Nov 8, 2013

ಅತ್ಯಾತುರದ ಬದುಕಿನಲ್ಲಿ ಚಿಂತನೆಗಳ ಅಬಾರ್ಷನ್!ಡಾ ಅಶೋಕ್ ಕೆ ಆರ್.
‘ನಮ್ಮೂರ ತಿಂಡಿ’ ಎದುರಿಗಿನ ಅಂಡರ್ ಪಾಸ್. ಸಮಯ ರಾತ್ರಿ ಎಂಟು ಘಂಟೆ. ಗೆಳೆಯನೊಬ್ಬನನ್ನು ನೋಡಲು ಬೈಕಿನಲ್ಲಿ ಹೋಗುತ್ತಿದ್ದೆ. ಅಂಡರ್ ಪಾಸ್ ಕೆಳಗಿನ ಜಂಕ್ಷನ್ನಿನಲ್ಲಿ ಎಡಬದಿಯಿಂದೊಂದು ಆಟೋ ಬರುತ್ತಿತ್ತು. ಬೈಕ್ ನಿಧಾನಿಸಿದೆ. ಆಟೋ ರಸ್ತೆಯ ಮಧ್ಯೆ ಬಂದು ಮುಂದೆ ಹೋಗದೆ ನಿಂತುಬಿಟ್ಟಿತು. ‘ಥೂ ಈ ಆಟೋದವ್ರು...’ ಎಂದು ಮನದಲ್ಲೇ ಬಯ್ದುಕೊಂಡು ಹಾರ್ನ್ ಒತ್ತಿದೆ. ಪೀಕ್ ಅವರ್ರಿನ ಟ್ರಾಫಿಕ್ಕಿನಲ್ಲಿ ಮನೆಗೆ ಹೋಗಲವಣಿಸುತ್ತಿದ್ದ ನನ್ನ ಜೊತೆಯಿದ್ದ ಇತರೆ ವಾಹನದವರೂ ಹಾರ್ನ್ ಒತ್ತುವುದರಲ್ಲಿ ಹಿಂದೆ ಬೀಳಲಿಲ್ಲ. ಎರಡು ನಿಮಿಷದ ಸತತ ಹಾರ್ನ್ ಹಾವಳಿಯ ನಂತರ ಆಟೋ ನಿಧಾನಕ್ಕೆ ಮುಂದೆ ಸಾಗಿತು. ಆಟೋ ದಾಟಿ ಹೋಗುತ್ತಿದ್ದವನಿಗೆ ನಾಚಿಕೆಯಾಯಿತು.
ಗೆಳೆಯನ ಬಳಿ ಹೋದಾಗ ಅವನಿಗೂ ಆ ಸನ್ನಿವೇಶ ವಿವರಿಸಿ ಆ ರೀತಿಯೊಂದು ಆಟೋ ಅಡ್ಡ ಬಂದರೆ ಏನು ಮಾಡುತ್ತೀಯ? ಎಂದೆ. ‘ಸರಿ ಬಯ್ತೀನಿ’ ಅಂದ. ಆಟೋ ನಿಂತಿದ್ದಕ್ಕೆ ನಿಜ ಕಾರಣ ಆಟೋ ಕೆಟ್ಟು ಹೋಗಿತ್ತು! ಡ್ರೈವರ್ ಕೆಳಗಿಳಿದು ಆಟೋ ತಳ್ಳಿ ಮುಂದೆ ಸಾಗಿದ........ ಈ ಬೆಂಗಳೂರಿಗೆ ಬರುವ ಮುಂಚೆ ಇದ್ದಿದ್ದು ಜಾಗತೀಕರಣದ ಪರಿಭಾಷೆಯಲ್ಲಿ ಅಭಿವೃದ್ಧಿ ಕಾಣದ ಊರುಗಳಲ್ಲಿ(ಈಗ ಆ ಊರುಗಳೂ ‘ಅಭಿವೃದ್ಧಿ’ ಕಾಣುತ್ತಿದೆ ಬಿಡಿ). ಯಾವುದೋ ಗಾಡಿ ದಾರಿಯಲ್ಲಿ ನಿಂತರೆ ‘ಏನಾಯ್ತು ಏನಾಯ್ತು?’ ಎಂದು ಕೇಳುತ್ತಿದ್ದೆ. ಹಳ್ಳಿಯ ದಾರಿಯಲ್ಲೆಲ್ಲೋ ಪಕ್ಷಿಯೊಂದು ಕಂಡು ಫೋಟೋ ತೆಗೆಯಲೆಂದು ಗಾಡಿ ನಿಲ್ಲಿಸಿದರೆ ಗಾಡಿ ಕೆಟ್ಟುಹೋಗಿದೆಯೇನೋ ಎಂದು ವಿಚಾರಿಸುವವರು ಬಹಳಷ್ಟು ಜನರಿರುತ್ತಿದ್ದರು. ಆದರೆ ಈ ನಗರಕ್ಕೆ ಬಂದು ಏನಾಗಿಹೋಗಿದೆ ಮನಸ್ಸು? ಆಟೋವೊಂದು ದಾರಿಯಲ್ಲಿ ನಿಂತರೆ ಅವನು ಬೇಕಂತಲೇ ಅಡ್ಡಿಯಾಗುತ್ತಿದ್ದಾನೆ ಎಂಬ ಯೋಚನೆ ಬರುತ್ತದೆಯೇ ಹೊರತು ಗಾಡಿಗೋ ಅವನಿಗೋ ಏನೋ ತೊಂದರೆಯಾಗಿರಬಹುದು ಎಂಬ ಆಲೋಚನೆಯೇ ಬರುವುದಿಲ್ಲವಲ್ಲ ಯಾಕೆ?

