Nov 3, 2013

ವೈದ್ಯಕೀಯ ನಿರ್ಲಕ್ಷ್ಯ ಮತ್ತು ಕೋರ್ಟ್ ತೀರ್ಪಿನ ಸುತ್ತಮುತ್ತ

medical-malpractice
ಡಾ ಅಶೋಕ್ ಕೆ ಆರ್ 

ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಅಬ್ಬಬ್ಬಾ ಎನ್ನಿಸುವ 6 ಕೋಟಿ ಪರಿಹಾರ ಘೋಷಿಸಿದೆ. ಪ್ರಕರಣ ದಾಖಲಾದ ದಿನದಿಂದ ಬಡ್ಡಿಯನ್ನೂ ಸೇರಿಸಿ ಕೊಡಬೇಕಿರುವುದರಿಂದ ಈ ಪರಿಹಾರದ ಮೊತ್ತ ಹನ್ನೊಂದು ಕೋಟಿಯನ್ನು ದಾಟಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಹದಿನೈದು ವರುಷಗಳ ಹಿಂದೆ ಮರಣಹೊಂದಿದ ಡಾ.ಅನುರಾಧಾ ಸಹಾರ ಪತಿ ಡಾ.ಕುನಾಲ್ ಸಹಾ ನಡೆಸಿದ ದೀರ್ಘ ಹೋರಾಟಕ್ಕೆ ಜಯ ಸಂದಿದೆ.
ತಪ್ಪು ಮಾಡಿದ ವೈದ್ಯರಿಂದ ಲಕ್ಷಗಳ ಲೆಕ್ಕದಲ್ಲಿ ಮತ್ತು ಆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದ ಕೋಲ್ಕತ್ತಾದ ಎ.ಎಮ್.ಆರ್.ಐ ಆಸ್ಪತ್ರೆ (ಇದೇ ಗುಂಪಿನ ಆಸ್ಪತ್ರೆಗೆ ಇತ್ತೀಚೆಗೆ ಬೆಂಕಿ ಬಿದ್ದು ತೊಂಬತ್ತು ರೋಗಿಗಳು ಅಸುನೀಗಿದ್ದರು) ಕೋಟಿಗಳ ಲೆಕ್ಕದಲ್ಲಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ದಿನವಹಿ ನಡೆಯುವ ನೂರಾರು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಅಪರೂಪಕ್ಕೆ ಒಂದರಲ್ಲಿ ಪರಿಹಾರ ಘೋಷಣೆಯಾಗಿದೆ. ಆದರೀ ಪ್ರಕರಣದಲ್ಲಿ ಗಮನಿಸಬೇಕಾದದ್ದೆಂದರೆ ಪರಿಹಾರಕ್ಕಾಗಿ ಕೋರ್ಟಿನ ಮೊರೆಹೊಕ್ಕವರೂ ಕೂಡ ವೈದ್ಯರೇ ಆಗಿರುವುದು. ತನ್ನ ಪತ್ನಿಗೆ ಯಾವ ರೀತಿ ತಪ್ಪು ಚಿಕಿತ್ಸೆಯನ್ನು ನೀಡಲಾಯಿತು ಎಂಬುದನ್ನು ಅರಿಯಲು ತಾವು ಕೂಡ ವೈದ್ಯರಾಗಿದ್ದು ಅವರಿಗೆ ಅನುಕೂಲವಾಯಿತು. ಕೊಟ್ಟಿರುವುದು ತಪ್ಪು ಚಿಕಿತ್ಸೆಯೋ ಅಲ್ಲವೋ ಎಂಬುದನ್ನು ಅರಿಯಲಾಗದ ಜನಸಾಮಾನ್ಯರ ಪಾಡೇನು?

