದ ಪ್ರತ್ಯೇಕ ದೇಶದ ಹೋರಾಟ ಆಗಿನ ಕೇಂದ್ರ ಸರಕಾರ ಬಂಡೆದ್ದ ಪ್ರತ್ಯೇಕತಾವಾದಿ ಸಂಘಟನೆಗಳ ಜೊತೆಗೆ ನಡೆಸಿದ ಸತತ ಮಾತುಕತೆಗಳ ಪರಿಣಾಮವಾಗಿ ಪ್ರತ್ಯೇಕತವಾದಿಗಳು ರಾಜಕಾರಣಕ್ಕೆ ದುಮುಕುವಂತೆ ಮಾಡಿತು. ಮಿಜೋ ನ್ಯಾಷನಲ್ ಫ್ರಂಟ್ ಮಿಜೋರಾಂನ ಸ್ವತಂತ್ರತೆಗಾಗಿ ಹೋರಾಡುತ್ತಿದ್ದ ಕ್ರಾಂತಿಕಾರಿ ಸಂಘಟನೆ. ರಾಜೀವ್ ಗಾಂಧಿ ನೇತೃತ್ವದ ಸರಕಾರ ಮಿಜೋ ಒಪ್ಪಂದಕ್ಕೆ 1987ರಲ್ಲಿ ಸಹಿ ಹಾಕಿದ ಮಿಜೋ ನ್ಯಾಷನಲ್ ಫ್ರಂಟ್ 1987ರಲ್ಲಿ ಗೆಲುವು ಕಂಡಿತ್ತು. ನಂತರ ಮತ್ತೆ 1998 ಮತ್ತು 2003ರ ಚುನಾವಣೆಯಲ್ಲಿ ಸತತವಾಗಿ ರಾಜ್ಯದ ಚುಕ್ಕಾಣಿ ಹಿಡಿದಿತ್ತು. ಆದರೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡು ಲಾಲ್ ಥಾನ್ ವಾಲಾ ಕಾಂಗ್ರೆಸ್ ನೇತೃತ್ವದ ಸರಕಾರದ ಮುಖ್ಯಮಂತ್ರಿಯಾದರು. ಲಾಲ್ ಥಾನ್ವಾಲಾ ನೇತೃತ್ವದ ಸರಕಾರದ ಹೊಸ ಭೂ ಕಾಯಿದೆ ಕಾಂಗ್ರೆಸ್ಸನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿತು. 2800ಕೋಟಿಗೂ ಮಿಗಿಲಾದ ಈ ಕಾರ್ಯಕ್ರಮ ಕೋಟ್ಯಂತರ ಗ್ರಾಮೀಣ ವಾಸಿಗಳಿಗೆ ಸಹಾಯಕವಾಗಬಹುದೆಂದು ಅಂದಾಜಿಸಲಾಗಿದೆ. ಈ ಜನಪರ ಕಾರ್ಯಕ್ರಮದ ಹೊರತಾಗಿಯೂ ಕಾಂಗ್ರೆಸ್ ಸೋಲುವ ಸಾಧ್ಯತೆಗಳಿತ್ತು. ಆ ಸೋಲುವ ಸಾಧ್ಯತೆಯನ್ನು ಗೆಲುವಾಗಿ ಪರಿವರ್ತಿಸುವಲ್ಲಿ ಲಾಲ್ ದುಹೋಮಾ ನೇತೃತ್ವದ ಝೋರಮ್ ನ್ಯಾಷಿನಲಿಸ್ಟ್ ಪಕ್ಷದ ಕೊಡುಗೆಯೂ ಅಧಿಕ. ಕಾಂಗ್ರೆಸ್ ವಿರೋಧಿ ಮತಗಳನ್ನು ವಿಭಜಿಸುವಷ್ಟಕ್ಕೆ ಸೀಮಿತವಾದ ಝೋರಮ್ ನ್ಯಾಷಿನಲಿಷ್ಟ್ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್ ಸೋಲು ಕಾಣುವುದಕ್ಕೆ ಕಾರಣವಾಯಿತಷ್ಟೇ. ನಲವತ್ತು ಸಂಖ್ಯೆಯ ವಿಧಾನಸಭೆಗೆ ಕಾಂಗ್ರೆಸ್ಸಿನ ಮೂವತ್ತಮೂರು ಸದಸ್ಯರು ಆಯ್ಕೆಗೊಂಡರೆ ಮಿಜೋ ನ್ಯಾಷನಲ್ ಫ್ರಂಟ್ ಮತ್ತದರ ಮಿತ್ರಪಕ್ಷಗಳು ಗಳಿಸಿದ್ದು ಏಳು ಸ್ಥಾನಗಳನ್ನು ಮಾತ್ರ. ಬಿಜೆಪಿಯ ಅಸ್ತಿತ್ವ ಮಿಜೋರಾಂನಲ್ಲಿಲ್ಲವೆಂಬ ಸಂಗತಿ ಕೆಲವೇ ಪಕ್ಷಗಳನ್ನು ರಾಷ್ಟ್ರೀಯವೆಂದು ಒಪ್ಪಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಮತ್ತೆ ಹುಟ್ಟುವಂತೆ ಮಾಡುತ್ತದೆ.