ಮೋದಿಯ ಪರ – ವಿರೋಧದ ಚರ್ಚೆ ಮಾಡುವವರು ಉಪಯೋಗಿಸುವ ಭಾಷೆ, ತೀರ ಇತ್ತೀಚೆಗೆ ಅನಂತಮೂರ್ತಿಯವರ ಅವಸರದ ಹೇಳಿಕೆಯ ಬಗ್ಗೆ ನಡೆದ ಚರ್ಚೆ ಮತ್ತು ಮೊನ್ನೆಯಿಂದ ಮೂಢನಂಬಿಕೆ ವಿರೋಧಿ ಮಸೂದೆಯ ಪರ – ವಿರೋಧದ ಚರ್ಚೆ ಸಾಗುತ್ತಿರುವ ರೀತಿ ನೋಡಿದಾಗ ಮೇಲಿನ ಘಟನೆ ನೆನಪಾಯಿತು. ಒಂದು ಘಟನೆ ಅಥವಾ ಸಂಗತಿಯ ಬಗ್ಗೆ ಕೊನೇಪಕ್ಷ ಸ್ವಲ್ಪ ಆಳವಾಗಿಯಾದರೂ ಯೋಚಿಸದೆ ಆ ಕ್ಷಣ ಮನಸ್ಸಿಗೆ ಥಟ್ಟಂತ ಹೊಳೆದ ಸಂಗತಿಗೇ ‘ಚಿಂತನೆ’ಯ ಸ್ವರೂಪ ನೀಡಿ ಸಾಮಾಜಿಕ ತಾಣಗಳಲ್ಲಿ ಕಾರಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಈ ರೀತಿಯ ಪ್ರವೃತ್ತಿಗೆ ನಗರೀಕರಣ ಜಾಗತೀಕರಣ ಎಷ್ಟರ ಮಟ್ಟಿಗಿನ ಪ್ರೋತ್ಸಾಹ ನೀಡುತ್ತಿದೆ ಎಂಬುದು ಅಧ್ಯಯನ ಮಾಡಬೇಕಾದ ವಿಷಯ. ‘ನನ್ನ ಪೆನ್ಸಿಲ್ ಎತ್ಕೋತೀಯ ನೀನು’ ಎಂದು ಗುದ್ದಾಡುವ ಮಕ್ಕಳ ಮನಸ್ಥಿತಿ ಇವತ್ತಿನ ಚರ್ಚೆಗಳಲ್ಲೂ ಕಾಣಬಹುದು. ಕೊನೆ ಪಕ್ಷ ಕಿತ್ತಾಡಿಕೊಂಡ ಮಕ್ಕಳು ಸ್ವಲ್ಪ ಸಮಯದ ನಂತರ ತಮ್ಮ ತಪ್ಪು ಅರಿವಾಗಿಯೋ ಅದ್ಯಾವ ದೊಡ್ಡ ವಿಷಯ ಬಿಡಪ್ಪ ಎಂಬ ಭಾವನೆಯಿಂದಲೋ ‘ಸ್ಸಾರಿ’ ಕೇಳುತ್ತಾರೆ. ಆ ಮಕ್ಕಳಿಗಿರುವ ಭೌದ್ಧಿಕ ಮೇಲ್ಮೆ ಕೂಡ ಈ ಸಾಮಾಜಿಕ ತಾಣಗಳಲ್ಲಿ ಕಾಣದಿರುವುದು ದುರಂತ. ಚಿಂತನೆ ಗರ್ಭ ಸೇರಿ ಬೆಳೆದು ಒಂದು ತಾತ್ವಿಕ ವೈಚಾರಿಕ ರೂಪ ಪಡೆಯಬೇಕು, ಆದರಿವತ್ತಿನ ಬಹುತೇಕರ ‘ಚಿಂತನೆಗಳು’ ಚಿಂತನೆಗಳ ಅಬಾರ್ಷನ್ ಅಷ್ಟೇ......