ವೈದ್ಯಕೀಯ ನಿರ್ಲಕ್ಷ್ಯವೆಂಬುದು ಭಾರತದಲ್ಲಿ ಸರ್ವೇ ಸಾಮಾನ್ಯವೆಂಬಂತೆ ನಡೆಯುತ್ತದೆ. ಬಹುತೇಕ ಪ್ರಕರಣಗಳಲ್ಲಿ ನಿರ್ಲಕ್ಷ್ಯ ನಡೆದಿರುವ ಕುರುಹೂ ಕೂಡ ರೋಗಿ ಮತ್ತವರ ಸಂಬಂಧಿಕರಿಗಿರುವುದಿಲ್ಲ. ವೈದ್ಯರ ಅಜಾಗರೂಕ ಮನೋಭಾವ, ಎಲ್ಲವೂ ನನಗೇ ಗೊತ್ತು ಎಂಬ ಅತಿಯಾದ ಆತ್ಮವಿಶ್ವಾಸ, ಮತ್ತು ಬಹಳಷ್ಟು ಸಲ ರೋಗಿಗೆ ಕೊಡುತ್ತಿರುವ ಔಷಧಿಯ ಬಗ್ಗೆ ಸ್ವತಃ ವೈದ್ಯರಿಗೇ ಸರಿಯಾದ ತಿಳುವಳಿಕೆ ಇರದಿರುವುದು ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣ. ಇಂಥಹುದೊಂದು ನಿರ್ಲಕ್ಷ್ಯ ಮನೋಭಾವ ಎಲ್ಲ ವೃತ್ತಿಯಲ್ಲಿರುವವರಲ್ಲಿಯೂ ಇರುತ್ತದಾದರೂ ವೈದ್ಯಕೀಯ ವೃತ್ತಿ ಒರ್ವ ವ್ಯಕ್ತಿಯ ಜೀವದ ಜೊತೆಗೆ ಸಂವಹನ ನಡೆಸುವುದರಿಂದ ಚಿಕ್ಕದೊಂದು ತಪ್ಪೂ ಪ್ರಾಣಹರಣಕ್ಕೆ ಕಾರಣವಾಗಿಬಿಡಬಹುದು. ವೈದ್ಯರೂ ಕೂಡ ಮನುಷ್ಯಜಾತಿಗೇ ಸೇರಿರುವುದರಿಂದ ವೈಯಕ್ತಿಕ ತೊಂದರೆಗಳು, ಅವರ ಮನಸ್ಥಿತಿ, ಕೊಡುತ್ತಿರುವ ಚಿಕಿತ್ಸೆಯ ಬಗೆಗಿನ ಅಜ್ಞಾನ ಅವರ ಕೆಲಸದ ಮೇಲೂ ಪರಿಣಾಮ ಬೀರಿ ತಪ್ಪು ಚಿಕಿತ್ಸೆಯನ್ನು ನೀಡುವಂತೆ ಮಾಡಿಬಿಡಬಹುದು. ಗೊತ್ತಿಲ್ಲದೆ ಮಾಡಿಬಿಡುವ ತಪ್ಪಿನಿಂದ ರೋಗಿಯ ಪ್ರಾಣಹರಣವಾಗಿಬಿಟ್ಟಲ್ಲಿ ಕೋರ್ಟಿನಿಂದ ರೋಗಿಯ ಸಂಬಂಧಿಗಳಿಗೆ ಪರಿಹಾರ ದೊರಕಬಹುದು ಆದರೆ ವೈದ್ಯರ ಎಲ್ಲ ತಪ್ಪುಗಳೂ ಅವರಿಗೆ ಗೊತ್ತಿಲ್ಲದಂತೆಯೇ ನಡೆದುಬಿಡುತ್ತವೆಯೇ?