ಇನ್ನು ರಾಜಸ್ಥಾನದಲ್ಲಿ ಕಾಂಗ್ರೆಸ್ ಸಂಪೂರ್ಣ ಮೂಲೆಗುಂಪಾಗಿ ಹೋಗಿದೆಯೆಂದರೆ ತಪ್ಪಲ್ಲ. ಆಡಳಿತ ವಿರೋಧಿ ಅಲೆಯ ಹೊಡೆತದ ಪರಿಣಾಮವನ್ನು ನೋಡಬೇಕೆಂದರೆ ರಾಜಸ್ಥಾನದ ವಿಧಾನಸಭಾ ಫಲಿತಾಂಶವನ್ನು ಗಮನಿಸಬೇಕು. 199 ಸಾಮರ್ಥ್ಯದ ಬೃಹತ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಇಪ್ಪತ್ತೊಂದು ಸ್ಥಾನ ಪಡೆದಿದೆ; ಕಳೆದ ಬಾರಿ ಗೆದ್ದಿದ್ದ ಸ್ಥಾನಗಳಲ್ಲಿ ಎಪ್ಪತ್ತನಾಲ್ಕು ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ ಕಳೆದ ಬಾರಿ ಗೆದ್ದಿದ್ದಕ್ಕಿಂತ 84 ಕ್ಷೇತ್ರಗಳಲ್ಲಿ ಜಯಗಳಿಸಿ 162 ಸ್ಥಾನಗಳನ್ನು ಗೆದ್ದುಕೊಂಡಿದೆ. ಹೆಚ್ಚು ಕಡಿಮೆ ವಿರೋಧ ಪಕ್ಷದ ಅಸ್ತಿತ್ವವೇ ರಾಜಸ್ಥಾನದಲ್ಲಿ ಇಲ್ಲವೆನ್ನಬಹುದು. ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಅಶೋಕ್ ಗೆಹ್ಲೋಟ್ ಸರಕಾರದ ಸಾಲು ಸಾಲು ತಪ್ಪುಗಳನ್ನು ತನ್ನ ಮತಗಳನ್ನಾಗಿ ಪರಿವರ್ತಿಸಿಕೊಂಡಿದೆ. ಈ ಅಗಾಧ ಮಟ್ಟದ ಗೆಲುವನ್ನು ಪಡೆಯಲು ನರೇಂದ್ರ ಮೋದಿ ಅಲೆ ಕೂಡ ಕಾರಣವಾಗಿದೆ. 2003ರ ಚುನಾವಣೆಯಲ್ಲಿ ವಸುಂಧರಾ ರಾಜೆ ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2008ರ ಚುನಾವಣೆಯಲ್ಲಿ ಬಿಜೆಪಿ ಸೋಲಲು ದೇಶಾದ್ಯಂತ ಪ್ರಚುರಗೊಂಡ ಗುಜ್ಜಾರ್ ಚಳುವಳಿ ಪ್ರಮುಖ ಕಾರಣ. ಗುಜ್ಜಾರ್ ಸಮುದಾಯಕ್ಕೆ ಮೀಸಲು ನೀಡುವ ವಿಷಯ ಈ ಬಾರಿಯ ಚುನಾವಣೆಯಲ್ಲೂ ವಿವಿಧ ಪಕ್ಷಗಳ ಪ್ರಣಾಳಿಕೆಯ ಪ್ರಮುಖ ಅಂಶವಾಗಿತ್ತು. ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರದ ನಿಷ್ಕ್ರಿಯತೆ, ಭೃಷ್ಟಾಚಾರದಿಂದ ಬೇಸತ್ತಿದ್ದ ಜನತೆ ಬಿಜೆಪಿಗೆ ಮತ್ತು ವಸುಂಧರಾ ರಾಜೆಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಗೆಲುವು ಕಾಣುವುದು ನಿಶ್ಚಿತವಾಗಿದ್ದರೂ ನರೇಂದ್ರ ಮೋದಿಯ ಸಹಾಯದಿಂದ ಈ ಪ್ರಮಾಣದ ಗೆಲುವು ಸಿಕ್ಕಿದೆ ಎಂಬುದು ವಸುಂಧರ ರಾಜೆ ಅಭಿಮತ. 1993ರ ನಂತರದ ಚುನಾವಣೆಗಳಲ್ಲಿ ರಾಜಸ್ಥಾನದ ಮತದಾರ ಒಂದು ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನಂತರದ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಏನಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ.