ಈ ಸಂಗತಿಗಳೆಲ್ಲ ಕಾಡಿ ಯಾವ ಸುಖಕ್ಕೋಸ್ಕರ ಏನನ್ನಾದರೂ ಬರೆಯಬೇಕು ನಾನು ಎನ್ನಿಸುವುದೂ ಸುಳ್ಳಲ್ಲ. ಬೆಂಗಳೂರು ಕೆಲಮಟ್ಟಿಗೆ ನನ್ನ ಬರವಣಿಗೆಯ ವೇಗವನ್ನು ಕುಂಠಿತಗೊಳಿಸಿದ್ದು ನಿಜವಾದರೂ ಅಬಾರ್ಷನ್ ಆಗುತ್ತಿರುವ ಚಿಂತನೆಗಳನ್ನು ನೋಡಿ ನೋಡಿಯೇ ಬರೆಯುವುದರ ಬಗ್ಗೆಯೇ ಬೇಸರ ಮೂಡಿದ್ದು. ಹದಿನೈದು ದಿನಕ್ಕೊಮ್ಮೆ ಫೋನು ಮಾಡಿ ‘ಹಲೋ ಅಶೋಕ್ ಅವ್ರೇ ಈ ಸಂಚಿಕೆಗೆ ಯಾವುದರ ಬಗ್ಗೆ ಆರ್ಟಿಕಲ್ ಮಾಡೋಣ’ ಎಂದು ಕೇಳುವ ‘ಪ್ರಜಾಸಮರ’ ಪಾಕ್ಷಿಕದ ಲಿಂಗರಾಜು; ಫೋನ್ ಮಾಡಿದಾಗ, ಸಿಕ್ಕಾಗ ‘ಏನ್ರೀ ಡಾಕ್ಟ್ರೇ ಬರೆಯೋದೆ ನಿಲ್ಲಿಸಿಬಿಟ್ರಲ್ರೀ? ಬರೀರಿ ರೆಗ್ಯುಲರ್ರಾಗಿ’ ಎಂದು ಪ್ರೀತಿಯಿಂದ ಬಯ್ಯುವ ರವಿಕೃಷ್ಣರೆಡ್ಡಿ; ತಮ್ಮ ವಿಭಿನ್ನ ವಿಶಿಷ್ಟ ಸಮಾಜಮುಖಿ ಬರಹಗಳಿಂದ ಉತ್ಸಾಹ ಮೂಡಿಸುವ ಜಗದೀಶ್ ಕೊಪ್ಪ – ಇವರೆಲ್ಲ ಇರದಿದ್ದರೆ ಲೇಖನಿಗೆ ಪೂರ್ಣ ವಿರಾಮ ನೀಡಿಬಿಡುತ್ತಿದ್ದನೋ ಏನೋ.....ವ್ಯಂಗ್ಯವನ್ನೇ ಯೋಚನೆಗಳನ್ನಾಗಿ ಅಪರಿಪೂರ್ಣ ಯೋಚನೆಗಳನ್ನೇ ಸಮಾಜದ ದಿಕ್ಕು ಬದಲಿಸುವ ಚಿಂತನೆಗಳನ್ನಾಗಿ ಬಿಂಬಿಸುವವರು ತಮ್ಮ ಪರಿಧಿಯೊಳಗೇ ಸುಖಪಡುತ್ತಾ ಇರಲಿ ಅದೂ ಇದೂ ಓದುತ್ತ ಓಡಾಡುತ್ತ ಮಧ್ಯೆ ಮಧ್ಯೆ ನಿಧಾನವಾಗಿಯಾದರೂ ಬರೆಯುತ್ತ ಬರೆಯುವುದರ ಮೂಲಕ ತೃಣಮಾತ್ರದ ಬುದ್ಧಿಯಾದರೂ ನನಗೆ ದೊರೆಯಲಿ ಎಂಬುದಷ್ಟೇ ನನ್ನ ಸದ್ಯದ ಆಶಯ.

No comments:

Post a Comment