ಯಾವಾಗ ಶಿಕ್ಷಣವೆಂಬುದು ಸರಕಾರದ ಹತೋಟಿ ಮೀರಿ ಖಾಸಗೀಕೊರಣಗೊಂಡು ಮತ್ತದಕ್ಕಿಂತ ಹೆಚ್ಚಾಗಿ ವ್ಯಾಪಾರೀಕರಣಗೊಂಡಿತೋ ವೈದ್ಯವೃತ್ತಿ ಕೂಡ ಸೇವಾವಲಯದಿಂದ ಹೊರಬಂದು ಉದ್ಯಮವಲಯಕ್ಕೆ ಸೇರಿಬಿಟ್ಟಿತು. ಇವತ್ತು ವೈದ್ಯ ವೃತ್ತಿಯೆಂಬುದು ಪಕ್ಕಾ ಬ್ಯುಸಿನೆಸ್. “ನಾನಿಷ್ಟು ಹಣ ಹೂಡಿಕೆ ಮಾಡಿದ್ದೀನಿ, ಇದು ನನ್ನ ಬಂಡವಾಳ, ತಿಂಗಳಿಗೆ ಇಷ್ಟು ಲಕ್ಷದ ಖರ್ಚಿದೆ ಆಸ್ಪತ್ರೆ ಸಾಗಿಸಲು, ಹಾಗಾಗಿ ನನಗೆ ದಿನಕ್ಕಿಷ್ಟು ಬ್ಯುಸಿನೆಸ್ ನಡೆಯಬೇಕು” ಇದು ಇಂದಿನ ಬಹುತೇಕ ಖಾಸಗಿ ಆಸ್ಪತ್ರೆಯ ಮೀಟಿಂಗುಗಳಲ್ಲಿ ಕೇಳಿ ಬರುವ ಮಾತು! ಮುಂಚಿನಿಂದಲೂ ವೈದ್ಯಕೀಯ ವೃತ್ತಿಯಲ್ಲಿ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದವಾದರೂ ಅದಕ್ಕೊಂದು ಉದ್ಯಮದ ರೂಪ ಬಂದಿದ್ದು ಕಾರ್ಪೋರೇಟ್ ಉದ್ಯಮ ಆಸ್ಪತ್ರೆಗಳಲ್ಲಿ ಬಂಡವಾಳ ಹೂಡಲಾರಂಭಿಸಿ ದೊಡ್ಡ ಮತ್ತು ಸಣ್ಣ ಊರುಗಳಲ್ಲಿ ಸರಣಿ ಆಸ್ಪತ್ರೆಗಳನ್ನು ತೆರೆಯಲಾರಂಭಿಸಿದ ಮೇಲೆ. ಹಳೆಯ ಸರಕಾರಿ ಹಾಗೂ ಖಾಸಗೀ ಆಸ್ಪತ್ರೆಗಳ ಒಳಗೆ ಹೋಗುತ್ತಿದ್ದಂತೆ ಬರುತ್ತಿದ್ದ ‘ಆಸ್ಪತ್ರೆ’ ವಾಸನೆ ಈ ನವ ಉದ್ಯಮದ ಆಸ್ಪತ್ರೆಗಳಲ್ಲಿಲ್ಲ! ಹವಾನಿಯಂತ್ರಿತ ಕಟ್ಟಡ, ಮೇಲ್ನೋಟಕ್ಕೆ ಅಚ್ಚುಕಟ್ಟು ವ್ಯವಸ್ಥೆ, ಅತ್ಯಾಧುನಿಕ ಸೌಲಭ್ಯವಿರುವ ಈ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಧಿಸುವ ವೆಚ್ಚವೂ ಅಧಿಕ. ನಾವು ಕೊಡುವ ಸೇವೆಗೆ ಈ ವೆಚ್ಚ ಕಡಿಮೆಯೆಂಬುದು ಆಸ್ಪತ್ರೆಯವರ ಅನಿಸಿಕೆ. ರೋಗಿಗಳಿಗೆ ತಿಳಿಯದ, ಹೊರಪ್ರಪಂಚಕ್ಕೆ ಗೊತ್ತಾಗದ ಅತಿ ಹೆಚ್ಚು ವೈದ್ಯಕೀಯ ನಿರ್ಲಕ್ಷ್ಯ ನಡೆಯುವುದು ಇಂತಹ ಆಸ್ಪತ್ರೆಗಳಲ್ಲೇ. ಹಳೆಯ ಸರಕಾರಿ – ಹಳೆಯ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸೀಮಿತ ಸೌಕರ್ಯಗಳಲ್ಲೇ ಚಿಕಿತ್ಸೆ ನೀಡಬೇಕಾದ ಕರ್ಮ. ಒಂದಿದ್ದರೆ ಹಲವಿಲ್ಲ ಎಂಬ ಪರಿಸ್ಥಿತಿ. ಮೇಲಾಗಿ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯೂ ಇದ್ದು ತಮಗಿರುವ ಜ್ಞಾನದಲ್ಲೇ ಎಲ್ಲ ರೋಗಗಳಿಗೂ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯೂ ಇದೆ. ನಗರಗಳ ಝಗಮಗಿಸುವ ಆಸ್ಪತ್ರೆಗಳಲ್ಲಿ ಈ ಯಾವ ಕೊರತೆಯೂ ಇರುವುದಿಲ್ಲ, ಉನ್ನತಾನಿಉನ್ನತ ಶಿಕ್ಷಣ ಪಡೆದಿರುವ ತಜ್ಞರ ಉಪಸ್ಥಿತಿಯಲ್ಲೂ ಇಂಥ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ನಡೆದುಬಿಡುವುದಾದರೂ ಯಾಕೆ? ರೋಗಿಗಳನ್ನು ದುಡ್ಡು ಕೊಡುವ ಮಿಷಿನ್ನುಗಳು ಎಂಬ ಈ ಆಸ್ಪತ್ರೆಗಳ ಆಡಳಿತವರ್ಗದ ಮನಸ್ಥಿತಿಯೇ ಇದಕ್ಕೆ ಕಾರಣ.
ಅದು ಮೈಸೂರಿನ ಖ್ಯಾತ ಖಾಸಗಿ ಕಾರ್ಪೋರೇಟ್ ಆಸ್ಪತ್ರೆ. ಬಹುತೇಕ ಎಲ್ಲ ಖಾಸಗಿ ಕಾರ್ಪೋರೇಟ್ ಆಸ್ಪತ್ರೆಯ ಆಡಳಿತ ವರ್ಗ ತನ್ನಲ್ಲಿ ಕೆಲಸಕ್ಕಿರುವ ವೈದ್ಯರಿಗೆ ಥೇಟ್ ಸಾಫ್ಟ್‌ವೇರ್ ಕಂಪನಿಗಳಂತೆಯೇ ಟಾರ್ಗೆಟ್ ನೀಡುತ್ತದೆ! ತಿಂಗಳಿಗಿಷ್ಟು ಆಪರೇಷನ್ ನಡೆಸಬೇಕು, ತಿಂಗಳಿಗಿಷ್ಟು ಡಯಾಲಿಸಿಸ್ ಮಾಡಿಸಬೇಕು, ತಿಂಗಳಿಗಿಷ್ಟು ಎಂ.ಆರ್.ಐ, ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂಬ ಟಾರ್ಗೆಟ್ ವಿಧಿಸುತ್ತದೆ! ಸತತವಾಗಿ ಟಾರ್ಗೆಟ್ ಮುಟ್ಟಿಸದ ವೈದ್ಯರಿಗೆ ‘ಪಿಂಕ್ ಸ್ಲಿಪ್’ ನೀಡುವ ಪದ್ಧತಿಯೂ ಉಂಟು! ಇದೇ ರೀತಿಯ ಟಾರ್ಗೆಟ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿಯೂ ಇದೆ. ಜನರೆಲ್ಲ ಆರೋಗ್ಯದಿಂದಿದ್ದು ಅವರ ಕಿಡ್ನಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ತಿಂಗಳಿಗಿಷ್ಟು ಡಯಾಲಿಸಿಸ್ ಮಾಡಿ ಟಾರ್ಗೆಟ್ ತಲುಪಿ ಆಡಳಿತವರ್ಗದಿಂದ ಶಹಬ್ಬಾಸ್ಗಿರಿ ಪಡೆಯುವುದು ಹೇಗೆ ಸಾಧ್ಯ? ಲ್ಯಾಸಿಕ್ಸ್ ಎಂಬ ದೇಹದ ನೀರು ಹೆಚ್ಚು ಹೊರ ಹೋಗುವಂತೆ ಮಾಡುವ ಇಂಜೆಕ್ಷನ್ ನೀಡಿ ದೇಹದ ಖನಿಜಾಂಶಗಳಲ್ಲಿ ಏರುಪೇರು ಸೃಷ್ಟಿಸಿ ಅದರ ಲ್ಯಾಬ್ ರಿಪೋರ್ಟನ್ನು ಪಡೆದು ತದನಂತರ ರೋಗಿಯಲ್ಲಿ ತಾನೇ ಸೃಷ್ಟಿಸಿದ ರೋಗವನ್ನು ಮತ್ತಷ್ಟು ಭಯಭೀತ ದನಿಯಲ್ಲಿ ‘ಕಿಡ್ನಿ ಹೋಗಿಬಿಟ್ಟಿದೆ’ ಎಂದು ವಿವರಿಸಿ ಡಯಾಲಿಸಿಸ್ ಮಾಡಲಾಗುತ್ತದೆ! ತನಗಿದ್ದ “ಭಯಂಕರ” ರೋಗ ವಾಸಿಯಾದ ಖುಷಿಯಲ್ಲಿ ರೋಗಿ, ಟಾರ್ಗೆಟ್ ತಲುಪಿದ ಖುಷಿಯಲ್ಲಿ ವೈದ್ಯ, ಹೂಡಿದ ಬಂಡವಾಳಕ್ಕೆ ತಕ್ಕಂತೆ ಲಾಭ ಮಾಡುತ್ತಿರುವ ಖುಷಿಯಲ್ಲಿ ಆಸ್ಪತ್ರೆಯ ಆಡಳಿತ ವರ್ಗ…… ಇದು ಇಂದಿನ ಬಹುತೇಕ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಸಂಗತಿ. ಇದನ್ನು ವೈದ್ಯಕೀಯ ನಿರ್ಲಕ್ಷ್ಯವೆನ್ನಬೇಕೋ ಅಥವಾ ದಂಧೆಯೆಂದು ಕರೆಯಬೇಕೋ? ವೈದ್ಯಕೀಯ ನಿರ್ಲಕ್ಷ್ಯಕ್ಕೆ ಹಣದ ರೂಪದ, ನಿಷೇಧದ ರೂಪದ ದಂಡ ವಿಧಿಸಬಹುದು, ಆದರೀ ದಂಧೆಗೆ?
ಡಾ ಅನುರಾಧ ಸಹಾ ಪ್ರಕರಣ ನ್ಯಾಯಲಯದ ಮೆಟ್ಟಿಲೇರಿದ್ದು ಅವರ ಪತಿ ಕೂಡ ವೈದ್ಯರಾಗಿದ್ದರಿಂದ. ಮತ್ತದು ಗೆಲುವು ಕಂಡಿದ್ದು ಡಾ ಕುನಾಲ್ ಸಹಾ ಹಲವು ಸಲ ತಾವೇ ವಾದ ಮಾಡಿದ್ದರಿಂದಾಗಿ. ಎಷ್ಟು ಜನಸಾಮಾನ್ಯರಿಗೆ ಇದು ಸಾಧ್ಯವಿದೆ? ಅಲ್ಲದೆ ಈ ಪ್ರಕರಣ ಇತ್ಯರ್ಥವಾಗಲು ಹದಿನೈದು ವರುಷಗಳು ಹಿಡಿದವು. ಎಷ್ಟು ಜನರಿಗೆ ಅಷ್ಟು ವರುಷಗಳ ಕಾಲ ಹೋರಾಡಲು ಸಾಧ್ಯವಿದೆ? ಈ ಪ್ರಕರಣದಿಂದ ವೈದ್ಯಕೀಯ ನಿರ್ಲಕ್ಷ್ಯ ಕಡಿಮೆಯಾಗುತ್ತದಾ? ಬಹುಶಃ ಇಲ್ಲ. ಕೋರ್ಟಿನ ಭಯದಿಂದ ಮತ್ತಷ್ಟು ಮಗದಷ್ಟು ಅನವಶ್ಯಕ ಲ್ಯಾಬ್ ಪರೀಕ್ಷೆಗಳನ್ನು ಅನಿವಾರ್ಯವೆಂಬಂತೆ ಬಿಂಬಿಸಿ ರೋಗಿಗಳಿಂದ ಇನ್ನಷ್ಟು ಹಣ ವಸೂಲು ಮಾಡಲು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಮತ್ತು ವೈದ್ಯರಿಗೆ ಅನುಕೂಲವಾಗುತ್ತದೆಯಷ್ಟೇ.
ವರ್ತಮಾನದಲ್ಲಿ ಪ್ರಕಟವಾಗಿದ್ದ ಲೇಖನ  

No comments:

Post a Comment