ಇನ್ನು ದೇಶದ ರಾಜಧಾನಿ ದೆಹಲಿಯ ಚುನಾವಣೆ ಅನೇಕ ಕಾರಣಗಳಿಗೆ ಚರ್ಚೆಯ ವಿಷಯವಾಗಿತ್ತು, ದೇಶದ ಜನರ, ರಾಜಕೀಯ ವಿಶ್ಲೇಷಕರ, ಪ್ರಜಾಪ್ರಭುತ್ವದ ವಿಮರ್ಶಕರ ಗಮನ ಸೆಳೆದಿತ್ತು. ಕಾರಣ ಕೆಲವೇ ವರುಷಗಳ ಹಿಂದೆ ಜನಲೋಕಪಾಲ ಹೋರಾಟದ ಚುಕ್ಕಾಣಿ ಹಿಡಿದಿದ್ದ ಕೆಲವರು ಆ ಹೋರಾಟ ಮೂಡಿಸಿದ ಉತ್ಸಾಹದಿಂದ ಹೊಸತೊಂದು ರಾಜಕೀಯ ಪಕ್ಷ ಕಟ್ಟಿ ಚುನಾವಣೆಗೆ ಸಜ್ಜಾಗಿ ನಿಂತಿದ್ದರು. ಜನಲೋಕಪಾಲ ಹೋರಾಟ ಮತ್ತು ಜನಲೋಕಪಾಲದಲ್ಲಿದ್ದ ಕೆಲವು ಸರ್ವಾಧಿಕಾರ ಮನೋಧರ್ಮವನ್ನು ವಿರೋಧಿಸಿದವರಿಗೂ ಕೂಡ ಅರವಿಂದ್ ಕೇಜ್ರಿವಾಲ್ ನೇತೃತ್ವದ ‘ಆಮ್ ಆದ್ಮಿ’ ಪಕ್ಷ ದೆಹಲಿಯ ಚುನಾವಣೆಯಲ್ಲಿ ತರಬಹುದಾದ ಬದಲಾವಣೆಯ ಬಗ್ಗೆ ಕುತೂಹಲವಿತ್ತು. ಅರವಿಂದ್ ಕೇಜ್ರಿವಾಲರ ಹೆಸರನ್ನು ನಾನು ಮೊದಲು ಕೇಳಿದ್ದು ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ನಡೆಸುತ್ತಿದ್ದ ಸಮಯದಲ್ಲಿ. ಆಗಷ್ಟೇ ಅವರ ಪರಿವರ್ತನ ಸಂಸ್ಥೆಯ ಕಾರಣದಿಂದ ಮ್ಯಾಗ್ಸೆಸ್ಸೆ ಪ್ರಶಸ್ತಿ ಒಲಿದಿತ್ತು. ಮಾಹಿತಿ ಹಕ್ಕಿಗಾಗಿ ಹೋರಾಡಿದ ಮುಂಚೂಣಿಗರಲ್ಲಿ ಅರವಿಂದ ಕೇಜ್ರಿವಾಲರ ಹೆಸರು ಪ್ರಮುಖವಾದುದು. ನಂತರದ ದಿನಗಳಲ್ಲಿ ಅಣ್ಣಾ ಹಜಾರೆ ನೇತೃತ್ವದ ಜನಲೋಕಪಾಲ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅರವಿಂದ್ ಕೇಜ್ರಿವಾಲ ಭ್ರಷ್ಟಾಚಾರ ವಿರೋಧದ ಹೋರಾಟದಿಂದ ಸ್ಪೂರ್ತಿಗೊಂಡು ಭ್ರಷ್ಟಾಚಾರರಹಿತ ಆಡಳಿತ ನೀಡುವ ದೃಷ್ಟಿಯಿಂದ ಆಮ್ ಆದ್ಮಿ ಪಕ್ಷವನ್ನು ಕಟ್ಟಿದರು. ವೀಕೆಂಡ್ ಹೋರಾಟಗಾರರಿಂದ ಮಾಧ್ಯಮದಲ್ಲಿ ಮಿಂಚಿದ ಜನಲೋಕಪಾಲ ಹೋರಾಟ ಮಾಧ್ಯಮದವರ ನಿರ್ಲಕ್ಷ್ಯದೊಂದಿಗೆ ಕೊನೆಗೊಂಡುಬಿಟ್ಟಿತ್ತು. ಆ ಹೋರಾಟವನ್ನು ಗಮನಿಸಿದವರು ಆಮ್ ಆದ್ಮಿ ಪಕ್ಷದ ರಾಜಕೀಯ ಯಶಸ್ಸಿನ ಬಗ್ಗೆ ಹೆಚ್ಚೇನೂ ಉತ್ಸುಕರಾಗಿರಲಿಲ್ಲ. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ನಮ್ಮ ಗುರಿ ಎಂಬ ಉದ್ದೇಶದ ಪಕ್ಷ ‘ಕಸ ಪೊರಕೆ’ಯನ್ನು ತನ್ನ ಗುರುತನ್ನಾಗಿ ಮಾಡಿಕೊಂಡಿತು. ದೇಶದ ಮುಖ್ಯನಗರಗಳೆಡೆಗೆ ತಮ್ಮ ಗಮನವಿರಿಸಿದ ಈ ಪಕ್ಷ ದೆಹಲಿಯ ವಿಧಾನಸಭಾ ಚುನಾವಣೆಯನ್ನು ತನ್ನ ಮೊದಲ ಪರೀಕ್ಷೆಯಾಗಿ ತೆಗೆದುಕೊಂಡಿತು. ಮೊದಲ ಪಕ್ಷದ ಮೊದಲ ಚುನಾವಣೆಯಲ್ಲಿ ಸೋಲೇ ಅಧಿಕವೆಂಬ ಭಾವನೆ ಆಮ್ ಆದ್ಮಿ ಪಕ್ಷದ ಕರ್ನಾಟಕದ ಕಾರ್ಯಕರ್ತರಲ್ಲೂ ಇತ್ತು. ಎಲ್ಲರ ನಿರೀಕ್ಷೆಯನ್ನೂ ಹುಸಿಗೊಳಿಸಿ 70 ವಿಧಾನಸಭಾ ಸಾಮರ್ಥ್ಯದ ದೆಹಲಿಯಲ್ಲಿ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. 32 ಸ್ಥಾನ ಗಳಿಸಿದ ಡಾ. ಹರ್ಷವರ್ಧನ್ ನೇತೃತ್ವದ ಬಿಜೆಪಿ ಮೊದಲ ಸ್ಥಾನ ಗಳಿಸಿದರೆ, ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರಕಾರ ಆಮ್ ಆದ್ಮಿಯ ಅಬ್ಬರದಲ್ಲಿ ಕೇವಲ ಎಂಟು ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲು ಶಕ್ತವಾಯಿತು. ಸ್ವತಃ ಶೀಲಾ ದೀಕ್ಷಿತ್ ಅರವಿಂದ ಕೇಜ್ರಿವಾಲರ ಎದುರು 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದರು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಡಾ. ಹರ್ಷವರ್ಧನ್ ಹಿಂದೆ ಆರೋಗ್ಯ ಸಚಿವರಾಗಿದ್ದಾಗ ಪರಿಚಯಿಸಿದ ‘ಪೋಲಿಯೋ ಮುಕ್ತ ಸಮಾಜ’ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿತ್ತು. ಒಮ್ಮೆಯೂ ಸೋಲು ಕಾಣದ ಡಾ. ಹರ್ಷವರ್ಧನ್ ಈ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಅಲೆಯನ್ನು ಉಪಯೋಗಿಸಿಕೊಂಡು ಅಧಿಕಾರವಹಿಸಿಕೊಂಡೇ ಬಿಡುತ್ತಿದ್ದರೇನೋ ಆದರೆ ಆಮ್ ಆದ್ಮಿ ಪಕ್ಷದ ಕಾರಣ ಮೊದಲ ಸ್ಥಾನದಲ್ಲಿದ್ದರೂ ಬಹುಮತ ಗಳಿಸಿಕೊಳ್ಳಲಾಗದೇ ಹೋಗಿದೆ. ಆಮ್ ಆದ್ಮಿ ಪಕ್ಷ ಗೆಲ್ಲುವುದಿಲ್ಲ ಎಂದುಕೊಂಡು ಬಿಜೆಪಿಗೆ ಮತ ಹಾಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುವವರೂ ಇದ್ದಾರೆ! ಆಮ್ ಆದ್ಮಿ ಪಕ್ಷ ಯಾರಿಗೂ ಬೆಂಬಲ ನೀಡುವುದಿಲ್ಲ ಯಾರ ಬೆಂಬಲವನ್ನೂ ಪಡೆಯುವುದಿಲ್ಲ ಎಂದಿದ್ದರೆ ಮೊದಲ ಸ್ಥಾನದಲ್ಲಿರುವ ಬಿಜೆಪಿ ಕೂಡ ಸರಕಾರ ರಚಿಸಲು ಆಸಕ್ತಿ ತೋರುತ್ತಿಲ್ಲ. ಮಗದೊಮ್ಮೆ ಚುನಾವಣೆ ನಡೆದರೆ ನಮಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಗಳು ಅಧಿಕವಾಗಿರುವಾಗ ಆ ಬಲದಲ್ಲಿ ಪೂರ್ಣ ಬಹುಮತ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇರುವುದರಿಂದ ಸದ್ಯಕ್ಕೆ ದೆಹಲಿ ಅತಂತ್ರ.

ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕೆಲವೆಡೆ ಎಂದಿನಂತೆ ಭ್ರಷ್ಟರ, ಅಪರಾಧಿಗಳ ರಾಜಕಾರಣ ನಡೆದು ಹಣದಿಂದ ಮತ ಕೊಳ್ಳುವ ಪರಂಪರೆ ಮುಂದುವರೆದಿದ್ದರೆ ದಿನೇದಿನೇ ಅನೇಕ ಕಾರಣಗಳಿಂದ ನಿಶ್ಯಕ್ತಗೊಳ್ಳುತ್ತಿರುವ ಪ್ರಜಾಪ್ರಭುತ್ವ ಆಮ್ ಆದ್ಮಿ ಪಕ್ಷದ ಗೆಲುವಿನಿಂದ ಒಂದಷ್ಟು ಶಕ್ತಗೊಳ್ಳುವಂತಾಗಿದೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅನೇಕ ಬಾರಿ ಹೊಸತೊಂದು ಭರವಸೆ ಮೂಡಿಸಿ ಪಡಿಮೂಡಿದ ಅನೇಕ ಹೋರಾಟಗಳಿವೆ, ರಾಜಕೀಯ ಪಕ್ಷಗಳಿವೆ. ಅಧಿಕಾರಕ್ಕೆ ಬರುವವರೆಗೆ ತಮ್ಮ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿಯೇ ಇರುವ ಈ ಪಕ್ಷಗಳು ಅಧಿಕಾರ ಹಿಡಿದ ನಂತರದಲ್ಲಿ ಉಳಿದ ರಾಜಕೀಯ ಪಕ್ಷಗಳಂತೆಯೇ ಆಗಿಹೋಗುವುದು ದುರಂತ. ಆಮ್ ಆದ್ಮಿ ಪಕ್ಷದ ತನ್ನ ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದ್ದರೂ ಮುಂದಿನ ದಿನಗಳಲ್ಲಿ ಅದರ ರೀತಿರಿವಾಜುಗಳು ಆ ಪಕ್ಷದ ತಳಹದಿಯನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದ ಹಳೆಯ ಪಕ್ಷ ಕಾಂಗ್ರೆಸ್ಸಾದ ಕಾರಣ ಬಹಳಷ್ಟು ರಾಜಕೀಯ ಹೋರಾಟಗಳು ರೂಪುಗೊಂಡಿದ್ದು ಕಾಂಗ್ರೆಸ್ ವಿರೋಧವಾಗಿಯೇ. ಪ್ರತಿ ಬಾರಿಯೂ ಇನ್ನು ಕಾಂಗ್ರೆಸ್ ಬರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಭಾವನೆ ಮೂಡುತ್ತದೆ, ಕಾಂಗ್ರೆಸ್ ಹೀನಾಮಾನವಾಗಿ ಸೋಲನ್ನಪ್ಪಿರುತ್ತದೆ ಮತ್ತು ಪ್ರತಿಬಾರಿಯೂ ಭರವಸೆ ಮೂಡಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಪಕ್ಷ ಕಾಂಗ್ರೆಸ್ಸಿಗಿಂತಲೂ ಕೆಟ್ಟ ಆಡಳಿತ ನೀಡಿ ಮತ್ತೆ ಕಾಂಗ್ರೆಸ್ ಗೆಲುವಿನ ನಗೆ ಬೀರುವುದಕ್ಕೆ ಸಹಾಯ ಮಾಡುತ್ತವೆ. ಜೆಪಿ ಚಳುವಳಿ, ಭಾರತೀಯ ಜನತಾ ಪಕ್ಷದ ಗೆಲುವುಗಳೆಲ್ಲ ನಂತರದ ದಿನಗಳಲ್ಲಿ ಕಾಂಗ್ರೆಸ್ಸಿಗರಿಗೂ ಇತರರಿಗೂ ವ್ಯತ್ಯಾಸವಿಲ್ಲ ಎಂಬುದನ್ನೇ ತಿಳಿಸಿದೆ. ಹತ್ತು ವರುಷದ ದುರಾಡಳಿತದ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಬರಬೇಕೆಂದು ಯಾರೂ ಬಯಸುತ್ತಿರಲಿಲ್ಲವೇನೋ, ಆದರೆ ಬಿಜೆಪಿಯ ನರೇಂದ್ರ ಮೋದಿಯ ಕಾರಣದಿಂದ ‘ಹೋಗ್ಲಿ ಬಿಡಿ ಹಾಳಾದ್ದು ಕಾಂಗ್ರೆಸ್ಸೇ ಬರಲಿ’ ಎನ್ನುವವರ ಸಂಖೈಯೂ ಹೆಚ್ಚುತ್ತಿದೆ. ಆದರೆ ಆಡಳಿತ ವಿರೋಧಿ ಅಲೆ ಅತಿ ತೀಕ್ಷ್ಣವಾಗಿರುವ ಕಾರಣ ಕಾಂಗ್ರೆಸ್ ಮತ್ತೊಮ್ಮೆ ಲೋಕಸಭೆಯಲ್ಲಿ ಅಧಿಕಾರವಿಡಿಯುವುದು ಕಷ್ಟ. ಇವತ್ತಿನ ವಿಧಾನಸಭೆ ಫಲಿತಾಂಶ ಲೋಕಸಭೆ ಫಲಿತಾಂಶದ ಮೇಲೆ ಪ್ರಭಾವ ಬೀರುವುದು ಸತ್ಯವಾದರೂ ಬಿಜೆಪಿ ಸಂಪೂರ್ಣ ಬಹುಮತ ಪಡೆದು ಮೋದಿ ಪ್ರಧಾನಿ ಆಗಿಯೇ ಬಿಡುತ್ತಾರೆ ಎಂಬಂತೆ ವರ್ತಿಸುವುದು ದಕ್ಷಿಣದ ರಾಜ್ಯಗಳು ಮತ್ತು ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿದ ಪ್ರಾದೇಶಕ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯಗಳ ಮತದಾರರನ್ನು ಅವಮಾನಿಸಿದಂತೆ.

ಪ್ರಜಾಸಮರಕ್ಕೆ ಬರೆದ ಲೇಖನ
ಚಿತ್ರ ಮೂಲ  - ರಾಯಿಟರ್ಸ್

No comments:

Post a Comment